Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ವರ್ಷಸಂಹಿತೆ

ವರ್ಷಸಂಹಿತೆ

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ17 July 2025 1:32 PM IST
share
ವರ್ಷಸಂಹಿತೆ
ಮಳೆಗಾಲ ಬಂದರೂ ಪ್ರತೀ ಬಾರಿಯೂ ಮಳೆ ಆರಂಭವಾದಾಗ ಹರುಷ, ಆನಂತರ ಸಾಕಪ್ಪಾ ಸಾಕು ಎಂಬ ನಿಟ್ಟುಸಿರು ಇದ್ದೇ ಇರುತ್ತದೆ. ಮಳೆ ಒಂದು ಅಗತ್ಯ. ಅದಿಲ್ಲದೆ ಬದುಕಿಲ್ಲ. ಬೇಂದ್ರೆಯವರು ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ; ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆೆ’ ಎಂದು ಬರೆದರು. ತಗಾದೆಯಿಲ್ಲದಿದ್ದರೆ ಅದನ್ನೇ ಸ್ವಲ್ಪ ಬದಲಾಯಿಸಿ ‘ವರ್ಷ ವರ್ಷ ಕಳೆದರೂ ವರ್ಷ ಮರಳಿ ಬರುತಿದೆ; ಹೊಸ ವರ್ಷವ, ಹೊಸ ಹರುಷವ ಹೊಸತು ಹೊಸತು ತರುತಿದೆ!’ ಎಂದು ಹಾಡಬಹುದು. ಬರಲಿ ವರ್ಷ, ತರಲಿ ಹರ್ಷ! ವರ್ಷ: ವರ್ಷೌ: ಪುನರಾಯಾತಃ! ಅಲ್ವೇ?

ವರ್ಷ ಅಂದರೆ ಹನ್ನೆರಡು ತಿಂಗಳ ಕಾಲ ಎಂಬ ಲೆಕ್ಕಾಚಾರ ಹುಟ್ಟುವ ಮೊದಲೇ ವರ್ಷ ಅಂದರೆ ಒಂದು ಸಂವತ್ಸರ ಎಂಬ ಪ್ರತೀತಿಯಿತ್ತು. (ಇದನ್ನು ವರುಷ ಎಂದು ವಿರಳವಾಗಿ, ಹರುಷ ಎಂಬ ಹಾಗೆ ಹೇಳುವವರಿದ್ದಾರೆ. ಎರಡೂ ಸರಿ!) ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಬರುವುದನ್ನು ಅಥವಾ ಘಟಿಸುವುದನ್ನು ವರ್ಷಾವಧಿ ಎಂದು ಹೇಳುತ್ತಾರೆ. ಆದರೆ ವರ್ಷ ಅಂದರೆ ಮಳೆ ಎಂಬ ಅರ್ಥವೂ ಇದೆ. ಮಳೆಗಾಲಕ್ಕೆ ವರ್ಷಕಾಲ ಎಂದು ಕರೆಯುವುದುಂಟು. ಮಳೆ ಬರಬೇಕಾದರೆ ಗ್ರಹಗಳ ಒಂದು ನಿಗದಿತ ಒಕ್ಕೂಟವಾಗಬೇಕೆಂಬ ನಂಬಿಕೆಯಿದೆ. ಈ ಸಂದರ್ಭಕ್ಕೆ ವರ್ಷಯೋಗ ಎನ್ನುತ್ತಾರೆ. ಮಳೆಯಿಂದ ಮಳೆಗೆ ಎಂಬ ಲೆಕ್ಕವೇ ವರ್ಷದ ಅವಧಿಯನ್ನು ನಿರ್ಧರಿಸಿತೆಂದು ಕಾಣುತ್ತದೆ. ವರ್ಷಕ್ಕೊಮ್ಮೆ ಕರು ಹಾಕುವ ಆಕಳಿಗೆ ವರ್ಷಗಸ್ತಿ ಎಂದು ಹೇಳುತ್ತಾರೆಂದು ಕೇಳಿದ್ದೇನೆ.

