Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಕಾಲ್ತುಳಿತದ ದುರಂತ ಪುರಾಣ

ಕಾಲ್ತುಳಿತದ ದುರಂತ ಪುರಾಣ

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ19 Jun 2025 10:29 AM IST
share
ಕಾಲ್ತುಳಿತದ ದುರಂತ ಪುರಾಣ
ಇಡೀ ಐಪಿಎಲ್‌ನ 10 ತಂಡಗಳಲ್ಲಿ ಕರ್ನಾಟಕದ ಒಟ್ಟು 13 ಮಂದಿ (ಮಾತ್ರ) ಇದ್ದರು. ಆದರೆ ಕನ್ನಡದ ಜನರು ಪ್ರಾಮಾಣಿಕರು; ಕುರಿತೋದದೆಯುಂ ಕಾವ್ಯಪ್ರಯೋಗ ಮಾತ್ರವಲ್ಲ, ಕ್ರೀಡಾ ಮನೋಭಾವವನ್ನೂ ತೋರಿಸುವುದರಲ್ಲಿ ಅಗ್ರಗಣ್ಯರು. ಹನುಮನುದಿಸಿದ ನಾಡಿನಲ್ಲಿರುವುದರಿಂದ ಸಹಜವಾಗಿಯೇ ತಮ್ಮ ನಿಷ್ಠೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂಬ ಹೆಸರಿನ ತಂಡಕ್ಕೆ! ಈ ರಾಯಲ್ ಚಾಲೆಂಜರ್ಸ್ ಎಂದರೇನೆಂದು ಅಬಕಾರಿ ಇಲಾಖೆಗೂ ಅದರ ಪೋಷಕ ಮಹಾಪ್ರಜೆಗಳಿಗೂ ಮಾತ್ರ ಗೊತ್ತಿದ್ದಿರಬಹುದು. ಅದರ ಅಮಲು ಅಷ್ಟೊಂದು ಅತಿಯೆಂದು ಈಗ ಗೊತ್ತಾಯಿತು. ಆದರೆ ಟ್ರೋಫಿ ಗೆದ್ದದ್ದರಿಂದ ಅದೀಗ ಜಗಜ್ಜಾಹೀರಾಯಿತು!

ನಾನು ಖಾಸಗಿಯನ್ನು ಅಂಕಣದೊಳಗೆ ತರುವುದು ಅಪರೂಪ. ಸಾರ್ವಜನಿಕವಾದದ್ದನ್ನೇ ಓದುಗರಿಗೆ ಕೊಡುವ ಒಂದು ಪ್ರಯೋಗ ಈ ಅಂಕಣ. ಕಳೆದ ವಾರ ನಾನು ಕಾರಣಾಂತರಗಳಿಂದ (ಹೀಗಂದರೇನೆಂದು ನನಗಿನ್ನೂ ಅರ್ಥವಾಗಿಲ್ಲ!), ಮುಖ್ಯವಾಗಿ ನನ್ನ ವೃತ್ತಿಜೀವನದ ಒತ್ತಡದಿಂದ ಅಂಕಣ ಲೇಖನವನ್ನು ಬರೆಯಲಾಗಲಿಲ್ಲ. ಈ ವಾರ ಬರೆಯುವವನಿದ್ದೆ. ಹಿಂದೆಯೂ ಒಂದೆರಡು ಬಾರಿ ಹೀಗೆ ಅಂಕಣದ ನಿಯತಕಾಲವನ್ನು ತಪ್ಪಿದ್ದೆನಾದರೂ ಇಷ್ಟು ಕುತೂಹಲಕಾರಿಯಾಗಿ ಎಂದೂ ಇರಲಿಲ್ಲ. ‘ನಭೂತೋ!’ ಆದರೆ ನನ್ನ ಅಂಕಣವಿರಲಿಲ್ಲವೆಂಬುದು ನನ್ನ ವಿಶ್ವಾಸದ ಓದುಗರಿಗೆ ಗೊತ್ತಾಗಿದೆಯೆಂಬುದು ನನಗೆ ತಿಳಿದದ್ದು ನನಗೆ ಬಂದ ಸಂದೇಶಗಳಿಂದ. ಪತ್ರಿಕೆಗಳಲ್ಲಿರುವ ‘ಕಾಲಂ’, ‘ಕಾಲಮ್’ ಎಂಬುದು ಸಂಸ್ಕೃತಕ್ಕೆ ಹೆಚ್ಚು ಹತ್ತಿರವಾಗಿದೆಯೆಂದು ನನ್ನ ಅಂಬೋಣ. ಈ ವಾರದ ಅಂಕಣ ಎಲ್ಲೆಂದು ಕೇಳಿದವರಿಂದ ಹಿಡಿದು ಕಾಲ್ತುಳಿತದ ಕುರಿತು ನಾನೇಕೆ ಬರೆಯಲಿಲ್ಲವೆಂದು ಕಾರಣ ಕೇಳುವ ನೋಟೀಸಿನ ತರಹದ ವಿಚಾರಣೆಗಳೂ ಇದ್ದವು. ‘ನಭವಿಷ್ಯತಿ’ ಎನ್ನಲಾರೆ. ಹಾಗೆಯೇ ಅಂಕಣ ಇರಲಿಲ್ಲವೆಂದು ಸಮಾಧಾನ, ಸಂತೋಷಪಟ್ಟವರೂ ಇರಬಹುದು. ಲೋಕೋ ಭಿನ್ನ ರುಚಿ!

