Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಮಾತಿನ ಎಲ್ಲೆಗಳು

ಮಾತಿನ ಎಲ್ಲೆಗಳು

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ5 Jun 2025 12:03 PM IST
share
ಮಾತಿನ ಎಲ್ಲೆಗಳು
ಕನಸಿನಲ್ಲೋ ಕುಡಿತದ ಅಮಲಿನಲ್ಲೋ ಆಡಿದರೆ ಅದಕ್ಕೊಂದು ಕ್ಷಮೆ ಅಥವಾ ಕ್ಷಮಿಸಬಲ್ಲ ವಿವರಣೆಯನ್ನು ನೀಡಬಹುದು. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಹಿರಂಗವಾಗಿ, ಆಡಿದ ಪ್ರಜ್ಞಾಪೂರ್ವಕ ಅಭಿವ್ಯಕ್ತಿ ಪರರಿಗೆ ನೋವನ್ನುಂಟುಮಾಡಿದರೆ ಅದಕ್ಕೆ ಯಾರು ಕ್ಷಮೆ ಕೊಡಬೇಕು? ಅದು ವೈಯಕ್ತಿಕ ಟೀಕೆಯಾದಲ್ಲಿ ಸಂಬಂಧಿತ ವ್ಯಕ್ತಿಯು ಕ್ಷಮಿಸಿ ದಾಟಿ ಹೋಗಬಹುದು. ಸಮೂಹವನ್ನು ಹಳಿದಾಗ ಯಾರಾದರೊಬ್ಬ ನೊಂದು ಕ್ರಮವನ್ನು ಕೈಗೊಂಡಾಗ ಅದೊಂದು ‘ಪ್ರಕರಣ’ವಾಗುತ್ತದೆ. ಆಗ ಅದು ಸಂದರ್ಭ ಮತ್ತು ವಿಷಯ-ವಿಚಾರವನ್ನು ದಾಟಿ ಕಾನೂನಿನಡಿ ಇತ್ಯರ್ಥವಾಗಬಲ್ಲ ವಸ್ತುವಾಗುತ್ತದೆ; ವಿವಾದ-ಸಮಸ್ಯೆಯಾಗುತ್ತದೆ.

