Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ವಿಕಾಸದ ಕೊನೆಯ ಹಂತ

ವಿಕಾಸದ ಕೊನೆಯ ಹಂತ

ವಾರ್ತಾಭಾರತಿವಾರ್ತಾಭಾರತಿ26 Jun 2025 1:12 PM IST
share
ವಿಕಾಸದ ಕೊನೆಯ ಹಂತ
ವಿಕಾಸ ಬಲೂನಿನ ಗಾಳಿಯಂತೆ. ಒಂದು ಹಂತದ ವರೆಗೆ ಅದು ಒಳಗೆ ಗಾಳಿ ತುಂಬಿಸಿದಂತೆಲ್ಲ ಎಷ್ಟೂ ಉಬ್ಬಬಹುದು; ದೊಡ್ಡದಾಗಬಹುದು. ಆದರೆ ಆಮೇಲೆ ಒಡೆಯಲೇಬೇಕು. ಒಳಗಿನ ಗಾಳಿ ಹೊರಗಿನ ಗಾಳಿ-ಗಂಧದೊಂದಿಗೆ, ಬೆರೆಯಲೇಬೇಕು; ಬೆಸೆಯಲೇಬೇಕು. ಸೂಜಿಮೊನೆ ನೆಪ ಮಾತ್ರ. ಹಾಗೆಯೇ ವ್ಯಕ್ತಿಯೂ ತಾನು ತನ್ನ ಅನುಕೂಲವನ್ನಷ್ಟೇ ಸೃಷ್ಟಿಸಿಕೊಂಡು ವಿಕಾಸವಾಗಿ ಎಷ್ಟೇ ದೊಡ್ಡವನಾದರೂ ಒಂದು ಹಂತದ ಬಳಿಕ ಹೊರಪ್ರಪಂಚದೊಂದಿಗೆ ಸೇರಲೇ ಬೇಕು. ಇಲ್ಲವಾದರೆ ಅದು ವಿಕಾಸವಲ್ಲ; ವಿನಾಶ. ವಿಕಾಸವೆಂದರೆ ವಿಶಾಲವಾಗುತ್ತ ಹೋಗುವುದು. ಮನಸ್ಸು ವಿಶಾಲವಾದರೆ ಅದು ಎಲ್ಲರ ವಿಕಾಸವನ್ನು ಬಯಸುತ್ತದೆ. ಇಲ್ಲವಾದರೆ ವಿಕಾಸದ ಹೆಸರಿನಲ್ಲಿ ತಾನೂ ತನ್ನವರೂ ಬೆಳೆಯುವುದನ್ನು ಅಪೇಕ್ಷಿಸಿ ಇತರರು ನಾಶವಾಗುವುದನ್ನು ನೋಡನೋಡುತ್ತಲೇ ತಾನೂ ಅದರೊಂದಿಗೆ ನಾಶವಾಗಬೇಕಾಗುತ್ತದೆ. ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತಯ್ಯ ಎನ್ನಲಿಲ್ಲವೇ ಶರಣರು?

ಮುಂದಿನ ಸಾಲಿನ ನೊಬೆಲ್ ಪ್ರಶಸ್ತಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪಾಕಿಸ್ತಾನ ಶಿಫಾರಸು ಮಾಡಿದೆಯೆಂಬ ಸುದ್ದಿ ಬಂದಿದೆ. ಈ ಫೇಕುಯುಗದಲ್ಲಿ ಇದನ್ನು ಸತ್ಯವೆಂದು ನಂಬುವುದು ಕಷ್ಟವಾದರೂ ಇದು ನಗುವುದಕ್ಕೂ ಚಿಂತಿಸುವುದಕ್ಕೂ ಒಂದು ಅವಕಾಶವನ್ನಂತೂ ಸೃಷ್ಟಿಸಿದೆ. ಚಿಂತನೆಯೂ ಸಾಧ್ಯವೆಂಬುದು ಬಲ್ಲವರು ಕಾಣುವ ಸತ್ಯ.