ವರ್ಷದ ಸುತ್ತ ಬಹಳಷ್ಟಿದೆ. ಹೇಗೂ ಇರಲಿ, ಇದೀಗ ಮಳೆಗಾಲ; ವರ್ಷಕಾಲ; ಹರ್ಷಕಾಲ. ಮಳೆ ವರ್ಷಕ್ಕೊಮ್ಮೆ ಬರುವ ಕಾಲವಿತ್ತೆಂದು ಕಾಣಿಸುತ್ತದೆ. ಅದಕ್ಕೇ ಅಲ್ಲವೇ ಮಳೆಗಾಲಕ್ಕೆ ವರ್ಷಕಾಲ ಎಂದು ಹೆಸರು! ಆದರೆ ಈಗ ಮಳೆ ಬರಬಹುದಾದ ಸ್ಥಳಗಳಲ್ಲಿ ವರ್ಷವಿಡೀ ಮಳೆ ಬರುತ್ತಿರುತ್ತದೆ. ಸತತ ಇಲ್ಲವೇ ಬಿಟ್ಟು ಬಿಟ್ಟು. ಇದನ್ನು ಬರೆಯುವಾಗ ನನ್ನೊಳಗಿರಬಹುದಾದ ವ್ಯಾಕರಣ, ಕಾಗುಣಿತ ಇವೆಲ್ಲ ಕೆಲಸಮಾಡಿದವು. ಬಿಟ್ಟುಬಿಟ್ಟು ಎಂಬುದು ಒಂದೇ ಪದವೇ ಅಥವಾ ಎರಡು ಪದಗಳ ಜೋಡಣೆಯೇ ಅಥವಾ ಯಮಳ ಇಲ್ಲವೇ ಅವಳಿ ಪದಸಮುಚ್ಚಯವೇ? ಕೊನೆಗೆ ಮಳೆಯ ಮಟ್ಟಿಗಂತೂ ಇದು ಬಿಟ್ಟು ಬಿಟ್ಟು ಎಂಬ ಪ್ರತ್ಯೇಕ ಪದಗಳೇ ಎಂದು ನಿರ್ಧರಿಸಿದೆ. ಏಕೆಂದರೆ ಮಳೆ ನಿಂತು ಕೊಂಚ ಬಿಡುವು ಕೊಟ್ಟು ಮತ್ತೆ ಆರಂಭವಾಗುವುದಕ್ಕಲ್ಲವೇ ಈ ಹೆಸರು? ಆದ್ದರಿಂದ ಈ ಎರಡು ಪದಗಳ ನಡುವೆ ಒಂದು ಉಸಿರೆಳೆದುಕೊಳ್ಳುವಷ್ಟು, ಉಸಿರಾಡುವಷ್ಟು ಅಂತರವಿದ್ದರೆ ಈ ಪದಗಳ (ಸಾ)ದೃಶ್ಯರೂಪ ಸರಿಯಾಗುತ್ತದೆಂದು ನನಗನ್ನಿಸಿದೆ. ವಿವರಗಳಿಗೆ ಇಗೋ ಕನ್ನಡ ಅಥವಾ ಕಿಟ್ಟೆಲ್‌ರನ್ನು ನೋಡಬೇಕು.

ಬಿಸಿಲಿಗಿಂತ ಮಳೆ ಮನುಷ್ಯನಿಗೆ, ಭೂಮಿಗೆ ನಿಕಟವಾದದ್ದು. ಬಿಸಿಲಿಗೆ ಕಾರಣನಾದ ಸೂರ್ಯ ಭೂಮಿಗಿಂತ 93 ಮಿಲಿಯ ಕಿಲೊಮೀಟರ್ ದೂರವಿದ್ದರೆ ಈ ಮಳೆಯನ್ನು ಸುರಿಸುವ ಮೇಘಗಳು ಕೆಲವೇ ಕಿಲೊಮೀಟರ್ ದೂರ (ಅಥವಾ ಹತ್ತಿರ)ವಿವೆ. ಆದ್ದರಿಂದ ಇವುಗಳ ಪ್ರಭಾವ ಹೆಚ್ಚು ಎನ್ನಬಹುದು. ಆದರೆ ಸಮುದ್ರದ ನೀರನ್ನು ಸೂರ್ಯ ಆವಿಯಾಗಿಸಿದಷ್ಟೂ ಮಳೆ ಹೆಚ್ಚಾಗುತ್ತದೆ. ಆದ್ದರಿಂದ ಮಳೆಗೂ ಸೂರ್ಯನೇ ಕಾರಣವೆಂದು ಹೇಳಬಹುದು. ಕ್ರಿಕೆಟ್‌ನಲ್ಲಿ ಸಿಕ್ಸರ್ ಹೊಡೆದಂತೆ! ಈ ಆವಿ ಭೂಮಿಯ ಗುರುತ್ವಾಕರ್ಷಣ ಪರಿಧಿಯಿಂದ ಹೊರಹೋದರೆ ಇಷ್ಟು ಪರಿತಾಪ ಪಡುವ ಅಗತ್ಯವಿರಲಿಕ್ಕಿಲ್ಲವೆಂದು ಅನ್ನಿಸುತ್ತದೆ. ಆದರೆ ಯಾಕೋ ಗ್ರೌಂಡ್ ಶಾಟ್‌ನ ಬೌಂಡರಿಗಳೇ ಕಾಣಿಸುತ್ತಿವೆ. ಇದರಿಂದಾಗಿ ನೆಲದ ತುಂಬ ಮಳೆ.

