ಉಪರಾಷ್ಟ್ರಪತಿ ಪ್ರಸಂಗ

ಬಿಜೆಪಿ ವಿರೋಧಿಸುವ ನೆಹರೂ, ಇಂದಿರಾ, ರಾಜೀವ್ ಮುಂತಾದ ದೇಶದ ಪ್ರಮುಖ ರಾಜಕಾರಣಿಗಳನ್ನು ‘ಮರೆಯಬೇಕೆಂದರೂ ಮರೆಯಲಾಗದಂತೆ’ ಬಿಜೆಪಿಯು ನಿತ್ಯ ಹಳಿದು ನೆನಪಿಸುತ್ತದೆ. ಅದು ನಿಜಕ್ಕೂ ಭಾರತೀಯ ಸಂಸ್ಕೃತಿ. ಆದರೆ ಇದೇ ಸಂದರ್ಭದಲ್ಲಿ ತಮ್ಮೊಂದಿಗೇ ಇದ್ದ ಅಡ್ವಾಣಿ, ಜೋಶಿ, ಜಸ್ವಂತ್, ನಾಯ್ಡು, ಮುಂತಾದವರೊಂದಿಗೆ ಧನ್ಕರ್‌ಕೂಡಾ ಗೆದ್ದಲು ಹಿಡಿದು ಹೋಗುವುದು ಒಳ್ಳೆಯ ಲಕ್ಷಣವೇನಲ್ಲ.
ಪ್ರಜಾಪ್ರಭುತ್ವ ಭಾರತದಲ್ಲಿ ಒಬ್ಬ ಗಾಯಗೊಂಡರೆ, ಸತ್ತರೆ ಆತ ದೊಡ್ಡವನಿರಲಿ, ಸಣ್ಣವನಿರಲಿ ಅಂತಸ್ತಿಗೆ ತಕ್ಕಂತೆ ಊರು-ಪರವೂರುಗಳಲ್ಲಿ ಸುದ್ದಿಯಾಗುತ್ತದೆ. ಸಾವಿರಾರು ಮಂದಿ ಸಾವು-ನೋವು ಅನುಭವಿಸಿದಾಗ ಅದು ರಾಷ್ಟ್ರೀಯ ಮತ್ತು ಅನೇಕ ಬಾರಿ ಅಂತರ್‌ರಾಷ್ಟ್ರೀಯ ಸುದ್ದಿಯಾಗುತ್ತದೆ. ಆದರೆ ಈ ಸಾವಿರಾರು ಮಂದಿಯಲ್ಲಿ ಪ್ರಮುಖರು ಯಾರಾದರೂ ಇದ್ದರೆ ಅವರ ಸುದ್ದಿ ಪ್ರಕಟವಾಗುತ್ತದೆ. ಉಳಿದವರ ಬಗ್ಗೆ ವಿವರ ಮಾಹಿತಿ ಸಿಕ್ಕುವುದಿಲ್ಲ. ಈಚೆಗೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಕೆಲವು ಪ್ರತಿಷ್ಠಿತರ ಕುರಿತು ಮಾಹಿತಿ ಪ್ರಕಟವಾಯಿತೇ ವಿನಾ ಉಳಿದಂತೆ ಆ ಸೂತಕ ಈಗಾಗಲೇ ಕಳೆದುಹೋಗಿ, ಅಂತಹ ಘಟನೆ ನಡೆದೇ ಇಲ್ಲವೇನೋ ಎಂಬಂತೆ ಕಾಲ-ಜನ ಮುಂದುವರಿದಿದೆ. ಪುರಿಯ ಜಗನ್ನಾಥ ರಥಯಾತ್ರೆಯಲ್ಲಿ ತುಳಿತಕ್ಕೆ ಸಿಕ್ಕಿ ಸಾವು ನೋವು ಸಂಭವಿಸಿದರೆ ಅದು ವಾರ್ಷಿಕ ವಿಶೇಷವೆಂಬಂತೆ ಸಮಾಜ ಗೌರವಿಸುತ್ತದೆಯೇ ಹೊರತು ಅನುಕಂಪದ ಪಾತ್ರ ತೀರಾ ಚಿಕ್ಕದು. ಲೋಕವು ಭಿನ್ನ ರುಚಿಯಾದಾಗಲೂ ರುಚಿ ಕೆಡಬಾರದಲ್ಲ!