ಇಂತಹ ನೂರಾರು ರೋಚಕ ಮತ್ತು ಅಸಹ್ಯ ಹಾಗೂ ಜಿಗುಪ್ಸೆ ಹುಟ್ಟಿಸುವ ಸುದ್ದಿಗಳು ನಮ್ಮನ್ನು ನಿತ್ಯ ಸುತ್ತುವರಿದು ಕಾಡುತ್ತಿವೆ. ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ತಮ್ಮ ದೈನಂದಿನ ಪ್ರತಿಭೆಯನ್ನು ಮಾರಕಾಸ್ತ್ರಗಳಂತಿರುವ ಸತ್ಯ ಅಥವಾ ಸುಳ್ಳು ಸುದ್ದಿಗಳನ್ನು ಪ್ರಸರಿಸುವುದಕ್ಕೆ ಮತ್ತು ಬಹಳಷ್ಟು ಬಾರಿ ಸುಳ್ಳು ಸುದ್ದಿಗಳನ್ನು ಪ್ರಚಾರಮಾಡುವುದಕ್ಕೆ ಬಳಸುತ್ತಿರುವುದು ಮಾಮೂಲಾಗಿದೆ. ವಿದ್ಯುನ್ಮಾನ ಸುದ್ದಿಗಳ ಕಿರುಚಾಟವೇ ಒಂದು ದುಸ್ಥಿತಿ. ನಿತ್ಯ ಅದೆಷ್ಟು ಜನರು ಸತ್ತರು, ಹಿಂಸೆಗೀಡಾದರು ಮುಂತಾದ ಸುದ್ದಿಗಳೇ ಮಾಧ್ಯಮದ ಪ್ರಮುಖ ಸಮಯ ಮತ್ತು ಜಾಗಗಳನ್ನು ಆವರಿಸುತ್ತದೆಯಾದ್ದರಿಂದ ಪತ್ರಿಕೆಗಳನ್ನು ತೆರೆದರೆ ಸಾಕು ಅಂಗೈ ನೋಡಿ ಅವಲಕ್ಷಣ ಹೇಳಿಸಿಕೊಂಡರು ಎಂಬಂತಿದೆ ಪ್ರಜ್ಞಾವಂತರ ಪಾಡು. ಬುದ್ಧಿವಂತರು ಇವನ್ನು ದೂರವಿಡುತ್ತಾರಾದರೂ ಕೆಲವೊಮ್ಮೆ ಅನಿವಾರ್ಯವಾಗಿ ಸುದ್ದಿಗಳನ್ನು ಕೇಳಿ, ನೋಡಿ, ಓದಿ ಅಣಕಿಸಿಕೊಳ್ಳುವುದು, ಕೆಣಕಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಮೌನ ಅಥವಾ ಒಂಟಿತನ ಅದಲ್ಲದಿದ್ದರೆ ಸುತ್ತ ಯಾರೂ ಇಲ್ಲದಿರುವುದೇ ಒಳ್ಳೆಯದು ಎಂಬ ಅಭಿಪ್ರಾಯ ಕೆಲವರಿಗಂತೂ ಬಂದಿರಬಹುದು. ಈ ಸದ್ದುಗದ್ದಲದ ನಡುವೆ ಸಮಾಧಾನ, ನೆಮ್ಮದಿ, ಶಾಂತಿ ಇವನ್ನು ಹುಡುಕುವುದು ದುಸ್ತರವೇ ಸರಿ. ವಿಕಾಸದ ಕೊನೆಯ ಹಂತ ವಿನಾಶವೇ ಎಂದು ಕೇಳಿಕೊಳ್ಳುವಂತೆ ಇಂದು ದಿನ ಸಾಗುತ್ತಿದೆ.

