ಸೆ.21: ಕೇಂದ್ರ ಸಚಿವ ವಿ.ಸೋಮಣ್ಣರಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ

ಉಡುಪಿ, ಸೆ.16: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು, ಹತ್ತಾರು ಅಪಘಾತ, ಹಲವು ಜೀವಬಲಿ, ವಿವಿಧ ಸಂಘಟನೆಗಳ ಪ್ರತಿಭಟನೆಗೆ ಕಾರಣವಾದ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169ಎಯ ಇಂದ್ರಾಳಿ ರೈಲ್ವೆ ಓವರ್ ಬ್ರಿಡ್ಜ್‌ಗೆ ಕೊನೆಗೂ ಉದ್ಘಾಟನೆಯ ಮುಹೂರ್ತ ಫಿಕ್ಸ್ ಆಗಿದೆ.
ಸೆ.21ರ ಬೆಳಗ್ಗೆ 11:15ಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಈ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ ಎಂದು ಸಚಿವರ ಅಧಿಕೃತ ಪ್ರವಾಸ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿದೆ.
ಸೆ.21ರಂದು ಬೆಳಗ್ಗೆ 9ಗಂಟೆಗೆ ಬೆಂಗಳೂರಿನಿಂದ ಹೊರಟು 10:15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಚಿವರು, ಅಲ್ಲಿಂದ 11:15ಕ್ಕೆ ಉಡುಪಿಗೆ ಆಗಮಿಸಿ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆಯುವ ಸಚಿವರು ಅಪರಾಹ್ನ 2:45ಕ್ಕೆ ಕುಂದಾಪುರಕ್ಕೆ ತೆರಳಲಿದ್ದಾರೆ.
ಅಪರಾಹ್ನ 3:30ಕ್ಕೆ ಕುಂದಾಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸುವ ಸಚಿವ ವಿ.ಸೋಮಣ್ಣ, ಸಂಜೆ 4:15ಕ್ಕೆ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.