ಈ ವಿವರಗಳು ಇಲ್ಲಿ ಅಸಂಬದ್ಧವೆನಿಸಬಹುದು. ಆದರೆ ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ ಉಪರಾಷ್ಟ್ರಪತಿಯೊಬ್ಬರು ಕಳೆದುಹೋದಾಗ ಅದು ಏನೂ ಅಲ್ಲವೇನೋ ಎಂಬಂತೆ ದೇಶ, ಅದರ ಆಡಳಿತವು ನಡೆದುಕೊಂಡಾಗ ಇಂತಹ ಸಂಗತಿಗಳು ಯಾರನ್ನೂ ಕಾಡದೇ ಇದ್ದಾಗ ಪರಂಪರೆ ಎತ್ತ ಸಾಗುತ್ತದೆಯೆಂಬ ಕುರಿತು ಹೇಸಿಗೆಯುಂಟಾಗಬೇಕು. ಹಾಗೇನೂ ಅಗಿಲ್ಲ. ಈಚೆಗೆ ಜಗದೀಪ್ ಧನ್ಕರ್‌ರಾಜೀನಾಮೆ ಕೊಟ್ಟಾಗ ಅದೊಂದು ಸುದ್ದಿಯಾಯಿತೇ ಹೊರತು ಸದ್ದನ್ನೇನೂ ಮಾಡಲಿಲ್ಲ. ಯಾರೋ ಒಬ್ಬ ಗುಮಾಸ್ತನೋ, ಗ್ರಾಮಪಂಚಾಯತ್ ಸದಸ್ಯನೋ ರಾಜೀನಾಮೆ ಕೊಟ್ಟದ್ದಕ್ಕಿಂತಲೂ ನಿಕೃಷ್ಟವಾಗಿ ಈ ಪ್ರಸಂಗವು ಕಳೆದುಹೋಯಿತು. ಕಳೆದೇಹೋಯಿತು.
ಇದಕ್ಕೆ ಕೊಂಚ ವಿವರಗಳು, ಹಿನ್ನೆಲೆ ಗೊತ್ತಿದ್ದರೆ ಅರ್ಥವಾದೀತು. ದೇಶವೊಂದರ ಉಪರಾಷ್ಟ್ರಪತಿಯಾಗುವುದು ಸುಲಭವಲ್ಲ. ಇವತ್ತು ಯಾವುದೂ ಸುಲಭವಲ್ಲ-ಆ ಮಾತು ಬೇರೆ. ಸಂವಿಧಾನಬದ್ಧ ಅಥವಾ ಸಾಂವಿಧಾನಿಕ ಹುದ್ದೆಗೇರಬೇಕಾದರೆ ಯೋಗ್ಯತೆಗಿಂತಲೂ ಯೋಗ ಚೆನ್ನಾಗಿರಬೇಕೆನ್ನುತ್ತದೆ ಇಂದಿನ ರಾಜಕೀಯ. ಸಂವಿಧಾನವು ಇತರ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚಾಗಿ ರಾಜಕೀಯದ ನಂಟನ್ನು ಹೊಂದಿದೆ. ಆದ್ದರಿಂದ ಎಷ್ಟೇ ಗೌರವವನ್ನು ಸಂಪಾದಿಸಿದರೂ ಇಂತಹ ಯಾವುದಾದರೂ ಹುದ್ದೆಗಳು ದಕ್ಕಿದಾಗ ಅವರು ಸಾಮಾಜಿಕ ಸಾಮಾನ್ಯರಿಗಿಂತ ಮೇಲೇರುತ್ತಾರೆ; ಮೇಲಿರುತ್ತಾರೆ. ಉಪರಾಷ್ಟ್ರಪತಿಯೆಂದರೆ ರಾಷ್ಟ್ರಪತಿಯವರ ದೀರ್ಘಕಾಲೀನ ಅನುಪಸ್ಥಿತಿಯಲ್ಲಿ ರಾಷ್ಟ್ರಪತಿಯಾಗಿರುವುದು ಮಾತ್ರವಲ್ಲ, ರಾಜ್ಯಸಭಾಪತಿಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಈ ಹುದ್ದೆ ತಿಳಿವಳಿಕೆ ಮತ್ತು ಅನುಭವವಿರುವ, ಅರಾಜಕೀಯವಾಗಿ, ನಿಷ್ಪಕ್ಷಪಾತಿಯಾಗಿರಬಲ್ಲ ಹಿರಿಯರಿಗೆ ಮೀಸಲಾಗಿರುತ್ತಿತ್ತು. ಲೋಕಸಭಾಪತಿಯನ್ನು ಜನಮತದಿಂದ ಆಯ್ಕೆಯಾದ ಸಂಸದರಲ್ಲೇ ಒಬ್ಬರನ್ನು ಆಯ್ಕೆಮಾಡಬೇಕೆಂಬ ನಿಬಂಧನೆಯಿರುವುದರಿಂದ ಅಲ್ಲಿ ರಾಜಕೀಯ ಸಹಜವೇ. ರಾಜ್ಯಸಭೆಯನ್ನು ಮೇಲ್ಮನೆಯೆಂದು ಕರೆದದ್ದರ ಕಾರಣವೂ ಇದೇ ಆಗಿದ್ದು ಲೋಕಸಭಾಪತಿ ಮತ್ತು ರಾಜ್ಯಸಭಾಪತಿಗಳ ನಡುವಣ ಈ ಅಂತರವು ವೈಶಿಷ್ಟ್ಯಪೂರ್ಣವಾಗಿದೆ.
