ವೈಚಾರಿಕ ನೆಲೆಯಲ್ಲಿ ಅರಳಿರುವ ಗ್ರಾಮೀಣ ಸೊಗಡಿನ ವಿಭಿನ್ನ ಕಥೆಗಳು

‘ಉರಿವ ದೀಪದ ಕೆಳಗೆ’ ಕಥಾಸಂಕಲನದಲ್ಲಿರುವ ಎಲ್ಲಾ ಕಥೆಗಳು ವಸ್ತುವಿನಲ್ಲಿ, ನಿರೂಪಣೆಯಲ್ಲಿ, ಭಾಷಾ ಶೈಲಿಯಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದ್ದು ವೈವಿಧ್ಯತೆಯಿಂದ ಕೂಡಿವೆ. ಇಲ್ಲಿನ ಕಥೆಗಳು ಕಥೆಗಾರರಿಗೆ ಮಾತ್ರ ಹೊತ್ತಹೊರೆಯನ್ನು ಕೆಳಗಿಳಿಸಿ ಅನುಭವಿಸುವ ಆನಂದವನ್ನು ನೀಡದೆ ಓದುಗನಿಗೂ ಆತ್ಮಾನುಭೂತಿಯನ್ನು ಒದಗಿಸಿ ತನ್ಮೂಲಕ ವೈಚಾರಿಕ ಅರಿವನ್ನು ಮೂಡಿಸುವಲ್ಲಿ ಸಶಕ್ತವಾಗಿವೆ.
ಕಥಾಸಂಕಲನದಲ್ಲಿ ಇರುವ ಎಲ್ಲಾ ಕಥೆಗಳು ಸಮಾಜೋ- ಮಾನೋವೈಜ್ಞಾನಿಕ ಮತ್ತು ಸಮಾಜೋ-ಸಾಂಸ್ಕೃತಿಕ ದೃಷ್ಟಿಕೋನಗಳಿಂದ ವಿಶ್ಲೇಷಿಸಬಹುದಾದ ಕಥೆಗಳಾಗಿವೆ. ಕಥಾಶೈಲಿ ಮತ್ತು ಭಾಷೆ, ಗಾದೆಗಳು, ನುಡಿಗಟ್ಟುಗಳು ಹಾಗೂ ಗ್ರಾಮೀಣ ಸೊಗಡಿನ ಮೆರುಗಿನಿಂದ ಕೂಡಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಇದಕ್ಕೆ ಕಾರಣ ಕಥೆಗಾರರು ದಿನನಿತ್ಯ ನಮ್ಮ ಸುತ್ತಲೂ ನಡೆಯುವ ವಿದ್ಯಮಾನಗಳನ್ನು ವಸ್ತುವನ್ನಾಗಿ ಆಯ್ದುಕೊಂಡಿರುವುದು.
‘ಕೊರಡು ಕೊನರಿದ ಹಾಡು’ ಕಥೆಯು ಸಾಮಾಜಿಕ ಮಡಿವಂತಿಕೆ, ಸಾಂದರ್ಭಿಕ ವಾಸ್ತವಿಕತೆ ಹಾಗೂ ಮನೋವೈಜ್ಞಾನಿಕ ವೈಚಾರಿಕತೆ, ಈ ಮೂರು ಆಯಾಮಗಳಿಂದ ತೂಗಿದರೆ ಮಾತ್ರ ಅದರ ಮೌಲ್ಯ ಓದುಗನಿಗೆ ಅರಿವಾಗುವುದು. ಇನ್ನು ‘ಮುಟ್ಟು ಕಥೆಯಲ್ಲ’ ಎನ್ನುವ ಕಥೆಯಲ್ಲಿ ಬಸವಾದಿ ಶರಣರು ಕಂಡ ಸಮಸಮಾಜದ ಪ್ರಯತ್ನ ಫಲಪ್ರದವಾಗಿದೆಯೇ ಎನ್ನುವ ಚಿಂತನೆಯನ್ನು ಹುಟ್ಟುಹಾಕಿ ಆ ಮೂಲಕ ಆತ್ಮವಿಮರ್ಶೆಗೆ ಓದುಗನನ್ನು ಒಳಪಡಿಸುತ್ತದೆ. ಹೆಣ್ಣಿನ ಶೋಷಣೆಯ ಅನೇಕ ಮಜಲುಗಳಲ್ಲಿ ಒಂದು ಮಗ್ಗುಲನ್ನು ಅನಾವರಣಗೊಳಿಸುವುದಲ್ಲದೆ, ‘ಮುಟ್ಟಿನಿಂದಲೇ ಹುಟ್ಟು’ ಎನ್ನುವ ಸಾರ್ವತ್ರಿಕ ಸತ್ಯದ ದರ್ಶನವನ್ನು ಮಾಡಿಸುತ್ತದೆ.