ಒಂದು ಹಂತದವರೆಗೆ ವಿಕಾಸ ಸುಖ, ಸಂತೋಷ ತರುತ್ತದೆ. ಆ ಮೇಲೆ? ಅದಕ್ಕೂ ಒಂದು ಮಿತಿಯಿದೆ. ಅಣುಶಕ್ತಿಯನ್ನು ಸಂಶೋಧಿಸುವ ವರೆಗೆ ಮತ್ತು ಅದರ ಅಪಾರ ಶಕ್ತಿಯನ್ನು ಊಹಿಸುವವರೆಗೆ ಅದೊಂದು ಕೌತುಕ, ಕುತೂಹಲ. ಎರಡನೇ ಮಹಾಯುದ್ಧದಲ್ಲಿ ಅಮೆರಿಕ ಹಿರೋಶಿಮಾ-ನಾಗಸಾಕಿಯ ಮೇಲೆ ಅಣ್ವಸ್ತ್ರದ ಮಳೆಯನ್ನು ಸುರಿಸುವ ವರೆಗೆ ಅಥವಾ ಅದಾದ ಮೇಲೂ ವಿಕಾಸದ ಪರಿಕರಗಳ ಮೂಲಕ ಹಿಂಸೆ ಅಥವಾ ಯುದ್ಧ ಶಾಂತಿಯನ್ನು ತರುತ್ತದೆಯೆಂದೇ ಜನರು ನಂಬಿದ್ದರು. ಇದರ ದುರಂತ, ದುಷ್ಪರಿಣಾಮಗಳನ್ನು ಚುಚ್ಚುಮದ್ದಿನಂತೆ ಸಹಜ ಮತ್ತು ಅನಿವಾರ್ಯವಾದ ಅಡ್ಡ ಪರಿಣಾಮಗಳೆಂದೇ ಜನರು ಭಾವಿಸಿದ್ದರು. ಆದರೆ ತಲೆಮಾರುಗಳ ನಂತರವೂ ಈ ಪ್ರದೇಶದ ಜನರು ರೋಗಗ್ರಸ್ತರಾಗಿ, ಅಂಗವಿಕಲರಾಗಿ, ಬಳಲುವುದನ್ನು ಕಂಡವರು, ಕೇಳಿದವರು ಯುದ್ಧದಿಂದಾಗಿ ಸಂಭವಿಸುವುದು ಶಾಂತಿಯಲ್ಲ, ಬದಲಾಗಿ ಮೂಕರೋದನವೆಂದು, ಉಳಿದವರಿಗಿಂತ ಅಳಿದವರೇ ಹೆಚ್ಚು ಅದೃಷ್ಟಶಾಲಿಗಳು ಎಂದು ಅರಿತರು. ಎಲ್ಲ ಯುದ್ಧಗಳನ್ನು ನಿಲ್ಲಿಸುವ ಯುದ್ಧಗಳು ಎಂಬುದು ಗತದಲ್ಲೂ ಇರಲಿಲ್ಲ, ಭವಿಷ್ಯದಲ್ಲೂ ಇಲ್ಲವೆಂಬುದನ್ನು ವರ್ತಮಾನದ ಸ್ಥಿತಿ ಮನದಟ್ಟುಮಾಡಿದೆ. ಬದುಕು ಯುದ್ಧ, ಅನಾರೋಗ್ಯ ಮುಂತಾದ ಬಿಕ್ಕಟ್ಟುಗಳಿಂದಾಗಿ ಎಷ್ಟೊಂದು ಅನಿಶ್ಚಿತವಾಗಿದೆಯೆಂದರೆ ಪ್ರತೀ ಘಳಿಗೆಯೂ ಬದುಕಿನ ಕೊನೆಯ ಘಳಿಗೆಯೇ ಇರಬಹುದೆಂದು ನಂಬುವುದೇ ನಿರೀಕ್ಷೆಯಿಲ್ಲದ, ಆತಂಕಭರಿತ ನೆಮ್ಮದಿಯನ್ನು ನೀಡುವ ಅಂಶವಾಗಿರಬಹುದೆಂದು ಜ್ಞಾಪಿಸುತ್ತದೆ. ಇಷ್ಟಾದರೂ ಜೀವಿಗಳ ಪೈಕಿ ಪ್ರಾಣಿಗಳು ತಮ್ಮ ಅಸ್ತಿತ್ವಕ್ಕಾಗಿ ಉರುಳಾಟ ನಡೆಸಿದರೆ ಮನುಷ್ಯ ಮಾತ್ರ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಲು ಜೈತ್ರಯಾತ್ರೆ ಹೊರಟವನಂತಿದ್ದಾನೆ.

