ವಸ್ತಾರೆ ಅವರ ‘ನಿಯುಕ್ತಿ ಪುರಾಣ’ದ ಸುತ್ತ...

ನಾಗರಾಜ ವಸ್ತಾರೆ ಅವರ ‘ನಿಯುಕ್ತಿ ಪುರಾಣ’ದ ಕಥನದಲೆಗಳಲ್ಲಿ ತೇಲಿ ತೇಲಿ ಮುಳುಗೆದ್ದು ತೇಲಿ ದಡಮುಟ್ಟಿದ ಹೊಚ್ಚ ಹೊಸ ಅನುಭವ, ನನ್ನದು.
ಐತಿಹಾಸಿಕ ಕಾದಂಬರಿ ಎಂದು ಕಿರಿದಾಗಿ ಮುಖಪುಟದಲ್ಲಿ ಮುದ್ರಿತವಾಗಿರುವ ಕೃತಿಯ ಪುಟ ತೆರೆದರೆ, ಒಳಪುಟದಲ್ಲಿ ಇದೊಂದು ಅಪ್ಪಟ ಪುರಾಣ, ಇತಿಹಾಸವಲ್ಲ, ಕಾದಂಬರಿಯಂತೂ ಅಲ್ಲವೇ ಅಲ್ಲ, ಎಂದು ಕೃತಿ ಕರ್ತೃ ಹೇಳಿಕೊಂಡಿದ್ದರೂ, ಪುಟಗಳು ಸಾಗಿದಂತೆ ಸಂಪೂರ್ಣ ಹಿಡಿದಿಡುವ ರೋಚಕ ಕಾದಂಬರಿ ಎನ್ನಲು ಅಡ್ಡಿಯಿಲ್ಲ. ಓದಿದವರ ಪಾಲಿಗೆ ಎಷ್ಟು ರೋಚಕವೋ, ಅಷ್ಟೇ ವಿಷಣ್ಣ ಭಾವವೂ ಕವಿಯುವ ಗತಕಾಲದ ವಿಶಿಷ್ಟ ನಿರೂಪಣೆಯ ಮಹತ್ಕೃತಿ.
ಇಲ್ಲಿ ವಸ್ತಾರೆ ಅವರ ಭಾಷಾ ಪ್ರಯೋಗ ಅವರ ಜನಪದದ ಒಲವನ್ನು ಪ್ರತಿಫಲಿಸುವ ದ್ಯೋತಕ. ‘‘ಹೊಸ ಓದುಗರಿಗೆ ಮತ್ತು ಜನಪದೀಯ ರುಚಿ ಗ್ರಹಿಸದವರಿಗೆ, ಗ್ರಂಥಸ್ಥ ಭಾಷೆಯನ್ನಷ್ಟೇ ಓದುವವರಿಗೆ ನಿಯುಕ್ತಿ ಪುರಾಣ ಕೊಂಚ ಒಗರು ಕೂಡಾ’’ ಎಂದಿರುವ ಸಂತೋಷಕುಮಾರ ಮೆಹಂದಳೆ ಅವರ ಬೆನ್ನುಡಿಯ ಮಾತು ಅಕ್ಷರಶಃ ಸತ್ಯ. ಹಾಗೆಯೇ ಮುಂದೆ ಅವರಂದಿರುವಂತೆ, ಪಟ್ಟು ಬಿಡದೆ ಓದಿಗೆ ಬಿದ್ದರೆ ಪಳಗಿ ಬಿಡುವ ಬರಹದ ಶೈಲಿಗೆ ಗೊತ್ತಿಲ್ಲದೆ ಆಪ್ತವಾಗಿಸುವ ಹಿಡಿತ ಇಲ್ಲಿದೆ ಎಂಬುದು ನನ್ನನುಭವವೂ ಹೌದು.
1576ರಿಂದ 1617ರ ವರೆಗಿನ ಮಹಿಷೂರಿನ ಒಡೆಯ ವಂಶದ ಕಥನದೊಡನೆ ಮಲಬಾರ್ ಸೀಮೆಯ ಸಾಮಾಜಿಕ ಕಥನವೂ ಇಲ್ಲಿ ಹಾಸುಹೊಕ್ಕಾಗಿದೆ.
ನಕ್ಷಾಸನ್ನಿಧಾನ, ಶೇರಮಾನಬಾಬಾ, ಶೆರಗಣಾಂಬು, ಚೇರಮಾನ ತಾಜುದ್ದೀನ -ಈ ಅಧ್ಯಾಯಗಳ ಸೊಗಸಿಗೆ, ಬಾನ ಚಂದ್ರಮನಿಗೆ ಕೈಚಾಚಿ ಕಿಲಕಿಲ ನಗುವ ಶಿಶು ತಾಜುದ್ದೀನನ ಮೋಹಕ ಚಿತ್ರಣಕ್ಕೆ ನಾನು ಮಾರು ಹೋಗಿ ಬಿಟ್ಟೆ.
