Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ರಾಮಾಯಣ-ಮಹಾಭಾರತಗಳೆಂಬ ಪುರಾಣಗಳು

ರಾಮಾಯಣ-ಮಹಾಭಾರತಗಳೆಂಬ ಪುರಾಣಗಳು

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ4 Sept 2025 12:28 PM IST
share
ರಾಮಾಯಣ-ಮಹಾಭಾರತಗಳೆಂಬ ಪುರಾಣಗಳು

ಪುರಾಣಗಳಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ. ಅವು ಸತ್ಯವನ್ನೂ ಕಾವ್ಯಸತ್ಯವನ್ನೂ ನುಡಿದಿವೆ. ಬದುಕಿನ ಅರ್ಥವನ್ನು ಶೋಧಿಸುತ್ತ, ಯಾವ ತೀರ್ಪನ್ನೂ ನೀಡದೆ, ನಮ್ಮ ಜೊತೆಯಲ್ಲಿ ನಡೆಯುವ, ನುಡಿಯುವ, ಅವು ನಿಜಾರ್ಥದಲ್ಲಿ ಜಾತ್ಯತೀತ; ಮತಾತೀತ; ಧರ್ಮಾತೀತ. ಅವುಗಳಿಂದ ಕ್ಷೀರವನ್ನೂ ಪಡೆದು ಸವಿಯಬಹುದು; ಎರಚುವುದಕ್ಕೆ ಬೇಕಾದ ಕೆಸರನ್ನೂ ಪಡೆಯಬಹುದು!

ಪುರಾತನ ಕಥೆಗಳಿಗೆ ಪುರಾಣವೆಂದು ಸಾಮಾನ್ಯವಾಗಿ ಉಲ್ಲೇಖಿಸುತ್ತಾರೆ. ಈ ಪುರಾತನ ಎಂಬ ಕಾಲ, ಗಾತ್ರ, ಪ್ರಾದೇಶಿಕತೆಯ ಗಡಿರೇಖೆಗಳಿಲ್ಲ. ಇತಿಹಾಸವು ಕಾಲಾತೀತವಲ್ಲ. ಆದರೆ ಪುರಾಣಗಳು ಕಾಲಾತೀತ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇತಿಹಾಸದ ಲೆಕ್ಕಾಚಾರಕ್ಕೆ ಸಿಕ್ಕದುದು ಪುರಾಣಯುಗ. ಅದಕ್ಕೆ ನಿಖರತೆ ಬೇಕಿಲ್ಲ. ಅವನ್ನು ಎಷ್ಟೂ ಹೇಳಬಹುದು. ಯಾರಾದರೂ ತುಂಬಾ ವಿವರಿಸತೊಡಗಿದರೆ ‘ಸಾಕಪ್ಪಾ ಸಾಕು ನಿನ್ನ ಪುರಾಣ!’ ಎನ್ನುವುದು ವಾಡಿಕೆ.

ಅಷ್ಟಾದಶ ಪುರಾಣಗಳೆಂದಾಕ್ಷಣ ದೇವರು, ದೇವಾನುದೇವತೆಗಳು ಪ್ರತ್ಯಕ್ಷರಾಗುತ್ತಾರೆ. ಅಸಂಭವಗಳನ್ನು ಸಂಭವನೀಯವಾಗಿಸುತ್ತವೆ. ಅವು ಕಾಲಾತೀತವಾಗಿರುವುದರಿಂದ ಮುನ್ನಡೆ, ಹಿನ್ನಡೆಗಳ ವಿನ್ಯಾಸ ಅವುಗಳ ನಂಬಿಕೆಗೆ ಭಂಗವಾಗುವುದಿಲ್ಲ. ಅವು ಜಗತ್ತಿನ ಯಾವ ಭಾಗದಲ್ಲಿ ನಡೆಯುತ್ತವೆಯೆಂಬುದೂ ಗೊತ್ತಿರಬೇಕಾಗಿಲ್ಲ. ಈ ದೇವರು ಆ ದೇವರಿಗೆ, ಆ ದೇವರು ಈ ದೇವರಿಗೆ ನಮಸ್ಕರಿಸುವುದು, ಶಪಿಸುವುದು, ಕೋಪಗೊಳ್ಳುವುದು ಇವೆಲ್ಲ ಸಾಮಾನ್ಯ.

