ಪಾಳುಬಿದ್ದಿರುವ 14ನೇ ಶತಮಾನದ ಕಂಚಿನ ಮಹಲ್
ಬಹಮನಿ ಸಾಮ್ರಾಜ್ಯದ ಸಂಗೀತ, ನೃತ್ಯದ ಅರಮನೆಗೆ ಬೇಕಿದೆ ಮರು ಜೀವ

ಕಲಬುರಗಿ: ಬಹಮನಿ ಸಾಮ್ರಾಜ್ಯದ ಕಾಲದಲ್ಲಿ ರಾಜರು ಮತ್ತು ಅತಿಥಿಗಳಿಗೆ ನೃತ್ಯ ಮತ್ತು ಸಂಗೀತದಿಂದ ಮನೋರಂಜನೆ ನೀಡುತ್ತಿದ್ದ ನಗರದ ಹೊರವಲಯದ ಸುಲ್ತಾನಪುರ ಹತ್ತಿರದ ಕಂಚಿನಿ ಮಹಲ್ (ಅರಮನೆ) ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ.
14ನೇ ಶತಮಾನದಲ್ಲಿ ಗುಲಬರ್ಗಾ ಬಹಮನಿ ಸಾಮ್ರಾಜ್ಯ ದಕ್ಷಿಣ ಭಾರತದ ಮೊದಲ ಮುಸ್ಲಿಮ್ ರಾಜಧಾನಿ ಆಗಿತ್ತು. ಅಂದು ರಾಜರನ್ನು ಭೇಟಿಯಾಗಲು ಬರುವ ರಾಜ ಮತ್ತು ಆಸ್ಥಾನದ ಮಂತ್ರಿಗಳಿಗೆ, ರಾಜದೂತರಿಗೆ ಮನೋರಂಜನೆಗಾಗಿ ಎರಡು ಅಂತಸ್ತಿನ ಕಂಚಿನಿ ಮಹಲ್ ನಿರ್ಮಿಸಲಾಗಿತ್ತು.
ಕಂಚಿನಿ ಮಹಲ್ ಅನ್ನು ಸ್ಟೂಕ್ ವರ್ಕ್ ಮತ್ತು ಗಚ್ಚಿ ಕಲಾಕೃತಿ ಮತ್ತು ಒಳ ಗೋಡೆಗಳ ಮೇಲೆ ವಿವಿಧ ಶೈಲಿಯಲ್ಲಿ ಅದ್ಭುತದ ಹೂವಿನ ಕೆತ್ತನೆಗಳಿದೆ. ಬೃಹತ್ ಪ್ರವೇಶ ದ್ವಾರ ಹೊಂದಿರುವ ಪ್ಯಾಲೇಸ್ ಹತ್ತಿರ ಬಾವಿಯೂ ಇದೆ. ಇಂದಿಗೂ ಈ ಬಾವಿಯ ನೀರು ಕೃಷಿಗಾಗಿ ಬಳಕೆಯಾಗುತ್ತಿದೆ.
ಅಂದು ಅಧಿಪತಿಗಳ ಗಮನ ಸೆಳೆಯುತ್ತಿದ್ದ ಕಂಚಿನಿ ಮಹಲ್ ಇಂದು ಪಾಳು ಬಿದಿದ್ದು, ಗೋಡೆಗಳ ಮೇಲೆ ಜಾಲಿ ಬೇಲಿಗಳು ಬೆಳೆದು ಸಂಪೂರ್ಣವಾಗಿ ಮುಚ್ಚಿ ಹೋಗಿದೆ. 700 ವರ್ಷಗಳ ಹಳೆಯ ಇತಿಹಾಸ ಸಾರುವ ಈ ಭವ್ಯ ಅರಮನೆ ಸದ್ಯದ ಅಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ತುತ್ತಾಗಿ ಗೋಡೆಗಳು ಮತ್ತು ಕಂಬಗಳು ಕುಸಿಯುತ್ತಿವೆ. ಎರಡನೇ ಅಂತಸ್ತಿನ ಮೆಟ್ಟಿಲುಗಳ ಮೇಲೆ ಕಲ್ಲು ಗುಡ್ಡೆಬಿದ್ದು ಮುಚ್ಚಿ ಹೋಗಿದೆ. ನಗರದ ಹೊರವಲಯದಲ್ಲಿ, ಪ್ರಶಾಂತ ಪ್ರಕೃತಿಯ ಮಡಿಲಲ್ಲಿದೆ ಈ ಅರಮನೆ. ಜಿಲ್ಲಾಡಳಿತ ಮನಸ್ಸು ಮಾಡಿದರೆ ಕಲ್ಯಾಣ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣವಾಗಿ ಪುನರುಜ್ಜೀವ ನೀಡುವ ಮೂಲಕ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರವಾಸಿಗರನ್ನು ಇತ್ತ ಆಕರ್ಷಿಸಬಹುದು ಎಂದು ಹಿರಿಯ ಕಲಾವಿದ, ಸಂಶೋಧಕ ಅಯಾಝ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯನ್ನು ಪ್ರವಾಸಿ ತಾಣವಾಗಿಸುವ ಕನಸು ಹೊಂದಿರುವ ಅಧಿಕಾರಿಗಳು, ಜನ ಪ್ರತಿನಿಧಿ ಹಾಗೂ ರಾಜ್ಯ ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಕಂಚಿನಿ ಮಹಲ್‌ನತ್ತ ದೃಷ್ಟಿ ಹಾಯಿಸಬೇಕಿದೆ.
