ಗಝಲ್ ಯಾನದ ಶುಭಾರಂಭ

ಕೃತಿ: ಮಧು ಬಟ್ಟಲಿನ ಗುಟುಕು
ಲೇಖಕರು:
ಡಾ. ದಸ್ತಗೀರಸಾಬ್ ದಿನ್ನಿ
ಮುಖಬೆಲೆ: 100 ರೂ.
ಪ್ರಕಾಶಕರು:
ಡಾ. ದಸ್ತಗೀರಸಾಬ್ ದಿನ್ನಿ
c/o ಎಂಎ ನಬೀ, ಆಸಿಯಾನ ಏ ಮಂಝಿಲ್, 1ನೇ ಕ್ರಾಸ್, ಟಿಜಿಬಿ ಕಾಲನಿ, ಶಾಸ್ತ್ರಿನಗರ, ಬಳ್ಳಾರಿ-583103
ಮೊ:9448220710
ಈ ಸಂಕಲನದ ಮೂಲಕ ಕನ್ನಡದ ಗಝಲ್ ಪ್ರಕಾರಕ್ಕೆ ಹೊಸತೊಂದು ಮಾಲೆಯನ್ನು ಹಾಕಿದ್ದಾರೆ ದಸ್ತಗೀರ್ ದಿನ್ನಿ. ಗಝಲ್ ರಚನೆ ಸರಳ, ಆದರೆ ಸುಲಭವಲ್ಲ. ಅದರ ಮೇಲು-ಮೇಲಿನ ಸರಳತೆಗೆ ಮನಸೋತು ಬಹಳ ಜನ ಗಝಲ್ ರಚಿಸಲು ತೊಡಗುತ್ತಿದ್ದಾರೆ. ಈ ಪ್ರಯತ್ನದ ಮೂಲಕ ನವ್ಯ-ಬಂಡಾಯ ಮಾದರಿಗಳಲ್ಲಿ ನಾಪತ್ತೆಯಾಗಿದ್ದ, ವಿಶ್ವದ ಕವಿಗಳಲ್ಲಿ ಅಗ್ಗಳರಾದ ಹಫೀಝ್, ರೂಮಿ, ಮಿರ್ಝಾ ಗಾಲಿಬ್, ಫೈಝ್-ಅಹ್ಮದ್-ಫೈಝ್ ಮುಂತಾದವರ ಸಿದ್ಧ-ಪ್ರಸಿದ್ಧ ರಚನೆಗಳಲ್ಲಿ ಅವರು ಸಾಧಿಸಿರುವ ಉಕ್ತಿ ಸೌಂದರ್ಯ ಮತ್ತು ಭಾವಪೂರ್ವತೆಗಳ ಪ್ರೌಢಿಮೆ ಕೇವಲ ಮನುಷ್ಯರಿಗೆ ಎಟುಕಲಾಗದು.
ಆದ್ದರಿಂದಲೇ, ಉತ್ತಮ ದರ್ಜೆಯ ಗಝಲ್ ಬರೆಯುವುದು, ಬಹುತೇಕ ಗಝಲ್ ಕವಿಗಳಿಗೆ ಸಾಧ್ಯವಾಗುವುದಿಲ್ಲ. ಈ ದಿಸೆಯಲ್ಲಿ, ದಸ್ತಗೀರ್ ದಿನ್ನಿಯವರ ನಮ್ರ ಪ್ರಯತ್ನ ಸ್ವಾಗತಾರ್ಹ. ಇವರಿಗೆ ಭಾವಗೀತಾತ್ಮಕತೆ ಸಹಜವಾಗಿರುವುದರಿಂದ ಇಲ್ಲಿನ ಗಝಲ್‌ಗಳು ಓದುಗರೊಂದಿಗೆ, ಹೃದಯ ಸಂವಾದಕ್ಕೆ ತೊಡಗುತ್ತವೆ. ಗಝಲ್ ಪ್ರಕಾರದ ರಾಚನಿಕ ಚೌಕಟ್ಟನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಇವರ ಅಭಿವ್ಯಕ್ತಿ ವ್ಯಕ್ತಿಗತ ದರ್ದುಗಳಿಂದ ರೂಪಿತವಾಗದೆ ಸಾಮಾಜಿಕ ತುರ್ತುಗಳಿಂದ ನಿಯಂತ್ರಿತವಾಗಿದೆ. ಇಷ್ಟಾದರೂ ಆಗಾಗ ಸ್ಮರಣೀಯವಾದ ಉಪಮೆಗಳನ್ನು ಸೃಜಿಸುವ ಶಕ್ತಿ ಇವರಿಗಿದೆ. ಈ ಸಂಕಲನ ಅವರ ಗಝಲ್ ಯಾನಕ್ಕೆ ಒಂದು ಶುಭಾರಂಭವಾಗಿದೆ. ಈ ಯಾನ ಮುಂದುವರಿದು ಇವರ ಗಝಲ್‌ಗಳಲ್ಲಿ ಇನ್ನೂ ಹೆಚ್ಚಿನ ತೀವ್ರತೆ ಮತ್ತು ನುಡಿಗಟ್ಟಿನ ಅಚ್ಚುಕಟ್ಟುತನವನ್ನು ಅವರ ಮುಂದಿನ ಸಂಕಲನಗಳಲ್ಲಿ ಕಾಣುವ ಭರವಸೆಯನ್ನು ಈ ಸಂಕಲನ ನಮಗೆ ನೀಡುತ್ತದೆ.