ಉಪನಿಷತ್ತುಗಳೂ ಕಥೆಗಳೇ. ಅವುಗಳ ಆರಂಭಕ್ಕೂ ಅಂತ್ಯಕ್ಕೂ ತಾರ್ಕಿಕತೆಯನ್ನು ಉದ್ದಾಮ ಪಂಡಿತರಷ್ಟೇ ನೀಡಬಲ್ಲರು. ಅದೂ ಜನಸಾಮಾನ್ಯರ ತಲೆಯ ಮೇಲೆ ಹಾದುಹೋಗುವ ತರಂಗಾಂತರದಲ್ಲಿ. ಉದಾಹರಣೆಗೆ ನಚಿಕೇತನ ಕಥೆಯನ್ನು ಕೇಳಿದ ಮೇಲೆ ಸಾವಿನ ನಂತರದ ರಹಸ್ಯವನ್ನು ಯಮಧರ್ಮನು ಹೇಳಿದನೆಂದು ನಿರೂಪಿಸಲಾಗಿದೆಯೇ ಹೊರತು ಏನು ಹೇಳಿದನೆಂಬುದು ಅಲ್ಲಿ ವ್ಯಕ್ತವಾಗಿಲ್ಲ. ನಚಿಕೇತನು ಹೋದ ಯಮಲೋಕ ಎಲ್ಲಿದೆಯೆಂಬುದು ಇಂದಿನ ನಿರೂಪಣೆಗೆ ಒಗ್ಗುವುದಿಲ್ಲ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನು ಇಂದಿನ ಗಂಗೆಯ ಮೂಲವನ್ನು ಶೋಧಿಸಿದನೆಂಬ ಐತಿಹ್ಯವಿಲ್ಲ. ಆತ ತಂದದ್ದು ಸ್ವರ್ಗದಿಂದ. ಮಹಾಭಾರತದ ಗಂಗೆ ಶಾಪಗ್ರಸ್ತೆ. ಶಂತನುವನ್ನು ಹೊಂದಿದವಳು. ಇಂದಿನ ಗಂಗೆ ನೀರಾಗಿ ಇಳಿಯುವುದು ಹಿಮಾಲಯದ ತಪ್ಪಲಿನಿಂದ. ಆಕೆಗೆ ಮಲಿನಗೊಳ್ಳುವುದೂ ಗೊತ್ತು; ಬತ್ತಲಾರಳೇನೋ?

ಅಪೌರುಷೇಯವೆಂದು ಹೇಳಲಾದ ವೇದಗಳ ಕಥೆಯನ್ನು ಹೊರತುಪಡಿಸಿದರೆ ಭಾರತದಲ್ಲಿ ಅಷ್ಟಾದಶ ಪುರಾಣಗಳು ಎಂದು ವಿದ್ವಾಂಸರು ಹೇಳುವ ಎಲ್ಲ ಬಗೆಯ ದೇವರುಗಳ ಕಥೆಗಳ ಗ್ರಂಥಗಳಿವೆಯಾದರೂ ಜನಸಾಮಾನ್ಯರಿಗೆ ರಾಮಾಯಣ, ಮಹಾಭಾರತಗಳೇ ಪುರಾಣಗಳು. ಅವರು ಈ ಎರಡು ಪುರಾಣಗಳಿಂದ ಹೊರಗೆ ಬಂದದ್ದು ಕಡಿಮೆ. ಭಕ್ತಿ, ವೇದಾಂತ, ಧರ್ಮ ಕರ್ಮ ಇವುಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ಅಧ್ಯಯನ ಮಾಡುವವರಿಗೆ ಅಥವಾ ಅದನ್ನು ತಮ್ಮ ಮತೀಯ ಸಿದ್ಧಾಂತಗಳಿಗೆ ಥಳಕು ಹಾಕುವವರು ಈ ಸಾಲಿನಲ್ಲಿ ಕಥಾಗುಚ್ಛವಾದ ಭಾಗವತವನ್ನೂ ಸೇರಿಸುತ್ತಾರೆ. ಆದರೂ ಸಾಮಾಜಿಕವಾಗಿ ಮತ್ತು ಓದುಬರೆಹವಿಲ್ಲದವರಿಗೂ ಗಂಟಲಲ್ಲಿ ಇಳಿಯಬಲ್ಲ ಪುರಾಣದ್ರವ್ಯವೆಂದರೆ ರಾಮಾಯಣ, ಮಹಾಭಾರತಗಳೇ. ಈಗಾಗಲೇ ಉಲ್ಲೇಖಸಿದ್ದನ್ನು ಇಲ್ಲಿಗೂ ಅನ್ವಯಿಸಿ ‘ಸಾಕು ನಿನ್ನ ರಾಮಾಯಣ!’ ಎನ್ನುವ ಕ್ರಮವಿದೆ. (‘ಸಾಕು ನಿನ್ನ ಭಾರತ’ ಎಂದವರಿಲ್ಲ.)

