ಕಾಪು| ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ವಂಚನೆ ಆರೋಪ: ಪ್ರಕರಣ ದಾಖಲು

ಕಾಪು, ಸೆ.16: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ವಿದೇಶದಲ್ಲಿದ್ದ ಕಾಪುವಿನ ವಸಂತ್ ಡಿ.ಪೂಜಾರಿ ಪರಿಚಯದ ಕೆಲವರಿಗೆ ವಿದೇಶಕ್ಕೆ ತೆರಳಲು ವಿಸಾ ಮಾಡಿಸಿ ಕೊಡಲು ಸುರತ್ಕಲ್ ನಿವಾಸಿ ಜೋಬಿ ಅರಂಗಸ್ಸೆರಿ ದೆವಸ್ಸಿ ಎಂಬವರನ್ನು ಸಂಪರ್ಕಿಸಿದ್ದು, ಅವರು ಚಂಡಿಗಢದಲ್ಲಿರುವ ಕಂಪನಿಯಲ್ಲಿ ವಿದೇಶಕ್ಕೆ ತೆರಳುವ ವ್ಯಕ್ತಿಗಳಿಗೆ ಕೆಲಸದ ವಿಸಾ ಕೊಡಿಸುತ್ತಾರೆ ಎಂಬುದಾಗಿ ತಿಳಿಸಿದ್ದರು.
ವಸಂತ್ 2024ರ ಎ.6ರಂದು ವಿಸಾದ ಬಗ್ಗೆ ತಿಳಿದುಕೊಳ್ಳಲು ಚಂಡಿಗಢಗೆ ಹೋಗಿದ್ದು, ಅಲ್ಲಿ ಜೋಬಿ, ವಿಜಯ್ ಸಿಂಗ್, ರಮನ್, ನಿರ್ವೈರ್ ಸಿಂಗ್ ಎಂಬವರನ್ನು ಪರಿಚಯಿಸಿದ್ದರು. ಬಳಿಕ ವಸಂತ್ ಪೂಜಾರಿ ಊರಿಗೆ ಬಂದು ಸೂರಜ್ ಹಾಗೂ ಮನೀಶ್ ಎಂಬವರನ್ನು ಅಜರಬೈಜಾನ್‌ಗೆ ಕಳುಹಿಸಿ ಕೊಡಲು ಕಂಪನಿಗೆ ತಿಳಿಸಿದ್ದು, ಕಂಪೆನಿಯವರು ಒಪ್ಪಿಕೊಂಡ ಮೇರೆಗೆ 2024ರ ಜುಲೈಯಲ್ಲಿ ಒಟ್ಟು 7,00,000ರೂ. ಹಣ ಪಾವತಿಸಿದ್ದರು.
ಬಳಿಕ ಕಂಪನಿಯವರು ಸೆ.22ರಂದು ಸೂರಜ್ ಮತ್ತು ಮನಿಶ್‌ಗೆ ಅಜರ ಬೈಜಾನ್‌ಗೆ ಕೆಲಸದ ಆಫರ್ ಮಾಡಿ ವಿಮಾನ ಟಿಕೆಟ್‌ನ್ನು ಮಾಡಿದ್ದು ಸ್ವಲ್ಪ ದಿನದ ಬಳಿಕ ಅದನ್ನು ಕ್ಯಾನ್ಸಲ್ ಮಾಡಿದ್ದರು. ಈ ಮಧ್ಯೆ 20 ಜನ ಪರಿಚಯದವರಿಗೂ ಕೆಲಸ ಕೊಡಿಸಲು ಒಟ್ಟು 56,91,824ರೂ. ಹಣವನ್ನು ಪಾವತಿಸಿದ್ದರು. 2025ರ ಜನವರಿ ಬಳಿಕ ಇವರೆಲ್ಲ ಹಲವು ಬಾರಿ ಚಂಡಿಗಡಕ್ಕೆ ಹೋಗಿ ಹಣ ವಾಪಾಸ್ಸು ನೀಡುವಂತೆ ಕೇಳಿದ್ದು, ಅದಕ್ಕೆ ಆರೋಪಿಗಳು 2025ರ ಜು.10 ಹಾಗೂ ಜು.30ಕ್ಕೆ ತಲಾ 6,00,000ರೂ. ಗಳ ಚೆಕ್‌ಗಳನ್ನು ನೀಡಿದ್ದು ಅವುಗಳನ್ನು ಬ್ಯಾಂಕಿನಲ್ಲಿ ಪರಿಶೀಲಿಸಿದಾಗ ಅವು ಕ್ಲೋಸ್ಡ್ ಅಕೌಂಟ್‌ನ ಚೆಕ್‌ಗಳು ಎಂಬುದು ತಿಳಿದುಬಂತು.
ಹೀಗೆ ಆರೋಪಿಗಳು 22 ಮಂದಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಒಟ್ಟು 63,91,824ರೂ. ಹಣವನ್ನು ಪಡೆದು ಕೊಂಡು ಕೆಲಸವನ್ನು ಕೋಡಿಸದೆ ಹಣವನ್ನು ವಾಪಾಸ್ಸು ನೀಡದೇ ಮೋಸ ಹಾಗೂ ವಂಚನೆ ಮಾಡಿರುವುದಾಗಿ ದೂರಲಾಗಿದೆ.