‘ಹೆಸರಿಲ್ಲದ ಊರು’ ಕಥೆಯು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಕಥೆಯಾಗಿದ್ದು, ಕಥೆಯ ಹೆಸರೇ ಹೇಳುವಂತೆ ಹೆಸರಿಲ್ಲದ ಊರು ರಂಗನಾಥನ ಜೀವಮಾನದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರದೆ ಅಜ್ಞಾತವಾಗಿ ಉಳಿಯುವುದು ಒಂದು ವಿಪರ್ಯಾಸ. ಈ ಕಥೆಯನ್ನು ಓದುತ್ತಿದ್ದರೆ ರಾಜಕಾರಣಿಗಳ ಕುತಂತ್ರ ಮತ್ತು ಸರಕಾರಿ ಅಧಿಕಾರಿಗಳ ಭ್ರಷ್ಟತೆಯಿಂದ ಜೀವಂತವಾಗಿರುವಾಗಲೇ ಊರು ಮತ್ತು ವ್ಯಕ್ತಿ ದಾಖಲೆಗಳಲ್ಲಿ ಪೌತಿಯಾಗಿ, ಜೀವಂತ ಪ್ರೇತಗಳಾಗಿ, ಸೌಲಭ್ಯ ವಂಚಿತರಾಗಿ ಅಲೆಯುತ್ತಿರುವವರ ದಾರುಣ ಸ್ಥಿತಿ ಕಣ್ಣಮುಂದೆ ನಿಲ್ಲುತ್ತದೆ.
‘ದೇವರ ದಲ್ಲಾಳಿಗಳು’ ಕಥೆ ಪುರೋಹಿತಶಾಹಿಗಳ ಷಡ್ಯಂತ್ರಕ್ಕೆ ಮುಗ್ಧರು ಹೇಗೆಲ್ಲಾ ಬಲಿಯಾಗುತ್ತಾರೆ ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ. ಈ ಕಥೆಯನ್ನು ವಿಸ್ತರಿಸುತ್ತಾ ಹೋದರೆ ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಕುರಿತು ಒಂದು ಮಹಾ ಪ್ರಬಂಧವನ್ನೇ ಮಂಡಿಸಬಹುದು.
‘ಸಂತೆಯೊಳಗಿನ ಸರಕು’ ಕಥೆ ದಾಯಾದಿಗಳ ವೈಷಮ್ಯವನ್ನು ವಸ್ತುವಾಗಿ ಉಳ್ಳ ಕಥೆಯಾಗಿದ್ದು, ನಮ್ಮವರಿಂದ, ಅದರಲ್ಲೂ ನಮ್ಮ ಬೆನ್ನ ಹಿಂದೆ ಬಿದ್ದವರಿಂದ ಒಂದು ಗುಲಗಂಜಿ ಗಾತ್ರದಷ್ಟು ಮೋಸವಾದರೂ ಅದರಿಂದಾಗುವ ನೋವು ಮಾತ್ರ ಗೌರಿಶಂಕರದಷ್ಟು ಎನ್ನುವುದನ್ನು ಈ ಕಥೆ ಧ್ವನಿಸುತ್ತದೆ.
‘ಸತ್ತವನ ಸ್ವಗತ’ ಕಥೆಯ ಶೈಲಿ ಉಳಿದ ಕಥೆಗಳಿಗಿಂತ ಭಿನ್ನವಾಗಿದ್ದು ಕಥೆಗಾರರ ಕೌಶಲಕ್ಕೆ ಹಿಡಿದ ರನ್ನಗನ್ನಡಿಯಾಗಿದೆ. ಸಿಂಹಾವಲೋಕನ ಕ್ರಮದಲ್ಲಿ ಕಥೆ ಸಂಕೀರ್ಣ ಘಟನಾವಳಿಗಳಿಂದ ಸಾಗುತ್ತದೆ. ‘ಹಿರಿಯರು ಅನುಭವದ ಪಡಿಯಚ್ಚುಗಳು; ಕಿರಿಯರು ಅವರ ನೆರಳಲ್ಲಿ ಪಡಿಮೂಡಬೇಕು’ ಅದನ್ನು ಬಿಟ್ಟು ಹಿರಿಯರನ್ನು ಮೂಲೆಗುಂಪಾಗಿಸಿ ನಾವೇ ಯಜಮಾನಿಕೆ ಹಿಡಿಯಹೊರಟರೆ ಸಂಸಾರದ ನೌಕೆ ಅನುಭವಿ ನಾವಿಕನಿಲ್ಲದೆ ತಳ ಸೇರುವುದು ಖಚಿತ. ಅಂತಹ ದಾರುಣ ಸ್ಥಿತಿ ‘ಸತ್ತವನ ಸ್ವಗತ’ ಕಥೆಯಲ್ಲಿ ಬಳ್ಳೆರಾಜುವಿನ ಮೂಲಕ ಅನಾವರಣಗೊಳ್ಳುತ್ತದೆ.