ಬಹಮನಿ ಕಾಲದ ಬಹಳಷ್ಟು ಅವಶೇಷಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ಗುರುತಿಸಿ ಸಂರಕ್ಷಿಸಿ ಇತಿಹಾಸ ತಿಳಿಸುವ ಕೆಲಸವಾಗಬೇಕು. ಇದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕದ ಪ್ರತಿಷ್ಠೆ ಬೆಳೆಸುವತ್ತ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಸ್ಥಳೀಯ ಇತಿಹಾಸಕಾರರು ಮತ್ತು ಸಂಶೋಧಕರು ಒತ್ತಾಯಿಸಿದ್ದಾರೆ.
ಸುಲ್ತಾನಪುರ ಗ್ರಾಮದ ಕಂಚಿನಿ ಮಹಲ್ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿಲ್ಲ. ಈ ಕುರಿತು ನೋಂದಣಿಯೂ ಇಲಾಖೆಯಲ್ಲಿಲ್ಲ. ರಿಂಗ್ ರೋಡ್ ಪ್ರದೇಶದ ಲಂಗರ್ ಕಿ ಮಸೀದಿಯನ್ನು ಕಂಚಿನಿ ಮಹಲ್ ಎಂದು ಪುರಾತತ್ವ ಇಲಾಖೆ ಸಂರಕ್ಷಣೆೆ ಮಾಡುತ್ತಿದೆ.
-ರಾಜಾ ರಾಮ್, ಸಹಾಯಕ ಉಪ ನಿರ್ದೇಶಕರು, ಪುರಾತತ್ವ ಇಲಾಖೆ ಕಲಬುರಗಿ
ಸುಲ್ತಾನಪುರ ಗ್ರಾಮದಿಂದ ಒಂದು ಕಿ.ಮೀ. ದೂರದ ಕೃಷಿ ಜಮೀನಲ್ಲಿರುವ 3,000 ಮೀಟರ್ ವಿಸ್ತೀರ್ಣದ ಕಂಚಿನಿ ಮಹಲ್‌ಅನ್ನು ಹಂತ ಹಂತವಾಗಿ ಕುಸಿಯುತ್ತಿದೆ. ಅಲ್ಲದೇ ಸ್ಥಳೀಯರು ಒತ್ತವರಿ ಮಾಡುತ್ತಿದ್ದಾರೆ. ರಾಜ್ಯ ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಇದರ ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸಬೇಕು. ಬೀದರ್‌ನ ಕೆಲವು ಐತಿಹಾಸಿಕ ಸ್ಥಳಗಳನ್ನು ಖಾಸಗಿ ಸಂಘ, ಸಂಸ್ಥೆಗಳ ಮೂಲಕ ಅಭಿವೃದ್ಧಿಪಡಿಸಿದಂತೆ ಕಲಬುರಗಿಯ ಐತಿಹಾಸಿಕ ಸ್ಥಳಗಳನ್ನೂ ಸಂರಕ್ಷಿಸಿ ಬಹುದೊಡ್ಡ ಪ್ರವಾಸಿ ತಾಣವಾಗಿಸಬಹುದು.
-ಅಯಾಝ್ ಪಟೇಲ್, ಸಂಶೋಧಕ ಮತ್ತು ಹಿರಿಯ ಕಲಾವಿದ