ಕೆ.ಎನ್.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟ ಆಗ್ರಹ

ತುಮಕೂರು, ಆ.31: ಕಾಂಗ್ರೆಸ್ ಹೈಕಮಾಂಡ್ ಅಹಿಂದ ನಾಯಕರಾಗಿರುವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವ ಮೂಲಕ ಇಡೀ ಅಹಿಂದ ವರ್ಗಕ್ಕೆ ಪೆಟ್ಟು ನೀಡಿದೆ. ಹಾಗಾಗಿ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿಗಳು ರಾಜಣ್ಣ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಪರವಾಗಿ ವಾಲ್ಮೀಕಿ ಮಠದ ಶ್ರೀಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ರವಿವಾರ ಮಾಜಿ ಸಚಿವರಾದ ಕೆ.ಎನ್.ರಾಜಣ್ಣ ಅವರ ಮನೆಗೆ ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧೀಶ್ವರ ಒಕ್ಕೂಟಕ್ಕೆ ಸೇರಿದ ಸುಮಾರು 12ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ, ಕೆ.ಎನ್.ರಾಜಣ್ಣ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎನ್.ರಾಜಣ್ಣ ಅವರು ಶೋಷಿತ ಸಮುದಾಯಗಳ ಗಟ್ಟಿದ್ವನಿ. ಅನೇಕ ಜನಮುಖಿ ಕೆಲಸ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದನ್ನು ಒಕ್ಕೂಟ ಖಂಡಿಸುತ್ತದೆ. ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ನೇರ, ನಿಷ್ಟುರ ನಡೆಗೆ ಹೆಸರಾದ ಕೆ.ಎನ್.ರಾಜಣ್ಣ ಅವರು ಆಡಿದ ಮಾತನ್ನು ಪರಾಮರ್ಶಿಸದೆ ಅವರನ್ನು ಅಗೌರವದ ರೀತಿ ನಡೆಸಿಕೊಂಡಿರುವುದು ತರವಲ್ಲ. ಅವರು ಕೇವಲ ವಾಲ್ಮೀಕಿ ಸಮುದಾಯಕ್ಕೆ ಮಾತ್ರ ನಾಯಕರಲ್ಲ. ಇಡೀ ಅಹಿಂದ ವರ್ಗದ ನಾಯಕರು. ಸಾಮಾಜಿಕ ನ್ಯಾಯ, ಸಂವಿಧಾನ ಎಂದು ಮಾತನಾಡುವ ಕಾಂಗ್ರೆಸ್‍ನ ರಾಹುಲ್‍ಗಾಂಧಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅಹಿಂದ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಹೊಸದುರ್ಗ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಶೋಷಿತರು, ಹಿಂದುಳಿದವರು ಮತ್ತು ದಲಿತರಿಗೆ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ದೊಡ್ಡ ಆಘಾತವನ್ನು ಉಂಟು ಮಾಡಿದೆ. ಇಡೀ ರಾಜ್ಯಕ್ಕೆ ನಷ್ಟ ಉಂಟಾಗಿದೆ. ಅತ್ಯಂತ ಹಿಂದುಳಿದ ಸಮುದಾಯದ ಮುಖಂಡರೊಬ್ಬರು ಅತೀ ಎತ್ತರಕ್ಕೆ ಬೆಳೆದಂತಹ ಸಂದರ್ಭದಲ್ಲಿ, ಕಾರಣವನ್ನು ಕೇಳದೆ ತೆಗೆದುಕೊಂಡ ಕ್ರಮ ನಿಜಕ್ಕೂ ಖಂಡನೀಯ. ಕ್ಷೇತ್ರವಲ್ಲದೆ ರಾಜ್ಯದ ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪಕ್ಷದ ಮುಖಂಡರು ಪರಿಗಣಿಸಬೇಕಾಗಿತ್ತು. ಆದರೆ ಆದು ಆಗಿಲ್ಲ ಎಂಬ ವಿಷಾದ ನಮ್ಮಲ್ಲಿದೆ. ಹಾಗಾಗಿ ಮಠಾಧೀಶರು ದೆಹಲಿಗೆ ತೆರಳಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಶೀರ್ಘದಲ್ಲಿಯೇ ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟ ಮಾಡಿಕೊಡಲಿದೆ ಎಂದರು.