ಮಳೆಗಾಲವೆಂದರೆ ಸಾಕು ಕೆಲವರಿಗೆ ಭಯ, ಕೆಲವರಿಗೆ ಸಂತಸ. ಸರಿಯಾದ ಆಶ್ರಯ, ವಸತಿ, ಆಹಾರ ಸಂಗ್ರಹವಿದ್ದರೆ ಮಳೆಗಾಲವೇ ಇಷ್ಟವೆನ್ನುವ ಕಾಲವಿತ್ತು. ಇರುವೆಗಳೂ ಮಳೆಗಾಲಕ್ಕೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತವಂತೆ. ಹಳ್ಳಿಗಳಲ್ಲಿ ಮಳೆಗಾಲ ಹತ್ತಿರವಾಗುತ್ತಿದ್ದಂತೆ ಮನೆಮನೆಗಳಲ್ಲೂ ಕೊಡೆಯನ್ನು ಉಗ್ರಾಣದಿಂದ ಹೊರಗಿಡುವುದು, ಮಳೆಗಾಲದ ಅಗತ್ಯಕ್ಕೆ ಬೇಕಾದ ಅಕ್ಕಿ, ಬೆಲ್ಲ, ದವಸ ಧಾನ್ಯಗಳು ಮುಂತಾದವನ್ನು ಸಂಗ್ರಹಿಸಿ ಬೆಚ್ಚಗಿಡಲು ಯೋಜಿಸುತ್ತಿದ್ದರು. ಜಾನುವಾರುಗಳಿಗೆ ಬೇಕಾದ ಒಣಹುಲ್ಲನ್ನು ಖರೀದಿಸಿ ಹಟ್ಟಿಯ ಅಟ್ಟದಲ್ಲಿ ಅಟ್ಟಿಯಿಡುತ್ತಿದ್ದರು. ಬೇಸಗೆಯಲ್ಲಿ ತಯಾರಿಸಿದ ಹಪ್ಪಳ, ಸಂಡಿಗೆ, ಬಾಳಕ ಮೆಣಸು ಇವಕ್ಕೆಲ್ಲ ಬಿಡುಗಡೆ. ಉಪ್ಪಿನಕಾಯಿಗೂ ಹೊರಬರುವ ತವಕ. ಪೇಟೆ ಪಟ್ಟಣಗಳಲ್ಲಿ ಈ ಅವಸರವಿರುತ್ತಿರಲಿಲ್ಲ. ಅಲ್ಲಿ ಆಪತ್ತು ಎದುರಾದಾಗಲೇ ಕ್ರಿಯೆ. ಪ್ಯಾಕೆಟ್‌ನಿಂದ ತೆರೆಯುವ ತಿಂಡಿಗೆ ಯಾವ ಕಾಲವಾದರೇನು?

ಮೊದಲ ಮಳೆ ಬಂದಾಗ ಅದನ್ನು ನಿರೀಕ್ಷಿಸುವುದೇ ಒಂದು ಸೊಗಸು. ಮಕ್ಕಳಂತೂ ಆಗಸದಿಂದ ಒಂದೊಂದು ಹನಿ ಬೀಳುವಾಗಲೇ ಹೊರಬಂದು ಕುಣಿಯುವುದಕ್ಕೆ ಆರಂಭಿಸುತ್ತಿದ್ದರು. ಹಿರಿಯರು ಬೈದರಷ್ಟೇ ಒಳಬರುತ್ತಿದ್ದರು. ಹಿಂದಿನ ತಲೆಮಾರು ಶಾಲೆಗಳಿಗೆ ನಡೆದೇ ಬಹುಪಾಲು ಬರಿಗಾಲಿನಲ್ಲೇ ಹೋಗಬೇಕಾದ ಪರಿಸ್ಥಿತಿಯಿತ್ತು. ಈಗೆಲ್ಲ ಬದಲಾಗಿದೆ. ಮನೆಯಿಂದಲೇ ಮಕ್ಕಳನ್ನು ಎತ್ತಿಕೊಂಡು ಶಾಲೆಗೆ ಕರೆದೊಯ್ಯುತ್ತಾರೆ. ಮಳೆಗೆ ಸೂಕ್ತ ದಿರಿಸುಗಳು, ಉಡುಪುತೊಡುಪುಗಳು ಇರುತ್ತವೆ.