ಭಾರತದ ಸಂವಿಧಾನಬದ್ಧ ಹುದ್ದೆಗಳಲ್ಲಿ ಯಾರೂ ಮೇಲಲ್ಲ; ಯಾರೂ ಕೀಳಲ್ಲ. ಆದರೂ ವ್ಯವಸ್ಥೆಯ ಅನುಕೂಲಕ್ಕಾಗಿ ಒಂದು ನಿಗದಿತ ಅಧಿಕಾರ ಶ್ರೇಣಿಯನ್ನು ಒದಗಿಸಲಾಗಿದೆ. ಇದನ್ನು 26 ಜುಲೈ, 1979ರಂದು ರಾಷ್ಟ್ರಪತಿಯವರ ಅಂಕಿತದೊಂದಿಗೆ ಹೊರಡಿಸಲಾಯಿತು. ಆನಂತರ ಅನೇಕ ಹುದ್ದೆಗಳನ್ನು ಸೇರಿಸಲಾಗಿದೆ. ಇದರ ಪ್ರಕಾರ ಅಗ್ರಸ್ಥಾನವು ರಾಷ್ಟ್ರಪತಿಯವರಿಗಿದೆ. ದೇಶದ ಮೊದಲ ಪ್ರಜೆ ಎಂದು ಅವರು ಈ ಕಾರಣಕ್ಕಾಗಿಯೇ ಕರೆಸಿಕೊಳ್ಳುತ್ತಾರೆ. ಆನಂತರದ ಸ್ಥಾನವು ಉಪರಾಷ್ಟ್ರಪತಿಯವರದ್ದು. ಮೂರನೇ ಸ್ಥಾನವು ಪ್ರಧಾನಮಂತ್ರಿಯವರದ್ದು. ಈ ಸಾಲಿನಲ್ಲಿ 25 ಹಂತಗಳನ್ನು ನಿಗದಿಪಡಿಸಿ ನೂರಕ್ಕೂ ಹೆಚ್ಚು ಹುದ್ದೆಗಳನ್ನು ನಮೂದುಮಾಡಲಾಗಿದೆ. ಇವು ವಿಶೇಷ ಸಂದರ್ಭಗಳಿಗೆ ಮೀಸಲಿದ್ದು ದೈನಂದಿನ ಕಾರುಬಾರಿಗೆ ಅನ್ವಯಿಸುವುದಿಲ್ಲ. ಇದರ ವೈಶಿಷ್ಟ್ಯ/ವೈಪರೀತ್ಯವೆಂದರೆ ಇದು ಕೆಲವು ಬಾರಿ ವಿಚಿತ್ರ ವಿರೋಧಾಭಾಸಗಳನ್ನು ಸೃಷ್ಟಿಸುತ್ತದೆ. ಪ್ರಧಾನಿಯ ಹುದ್ದೆಯ ಬಳಿಕದ ಸ್ಥಾನವು ರಾಜ್ಯಪಾಲರುಗಳದ್ದು. ಆಮೇಲೆ ಮಾಜಿ ರಾಷ್ಟ್ರಪತಿಗಳದ್ದು, ಬಳಿಕವಷ್ಟೇ ಉಪಪ್ರಧಾನಿಗಳದ್ದು ಮತ್ತು ಅವರ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿ. ಇದರ ತಾರ್ಕಿಕ ಕಾರಣಗಳು ಅರ್ಥವಾಗುವುದಿಲ್ಲ. ಉಪಪ್ರಧಾನಿ ಹುದ್ದೆ ಸ್ವಾತಂತ್ರ್ಯ ಸಿಕ್ಕಿ ಮೊದಲ ಸಚಿವ ಸಂಪುಟ ರಚನೆಯಾದಾಗಲೇ ಸೃಷ್ಟಿಯಾಗಿತ್ತು. ಸರದಾರ್ ವಲ್ಲಭಭಾಯಿಪಟೇಲ್ ಅವರು ಮೊದಲ ಉಪಪ್ರಧಾನಿ. ಆನಂತರ ಮೊರಾರ್ಜಿದೇಸಾಯಿ, ಬಾಬುಜಗಜೀವನರಾಮ್, ವೈ.ಬಿ. ಚವ್ಹಾಣ್, ಚರಣ್‌ಸಿಂಗ್ ಹೀಗೆ ಎಲ್.ಕೆ. ಅಡ್ವಾಣಿಯವರ ವರೆಗೆ ನೆನಪಿನಲ್ಲುಳಿಯುವ ಹೆಸರುಗಳಿವೆ. (ಎಲ್.ಕೆ. ಅಡ್ವಾಣಿಯವರೇ ಭಾರತದ ಕೊನೆಯ ಉಪಪ್ರಧಾನಿ!) ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಯಥೋಚಿತ ಸ್ಥಾನವಿಲ್ಲವೆಂಬುದನ್ನೂ ಗಮನಿಸಬೇಕು. ಆದ್ದರಿಂದ ಇವು ಔಪಚಾರಿಕವೆಂದು ನಂಬಬೇಕು; ಅದನ್ನು ನಾವು ಗೌರವಿಸಬೇಕು.
