ತುಮಕೂರು: ಎಬಿವಿಪಿ ಕಾರ್ಯಕ್ರಮದಲ್ಲಿ ಗೃಹಸಚಿವ ಪರಮೇಶ್ವರ್ ಭಾಗಿ

ತುಮಕೂರು: ಆರೆಸ್ಸೆಸ್ ನ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿವಾದಕ್ಕೆ ಕಾರಣವಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ವಿಧಾನ ಸೌಧದಲ್ಲಿ ಆರೆಸ್ಸೆಸ್ ಗೀತೆ ಹಾಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಇದೀಗ ತಿಪಟೂರಿನಲ್ಲಿ ಸಂಘ ಪರಿವಾರದ ಸಂಘಟನೆಯಾದ ಎಬಿವಿಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಡಾ.ಜಿ.ಪರಮೇಶ್ವರ್ ಅಚ್ಚರಿ ಮೂಡಿಸಿದ್ದಾರೆ.
ಸೆಪ್ಟಂಬರ್ 2ರಂದು ತಿಪಟೂರಿನಲ್ಲಿ ಎಬಿವಿಪಿ ವತಿಯಿಂದ ವೀರರಾಣಿ ಅಬ್ಬಕ್ಕರ 500ನೇ ಜನ್ಮ ಜಯಂತಿ ಪ್ರಯಕ್ತ ರಥಯಾತ್ರೆ, ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ರಾತ್ರಿ 7:30ರ ಸುಮಾರಿಗೆ ರಾಣಿ ಅಬ್ಬಕ್ಕರ ಪ್ರತಿಮೆಯಿದ್ದ ಮೆರವಣಿಗೆಯೂ ತಿಪಟೂರು ಕಲ್ಪತರು ಇನ್ ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜು ಮುಂಭಾಗದಲ್ಲಿ ಹಾದು ಹೋಗುತ್ತಿತ್ತು. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಪರಮೇಶ್ವರ್ ಅದೇ ದಾರಿಯಾಗಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸುವುದಕ್ಕಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಎಬಿವಿಪಿ ಮುಖಂಡರ ಆಹ್ವಾನದಂತೆ ಗೃಹಸಚಿವರು ಮೆರವಣಿಗೆ ಸ್ಥಳಕ್ಕೆ ತೆರಳಿ ಸಂಚಾರಿ ವಾಹನದಲ್ಲಿದ್ದ ರಾಣಿ ಅಬ್ಬಕ್ಕರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ತೆರಳಿದ್ದಾರೆ.
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಆರೆಸ್ಸೆಸ್ ಗೀತೆ ಹಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಯಾಚಿಸುವ ಮೂಲಕ ವಿವಾದ ತಣ್ಣಗಾಗಿತ್ತು. ಇದೀಗ ಆರೆಸ್ಸೆಸ್ ನ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಆಗಿರುವ ಡಾ.ಜಿ.ಪರಮೇಶ್ವರ್ ಭಾಗವಹಿಸಿರುವುದಕ್ಕೆ ಹೈಕಮಾಂಡ್ ಯಾವ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.