ಹೊಳೆದದ್ದು ತಾರೆ... ಕನ್ನಡ ಭಾಷೆಗೆ ವಿಶ್ವವೇದಿಕೆ

ಅನುವಾದಿತ ಕೃತಿಗಳಿಗೆ ನೀಡುವ ಬೂಕರ್ ಪ್ರಶಸ್ತಿಯ ಈ ಸಾಲಿನ ಪಾಲುದಾರರಾದ ಮೂಲ ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾಭಾಸ್ತಿಯವರಿಗೆ ಅಭಿನಂದನೆಗಳು. ಇವರಿಗೆ ಬಂದ, ಸಂದ ಗೌರವಕ್ಕಿಂತಲೂ ಈ ಇಬ್ಬರು ಕನ್ನಡ ಸಾಹಿತ್ಯ, ಕನ್ನಡ ಭಾಷೆ ಮತ್ತು ಅನುವಾದವೆಂಬ ಪ್ರಕಾರಕ್ಕೆ ತಂದ ಗೌರವ ಹೆಚ್ಚಿನದ್ದು.
ವಿಶೇಷವೆಂದರೆ ಬೂಕರ್ ಪ್ರಶಸ್ತಿ ಬಂದ ಕೃತಿ ‘ಹಾರ್ಟ್ ಲ್ಯಾಂಪ್’ (Heart Lamp) ಅನುವಾದ ಮತ್ತು ಮೂಲ ಪಠ್ಯ ಮತ್ತು ಬಾನು ಮುಷ್ತಾಕ್ ಅವರ ಸಾಹಿತ್ಯದ ಬಗ್ಗೆ ಬಂದ ವಿಮರ್ಶೆಗಳಿಗಿಂತ ಲೇಖಕಿ ಮತ್ತು ಅನುವಾದಕಿಯರ ಬಗ್ಗೆಯೇ ಜನರು ಮಾತನಾಡಿದರು; ಬರೆಯಬಲ್ಲವರು ಬರೆದರು. ಎದೆಯ ಹಣತೆ ಕಥೆಯ ಬಗ್ಗೆ (ಇದು Heart Lamp ಸಂಕಲನದ ಒಂದು ಕಥೆ; ಆದರೆ ಸಂಕಲನದ ಶೀರ್ಷಿಕೆಯನ್ನು ಹೊತ್ತ ಕಥೆ) ಅನೇಕರು ಉಲ್ಲೇಖಿಸಿದರು. ಸಾಹಿತ್ಯ ಹೇಗೆ ಪ್ರಶಸ್ತಿಯ ಮೂಲಕ ನಭಕ್ಕೆ ಚಿಮ್ಮಬಹುದು ಮತ್ತು ವಿಶ್ವತೋಮುಖವಾಗಬಹುದು ಎಂಬುದಕ್ಕೆ ಈ ಸಂದರ್ಭವು ಉಜ್ವಲ ನಿದರ್ಶನವಾಗಬಹುದು.
ಬೂಕರ್ ಪ್ರಶಸ್ತಿಯ ಜೊತೆಗೆದ್ದ ಧೂಳು ಇನ್ನೂ ನೆಲಕ್ಕಿಳಿದಿಲ್ಲ. ದಿನಪತ್ರಿಕೆಗಳು ಸಹಜವಾಗಿಯೇ ಈ ಕುರಿತು ತಮ್ಮ ಗಮನವನ್ನು ಕೇಂದ್ರೀಕರಿಸಿದವು. ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಇನ್ನೂ ಈ ಕುರಿತು ಲೇಖನಗಳು ಪ್ರಕಟವಾಗಬಹುದು. ಅದು ಸಹಜ. ಯಾವುದೇ ಗೆಲುವನ್ನು ಸಂತಸ, ಸಡಗರದಿಂದ ಆಚರಿಸುವುದು ಮನುಷ್ಯ ಸಹಜ. ಅದು ಸಮಾಜಕ್ಕೆ ನ್ಯಾಯವಾದ ಹಾದಿಯನ್ನು ತೋರಿಸಬಲ್ಲುದು. ಈ ಸಂದರ್ಭಕ್ಕೆ ಸ್ಪರ್ಧಾತ್ಮಕ ವೇಗದಲ್ಲಿ ಬಂದ ಬರೆಹಗಳೇ ಸಾಕ್ಷಿ.
