ಹಸುವಿನ ಸಾಕಣೆಯಲ್ಲಿನ ಹಾಡು-ಪಾಡು: ಮಲೆನಾಡು ಗಿಡ್ಡ

ಮೆಕಾನಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆದು, ಕರಾವಳಿಯಿಂದ ಮೈಸೂರು ಸೀಮೆಗೆ ಬಂದು ನೆಲೆಸಿ, 13 ಎಕರೆ ಜಮೀನನ್ನು ಖರೀದಿಸಿ, ತನ್ನ ಸಾವಯವ ಪ್ರಯೋಗಗಳಿಗೆ ಒಳಪಡಿಸಿ ಅಲ್ಲಿ ಕೃಷಿ ಮತ್ತು ಪಶುಸಂಗೋಪನೆಯನ್ನು ನಿರ್ವಹಿಸಿದ ಅನುಭವದ ಬಗ್ಗೆ ಡಾ. ಎ.ಪಿ. ಚಂದ್ರಶೇಖರ್‌ರವರು ಈ ಪುಸ್ತಕದಲ್ಲಿ ಇಂದ್ರೇಶನ ಹೆಸರಿನಲ್ಲಿ ‘ಮಲೆನಾಡು ಗಿಡ್ಡ’ ಎಂಬ ಕೃತಿಯಲ್ಲಿ ಬರೆಯುತ್ತಾ ಹೋಗಿರುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.
ನಾಗರಿಕ ಜಗತ್ತಿನಲ್ಲಿ ಕೊಂಬಿರುವ ದನಗಳ ಮರು ಮಾರಾಟ ದರ ಕಡಿಮೆ. ಕೊಂಬಿರದ ದನಗಳು ಹೆಚ್ಚು ಹಾಲನ್ನು ಕೊಡುತ್ತವೆ ಎನ್ನುವ ಅಭಿಪ್ರಾಯ ಆಧುನಿಕ ಹೈನುಗಾರಿಕೆಯಲ್ಲಿ ದನಗಳ ಕೊಂಬು ತೆಗೆಯುವ ಕೆಲಸಕ್ಕೆ ಮುಂದಾದ ಬಗ್ಗೆ, ಕರು ಹುಟ್ಟಿದ ಮೂರು ದಿನದೊಳಗಾಗಿ ಕೊಂಬು ಬರದಂತೆ ಆ ಎಳೆಗರುವಿನ ಮೇಲೆ ನಡೆಯುವ ಚಿಕಿತ್ಸೆ ಮನ ಮಿಡಿಯುತ್ತದೆ. ಈ ಪ್ರಯೋಗ ಬಹಳ ಸೂಕ್ಷ್ಮವಾದದ್ದು ಎಂಬುದನ್ನು ಓದಿ ತಿಳಿಯಬಹುದಾಗಿದೆ.
ಕರು ಹಾಕಿದ ನಾಲ್ಕು ದಿನಗಳು ಹಸು ನೀಡುವ ಗಿಣ್ಣು ಹಾಲಿನ ಬಗ್ಗೆ ಮತ್ತು ಅದರಿಂದ ತಯಾರಾಗುವ ತಿನಿಸುಗಳಾದ ಪಾಯಸ, ಕೋವ, ಗುಲಾಬ್ ಜಾಮ್ ಮಾಡುವ ಬಗ್ಗೆ, ಹಾಲಿನ ಮೂಲಕ ದೊರಕುವ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪದ ವಿವರಣೆಯ ಜೊತೆಗೆ ಒಂದು ಕೆಜಿ ತುಪ್ಪಕ್ಕೆ 40 ಲೀಟರ್ ಹಾಲು ಬೇಕೆಂದು ಹೇಳುವ ಲೆಕ್ಕಾಚಾರ, ದನಗಳಿಗೆ ಕಜ್ಜಿ ಉಂಟಾದಾಗ ಕರಟದಿಂದ ಎಣ್ಣೆ ತೆಗೆದು ಹಚ್ಚುವ ಕ್ರಿಯೆ, ಕರಟದಿಂದ ಎಣ್ಣೆ ತೆಗೆಯುವ ಪ್ರಯೋಗ ವಿಧಾನದ ವಿವರಣೆ, ಸಂತುಲಿತ ಪಶು ಆಹಾರದ ಮೂಲಕ ಚಿಕಿತ್ಸೆ ನೀಡುವ ರೀತಿ, ಬೇರೆ ಬೇರೆ ಹುಲ್ಲಿನ ವಿಧಗಳು, ಅವುಗಳ ಬಳಕೆ, ಸುರಹೊನ್ನೆ ಮತ್ತು ಕಾಡು ಬಾದಾಮಿ ಮರಗಳು ತುಂಬಾ ಶ್ರೇಷ್ಠವಾದ ಆಹಾರವೆನ್ನುವುದು, ಎಳನೀರು ಕೊಚ್ಚಿದ ಸಿಪ್ಪೆ, ತೆಂಗಿನಗರಿ, ಬೂದುಗುಂಬಳ, ಗೆಣಸು ಇವುಗಳನ್ನು ಆಹಾರವಾಗಿ ನೀಡುವ ಬಗ್ಗೆ ಕೃತಿ ತಿಳಿಸುತ್ತದೆ. ಗರ್ಭಧಾರಣೆ ಸಂದರ್ಭದಲ್ಲಿ ಹಸುವಿನ ಮೇವಿನಲ್ಲಿ ಆಗುವ ಪ್ರಯೋಗ, ವಿಷಯುಕ್ತ ಆಹಾರಗಳಾದ ನೆಲತಾಳಿ ಸೊಪ್ಪು, ಮರಗೆಣಸು, ತೆನೆ ಬರುವ ಮೊದಲಿನ ಜೋಳ, ಹರಳು ಸೊಪ್ಪುಗಳ ಬಗ್ಗೆ ತಿಳಿಸುತ್ತಾರೆ.