ಈಗ ವಿಷಯಕ್ಕೆ ಬರೋಣ: ಮಿತ್ರರೊಬ್ಬರು ಇತ್ತೀಚೆಗೆ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಸಂಮಾನಿಸುವ ಸಂದರ್ಭದಲ್ಲಿ ಆದ ಜನದಟ್ಟಣೆಯ ನಡುವೆ ಕಾಲ್ತುಳಿತಕ್ಕೆ ಸಿಕ್ಕಿ ಸಾವು-ನೋವನ್ನು ಅನುಭವಿಸಿದವರು ನನ್ನ ಗಮನಕ್ಕೆ ಬರಲಿಲ್ಲವೇ ಮತ್ತು ಆ ಬಗ್ಗೆ ನಾನು ಬರೆಯುವುದಿಲ್ಲವೇ? ಎಂದು ಪ್ರಶ್ನಿಸಿದರು. ಅದನ್ನು ನೋಡಿ, ಓದಿ ನಾನೇನು ಮಾಡಲಿ ಎಂದು ಉತ್ತರಿಸಿದೆ. ಗಾಝಾ ನೆನಪಾಯಿತು. ಅಸಹಾಯಕ ವಿಹ್ವಲತೆಯನ್ನು ಹೊರತುಪಡಿಸಿ ಇನ್ನೇನು ಮಾಡಲು ಸಾಧ್ಯ? ಇಂದಿನ ಸಮಾಜದ ಎಲ್ಲ ಸಂಕಟಗಳಿಗೆ ನಾವು ಅನಗತ್ಯ ಉತ್ತರದಾಯಿತ್ವವನ್ನು ಕಲ್ಪಿಸಿಕೊಂಡು ಅಳುವುದಕ್ಕೆ ಸಾಧ್ಯವೇ? ನಮ್ಮ ಭಾವನೆಗಳೆಲ್ಲ ‘ಶ್ರದ್ಧಾಂಜಲಿ’ಗೆ ಸೀಮಿತವಾಗಿವೆ. ಕರುಳು ಕಿತ್ತು ಬರುವುದೂ ಒಂದು ಅಪಹಾಸ್ಯವಾಗಿರುವ ಸಂದರ್ಭದಲ್ಲಿ ಮೌನವೇ ಭೂಷಣವೆಂದು ಕಂಡರೂ ಆ ಬಗ್ಗೆ ನಿರ್ಲಿಪ್ತವಾಗಿ ಒಂದಷ್ಟು ಬರೆಯೋಣ ಎಂದು ಅನ್ನಿಸಿದ್ದು ಆನಂತರ.