ಪ್ರಶಸ್ತಿಯಿಂದಲೇ ಸಾಹಿತ್ಯದ ಗುಣಮಟ್ಟವನ್ನು ಅಳೆಯಲಾಗದು. ಪ್ರಾಯಃ ಅನೇಕರು ಈ ಪ್ರಶಸ್ತಿಯ ಹೊರತಾಗಿ ಬಾನು ಅಥವಾ ದೀಪಾ ಅವರನ್ನು ಗುರುತಿಸುತ್ತಿದ್ದರೋ ಇಲ್ಲವೋ ಎಂದು ಹೇಳಲಾಗದು. ಆದರೆ ಯುಗಾದಿಗೆ, ದೀಪಾವಳಿಗೆ ಉತ್ಸಾಹ, ಉಲ್ಲಾಸ ಮತ್ತು ಕೆಲವೊಮ್ಮೆ ಉನ್ಮಾದದಿಂದಲೂ ಬರೆಯುವ ಸಾಹಿತಿಗಳಂತೆ ಪ್ರಶಸ್ತಿಯನ್ನೇ ಕಾದು ಬರೆಯುವವರು ಮತ್ತು ಹೊಂದಾಣಿಕೆ ಸಾಹಿತ್ಯ ವಲಯದಲ್ಲಿ ತಮ್ಮ ಬರೆಹವನ್ನು ಪ್ರಕಟಿಸಿದವರಿಗೆ ಧನ್ಯವಾದಗಳನ್ನು ಹೇಳುವವರು ಕನ್ನಡದಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ. ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯವರಿಗೆ ಈ ಪ್ರಶಸ್ತಿ ಬಾರದಿದ್ದಲ್ಲಿ ಈ ಲೇಖನಗಳಲ್ಲಿ ಅರೆವಾಸಿಯೂ ಲೇಖನಿಗಳಿಂದ ಹೊರಬರುತ್ತಿರಲಿಲ್ಲ. ಆದರೆ ಕನ್ನಡ ಸಾಹಿತ್ಯದ ಮೌಲ್ಯ ಮತ್ತು ಗುಣಮಟ್ಟದ ಬಗ್ಗೆ ಎಚ್ಚರ ಮತ್ತು ಜಾಗೃತಿಯನ್ನು ನೋಡುವುದಕ್ಕೆ ಇದು ಒಳ್ಳೆಯ ಹಾಸನ್ನು ನೀಡಿದೆ.
ಪ್ರಕಟಿತ ಸುದ್ದಿಯೊಂದು ನಮ್ಮ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಕನ್ನಡಿ ಹಿಡಿದಿದೆ. ಬಾನು ಮುಷ್ತಾಕ್ ಅವರು 1990ರಿಂದ ಅಥವಾ ಅದಕ್ಕೂ ಮೊದಲೇ ಕಥೆಗಳನ್ನು ಬರೆಯಲಾರಂಭಿಸಿದ್ದರು. ಮಾಧ್ಯಮ ವರದಿಯಂತೆ 2013ರಲ್ಲಿ ಪ್ರಕಟವಾದ ಬಾನು ಮುಷ್ತಾಕ್ ಅವರ (ಪ್ರಾಯಃ ಸಮಗ್ರ) ಕಥಾಸಂಕಲನವು ಈ 12 ವರ್ಷಗಳಲ್ಲಿ ಕೇವಲ 300 ಪ್ರತಿಗಳ ಮಾರಾಟವನ್ನು ಕಂಡಿದ್ದು ಈ ವಾರದಲ್ಲಿ ಅಂದರೆ ಪ್ರಶಸ್ತಿ ಘೋಷಣೆಯಾದ ಬಳಿಕ ಒಂದೇ ದಿನದಲ್ಲಿ 460 ಪ್ರತಿಗಳ ಮಾರಾಟವನ್ನು ಕಂಡಿದೆಯಂತೆ. ಇದು ಓದಿನ ಮತ್ತು ಮುಖ್ಯವಾಗಿ ವಿಮರ್ಶೆಯ ವ್ಯಕ್ತಿನಿಷ್ಠೆ/ವಸ್ತುನಿಷ್ಠೆಗಳ ಕುರಿತು ಅಲಿಖಿತ ಭಾಷ್ಯದ ಬೆಳಕು ಬೀರಿದಂತಿದೆ.
