ಭಟ್ಕಳದಲ್ಲಿ ಜಾನುವಾರುಗಳ ಮೂಳೆ ಪತ್ತೆ ವಿವಾದ | ಹಳೆಯ ವಿಡಿಯೋ ವೈರಲ್ : ಪುರಸಭೆಯಿಂದ ಸ್ಪಷ್ಟನೆ

ಭಟ್ಕಳ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ “ಮಗ್ದೂಮ್ ಕಾಲನಿ ಪ್ರದೇಶದಲ್ಲಿ ಜಾನುವಾರು ಹತ್ಯೆ ನಡೆದಿದೆ” ಎಂಬ ಶೀರ್ಷಿಕೆಯ ವೀಡಿಯೋ ಹಾಗೂ ಚಿತ್ರಗಳು ಹಳೆಯದ್ದು ಎಂದು ಭಟ್ಕಳ ಪುರಸಭೆ ಗುರುವಾರ ಸ್ಪಷ್ಟನೆ ನೀಡಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಮತ್ತು ರಕ್ತದ ಕಲೆಗಳು ಕಂಡು ಬಂದಿತ್ತು. ಆದರೆ, ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಪುರಸಭೆಯ ಅಧಿಕಾರಿಗಳು, “ವೈರಲ್ ಆಗಿರುವ ವೀಡಿಯೋ ಹಾಗೂ ಚಿತ್ರಗಳು ಹಳೆಯವು. ಪರಿಶೀಲನೆ ವೇಳೆ ಯಾವುದೇ ಜಾನುವಾರುಗಳ ಮೂಳೆಗಳು ಅಥವಾ ಮಾಂಸದ ಅವಶೇಷಗಳು ಪತ್ತೆಯಾಗಿಲ್ಲ” ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡಾ ಅವರು, “ಮಗ್ದೂಮ್ ಕಾಲನಿಯಲ್ಲಿ ಜಾನುವಾರುಗಳ ಮೂಳೆಗಳ ಕುರಿತು ಮಾಹಿತಿ ಬಂದಿತ್ತು. ಆದರೆ ಅಧಿಕಾರಿಗಳು ಸ್ಥಳಕ್ಕೆ ತೆರಳುವಷ್ಟರಲ್ಲಿ ಅಲ್ಲಿ ಏನೂ ಇರಲಿಲ್ಲ. ವೈರಲ್ ಆಗಿರುವ ಚಿತ್ರಗಳಲ್ಲಿ ಮಳೆಯ ನೀರು ನಿಂತಿರುವುದು ಕಾಣುತ್ತದೆ. ಆದರೆ ಕಳೆದ ಮೂರು–ನಾಲ್ಕು ದಿನಗಳಿಂದ ಭಟ್ಕಳದಲ್ಲಿ ಮಳೆಯೇ ಇಲ್ಲ. ಆದ್ದರಿಂದ ಆ ಚಿತ್ರಗಳು ಹಳೆಯವು", ಎಂದು ಸ್ಪಷ್ಟನೆ ನೀಡಿದ್ದಾರೆ.
ವೀಡಿಯೋ ವೈರಲ್ ಆದ ತಕ್ಷಣ ಸಂಘ ಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, “ಇಷ್ಟು ಪ್ರಮಾಣದಲ್ಲಿ ಜಾನುವಾರು ಹತ್ಯೆ ನಡೆಯುತ್ತಿದ್ದರೂ ಆಡಳಿತ ಕ್ರಮಕೈಗೊಳ್ಳುತ್ತಿಲ್ಲ” ಎಂದು ಆರೋಪಿಸಿದ್ದರು.
ಆದರೆ ಅನೇಕ ಸ್ಥಳೀಯರು ಈ ವೀಡಿಯೋಗಳ ಸತ್ಯಾಸತ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪತ್ರಕರ್ತರೊಬ್ಬರು, “ಭಟ್ಕಳದಲ್ಲಿ ಇತ್ತೀಚೆಗೆ ಶಾಂತಿ ವಾತಾವರಣವಿದೆ. ಹಳೆಯ ಮೀನು ಮಾರುಕಟ್ಟೆ ವಿಚಾರದಲ್ಲಿ ಉದ್ವಿಗ್ನತೆ ಸೃಷ್ಟಿಸಲು ವಿಫಲವಾದ ಬಳಿಕ ಇದೀಗ ಹಳೆಯ ಚಿತ್ರಗಳನ್ನು ವೈರಲ್ ಮಾಡಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಜನರು ಎಚ್ಚರಿಕೆಯಿಂದಿರಬೇಕು. ಇಂತಹ ಅಪಪ್ರಚಾರಕ್ಕೆ ಬಲಿಯಾಗಬಾರದು” ಎಂದು ಹೇಳಿದ್ದಾರೆ.
“ಸ್ಥಳದಲ್ಲಿ ಯಾವುದೇ ಮೂಳೆಗಳು ಪತ್ತೆಯಾಗಿಲ್ಲ. ವೈರಲ್ ಆಗಿರುವ ಚಿತ್ರ–ವೀಡಿಯೋಗಳ ಮೂಲವನ್ನು ಪರಿಶೀಲಿಸಲಾಗುತ್ತಿದೆ. ತಪ್ಪುಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿಯುವ ಮಾಹಿತಿಯನ್ನು ನಂಬುವ ಮೊದಲು ದೃಢೀಕರಿಸಬೇಕು”, ಎಂದು ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.