ಬದುಕಿನ ಆರಂಭಕ್ಕೆ ಹೋಗೋಣ: ನಮ್ಮಲ್ಲಿ ಪೋಷಕರು ಮಕ್ಕಳಿಗೆ ಒಳ್ಳೆಯ ಮನೋಧರ್ಮ ಬೆಳೆಯುವ ಕಥೆಗಳನ್ನು, ಉದಾಹರಣೆಗಳನ್ನು ಹೇಳಬೇಕೆಂಬ ಒಂದು ಅಲಿಖಿತ ನೀತಿಯಿದೆ. ಹಸಿಮಣ್ಣಿನ ಗೋಡೆಯಂತಿರುವ ಮಕ್ಕಳಿಗೆ ಏನು ಎಸೆದರೂ ಅದು ಆ ಗೋಡೆಯಲ್ಲಿ ಭದ್ರವಾಗಿ ನಿಲ್ಲುತ್ತದೆಯೆಂಬ ನಂಬಿಕೆ. ಬೆಳೆಯುತ್ತ ಎಂತಹ ಪರಿವರ್ತನೆಯಾಗುತ್ತದೆಯೋ ಗೊತ್ತಿಲ್ಲವಾದರೂ ಅಂತೂ ಬುನಾದಿ ಚೆನ್ನಾಗಿರಬೇಕೆಂಬ ಈ ವಿಶ್ವಾಸವನ್ನು ತಿರಸ್ಕರಿಸಲಾಗದು. ಬದುಕಿನಲ್ಲಿ ಅಶ್ಲೀಲವೆಂದಾಕ್ಷಣ ಜನರಿಗೆ ಲೈಂಗಿಕತೆಯೊಂದೇ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಅನಾರೋಗ್ಯವೂ, ಕೆಟ್ಟ ಚಟಗಳೂ, ಹಿಂಸೆಯೂ ಅಷ್ಟೇ ಅಶ್ಲೀಲವೆಂಬುದು ಅಷ್ಟಾಗಿ ಅರ್ಥವಾಗುವುದಿಲ್ಲ. ಶೀಲಕ್ಕೆ ಹೊರತಾದದ್ದೆಲ್ಲ ಅಶ್ಲೀಲವೇ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...’ ಮುಂತಾದ ನಿಷಿದ್ಧಗಳೆಲ್ಲ ಇಂತಹ ಅಶ್ಲೀಲದ ಕುರಿತೇ ಹೇಳಿದ್ದು. ಆದ್ದರಿಂದ ಮಕ್ಕಳ ಮನೋಧರ್ಮವು ಅದರ ಕಡೆ ಹೊರಳಬಾರದು, ಶಾಂತಿಯನ್ನು ಬಯಸುವತ್ತ ನೆಲೆನಿಲ್ಲಬೇಕೆಂಬ ಬಯಕೆಯು ವಿವೇಕಿ ಹೆತ್ತವರಿಗಿರುತ್ತದೆ.

ಆದರೆ ಬೌದ್ಧಿಕವಾಗಿ ಪ್ರೌಢವೆಂದು ಭಾವಿಸಲು ಆರಂಭವಾದದ್ದೇ ತಡ, ಈ ಎಲ್ಲ ನಿಷಿದ್ಧಗಳು ಬದುಕಿನ ವಾಸ್ತವತೆಯೆಂದು ಗೊತ್ತಾಗುತ್ತದೆ. ಜಗತ್ತು ಹೂವಿನ ಹಂದರವಲ್ಲ, ಅದು ಸುಂದರವಲ್ಲವೆಂಬ ಕಟು ಸತ್ಯವು ಗೊತ್ತಾಗುವಾಗ ಬಾಲ್ಯವೇ ಚೆನ್ನಾಗಿತ್ತು ಎಂದು ಅನ್ನಿಸಲಾರಂಭಿಸುತ್ತದೆ. ಆದರೆ ವಾಸ್ತವ ಬದಲಾಗದು. ಅದನ್ನು ಹೊತ್ತುಕೊಂಡೇ ಬದುಕಬೇಕು. ನಮ್ಮ ಅನೇಕ ಬೌದ್ಧಿಕ ವಿದ್ವಾಂಸರುಗಳು ವಾಸ್ತವತೆಯ ಹೆಸರಿನಲ್ಲಿ ಈ ನಿಷಿದ್ಧಗಳೆಲ್ಲ ರಸರೂಪಿಯಾಗಿ ಮೂಡಿಸಿದ್ದಾರೆ. ಅಹಿಂಸೆಯ ಕುರಿತು ಮನಮುಟ್ಟುವಂತೆ ಉಪದೇಶಿಸಿದ ಕವಿಗಳೇ ಹಿಂಸೆಯನ್ನು, ಶೃಂಗಾರವನ್ನು, ಭಯಾನಕ-ಬೀಭತ್ಸ-ರುದ್ರವನ್ನು ವರ್ಣಿಸುವ ನೆಪದಲ್ಲಿ ಈ ನಿಷಿದ್ಧಗಳನ್ನೆಲ್ಲ ಅಗತ್ಯ ವಾಸ್ತವವೆಂದೇ ತೋರಿಸಿದರು. ಹಿಂಸೆಯನ್ನು ಹಲವು ವಿಧದಲ್ಲಿ ವಿವರಿಸುವಾಗಲೂ ಯಾವ ಪ್ರತಿಭಾವಂತನೂ, ಪಂಡಿತನೂ ಹಿಂದೆ ಬಿದ್ದಿಲ್ಲ. ಕನ್ನಡ-ಹಳೆಗನ್ನಡ ಕಾವ್ಯಗಳಲ್ಲಿ ಶಾಂತರಸವಾದ ಅಹಿಂಸೆಯ ಬಗ್ಗೆ ವಿವರಣೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಹಿಂಸೆಯ ರುದ್ರ ನರ್ತನದ ಬಗ್ಗೆ ಇವೆ. ವೈರಾಗ್ಯದ ಬಗ್ಗೆ ಇರುವುದಕ್ಕಿಂತ ಹೆಚ್ಚು ಕಾಮದ, ರೋಗರುಜಿನದ ಬಗ್ಗೆ ಇದೆ.