ಇದನ್ನೇಕೆ ಹೇಳಬೇಕೆಂದರೆ ಈ ಕೃತಿಯ ಕುರಿತು ಬಿಡಿ, ಕೃತಿಕಾರರ ಕುರಿತೂ ಓದುಗರು ಮಾತ್ರವಲ್ಲ, ವಿಮರ್ಶಕರು ಕೂಡಾ ವಿಶೇಷ ಗಮನ ಹರಿಸಿರಲಿಲ್ಲ. ಸಾರಾ ಅಬೂಬಕರ್, ಬಾನು ಮುಷ್ತಾಕ್, ಫಕೀರ್ ಮುಹಮ್ಮದ್ ಕಟ್ಪಾಡಿ, ಬೊಳುವಾರು ಮಹಮದ್ ಕುಂಞಿ, ಅಬ್ದುಲ್ ರಶೀದ್, ರಹಮತ್ ತರೀಕೆರೆ ಇವರೆಲ್ಲ ಕನ್ನಡದ ಪ್ರಮುಖ ಮತ್ತು ಪ್ರಸಿದ್ಧ ಬರೆಹಗಾರರು.(ಆಯ್ಕೆಯ ಸಾಂದರ್ಭಿಕ ಉಲ್ಲೇಖಕ್ಕಾಗಿ ಈ ಕೆಲವು ಮುಸ್ಲಿಮ್ ಬರೆಹಗಾರರನ್ನಷ್ಟೇ ಕಾಣಿಸಿದ್ದೇನೆ. ಇದಕ್ಕೆ ಜಾತಿ/ಮತ ಕಾರಣವಿಲ್ಲ.) ಇವರು ಬರೆದ ಕೃತಿಗಳ ಪೈಕಿ ನಿಮಗಿಷ್ಟವಾದ ಕನ್ನಡದ ಮುಖ್ಯ ಕೃತಿಯೊಂದನ್ನು ಹೆಸರಿಸಿ ಎಂದರೆ ಬಾನು ಮುಷ್ತಾಕ್ ಅವರ ಕೃತಿಗಳನ್ನು ಆದ್ಯತೆಯಲ್ಲಿ ಯಾರೂ ಹೇಳುತ್ತಿರಲಿಲ್ಲವೇನೋ? ಅವರು 1970-80ರ ದಶಕದಿಂದಲೇ ಬರೆಯುತ್ತಿದ್ದವರು. ಸಾರಾ ಅಬೂಬಕರ್, ಅಬ್ದುಲ್ ರಶೀದ್, ಫಕೀರ್ ಮುಹಮ್ಮದ್ ಕಟ್ಪಾಡಿ ಹೀಗೆ ಲಂಕೇಶ್ ಅರಳಿಸಿದ ಕತೆಗಾರರಲ್ಲಿ ಅವರೂ ಒಬ್ಬರು. ಕುತೂಹಲಕ್ಕಾಗಿ ಎಸ್. ದಿವಾಕರ್ ಸಂಪಾದಿಸಿ, ಪ್ರಿಸ್ಮ್ ಬುಕ್ಸ್ 1997ರಲ್ಲಿ ಹಾಗೂ ಬೊಳುವಾರು ಮಹಮ್ಮದ್ ಕುಂಞಿ ಸಂಪಾದಿಸಿ, ಕರ್ನಾಟಕ ಸಾಹಿತ್ಯ ಅಕಾಡಮಿಯು 2001ರಲ್ಲಿ ಪ್ರಕಟಿಸಿದ, ಶತಮಾನದ ಕತೆಗಳನ್ನು ಗಮನಿಸಿದರೆ ಅದರಲ್ಲಿ ಬಾನು ಮುಷ್ತಾಕ್ ಅವರ ಕತೆಗಳಿಲ್ಲ. ಇನ್ನೂ ಕೆಲವು ಇಂತಹ ಸಂಪಾದಿತ ಕಥಾಸಂಕಲನಗಳು ಬಂದಿವೆಯಾದರೂ ನನ್ನ ಗಮನಕ್ಕೆ ತಕ್ಷಣಕ್ಕೆ ಸಿಕ್ಕಿಲ್ಲ. ಇದರರ್ಥ ಬಾನು ಮುಷ್ತಾಕ್ ಒಳ್ಳೆಯ ಕತೆಗಾರರಲ್ಲವೆಂದಲ್ಲ. ಆಯಾಯ ಸಂಪಾದಕರ ಅಭಿರುಚಿಗೆ ಅವರು ಹೊಂದಿಲ್ಲ ಎಂದಷ್ಟೇ ಅರ್ಥ. ಹೀಗೆ ಕೈಬಿಡಲ್ಪಟ್ಟ ಕತೆಗಾರರು ಹಲವರಿದ್ದಾರೆ. ಅವರ ಕುರಿತ ಚರ್ಚೆ ಇಲ್ಲಿ ಅಪ್ರಸ್ತುತ.