ಮೊನ್ನೆ ತಮಿಳು ನಟ ಕಮಲ್‌ಹಾಸನ್ ಕನ್ನಡಕ್ಕೆ ಅವಮಾನವಾಗುವಂತೆ ಮಾತನಾಡಿದರೆಂದು ಕರ್ನಾಟಕದಲ್ಲಿ ಗುಲ್ಲಾಟವೆದ್ದಿದೆ. ಧರ್ಮ, ಮತ, ಜಾತಿ, ದ್ವೇಷ, ರಕ್ತ ಹಾಗೂ ಹೆಣದ ಮೇಲೆ ರಾಜಕೀಯ ಮತ್ತು ಹಿಂಸೆ ಮಾಡುವುದರ ನಡುವೆ ಭಾಷೆಯ- ಅಲ್ಲ, ಭಾಷಾ ಅಸ್ಮಿತೆಯ- ಹೆಸರಿನಲ್ಲಿ ಈ ಮಹಾನ್ ನಟನ ಮೇಲೆ ವಿವಾದದ ಮೋಡ ಮುಸುಕಿದೆ. ಇವರೊಂದಿಗೆ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಸಹ ಅನಿವಾರ್ಯವಾಗಿ ಭಾಷಾಭಿಮಾನಿಗಳ ಆಗ್ರಹಕ್ಕೆ ತುತ್ತಾಗಿದ್ದಾರೆ. 300 ಕೋಟಿ ರೂ. ಬಂಡವಾಳದ ಕಮಲ್‌ಹಾಸನ್-ಮಣಿರತ್ನಂ ಸಹಯೋಗದ ಬಹು ನಿರೀಕ್ಷೆಯ ತಮಿಳು ಚಲನಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಲು ಕನ್ನಡದ ಸಿನೆಮಾದವರು ಕಮಲ್‌ಹಾಸನ್ ಅವರ ಕ್ಷಮಾಪಣೆಯನ್ನು ಬಯಸಿ ನಿಷೇಧ ಹೇರಿದ್ದರಿಂದ ಬಿಡುಗಡೆ ಮತ್ತು ಪ್ರತಿಭಟನೆಯಿಂದ ರಕ್ಷಣೆಯನ್ನು ಕೋರಿ ನಿರ್ಮಾಪಕರು ಕರ್ನಾಟಕದ ಉಚ್ಚ ನ್ಯಾಯಾಲಯದ ಮೆಟ್ಟಲೇರಿದ್ದಾರೆ. ನ್ಯಾಯಾಧೀಶರು ಕೆಲವು ಪ್ರಸ್ತುತವಾದ ಪ್ರಶ್ನೆಗಳನ್ನೆತ್ತಿದ್ದಾರೆ. ತಾನೇ ಸೃಷ್ಟಿಸಿದ ಸಮಸ್ಯೆಗೆ ತಾನೇ ಉತ್ತರ ಕಂಡುಕೊಳ್ಳಬೇಕಲ್ಲವೇ? ಸರಿಯೋ ತಪ್ಪೋ ಆಡಿದ ಮಾತಿನಿಂದ ಒಂದು ಗುಂಪಿಗೆ ನೋವಾದಾಗ ಅಥವಾ ತನ್ನ ಸಮುದಾಯಕ್ಕೆ ನಷ್ಟವಾಗುತ್ತದೆಂದು ಅರಿವಾದಾಗ ಕ್ಷಮಾಯಾಚನೆ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತದೆ. ಅದನ್ನು ಬಿಟ್ಟು ತನ್ನ ನಿಲುವಿಗೆ ಬದ್ಧನಾಗಿರುವವನು ಅದರಿಂದಾಗುವ ಕಷ್ಟ-ನಷ್ಟಗಳನ್ನೂ ಎದುರಿಸಲು ಸಿದ್ಧನಾಗಬೇಕು ಮತ್ತು ಅವುಗಳಿಗೆ ಬದ್ಧನಾಗಬೇಕು. ಈಗ ಚಲನಚಿತ್ರದ ಬಿಡುಗಡೆಯು ಮತ್ತು ಅದರಿಂದಾಗಿ ಪ್ರಕರಣವೂ ಒಂದು ವಾರ ಮುಂದೂಡಲ್ಪಟ್ಟಿದೆ. ನ್ಯಾಯಾಲಯವು ಹೇಳಿದ್ದು ಸಾಮಾಜಿಕ ವಿಷಮತೆಯನ್ನು ಹೋಗಲಾಡಿಸುವುದಕ್ಕೆ ಮಾತ್ರ. ಅದೇ ಕಾನೂನಿನ ಆದೇಶವೆಂದು ತಿಳಿಯಬೇಕಾಗಿಲ್ಲ. ಆಡಿದ ಮಾತಿನ ಸರಿ-ತಪ್ಪುಗಳು ಕನ್ನಡಿಗರ ಭಾವನೆಯನ್ನು ಅವಲಂಬಿಸಿಲ್ಲ. ಕೆಲವು ಕನ್ನಡಿಗರು ಕಮಲ್‌ಹಾಸನ್‌ರನ್ನು ಬೆಂಬಲಿಸಿದ್ದಾರೆಂದರೆ ಅದಕ್ಕೇನೂ ವಿಪರೀತಾರ್ಥ ಕಲ್ಪಿಸಬೇಕಾಗಿಲ್ಲ. ಆರು-ಏಳು ಕೋಟಿ ಕನ್ನಡಿಗರೆಲ್ಲ ಒಂದೇ ರೀತಿಯ ನಂಬಿಕೆಗಳನ್ನು, ಭಾವನೆಗಳನ್ನು, ವಿಚಾರಗಳನ್ನು ಬೆಂಬಲಿಸುತ್ತಾರೆಂದು ತಿಳಿಯುವುದು ಶಕ್ಯವಿಲ್ಲ. ಎಲ್ಲ ಕನ್ನಡಿಗರ, ಎಲ್ಲ ಭಾರತೀಯರ ಪರವಾಗಿಯೆಂಬಂತೆ ಮಾತನಾಡುವುದು ರಾಜಕಾರಣ. ಕಮಲ್‌ಹಾಸನ್ ವಿರುದ್ಧ ಮಾತನಾಡುವವರೆಲ್ಲ ಕನ್ನಡಾಭಿಮಾನಿಗಳೆಂದು ತಿಳಿಯುವುದು ಒಂದು ಭ್ರಮೆ. ಮನೆ ಉರಿಯುವಾಗ ಬೀಡಿ ಹಚ್ಚಿಕೊಳ್ಳುವವರು ಬೇಕಾದಷ್ಟಿದ್ದಾರೆ. ಅಪಘಾತವಾದಾಗ ಅಲ್ಲಿ ಚೆಲ್ಲಿದ ವಸ್ತುಗಳನ್ನು ಆಯ್ದುಕೊಳ್ಳುವವರೇ ಹೆಚ್ಚು. (ಈಗ ವೀಡಿಯೊ ಮಾಡುವವರ ಸಂಖ್ಯೆ ಇದನ್ನು ಮೀರಿಸಿದೆ!) ಸಂತ್ರಸ್ತರ ನೆರವಿಗೆ ಹೋಗುವವರು ಕಡಿಮೆ.