ಎಸ್.ಎನ್.ಎಫ್.(ಸಾಲಿಡ್ ನಾನ್ ಫ್ಯಾಕ್ಟ್) ಹಾಲಿನ ಸಾಂದ್ರತೆ ತಿಳಿಸುವುದು. 26 ಡಿಗ್ರಿಗಿಂತ ಹೆಚ್ಚು 30 ಡಿಗ್ರಿಗಿಂತ ಕಡಿಮೆ ಸರಿಯಾದ ಹಾಲು ಇರುವುದು ಎಂದು ತಿಳಿಸುವ, ಪಶುಸಂಗೋಪನೆಯಲ್ಲಿ ಹಸುಗಳ ಕೊಟ್ಟಿಗೆಯ ಶುಚಿತ್ವ, ಬಸುರಿಗಿಡ, ಮನೋರಂಜನಿ ಸೊಪ್ಪುಗಳ ಬಗ್ಗೆ ಎಚ್ಚರಿಕೆ, ರಸಮೇವಿನ ಪ್ರಯೋಗ, ಹಾಲಿನ ಗುಣಮಟ್ಟ, ಹಾಲಿಗೆ ಮೈದಾ ಹಿಟ್ಟು, ಸಕ್ಕರೆ ಸೇರಿಸಿ ಸಾಂದ್ರಗೊಳಿಸುವ ಬಗ್ಗೆ, ಡಿಗ್ರಿಯು 26ಕ್ಕಿಂತ ಕೆಳಗಿಳಿಯದಂತೆ 30ಕ್ಕಿಂತ ಮೇಲೆ ಇರದಂತೆ ಪ್ರಮಾಣ ಬದ್ಧವಾಗಿಯೂ ಯೂರಿಯ ಸೇರಿಸುವ ಬಗ್ಗೆ, ಎಮ್ಮೆಯ ಹಾಲಿನಲ್ಲಿ ಶೇಕಡಾ 8 ಕೊಬ್ಬಿನಾಂಶ ಇರುವ ಎಮ್ಮೆಯ ಹಾಲು 22 ಡಿಗ್ರಿಗಿಂತ ಕಡಿಮೆ ಇರುವುದು.
ಹಸುವಿನ ಗರ್ಭಧಾರಣೆಯಲ್ಲಿ ಆಗುವ ಕಷ್ಟಗಳು, ಕರು ಹಾಕಿದ ಹಸುವಿನ ಮಾಸು ಬೀಳುವ ಕಷ್ಟ, ಬಳಸಬೇಕಾದ ಔಷಧ ಮಾಹಿತಿಗಳು, ಹಸು ಗಂಡು ಕರು ಹಾಕಿದರೆ ಆ ಕರುವಿನ ಬಗ್ಗೆ ಅನಾದರಣೆ, ಕಡೆಗೆ ಸ್ವರ್ಗದ ದಾರಿ ಕಾಣುವ ರೀತಿ ಮನ ಮಿಡಿಯುತ್ತದೆ.