ನಾನೀಗ ಹೇಳುವುದು ಉಪರಾಷ್ಟ್ರಪತಿಗಳ ಬಗ್ಗೆ. ಸ್ವತಂತ್ರ ಭಾರತವು ಅಸ್ತಿತ್ವಕ್ಕೆ ಬಂದಾಗ ಉಪರಾಷ್ಟ್ರಪತಿಯೆಂಬ ಹುದ್ದೆಯನ್ನು ಸೃಷ್ಟಿಸಲಾಯಿತು. ಮೊದಲ ಉಪರಾಷ್ಟ್ರಪತಿಯಾಗಿ ಆಗ ಸೋವಿಯೆತ್ ಒಕ್ಕೂಟಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ತತ್ವಜ್ಞಾನಿ ಮತ್ತು ಪ್ರಾಧ್ಯಾಪಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೇ 1952ರಲ್ಲಿ ಐದು ವರ್ಷದ ಅವಧಿಗೆ ಒಮ್ಮತದ ಆಯ್ಕೆಯಾದರು. ಅವರೇ ಮುಂದಿನ ಐದು ವರ್ಷಗಳಿಗೂ ಪುನರಾಯ್ಕೆಯಾದರು. ಬಳಿಕ ಆಗಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಸಾವಿನಿಂದಾಗಿ ತೆರವಾದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿ 1967ರ ವರೆಗೂ ಸೇವೆ ಸಲ್ಲಿಸಿದರು. 15 ವರ್ಷಗಳ ದೀರ್ಘಕಾಲ ಹೀಗೆ ದ್ವಿತೀಯ ಮತ್ತು ಮೊದಲ ಪ್ರಜೆಯಾಗಿ ಸಲ್ಲಿಸಿದ ಈ ಸೇವೆ ಮಹತ್ವದ್ದು. ಆನಂತರ ಡಾ.ಝಾಕಿರ್ ಹುಸೇನ್, ವಿ.ವಿ. ಗಿರಿ, ಪಾಠಕ್, ಜತ್ತಿ, ವೆಂಕಟರಾಮನ್ ಹೀಗೆ ಇತ್ತೀಚೆಗಿನ ಜಗದೀಪ್ ಧನ್ಕರ್‌ವರೆಗೆ ಅನೇಕರು ಸೇವೆ ಸಲ್ಲಿಸಿದರು. ಈ ಪೈಕಿ ಡಾ. ರಾಧಾಕೃಷ್ಣನ್ (1952-1962) ಮತ್ತು ಮುಹಮ್ಮದ್ ಹಾಮಿದ್ ಅನ್ಸಾರಿ (2007-2017) ಉಪರಾಷ್ಟ್ರಪತಿಗಳಾಗಿ ಸುದೀರ್ಘ ಕಾಲದ ಸೇವೆಯ ದಾಖಲೆ ಹೊಂದಿದ್ದಾರೆ. ಯಾವಾಗ ಈ ಹುದ್ದೆಗಳು ರಾಜಕೀಯಗೊಂಡವೋ ಆಗ ತಮಗೆ ಬೇಕಾದ ರಾಜಕಾರಣಿಗಳನ್ನು ಈ ಹುದ್ದೆಗೆ ಆಯ್ಕೆ ಮಾಡುವ ಹೊಸ ಸಂಪ್ರದಾಯ ಆರಂಭವಾಯಿತು. ಪರಿಣಾಮವಾಗಿ ಅವು ಹಗುರಾಗುತ್ತ ಬಂದವು. ಈಗ ಅವು (ಮಾತ್ರವಲ್ಲ ರಾಷ್ಟ್ರಪತಿ ಹುದ್ದೆಯೂ) ಪುನರ್ವಸತಿ ಕೇಂದ್ರವಾಗಿರುವುದಕ್ಕಿಂತಲೂ ಹೆಚ್ಚಾಗಿ ಸರಕಾರದ ಬಹುಮತ ರಾಜಕೀಯಕ್ಕೆ ಕುಣಿಯಬಲ್ಲ, ತಲೆಯಾಡಿಸಬಲ್ಲವರಿಗೆ ಮೀಸಲಾಗಿಟ್ಟಿರುವುದರಿಂದ ಮತ್ತು ರಾಜಕೀಯರಹಿತವಾಗಿಲ್ಲದಿರುವುದರಿಂದ ತನ್ನ ಮಹತ್ವವನ್ನು ಕಳೆದುಕೊಂಡಿದೆ.