ಬೆಂಗಳೂರಿನದ್ದೆಂದು ಹೇಳಲಾದ ‘ರಾಯಲ್ ಚಾಲೆಂಜರ್ಸ್’ ತಂಡ ಐಪಿಲ್ ಎಂಬ (ವಿಶ್ವ?)ಕಪ್ಪನ್ನು ಗೆದ್ದ ಸಂತೋಷವನ್ನು ಕಿವಿಗಡಚಿಕ್ಕುವಂತೆ ನಾಡಿನಾದ್ಯಂತ ವಿಜೇತರ ಅಭಿಮಾನಿಗಳು ಆಚರಿಸಿದ ಸುದ್ದಿ ಪತ್ರಿಕೆಗಳಲ್ಲಿ ಮತ್ತಿತರ ಮಾಧ್ಯಮಗಳಲ್ಲಿ ಪ್ರಕಟವಾಗುವ ಮೊದಲೇ ನಮಗೆ ರಾತ್ರಿ ನಿದ್ರೆಯಿಲ್ಲದಂತೆ ನಮ್ಮ ನೆರೆಹೊರೆಯ ‘ನಾಗರಿಕರು’ ಆಚರಿಸಿದ್ದರು. ಮೊದಲಿಗೆ ಇದು ಕ್ರಿಕೆಟಿನ ಸಂಭ್ರಮವೆಂದು ಗೊತ್ತಾಗಲಿಲ್ಲ. ಇಷ್ಟೊಂದು ವೆಚ್ಚದ ಸಂಭ್ರಮ ಸಾರ್ವಜನಿಕವಾಗಿ ಆಚರಿಸುವುದು ಹಬ್ಬ ಹರಿದಿನಗಳಲ್ಲಿ ಅಥವಾ ಯಾವುದೋ ಒಂದು ಸಾರ್ವಜನಿಕ ಮಹತ್ವದ ಸಾಧನೆಯಲ್ಲಿ. ಬೇರೆ ಯಾವ ಆಚರಣೆಯೂ ಇಲ್ಲದಿದ್ದುದರಿಂದ ಮತ್ತು ಆಗಲೇ ಐಪಿಎಲ್ ಅಂತಿಮ ಪಂದ್ಯ ಕೊನೆಗೊಂಡಿತೆಂದು ಪ್ರಕಟವಾದುದರಿಂದ ಈ ಹಬ್ಬಕ್ಕೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಕಾರಣವೆಂದು ಗೊತ್ತಾಯಿತು. ಇರಲಿ ಬಿಡಿ; ಭಾರತ ಈಗ 145 ಕೋಟಿ ಜನಸಂಖ್ಯೆಯ ಮೂಲಕ ಚೀನಾವನ್ನು ಹಿಂದಿಕ್ಕಿ 1ನೇ ಸ್ಥಾನದಲ್ಲಿಯೂ, 4.1872 ಟ್ರಿಲಿಯನ್ ಜಿಡಿಪಿಯೊಂದಿಗೆ ಜಪಾನನ್ನು (4.18643 ಟ್ರಿಲಿಯನ್) ಮೀರಿಸಿ ವಿಶ್ವದ 3ನೇ ಶ್ರೀಮಂತ ರಾಷ್ಟ್ರವಾಗಿಯೂ ಬೆಳೆದಿದೆ(ಯಂತೆ). (ಈ ಅರ್ಥಶಾಸ್ತ್ರ ಎಷ್ಟು ಅಪಾಯಕಾರಿಯೆಂದರೆ ತಲಾ ಆದಾಯವನ್ನು ಹೋಲಿಸಿದರೆ ಜಪಾನ್ 33,955.7 ಡಾಲರ್ ಮತ್ತು ಭಾರತವು 2,878.4 ಡಾಲರ್ ತಲಾ ಆದಾಯವನ್ನು ಹೊಂದಿರುವುದರಿಂದ ಭಾರತವನ್ನು ಬಡವರ ಶ್ರೀಮಂತ ರಾಷ್ಟ್ರ ಎನ್ನಬಹುದು.) ಇಂತಹ ಶ್ರೀಮಂತ ರಾಷ್ಟ್ರದಲ್ಲಿ ಹಣ ಜನರಲ್ಲಿ ಮೊಳೆಯುವುದು, ಬೆಳೆಯುವುದು ಮಾತ್ರವಲ್ಲ, ಒಳಗೆ ಕೊಳೆಯುತ್ತಿದೆಯೆಂದು ಗೊತ್ತಾಗುತ್ತದೆ.

