ಮರುಹುಟ್ಟು ಬಯಸುವ ಪೌರಾಣಿಕ ಪಾತ್ರಗಳು

ಕಾಲೈಕ್ಯ, ಸ್ಥಳ್ಳೆಕ್ಯ, ಕ್ರಿಯೆಕ್ಯಗಳು ಒಂದು ನಾಟಕದ ಜೀವಾಳ. ಅವೆಲ್ಲವನ್ನೂ ಒಡಲಲ್ಲಿ ಸೇರಿಸಿಕೊಂಡಿರುವ ಈ ನಾಟಕ ಓರ್ವ ಅಸಾಮಾನ್ಯ ನಾಟಕಕಾರನ ಕೈಯಲ್ಲಿ ಸೃಷ್ಟಿಗೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿ ಭೂತಕಾಲವಿದೆ, ವರ್ತಮಾನವಿದೆ, ಭವಿಷ್ಯತ್ತೂ ಇದೆ. ಓದುತ್ತಾ ಸಾಗುತ್ತಿರುವಂತೆ, ನಾಟಕದೊಳಗೆ ಚರ್ಚಿತವಾದ ವಿಚಾರಗಳು ಕಾಲಾತೀತವಾಗಿ ನಮ್ಮ ಮುಂದೆ ಪ್ರಶ್ನೆಗಳನ್ನು ಎಸೆಯುತ್ತಾ ಅಲ್ಲಲ್ಲಿ ನಿಲ್ಲಿಸಿ ಆತ್ಮಾವಲೋಕನ ಮಾಡಿಸಿಕೊಳ್ಳುವಂತೆ ಮಾಡುತ್ತದೆ.
ರಾಮಾಯಣದಲ್ಲಿ ಬಂದಂತಹ ಪಾತ್ರಗಳನ್ನು ನಾಟಕಕರ್ತೃ ಯಥಾವತ್ ಒಪ್ಪಿಕೊಳ್ಳುವುದಿಲ್ಲ. ಇಲ್ಲಿ ರಾಮ, ಲಕ್ಷ್ಮಣ, ಸೀತೆ, ರಾವಣ, ವಾಲಿ, ಸುಗ್ರೀವ, ಭರತರು ತಮ್ಮ ಪೌರಾಣಿಕ ವೇಷಗಳನ್ನು ಕಳಚಿಕೊಳ್ಳುವಂತೆ ಮಾಡಿ, ತಮ್ಮದೇ ವಿಶಿಷ್ಟ ನಿಲುವು ಆಲೋಚನೆಗಳ ಹಿನ್ನೆಲೆಯಲ್ಲಿ ಅವರಿಗೆ ಮರುಹುಟ್ಟು ನೀಡುತ್ತಾರೆ. ಆದುದರಿಂದ ಇಲ್ಲಿನ ಈ ಪಾತ್ರಗಳು, ಕಾಲ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಆದರ್ಶಗಳನ್ನು ಪಾಲಿಸುತ್ತಾ ನಾಟಕದ ಮೂಲ ಉದ್ದೇಶಕ್ಕೆ ಎಲ್ಲೂ ಭಂಗ ಬಾರದ ರೀತಿಯಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಿಕೊಂಡು ಹೋಗುತ್ತವೆ. ಈ ಮರುಜೀವ ತುಂಬುವಲ್ಲಿ ಕೃತಿಕಾರರ ಅಪಾರವಾದ ಚಿಂತನಾಶಕ್ತಿ ಕೆಲಸ ಮಾಡಿದೆ. ಈ ಬದಲಾವಣೆ ಆಧುನಿಕ ಬದುಕಿಗೆ ಹತ್ತಿರವಾಗುವುದರೊಂದಿಗೆ, ಸಾಮಾನ್ಯವಾಗಿ ರಾಮಾಯಣದ ಒಳಗಿನಿಂದ ಹುಟ್ಟಿಕೊಳ್ಳುವ ಹಲವಾರು ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೊಡುತ್ತವೆ.
