ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ : ಕೆ.ಎನ್.ರಾಜಣ್ಣ

ಕೊಡಿಗೇನಹಳ್ಳಿ : ನಾನು ಮಾಜಿ ಸಚಿವನಾಗಿ ಕೆಲಸ ಮಾಡುತಿದ್ದೇನೆ, ನನಗೆ ಇದರಿಂದ ಬೇಜಾರಿಲ್ಲ. 35 ಸಾವಿರ ಅಂತರದಿಂದ ಗೆದ್ದಿದ್ದೇನೆ. ಈಗ ಚುನಾವಣೆ ನಡೆದರೂ ನಾನೂ ಹೆಚ್ಚು ಮತದಿಂದ ಗೆಲ್ಲುತ್ತೇನೆ ಎಂದು ಸಹಕಾರ ಇಲಾಖೆ ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಮಧುಗಿರಿ ತಾಲೂಕು ಕೊಡಿಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ನಾನು ಭ್ರಷ್ಟಾಚಾರ ಮಾಡಿಲ್ಲ, ಆದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನನಗೆ ಪಕ್ಷ ಏನು ಮೋಸ ಮಾಡಿಲ್ಲ. ನಾನು ಏಕೆ ಬಿಜೆಪಿಗೆ ಸೇರಲಿ?, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಬಿಡಲ್ಲ. ಜನತೆ ನನಗೆ ಕಾಂಗ್ರೆಸ್, ಬಿಜೆಪಿ, ಪಕ್ಷೇತರನಾಗಿ ನಿಂತರೂ ಮತ ಹಾಕುತ್ತಾರೆ. ರಾಹುಲ್ ಗಾಂಧಿ ಮತಗಳ್ಳತನ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ. ಸಿದ್ದರಾಮಯ್ಯ ನೇತೃತ್ವ ಇರುವವರೆಗೂ ನನ್ನ ಭವಿಷ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಪುನರುಚ್ಚರಿಸಿದರು.
ರಾಜಕೀಯದಲ್ಲಿ ಬೆಳೆಯಬೇಕಾದರೆ ಹಣ ಮತ್ತು ಜಾತಿ ಬಲ ಇರಬೇಕು. ನನ್ನ ಬಳಿ ಎರಡು ಇಲ್ಲ. ಆದರೂ ಕ್ಷೇತ್ರದ ಜನತೆಯ ಪ್ರೀತಿ ಮತ್ತು ವಿಶ್ವಾಸ ನನ್ನ ಮೇಲೆ ಇದೆ. ರಾಜಕೀಯವಾಗಿ ಬೇನ್ನು ತೋರಿಸುವವನಲ್ಲ. ಎದೆಕೊಟ್ಟು ನಿಲ್ಲುತ್ತೇನೆ. ಸಚಿವ ಸ್ಥಾನಕ್ಕಾಗಿ ನಮ್ಮ ಕಾರ್ಯಕರ್ತರು ದೆಹಲಿಗೆ ಹೋಗುವ ಅಗತ್ಯವಿಲ್ಲ ಎಂದು ಕೆ.ಎನ್.ರಾಜಣ್ಣ ನುಡಿದರು.
ಮತದಾರರ ಋಣ ನನ್ನ ಮೇಲಿದೆ. ಇದೀಗ ಚುನಾವಣೆ ನಡೆದರೂ ಬಹುಮತದಿಂದ ಗೆಲ್ಲಿಸುತ್ತೀರಿ ಎಂಬ ವಿಶ್ವಾಸವಿದೆ. ಅಪಪ್ರಚಾರಗಹಳಿಗೆ ಕಿವಿಕೊಡಬೇಡಿ. ಸಚಿವನಾದರೂ ಶಾಸಕನಾಗಿದ್ದರೂ ಕ್ಷೇತ್ರದ ಅಭಿವೃಧ್ಧಿ ಮಾಡುತ್ತೇನೆ. ನಾನು ಬಿಜೆಪಿ ಸೇರುತ್ತೇನೆ ಎಂದು ಯಾವನಾದರೂ ಹೇಳಿಕೊಳ್ಳಲಿ, ಅವನು ಬೇಕಾದರೆ ಬ್ರೈನ್ ಮ್ಯಾಪಿಂಗ್ ಮಾಡಿಕೊಳ್ಳಲಿ ಎಂದು ಶಾಸಕ ಮಾಗಡಿ ಬಾಲಕೃಷ್ಣ ಹೇಳಿಕೆಗೆ ರಾಜಣ್ಣ ತಿರುಗೇಟು ನೀಡಿದರು.