ಹಿಂದೆ ಮನುಷ್ಯನಿಗೂ ಪ್ರಕೃತಿಗೂ ಅವಿನಾ ಸಂಬಂಧ. ಮಳೆ ಬಂದಾಗ ರೈತರಿಗೆ ವ್ಯವಸಾಯದ ಆರಂಭ. ನೇಗಿಲು ಮತ್ತಿತರ ಪರಿಕರಗಳನ್ನು ಸಜ್ಜುಗೊಳಿಸುವ ತರಾತುರಿ. ಈಗ ಬಿಡಿ, ಬಿಡಿ ಮತ್ತು ಇಡಿ ಯಂತ್ರಗಳು ಬಂದಿವೆ. ಎಲ್ಲವೂ ಸುಲಭ.

ಶಿಕ್ಷಣದಿಂದ ವ್ಯವಸಾಯದ ವರೆಗೆ ಹಿಂದೆ ಇದ್ದ ಕಷ್ಟಕರ, ಶ್ರಮಪೂರ್ಣ ಜೀವನಕ್ಕೂ ಇಂದಿನ ಸುಲಭ ಜೀವನಕ್ಕೂ ಅಜಗಜ ಅಂತರ. ಸುಲಭದಲ್ಲಿ ಗಳಿಸಿದ್ದು ತಾತ್ಕಾಲಿಕ, ಕಷ್ಟಪಟ್ಟು ಗಳಿಸಿದ್ದು ಶಾಶ್ವತ ಎಂದು ಲಾಗಾಯ್ತಿನಿಂದ ಹೇಳುತ್ತಿದ್ದದ್ದು ಸತ್ಯವೋ ಸುಳ್ಳೋ ಹೇಳಲಾಗದು. ಅದು ಸಂದರ್ಭ, ಕ್ಷೇತ್ರಗಳನ್ನವಲಂಬಿಸಿದೆ.

ಮಳೆಗಾಲ ಬಂದರೆ ಸಂವೇದನಾಶೀಲರಿಗಂತೂ ಸುಗ್ಗಿ. ಮಳೆ ಅಥವಾ ಮಳೆಯ ನಿರೀಕ್ಷೆೆ ಕೊಡುವ ಸ್ಫೂರ್ತಿ ಅನಾದಿ ಕಾಲದ್ದು. ಕಾಳಿದಾಸನ ಮೇಘಸಂದೇಶವು ಆಷಾಢದ ಒಂದು ಹೊತ್ತಿನಲ್ಲಿ ಮುಗಿಲನ್ನು ನೋಡಿ ಅದು ತನ್ನ ಪ್ರಿಯತಮೆಯನ್ನು ಕಾಣಬಹುದೆಂಬ ವಿಶ್ವಾಸದಲ್ಲಿ ಶಾಪಗ್ರಸ್ತ ಯಕ್ಷನೊಬ್ಬ ಪರಿಪರಿಯಾಗಿ ತನ್ನ ವೇದನೆಯನ್ನು ನಿವೇದನೆ ಮಾಡಿಕೊಳ್ಳುವ ಈ ಕಾವ್ಯಕ್ಕೆ ಮನಸೋಲದವರು ಯಾರು?

