ಹುಳಿಯಾರು | ಸುರಕ್ಷತಾ ಸಾಧನಗಳಿಲ್ಲದೆ ಮಹಿಳೆಯಿಂದ ಚರಂಡಿ ಸ್ವಚ್ಛಗೊಳಿಸಿದ ಪಿಡಿಒ; ಆರೋಪ

ಸಾಂದರ್ಭಿಕ ಚಿತ್ರ | PC : grok
ಹುಳಿಯಾರು, ಸೆ.9 : ಸುರಕ್ಷತಾ ಸಾಧನಗಳಿಲ್ಲದೆ ಮಹಿಳೆಯಿಂದ ಚರಂಡಿ ಸ್ವಚ್ಛಗೊಳಿಸಿರುವ ಘಟನೆ ಹುಳಿಯಾರು ಹೋಬಳಿಯ ಬರಕನಹಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವರದಿಯಾಗಿದೆ.
ನೀರು ವಿತರಕ ಚಂದ್ರಶೇಖರಯ್ಯ ಎಂಬವರಿಗೆ ಅಂಗವೈಕಲ್ಯವಾಗಿರುವ ಕಾರಣ ಆತನ ಪತ್ನಿ ರಾಜಮ್ಮ ಅವರಿಂದ ನೀರು ವಿತರಿಸುವ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನೀರುಗಂಟಿಯಾಗಿರುವ ಈಕೆಯನ್ನು ನೈರ್ಮಲ್ಯ ಕೆಲಸಕ್ಕೂ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅದೂ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಕಾಲಿಗೆ ಶೂ, ಕೈಗವಸು, ಮುಖಗವಸು ಇಲ್ಲದೆ ಪೌರಕಾರ್ಮಿಕರನ್ನು ಸ್ವಚ್ಚತಾ ಕೆಲಸಗಳಿಗೆ ಬಳಸಿಕೊಳ್ಳುವುದು ಕಾನೂನು ಬಾಹಿರ ಕೃತ್ಯವಾಗಿದೆ. ಆದರೂ ಹಲವಾರು ತಿಂಗಳಿಂದ ನೀರು ನಿಂತು ಕೊಳಚೆಯಾಗಿರುವ ಸ್ಥಳವನ್ನು ರಾಜಮ್ಮ ಅವರಿಂದ ಸ್ವಚ್ಛಮಾಡಿಸುತ್ತಿದ್ದಾರೆ ಎನ್ನಲಾಗಿದೆ. ಕಾನೂನಿನ ಪ್ರಕಾರ ಮನುಷ್ಯರನ್ನು ನೇರವಾಗಿ ಒಳಚರಂಡಿಗೆ ಇಳಿಸುವುದು ನಿಷೇಧ. ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ರಾಜಮ್ಮ ಅವರಿಂದ ಬರಕನಹಾಳ್ ಗ್ರಾ.ಪಂ.ನ ಅಧಿಕಾರಿಗಳು ಈ ಕೆಲಸ ಮಾಡಿಸುತ್ತಿದ್ದಾರೆ ಎಂಬ ಅರೋಪ ಕೇಳಿ ಬಂದಿದ್ದು, ಪಿಡಿಒ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜಮ್ಮ ಅವರನ್ನು ಚರಂಡಿ ಸ್ವಚ್ಛತೆಗೆ ಬಳಸಿಕೊಂಡಿಲ್ಲ. ನೀರಿನ ಟ್ಯಾಂಕ್ ಸುತ್ತಲಿನ ಪ್ರದೇಶವನ್ನು ಕ್ಲೀನ್ ಮಾಡುವ ಜವಾಬ್ದಾರಿ ನೀರುಗಂಟಿಯದಾಗಿರುವುದರಿಂದ ಟ್ಯಾಂಕ್ ಸುತ್ತ ಕ್ಲೀನ್ ಮಾಡಿಸಲಾಗಿದೆ. ಅಲ್ಲದೆ ಅವರಿಗೆ ಸೇಫ್ಟಿ ಕಿಟ್ ಕೊಟ್ಟಿದ್ದರೂ ಬಳಸಿಕೊಂಡಿಲ್ಲ. ಕಡ್ಡಾಯವಾಗಿ ಪೌರಕಾರ್ಮಿಕರೆಲ್ಲರೂ ಸೇಫ್ಟಿ ಕಿಟ್ ಬಳಸಲು ಸೂಚಿಸುತ್ತೇನೆ.
-ತೂಕ್ಯನಾಯ್ಕ, ಪಿಡಿಒ, ಗ್ರಾಮ ಪಂಚಾಯತ್, ಬರಕನಹಾಲ್