ಕನ್ನಡದ ಕಾವ್ಯ ಸಂದರ್ಭವನ್ನು ನೆನಪಿಸಿದರೆ ಆದಿಪುರಾಣದ ಮೂಲಕ ಜಿನಾಗಮವನ್ನು ಹೇಳಿದರೂ ವಿಕ್ರಮಾರ್ಜುನವಿಜಯವೆಂಬ ಮಹಾಭಾರತವನ್ನು ಬರೆದು ಲೌಕಿಕವನ್ನು ವರ್ಣಿಸಿದ ಪಂಪನಾಗಲೀ, ರನ್ನನಾಗಲೀ, ಜನ್ನನಾಗಲೀ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲೆಡೆ ಯುದ್ಧದ ರಮಣೀಯ ವಿವರಣೆಗಳಿವೆ. ಕುಮಾರವ್ಯಾಸ ಭಾರತದಲ್ಲಂತೂ ‘ಮಾರಿಗೌತಣ’ವನ್ನು ಯಥೇಚ್ಛವಾಗಿ ಬಡಿಸಲಾಗಿದೆ. ‘ಒರಸಿದನು ಹದಿನೆಂಟು ಸಾವಿರ ಕರಿಘಟೆಯನೈವತ್ತು ಸಾವಿರ ತುರಗವನು ಮೂವತ್ತು ಸಾವಿರ ವರ ಮಹಾರಥರ ಧುರದಿ ಲಕ್ಷ ಪದಾತಿಯನು ಸಂಹರಿಸಿ..’ ಎಂಬ ವಿವರಣೆಗಳಿವೆ. ಇನ್ನೊಂದೆಡೆ ‘ಕೊಂದನು ಖಡ್ಗ ಮನದಣಿಯೆ..’ ‘ಶಾಕಿನಿಯರೋಕುಳಿಯ ಧಾರೆಯ ಜೀಕೊಳವೆಯೋ ಜವನ ಜಳಜಂತ್ರಾಕರುಷಣವೊ ರಕುತ ಲತೆಗಳ ಕುಡಿಯ ಕೊನರುಗಳೊ ನೂಕಿ ಕೊಯ್ಗರುಳುಗಳ ಮುಂಡದ ಮೂಕಿನಲಿ ನೆಗೆದೊಗುವ ನೆತ್ತರು ನಾಕವನು ನಾದಿದುದೆನಲು ಸವರಿದನು..’ ಎಂದಿವೆ. ಕುವೆಂಪು ‘ಶ್ಮಶಾನ ಕುರುಕ್ಷೇತ್ರಂ’, ‘ರಕ್ತಾಕ್ಷಿ’ ಮುಂತಾದ ನಾಟಕಗಳ ಮೂಲಕ ಹಿಂಸೆಯನ್ನು ಕಡುವಾಗಿ ಹೇಳಿದ್ದಾರೆ. ಅಡಿಗರೂ ಹೆಣದ ಬಣವೆಯ ಕೆಳಗೆ ಬಿದ್ದ ಮಗುವನ್ನೂ ಕಾಣಿಸಿದ್ದಾರೆ. ‘ವಡ್ಡಾರಾಧನೆ’ಯಲ್ಲಿ, ‘ಯಶೋಧರ ಚರಿತೆ’ಯಲ್ಲಿ ಕೊಳಕು ದೇಹ ಮತ್ತು ಮನಸ್ಸಿನ ವರ್ಣನೆಗಳಿವೆ. ಸಿನೆಮಾಗಳಲ್ಲಂತೂ ಹಿಂಸೆ ಮತ್ತು ಲೈಂಗಿಕತೆಗಳು ಮನರಂಜನೆಯ ಹೆಸರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ಇವು ಕಥೆಗೆ, ಕಥಾವಸ್ತುವಿಗೆ ಅಗತ್ಯವೆಂಬ ನೆಪಗಳು ಕಾರಣಗಳಂತೆ ನಿರೂಪಿಸಲ್ಪಟ್ಟಿವೆ. ಯಾವುದು ಮನುಷ್ಯನ ಖಾಸಗಿ ಬಯಕೆಯೋ ಅದು ಸಾರ್ವಜನಿಕವಾಗಿ ಕಲಾರೂಪದಲ್ಲಿ ಹೊರಹೊಮ್ಮಿವೆ. ವಿದೇಶಗಳ ಕಲಾ ಚರಿತ್ರೆಯನ್ನು ಮೆರತುಬಿಡಿ, ನಮ್ಮ ದೇಶದ ಅಜಂತಾ- ಎಲ್ಲೋರಾ ಅಥವಾ ಖಜುರಾಹೋ ಅಥವಾ ಬೇಲೂರು-ಹಳೇಬೀಡುಗಳಲ್ಲಿ ದೇವರು-ಧರ್ಮ-ಕಲೆಯ ಹೆಸರಿನಲ್ಲಿರುವ ಶಿಲ್ಪಗಳು, ಕೃತಿಗಳು ಕೆಲವರ ಮನದಲ್ಲಾದರೂ ನೇತ್ಯಾತ್ಮಕ ಮೌಲ್ಯಗಳನ್ನು ಸೃಷ್ಟಿಸದಿರಲಾರವು. ಇವೆಲ್ಲ ಮನುಷ್ಯನಿಗೆ ಸಹಜವಾದ ಆತಂಕಗಳೆಂದು ನಂಬಿದರೂ ಸದ್ಯ ನಮ್ಮ ವರ್ತಮಾನದಲ್ಲಿ ನಡೆಯುತ್ತಿರುವ ಘಟನೆಗಳ ಹಿಂದೆ ಇಂತಹ ಕಲೆಯ ವಾಸನೆಯೂ ಇರಬಹುದೇನೋ ಅನ್ನಿಸುತ್ತದೆ. ಮಧ್ಯಯುಗದಲ್ಲಿ ನಡೆಯುತ್ತಿದ್ದ ಬರ್ಬರತೆಯು ಇಂದು ನವನಾಗರಿಕತೆಯ ಹೆಸರಿನಲ್ಲಿ ರಾಜರಸ್ತೆಗಳಲ್ಲಿ ರಾರಾಜಿಸುತ್ತಿದೆ. ನಿರ್ಭಯಾ ಪ್ರಕರಣ ಎದುರಾದಾಗ ಇದು ಆರಂಭ ಮಾತ್ರವಲ್ಲ ಕೊನೆಯ ಪ್ರಸಂಗವಾಗುತ್ತದೆಯೆಂದು ನಂಬಿದ (ಹಾಗೊಂದು ವೇಳೆ ನಂಬಿದ್ದರೆ!) ಸಮಾಜವು ಈಗ ಇಂತಹ ಪ್ರಕರಣಗಳ ಸರಮಾಲೆಯನ್ನು ದಿನಚರಿಯಾಗಿಸಿದೆ. ಬಹುವಾಗಿ ಬೆನ್ನುತಟ್ಟಿಕೊಳ್ಳುವ ಭಾರತೀಯ ಸಂಸ್ಕೃತಿಯನ್ನು ಇಂದು ನಡೆಯುತ್ತಿರುವ ನಿಷ್ಕರುಣಿ ನಡತೆಗಳು ಸಮರ್ಥಿಸುತ್ತಿವೆಯೇ ಎಂದು ನಾವು ಪ್ರಶ್ನೆ ಹಾಕುವುದಾದರೂ ಯಾರಿಗೆ?