ರಾಮಾಯಣ, ಮಹಾಭಾರತಗಳ ಪುರಾಣಕಾರಣಗಳನ್ನು ಹುಡುಕಬಹುದು: ಈ ಎರಡೂ ಪುರಾಣಗಳು ನೇರಾನೇರ ವಿಷ್ಣುವಿನ ಅವತಾರಗಳ ಕಥೆಯನ್ನು ಚರಿತೆಯಂತೆ ಹೇಳುವ ಗ್ರಂಥಗಳು. ರಾಮಾಯಣದಲ್ಲಂತೂ ಶ್ರೀರಾಮನೂ, ಪರಶುರಾಮನೂ ಸಂಭವಿಸಿದ್ದಾರೆ. ಯಾರನ್ನು ನಾಯಕರಾಗಿಸಿದರೆ ಪರಿಣಾಮವೇನೆಂದು ಚಿಂತಿಸಿ ಕೊನೆಗೆ ಶ್ರೀರಾಮನನ್ನು ಅಲ್ಲಿಗೆ ನಾಯಕನಾಗಿಸಿ ಪರಶುರಾಮನನ್ನು ಮಹಾಭಾರತಕ್ಕೂ ಎಳೆದು ತಂದು ಅಲ್ಲಿಂದ ಚಿರಂಜೀವಿಯಾಗಿಸಿ ಈಗಲೂ ಇದ್ದಾನೆಂಬ ಮಾಯಾಜಗತ್ತನ್ನು ನೀಡಿದ ಕವಿಗಳಿಗೆ ಶರಣು. ಗ್ರಂಥ ಎಂಬ ಚೌಕಟ್ಟನ್ನು, ಎಲ್ಲೆಯನ್ನು, ಭಾವನೆಯನ್ನು, ವಿಚಾರವನ್ನು ಇವು ಮೀರಿಹೋಗಿವೆ. ಜನರ ನಾಲಿಗೆಯಲ್ಲಿ ಓಡಾಡುತ್ತ, ವಿವಿಧ ಭಾಷೆ, ಸಂಸ್ಕೃತಿ, ನಾಗರಿಕತೆ ಮತ್ತು ಜನಪದಗಳಲ್ಲಿ, (ವ್ಯಾಸ, ವಾಲ್ಮೀಕಿಯರಿಂದ ಕಾಳೀದಾಸ, ಭವಭೂತಿ, ತುಳಸೀದಾಸ, ಕನ್ನಡದ ಪಂಪ, ರನ್ನ, ನಾಗಚಂದ್ರ, ಕುಮಾರವ್ಯಾಸ, ಕುಮಾರವಾಲ್ಮೀಕಿ, ಮುದ್ದಣ, ಕುವೆಂಪುವರೆಗೆ, ಇನ್ನೂ ವಿಸ್ತರಿಸಿದರೆ ಸುಜನಾ, ಮೊಯ್ಲಿಯವರವರೆಗೆ!) ಭಿನ್ನ ರೀತಿಯ ಹಂದರಗಳನ್ನು ಹೊಂದಿ ಹೇಗೇ ಓದಿದರೂ, ಕೇಳಿದರೂ ಮತ್ತೆ ಮುಖ್ಯ ಮೂಲಕಥೆಯನ್ನು ಉಳಿಸಿಕೊಳ್ಳಬಲ್ಲವಾದ್ದರಿಂದ ಮತ್ತು ನೆನಪಿನಲ್ಲಿ ಉಳಿಯಬಲ್ಲವಾದ್ದರಿಂದ, ಇವು ಪುರಾಣಗಳು. ಹರಿಕಥೆಯಿಂದ ಪ್ರವಚನಗಳ ವರೆಗೆ ಯಕ್ಷಗಾನದಿಂದ ನೃತ್ಯದ ವರೆಗೆ ಇವನ್ನು ಅವರವರ ಹಾವಭಾವಕ್ಕನುಗುಣವಾಗಿ, ವಾಙ್ಮಯ ಸಾಮರ್ಥ್ಯಕ್ಕನುಗುಣವಾಗಿ ಒಪ್ಪಿಸಬಲ್ಲ ಒರತೆಗಳಿವು. ಇವನ್ನು ಬಿಟ್ಟು ಬದುಕು ಇದೆಯೆಂದು ಯೋಚಿಸುವುದೂ ಅಸಾಧ್ಯವೆನ್ನುವ ವರೆಗೆ ಇವು ಆವರಿಸಿವೆ. ಮಹಾಭಾರತದ ಗೀತೋಪದೇಶ, ವಿಷ್ಣು ಸಹಸ್ರನಾಮ ಮುಂತಾದ ಭಾಗಗಳು ಪ್ರತ್ಯೇಕ ನುಡಿಗಳಾಗಿ ಸಾಹಿತ್ಯೇತರ ಶ್ರದ್ಧಾಳುಗಳಿಗೆ ಪೂಜಾರ್ಹವಾಗಿವೆ. ವಾಲ್ಮೀಕಿ-ವ್ಯಾಸರೆಂಬ ಈ ಇಬ್ಬರು ಕವೀಶ್ವರರು ಪುರಾಣಪುರುಷರಾಗಿ ಪರಿಣಮಿಸಿದ್ದು ಒಂದು ವಿಶೇಷ!

ಮಹಾಭಾರತದ ಕೃಷ್ಣನ ಬಗ್ಗೆ ಇನ್ನಷ್ಟು ತಿಳಿಯಬೇಕಾದರೆ ಭಾಗವತಕ್ಕೆ ಶರಣುಹೋಗಬಹುದು. ಆದರೆ ಅಲ್ಲಿ ನೂರೆಂಟು ಕಥೆಗಳಿವೆ. ಅದು ಮತಾವಲಂಬಿ. ಒಂದು ರೀತಿಯಲ್ಲಿ ಅದು ಕ್ರೈಸ್ತರ ಹಳೇ/ಹೊಸ ಒಡಂಬಡಿಕೆಯಂತೆ ಓದಿಸಿಕೊಂಡು ಹೋಗುವ ಗ್ರಂಥ.