ಕುಂಚಿಟಿಗ ಮಠದ ಡಾ.ಶ್ರೀಶಾಂತವೀರ ಸ್ವಾಮೀಜಿ ಮಾತನಾಡಿ, ಸ್ವತಃ ಕೆ.ಎನ್.ರಾಜಣ್ಣ ಅವರು ಸದನದಲ್ಲಿಯೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರೂ, ಅವರನ್ನು ಈ ರೀತಿ ನಡೆಸಿಕೊಂಡಿರುವುದು ಸರಿಯಲ್ಲ. ಪರಿಶಿಷ್ಟ ಪಂಗಡದ ಮೂವರು ಸಚಿವರಲ್ಲಿ ಈಗಾಗಲೇ ಇಬ್ಬರು ರಾಜೀನಾಮೆ ಕೊಟ್ಟಿರುವುದರಿಂದ ದ್ವನಿಯೇ ಇಲ್ಲದಂತಾಗಿದೆ. ಸಮುದಾಯಕ್ಕೆ ಉತ್ತರ ಹೇಳುವುದು ಕಷ್ಟವಾಗಲಿದೆ. ಕಾಂಗ್ರೆಸ್ ಪಕ್ಷದಿಂದ ಸುಮಾರು 15 ಜನ ವಾಲ್ಮೀಕಿ ಶಾಸಕರು ಗೆಲುವು ಸಾಧಿಸಿದ್ದಾರೆ. ಇಷ್ಟೊಂದು ದೊಡ್ಡ ಸಮುದಾಯವನ್ನು ಅವಮಾನಿಸುವುದು ಸರಿಯಲ್ಲ. ಬಡವರ ಗಟ್ಟಿದ್ವನಿಯಾಗಿ ಅವರು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು. ಕೆ.ಎನ್.ರಾಜಣ್ಣ ಅವರೊಂದಿಗೆ ದಲಿತ, ಹಿಂದುಳಿದ ವರ್ಗದ 34 ಜನ ಸ್ವಾಮೀಜಿಗಳು ಇದ್ದೇವೆ ಎಂಬ ಸಂದೇಶವನ್ನು ನೀಡಲು ಬಂದಿದ್ದೇವೆ ಎಂದರು.
ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಕೆ.ಎನ್.ರಾಜಣ್ಣ ಅವರು ದೇವರಾಜ ಅರಸು ರಾಜಕಾರಣದ ಜೊತೆಗೆ, ಇಂದಿನ ರಾಜಕಾರಣವನ್ನು ನೋಡಿದ್ದಾರೆ. ಇಂತಹವರನ್ನು ಕಾಂಗ್ರೆಸ್ ಪಕ್ಷ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದರು.
ಬೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಮಾತನಾಡಿ, ಸಚಿವ ಸ್ಥಾನದಿಂದ ಕೆಳಗೆ ಇಳಿದಿರುವ ಬಗ್ಗೆ ಕೆ.ಎನ್.ರಾಜಣ್ಣ ಅವರು ಎಂದಿಗೂ ಎದೆಗುಂದಿಲ್ಲ. ನೀರಾಳವಾಗಿಯೇ ಇದ್ದಾರೆ. ಆದರೆ ಅಹಿಂದ ವರ್ಗದಲ್ಲಿ ತಳಮಳ ಆರಂಭವಾಗಿದೆ. ಹಾಗಾಗಿ ಈ ಪ್ರಯತ್ನ ಮಾಡಿದ್ದೇವೆ. ನಮ್ಮ ಮನವಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಿವಿಗೊಡುತ್ತದೆ ಎಂಬ ನಂಬಿಕೆ ನಮಗಿದೆ. ನಮ್ಮೆಲ್ಲರ ದ್ವನಿಯಾಗಿ ಮತ್ತೆ ಕೆ.ಎನ್.ರಾಜಣ್ಣ ಅವರು ಸಚಿವ ಸಂಪುಟ ಸೇರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಶಿಕಾರಿಪುರದ ವೀರಕ್ತ ಮಠದ ಶ್ರೀಚನ್ನಬಸವ ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀಬಸವ ಮಾಚಿದೇವಸ್ವಾಮೀಜಿ, ಕುಂಬಾರ ಗುರುಪೀಠದ ಶ್ರೀಗುಂಡಯ್ಯಸ್ವಾಮಿಜಿ, ಈಡಿಗರ ಗುರುಪೀಠದ ಶ್ರೀರೇಣುಕಾನಂದಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದಸ್ವಾಮೀಜಿ, ಮೇದಾರ ಗುರುಪೀಠದ ಶ್ರೀಕೇತೇಶ್ವರ ಸ್ವಾಮೀಜಿ, ಬೆಳ್ಳಾವೆ ಕಾರದ ಮಠದ ಶ್ರೀಕಾರದ ವೀರಬಸವಸ್ವಾಮೀಜಿ, ತಂಗನಹಳ್ಳಿಯ ಶ್ರೀಬಸವ ಮಹಾಲಿಂಗ ಸ್ವಾಮೀಜಿಗಳು ಉಪಸ್ಥಿತರಿದ್ದರು.