ಮಾಮೂಲಾಗಿ ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಿತ ಕೃತಿಗಳ ಬಗ್ಗೆ ಬರೆಯುವವರು ಮೂಲ ಕೃತಿಯನ್ನು ಓದಿದ್ದಾರೆಯೋ ಓದುತ್ತಾರೆಯೋ ಇಲ್ಲವೋ ಅನುವಾದದ ಓದಿಗೆ ಮತ್ತು ಅನುವಾದಕರ ಸ್ಥಾನಮಾನದ ಬಗ್ಗೆ ತಮ್ಮ ಬರೆಹವನ್ನು ಕೇಂದ್ರೀಕರಿಸುತ್ತಾರೆ. (ಬಹುಪಾಲು ಮೂಲ ಕೃತಿ ಮತ್ತು/ಅಥವಾ ಲೇಖಕರು ಓದುಗರಿಗೆ ಮತ್ತು ಓದುಗರು ಮೂಲ ಲೇಖಕರಿಗೆ ಪರಿಚಯವಿರುವುದಿಲ್ಲ!) ‘ಅವರು ಅನುವಾದಿಸಿದ್ದೆಂದ ಮೇಲೆ ಆ ಬಗ್ಗೆ ಚರ್ಚೆಯೇ ಬೇಡ’ ಎಂದವರಿದ್ದಾರೆ. ‘ಮೂಲಕ್ಕಿಂತಲೂ ಉತ್ತಮ’ ಎಂದವರಿದ್ದಾರೆ. ‘ಮೂಲಕೃತಿಯೆಂಬಂತೆ ಓದಿಸಿಕೊಂಡು ಹೋಗುತ್ತದೆ’ ಕೃತಿಯೊಂದರ ಕುರಿತು (ಮೂಲ ಅಥವಾ ಅನುವಾದ) ಯಾರೇ ಮೆಚ್ಚಿದರೂ ಕೃತಿಕಾರನಿಗೆ ಸಂತೋಷವಾಗುತ್ತದೆ. ಅವರು ಅದಕ್ಕಿನ್ನಷ್ಟು ಮಸಾಲೆ ಸೇರಿಸಿ ಹಂಚಿಕೊಳ್ಳುತ್ತಾರೆ ಮತ್ತು ಆ ಮೆಚ್ಚುಗೆಗಾರನ್ನು ಉತ್ಪ್ರೇಕ್ಷಿಸಿ ಹೊಗಳುತ್ತಾರೆ. ದೊಡ್ಡ/ಜನಪ್ರಿಯ/ಹಿರಿಯ ಬರೆಹಗಾರರ ಕುರಿತು ಬರೆದ ಅಲ್ಲಿಯ ವರೆಗೆ ‘ಮೈನರ್‌ರೈಟರ್’ ಆಗಿದ್ದವರು ತಕ್ಷಣದಲ್ಲಿ ‘ಮೇಜರ್‌ರೈಟರ್’ ಆಗುತ್ತಾರೆ. ಸಾಮಾಜಿಕ ಜಾಲತಾಣದ ಸೋಂಕಿನಿಂದಾಗಿ ಈ ಪರಾಕುಪಂಪು ದಿನೇದಿನೇ ‘ಹಿಗ್ಗು’ತ್ತಲೇ ಇದೆ.
ಆದರೆ ಯಾವಾಗ ಬಾನು ಮುಷ್ತಾಕ್ ಅವರಿಗೆ ಈ ಬೂಕರ್ ಪ್ರಶಸ್ತಿ ಬಂತು, ಎಲ್ಲರೂ ಕೃತಿಯನ್ನು ಕೈಬಿಟ್ಟು ಕೃತಿಕಾರರ ಹಿಂದೆ ಓಡಿದ್ದು ಕಳೆದ ಕೆಲವು ದಿನಗಳಲ್ಲಿ ಕಂಡ ಸತ್ಯ. ವಿಶೇಷವೆಂದರೆ ಯಾರೂ ತೌಲನಿಕ ಅಧ್ಯಯನವನ್ನು ಮಾಡುವ ಅಪಾಯ ಇಲ್ಲವೇ ರಿಸ್ಕನ್ನು ಎಳೆದುಕೊಳ್ಳಲಿಲ್ಲ. ಸಂವೇದನಾಶೀಲತೆಯ ಕುರುಹು ಈ ಯಾವ ಬರೆಹಗಳಲ್ಲೂ ಕಾಣಲಿಲ್ಲ.