ಇದರ ಜೊತೆಜೊತೆಯಲ್ಲೇ ವಿಶ್ವಕುಟುಂಬಿಗಳ ವಿಶ್ವಮಾನವರ ನಾಡೆಂದು ಹೆಗ್ಗಳಿಕೆಯನ್ನು ಹೇಳುತ್ತಿರುವ ಭಾರತವು ಜಗತ್ತಿನ ಉದ್ದಗಲಕ್ಕೆ ನಡೆಯುತ್ತಿರುವ ಅಕ್ರಮಗಳನ್ನು ಕಂಡು ಅದನ್ನು ಸರಿಪಡಿಸಲು ಮುಂದುವರಿಯುತ್ತದೆಂದು ನಂಬಬೇಕಾಗಿಲ್ಲ. ಏಕೆಂದರೆ ಸರ್ವಾನುಕೂಲವೆಂಬುದಿಲ್ಲ. ಪ್ರತಿಯೊಂದು ದೇಶವೂ ತನ್ನ ಹಿತವನ್ನು ಮಾತ್ರ ಗಣಿಸುತ್ತದೆ. ಅದು ಮೊದಲು ದೇಶ ಮತ್ತು ಆನಂತರ ಆ ದೇಶದ ಆಳುವವರಲ್ಲಿ ಕೊನೆಗೊಳ್ಳುತ್ತದೆ. ಆಗ ಭಿನ್ನಧ್ವನಿಯನ್ನು ಉಸಿರುವ, ಆಡುವ ಪ್ರಜೆಯೂ ದೇಶದ್ರೋಹಿಯೆಂದೆನಿಸುತ್ತಾನೆ. ಇದು ಭಾರತಕ್ಕಾದರೂ ಸರಿ, ವಿಶ್ವದ ಯಾವುದೇ ದೇಶಕ್ಕಾದರೂ ಸರಿ.

ಆದರೆ, ಇತರೆಡೆ ನಡೆಯುವ ಅಂತಹ ಅಕ್ರಮವನ್ನು ಕಂಡು ನಾಚಬೇಕಲ್ಲ! ಅದೂ ಇಲ್ಲ. ಗಾಝಾದಲ್ಲಿ ನಿತ್ಯ ಸಾಯುತ್ತಿರುವ ಜನರು ಅದರಲ್ಲೂ ಮಹಿಳೆ-ಮಕ್ಕಳ ಬಗ್ಗೆ ಏನೂ ಅನ್ನಿಸದೆ ರಾಜಕೀಯ ನಿಲುವೇ ಅಂತರಂಗದ ನಿಲುವೂ ಆದರೆ ಅಲ್ಲಿನ ದುರಂತ ಇತರರಿಗೆ ಏನು ಪರಿಣಾಮ ಬೀರಿದೆ ಎಂದು ಅನ್ನಿಸಬಹುದು? ಸ್ವಾನುಕೂಲವೇ ಲೋಕಾನುಕೂಲವೆಂದು ಬಗೆಯುವ ರಾಜಕಾರಣಿಗಳ ಕೈಯಲ್ಲಿ, ತಮಗೇಕೆ ಇತರರ ಪಾಡು ಎಂದು ತಿಳಿಯುವ ಸುಶಿಕ್ಷಿತ ನಾಗರಿಕರ ಅಜ್ಞಾನದಲ್ಲಿ ಮಾನವೀಯತೆ ನರಳುತ್ತದೆ. ಆಳುವವರು ಕ್ರೂರಿಗಳಾಗಿರಬೇಕೆಂಬ ಧೋರಣೆಗೂ ಒಂದು ಮಿತಿಯಿದೆ. ಅದು ದಾಟಿದಾಗ ಅಳಿವು-ಉಳಿವು ರಾಜಕೀಯದ ಆಟವಾಗುತ್ತದೆಯೇ ಹೊರತು ಮಾನವೀಯತೆಯ ಪಾಠವಾಗದು.