ಅಷ್ಟೇ ಜೀರ್ಣಿಸಲಾಗದೆ ಹೋದುದು ‘ಮಾಲಿಂಗಿ ತಾಯೇ ಆಲಿಂಗಿಸೆನ್ನ’ ಅಧ್ಯಾಯ. ಅಂಥಾ ಘೋರ ಕೃತ್ಯ ಎಸಗಿದವರಿಗೆ ಶಿಕ್ಷೆಯೂ ಆಗದೆ ಹೋದುದು, ಆ ಬಗ್ಗೆ ಯಾವುದೇ ಉಲ್ಲೇಖವೂ ಇಲ್ಲದಿರುವುದು ಮಾತ್ರ ಹೃದಯದ ಮೇಲೆ ಭಾರವಾಗಿ ಕುಳಿತಿದೆ. ಮುಂದಿನ ಪ್ರಯುಕ್ತಿ ಪುರಾಣದಲ್ಲಾದರೂ ತಿಮ್ಮಾಜಮ್ಮಣ್ಣಿಯಿಂದ ನ್ಯಾಯ ನಿರೀಕ್ಷಿಸಬಹುದೇ ಎಂದು ಕಾದಿರುವೆ.
ವಿವರವಾದ ಕೊನೆ ಟಿಪ್ಪಣಿಗಳು, ಕಾಲಸೂಚಿಗಳು, ಕಾಲ್ಪನಿಕ ಎಂಬ ಸ್ಪಷ್ಟ ಸೂಚನೆಗಳು ಮಾತ್ರವಲ್ಲ, ವಿವರವಾದ ಐದು ಭೂಮಿ ಚಿತ್ರಗಳೂ ಪುಸ್ತಕದ ಕೊನೆಯಲ್ಲಿ ಇವೆ.
ಈ ನಿಯುಕ್ತಿ ಪುರಾಣವು ಇಸವಿ -ತೇದಿಗಳ ನಿಗದಿಯುಳ್ಳ ಚಾರಿತ್ರಿಕ ಹಿನ್ನೆಲೆ ಒಂದರ ಎದುರು ತನ್ನ ಪಾಡಿಗೆ ತಾನು ಜರುಗಿದ ಅತ್ಯಪ್ಪಟ ಕಲ್ಪನಾ ವಿಲಾಸವೆಂದೂ ಲೇಖಕರು ಕೊನೆ ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.
ಲೇಖಕ ತನ್ನ ಕೃತಿಯನ್ನು ಸಮರ್ಪಿಸಿರುವ ಬಂಗಾರದೊಡ್ಡಿ ನಾಲೆ ಕೊನೆಯಲ್ಲಿ ಮುದ್ರಿತವಾಗಿರುವ ಭೂಮಿ ಚಿತ್ರಗಳಲ್ಲಿ ಎಲ್ಲಾದರೂ ಕಾಣುವುದೇ ಎಂದು ಅರಸಿ ನಿರಾಶಳಾದೆ.
‘‘ಇಲ್ಲ, ಅದಿನ್ನೂ ಕಥೆಯಲ್ಲಿ ಬಂದಿಲ್ಲವಲ್ಲಾ? ಮುಂದಿನ ಭಾಗದಲ್ಲಿ ಬರಲಿದೆ’’ ಎಂದರು ಪ್ರಿಯ ವಸ್ತಾರೆ.
ರಾಜಕೀಯವೆನ್ನುವುದು ರಕ್ತಸಿಕ್ತ ಅಷ್ಟೇ ಅಲ್ಲ, ರಕ್ತಾಸಕ್ತವೂ ಹೌದು, ಸ್ವರಕ್ತಾನುರಕ್ತವೂ ಹೌದು ಎಂದು ಮುಗಿಸಿದಂತೆಯೇ, ರಾಣಿ ತಿಮ್ಮಾಜಮ್ಮಣ್ಣಿಯ ಕಥೆ ಮುಂದುವರಿಯಲಿದೆ ಎಂಬ ಸೂಚನೆಯೊಡನೆ ಮುಕ್ತಾಯವಾದ ನಿಯುಕ್ತಿ ಪುರಾಣದ ಮುಂದಿನ ಭಾಗ ‘ಪ್ರಯುಕ್ತಿ ಪುರಾಣ’ದ ಓದಿಗಾಗಿ ಕಾದಿರುವೆ.
ವಸ್ತಾರೆ ಅವರ ಬಾಳಲ್ಲಿ ಬಂದ ಅನಿರೀಕ್ಷಿತ ತಿರುವಿನಿಂದಾಗಿ ವಿಳಂಬವಾಗಿದ್ದರೂ, ಇನ್ನೀಗ ಬೇಗನೇ ನಮಗೆ ಆ ಓದಿನ ಭಾಗ್ಯ ಲಭಿಸುವುದು ಎಂದೇ ನಂಬಿರುವೆ.
ಓದಿ ಮುಗಿದಿದ್ದರೂ, ಇನ್ನೂ ಹೆಚ್ಚಿನ ಗ್ರಹಿಕೆಗಾಗಿ ಪುನಃ ಪುನಃ ಓದಬೇಕನಿಸುವುದು ನನ್ನ ತಪ್ಪಲ್ಲವು..(ವಸ್ತಾರೆ ಭಾಷೆಯಲ್ಲಿ)
ವಸ್ತಾರೆ ಕಥನ ಕೌಶಲದ ಮಹತ್ತಿಗಾಗಿ, ಅವರ ಜಾನಪದ ಭಾಷಾವುತ್ಪತ್ತಿಯ ಸೊಗಸಿಗಾಗಿ, ಆ ಸಂಪತ್ತಿನ ಸಿರಿಗಾಗಿ, ಪುರಾಣೇತಿಹಾಸದ ಇಣುಕು ನೋಟಗಳಿಗಾಗಿ ಓದುಗರೆದುರು ತೆರೆದಿದೆ ‘ನಿಯುಕ್ತಿ ಪುರಾಣ’.
ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಕೃತಿಯ ಮುಖಬೆಲೆ ರೂ. 530.