ಆದರೆ ರಾಮಾಯಣ, ಮಹಾಭಾರತಗಳು ಗುರುತು ಹಿಡಿಯಬಲ್ಲ ಅಂಶಗಳನ್ನು ಹೊಂದಿವೆಯೆಂಬುದು ವ್ಯಕ್ತವಾಗುತ್ತದೆ. ಈ ಕಾರಣಕ್ಕೆ ಅವನ್ನು ವಿವಿಧ ಕಾರಣಗಳಿಗೆ, ಹಿತಾಸಕ್ತಿಗಳಿಗೆ ಅಗತ್ಯವಾದಾಗ ಇತಿಹಾಸದ ಯುಗಕ್ಕೆ ಇಳಿಸಲಾಗಿದೆ. ಶ್ರೀರಾಮನು ಹುಟ್ಟಿದ ಅಯೋಧ್ಯೆಯು ಇಂದು ಉತ್ತರ ಪ್ರದೇಶದಲ್ಲಿದೆಯೆಂಬುದು ಬಹುತೇಕ ಒಪ್ಪಿಗೆಯಾದಂತಿರುವ ನಂಬಿಕೆ. ಇದನ್ನು ಅಲ್ಲಗಳೆಯುವುದು ಅಪರಾಧದಂತೆ ಮೂಡಿಬಂದಿದೆ. ರಾಮಾಯಣದ ಸಂಚಾರೀ ಭಾವವನ್ನು ನಾವು ಇಂದಿನ ಕನ್ನಡಕದಲ್ಲಿ ನೋಡಿ ಗುರುತಿಸುವುದು ಒಂದು ರೀತಿಯಲ್ಲಿ ಸಮೂಹಸನ್ನಿಯಾದರೂ ಅದನ್ನು ಅಲ್ಲಗಳೆಯುವ ಧೈರ್ಯವನ್ನು ಮತೀಯ (ಇದನ್ನು ಧಾರ್ಮಿಕವೆಂದು ನಂಬಿಸಲಾಗುತ್ತದೆ!) ಕಾರಣಕ್ಕಾಗಿ ಅಪವಾದಗಳನ್ನು ಹೊರತುಪಡಿಸಿ ಯಾರೂ ತೋರುವುದಿಲ್ಲ. ಭಿನ್ನಮತವನ್ನು ಸಹಿಸುವ ಲಕ್ಷಣಗಳಿಲ್ಲದ ನಮ್ಮ ಸಮಾಜದಲ್ಲಿ ಹಾಗೆ ಧೈರ್ಯವಾಗಿ ಹೇಳುವುದೆಂದರೆ ಪುನರ್ಜನ್ಮವಿಲ್ಲದ ಈ ಬದುಕಿಗೆ ತಕ್ಷಣವೇ ದುರಂತ ಹಾಡಿದಂತೆಯೇ. ಈ ಎರಡು ಪುರಾಣಗಳಲ್ಲಿ ಬರುವ ಸಜ್ಜನ-ದುರ್ಜನ ಪಾತ್ರಗಳ ಹೆಸರನ್ನಿಟ್ಟುಕೊಂಡವರನ್ನು ಆರಾಧಿಸುವ ಕಾಲ ಇನ್ನೂ ಬಂದಿಲ್ಲ!

ಪುರಾಣಗಳು ಹೀಗಾಗಿ ಸತ್ಯಶೋಧನೆಯ ಅಂಶ/ಅಂಗವಾಗದೆ ಕುರುಡು ನಂಬಿಕೆಯ ದ್ಯೋತಕಗಳಾಗಿವೆ. ಅವನ್ನು ನಂಬುವುದು ಕುರುಡು ಪ್ರವೃತ್ತಿಯಲ್ಲ. ಆದರೆ ಅವನ್ನು ಇತರರನ್ನು ನಂಬಿಸುವುದಕ್ಕೂ, ವಂಚಿಸುವುದಕ್ಕೂ ಬಳಸುವುದು ದ್ರೋಹ. ಪುರಾಣಗಳನ್ನು ಪುರಾಣಗಳಂತೆ ಓದಬೇಕು, ಕೇಳಬೇಕು, ಹೇಳಬೇಕು. ಬದಲಾಗಿ ಅವನ್ನು ನಮ್ಮ ಸುತ್ತಲಿನ ವೈಜ್ಞಾನಿಕ ಸತ್ಯಗಳೆಂಬಂತೆ ಬಿಂಬಿಸಿ ಮನುಷ್ಯನ ಅನ್ವೇಷಕ ಪ್ರವೃತ್ತಿಗೆ ಕರಿಮುಸುಕು ಹಾಕುವುದು ಅಪರಾಧ ಮತ್ತು ಹೀಗೆ ಕಲ್ಪಿತ ಸತ್ಯದ ಹೊದಿಕೆಯೊಳಗೆ ನಿಂತವರು ಇದನ್ನು ಮೀರಿ, ಇಲ್ಲವೇ ಇದನ್ನು ಒಪ್ಪದೆ, ತಮ್ಮ ದೃಷ್ಟಿಕೋನವನ್ನು ಪ್ರಚುರಪಡಿಸುವುದನ್ನು ತಾಳಿಕೊಳ್ಳಲಾಗದೆ ಅಂಥವರನ್ನು ಖಳನಾಯಕರಂತೆ ಕಾಣುವುದು ಇನ್ನೂ ಮಹಾಪಾಪ. (ಪಾಪ-ಪುಣ್ಯಗಳ ಕಲ್ಪನೆಯೂ ಬಂದಿರುವುದು ಈ ಪುರಾಣಗಳಿಂದಲೇ!)