ಪುರಾಣ ಪರಂಪರೆಯಲ್ಲಿ ಮಳೆಯ ಪಾತ್ರ ಹಿರಿದಾದದ್ದು. ಮಳೆಯೆಂದರೆ ವರುಣ. ಆತ ಅಷ್ಟದಿಕ್ಪಾಲಕರಲ್ಲೊಬ್ಬನಾದರೂ ಪುರಾಣಕಾಲದಿಂದಲೂ ವರುಣನ ಕೃಪೆ, ಅವಕೃಪೆಯ ಬಗ್ಗೆ ಧಾರಾಳವಾಗಿ ಉಲ್ಲೇಖಗಳಿವೆ. ವೇದಕಾಲದ ವರೆಗೂ ಮಳೆ ಪ್ರಕೃತಿಯ ರಮ್ಯಾದ್ಭುತಗಳಲ್ಲೊಂದು. ಈ ನೀರು ಎಲ್ಲಿಂದ ಬರಬೇಕು? ಮಳೆಯಿಂದ. ಇಂದ್ರನಿಗೆ ದೈವಪಟ್ಟವಿದ್ದರೆ ನೀರನ್ನು ಅರ್ಥಾತ್ ಮಳೆಯನ್ನು ಭೂಮಿ, ಆಕಾಶ, ಅಗ್ನಿ, ವಾಯುವಿನೊಂದಿಗೆ ಪಂಚಭೂತಗಳಲ್ಲೊಂದೆಂದು ಪರಿಗಣಿಸಿ ಆರಾಧಿಸುತ್ತಿದ್ದರು. ವೇದಕಾಲದ ಬಳಿಕ ಉಳಿದ ದೇವರುಗಳು ಸೃಷ್ಟಿಯಾದರು. ಆಗಲೂ ಮಳೆಯ ಬಹು ದಟ್ಟ ಪ್ರತಿಮೆ ಬಳಕೆಯಾಯಿತು. ‘‘ಆಕಾಶಂ ಪತಿತಂ ತೋಯಂ ಯಥಾ ಗಚ್ಛತಿ ಸಾಗರಃ| ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿಃ|’’ ಅರ್ಥಾತ್ ಆಕಾಶದಿಂದ ಸುರಿದ ನೀರು ಹೇಗೆ ಸಾಗರವನ್ನು ಸೇರುತ್ತದೆಯೋ ಹಾಗೆಯೇ ಸರ್ವ ದೇವರುಗಳಿಗೆ ಸಲ್ಲಿಸಿದ ನಮಸ್ಕಾರವು ಕೇಶವನಿಗೆ ಸಲ್ಲುತ್ತದೆ!

ಮಳೆಯಿಲ್ಲದೆ ನಾಡು ತತ್ತರಿಸುತ್ತಿರುವಾಗ ಋಷ್ಯಶೃಂಗನೆಂಬ ಮುನಿ ಬಂದು ಮಳೆಯನ್ನು ಕರುಣಿಸಿದನೆಂಬ ಕಥೆಯಿದೆ. ಈಗ ಬರುವ ಮಳೆಯನ್ನು ಗಮನಿಸಿದರೆ ಆತ ಇಲ್ಲೇ ಠಿಕಾಣಿ ಹೂಡಿದ್ದಾನೆಂದು ಅನ್ನಿಸುತ್ತದೆ. ವರುಣ ದೇವತೆ ಪಶ್ಚಿಮ ದಿಕ್ಕಿನ ಅಧಿಪತಿಯಂತೆ. ಆತ ಪಾಶ್ಚಾತ್ಯರಿಗೆ ಎಷ್ಟು ಶಿಕ್ಷೆಕೊಟ್ಟನೋ ಅರ್ಥವಾಗುವುದಿಲ್ಲ; ಆದರೆ ಭಾರತದ ಪಶ್ಚಿಮ ಕರಾವಳಿಯು ಆತನ ಕರುಣೆಯಿಂದ ಬಳಲುತ್ತಿದೆ.