ಜಗದೀಪ್ ಧನ್ಕರ್ ಖ್ಯಾತ ನ್ಯಾಯವಾದಿಗಳು. ಆದರೆ ಅವರು ನ್ಯಾಯವಾದಿಯಾಗಿ ಗಳಿಸಿದ್ದಕ್ಕಿಂತ ಹೆಚ್ಚು ಜನಪ್ರಿಯತೆಯನ್ನು ಬಹುಪಕ್ಷಗಳ ರಾಜಕಾರಣಿಯಾಗಿ ಗಳಿಸಿರಬಹುದು. 1989ರಿಂದ ರಾಷ್ಟ್ರರಾಜಕೀಯದಲ್ಲಿದ್ದು ಜನತಾ ದಳದ ಸಂಸದರಾಗಿ, ಬಳಿಕ ಕಾಂಗ್ರೆಸ್ ರಾಜಕಾರಣಿಯಾಗಿ, ಆನಂತರ ಬಿಜೆಪಿಗೆ ಪಕ್ಷಾಂತರ/ವರ್ಗವಾಗಿ ಕೇಂದ್ರ ಸಚಿವರಾಗಿ, (ಮಧ್ಯೆ ರಾಜಸ್ಥಾನದ ಶಾಸಕರೂ ಆಗಿ), ಮೋದಿ ಸರಕಾರದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಪಕ್ಷನಿಷ್ಠೆಯಿಂದ ನಿರ್ದಾಕ್ಷಿಣ್ಯವಾಗಿ ದುಡಿದು ಇದಕ್ಕೆ ಪ್ರತಿಫಲವೆಂಬಂತೆ 2022ರಲ್ಲಿ ಎನ್‌ಡಿಎ ಸರಕಾರದ ಅಭ್ಯರ್ಥಿಯಾಗಿ ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದವರು. 2027ರ ವರೆಗೂ ಅವರ ಅಧಿಕಾರಾವಧಿಯಿತ್ತು. ಅವರು ಉಪರಾಷ್ಟ್ರಪತಿಯಾಗಿದ್ದಾಗಲೂ ತನ್ನ ಮಾತೃಪಕ್ಷದ ವಕ್ತಾರರಂತೆ ಮಾತನಾಡುತ್ತಿದ್ದರು. ಪ್ರಧಾನಿಗಿಂತ ಮೇಲಿನ ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ನೈಜ ಸೇವಕರಂತೆ ಅವರನ್ನು ಅಕ್ಷರಶಃ ಹಿಂಬಾಲಿಸುತ್ತಿದ್ದರು. ಸ್ವತಃ ಹಿರಿಯ ನ್ಯಾಯವಾದಿಯಾಗಿದ್ದರೂ ಅವರು ನ್ಯಾಯಾಂಗದ ಸ್ವಾಯತ್ತೆಯನ್ನು, ಸ್ವಾತಂತ್ರ್ಯವನ್ನು ರಾಜಕಾರಣಿಯಾಗಿಯೇ ನೋಡುತ್ತಿದ್ದರು. ಒಪ್ಪುತ್ತಿರಲಿಲ್ಲ. ಬಿಜೆಪಿಯ ಕೇಂದ್ರ ಸರಕಾರಕ್ಕೆ ಅನುಕೂಲವಲ್ಲದ, ಇರುಸುಮುರುಸಾಗುವ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅವರು ಮನದಣಿಯೆ ಖಂಡಿಸುತ್ತಿದ್ದರು. ರಾಜ್ಯಸಭಾಪತಿಯಾಗಿ ಮಾಡಿದ ಮೊದಲ ಭಾಷಣದಲ್ಲಿಯೇ ಅವರು ನ್ಯಾಯಮೂರ್ತಿಗಳ ಆಯ್ಕೆಯ ಕುರಿತು ಕೇಂದ್ರ ಸರಕಾರ ರಚಿಸಿದ್ದ ರಾಷ್ಟ್ರೀಯ ನ್ಯಾಯಾಂಗ ಆಯೋಗವನ್ನು ಸರ್ವೋಚ್ಚ ನ್ಯಾಯಾಯವು ಅನೂರ್ಜಿತಗೊಳಿಸಿದ್ದನ್ನು ಅಣ್ವಸ್ತ್ರವೆಂದು ಬಣ್ಣಿಸಿ ಟೀಕಿಸಿದ್ದರು. ಆದರೆ ಈ ಅಚಲನಿಷ್ಠರಿಗೆ ಏನಾಯಿತೋ ಏನೋ ಮೂರು ವರ್ಷಗಳಲ್ಲೇ ಅಂದರೆ 2025ರ ಜುಲೈಯಲ್ಲಿ ‘ಅನಾರೋಗ್ಯ’ ನಿಮಿತ್ತವಾಗಿ ಅಧಿಕಾರ ತ್ಯಜಿಸಿದವರು. ಅವರ ರಾಜೀನಾಮೆಯು ಒಂದು ಚಿದಂಬರ ರಹಸ್ಯ. ಈ ಬಗ್ಗೆ ಪ್ರತಿಪಕ್ಷಗಳು ಸರಿಯಾದ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಸರಕಾರ ಸೊಲ್ಲೆತ್ತಲಿಲ್ಲ. ಚಿಕ್ಕಪುಟ್ಟ ರಾಜೀನಾಮೆಗಳಿಗೆ ಗುಲ್ಲೆಬ್ಬಿಸುವ ಮಾಧ್ಯಮಗಳು ತಮಗಿದು ಸಂಬಂಧಿಸಿಲ್ಲವೆಂಬ ಹಾಗೆ ಮೌನವಾದವು. ಅಧಿಕಾರ ತ್ಯಜಿಸಿದ ತಕ್ಷಣವೇ ಧನ್ಕರ್ ತಮ್ಮ ಅಧಿಕೃತ ನಿವಾಸವನ್ನೂ ತ್ಯಜಿಸಿದರು. ಅವರನ್ನು ಭೇಟಿಯಾಗಲು ಪ್ರತಿಪಕ್ಷಗಳ ರಾಜಕಾರಣಿಗಳು ಮಾಡಿದ ಪ್ರಯತ್ನವನ್ನು ತಿರಸ್ಕರಿಸಿದರು. ಅಧಿಕೃತವಾಗಿ ಅವರ ಕುರಿತ ಮಾಹಿತಿಯೇ ಇಲ್ಲ. ಸುಭಾಸ್‌ಚಂದ್ರಬೋಸ್ ಅವರ ಸಾವಿನ ಕುರಿತ ತನಿಖೆ 8 ದಶಕಗಳ ಬಳಿಕವೂ ಇನ್ನೂ ನಡೆಯುತ್ತಿದೆ. ಊಹಾಪೋಹಗಳೇ ಹೊರತು ನಿರ್ಧಾರ ಬಂದಿಲ್ಲ. ಪ್ರಾಯಃ ಧನ್ಕರ್‌ಅವರ ರಾಜೀನಾಮೆಯೂ ತನಿಖೆಯಿಂದ ಮಾತ್ರ ಭೇದಿಸಬಲ್ಲ ಗುಟ್ಟೋ ಏನೋ?
ಈ ನಡುವೆ ಹೊಸ ಇನ್ನೊಂದು ಗೊಂಬೆಯನ್ನು ಕೂರಿಸುವ ಕಾರ್ಯಕ್ರಮವು ಆರಂಭವಾಗಿದೆ. ಪ್ರತಿಪಕ್ಷಗಳು ಇದೊಂದು ಏಕವ್ಯಕ್ತಿ ಪ್ರಹಸನ ಅಥವಾ ಏಕಪಕ್ಷೀಯ ನಾಟಕವಾಗದಂತೆ ತಮ್ಮ ಅಭ್ಯರ್ಥಿಯನ್ನು ಘೋಷಿಸಿವೆ. ನಡುವೆ ಅವಕಾಶವಾದೀ ರಾಜಕಾರಣಿಗಳು ತಮ್ಮ ಯಥಾನುಶಕ್ತಿ ರಾಜಕೀಯ ಮಸಾಲೆಯನ್ನು ಅರೆಯುತ್ತಿದ್ದಾರೆ; ಎರೆಯುತ್ತಿದ್ದಾರೆ. ಫಲಿತಾಂಶವು ಪೂರ್ವನಿಶ್ಚಿತ. ಜನರ ತೆರಿಗೆ ಹಣದ ಒಂದು ಪಾಲು ಇದಕ್ಕೆ ನೈವೇದ್ಯವೆಂಬುದು ವೇದ್ಯವಾಗಿದೆ.