ಇಲ್ಲಿನ ರಾಮ ಯಾರು? ಅವನೋರ್ವ ವ್ಯಕ್ತಿಯೇ? ಶಕ್ತಿಯೇ? ಹಲವು ಆಲೋಚನೆಗಳ ಮೂರ್ತರೂಪವೇ? ಒಂದೂ ತಿಳಿಯದೆ, ಇಡೀ ರಾಮಾಯಣದ ಕತೆ ಇನ್ನೊಂದೇ ಆಗಿ ರೂಪುತಾಳುತ್ತಾ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಇಲ್ಲಿ ರಾಮ ಒಬ್ಬ ವ್ಯಕ್ತಿಯಾಗುವುದಿಲ್ಲ. ಕೇವಲ ಒಂದು ಹೆಸರೂ ಆಗುವುದಿಲ್ಲ. ಬದಲು ಆದರ್ಶಗಳ ಪ್ರತೀಕವಾಗುತ್ತಾನೆ. ಒಂದು ಸಮಾಜವಾಗುತ್ತಾನೆ. ಹೊರಗಿದ್ದೂ ಒಳಗಿನವನಾಗುತ್ತಾನೆ. ಸರ್ವಕಾಲಕ್ಕೂ ಸೇರಿದವನಾಗುತ್ತಾನೆ. ಆದರ್ಶ ಸಮಾಜವನ್ನು ಕಟ್ಟುವ ಪೋಷಿಸುವ ತಲೆಮಾರುಗಳಿಗೆ ಹಸ್ತಾಂತರಿಸುವ, ಸತ್ಯ ಅಹಿಂಸೆ ತ್ಯಾಗಗಳ ಪ್ರತೀಕವಾಗುತ್ತಾನೆ. ನಮ್ಮ ನಡುವೆಯೇ ಪರಿವರ್ತನೆಗಳನ್ನು ನಮಗರಿವಿಲ್ಲದೆ ಮಾಡುತ್ತಾ, ನಮ್ಮೊಳಗೇ ಇರುವ ಸತ್ಯದ ಅರಿವನ್ನು ನಮ್ಮಿಂದಲೇ ಮಾಡಿಸುತ್ತಾನೆ. ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರಗಳನ್ನು ಕಂಡುಕೊಳ್ಳುವಂತೆ ಮಾಡುತ್ತಾನೆ. ಹೊಸ ಸ್ಥಿತ್ಯಂತರಗಳಿಗೆ ಕಾರಣನಾಗುತ್ತಾನೆ.
ಕಾಲಾತೀತವಾಗಿ ಸಾಗುವ ನಾಟಕ, ಅಂದಿನ-ಇಂದಿನ-ಮುಂದಿನ- ಎಂದೆಂದಿನ ಕತೆಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡು, ಪರಿಸ್ಥಿತಿಗಳನ್ನು ಮೀರಲಾರದ, ಪ್ರತಿಯೋರ್ವನ ಒಳಗನ್ನು ಬಗೆಯುತ್ತಾ, ಸಮಾಜದ ಒಳಗೆ ಸೇರಿಕೊಂಡ, ನಾವೇ ಹುಟ್ಟುಹಾಕಿದ ನೂರಾರು ಪ್ರಶ್ನೆಗಳಿಗೆ ಸಾವಿರಾರು ಉತ್ತರಗಳನ್ನು ಹುಡುಕುತ್ತಾ, ಹಲವಾರು ಊಹೆಗಳಿಗೆ ದಾರಿ ಮಾಡಿಕೊಡುತ್ತಾ, ಏಕಕಾಲದಲ್ಲಿ ಎಲ್ಲೂ ನಿಲ್ಲದ ಏನೂ ಕಾಣದ ಅಂತರಂಗದ ಮತ್ತು ಬಹಿರಂಗದ ಪ್ರವಾಹವಾಗಿ ಸೆಳೆಯುತ್ತಾ ಸಾಗುತ್ತದೆ.
ಕೃತಿ: ನಮ್ಮವನು ಶ್ರೀರಾಮಚಂದ್ರ
ಕನ್ನಡ ನಾಟಕ
ಲೇಖಕರು: ಪ್ರಕಾಶ್ ವಿ. ಎನ್
ಮುಖಬೆಲೆ: 125 ರೂ.
ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಶನ್ಸ್, ಮ್ಯಾಕ್ಸಿಮಸ್ ಕಾಂಪ್ಲೆಕ್ಸ್, ಲೈಟ್ಹೌಸ್ ಹಿಲ್ ರಸ್ತೆ, ಮಂಗಳೂರು
ಮೊ: 701922774