ಇವೆಲ್ಲ ಹೇಳುವುದು ಲಾಗಾಯ್ತಿನಿಂದ ಬಂದಿರುವ ‘ಯಶಸ್ಸಿಗೆ ಅನೇಕ ತಂದೆಯರು’ (Success has many fathers) ಎಂಬ ಪ್ರಮೇಯವನ್ನು. ಸಾಹಿತಿಗಳ ಅದೃಷ್ಟವೆಂದರೆ ಸಾಹಿತ್ಯದ ಮಟ್ಟಿಗೆ ‘ವೈಫಲ್ಯವು ತಬ್ಬಲಿ’ (Failure is an orphan) ಅಲ್ಲ. ಏಕೆಂದರೆ ಇಲ್ಲಿ ಮುಖ್ಯ, ಜನಪ್ರಿಯ, ಉತ್ತಮ ಎಂಬ ವರ್ಗದಲ್ಲಿ ವೈಫಲ್ಯವನ್ನು ಖಾಯಂ ಆಗಿ ತಬ್ಬಿಕೊಂಡವರನ್ನು ಹೊರತುಪಡಿಸಿ ಮಾಧ್ಯಮಗಳ ಮೂಲಕ ಪ್ರಕಟಗೊಂಡ ಇತರ ಬಹುಪಾಲು ಬರೆಹಗಾರರನ್ನು ಎಲ್ಲಾದರೊಂದು ಕಡೆ ನಿಲ್ಲಿಸಬಹುದು. ಏಕೆ ಹೀಗೆ?
ಬಾನು ಮುಷ್ತಾಕ್ ಕಳೆದ ಮೂರು ದಶಕಗಳಿಗಿಂತಲೂ ದೀರ್ಘಾವಧಿಯಲ್ಲಿ ಬರೆದ ಈ ಕನ್ನಡ ಕಥೆಗಳು ಮುಸ್ಲಿಮ್ ಸಂವೇದನೆಯ ಅದರಲ್ಲೂ ಶೋಷಿತರ ಪರವಾದ ಮಹಿಳೆಯ ದೃಷ್ಟಿಕೋನವನ್ನು ಅನಾವರಣ ಮಾಡಿತ್ತು ಮತ್ತು ಕನ್ನಡ ಸಾಹಿತ್ಯಕ್ಕೆ ಅಪರಿಚಿತ ಮತ್ತು ಅಪರೂಪವೆನಿಸುವ ಅನೇಕ ವಾಸ್ತವ ಸತ್ಯಗಳೂ ಸಾಹಿತ್ಯ ಸತ್ಯಗಳೂ ಹೊರಬಂದವು. ಅಕಡಮಿಕ್ ವರ್ತುಲದ ಹೊರಗಿನ ಒಬ್ಬ ಮಹಿಳೆ (ಬಾನು ಮುಷ್ತಾಕ್ ಒಬ್ಬ ವಕೀಲರು) ಬರೆದದ್ದು ಎಂಬುದು ಇನ್ನೂ ಪ್ರಸ್ತುತವಾಗಿತ್ತು. ವೈಚಾರಿಕವೆನ್ನುವುದಕ್ಕಿಂತ ಈ ಕಥೆಗಳು ಭಾವನಾತ್ಮಕವಾಗಿ ಮತ್ತು ಬಂಡಾಯದ ಕ್ರಾಂತಿಕಾರಿ ದೃಷ್ಟಿಯನ್ನು ಹೊಂದಿದ್ದವು. ಬರೆಹದ ಶೈಲಿಯಲ್ಲಿ ಹೊಸತೇನೂ ಇರಲಿಲ್ಲ. ಸ್ವಲ್ಪ ಅಡಿ ತಪ್ಪಿದರೂ ಮೆಲೊಡ್ರಮಾಟಿಕ್ ಆಗಬಹುದಾದ ಅಪಾಯವನ್ನು ಅವರ ಕಥೆಗಳು ಎದುರಿಸಿದ್ದವು. ಅದಕ್ಕಿಂತ ಹೆಚ್ಚಿನ ಮಜಲುಗಳನ್ನು ಈ ಕಥೆಗಳು ಹೊಂದಿದ್ದವು ಎಂಬುದು ಉತ್ಪ್ರೇಕ್ಷೆಯಾಗಬಹುದು. ಲಂಕೇಶ್ ಇಂತಹ ಅನೇಕ ಕಥೆಗಾರರನ್ನು ಮುಂದೆ ತಂದಿದ್ದರು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಬಾನು ಮುಷ್ತಾಕ್ ಅವರ ಕಥೆಗಳ ಈ ಇಂಗ್ಲಿಷ್ ಅನುವಾದವನ್ನು ಅವಲೋಕಿಸುವುದು ಹೆಚ್ಚು ವಿವೇಕಯುತವಾಗಬಹುದು. ಮೂಲ ಕಥೆಗಳ ಆಶಯ, ಅನುವಾದದಲ್ಲಿ ಅವುಗಳ ಸಾರ್ಥಕತೆ, ಈ ಕುರಿತು ಪ್ರತ್ಯೇಕ ವಿಶ್ಲೇಷಣೆಯನ್ನು ಮಾಡಬೇಕು.