ಅವರನ್ನು ಅವರ ಪಾಡಿಗೆ ಬಿಡಬಹುದು. ಆದರೆ ಸಂವಿಧಾನವನ್ನು ಪ್ರೀತಿಸುವವರು ಈ ಬಗ್ಗೆ ಕೆದಕಿದರೆ ತಪ್ಪಿಲ್ಲ. ಪ್ರಧಾನಿಯಾಗಲಿ, ರಾಷ್ಟ್ರಪತಿಯಾಗಲಿ, ಇತರರಾಗಲಿ, ಇಂತಹ ಮಹತ್ವದ ಹುದ್ದೆ ಮತ್ತು ವ್ಯಕ್ತಿಯ ಕುರಿತು ಮೌನವಾಗಿರುವುದು ಅಧಿಕಾರ ಕೇಂದ್ರೀಕರಣದ ಕಮಟು ವಾಸನೆಯನ್ನು ಕಾಣಿಸುತ್ತದೆ. ಪ್ರಧಾನಿಗೆ ಆಗದ ಯಾವುದೇ ಅಭಿಪ್ರಾಯವೂ ಅವಮಾನಕ್ಕೆ ಗುರಿಯಾಗುತ್ತಿರುವುದು ಹೊಸತೇನಲ್ಲ. ನಿಕಟಪೂರ್ವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಶಕ್ತ ರಾಜಕಾರಣಿಯಾಗಿದ್ದರೂ ಅವರನ್ನು ಈ ಹುದ್ದೆಯಲ್ಲಿ ಕೂರಿಸಿ ಮೌನವಾಗಿಸಲಾಯಿತು. ಅವರ ಅವಧಿ ಪೂರ್ಣವಾದ ಬಳಿಕ ಅವರನ್ನು ಗಮನಿಸುವವರೇ ಇಲ್ಲದಾಯಿತು. ಅವರು ಈಗ ಎಲ್ಲಿದ್ದಾರೆಂಬ ಸೂಚನೆಗಳಿರಬಹುದು. ಅಷ್ಟರ ಮಟ್ಟಿಗೆ ಅವರು ಧನ್ಕರ್‌ಗಿಂತ ಅದೃಷ್ಟಶಾಲಿ. ಆದರೆ ದಕ್ಷಿಣ ಭಾರತದ ಒಬ್ಬ ಪ್ರಭಾವಶಾಲೀ ಮತ್ತು ಪ್ರಬುದ್ಧ ‘ರಾಜಕಾರಣಿಯ’ ರಾಜಕಾರಣದ ಬದುಕು ಅಂತ್ಯವಾಯಿತು.
ಮೋದಿ ಸರಕಾರದಲ್ಲಿ ಸವಾಲೆಸೆಯಬಲ್ಲ ಅಥವಾ ನಿರುಪಯುಕ್ತ, ಅಥವಾ ತರಲೆ ರಾಜಕಾರಣಿಗಳನ್ನು ಯಾವುದಾದರೂ (ರಾಜ್ಯಪಾಲ ಹುದ್ದೆಯೂ ಸೇರಿ) ಇಂತಹ ಹುದ್ದೆಗೇ ನೇಮಿಸುವುದು ಸಾಮಾನ್ಯ. ತೀರ ಹಿರಿಯರಾದರೆ ಅವರನ್ನು ‘ಮಾರ್ಗದರ್ಶಕ ಮಂಡಳಿ’ಗೆ ನೇಮಿಸಿ ಅವರ ಮಾರ್ಗವನ್ನು ಖಾಯಂ ಬಂದ್ ಮಾಡುವುದು ಮೋದಿ-ಶಾ (ಮತ್ತು ನೇಪಥ್ಯದ ಸಂಘಶಕ್ತಿ) ಗುಂಪಿನ ಸಂಪ್ರದಾಯ. ಪತ್ತೇದಾರಿ ಅಥವಾ ಹಿಂಸೆ-ಕ್ರೌರ್ಯದ ಸಿನೆಮಾಗಳಲ್ಲಿ ಖಳನಾಯಕರು ತಮಗಾಗದವರನ್ನು ಅಕ್ಷರಶಃ ರಾಸಾಯನಿಕಗಳಲ್ಲಿ ಕರಗಿಸಿ ಮಂಗಮಾಯವಾಗಿಸುವುದನ್ನು ಕಾಣುತ್ತೇವೆ. ಭೂಗತ ಜಗತ್ತಿನಲ್ಲೂ ಇಂತಹ ಅದೃಶ್ಯಪರಂಪರೆಯಿದೆ. ಗೂಢಚರ್ಯೆಯಲ್ಲಿ ಇದು ಸಾಮಾನ್ಯ ಶಿಕ್ಷೆಯಂತೆ. ಯಾವುದೂ ಬಯಲಾಗಬಾರದು. ಈಗೀಗ ನಾಪತ್ತೆಯ ಪ್ರಸಂಗಗಳು ಹೆಚ್ಚಾಗಿವೆ. ರಾಷ್ಟ್ರೀಯ ಮಧ್ಯಮಗಳಲ್ಲಿ, ಮನರಂಜನೆಗಳಲ್ಲಿ ‘ಲಾಪತಾ’ ಎನ್ನುವುದು ಒಂದು ರೂಢಿಯ ಮಾತಾಗಿದೆ.
