ಕೊರಟಗೆರೆ | ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ತುಮಕೂರು : ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್‌ಗೆ ಸರಿಯಾಗಿ ಕುಡಿಯುವ ನೀರು ಬಿಡುವಂತೆ ಮತ್ತು ವಾಸಕ್ಕೆ ಮನೆ ಮಂಜೂರು ಮಾಡಿಕೊಡುವಂತೆ ಕೇಳಿದ್ದೇ ನೆಪವಾಗಿ ಓರ್ವ ಯುವಕನ ಕೊಲೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಪೋಲೆನಹಳ್ಳಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪೋಲೇನಹಳ್ಳಿಯ ಆನಂದ ಬಿನ್ ರಾಮಾಂಜನಪ್ಪ ಅವರು ಗ್ರಾಮಪಂಚಾಯಿತಿ ಬಿಲ್ ಕಲೆಕ್ಟರ್ ಆಗಿರುವ ರಾಮಕೃಷ್ಣಪ್ಪ ಮತ್ತು ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಬಿಲ್ ಕಲೆಕ್ಟರ್ ಅವರ ಮಗ ನಾಗೇಶ್ ಅವರನ್ನು ಕುಡಿಯುವ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ. ಈ ಸಂಭಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಇದಾದ ಒಂದು ದಿನದ ಬಳಿಕ ಆನಂದ, ಕುಡುಗೋಲು ಹಿಡಿದು ಹೊಲದ ಕಡೆಗೆ ಹೋಗುವ ಸಂದರ್ಭದಲ್ಲಿ ಎದುರಿಗೆ ಸಿಕ್ಕ ಬಿಲ್ ಕಲೆಕ್ಟರ್ ರಾಮಾಕೃಷ್ಣಪ್ಪ ಅವರ ಪತ್ನಿ ನಾಗಮಣಿ ಎಂಬುವವರ ಬಳಿ ಇದೇ ವಿಚಾರವಾಗಿ ಏರು ದ್ವನಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಹೋರ ಹೋಗಿದ್ದ ರಾಮಕೃಷ್ಣಪ್ಪನ ಮಗ ನಾಗೇಶ್, ಆನಂದ ಕೈಲಿಯಲ್ಲಿ ಕುಡುಗೋಲು ಇರುವುದರಿಂದ ಅನುಮಾನಗೊಂಡು ಆನಂದಗೆ ಬುಲೇರೋ ವಾಹನದಿಂದ ಗುದ್ದಿದ ಪರಿಣಾಮ, ಆನಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲೆನಹಳ್ಳಿ ಗ್ರಾಮದ ಯುವಕನ ಕೊಲೆಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಗಳಾದ ಬಿಲ್ ಕಲೆಕ್ಟರ್ ರಾಮಕೃಷ್ಣಪ್ಪ, ಆತನ ಮಗ ಗ್ರಾಮ ಪಂಚಾಯತಿ ಸದಸ್ಯ ನಾಗೇಶ್ ಹಾಗು ನಾಗಮಣಿ ಅವರುಗಳನ್ನು ಬಂಧಿಸುವಂತೆ ಅಂಬೇಡ್ಕರ್ ದಂಡು ಸಂಘಟನೆಯ ಕುಮಾರ್ ನೇತೃತ್ವದಲ್ಲಿ ಕೋಡಿಗೇನಹಳ್ಳಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದೆ.