ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ: ಅಧಿಕಾರಿಗಳಿಗೆ ಸಂಸದ ಕೋಟ ಸಲಹೆ

ಉಡುಪಿ, ಸೆ.16: ಹಂಗಾರಕಟ್ಟೆ, ಕೋಡಿ ಬೆಂಗ್ರೆಗಳ ಮೀನುಗಾರಿಕಾ ಕಿರು ಬಂದರು ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ ತಯಾರಿಸುವಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಂಗಾರಕಟ್ಟೆ ಬಂದರಿನ ಇಕ್ಕೆಲಗಳಲ್ಲಿ ಸುಮಾರು 1 ಕಿ.ಮೀ. ವಿಸ್ತೀರ್ಣದ ಬ್ರೇಕ್‌ವಾಟರ್ ಕಾಮಗಾರಿ ನೆನೆಗುದಿಗೆ ಬಿದ್ದ ಬಗ್ಗೆ ಚರ್ಚೆ ನಡೆದು ಕೋಡಿ-ಕನ್ಯಾಣದಿಂದ ಬೆಂಗ್ರೆಯವರೆಗೆ 3 ಕಿ.ಮೀ. ಹೂಳೆತ್ತಲು 11 ಕೋಟಿ ರೂ. ವೆಚ್ಚದ ಕಾಮಗಾರಿಯ ಪ್ರಸ್ತಾಪ ಸರಕಾರಕ್ಕೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸಂಸದರು ಮತ್ತು ಶಾಸಕರಿಗೆ ತಿಳಿಸಿದರು.
ಸಭೆಯಲ್ಲಿದ್ದ ಮೀನುಗಾರಿಕಾ ಮುಖಂಡರು ಮಾತನಾಡಿ,ಮಲ್ಪೆ ಬಂದರಿನ ನಂತರ ಅತಿಹೆಚ್ಚು ಒತ್ತಡವಿರುವ ಹಂಗಾರಕಟ್ಟೆ ಬಂದರು ಅಭಿವೃದ್ಧಿಯಾದರೆ ಮೀನುಗಾರಿಕಾ ದೋಣಿ ನಿಲುಗಡೆಗೆ ಸಹಾಯವಾಗುತ್ತದೆ. ಮಲ್ಪೆ ಬಂದರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು.
ಅಲ್ಲದೇ ಹಂಗಾರಕಟ್ಟೆಯಲ್ಲಿ ಕೊಚ್ಚಿನ್ ಶಿಪ್ ಯಾರ್ಡ್ ಬಳಿ ಇರುವ ಖಾಸಗಿ ಜಾಗದ ಮಾಲಕರೊಡನೆ ಚರ್ಚಿಸಿ ಸರಕಾರ ಭೂಸ್ವಾಧೀನ ಮಾಡಿ ಕೊಂಡರೆ ಹೊಸ ಜಟ್ಟಿ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಮೀನುಗಾರರು ವಿವರಿಸಿದರು.
ಹೊಸ ಪ್ರಾಂಗಣ ಮೀನು ಏಲಂ ಮಾರುಕಟ್ಟೆ, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿ ಸಲು ಶೇ.60-40ರ ಧನಸಹಾಯದ ಯೋಜನೆಯೊಂದಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸಂಸದ ಕೋಟ ಸಲಹೆ ನೀಡಿದರು. ಅಲ್ಲದೇ ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉಡುಪಿ ಜಿಲ್ಲೆಯ ಶಾಸಕರೊಂದಿಗೆ ಕೂಡಲೇ ಸಭೆ ಕರೆಯಲು ಮೀನುಗಾರಿಕಾ ಅಧಿಕಾರಿ ಗಳಿಗೆ ಸೂಚನೆಯಿತ್ತರು.
ಸಭೆಯಲ್ಲಿ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕೊಚ್ಚಿನ್ ಶಿಪ್ ಯಾರ್ಡ್‌ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹರಿಕುಮಾರ್, ಜಂಟಿ ಮೀನುಗಾರಿಕಾ ನಿರ್ದೇಶಕ ವಿವೇಕ್ ಮೀನುಗಾರಿಕಾ ಉಪನಿರ್ದೇಶಕ ಕುಮಾರಸ್ವಾಮಿ, ಬಂದರು ಇಲಾಖೆಯ ಪ್ರಸನ್ನ ಮತ್ತು ಶೋಭಾ, ತಾಲೂಕಿನ ಮೀನುಗಾರಿಕಾ ಉಪನಿರ್ದೇಶಕರು ಹಾಗೂ ಮೀನುಗಾರಿಕಾ ಮುಖಂಡರಾದ ರಾಜೇಂದ್ರ ಸುವರ್ಣ, ನಾಗರಾಜ್ ಬೆಂಗ್ರೆ, ಸುದಿನ ಬೆಂಗ್ರೆ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಉಪಸ್ಥಿತರಿದ್ದರು.