ಇಂದು ನಡೆಯುವ ದೇಶ-ದೇಶಗಳ ನಡುವಣ ಯುದ್ಧಗಳು ವಿಶ್ವ ಯುದ್ಧಗಳಾಗಿ ಪರಿಣಮಿಸಲು ಏನೂ ಆಗಬೇಕಿಲ್ಲ. ಡೊನಾಲ್ಡ್ ಟ್ರಂಪ್ ಈ ಜಗತ್ತಿಗೆ ಹೊಸಬರೇನಲ್ಲ. ತುಘಲಕ್, ಹಿಟ್ಲರ್‌ನಂಥವರು ಬಂದು ಹೋದ ಈ ಜಗತ್ತಿನಲ್ಲಿ ಅಂತಹ ನೂರಾರು ಮಂದಿ ಅವತಾರವೆತ್ತಿದ್ದಾರೆ. ಅವರನ್ನೆಲ್ಲ ನಾಶಮಾಡಬಲ್ಲ ದೇವಾವತಾರಗಳು ಇನ್ನೂ ಹುಟ್ಟಿಲ್ಲ. ಬದಲಿಗೆ ಅವು ಘರ್ಷಣೆಯಲ್ಲೋ, ಯುದ್ಧದಲ್ಲೋ, ಅನಾರೋಗ್ಯದಿಂದಲೋ ಅಳಿದಿದ್ದಾರೆ. ಆದರೆ ರಕ್ತಬೀಜನಂತೆ ಅವರ ರಕ್ತ ಬಿದ್ದಲೆಲ್ಲ ಅವರ ಸಂತತಿ ಹುಟ್ಟಿ ಬೆಳೆದಿದೆ. ದುರದೃಷ್ಟದ ಸಂಗತಿಯೆಂದರೆ ಅಂಥವರಿಗಿರುವ ಜನಪ್ರಿಯತೆ ಇತರ ದಾರ್ಶನಿಕರಿಗೆ, ವಾಸ್ತವವಾದಿಗಳಿಗೆ, ಧರ್ಮಭೀರುಗಳಿಗಿಲ್ಲ. ಯಾವುದೇ ಉದಾಹರಣೆಯನ್ನು ಪರೀಕ್ಷಿಸಿದರೂ ಶಕ್ತಿಯೇ ವಿಜೃಂಭಿಸುತ್ತದೆ ವಿನಾ ಸದಾಚಾರ, ಸಜ್ಜನಿಕೆ ಜನರನ್ನು ವರ್ತಮಾನದಲ್ಲಿ ಪ್ರಭಾವಿಸುವುದಿಲ್ಲ. ಶತಮಾನಗಳ ನಂತರ ಅವರ ಒಳ್ಳೆಯತನವನ್ನು, ಅವರು ಬೀರಿದರೆನ್ನಲಾದ ಪ್ರಭಾವವನ್ನು ಜನರು ನೆನಪಿಸಿಕೊಂಡು ನಲಿದಾರೇ ಹೊರತು ಅವರಿರುವಾಗ ಅಲ್ಲ.

ಇವೆಲ್ಲ ಏನು ಹೇಳುತ್ತವೆ? ವಿಕಾಸ ಬಲೂನಿನ ಗಾಳಿಯಂತೆ. ಒಂದು ಹಂತದವರೆಗೆ ಅದು ಒಳಗೆ ಗಾಳಿ ತುಂಬಿಸಿದಂತೆಲ್ಲ ಎಷ್ಟೂ ಉಬ್ಬಬಹುದು; ದೊಡ್ಡದಾಗಬಹುದು. ಆದರೆ ಆಮೇಲೆ ಒಡೆಯಲೇಬೇಕು. ಒಳಗಿನ ಗಾಳಿ ಹೊರಗಿನ ಗಾಳಿ-ಗಂಧದೊಂದಿಗೆ, ಬೆರೆಯಲೇಬೇಕು; ಬೆಸೆಯಲೇಬೇಕು. ಸೂಜಿಮೊನೆ ನೆಪ ಮಾತ್ರ. ಹಾಗೆಯೇ ವ್ಯಕ್ತಿಯೂ ತಾನು ತನ್ನ ಅನುಕೂಲವನ್ನಷ್ಟೇ ಸೃಷ್ಟಿಸಿಕೊಂಡು ವಿಕಾಸವಾಗಿ ಎಷ್ಟೇ ದೊಡ್ಡವನಾದರೂ ಒಂದು ಹಂತದ ಬಳಿಕ ಹೊರಪ್ರಪಂಚದೊಂದಿಗೆ ಸೇರಲೇ ಬೇಕು. ಇಲ್ಲವಾದರೆ ಅದು ವಿಕಾಸವಲ್ಲ; ವಿನಾಶ. ವಿಕಾಸವೆಂದರೆ ವಿಶಾಲವಾಗುತ್ತ ಹೋಗುವುದು. ಮನಸ್ಸು ವಿಶಾಲವಾದರೆ ಅದು ಎಲ್ಲರ ವಿಕಾಸವನ್ನು ಬಯಸುತ್ತದೆ. ಇಲ್ಲವಾದರೆ ವಿಕಾಸದ ಹೆಸರಿನಲ್ಲಿ ತಾನೂ ತನ್ನವರೂ ಬೆಳೆಯುವುದನ್ನು ಅಪೇಕ್ಷಿಸಿ ಇತರರು ನಾಶವಾಗುವುದನ್ನು ನೋಡನೋಡುತ್ತಲೇ ತಾನೂ ಅದರೊಂದಿಗೆ ನಾಶವಾಗಬೇಕಾಗುತ್ತದೆ. ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತಯ್ಯ ಎನ್ನಲಿಲ್ಲವೇ ಶರಣರು?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X