ಕೊರಗ ಬುಡಕಟ್ಟು ಸಮುದಾಯ ಪ್ರಥಮ ವೈದ್ಯೆ!

ಉಡುಪಿ: ಕೊರಗ ಬುಡಕಟ್ಟು ಸಮುದಾಯದ ಯುವತಿ ಯೊಬ್ಬರು ಮೊತ್ತ ಮೊದಲ ಬಾರಿಗೆ ವೈದ್ಯಕೀಯ ಪದವಿ ಪಡೆದು ಅಪೂರ್ವ ಸಾಧನೆ ಮಾಡಿದ್ದಾರೆ.
ಕುಂದಾಪುರ ತಾಲೂಕಿನ ಉಳ್ತೂರು ಸಮೀಪದ ನಿವಾಸಿ ಗಣೇಶ್ ವಿ. ಮತ್ತು ಜಯಶ್ರೀ ದಂಪತಿಯ ಹಿರಿಯ ಪುತ್ರಿ ಡಾ.ಕೆ.ಸ್ನೇಹಾ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿ, ಇದೀಗ ನ್ಯೂಡೆಲ್ಲಿ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಎಂಡಿ ಪದವಿ ಪಡೆಯುವ ಮೂಲಕ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ.
ಬಾಲ್ಯದಿಂದಲೂ ಕಲಿಕೆಯಲ್ಲಿ ಚುರುಕಾಗಿದ್ದ ಸ್ನೇಹಾ ಪ್ರಾಥಮಿಕ ಶಾಲೆಯನ್ನು ಅಂಕೋಲಾ, ಕುಂದಾಪುರ, ಹೆಬ್ರಿಯಲ್ಲಿ ಮುಗಿಸಿದ್ದರು. ಈಕೆಯ ಪ್ರತಿಭೆ ಗುರುತಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪಿಯುಸಿಗೆ ಉಚಿತವಾಗಿ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದರು. ಪಿಯುಸಿಯಲ್ಲಿ ಶೇ.96 ಅಂಕ ಪಡೆದು ಸಿಇಟಿಯಲ್ಲಿ 2,264 ಅಂಕ ಗಳಿಸಿದ ಅವರಿಗೆ ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ದೊರೆಯಿತು.
ಆದರೆ, ತಮ್ಮೂರಿನ ಹತ್ತಿರದಲ್ಲೇ ಕಲಿಕೆ ಮಾಡಬೇಕೆಂಬ ಹೆತ್ತವರ ಇಚ್ಛೆಯಂತೆ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿಗೆ ದಾಖಲಾದರು. ನ್ಯೂಡೆಲ್ಲಿ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಎಂಡಿ ಪದವಿ ಮುಗಿಸಿ ವೃತ್ತಿ ನಿರತರಾಗಿದ್ದಾರೆ.
ಗಣೇಶ್ ವಿ. ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದು, ನಾಲ್ಕು ದಶಕಗಳಿಂದ ಸಮುದಾಯದ ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕೊರಗ ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಉನ್ನತಿಗಾಗಿ ಕುಂಭಾಸಿಯಲ್ಲಿ ಕೊರಗ ಮಕ್ಕಳ ಮನೆ ಸ್ಥಾಪಿಸಿ ನಿರಂತರ ಸಮುದಾಯ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕಿಯಾಗಿರುವ ಅವರ ಪತ್ನಿ ಜಯಶ್ರೀ ಕೂಡ ಸಮುದಾಯದ ಏಳಿಗೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಅವರ ಕಿರಿಯ ಪುತ್ರಿ ಕೆ.ಸಾಕ್ಷಿ ಸಹ ಪ್ರತಿಭಾನ್ವಿತೆಯಾಗಿದ್ದಾರೆ.
ಕೊರಗ ಸಮುದಾಯದ ಯುವತಿಯ ಸಾಧನೆಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸಹಿತ ಅನೇಕ ಗಣ್ಯರು ಶುಭಹಾರೈಸಿದ್ದಾರೆ.