ಇನ್ನೊಂದು ಕಡೆ ಪಶ್ಚಿಮ ಬಂಗಾಳದಲ್ಲಿ ಶರ್ಮಿಷ್ಠಾ ಪನೋಲಿ ಎಂಬ ಒಬ್ಬ ಕಾನೂನು ವಿದ್ಯಾರ್ಥಿನಿಯು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಅಭಿವ್ಯಕ್ತಿ ಮತ್ತು ವೀಡಿಯೊದಿಂದಾಗಿ ದಸ್ತಗಿರಿಯಾಗಿದ್ದಾಳೆ. ಆಕೆಯ ಜಾಮೀನು ಅರ್ಜಿ ತತ್ಕಾಲಕ್ಕೆ ವಜಾ ಆಗಿದೆ. ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತಂದ ಆರೋಪ ಆಕೆಯ ಮೇಲಿದೆ. ಅನೇಕರು ಆಕೆಯ ಪರವಾಗಿ ಪಶ್ಚಿಮ ಬಂಗಾಳ ಸರಕಾರವನ್ನು ಅಲ್ಲಿನ ಪೊಲೀಸರನ್ನು ಹಳಿದಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಮೇಲಣ ಹಲ್ಲೆಯೆಂದು ಟೀಕಿಸಿದ್ದಾರೆ.

ಈ ಎರಡೂ (ಮತ್ತು ಇತ್ತೀಚೆಗೆ ದಸ್ತಗಿರಿ, ಬಂಧನಕ್ಕೊಳಗಾದ ಪ್ರೊ. ಅಲಿ ಖಾನ್ ಮಹ್ಮುದಾಬಾದ್ ಪ್ರಕರಣವೂ ಸೇರಿದಂತೆ ಹತ್ತಾರು ಇಂತಹ ಕಾನೂನಿನ ದುರ್ಬಳಕೆಯ) ಪ್ರಕರಣಗಳಲ್ಲಿ ಒಂದು ವಿಚಾರವನ್ನು ಗಮನಿಸಬೇಕು. ಇವು ಮಾತಿನ ಶಕ್ತಿ ಮತ್ತು ಪ್ರಭಾವವನ್ನು (ಮತ್ತು ಕೆಟ್ಟ ಮಾತಿಗೆ ಅನ್ವಯಿಸುವುದಾದರೆ ಸೋಂಕಿನ ಶಕ್ತಿಯನ್ನು) ಸಾರುತ್ತವೆ. ಆಹಾ ನಾಲಗೆಯ ಶಕ್ತಿಯೇ!

