ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲಿ ಕ್ರೈಸ್ತ ಉಲ್ಲೇಖ ಕೈಬಿಡಿ: ಮುಖ್ಯಮಂತ್ರಿಗೆ ಸಂಸದ ಕೋಟ ಮನವಿ

ಉಡುಪಿ, ಸೆ.16: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಮಾಡುತ್ತಿರುವ ಜಾತಿ ಮತ್ತು ಆರ್ಥಿಕ-ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಧರ್ಮದ ವಿವಿಧ ಜಾತಿ ಗುರುತಿಸುವಿಕೆಯಲ್ಲಿ ಕ್ರಿಶ್ಚನ್ ಪದ ಬಳಕೆಗೆ ಅವಕಾಶ ಕೊಟ್ಟು ಮತಾಂತರಕ್ಕೆ ಕಾಂಗ್ರೆಸ್ ಸರಕಾರ ಬೆಂಬಲ ನೀಡುತ್ತಿರುವುದನ್ನು ಖಂಡಿಸಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಇಂದು ಪತ್ರ ಬರೆದಿದ್ದು, ಕೂಡಲೇ ಇದನ್ನು ಸರಿಪಡಿಸುವಂತೆ ಕೋರಿದ್ದಾರೆ.
ಆಯೋಗದ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಜೊತೆಗೆ ಜಾತಿಗಣತಿಯೂ ನಡೆಯುತ್ತಿದೆ. ಇದರಲ್ಲಿ ಹಿಂದೂ ಧರ್ಮವೆಂದು ಪರಿಗಣಿಸಲ್ಪಟ್ಟ ಬಹುತೇಕ ಜಾತಿಗಳನ್ನು ಆಯಾಯ ಜಾತಿಗಳೊಂದಿಗೆ ಕ್ರೈಸ್ತರೆಂದು ಗುರುತಿಸಲು ಸರಕಾರ ಅವಕಾಶ ಮಾಡಿದೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ಆಡಳಿತದಲ್ಲಿ ಲಿಂಗಾಯಿತ ಕ್ರೈಸ್ತ, ಒಕ್ಕಲಿಗ ಕ್ರೈಸ್ತ, ಕುರುಬ ಕ್ರೈಸ್ತ, ನೇಕಾರ ಕ್ರೈಸ್ತ, ಮಡಿವಾಳ ಕ್ರೈಸ್ತ, ಬಿಲ್ಲವ ಕ್ರೈಸ್ತ, ಕುಂಬಾರ ಕ್ರೈಸ್ತ, ಬಂಜಾರ ಕ್ರೈಸ್ತ ಎಂದು ಗುರುತಿಸುವ ಹಿಂದಿರುವ ಉದ್ದೇಶ ಇಡೀ ಹಿಂದೂ ಧರ್ಮ ವನ್ನು ವಿವಿಧ ಜಾತಿಗಳನ್ನು ಉಲ್ಲೇಖಿಸಿ ಕ್ರೈಸ್ತರೆಂದು ಗುರುತಿಸುವ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಕೆಲಸಕ್ಕೆ ಆಯೋಗದ ಮೂಲಕ ಸರಕಾರ ಕೈಹಾಕಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಮೂಲಕ ವಂಚನೆಯಿಂದ ಮತಾಂತರಗೊಂಡ ಸಣ್ಣ ಸಣ್ಣ ಸಮುದಾಯಗಳಲ್ಲಿರುವ ಅಮಾಯಕರ ಮತಾಂತ ರಕ್ಕೆ ಸಂಚು ರೂಪಿಸಲು ಇನ್ನಷ್ಟು ಅವಕಾಶವನ್ನು ಸರಕಾರ ನೀಡಿದೆ ಎಂದವರು ಹೇಳಿದ್ದಾರೆ. ಇದರಿಂದ ಮೂಲ ಸಮುದಾಯದ ಮೀಸಲಾತಿ ಸೌಲಭ್ಯಗಳನ್ನು ಅವರು ಪಡೆದು ದುರ್ಬಲ ಜಾತಿಗಳನ್ನು ವಂಚಿಸಲು ಅವಕಾಶವಾ ಗಲಿದೆ ಎಂದು ದೂರಿದ್ದಾರೆ.
ಒಂದು ಜಾತಿಯಿಂದ ಬೇರ್ಪಟ್ಟ ನಂತರ ಮೂಲ ಜಾತಿಯೊಂದಿಗೆ ಕ್ರೈಸ್ತ ಹೆಸರಿನ ನಮೂದಿಸುವಿಕೆ ವಿವಿಧ ಜಾತಿ ಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಇದು ಹಿಂದೂ ಧರ್ಮವನ್ನು ಒಡೆಯುವ ಹುನ್ನಾರ ಎಂದವರು ಪತ್ರದಲ್ಲಿ ಆರೋಪಿಸಿದ್ದಾರೆ.
ಆದ್ದರಿಂದ ಸುಮಾರು 50ಕ್ಕೂ ಅಧಿಕ ವಿವಿಧ ಜಾತಿಗಳ ಮುಂದೆ ನಮೂದಿಸಿರುವ ಕ್ರೈಸ್ತ ಎಂಬ ಉಲ್ಲೇಖ ಕೈಬಿಡುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.