ಪುರಾಣಗಳನ್ನು ಕೆಲವು ನೂರು ಅಥವಾ ಸಾವಿರ ವರ್ಷಗಳ ಹಿಂದೆಯಷ್ಟೇ ಯಾರೋ ಸೃಷ್ಟಿಸಿದರು. ಅದು ನಿಜಕ್ಕೂ ನಡೆದಿದೆಯೆಂದಲ್ಲ. ರಾಮಾಯಣ ಮಹಾಭಾರತಗಳನ್ನು ಸ್ಥೂಲವಾಗಿ ಗಮನಿಸಿದರೂ ಈ ಅಂಶ ಅರಿವಾಗಬಹುದು. ಪ್ರಾಯಃ ಯಾವುದೋ ಮನೆತನದಲ್ಲಿ ನಡೆದಿರಬಹುದಾದ ಕೆಲವು ಘಟನೆಗಳನ್ನು ಪೋಣಿಸಿ ಇವು ರಚನೆಗೊಂಡವು. ಇವು ತೀರ ಹಳೆಯವಲ್ಲವೆಂಬುದಕ್ಕೆ ನೀಡಬಹುದಾದ ಕಾರಣಗಳೆಂದರೆ ಇವು ರಚನೆಗೊಳ್ಳುವ ಸಂದರ್ಭದಲ್ಲಿ ವರ್ಣಾಶ್ರಮ ಧರ್ಮ ಪ್ರಚಲಿತವಿತ್ತು. ತೀರ ಹೊಸತಲ್ಲವೆಂಬುದಕ್ಕೆ ಕಾರಣವನ್ನು ನೆಡಬಹುದಾದರೆ ಇವುಗಳಲ್ಲಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕ್ರೈಸ್ತ ಧರ್ಮವಿಲ್ಲ. ಇಸ್ಲಾಮ್ ಧರ್ಮವಿರುವುದಂತೂ ಸಾಧ್ಯವಿಲ್ಲ. ಹಾಗೆಂದು ಇದು ಒಂದು ಪ್ರಾದೇಶಿಕ ವ್ಯಾಪ್ತಿಯನ್ನಷ್ಟೇ ಹೊಂದಿದ್ದವು. ಜಂಬೂದ್ವೀಪ, ಭರತಖಂಡಗಳೊಳಗಿರುವ ಪ್ರದೇಶದಲ್ಲಷ್ಟೇ ಇವುಗಳ ಕಥೆ. ಇಂದಿನ ಅಮೆರಿಕ, ಯುರೋಪು ಮುಂತಾದ ದೇಶಗಳು ಇವುಗಳನ್ನು ಬರೆದವರ ಕಲ್ಪನೆಗೆ ಸಿಗುವುದು ಸಾಧ್ಯವಿರಲಿಲ್ಲ. ಹೆಚ್ಚೆಂದರೆ ಇಂದಿನ ಅಫ್ಘಾನಿಸ್ತಾನದಲ್ಲಿರುವ ಗಾಂಧಾರ/ಕಂದಹಾರ ಅಥವಾ ರಾವಣನ ಲಂಕೆಯೆಂದು ಬಣ್ಣಿಸಲ್ಪಟ್ಟ ಇಂದಿನ ಶ್ರೀಲಂಕಾ ಇವುಗಳ ವರೆಗೆ ಈ ಕಥಾಪ್ರದೇಶಗಳನ್ನು ಹಿಗ್ಗಿಸಬಹುದು. ಹಿಮಾಲಯದಿಂದ ಆಚೆಗಿರುವ ಪ್ರದೇಶಗಳು ಸ್ವರ್ಗವೇ ಎಂಬಂತೆ ಪುರಾಣಗಳಲ್ಲಿ ವರ್ಣಿತವಾಗಿದೆ. ಇವುಗಳಲ್ಲಿ ವಿವರಿಸಿರುವ ಸಾಗರವೆಂದರೆ ಭಾರತ-ಶ್ರೀಲಂಕಾದ ನಡುವಣ ಅತ್ಯಂತ ಕಿರಿದಾದ ಅಗಲವನ್ನು ಹೊಂದಿರುವ ಜಲಭಾಗ. ರಾಮಾಯಣದ ಅತೀ ದೀರ್ಘ ಯಾತ್ರೆಯೆಂದರೆ ಶ್ರೀರಾಮನ ವನವಾಸವು ಉತ್ತರಪ್ರದೇಶದಿಂದ ಶ್ರೀಲಂಕಾದ ವರೆಗಿದ್ದರೆ, ಮಹಾಭಾರತದ ಅರ್ಜುನನ ತೀರ್ಥಯಾತ್ರೆಯು ದಿಲ್ಲಿಯಿಂದ ಕನ್ಯಾಕುಮಾರಿ ಅಥವಾ ಧನುಷ್ಕೋಡಿಯ ವರೆಗೆ. ಕೃಷ್ಣನ ಬದುಕಿನ ಜಾಗವನ್ನು ಉತ್ತರಪ್ರದೇಶದ ಮಥುರೆಯಿಂದ ಗುಜರಾತಿನ ದ್ವಾರಕೆಯ ವರೆಗೆ, ನಮ್ಮ ಶಿವನಿಗೆ ಹಿಮಾಲಯ ಬೇಕು. (ವೈದ್ಯರತ್ನ ಎಂ.ಆರ್. ಭಟ್ಟರು ತಮ್ಮದೊಂದು ಗ್ರಂಥದಲ್ಲಿ ಹಿಮಾಲಯದ ಆಚೆಗಿನ ಪ್ರದೇಶಗಳನ್ನು ಚೀನಾ, ಮಂಗೋಲಿಯಾಗಳನ್ನು ಅಲ್ಲಿನ ಜನರ, ಬದುಕಿನ, ಆಹಾರದ, ಬೆಳೆಗಳ, ಸ್ಪುರದ್ರೂಪ ಲಕ್ಷಣಗಳ ಆಧಾರದಲ್ಲಿ ಸ್ವರ್ಗ-ನರಕಗಳೆಂದು ವಿಂಗಡಿಸಿದ್ದಾರೆಂಬ ಅಂಶವನ್ನು ಪ್ರಸ್ತಾಪಿಸಿದ್ದಾರೆ.) ನೂರಾರು ವರ್ಷಗಳ ಇಂತಹ ಬದುಕನ್ನು ಯಾವುದೇ ಸಂಕೋಚವಿಲ್ಲದೆ ಪುರಾಣಗಳು ಚಿತ್ರಿಸಿವೆ. ಯಾರಿಗೆ ಎಷ್ಟು ವಯಸ್ಸು ಎಂಬುದೇ ತರ್ಕಕ್ಕೆ ಸಿಕ್ಕುವುದಿಲ್ಲ.

ಹಾಗೆಂದು ಇವುಗಳ ಆಚೆಗೆ ಜಗತ್ತು ಇರಲಿಲ್ಲವೆಂದು ಈ ಲೇಖಕರು ಭಾವಿಸಿರಲಾರರು. ಅದಕ್ಕಾಗಿಯೇ ಚತುರ್ದಶ ಭುವನಗಳನ್ನು ಸೃಷ್ಟಿಸಿದರು. ಅದರಲ್ಲೂ ನಾವು ಕಾಣಬಹುದಾದ ವಿಪರ್ಯಾಸವೆಂದರೆ ಈ ಇತರ ಲೋಕಗಳು ಸ್ವರ್ಗಸಮಾನ.

ಇಂತಹ ಪ್ರಾದೇಶಿಕ ಮಿತಿಗಳು ಇಂದಿನ ಮಧ್ಯಪೂರ್ವ ದೇಶಗಳಲ್ಲಿ ಹುಟ್ಟಿಕೊಂಡ ಪಾಶ್ಚಾತ್ಯ ಪುರಾಣಗಳಲ್ಲೂ ಕಾಣುತ್ತವೆ. ರೋಮ್ ಸಾಮ್ರಾಜ್ಯಕ್ಕೂ ಮಿತಿಯಿದೆ. ಅಮೆರಿಕ ಖಂಡವನ್ನಾಗಲೀ ಆಸ್ಟ್ರೇಲಿಯವನ್ನಾಗಲೀ ಅಲ್ಲಿ ಕಾಣಲಾರೆವು.