ಅನುವಾದಕರು ಕಥೆಗಳ ಆಯ್ಕೆಯ ಮತ್ತು ಅನುವಾದಕ್ಕೆ ಬಳಸಿದ ಭಾಷೆಯ/ಪದಗಳ ತಂತ್ರಗಾರಿಕೆಯ ಕುರಿತು ‘ಇಟಾಲಿಕ್ಸ್‌ಗೆ ಪ್ರತಿಯಾಗಿ’ (Against Italics) ಎಂಬ ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ. ಇದು ಇಟಾಲಿಕ್ಸ್ ಎಂಬ ಓರೆಬರೆಹಕ್ಕೆ ಸೀಮಿತವಾಗಿಲ್ಲ. ಈ ಟಿಪ್ಪಣಿಯು ತಾನಾಗಿಯೇ ಭಾಷಾಶಾಸ್ತ್ರದ ಮೀಮಾಂಸೆ ಅಥವಾ ಅನುವಾದದ ಸಂಹಿತೆಯಾಗಬಹುದು; ಅನೇಕರಿಗೆ ಮಾರ್ಗದರ್ಶಕವಾಗಬಹುದು. ಯಾವುದೇ ಭಾಷೆಗೆ ಇನ್ನೊಂದು ಭಾಷೆಯಿಂದ ಬರುವ ವಿಚಾರಗಳು ಆ ಸಂಸ್ಕೃತಿಯ ಒಡಲನ್ನೂ ಬಗೆದುಕೊಂಡು ಬರುತ್ತವೆ. ಮಾಮೂಲಾಗಿ ಮೂಲಭಾಷೆಯಿಂದ ಅನುವಾದಿತ ಭಾಷೆಗೆ ಬರುವಾಗ ಅನುವಾದಕರು ಮೂಲಪದಕ್ಕೆ ಸಮಾನದ ಅಥವಾ ಅದನ್ನು ನಿರೂಪಿಸುವ ಪದಗಳನ್ನು ಹುಡುಕುತ್ತಾರೆ ಇಲ್ಲವೇ ಮೂಲಪದವನ್ನು ‘ಇಟಾಲಿಕ್ಸ್’ನಲ್ಲಿ ಕಾಣಿಸಿ ಇಲ್ಲೇನೋ ವಿಶೇಷವಿದೆ, ಅರ್ಥವನ್ನು ಕಂಡುಕೊಳ್ಳಿ ಎನ್ನುವ ಸೂಚನೆಯನ್ನು ನೀಡುತ್ತಾರೆ. ಇದು ಹೊರತಾಗಿ, ಇಟಾಲಿಕ್ಸ್‌ಗೆ ಬೇರೆ ಪ್ರಾಮುಖ್ಯತೆಯಿಲ್ಲ. ಇಂಗ್ಲಿಷಿನಲ್ಲಿ ಯಾವುದೇ ಪರಭಾಷೆಯ ಪದಗಳನ್ನು ಅದರ ಮೂಲ ಮಹತ್ವವನ್ನು ಕುಗ್ಗಿಸದೆ ಬಳಸಲು ಸಾಧ್ಯವಿಲ್ಲದಾಗ ಇಟಾಲಿಕ್ಸಿನಲ್ಲಿ ಬಳಸುವುದು ಮತ್ತು ಕೊನೆಯಲ್ಲಿ ಅಂತಹ ಪದಗಳ ಅರ್ಥವಿವರಣೆ ಮತ್ತು ನಿರೂಪಣಾ ಸಂದರ್ಭವನ್ನು ನೀಡುವುದು ಸಾಮಾನ್ಯವಾಗಿದೆ. ಈ ಕೃತಿಯ ಅನುವಾದಕರು ಇಟಾಲಿಕ್ಸ್‌ನ್ನು ಒಂದು ರೂಪಕವಾಗಿ ಬಳಸಿದ್ದಾರೆ. ಇನ್ನೊಂದು ಭಾಷೆಯ ಪದಕ್ಕೆ ಪರ್ಯಾಯ ಅಥವಾ ಸಮನಾದ ಪದಗಳಿಲ್ಲದಿದ್ದಲ್ಲಿ ಅಥವಾ ಬಳಸುವ ಪದ ಮೂಲಪದದ ಮಹತ್ವವನ್ನು ಬದಲಿಸುವ ಅಪಾಯವಿರುವುದರಿಂದ ಆ ರೀತಿಯ ವ್ಯರ್ಥಶ್ರಮಕ್ಕೆ ಹೋಗದೆ ಅಂತಹ ಸಂದರ್ಭಗಳಲ್ಲಿ ಮೂಲಪದಗಳನ್ನು ಯಥಾವತ್ತಾಗಿ ಯಾವುದೇ ಅಡ್ಡಪಂಕ್ತಿಯಿಲ್ಲದೆ ಬಳಸಿದ್ದಾರೆ. ಓದುಗನು ಈ ಪದಗಳ ಜಾಡು ಹಿಡಿದು ಹೋಗಬೇಕಾಗಿದೆ. ಈ ಮೂಲಕ ಇನ್ನೊಂದು ಭಾಷೆಯ ಪದಗಳನ್ನು ಆತ ತನ್ನದಾಗಿಸಬಹುದು. ಎಲ್ಲವನ್ನೂ ಹೀರಿಕೊಳ್ಳಬಲ್ಲ ಸಾಮರ್ಥ್ಯವಿರುವ ಮತ್ತು ನದಿಗಳ ನೀರೆಷ್ಟೇ ಬಂದರೂ ತನ್ನ ಮಟ್ಟವನ್ನು ಕಾಯ್ದುಕೊಳ್ಳಬಲ್ಲ ಸಮುದ್ರದಂತೆ (ಇಲ್ಲಿ ಸ್ಪಾಂಜ್ ಎಂಬ ಪದವನ್ನು ಬಳಸಿದ್ದಾರೆ) ಇಂಗ್ಲಿಷ್ ಅನುವಾದಗಳಿಗೆ ಈ ಅನುಕೂಲವಿದೆ. ಇದಕ್ಕೆ ಕಾರಣಗಳನ್ನು ಅವರು ನೀಡಿದ್ದಾರೆ. ಅವು ಸಮರ್ಥನೀಯವೂ ಆಗಿವೆ. (ಇಲ್ಲವಾದರೆ ಗಂಧ ಎಂಬ ಪದಕ್ಕೆ ಸ್ಯಾಂಡಲ್‌ಪೇಸ್ಟ್ ಅಥವಾ ತೀರ್ಥ ಎಂಬ ಪದಕ್ಕೆ ಹೋಲಿವಾಟರ್ ಎಂದು ಬಳಸಿದಂತಾಗುತ್ತದೆ ಮತ್ತು ಅಂತಹ ಅನುವಾದಗಳು ಸಾಕಷ್ಟಿವೆ!) ಆದ್ದರಿಂದ ಅರೆ, ಚೆ, ಸೆರಗು, ಅತ್ತಿಗೆ ಮುಂತಾದ ಪದಗಳ ವರೆಗೆ ಅರ್ಥಕ್ಕಾಗಿ ಇನ್ನೊಂದು (ಕನ್ನಡ/ಭಾರತೀಯ) ಸಂಸ್ಕೃತಿಯ ಒಡನಾಡಿಯಾಗುವುದು ಕನ್ನಡ ಬಾರದ ಓದುಗನೊಬ್ಬನಿಗೆ ಅನಿವಾರ್ಯವಾಗಬಹುದು. (ಈ ಕೃತಿಯಲ್ಲೂ ಪ್ರಾಯಃ ಅನುದ್ದಿಶ್ಯವಾಗಿ ಪುಟ 201ರ ಕೊನೆಯ ಪ್ಯಾರಾದಲ್ಲಿ ಇಟಾಲಿಕ್ಸ್ ಬಳಸಲಾಗಿದೆ!)