ಭಗೀರಥ ತನ್ನ ಪೂರ್ವಜರಿಗೆ ಮುಕ್ತಿ ಸಿಗುವುದಕ್ಕಾಗಿ ಗಂಗೆಯನ್ನು ಭೂಮಿಗಿಳಿಸಿದನೆಂಬ ಕಥೆಯಿದೆ. ಇದರ ಪೂರ್ವಾಪರವೇನೇ ಇರಲಿ, ನೀರು ಸಹಜವಾಗಿಯೇ ಎತ್ತರದಿಂದ ತಗ್ಗಿಗೆ ಹರಿಯುವ ಕಾರಣದಿಂದ ಇದು ಗಂಗೆಗೂ ಸಹಜ; ನಲ್ಲಿ ನೀರಿಗೂ ಸಹಜ. ಗಂಗೆ ಈಗ ಆಕಾಶದಿಂದ ಧಾರಾ ಸಂಭೂತವಲ್ಲ; ಅದು ಉತ್ತರ ಭಾರತದ ಒಂದು ಕ್ಷೇತ್ರದಿಂದ ಹರಿದು ಬರುವುದಂತೂ ಸತ್ಯ. ಈ ಕಥೆಯನ್ನು ನಂಬಿ, ಬಿಡಿ, ಆದರೆ ಇದರಿಂದಾಗಿ ಗಂಗೆ ಇಂದು ಅನೇಕರ ಧಾರ್ಮಿಕ ನಂಬಿಕೆಯನ್ನು ಗಟ್ಟಿಗೊಳಿಸಿತು. ಕೆಲವೊಮ್ಮೆ ಇಂತಹ ನಂಬಿಕೆಗಳು ಉನ್ಮಾದವನ್ನೂ ಸೃಷ್ಟಿಸುತ್ತವೆಯೆನ್ನುವುದು ಈಗ ಗೊತ್ತಾಗುತ್ತದೆ. ಸೃಷ್ಟಿಯಾದ ಬೇಂದ್ರೆಯವರ ‘ಗಂಗಾವತರಣ’ವಂತೂ ಗಂಗೆಯನ್ನು ಕನ್ನಡದಲ್ಲಿ ಶಾಶ್ವತಗೊಳಿಸಿತು. ಕನ್ನಡದ ಕಾವೇರಿಯೂ ಅಷ್ಟೇ. ಹೆಣ್ಣು ಹೊಳೆಯಾಗಿ ಹರಿದಳೆಂಬ ಐತಿಹ್ಯವಿದೆ. ಕನ್ನಡ ನಾಡಿನ ಜೀವನದಿಯೆಂಬ ಸ್ತುತಿಗೆ ಪಾತ್ರವಾಗಿದೆ. ಈ ನಂಬಿಕೆ ಈಗ ಭಕ್ತಿಯಾಗಿ, ಆರಾಧನೆಯಾಗಿ ಮುಂದುವರಿದಿದೆ. ಗಂಗೆ ಬತ್ತುವುದಿಲ್ಲವೆಂಬ ನಂಬಿಕೆಯಿದೆ. ಅದರ ಪಾತ್ರ ಅಷ್ಟು ದೊಡ್ಡದು. ಕಾವೇರಿಗೆ ಹಾಗಲ್ಲ; ಕೆಲವು ಸಮಯದಿಂದ ಇದಕ್ಕೆ ಅಪವಾದ ದೊರೆತಿದೆ. ಅನೇಕ ಕಡೆಗಳಲ್ಲಿ ನೆಲ ಕಾಣಿಸುತ್ತಿದೆ. ಆದರೆ ನೆನಪಿಡಬೇಕಾದದ್ದೆಂದರೆ ಭೂಮಿಯೊಳಗಿನ ಒರತೆ ಸಾಲದು. ಇವೆಲ್ಲ ಮಳೆಯನ್ನೇ ಅವಲಂಬಿಸಿವೆ. ಮಳೆಯಿದ್ದಲ್ಲಿ ನೆರೆಯೂ ಇದೆ.

ಕಾವ್ಯ ಪರಂಪರೆಯಲ್ಲೂ ಮಳೆಯ ಪಾತ್ರ ದೊಡ್ಡದು. ಮುದ್ದಣನ ಶ್ರೀ ರಾಮಾಶ್ವಮೇಧ ಕಾವ್ಯ ಆರಂಭವಾಗುವುದೇ ಮಳೆಗಾಲದಲ್ಲಿ. ಮಳೆಗಾಲವೆಂದರೆ ಕಥೆ ಹೇಳಲು ಇರುವ ಸಕಾಲವೆಂಬ ನಂಬಿಕೆಯೂ ಇದೆ. ಇನ್ನೇನು ಕೆಲಸ? ಅರಮನೆಯಲ್ಲಿ ಊಳಿಗಕ್ಕಿದ್ದ ಮಳೆಗಾಲದೊಂದು ದಿನ ಅರಮನೆಯಿಂದ ಮರಳಿದ ಮುದ್ದಣನನ್ನು ಆತನ ಪತ್ನಿ ಮನೋರಮೆ ಕಥೆ ಹೇಳಬೇಕೆಂದು ಒತ್ತಾಯಿಸುತ್ತಾಳೆ; (ಪೀಡಿಸಿಲ್ಲ!). ಆತನ ಅದ್ಭುತ ರಮ್ಯ ಕಥಾನಕಕ್ಕೆ ಮಳೆ ಮುನ್ನುಡಿಯನ್ನು ಬರೆಯುತ್ತದೆ. ಇಂತಹ ಸಂದರ್ಭಗಳನ್ನು ಕನ್ನಡದ ಅನೇಕ ಕವಿಗಳು ಸೃಷ್ಟಿಸಿದ್ದಾರೆ.