ಈ ಮಿತಿಯೊಳಗೂ ಈ ಎರಡು ಪುರಾಣಗಳು ಇಂದಿಗೂ ಭಾರತದಲ್ಲಿ ಇಷ್ಟೊಂದು ಪ್ರಭಾವಿಸಿವೆಯೇಕೆ? ಅಲ್ಲಿ ನಡೆದ, ನಡೆಯುವ ಘಟನೆಗಳನ್ನು ನಿಜವೆಂದೋ ವಾಸ್ತವವೆಂದೋ ನಂಬುವುದರ ಹಿಂದಿನ ಮಾಯಾಜಾಲ ಏನು ಮತ್ತು ಯಾವುದು? ಈ ಬಗ್ಗೆ ಪ್ರಕಾಂಡ ಅಧ್ಯಯನ ನಡೆಯಬೇಕಾಗಿದೆ. ಕೆಲವು ಚಹರೆಗಳನ್ನಷ್ಟೇ ಗುರುತಿಸಬಹುದು: ಮೊದಲನೆಯದಾಗಿ, ರಾಮಾಯಣವನ್ನು ಮೊದಲು ಬರೆದರೋ ಮಹಾಭಾರತವನ್ನು ಮೊದಲು ಬರೆದರೋ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ರಾಮಾಯಣವು ತ್ರೇತಾಯುಗವೆಂಬ ಕಾಲಾವಧಿಯಲ್ಲಿ ನಡೆದಿದೆಯೆಂದು ಚಿತ್ರಿತವಾದರೆ, ಮಹಾಭಾರತವು ಕಲಿಯುಗವೆಂಬ ವರ್ತಮಾನದ (ಎಂದು ಹೇಳಲಾಗಿರುವ) ಯುಗಕ್ಕೆ ತೀರ ನಿಕಟವಾಗಿರುವ ಮತ್ತು ತ್ರೇತಾಯುಗದ ಬಳಿಕ ಬಂದಿದೆಯೆನ್ನಲಾಗಿರುವ ಕಾಲಾವಧಿಯಲ್ಲಿದೆ. ರಾಮನು ತ್ರೇತಾಯುಗಾವತಾರಿಯಾಗಿ ತನ್ನ ಅವತಾರ ಸಮಾಪ್ತಿಯನ್ನು ಕಂಡರೂ ಅವನ ನಂತರವೂ ಆ ಯುಗ ಮುಂದುವರಿದಿದೆಯೆಂಬುದು ಕಥಾನಂಬಿಕೆ. ಅದಕ್ಕೂ ಆನಂತರ ಬಂದ ಕೃಷ್ಣಯುಗಕ್ಕೂ ಸಂಬಂಧ ಅಥವಾ ಕಾಲಜೋಡಣೆಯನ್ನು ಸೃಷಿಸಿದ ಕಥೆಗಳಿಲ್ಲ. ಬಹಳ ನಂತರ ಅರ್ಜುನನಿಗೆ ತೀರ್ಥಯಾತ್ರೆಯ ಸಂದರ್ಭದಲ್ಲಿ ಮತ್ತೆ ಅದೇ ಹನುಮನು ದೊರಕಿದ್ದು ಹಾಗೂ ಆಮೇಲೆ ಭೀಮನಿಗೆ ಸೌಗಂಧಿಕಾಪಹರಣದ ಸಂದರ್ಭದಲ್ಲಿ ಹನುಮಂತ ರಕ್ಷಕನಾದದ್ದು, ಹೀಗೆ ಕೆಲವು ಪ್ರಕ್ಷಿಪ್ತ ಕಥೆಗಳ ಸೃಷ್ಟಿಯಾಗಿದೆಯಾದರೂ ಈ ಇಬ್ಬರು ಕವಿಗಳಿಗೆ ಪರಸ್ಪರ ಕೊಂಡಿಯನ್ನು ಸೃಷ್ಟಿಸಲಿಲ್ಲ. ತಾವು ಯಾವ ಕಾಲಾವಧಿಯಲ್ಲಿ ಬದುಕಿದ್ದೇವೆಂಬ ವಿವರಣೆಗಳಿಲ್ಲ. ರಾಮಾಯಣ ಮಹಾಕಾವ್ಯವನ್ನು ಸೃಷ್ಟಿಸಿದ ವಾಲ್ಮೀಕಿ ರಾಮಾಯಣಕ್ಕೂ ಮೊದಲೇ ಇದ್ದು, ಆನಂತರವೂ ಬದುಕಿದ ಒಬ್ಬ ವ್ಯಕ್ತಿಯಾಗಿ ಕಾಣಿಸಿದರೆ, ವೇದವ್ಯಾಸರು ಮಹಾಭಾರತದ ಲೇಖಕರು ಮಾತ್ರವಲ್ಲ, ಕಾರಣೀಭೂತರೂ ಹೌದು. ವಾಲ್ಮೀಕಿಗೆ ದಕ್ಕದ ಚಿರಂಜೀವತ್ವವು ವ್ಯಾಸರಿಗೆ ದೊರಕಿದೆಯೆಂಬ ನಂಬಿಕೆ ನಮ್ಮಲ್ಲಿದೆ. ಯಾರೋ ಒಬ್ಬ ಈ ಇಬ್ಬರನ್ನು ಮುಖಾಮುಖಿಯಾಗಿಸಿದ್ದರೆ ಚೆನ್ನಾಗಿರುತ್ತಿತ್ತೇನೋ?