ಈ ವೈಭವವನ್ನು ಆಚರಿಸಲು ಕರ್ನಾಟಕ ಸರಕಾರ ಸಜ್ಜಾಯಿತು. ಪ್ರಾಯಃ ಅದು ಪ್ರಚಾರ ಪಡೆಯುವುದರಲ್ಲಿ ಕೇಂದ್ರ ಸರಕಾರವನ್ನು ಪೇಲವವಾಗಿ ಅನುಸರಿಸುತ್ತಿತ್ತು. ಕೆಲವೇ ದಿನಗಳ ಮೊದಲು ಬೂಕರ್ ವಿಜೇತ ಬಾನು ಮುಷ್ತಾಕ್ ಮತ್ತು ದೀಪಾಭಾಸ್ತಿಯರನ್ನು ವಿಧಾನಸೌಧದಲ್ಲಿ ಸನ್ಮಾನಿಸಲಾಗಿತ್ತು. ಅದು ಆವರಣದ ಒಳಗೆ. ಆದರೆ ಕ್ರಿಕೆಟ್ ಎಂಬ ಆಟ ಸಾಹಿತ್ಯದಂತೆ ಕೆಲವೇ ಮಂದಿಯ ವಿಚಾರವಲ್ಲ. ಅದು ಬ್ರಿಟನ್‌ನಲ್ಲಿ ಹುಟ್ಟಿ ಬೆಳೆದು ಹಬ್ಬಿತೆಂದು ಹೇಳಿದರೂ ಅದೀಗ ನಮ್ಮ ನೆಲದಲ್ಲಿ ಅಗೆದು ಇಲ್ಲಿ ಪುರಾತನಕಾಲದಲ್ಲಿ ಇತ್ತೆಂದು ಹೇಳಲಾಗುವ ಅವಶೇಷಗಳ ಪತ್ತೆಗಾದರೂ ನಮ್ಮ ಪುರಾತತ್ವ ಇಲಾಖೆ ಅಥವಾ ಅವರಿಂದಾಗದಿದ್ದರೆ ನಮ್ಮ ನಿರುದ್ಯೋಗೀ ಮತ್ತು ಉತ್ಸಾಹೀ ತಂಡವು ಶೋಧಿಸುವುದು ಖಂಡಿತ. ರಾಮಾಯಣದ ಕವಿಗೆ ಕ್ರೀಡಾ ಸ್ಫೂರ್ತಿ ಇರಲಿಲ್ಲವೆಂದು ಕಾಣುತ್ತದೆ. ರಾಮಾಯಣದಲ್ಲಿ ಸೀತಾ ಸ್ವಯಂವರದಲ್ಲಿ ಧನುರ್ವಿದ್ಯೆಯ ಸ್ಪರ್ಧೆಯಿದ್ದರೂ ಅದು ಬಿಲ್ಲನ್ನು ಮುರಿಯವುದಕ್ಕಷ್ಟೇ ಸೀಮಿತವಾಗಿತ್ತು. ಇತರ ಕ್ರೀಡೆಯ, ಸ್ಪರ್ಧೆಯ ಮಾಹಿತಿ ಹೆಚ್ಚಿಲ್ಲದಿದ್ದರೂ ಮಹಾಭಾರತದಲ್ಲಂತೂ ಕ್ರೀಡಾ ಸ್ಪರ್ಧೆ ಇತ್ತೆಂಬುದಂತೂ ಖಚಿತ. ಆದರೆ ವ್ಯಾಸರಿಗೆ ಕ್ರೀಡಾ ಮನೋಭಾವವಿದ್ದುದರಿಂದ ಅವರು ಅಲ್ಲಲ್ಲಿ ಸ್ಪರ್ಧೆಯನ್ನು ವ್ಯವಸ್ಥೆ ಮಾಡಿದ್ದರು. ಬಾಲ್ಯದಲ್ಲಿ ಯುದ್ಧವಿದ್ಯಾ ಮತ್ತು ಅದರಲ್ಲೂ ಮರದ ತುದಿಯಲ್ಲಿರುವ ಹಕ್ಕಿಯ ರೂಪದ ಗೊಂಬೆಯ ಕಣ್ಣಿಗೆ (ನಿಜವಾದ ಹಕ್ಕಿ ಅಷ್ಟು ಹೊತ್ತು ಒಂದೇ ಕಡೆೆ ಉಳಿದಿರುವುದಿಲ್ಲ, ಮೊದಲ, ಎರಡನೇ ಬಾಣದ ಸದ್ದಿಗೇ ಅದು ಹಾರಿಹೋಗುತ್ತಿತ್ತು!) ಬಾಣ ಹೊಡೆಯುವ ಸ್ಪರ್ಧೆ, ಮುಂದೆ ದ್ರೌಪದಿ ಸ್ವಯಂವರದಲ್ಲಿ ಮೀನನ್ನು ಹೊಡೆಯುವ ಸ್ಪರ್ಧೆ, ಶಬರ-ಶಂಕರ ವಿಲಾಸ, ಐರಾವತವನ್ನು ಭೂಮಿಗಿಳಿಸಿದ ಪರಾಕ್ರಮ, ಇಂತಹ ಅನೇಕ ಘಟನೆಗಳು ಮೈನವಿರೇಳಿಸುತ್ತವೆ. ಆದ್ದರಿಂದ ಈಗ ಬಿಲ್ಲುಬಾಣಗಳನ್ನು ಬ್ಯಾಟು-ಬಾಲೆಂದು, ಹಕ್ಕಿಯ ಕಣ್ಣನ್ನು ಏಕವಿಕೆಟ್ ಎಂದು, ಶಬರ-ಶಂಕರರನ್ನು ವಿದೇಶೀ ಮತ್ತು ಭಾರತೀಯ ಕ್ರಿಕೆಟಿಗರ ನಡುವಣ ಯುದ್ಧವೆಂದು, ಐರಾವತದ ಬದಲಿಗೆ ಪೆವಿಲಿಯನ್ ಮೇಲೆ ಹೊಡೆದ ಸಿಕ್ಸರ್‌ನ ಬಾಲನ್ನು ಕೆಳಗೆ ತಂದರೆಂದು ಮರುನಾಮಕರಣ ಮಾಡುವುದು ಉಚಿತವಾದೀತು!

