ತಲಸ್ಪರ್ಶಿ ಅಧ್ಯಯನದ ಫಲ

ಭೂ ಕಂದಾಯ, ಭೂ ಆಡಳಿತ, ಭೂ ಮಾಪನವ್ಯವಸ್ಥೆ ಹೀಗೆ ಭೂಮಿಗೆ ಸಂಬಂಧಿಸಿದ ಹಲವಾರು ಆಯಾಮಗಳನ್ನು ಒಳಗೊಂಡ ಈ ಕೃತಿ ಕೆ.ಎನ್. ಲಿಂಗಪ್ಪ ಇವರ ವಿಷಯ ಕುರಿತು ತಲಸ್ಪರ್ಶಿ ಅಧ್ಯಯನದ ಫಲ. ಒಂದು ಕಾಲಕ್ಕೆ ರಾಜ್ಯಾಡಳಿತದ ಆದಾಯ ಮೂಲವಾಗಿದ್ದ ಭೂಮಿ, ಭೂಕಂದಾಯ, ರಾಷ್ಟ್ರದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ತಳೆದ ಸ್ವರೂಪವನ್ನು ವಿಸ್ತೃತವಾಗಿ ಇದು ನಿರೂಪಿಸುತ್ತದೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭೂ ಆಡಳಿತದಲ್ಲಿ ಆದ ಹಲವಾರು ಬೆಳವಣಿಗೆಗಳನ್ನು ಅಂಕಿ ಅಂಶಗಳು, ವಿವರಗಳೊಂದಿಗೆ ಅಧಿಕೃತವಾಗಿ ಲಿಂಗಪ್ಪ ಅವರು ಇಲ್ಲಿ ದಾಖಲಿಸಿದ್ದಾರೆ. ಕಂದಾಯ ಇಲಾಖೆಯಲ್ಲಿನ ಅವರ ಹಲವಾರು ವರ್ಷಗಳ ಆಡಳಿತದ ಅನುಭವದ ಹಿನ್ನೆಲೆಯು ಈ ಕೃತಿಗೆ ಒದಗಿ ಬಂದಿದೆ.
ಕರ್ನಾಟಕ ಏಕೀಕರಣಗೊಳ್ಳುವುದಕ್ಕಿಂತ ಮೊದಲು ಭೂಮಿ, ಭೂಕಂದಾಯ, ಭೂ ಒಡೆತನಕ್ಕೆ ಸಂಬಂಧಿಸಿದಂತೆ ವಿವಿಧ ಕಾಯ್ದೆ ಕಾನೂನುಗಳು ಜಾರಿಯಲ್ಲಿದ್ದವು. 1964ರಲ್ಲಿ ಸಮಗ್ರ ಭೂ ಕಂದಾಯ ಕಾಯ್ದೆ ಜಾರಿಗೆ ಬಂದ ಬಳಿಕ ಏಕರೂಪದ ಕಂದಾಯ ಆಡಳಿತ ವ್ಯವಸ್ಥೆ ಪ್ರಚಲಿತದಲ್ಲಿ ಇದೆ. ಕಂದಾಯ ಇಲಾಖೆ ಸರಕಾರದ ಇಲಾಖೆಗಳಲ್ಲಿಯೇ ‘ಮಾತೃ ಇಲಾಖೆ’ ಎಂಬ ಅಭಿದಾನದೊಂದಿಗೆ ಇಂದಿಗೂ ಮುನ್ನಡೆದಿದೆ. ಈ ಇಲಾಖೆಯ ಚಿತ್ರಣವನ್ನು ಸಮಗ್ರವಾಗಿ ಮೊದಲ ಬಾರಿಗೆ ಕಟ್ಟಿಕೊಡುವ ಕೆಲಸವನ್ನು ಲಿಂಗಪ್ಪ ಅವರು ಮಾಡಿರುವುದು ಹೆಮ್ಮೆಯ ವಿಷಯ.
ಹಿಂದುಳಿದ ವರ್ಗಗಳ ಕುರಿತು ಲಿಂಗಪ್ಪ ಅವರ ಪೂರ್ವಾಪರ ಅಧ್ಯಯನ ಮತ್ತು ಆ ವರ್ಗದ ಅಭ್ಯುದಯ ಕುರಿತು ಲಿಂಗಪ್ಪ ಅವರ ಕಾಳಜಿ, ಕಳಕಳಿ ನಾಡಿಗೆ ಗೊತ್ತು. ಅಂತಹದ್ದೇ ಅಧ್ಯಯನ ಮತ್ತು ಪರಿಶ್ರಮ ಈ ಕೃತಿಯಲ್ಲಿ ಕೂಡ ಕಂಡುಬರುತ್ತದೆ. ಸರಕಾರದ ಕಂದಾಯ ಮತ್ತು ಇತರ ಇಲಾಖೆಗಳ ಅಧಿಕಾರಿಗಳು, ನೌಕರರು ಅಲ್ಲದೆ ಜನಸಾಮಾನ್ಯರು ಕೂಡ ಓದಿ ಅರಿಯಬಲ್ಲ ಈ ಕೃತಿ ಲಿಂಗಪ್ಪನವರ ಮೌಲಿಕ ಕೊಡುಗೆಯಾಗಿದೆ.