ದುರದೃಷ್ಟವೆಂದರೆ ಯಾವುದನ್ನು ವಾಲ್ಮೀಕಿ ಮತ್ತು/ಅಥವಾ ವ್ಯಾಸರು ಈ ಕಾವ್ಯಗಳ ಮೂಲಕ ಸಂದೇಶವಾಗಿ ಕಲ್ಪಿಸಿಕೊಂಡರೋ ಅದನ್ನು ಆನಂತರದ ಸಮಾಜ ಮರೆತು ತಮಗೆ ಬೇಕಾದಷ್ಟು ಅಜ್ಞಾನವನ್ನಷ್ಟೇ ಸ್ವೀಕರಿಸಿದರು. ಓದು ಮತ್ತು ಬರೆಹ ಆರಂಭವಾದಂದಿನಿಂದಲೂ ಮನುಷ್ಯ ತನ್ನ ಎಲ್ಲ ತಿಳಿವಳಿಕೆಯನ್ನು ಕೇಡಿಗಾಗಿಯೇ ಸಮರ್ಪಿಸಿಕೊಂಡಂತಿದೆ. ಈ ಕೇಡಿನ ಸಮಸ್ಯೆ ಈ ಎರಡೂ ಕಾವ್ಯಗಳಲ್ಲಿವೆ. ಮನುಷ್ಯನ ದೌರ್ಬಲ್ಯಗಳನ್ನು ಚಿತ್ರಿಸಿ ಭವಿಷ್ಯದ ಸಮಾಜವನ್ನು ಉದ್ದೀಪನಗೊಳಿಸುವುದು ಈ ಕವಿಗಳ ಉದ್ದೇಶವಾಗಿತ್ತೆಂದು ಕಾಣಿಸುತ್ತದೆ. ಆದ್ದರಿಂದಲೇ ಈ ಕಥೆಗಳಲ್ಲಿ ಮಕ್ಕಳಾಗದಿರುವುದು, ಕಾಮಪಿಪಾಸೆ, ಮದ, ಮತ್ಸರ, ವೈರ, ಕ್ರೌರ್ಯ ಇವೆಲ್ಲ ಪದೇಪದೇ ಚಿತ್ರಿತವಾಗಿವೆ. ಮಕ್ಕಳಾದರೂ ಕಡೆಗಾಲಕ್ಕೆ ಅವರ ಸಾಮೀಪ್ಯವಿಲ್ಲದಿರುವುದು ಹೆತ್ತವರಿಗೆ ಎಂತಹ ದಾರುಣ ದುಃಖವನ್ನು ನೀಡಬಲ್ಲುದೆಂಬುದು ಜಗತ್ತು ಹಿಗ್ಗುವ ಕಾಲಕ್ಕೆ ಗೊತ್ತಾಗಬೇಕಲ್ಲವೇ? ಮಹಿಳೆಗೆ ಗೌರವವೂ ಅವಮಾನವೂ ಸಮಾನವಾಗಿ ಲಭಿಸಿದ್ದು ಅಂದಿನ ವಿದ್ಯಮಾನವೆಂದುಕೊಂಡರೆ; ಈ ಜಾಯಮಾನವಿನ್ನೂ ಬದಲಾಗಿಲ್ಲ. ಆದರೆ ಜನರು ಇದನ್ನು ನೆನಪು ಮಾಡುವುದಿಲ್ಲವೋ ಅಥವಾ ನೆನಪುಮಾಡಿಕೊಂಡರೂ ಅವುಗಳಿಂದ ಪಾಠ ಕಲಿಯುವುದಿಲ್ಲವೋ ಗೊತ್ತಿಲ್ಲ. ಅಯೋಧ್ಯೆಯನ್ನು ಶ್ರೀರಾಮನ ಜನ್ಮಸ್ಥಾನವೆಂಬ ನಂಬಿಕೆಯ ಆಧಾರದಲ್ಲಿ ಅಲ್ಲಿದ್ದ ಮಸೀದಿಯನ್ನು ನಾಶಗೊಳಿಸಿದಲ್ಲಿಂದ ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಕದ ಬಡಿಯುವ ವರೆಗೆ ಪುರಾಣಗಳ ಹೆಸರಿನಲ್ಲಿ ಕೇಡು ಮತ್ತು ತಪ್ಪು ಹಾದಿಯನ್ನು ಇಂದಿನ ಸಮಾಜ ಸೃಷ್ಟಿಸಿದೆ.

ಪುರಾಣಗಳನ್ನು ನಂಬಬೇಕಾಗಿಲ್ಲ. ಆದರೂ ಪುರಾಣಗಳಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ. ಅವು ಸತ್ಯವನ್ನೂ ಕಾವ್ಯಸತ್ಯವನ್ನೂ ನುಡಿದಿವೆ. ಬದುಕಿನ ಅರ್ಥವನ್ನು ಶೋಧಿಸುತ್ತ, ಯಾವ ತೀರ್ಪನ್ನೂ ನೀಡದೆ, ನಮ್ಮ ಜೊತೆಯಲ್ಲಿ ನಡೆಯುವ, ನುಡಿಯುವ, ಅವು ನಿಜಾರ್ಥದಲ್ಲಿ ಜಾತ್ಯತೀತ; ಮತಾತೀತ; ಧರ್ಮಾತೀತ. ಅವುಗಳಿಂದ ಕ್ಷೀರವನ್ನೂ ಪಡೆದು ಸವಿಯಬಹುದು; ಎರಚುವುದಕ್ಕೆ ಬೇಕಾದ ಕೆಸರನ್ನೂ ಪಡೆಯಬಹುದು!

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X