ಹೀಗೆ ನಮ್ಮದೇ ಸಂಸ್ಕೃತಿಯ ಭಾಗವಾಗಿದ್ದ ಕ್ರಿಕೆಟನ್ನು ನಾವು ಮರೆತರೂ ಅದು ನಮ್ಮನ್ನು ಮರೆಯಲಿಲ್ಲವೆಂಬುದು ಮೊನ್ನೆ ಗೊತ್ತಾಯಿತು. ಬೆಂಗಳೂರು ಎಂಬ ಅಭಿದಾನದ ತಂಡವು ಕರ್ನಾಟಕದ ಕೂಸಾಯಿತು. ಅದರ 18 ಸದಸ್ಯರಲ್ಲಿ ಮೂವರು ಮಾತ್ರ (ದೇವದತ್ತ ಪಡಿಕ್ಕಲ್, ಮನೋಜ್ ಭಾಂಡಗೆ, ಮಾಯಾಂಕ್ ಅಗರವಾಲ್) ತಾಂತ್ರಿಕವಾಗಿಯಾದರೂ ಕರ್ನಾಟಕದವರೆಂದು ಅನೇಕರಿಗೆ ಗೊತ್ತಿತ್ತೋ ಇಲ್ಲವೋ ಅಂತೂ ಇಡೀ ಐಪಿಎಲ್‌ನ 10 ತಂಡಗಳಲ್ಲಿ ಕರ್ನಾಟಕದ ಒಟ್ಟು 13 ಮಂದಿ (ಮಾತ್ರ) ಇದ್ದರು. ಆದರೆ ಕನ್ನಡದ ಜನರು ಪ್ರಾಮಾಣಿಕರು; ಕುರಿತೋದದೆಯುಂ ಕಾವ್ಯಪ್ರಯೋಗ ಮಾತ್ರವಲ್ಲ, ಕ್ರೀಡಾ ಮನೋಭಾವವನ್ನೂ ತೋರಿಸುವುದರಲ್ಲಿ ಅಗ್ರಗಣ್ಯರು. ಹನುಮನುದಿಸಿದ ನಾಡಿನಲ್ಲಿರುವುದರಿಂದ ಸಹಜವಾಗಿಯೇ ತಮ್ಮ ನಿಷ್ಠೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂಬ ಹೆಸರಿನ ತಂಡಕ್ಕೆ! ಈ ರಾಯಲ್ ಚಾಲೆಂಜರ್ಸ್ ಎಂದರೇನೆಂದು ಅಬಕಾರಿ ಇಲಾಖೆಗೂ ಅದರ ಪೋಷಕ ಮಹಾಪ್ರಜೆಗಳಿಗೂ ಮಾತ್ರ ಗೊತ್ತಿದ್ದಿರಬಹುದು. ಅದರ ಅಮಲು ಅಷ್ಟೊಂದು ಅತಿಯೆಂದು ಈಗ ಗೊತ್ತಾಯಿತು. ಆದರೆ ಟ್ರೋಫಿ ಗೆದ್ದದ್ದರಿಂದ ಅದೀಗ ಜಗಜ್ಜಾಹೀರಾಯಿತು! ಗೆದ್ದೆತ್ತಿನ ಎಂಬುದು ಗೆದ್ದ ಆಟಗಾರರ ಬಾಲ ಹಿಡಿಯುವುದಕ್ಕೆ ಎಂಬಲ್ಲಿ ನಮಗೆ ನಮ್ಮವನೇ ಆದ ಬಸವಣ್ಣ ನೆರವಿಗೆ ಬಂದ: ‘ಇವನಾರವ ಎನಿಸದಿರಯ್ಯಾ, ಇವ ನಮ್ಮವ ಎನಿಸಿರಯ್ಯ’ ಎಂದರು ಕನ್ನಡಿಗರು.

ಕರ್ನಾಟಕ ಸರಕಾರವು ಕ್ರಿಕೆಟ್ ದಾಂಡಿಗರನ್ನು ರಾಜ್ಯದ ಪರವಾಗಿ ಗೌರವಿಸಲು ನಿರ್ಧರಿಸಿತು. ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳನ್ನು ಕಬಳಿಸಿ ವಿಶಾಲವಾಗುತ್ತಿದ್ದಂತೆ ಬೆಂಗಳೂರು ಎಂಬ ಪದವು ಕರ್ನಾಟಕವಾಯಿತು. ಅವರನ್ನು ವಿಧಾನಸೌಧದ ಒಳಗೆ ಸನ್ಮಾನಿಸಲು ಅದೇನು ಬೂಕರ್ ಪ್ರಶಸ್ತಿಯೇ? ಆದ್ದರಿಂದ ಬಹಳ ಬುದ್ಧಿವಂತರಾದ ರಾಜಕಾರಣಿಗಳೂ ಅವರಷ್ಟೇ ಮಹಿಮರಾದ ರಾಜಸೇವಾ ದುರಂಧರ ಅಧಿಕಾರಿಗಳೂ ಸೇರಿ ಕಂಠೀರವ ಕ್ರೀಡಾಂಗಣವನ್ನು ಈ ಸನ್ಮಾನಕ್ಕೆ ಆಯ್ಕೆ ಮಾಡಿಕೊಂಡರು. ಅಲ್ಲಿಂದ ವಿಧಾನಸೌಧಕ್ಕೆ ಮೆರವಣಿಗೆ ನಡೆಸಬೇಕಾದ್ದನ್ನು ಭದ್ರತಾ ಕಾರಣಗಳಿಗಾಗಿ ರದ್ದುಮಾಡಲಾಯಿತು. ಇಷ್ಟರ ಮಟ್ಟಿಗೆ ಪೊಲೀಸರು ಅಪಾಯವನ್ನು ಕಡಿಮೆಮಾಡಿದರು.

