ಭಟ್ಕಳ ತಾಲೂಕು ಪಂಚಾಯತ್ ತ್ರೈಮಾಸಿಕ ಸಭೆ

ಭಟ್ಕಳ: ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಕಂದಾಯ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯವೈಖರಿಯ ಕುರಿತು ತೀವ್ರ ಅಸಮಾ ಧಾನ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಚಿವರು ಕಂದಾಯ ಇಲಾಖೆಯಲ್ಲಿ ಎಜೆಂಟರ ಹಾವಳಿ ಹೆಚ್ಚಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. “ಹೋಟೆಲ್ ಲೈಸೆನ್ಸ್ ನವೀಕರಣಕ್ಕೂ ದಿನಗಟ್ಟಲೆ ಸಮಯ ತೆಗೆದುಕೊಳ್ಳುತ್ತೀರಿ. ಎಜೆಂಟರ ಕೆಲಸ ಬೇಗ ಮುಗಿಯುತ್ತದೆ, ಆದರೆ ಸಾರ್ವಜನಿಕರು ತಿಂಗಳ ಕಾಲ ಅಲೆದಾಡು ತ್ತಾರೆ. ಇಲಾಖೆಯಲ್ಲಿ ಕೆಟ್ಟ ವ್ಯವಸ್ಥೆ ಇದೆ, ಮೊದಲು ಅದನ್ನು ಸರಿಪಡಿಸಿ. ಜನರಿಂದ ಮತ್ತೊಮ್ಮೆ ದೂರು ಬಂದರೆ ಸಹಿಸುವುದಿಲ್ಲ,” ಎಂದು ಎಚ್ಚರಿಸಿದರು.
ಕಾರ್ಮಿಕ ಇಲಾಖೆಯ ಕಾರ್ಯವೈಖರಿಯನ್ನೂ ಸಚಿವರು ಪ್ರಶ್ನಿಸಿ, ಅರ್ಜಿಗಳನ್ನು ತಿರಸ್ಕಾರ ಮಾಡುವುದನ್ನು ತೀವ್ರವಾಗಿ ಖಂಡಿಸಿದರು. “ಸರ್ಕಾರಿ ಯೋಜನೆ ಬಡ ಕಾರ್ಮಿಕರಿಗೆ ತಲುಪಬೇಕು. ಅರ್ಜಿಗಳನ್ನು ತಿರಸ್ಕರಿಸುವು ದರಿಂದ ಜನರಿಗೆ ತೊಂದರೆ ಆಗುತ್ತಿದೆ. ಇಂತಹ ದೂರುಗಳು ಮುಂದೆಯಾದರೆ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.
ಮಳೆಗಾಲದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಹೊಂಡಗಳನ್ನು ತಕ್ಷಣ ಮಚ್ಚಿಸುವಂತೆ ಲೋಕೋಪಯೋಗಿ, ಪುರಸಭೆ ಹಾಗೂ ಪಂಚಾಯತ್ ಅಭಿಯಂತರರಿಗೆ ಸೂಚನೆ ನೀಡಿದ ಸಚಿವರು, ಮನೆಗಳಿಗೆ ವಿದ್ಯುತ್ ಎನ್‌ಒಸಿ ನೀಡುವುದರಲ್ಲಿ ವಿಳಂಬ ಆಗುತ್ತಿರುವುದನ್ನು ಪ್ರಶ್ನಿಸಿದರು. “ಮಾನವೀಯ ನೆಲೆಯಲ್ಲಿ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಒದಗಿಸಬೇಕು,” ಎಂದು ಹೆಸ್ಕಾಂ ಹಾಗೂ ಪಿಡಿಓ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಸುತ್ತಮುತ್ತಲಿನ ಗ್ರಾಮ ಗಳನ್ನು ಸೇರ್ಪಡೆ ಮಾಡುವ ಕುರಿತಾದ ಬೇಡಿಕೆಯನ್ನು ಸಚಿವರು ಪರಿಗಣಿಸುವುದಾಗಿ ಭರವಸೆ ನೀಡಿದರು. “ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಬಾರದು. ಸ್ವಂತ ಕಟ್ಟಡಗಳಲ್ಲೇ ಕಾರ್ಯಾರಂಭ ವಾಗುವುದು ನನ್ನ ಆಶಯ,” ಎಂದರು.
ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಕುರಿತು ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಹೊನ್ನಾವರ ಮಾರ್ಗದಲ್ಲಿ ಸಂಜೆ ಬಸ್‌ಗಳನ್ನು ಓಡಿಸಲು ಹಾಗೂ ರಾತ್ರಿ ಬಸ್‌ಗಳನ್ನು ಹಳೆಯ ರೀತಿಯಲ್ಲಿ ಪುನರಾರಂಭಿಸಲು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇರುವುದನ್ನು ಗಮನಿಸಿದ ಸಚಿವರು, ಶೀಘ್ರದಲ್ಲೇ ಖಾಲಿ ಹುದ್ದೆ ಗಳನ್ನು ಭರ್ತಿ ಮಾಡುವ ಭರವಸೆ ನೀಡಿದರು. “ಆಸ್ಪತ್ರೆಯಲ್ಲಿ ಬೇಕಾದ ಔಷಧಿಗಳನ್ನು ಆರೋಗ್ಯ ಸಮಿತಿಯ ಮೂಲಕವೇ ಖರೀದಿಸಬೇಕು. ಯಾವುದೇ ಕಾರಣಕ್ಕೂ ರೋಗಿಗಳನ್ನು ಹೊರಗೆ ಕಳಿಸಿ ಔಷಧಿ ತರಿಸಬಾರದು,” ಎಂದು ಎಚ್ಚರಿಸಿದರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮಹಾಲೆ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಪುರಸಭೆ ಪ್ರಭಾರಿ ಅಧ್ಯಕ್ಷ ಅಲ್ತಾಫ್ ಖರೂರಿ, ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ನಾಮನಿರ್ದೇಶಿತ ಸದಸ್ಯ ಭಾಸ್ಕರ ನಾಯ್ಕ ಕಾಯ್ಕಿಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.