ಹಾಲು ಹೆಚ್ಚು ಮಾಡುವುದಕ್ಕಾಗಿ ಬಳಸುವ ಚುಚ್ಚುಮದ್ದುಗಳು, ಹಸುಗಳನ್ನು ಕಾಡುವ ರೋಗಗಳಾದ ಥೈಲೇರಿಯ, ದೊಡ್ಡ ರೋಗ, ಗಂಟಲು ರೋಗ, ಚಪ್ಪೆ ರೋಗ, ನೆರಡಿ ರೋಗ, ಕ್ಷಯ ರೋಗ ಇವುಗಳಿಗೆ ನೀಡುವ ಚಿಕಿತ್ಸೆ, ಬಳಸುವ ಸೂಜಿಗಳ ಗಾತ್ರ, ನೀಡುವ ಮಾತ್ರೆಗಳು, ಔಷಧಿಗಳು, ಚುಚ್ಚುಮದ್ದುಗಳು, ಮುಲಾಮುಗಳ ಬಗ್ಗೆ ಕೃತಿಯು ವಿವರಣೆಯನ್ನು ನೀಡುತ್ತದೆ.
ಬುಸೆಲ್ಲಾ ಎಂಬ ಅಪಾಯಕಾರಿ ರೋಗದ ಬಗ್ಗೆ, ಘೋರವಾದ ಕಾಯಿಲೆ ಕಾಲುಬಾಯಿ ಜ್ವರದ ನರಕದರ್ಶನ ಅನುಭವಿಸುವ ಹಸುಗಳ ಬಗ್ಗೆ ಮತ್ತು ಗೂಬೆ ರೋಗ ಇವುಗಳ ಬಗ್ಗೆ ಓದುವಾಗ ನಿಜಕ್ಕೂ ಸಂಕಟದ ಸ್ಥಿತಿ ಉಂಟಾಗುತ್ತದೆ. ಕಟ್ಟಿ ಸಾಕುವ ಹಸುವಿನ ಮತ್ತು ಬಿಟ್ಟು ಸಾಕುವ ಹಸುವಿನ ವ್ಯತ್ಯಾಸಗಳನ್ನು ಕೃತಿ ನಮಗೆ ಕಟ್ಟಿಕೊಡುತ್ತದೆ.
ಜೆರ್ಸಿ, ಗಿರ್, ಸಾಹಿವಾಲ್, ಸಿಂಧಿ, ಎಚ್.ಎಫ್. ತಳಿ ಯಾವುದಾದರೂ ಆಗಿರಲಿ ಹಾಲು ಅಧಿಕವಾದಷ್ಟು ಅದು ಪ್ರಕೃತಿ ದೂರ, ಹೆಚ್ಚಿನ ರೋಗ ಗ್ರಾಹ್ಯವೂ ಆಗಿದೆ. ದೇಸಿ ತಳಿಗಳಾದ ಹಳ್ಳಿಕಾರ್ ಹಸುಗಳು ನೀಡುವ ಕಡಿಮೆ ಹಾಲು, ಗರ್ಭ ಧರಿಸುವಲ್ಲಿ ಕಷ್ಟದ ಕೆಲಸ, ಅವುಗಳ ಭಾರೀ ಕೊಂಬಿನ ಬಗ್ಗೆ ತಿಳಿಸುವುದರ ಜೊತೆಗೆ ಹಳ್ಳಿಕಾರ್ ಗೂಳಿಯಿಂದ ಅಂತರ್‌ಜಾತಿಯ ಕರುಗಳು ಹುಟ್ಟಿದರೆ ಅವಕ್ಕೆ ‘ಎಡೆಗೊರಸು’ ಎಂದು ಕರೆಯುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಿದೇಶಿ ಎ1 ತಳಿ ಮತ್ತು ಎ2 ತಳಿಯ ವ್ಯತ್ಯಾಸಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಆರು ಹಲ್ಲಿನವರೆಗೆ ಹಳ್ಳಿಕಾರ್ ಗೂಳಿಯನ್ನು ಸಂಭಾಳಿಸಬಹುದು. ನಂತರ ಅವು ತಿವಿಯುವುದರಿಂದಾಗಿ ಹತ್ತಿರ ಹೋಗಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ವಿಚಾರ, ಹಳ್ಳಿಕಾರ್ ಗೂಳಿ ಮತ್ತು ಹಸುಗಳು ಹೆಚ್ಚಾಗಿ ಮಾಲಕನ ಜೊತೆ ಆತ್ಮೀಯತೆ ಬೆಳೆಸಿಕೊಳ್ಳುತ್ತವೆ. ಇನ್ನೊಬ್ಬರಿಗೆ ಮಾರಿದಾಗ ಹೊಸ ಮಾಲಕನ ಜೊತೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವ ಬಗ್ಗೆ ಇಲ್ಲಿ ದಾಖಲಾಗಿದೆ.