ದೇವಾನುದೇವತೆಗಳನ್ನೂ ವೈರಿಗಳ ಹೆಸರಿನೊಂದಿಗೆ ನೆನಪಿಸಲಾಗುತ್ತದೆ. ಮುರಾರಿ, ಮುರವೈರಿ ಎಂದರೆ ಮುರನೆಂಬ ರಾಕ್ಷಸನ ವೈರಿ, ಹಾಗೆಯೇ ಮಾಧವ, ಮಧುಸೂದನ ಎಂದರೆ ಮಧುವೆಂಬ ರಾಕ್ಷಸನ ವೈರಿ ಅಥವಾ ಆತನನ್ನು ಗೆದ್ದವನು ಎಂದು ತಾತ್ಪರ್ಯ. ಇವೆಲ್ಲ ಗುಣ ಅಥವಾ ಶೌರ್ಯವಾಚಕಗಳು. ಬಿಜೆಪಿ ವಿರೋಧಿಸುವ ನೆಹರೂ, ಇಂದಿರಾ, ರಾಜೀವ್ ಮುಂತಾದ ದೇಶದ ಪ್ರಮುಖ ರಾಜಕಾರಣಿಗಳನ್ನು ‘ಮರೆಯಬೇಕೆಂದರೂ ಮರೆಯಲಾಗದಂತೆ’ ಬಿಜೆಪಿಯು ನಿತ್ಯ ಹಳಿದು ನೆನಪಿಸುತ್ತದೆ. ಅದು ನಿಜಕ್ಕೂ ಭಾರತೀಯ ಸಂಸ್ಕೃತಿ. ಆದರೆ ಇದೇ ಸಂದರ್ಭದಲ್ಲಿ ತಮ್ಮೊಂದಿಗೇ ಇದ್ದ ಅಡ್ವಾಣಿ, ಜೋಶಿ, ಜಸ್ವಂತ್, ನಾಯ್ಡು, ಮುಂತಾದವರೊಂದಿಗೆ ಧನ್ಕರ್‌ಕೂಡಾ ಗೆದ್ದಲು ಹಿಡಿದು ಹೋಗುವುದು ಒಳ್ಳೆಯ ಲಕ್ಷಣವೇನಲ್ಲ.
ಈ ಅದೃಶ್ಯ ಪರಂಪರೆಗೆ ಸೇರುವಷ್ಟು ‘ಪಕ್ಷದ್ರೋಹ’, ‘ಸ್ವಾಮಿದ್ರೋಹ’ ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಕರ್ ಮಾಡಿರಲಾರರೆಂದು ನಂಬಬಹುದು. ಭಾರತದ ರಾಜಕಾರಣದ ಇತಿಹಾಸ ಜಾರ್ಜ್ ಆರ್ವೆಲ್ಲನ ‘1984’ ಕಾದಂಬರಿಯಂತೆ ನಡೆಯುವ ಹಾದಿಯಲ್ಲಿ ಕಳೆದ ಕೆಲವು ವರ್ಷಗಳಿಂದಲೂ ಇದೆ. ಸಿಂಹಾಸನದ ಒಂದೊಂದೇ ಮೆಟ್ಟಲುಗಳನ್ನು ಒದ್ದು ಎಸೆಯಲಾಗುತ್ತಿದೆ. ಹತ್ತಿರ ಯಾರೂ ಬಾರದಂತಹ ಅಭೇದ್ಯ ಪರೀಕ್ಷಿತಗೋಪುರವನ್ನು ಕಟ್ಟಲಾಗುತ್ತಿದೆ. ಇದೀಗ ಅದರ ಮುಂದುವರಿಕೆಯು ಭಯಾನಕವಾಗಿ ಪರಿಣಮಿಸುತ್ತದೇನೋ?