ಆದರೆ ತಮ್ಮ ಕ್ರಿಕೆಟ್ ದೇವತೆಗಳು ಮೇಳೈಸುತ್ತಿದ್ದಾರೆಂದು ತಿಳಿದೊಡನೆಯೇ ಕ್ರಿಕೆಟನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಎಲ್ಲರೂ ನಾಡಿನಾದ್ಯಂತದಿಂದ ನೆರೆದರು. (ಇತರ ರಾಜ್ಯ, ದೇಶಗಳಿಂದಲೂ ಬಂದಿರಬಹುದು!) ಬೆಂಗಳೂರು ಅಕ್ಷರಶಃ ಕರ್ನಾಟಕವಾಯಿತು. ಸಾಯಲೆಂದು ಯಾರೂ ಹೋಗುವುದಿಲ್ಲ. ಆದರೂ ಜನ ಮರುಳಾದರೆ ಏನಾಗಬೇಕೋ ಅದು ಆಯಿತು. ಒಂದಷ್ಟು (11 ಎಂದು ವರದಿ) ಜನರು ಅಳಿದರು. ಈ ನತದೃಷ್ಟರ ಆತ್ಮಕ್ಕೆ ಶಾಂತಿ ಸಿಗಲಿ. ಉಳಿದವರು ಉಳಿದರು; ಏನಾದರೋ ಗೊತ್ತಿಲ್ಲ. ಆನಂತರ ನಡೆದ ದುರಂತಗಳಿಂದಾಗಿ ಅದೀಗ ಮರೆತುಹೋದಂತಿದೆ. ಸತ್ತ ಮನೆಗಳಲ್ಲಷ್ಟೇ ದುಃಖ, ನೋವು, ಉಳಿಯುವುದು ಸಹಜ. ಈ ಬಗ್ಗೆ ಇಷ್ಟು ಸಾಕು. ಇನ್ನು ಇರುವುದು ‘ಸಬ್ ಜುಡೀಸ್’; ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿದೆ. ಯಾರು ಹೊಣೆಯೆಂದು ಅದು ನಿರ್ಧರಿಸುತ್ತದೆ.

ಕಾಲ್ತುಳಿತದ ಇತಿಹಾಸ ದೊಡ್ಡದಿದೆ. ಮೊದಲ ಕಾಲ್ತುಳಿತವು ಪುರಾಣದಲ್ಲಿ ಬರುವ ‘ನಹುಷ’ನದ್ದಿರಬಹುದು. ಸಪ್ತರ್ಷಿಗಳು ಹೊತ್ತ ಪಲ್ಲಕಿಯಲ್ಲಿ ಆಗಷ್ಟೇ ಇಂದ್ರ ಪದವಿಗೇರಿದ ನಹುಷ ಪಯಣಿಸುವ ವೇಗ ಸಾಲದೆ (ಆತ ಶಚಿಯನ್ನು ವರಿಸುವ ತವಕದಲ್ಲಿದ್ದ!) ಹೊತ್ತವರಲ್ಲೊಬ್ಬನನ್ನು (ಆತ ಅಗಸ್ತ್ಯನೆಂಬ ಋಷಿ!) ಕಾಲಿನಲ್ಲಿ ಒದ್ದನಂತೆ. ಆಗ ಅವರು ಆತನಿಗೆ ಶಾಪವಿತ್ತು ಆತ ಸರ್ಪವಾಗಿ ಭೂಮಿಯಲ್ಲಿ ಬಿದ್ದನೆಂದು ಕಥೆ. ಒದೆಯೆಂದರೆ ಕಾಲಿನಲ್ಲೇ ಎಂದರ್ಥ. ಆದ್ದರಿಂದ ತುಳಿತವೇ ಸರಿ. ಅದಕ್ಕೂ ಮೊದಲೇ ತುಳಿತಕ್ಕೆ ತುತ್ತಾದವರಿದ್ದಿರಬಹುದು. ಮೆತ್ತಗೆ ಕಾಲಿಟ್ಟರೂ ಜೋರಾಗಿ ಕಾಲಿಟ್ಟರೂ ಫಲವೊಂದೇ. ವಾಮನನ ಕಾಲಿನ ತುಳಿತದಿಂದ ಬಲಿಚಕ್ರವರ್ತಿ ಬಲಿಪಶುವಾದ. ಪುರಾಣ ಕಥೆಗಳಲ್ಲಿ ಕಾಲು, ಅದರಲ್ಲೂ ಎಡಗಾಲಿನಿಂದ ಒದ್ದರೆ ಅದು ಭಾರೀ ಅವಮಾನವೆಂದು ಪ್ರತೀತಿ. ಅಗೆದು ನೋಡೋಣ. ‘ಕಾಲಾಯ ತಸ್ಮೈ ನಮಃ!’.