ಇನ್ನು ‘ಅಸುರ ಸಂತಾನ’ ಕಥೆಯ ಒಳಗಿಳಿದು ನೋಡುವುದಾದರೆ ಇದೂ ಒಂದು ರೀತಿಯ ಮರ್ಯಾದಾಹತ್ಯೆಯೇನೋ ಎನಿಸಿಬಿಡುವಷ್ಟು ಮನುಷ್ಯನ ಕ್ರೂರ ಮನೋಭಾವನೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತದೆ. ಕುರಿ, ಕೋಳಿಗಳನ್ನು ಕೊಲ್ಲುವಷ್ಟು ಲೀಲಾಜಾಲವಾಗಿ ಮನುಷ್ಯನ ಜೀವಹರಣ ಮಾಡುವಷ್ಟು ಕೆಳಹಂತಕ್ಕೆ ಇಳಿದಿದ್ದೇವೆಂದರೆ, ಮಾನವೀಯ ಮೌಲ್ಯಗಳು ಪ್ರಪಾತಕ್ಕೆ ಕುಸಿಯುತ್ತಿವೆ ಎನ್ನುವುದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಮತ್ತೊಂದಿಲ್ಲ.
‘ಊರ ದೇವತೆ’ ಕಥೆ ಹಳ್ಳಿಗಳಲ್ಲಿ ಊರ ಪ್ರಮುಖರಾದವರು ಜಾತ್ರೆ, ಹಬ್ಬ ಹರಿದಿನಗಳ ನೆಪ ಮಾಡಿಕೊಂಡು ಅಮಾಯಕರನ್ನು ಹೇಗೆಲ್ಲಾ ಸುಲಿಗೆ ಮಾಡುತ್ತಾರೆ ಎನ್ನುವುದನ್ನು ನಿರೂಪಿಸುತ್ತದೆ. ಇಂತಹ ಸುಲಿಗೆಗಳು ಕೇವಲ ಹಳ್ಳಿಗಳಿಗೆ ಮಾತ್ರ ಸೀವಿತವಾಗಿರದೆ ಪಟ್ಟಣಗಳಲ್ಲೂ ಸಂಘಟನೆಗಳ ಸೋಗಿನಲ್ಲಿ ಸುಲಿಗೆ ಮಾಡುವುದನ್ನು ಕಾಣಬಹುದಾಗಿದೆ.
ಹಡವನಹಳ್ಳಿ ವೀರಣ್ಣಗೌಡರು ತಮ್ಮ ‘ಉರಿವ ದೀಪದ ಕೆಳಗೆ’ ಕಥಾಸಂಕಲನದಲ್ಲಿ ಶ್ರೀಸಾಮಾನ್ಯನ ಸಾಮಾನ್ಯ ಜೀವನದಿಂದ ಘಟನೆ ಸನ್ನಿವೇಶಗಳನ್ನು ಎತ್ತಿಕೊಂಡು ಗ್ರಾಮ್ಯ ಭಾಷೆಯಿಂದ ಸಾಮಾನ್ಯ ಸಂಗತಿಗಳನ್ನೇ ಅಸಾಮಾನ್ಯವಾಗಿ ಚಿತ್ರಿಸಿ ತಮ್ಮ ಕಲಾಕೌಶಲವನ್ನು ಮೆರೆದಿದ್ದಾರೆ.
ಒಟ್ಟಂದದಲ್ಲಿ ನೋಡುವುದಾದರೆ ‘ಉರಿವ ದೀಪದ ಕೆಳಗೆ’ ಕಥಾಸಂಕಲನದಲ್ಲಿ ಬರುವ ಎಲ್ಲಾ ಹತ್ತು ಕಥೆಗಳು ಹಡವನಹಳ್ಳಿ ವೀರಣ್ಣಗೌಡರು ಕಂಡುಂಡ ಸತ್ಯಸಂಗತಿಗಳೇ ಆಗಿದ್ದು, ಸಮಾಜದ ಓರೆಕೋರೆಗಳನ್ನು ತಮ್ಮ ಕಥೆಯಲ್ಲಿ ಓದುಗರ ಮುಂದೆ ತೆರೆತೆರೆಯಾಗಿ ತೆರೆದಿಟ್ಟಿದ್ದಾರೆ.