ಒಮ್ಮೆ ಕಾನೂನಿನ ಕ್ರಮ ಆರಂಭವಾಯಿತೆಂದರೆ ಅದು ಕಾನೂನಿನ ವ್ಯಾಪ್ತಿಯಲ್ಲಿ ಪರಿಗಣಿಸಲ್ಪಡುತ್ತದೆಯೇ ಹೊರತು ಭಾವನೆಗಳ, ಜನಾಭಿಪ್ರಾಯಗಳ ಆಧಾರದಲ್ಲಿ ಅಲ್ಲ. ಕಾನೂನನ್ನು ತಿರಸ್ಕರಿಸಿದರೆ ಸಮಾಜವು ದಿಕ್ಕುಗೆಡುತ್ತದೆ. ಆದ್ದರಿಂದ ಎಲ್ಲಿಯ ವರೆಗೆ ಜನರು ವಿವಾದಕ್ಕೆ ಎಡೆಕೊಡುವುದಿಲ್ಲವೋ ಅಲ್ಲಿಯವರೆಗೆ ಅವರನ್ನಾಳುವವರೂ ವಿವಾದಕ್ಕೆ ಕಾರಣಕರ್ತರಾಗಲು ಬಯಸುವುದಿಲ್ಲ. ಜನರು ವಿವಾದ ನಿರ್ಮಾಪಕರೋ, ಪಾಲಕ-ಪೋಷಕರೋ ಆದಾಗ ಆಳುವವರು ತಮ್ಮ ಅನುಕೂಲಕ್ಕೆ ಅದನ್ನು ಬಳಸಿಕೊಳ್ಳುವುದು ತಪ್ಪುವುದಿಲ್ಲ. ಚಾಣಕ್ಯನಾದರೂ ಸರಿಯೆ, ಮಖಿಯವೆಲ್ಲಿಯಾದರೂ ಸರಿಯೆ ಇಂತಹ ಸಾಧ್ಯತೆಯನ್ನು ಮತ್ತು ಅದರ ಹಿಂದಿನ ಕ್ರೌರ್ಯವನ್ನು ಅನಿವಾರ್ಯವಾಗಿಸುತ್ತಾರೆ. ಇಂತಹ ಪ್ರಕರಣಗಳನ್ನು ಗಮನಿಸಿದರೆ ನ್ಯಾಯಾಲಯಗಳು ಸರಕಾರವನ್ನು, ತನಿಖಾ ಸಂಸ್ಥೆಗಳನ್ನು ಕಟುವಾಗಿ ಟೀಕಿಸಿದಾಗಲೂ ಜಾಮೀನಿನ ಮೇಲೆ ಆರೋಪಿಗಳನ್ನು ಬಿಡುತ್ತಾರೆಯೇ ಹೊರತು ಆರೋಪದಿಂದ ಬಿಡುಗಡೆ ಮಾಡುವುದಿಲ್ಲ. ಅದಕ್ಕೆ ಪೂರಕವಾದ ನಡವಳಿಕೆಗಳು ಪೂರೈಸಿದ ಮೇಲಷ್ಟೇ ಬಿಡುಗಡೆಯ ಸೌಭಾಗ್ಯ. ಈ ನಡುವಣ ಅವಧಿಯಲ್ಲಿ ಪಡುವ ಪರಿತಾಪಗಳಿಗೆ, ಕಳೆದ ಕಾಲಕ್ಕೆ, ಪರಿಹಾರವಿಲ್ಲ. ಇದು ಕಾನೂನಿನ ಮಿತಿ.

ಕಾನೂನಿನಿಂದಲೇ ಎಲ್ಲವನ್ನೂ ಎದುರಿಸಬಹುದು ಅಥವಾ ಅದು ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತದೆ ಎಂಬುದು ಅತಾರ್ಕಿಕ ಮತ್ತು ಅಸಹಜ. ಸೆರೆಮನೆಯಲ್ಲೇ ಸತ್ತ ನಿರಪರಾಧಿಗಳಿದ್ದಾರೆ. ಆದ್ದರಿಂದ ಎಲ್ಲ ಹಕ್ಕುಗಳಿಗೆ ಪರಿಹಾರವಿರುವುದಿಲ್ಲ. ಕೊಲೆಗಾರನಿಗೆ ದಂಡನೆ ವಿಧಿಸಿದರೆ ಸತ್ತವನು ಎದ್ದುಬರುವುದಿಲ್ಲ. ಕಾನೂನು ಎಂದರೆ ಮುಖಕ್ಕೆ ಉಗುಳಿದವನಿಗೆ ಸಮಾಧಾನ ಹೇಳಿ ಅದನ್ನು ಒರೆಸಿ, ಉಗುಳಿದವನಿಗೆ ದಂಡನೆ ನೀಡಿದ ಹಾಗೆ. ಆದ ಅವಮಾನ ಅಪರಿಹಾರ್ಯ.

ವ್ಯಕ್ತಿ ಸ್ವಾತಂತ್ರ್ಯವಾಗಲೀ, ಅಭಿವ್ಯಕ್ತಿ ಸ್ವಾತಂತ್ರ್ಯವಾಗಲೀ, ಸಾಂದರ್ಭಿಕವಾಗಿ ಹ(ಗ)ರಣವಾಗುತ್ತದೆ. ಇದು ಸಾಮಾಜಿಕ ನಿಯಮ. ಮರಣದಂಡನೆ ಮತ್ತು ಸೆರೆಮನೆವಾಸ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆರೋಪಿಯು/ಆಪಾದಿತನು ಸೆರೆಮನೆಯನ್ನು ಆಯ್ಕೆಮಾಡಿದರೆ ಆತ ತನ್ನ ಸ್ವಾತಂತ್ರ್ಯವನ್ನು ಇಷ್ಟಪಡುವುದಿಲ್ಲವೆಂದಾಗಲೀ, ಅದನ್ನು ಕಳೆದುಕೊಳ್ಳಲು, ಸೆರೆವಾಸದ ಪಾರತಂತ್ರ್ಯವನ್ನು ಎಳೆದುಕೊಳ್ಳಲು ಇಷ್ಟಪಟ್ಟಿದ್ದಾನೆಂದಾಗಲೀ, ಅವಕಾಶವಾದವೆಂದಾಗಲೀ ಅರ್ಥವಲ್ಲ. ಸಾವು-ಬದುಕಿನ ನಡುವೆ ಆತ ಬದುಕನ್ನು ಆಯ್ಕೆ ಮಾಡಿಕೊಂಡಿದ್ದಾನೆಂದು ಮತ್ತು ಬದುಕಿದರೆ ಮತ್ತೆ ಸ್ವಾತಂತ್ರ್ಯವನ್ನು ಸಂಪಾದಿಸಲು ಕಾಯುತ್ತಿದ್ದಾನೆಂದು ತಾತ್ಪರ್ಯ. ಅದು ಸೋತು ಗೆಲ್ಲುವ ತಂತ್ರ. ಪ್ರಾಯಃ ಝೆನ್ ತತ್ವವೂ ಹೀಗೆಯೇ. ಒಪ್ಪಿಕೊಳ್ಳುವುದು.