ಪುರಿಯ ಜಗನ್ನಾಥ ರಾತ್ರೆಯಲ್ಲಿ ಜನ ಮರುಳು, ಜಾತ್ರೆ ಮರುಳು. ಲಕ್ಷಾಂತರ ಜನರು ಇಂದಿಗೂ ಈ ವರ್ಷಾವಧಿ ಜಾತ್ರೆಗೆ ಸೇರುತ್ತಾರೆ. ನೂಕುನುಗ್ಗಲಿನಲ್ಲಿ ಅನೇಕರು ಈ ಕಾಲ್ತುಳಿತಕ್ಕೆ ಸಿಕ್ಕಿ ಸಾಯುತ್ತಾರೆ. ದೀಪಕ್ಕೆ ಹುಳಗಳು ಬೀಳುವಂತೆ ಸಾಯುವುದಕ್ಕೆಂದೇ ಜನರು ಭಕ್ತಿಯ, ಧರ್ಮದ ಹೆಸರಿನಲ್ಲಿ ಜಗನ್ನಾಥ ರಥಯಾತ್ರೆಗೆ ಹೋಗುತ್ತಾರೆಂದು ಅನ್ನಿಸುತ್ತದೆ. ಈ ಕಾಲ್ತುಳಿತ ಎಷ್ಟು ‘ಜನಪ್ರಿಯ’ವೆಂದರೆ ಇಂಗ್ಲಿಷ್ ಅರ್ಥಕೋಶಕ್ಕೆ ದೊಡ್ಡ ಮತ್ತು ವಿಪರೀತ ಅನಿಯಂತ್ರಿತ ಶಕ್ತಿಯ ಮಾರಕ ದಟ್ಟಣೆಗೆ ‘Juggernaut’ ಎಂಬ ಪದ ಸೇರಿಕೊಂಡಿತು. ಈಗ ಅದು ವಿಶ್ವಾತ್ಮಕ ಪದ, ಭಗವಂತನಂತೆ.

ಧರ್ಮವೆಂಬ ಅಮಲು ರಾಯಲ್ ಚಾಲೆಂಜರ್ಸ್‌ಗಿಂತಲೂ ಅಮಲು. ಈಚೆಗೆ ಉತ್ತರಪ್ರದೇಶದ ಯೋಗಭೂಮಿಯಲ್ಲಿ ನಡೆದ ‘ನಭೂತೋ’ ಕುಂಭಮೇಳ ಇದಕ್ಕೆ ಸಾಕ್ಷಿ. ಅಲ್ಲಿ ಎಷ್ಟು ಜನರು ಈ ಕಾಲ್ತುಳಿತಕ್ಕೆ ಸಿಕ್ಕಿ ಸತ್ತುಹೋದರೆಂಬ ಬಗ್ಗೆ ಇನ್ನೂ ಲೆಕ್ಕಾಚಾರ ಮುಗಿದಿಲ್ಲ. ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರಂ’ ನಾಟಕದಲ್ಲಿ ಬರುವ ಶವವನ್ನು ಹುಡುಕುವ ರೀತಿಯಲ್ಲಿ ಈ ಹುಡುಕಾಟ ನಡೆಯುತ್ತಲೇ ಇದೆ. ಭಾರತದಲ್ಲಿ ಮರದ ಗೆಲ್ಲಿನಲ್ಲಿ ಕುಳಿತು ಭಕ್ತರಿಗೆ ತುಳಿಯುವ ದೇವಮಾನವರೂ ಅವರಿಂದ ತುಳಿಸಿಕೊಳ್ಳುವ ಭಕ್ತಾಗ್ರಣಿಗಳೂ ಇದ್ದಾರೆ.