ಅಧಿಕ ರೋಗದ, ಅಧಿಕ ಹಾಲಿನ ಎ1ಗಿಂತ ಕಡಿಮೆ ಹಾಲಿನ, ಕಡಿಮೆ ರೋಗದ ಎ2 ವಾಸಿಯಾದರೂ ಇವೆರಡೂ ತಳಿಗಿಂತ ಮಧ್ಯಮ ಸ್ಥಿತಿಯಾದ ‘ಎಡೆಗೊರಸು’ ಮೇಲೆಂದು ಆ ಕಾಲಕ್ಕೆ ತೀರ್ಮಾನವಾಯಿತು ಎಂದು ಹೇಳುವುದನ್ನು ಇಲ್ಲಿ ಕಾಣಬಹುದು.
ಹಸುಗಳಿಗೆ ಸ್ವಮೂತ್ರ ಪಾನದ ಬಗ್ಗೆ ಪ್ರಯೋಗದ ವಿವರಣೆ, ಅಜೀರ್ಣ, ರುಚಿ, ನಿಶ್ಯಕ್ತಿ, ಶೀತ, ಜ್ವರ ಇವುಗಳಿಗೆ ಚ್ಯವನ ಚೂರ್ಣವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿಸುವ ಬಗ್ಗೆ, ದೇಸಿ ಹಳ್ಳಿಕಾರ್ ಹಸುಗಳ ಜೊತೆಗೆ ಮಲೆನಾಡು ಗಿಡ್ಡ ಸಾಕುವ ಬಗ್ಗೆ, ವಿಟಮಿನ್ ಡಿ ಕೇವಲ ಜೀವಸತ್ವವಲ್ಲ ಅದು ಜೀವನ ಸತ್ವ ಕೂಡ ಎಂದು ಹೇಳಿರುವ ಬಗ್ಗೆ, ಔಷಧಿ ಶಾಸ್ತ್ರಗಳಾದ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಎಲ್ಲದರ ಪ್ರಯೋಗ ಜಾನುವಾರುಗಳ ಮೇಲೆ ನಡೆಸಿರುವ ಬಗ್ಗೆ ಹಾಗೂ ಪಶು ವೈದ್ಯಶಾಸ್ತ್ರದ ಬಹಳಷ್ಟು ಅಂಶಗಳನ್ನು ಒಳಗೊಂಡಿರುವ ಈ ಕೃತಿ ಹಸು ಸಾಕಣೆ ಮಾಡುವವರ ಕೈಪಿಡಿಯಾಗಿ ಕೆಲಸ ಮಾಡುತ್ತದೆ. ಒಟ್ಟಿನಲ್ಲಿ ಈ ಪುಸ್ತಕವನ್ನು ಓದಿದಾಗ ಕೃಷಿಕನೋರ್ವನು ಪಶುಪಾಲನೆಯಲ್ಲಿ ತೊಡಗಿಕೊಂಡಾಗ ಎದುರಿಸಬೇಕಾದ ಸಮಸ್ಯೆಗಳ ಅರಿವಾಗುತ್ತದೆ. ಹೆಚ್ಚು ಹಸುಗಳನ್ನು ಸಾಕಿ ಸಾಕಷ್ಟು ಜನರು ಹೊಟ್ಟೆಹೊರೆಯುತ್ತಿರುವಂತಹ ಇಂದಿನ ಸಂದರ್ಭದಲ್ಲಿ ಈ ಪುಸ್ತಕವು ಯಾವುದು ಸರಿ, ಯಾವುದು ತಪ್ಪು ಎಂಬ ಸಂದಿಗ್ಧವನ್ನು ನಿವಾರಿಸಿ ಓದುಗನಲ್ಲಿ ಒಂದು ಸ್ಪಷ್ಟತೆಯನ್ನು ಮೂಡಿಸುತ್ತದೆ. ಮಲೆನಾಡು ಗಿಡ್ಡ ಹಸುಗಳನ್ನು ಬಯಲು ಸೀಮೆಯಲ್ಲಿ ಸಾಕುವ ಹೊಸ ಪ್ರಯೋಗ ಮುಂದುವರಿಯಲಿ. ಪಶುಸಂಗೋಪನೆಯಲ್ಲಿ ಹೊಸ ಆಯಾಮಗಳು ತಿಳಿದುಕೊಳ್ಳಲು ಇಂತಹ ಅನುಭವದ ಪುಸ್ತಕಗಳು ಮತ್ತೆ ಮತ್ತೆ ಬರಲಿ.