ರಾಮಾಯಣ ಎಂದಾಗ ನೆನಪಾಗಬೇಕು-ಸೀತಾನ್ವೇಷಣೆಗೆ ಹೊರಟ ಶ್ರೀರಾಮ. ಇನ್ನೇನು 14 ವಸಂತಗಳು ಕಳೆದುಹೋಗುತ್ತವೆಯೆಂಬ ಸಂದರ್ಭ ದಲ್ಲಿ ಸೀತಾಪಹರಣ ನಡೆದೇಹೋಗುತ್ತದೆ. ಅದಾಗದಿದ್ದರೆ ರಾಮಾಯಣಕ್ಕೆ ಯಾವ ಸ್ವಾರಸ್ಯವೂ ಇರುತ್ತಿರಲಿಲ್ಲ. ಕಾಡಿಗೆ ಹೋದರು, ಬಂದರು, ಎಂದಷ್ಟೇ ರಾಮಾಯಣವಾಗುತ್ತಿತ್ತು. ಕಿಷ್ಕಿಂಧೆಯಲ್ಲಿ ರಾಮನ ಬೀಡು; ವಾಲಿವಧೆ; ಸುಗ್ರೀವ ಪಟ್ಟಾಭಿಷೇಕ. ಆದರೆ ಅಷ್ಟರಲ್ಲಿ ಮಳೆಗಾಲ ಬಂದದ್ದರಿಂದ ಸೀತಾನ್ವೇಷಣೆಗೆ ಬ್ರೇಕ್ ಬಿತ್ತು. ಅದು ಆರಂಭವಾದದ್ದು ಮಳೆಗಾಲ ಮುಗಿದ ಮೇಲೆ. ಪತ್ನಿ ತವರು ಮನೆಗೆ ಹೋದರೂ ಕರೆತರಲು ಹೊತ್ತು ವೇಳೆ ನೋಡದ ಕಾಲ ಅದಾಗಿರಲಿಲ್ಲ. ಏಕಪತ್ನಿವ್ರತಸ್ಥನಾದ ರಾಮನನ್ನೂ ಕಳೆದು ಹೋದ ಪತ್ನಿಯನ್ನು ಕರೆತರಲು ಹೊರಡುವ ಶ್ರೀರಾಮನನ್ನು ತಡೆದದ್ದು ಈ ಮಳೆಗಾಲ. ಮಳೆಗಾಲವೆಂದರೆ ನೆನಪಿನಲ್ಲೇ ಕಳೆದುಹೋಗಬೇಕಾದದ್ದು ಶ್ರೀರಾಮನ ದುರ್ದೈವ. ಮೇಘಸಂದೇಶ ಆತನಿಗೆ ನೆನಪಾಗಿರಲಿಕ್ಕಿಲ್ಲ. ಏನಿದ್ದರೂ ಕಾಳಿದಾಸ ಕಾಳಿದಾಸನೇ, ವಾಲ್ಮೀಕಿ ವಾಲ್ಮೀಕಿಯೇ!

ಮಳೆಯ ಅದರಲ್ಲೂ ಮೊದಲ ಮಳೆಯ ಬಗ್ಗೆ ಬಂದ ಕವನಗಳ ರಾಶಿ ಬಹಳ ದೊಡ್ಡದಿದೆ. ನವ್ಯರು ಮಳೆಯನ್ನು ಕಂಡಾಗೆಲ್ಲ ಮನ್ಮಥರಾಗುತ್ತಾರೆ. ತಮ್ಮ ರತಿಯನ್ನು ನೆನಪಿಸುತ್ತಾರೆ. ಅದರೊಂದಿಗೆ ನೂರಾರು ಪ್ರತಿಮೆಗಳು, ರೂಪಕಗಳು. ಗಗನದೊಡಲು ಸಿಡಿಲು ಗುಡುಗುಗಳ ಮೂಲಕ ಸುರಿಸುವ ಮಳೆಯ ಕಾಲ ಬಂತು ಭಲಾ ಎಂದು ರಾಗ ಎಳೆಯುತ್ತದಂತೆ ನವಿಲು. ಮಳೆರಾಯ ಹೊನ್ನ ಸುರಿಸು ಎಂದು ಜನಪದೀಯರು ಪದ್ಯಕಟ್ಟಿದ್ದಾರೆ. ಮಳೆರಾಯ ಹೊನ್ನ ಸುರಿಸಿದರೆ ಭೂಮಿತಾಯಿ ಬಂಗಾರವನ್ನು ಬೆಳೆಸುತ್ತಾಳಂತೆ. ಮಳೆ-ಇಳೆ-ಬೆಳೆ ಎಂಬ ಪದಜೋಡಣೆಯು ಮನಂಬುಗುವಂತಹದ್ದು. ಆಧುನಿಕ ಕನ್ನಡದಲ್ಲಿ ಪಂಜೆಯವರಿಂದ ಇಂದಿನ ವರೆಗೆ ಅದೆಷ್ಟು ಕಾವ್ಯವರ್ಷದ ಧಾರೆಗಳು! ದೊಡ್ಡ ಸಣ್ಣ ಹನಿಗಳು!

