ಜನರ ಪರವಾಗಿ ಕೆಲಸ ಮಾಡಲು ಮಂತ್ರಿಗಿರಿಯೇ ಬೇಕೆಂದು ಇಲ್ಲ : ಕೆ.ಎನ್.ರಾಜಣ್ಣ

ತುಮಕೂರು.ಆ.31 : ಇತ್ತೀಚಿನ ರಾಜಕೀಯ ಬೆಳೆವಣಿಗೆಯಿಂದ ಆಗಿರುವ ತೊಂದರೆಗಳ ಕುರಿತು ಅರಿಯಲು ಮತ್ತು ಅಶೀರ್ವಾದ ಮಾಡಲು ದಲಿತ, ಹಿಂದುಳಿದ ವರ್ಗಗಳ ಮಠಾಧೀಶರು ಇಂದು ನಮ್ಮ ಮನೆಗೆ ಬಂದು, ಕೆಲ ಕಾಲ ನನ್ನೊಂದಿಗೆ ಚರ್ಚೆ ನಡೆಸಿ, ಸಾಂತ್ವನದ ನುಡಿಗಳನ್ನಾಡಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಈ ಭೇಟಿ ನಮಗೆ ಹೋರಾಡಲು ಮತ್ತಷ್ಟು ಶಕ್ತಿ ತುಂಬಿದೆ ಎಂದು ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ದಲಿತ, ಹಿಂದುಳಿದ ಮಠಾಧೀಶರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಿಂದ ಕೈಬಿಡುವ ಸರಕಾರದ ನಿರ್ಧಾರದ ಹಿಂದೆ ಕೇವಲ ಮತಗಳವು ಬಗ್ಗೆ ಹೇಳಿಕೆಯಷ್ಟೇ ಅಲ್ಲ. ಹನಿಟ್ರಾಫ್ ಬಗ್ಗೆ ಮಾತನಾಡಿರುವುದು ಸೇರಿಕೊಂಡಿದೆ. ಒರ್ವ ಜನಪ್ರತಿನಿಧಿಯಾಗಿ ಜನರ ಪರವಾಗಿ ಕೆಲಸ ಮಾಡಲು ಮಂತ್ರಿಗಿರಿಯೇ ಬೇಕೆಂದು ಇಲ್ಲ. ಶಾಸಕನಾಗಿ, ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ರಾಜ್ಯದ ಮಟ್ಟಿಗೆ ಸಚಿವ ಸ್ಥಾನ ಬೇಕು ಎಂಬ ಆಶಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಇತ್ತೀಚಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲಾ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೆಪ್ಟಂಬರ್ 4ನೇ ತಾರೀಖು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಇದೆ. ತದನಂತರ ಇಡೀ ರಾಜ್ಯದಾದ್ಯಂತ ಪ್ರವಾಸ ಮಾಡಿ, ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತೇನೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಸಹಕಾರ ಕಾಯ್ದೆಗೆ ಸಂವಿಧಾನದ ಆಶಯದಂತೆ ಹಲವಾರು ತಿದ್ದುಪಡಿಗಳನ್ನು ತರಲಾಗಿತ್ತು.ಅವುಗಳಿಗೆ ಎರಡು ಸದನಗಳಲ್ಲಿ ಒಪ್ಪಿಗೆ ಸಿಕ್ಕಿದೆ. ಅಧಿಕಾರ ಹೋದ ಬಗ್ಗೆ ಅಸಮಾಧಾನವಾಗಲಿ, ಚಿಂತೆಯಾಗಲಿ ಇಲ್ಲ. ಎಲ್ಲಾ ಜಾತಿಯ ಬಡವರ ಪರ ದ್ವನಿ ಎತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ. ಸಚಿವನಾಗುವ ಸಂದರ್ಭದಲ್ಲಿಯೂ ನನ್ನನ್ನು ಸಚಿವನ್ನಾಗಿ ಮಾಡಿ ಎಂದು ದಿಲ್ಲಿಗೆ ಹೋಗಿಲ್ಲ. ಈಗಲೂ ಹೋಗಲ್ಲ. ಯಾವ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ ಎಂದು ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.