ತುಳಿತ ಎಂದರೆ ಕಾಲಿನಿಂದ ತುಳಿಯುವುದಲ್ಲವೇ? ಇದಕ್ಕೆ ಕಾಲ್ತುಳಿತ ಎಂಬ ಉಲ್ಲೇಖ ಯಾಕೆಂದು ಗೊತ್ತಾಗುವುದಿಲ್ಲ. ಇರಲಿ ಇದರ ಇತಿಹಾಸ ಸ್ವಲ್ಪ ಅರ್ಥವಾದಂತಿದೆ. ಆದರೆ ಜಿಜ್ಞಾಸೆಯಿರುವುದು ಈ ‘ಕಾಲ್ತುಳಿತ’ ಎಂಬ ಪದದ ಬಗ್ಗೆ. ‘ತುಳಿತ’ ಎಂಬ ಪದವಿದೆ. ಅದು ಸಾಧ್ಯವಾಗುವುದು ಕಾಲಿನಿಂದ ಮಾತ್ರವಲ್ಲ. ಮನುಷ್ಯನ ಚರ್ಯೆಯಿಂದ. ಶತಶತಮಾನಗಳಿಂದ ಒಬ್ಬ ಶಕ್ತ ಮನುಷ್ಯ ಇನ್ನೊಬ್ಬ ಅಶಕ್ತ ಮನುಷ್ಯನನ್ನು ಒಂದು ಜಾತಿ ಇನ್ನೊಂದು ಜಾತಿಯನ್ನು ಅಥವಾ ಜಾತಿಗಳನ್ನು, ಒಂದು ವರ್ಗ ಇನ್ನೊಂದು ವರ್ಗವನ್ನು ಅಥವಾ ವರ್ಗಗಳನ್ನು ತುಳಿಯುವುದು ಕಾಲಾತೀತ ಜಾಗತಿಕ ವಿದ್ಯಮಾನ. ಇದಕ್ಕೆ ಶೋಷಣೆಯೆಂದು ಹೆಸರು. ಆದರೆ ಈ ತುಳಿತ ‘ಕಾಲ್ತುಳಿತ’ವಾದದ್ದು ಹೇಗೆ? ಎಲ್ಲವೂ ಗೊತ್ತಿರುವ ಗೂಗಲ್ಲನ್ನು ಇಲ್ಲವೇ ಕೃತಕ ಬುದ್ಧಿಮತ್ತೆಯನ್ನು, ಅಲ್ಲೂ ಸಿಗದಿದ್ದರೆ ನಮ್ಮ ಮಾಧ್ಯಮ ಮಿತ್ರರನ್ನು ಕೇಳಬೇಕು. ಬರೀ ‘ತುಳಿತ’ ಎಂಬ ಪದವು ರೂಪಕವಾಗಿ, ಅಮೂರ್ತವಾಗಿ ಬುದ್ಧಿವಂತರ ಸರಕಾಗಿ ಉಳಿಯುತ್ತದೆಂಬ ಕಾರಣಕ್ಕಾಗಿ ಇನ್ನಷ್ಟು ಸ್ಪಷ್ಟವಾದ ‘ಕಾಲ್ತುಳಿತ’ ಸೃಷ್ಟಿಯಾಗಿರಬೇಕು.

ಇಂದಿನ ಯುಗ ಎಷ್ಟು ವೇಗವಾಗಿ ಸಾಗುತ್ತಿದೆಯೆಂದರೆ ಜನರು ಎಲ್ಲ ಬಗೆಯ ದುರಂತಗಳನ್ನು, ಕೊನೆಗೆ ತಮ್ಮದನ್ನೂ ಮರೆಯುತ್ತಾರೆ. ಪ್ರತಿಯೊಬ್ಬರಿಗೂ ಹೊರಗೊಂದು ಒಳಗೊಂದು ವ್ಯಕ್ತಿತ್ವ ಸ್ಥಾಪನೆಯಾದಂತಿದೆ. ಕಣ್ಣೆದುರೇ ನಡೆಯುವ ತುಳಿತಗಳನ್ನು ಮನರಂಜನೆಯಂತೆ ದಾಟಿ ಹೋಗುತ್ತಾರೆ. ಶೋಷಣೆಯ ಭಯಾನಕ ಮುಖವೂ ನಗುತ್ತಿರುತ್ತದೆ. ತುಳಿಯುವವನಿಗೆ ತಾನು ತುಳಿಯುತ್ತಿದ್ದೇನೆಂದು ಅನ್ನಿಸಿದಾಕ್ಷಣ ಅದು ತುಳಿತವಾಗುವುದಿಲ್ಲ; ಆದರೆ ತುಳಿತಕ್ಕೊಳಗಾಗುವವನಿಗೆ ಅದು ತುಳಿತವೆಂದು ಅನ್ನಿಸಿದಾಗ ಅದು ತುಳಿತವಾಗುತ್ತದೆ. ಅದೇ ಅಭ್ಯಾಸವಾದರೆ ಬದುಕು ಸಲೀಸು, ಸಹ್ಯ. ನಂಬಿಕೆಯ ಎದುರು ಯಾವ ವಿಚಾರಪರತೆಯೂ ನಿಲ್ಲಲಾರದು. ಸಾಹಿತ್ಯ, ರಂಗಭೂಮಿ, ಸಿನೆಮಾ ಇವುಗಳಲ್ಲಿ ಎಷ್ಟೇ ತುಳಿತಗಳನ್ನು ಪ್ರದರ್ಶಿಸಿದರೂ, ಚರಿತ್ರೆಯು ಇಂತಹ ತುಳಿತಗಳ ಪರಿಣಾಮಗಳನ್ನು ಪ್ರತ್ಯಕ್ಷವಾಗಿಸಿದರೂ ಅದು ಸಮಾಜದ ಮೇಲೆ ಯಾವ ಪ್ರಭಾವವನ್ನೂ ಬೀರಿದಂತಿಲ್ಲ. ಅಂದ ಮೇಲೆ ತುಳಿತ, ಕಾಲ್ತುಳಿತ ಎಲ್ಲವೂ ಬದುಕಿನ ಭಾಗವಾಗಿಯೇ ಉಳಿಯುತ್ತದೆ.

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X