ಭಟ್ಕಳದಲ್ಲಿ ಜಾನುವಾರು ಮೂಳೆಗಳ ಸುಳ್ಳು ಸುದ್ದಿ: ಕಿಡಿಗೇಡಿಗಳ ವಿರುದ್ಧ ಪೊಲೀಸರಿಂದ ಕ್ರಮ

ಭಟ್ಕಳ: ಮುಗುಂ ಕಾಲನಿಯಲ್ಲಿ ಜಾನುವಾರು ಮೂಳೆಗಳ ರಾಶಿ ಬಿದ್ದಿದೆ ಎಂದು ಸುಳ್ಳು ಸುದ್ದಿ ಹರಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ್ ನಾರಾಯಣ ನಾವಡಾ ಅವರು ಗುರುವಾರ ಸಂಜೆ ಭಟ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೆ. 9ರಂದು ರಾತ್ರಿ 9 ಗಂಟೆ ಸುಮಾರಿಗೆ ಅಜ್ಞಾತರು ಸಾಮಾಜಿಕ ಜಾಲತಾಣಗಳಲ್ಲಿ “ಮುಗುಂ ಕಾಲನಿಯ ಗುಡ್ಡದ ಮೇಲೆ ಮೂಳೆಗಳ ರಾಶಿ ಬಿದ್ದಿದೆ” ಎಂದು ದೂರದಿಂದ ತೆಗೆದ ಫೋಟೋ ಹಾಗೂ ವೀಡಿಯೊ ಹಂಚಿಕೊಂಡಿದ್ದರು. ಈ ಸುಳ್ಳು ಸುದ್ದಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಶಾಂತಿ ಭಂಗಗೊಳಿಸುವ ಉದ್ದೇಶಿತವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು “ಈ ರೀತಿಯ ಸುಳ್ಳು ಸುದ್ದಿಗಳು ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತವೆ. ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸಿದ್ದಾರೆ. ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಬಲಿ ಬೀಳಬಾರದೆಂದು ಎಚ್ಚರಿಕೆ ನೀಡಿದ್ದಾರೆ.