ಎಲ್ಲಾ ಪ್ರವಾದಿಗಳು, ದಾರ್ಶನಿಕರು ಮನುಷ್ಯರನ್ನು ಪರಸ್ಪರ ಪ್ರೀತಿಸಲು ಕಲಿಸಿದರು: ಕೆ.ನವರತ್ನ ಕುಮಾರ್

ಹೆಗ್ಗೇರಿ (ತುಮಕೂರು): "ಈ ಜಗತ್ತಿಗೆ ಆಗಮಿಸಿದ ಎಲ್ಲ ಪ್ರವಾದಿಗಳು, ದಾರ್ಶನಿಕರು ಹಾಗೂ ಸುಧಾರಕರು ಮನುಷ್ಯರನ್ನು ಪರಸ್ಪರ ಪ್ರೀತಿಸಲು ಕಲಿಸಿದರು. ಆದರೆ ಇಂದು ಕೆಲವರು ಧರ್ಮದ ಹೆಸರಿನಲ್ಲಿ ದ್ವೇಷ ಹರಡುವ ಕೆಲಸ ಮಾಡುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ" ಎಂದು ಹಿರಿಯ ಮುಖಂಡ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಕೆ. ನವರತ್ನ ಕುಮಾರ್ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ತುಮಕೂರು ವತಿಯಿಂದ ಹೆಗ್ಗೇರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸೀರತ್ ಕುರಿತು ಇತ್ತೀಚಿಗೆ ಪ್ರಕಟಗೊಂಡ ಪುಸ್ತಕಗಳನ್ನು ಬಿಡುಗಡೆಗೊಳಿಸಿ ವಿಚಾರಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಮಾತನಾಡಿ, "ತಾತ್ವಿಕವಾಗಿ ಧರ್ಮಗಳ ಮಧ್ಯೆ ವ್ಯತ್ಯಾಸಗಳಿವೆ, ಭಿನ್ನಮತಗಳಿವೆ. ಆ ವ್ಯತ್ಯಾಸವನ್ನು ಗುರುತಿಸಿ ಅವುಗಳನ್ನು ಗೌರವಿಸುವ ಪರಿಪಾಠವನ್ನು ನಾವು ಬೆಳೆಸಿಕೊಳ್ಳಬೇಕು. ಇಂದು ನಾವು ನಮ್ಮ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರವೂ ಪ್ರವಾದಿ ಮುಹಮ್ಮದ್ (ಸ) ಅವರ ಶಿಕ್ಷಣದಲ್ಲಿ ಅಡಗಿದೆ, ನಾವೆಲ್ಲರೂ ಪ್ರವಾದಿಗಳ ಬದುಕನ್ನು ಮುಕ್ತ ಮನಸ್ಸಿನಿಂದ ಅಧ್ಯಯನ ನಡೆಸುವ ಪ್ರಯತ್ನವನ್ನು ಮಾಡಬೇಕು" ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಜ.ಇ.ಹಿಂದ್ ತುಮಕೂರು ಅಧ್ಯಕ್ಷ ಮೌಲಾನ ಅಸ್ರಾರ್ ಅಹ್ಮದ್ ಉಮರಿ, ಮುಖಂಡರಾದ ಅಜ್ಮಲ್, ಇಮಾಮ್ ಬೇಗ್ ಮುಂತಾದರು ಉಪಸ್ಥಿತರಿದ್ದರು.