ಮಳೆಯು ಅತಿವೃಷ್ಟಿಯನ್ನು ತಂದೊಡ್ಡಿದರೆ ಇದಕ್ಕಿಂತ ಅನಾವೃಷ್ಟಿಯೇ ಹಿತವೆಂದು ಅನ್ನಿಸಬಹುದು. ಯಾವುದೂ ಅತಿಯಾದರೆ ಕೇಡು. ಅತಿ ಸರ್ವತ್ರ ವರ್ಜಯೇತ್! ಆದರೆ ಈ ಮಳೆಯನ್ನು ಬಿಡುವುದಾದರೂ ಹೇಗೆ? ಇದು ಜನ್ಮಜನ್ಮಾಂತರದ ನೆಂಟ. ಬರಲೇ ಬೇಕು. ಹೋಗು ಎಂದಾಗ ಹೋಗುವ ಅಸಂಘಟಿತ ನೌಕರನಲ್ಲ. ಹೀಗಾಗಿಯೇ ಪ್ರಳಯಕಾಲದ ಮಳೆಯ ಸಂದರ್ಭದಲ್ಲಿ ನೋಹನ ನೌಕೆ ಪ್ರಚಲಿತವಾದದ್ದು. ಭೂಮಿ ಉಳಿದೀತು. ಭೂಮಿಯ ಜೀವರಾಶಿ? ಅದನ್ನು ಉಳಿಸುವುದಕ್ಕಾಗಿ ಒಂದೊಂದು ತಳಿಯ ಒಂದೋ-ಎರಡೋ ಮಾದರಿಗಳನ್ನು ನೌಕೆಯಲ್ಲಿಟ್ಟು ಕಾಪಿಟ್ಟದ್ದು ಅಂದು ಎಷ್ಟು ಮಹತ್ವದ್ದೋ ಹಾಗೆ ಕಾಪಿಡುವುದು ಇಂದೂ ಅಷ್ಟೇ ಅಗತ್ಯದ್ದು. ಆದರೆ ವ್ಯತ್ಯಾಸವಿಷ್ಟೇ: ಮನುಷ್ಯನ ನೀತಿ-ಅನೀತಿಗಳನ್ನು ಯೋಚಿಸಿದರೆ ಅಂತಹ ನೌಕೆಯಲ್ಲಿ ಮನುಷ್ಯನನ್ನು ಹೊರತುಪಡಿಸಿ ಉಳಿದ ಜೀವಿಗಳನ್ನಷ್ಟೇ ಉಳಿಸಿಕೊಂಡರೆ ಸಾಕೇನೋ?

ಮಳೆಗಾಲ ಬಂದರೂ ಪ್ರತೀ ಬಾರಿಯೂ ಮಳೆ ಆರಂಭವಾದಾಗ ಹರುಷ, ಆನಂತರ ಸಾಕಪ್ಪಾ ಸಾಕು ಎಂಬ ನಿಟ್ಟುಸಿರು ಇದ್ದೇ ಇರುತ್ತದೆ. ಮಳೆ ಒಂದು ಅಗತ್ಯ. ಅದಿಲ್ಲದೆ ಬದುಕಿಲ್ಲ. ಬೇಂದ್ರೆಯವರು ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ; ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆೆ’ ಎಂದು ಬರೆದರು. ತಗಾದೆಯಿಲ್ಲದಿದ್ದರೆ ಅದನ್ನೇ ಸ್ವಲ್ಪ ಬದಲಾಯಿಸಿ ‘ವರ್ಷ ವರ್ಷ ಕಳೆದರೂ ವರ್ಷ ಮರಳಿ ಬರುತಿದೆ; ಹೊಸ ವರ್ಷವ, ಹೊಸ ಹರುಷವ ಹೊಸತು ಹೊಸತು ತರುತಿದೆ!’ ಎಂದು ಹಾಡಬಹುದು. ಬರಲಿ ವರ್ಷ, ತರಲಿ ಹರ್ಷ! ವರ್ಷ: ವರ್ಷೌ: ಪುನರಾಯಾತಃ! ಅಲ್ವೇ?

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X