ಮೂಲ ಲೇಖಕರು ಮತ್ತು ಅನುವಾದಕರು ವಿಭಿನ್ನ ಮತಧರ್ಮಗಳಿಗೆ ಸೇರಿರುವುದು ಆಕಸ್ಮಿಕ. ಆದರೆ ಈ ವಿಚಾರದ ಮತ್ತು ಅದರ ಸಾಂದರ್ಭಿಕ ಪ್ರತಿಕ್ರಿಯೆಗಳ, ಒತ್ತಡದ ಅರಿವು ಅನುವಾದಕರಿಗಿದೆ. ಅವರು ತಮ್ಮ ಟಿಪ್ಪಣಿಯಲ್ಲಿ ‘ಬಾನು ಅವರ ಕೃತಿಗಳನ್ನು ಅವರ ಧಾರ್ಮಿಕ ಗುರುತಿಗೆ ಸೀಮಿತಗೊಳಿಸುವುದು ಅನ್ಯಾಯವಾಗುತ್ತದೆ, ಏಕೆಂದರೆ ಅವರ ಕಥೆಗಳು ಒಂದು ನಂಬಿಕೆ ಮತ್ತು ಅದರ ಸಾಂಸ್ಕೃತಿಕ ಸಂಪ್ರದಾಯಗಳ ಮಿತಿಗಳನ್ನು ಮೀರುತ್ತವೆ. ಅದೇನೇ ಇದ್ದರೂ, ಒಂದು ದಶಕದ ತೀವ್ರ ಬಲಪಂಥೀಯ ರಾಜಕೀಯವು ಹಿಂದುತ್ವ ನೇತೃತ್ವದ ಬಹುಸಂಖ್ಯಾತವಾದಕ್ಕೆ ಅಪಾಯಕಾರಿಯಾಗಿ ಇಳಿದಿರುವ ಇಂದಿನ ಭಾರತದಲ್ಲಿ, ಅಲ್ಪಸಂಖ್ಯಾತರ ಮೇಲಿನ ದ್ವೇಷ ಮತ್ತು ತೀವ್ರ ಕಿರುಕುಳ - ಅಂತಹ ಹಿಂಸಾಚಾರದ ಪುನರಾವರ್ತನೆಗಳು ಪ್ರಪಂಚದ ಇತರ ಹಲವು ದೇಶಗಳಲ್ಲಿಯೂ ಕಂಡುಬರುತ್ತವೆ, ಎಂಬುದನ್ನು ನಾವು ಮರೆಯಬಾರದು- ಮತ್ತು ಅವರು ವಾಸಿಸುವ ಮತ್ತು ಕೆಲಸ ಮಾಡುವ ಪರಿಸರವನ್ನು ಗಮನಿಸುವುದು ಅತ್ಯಗತ್ಯ’ ಎಂದು ಗಮನಿಸಿದ್ದಾರೆ.
ಹೊಳೆದದ್ದೆಲ್ಲಾ ಹೊನ್ನಲ್ಲ ಎಂದದ್ದೂ ಹೊಳೆದದ್ದು ತಾರೆ, ಉಳಿದದ್ದು ಆಕಾಶ ಎಂದದ್ದೂ ಕನ್ನಡವೇ. ಸಾಕಷ್ಟು, ಬೇಕಷ್ಟು, ಒಳ್ಳೆಯ ಸಾಹಿತ್ಯವಿರುವ ಕನ್ನಡ ಭಾಷೆ ಇಂತಹದ್ದೊಂದು ಸಾಗರೋತ್ತರ ಪ್ರಶಸ್ತಿಯ ಹನುಮದ್ವಿಕಾಸಕ್ಕೆ ಕಾಯುತ್ತಿತ್ತು. ಈ ಅದೃಷ್ಟವನ್ನೊದಗಿಸಿದ ಕಥೆಗಾರ್ತಿ ಬಾನು ಮುಷ್ತಾಕ್ ಮತ್ತು ಅದನ್ನು ಅನುವಾದದ ಹೆಗಲಿನಲ್ಲಿ ಹೊತ್ತು ಸೀಮೋಲ್ಲಂಘನದ ದಿವ್ಯವನ್ನು ಮೆರೆಸಿದ ದೀಪಾ ಭಾಸ್ತಿಗೆ ದೊಡ್ಡ ಸಲಾಮ್.