ಸದ್ಯ ಚರ್ಚೆಯಾಗುತ್ತಿರುವುದು ಮಾತಿನ ಮತ್ತು ಮಾತಿನ ಮೂಲಕ ಸ್ಥಾಪಿತವಾಗುವ ಕೃತಿಯ ಬಗ್ಗೆ ಮತ್ತು ಅದು ಸೃಷ್ಟಿಸಬಲ್ಲ ಗೊಂದಲದ ಬಗ್ಗೆ. ಮಾತೆಂದರೆ ಸದ್ದಿನ ನಿಯಮಿತ, ನಿಗದಿತ, ಬಳಕೆ. ಮನುಷ್ಯನಿಗೆ ಮಾತ್ರ ದತ್ತವಾಗಿರುವ ಅಭಿವ್ಯಕ್ತಿ. ವಿಶ್ವದ ಭಿನ್ನಭಾಗಗಳಲ್ಲಿ ಭಿನ್ನ ರೀತಿಯಲ್ಲಿ ಮಾತು ಅಭಿವ್ಯಕ್ತಿಯಾಗುತ್ತಿದೆ. ಈ ರೀತಿನೀತಿಗೆ ಭಾಷೆ ಎಂಬುದು ಹೆಸರು. ಅದು ಯಾಕೆ ಹೇಗೆ ಆರಂಭವಾಯಿತೋ ಎಂಬುದು ಸಂಕೀರ್ಣ ಸಂಗತಿ. ಅದರ ಬಳಿಕ ಬಂದ ಹಾಡು, ಬರೆಹ, ಪ್ರಕಟಣೆ ಇವೆಲ್ಲ ಸದ್ದಿನ ಮರಿಗಳು. ಇವನ್ನು ಹೇಗೆ, ಏಕೆ, ಎಲ್ಲಿ, ಯಾವಾಗ ಮತ್ತು ಯಾರೊಂದಿಗೆ ಪ್ರಕಟಿಸಬೇಕು ಎಂಬುದು ವಿವೇಕ. ವರ್ತಮಾನದ ಸಮಾಜದಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಮಾತು ಬಳಕೆಯಾಗುತ್ತಿದೆಯೆಂದರೆ ಅದಕ್ಕೆ ಮಿತಿಯಿದ್ದಿದ್ದರೆ ಚೆನ್ನಾಗಿತ್ತಲ್ಲವೇ ಎಂದು ಅನ್ನಿಸಿದರೆ ತಪ್ಪಲ್ಲ. ಪ್ರಾಥಮಿಕವಾಗಿ ಮಾತಿನ ಉಪಕರಣವಾಗಿರುವ ಮೊಬೈಲಿನಂತೆ ಮಾತು ಕೂಡಾ ಒಳ್ಳೆಯ, ಕೆಟ್ಟ, ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕನಸಿನಲ್ಲೋ ಕುಡಿತದ ಅಮಲಿನಲ್ಲೋ ಆಡಿದರೆ ಅದಕ್ಕೊಂದು ಕ್ಷಮೆ ಅಥವಾ ಕ್ಷಮಿಸಬಲ್ಲ ವಿವರಣೆಯನ್ನು ನೀಡಬಹುದು. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಹಿರಂಗವಾಗಿ, ಆಡಿದ ಪ್ರಜ್ಞಾಪೂರ್ವಕ ಅಭಿವ್ಯಕ್ತಿ ಪರರಿಗೆ ನೋವನ್ನುಂಟುಮಾಡಿದರೆ ಅದಕ್ಕೆ ಯಾರು ಕ್ಷಮೆ ಕೊಡಬೇಕು? ಅದು ವೈಯಕ್ತಿಕ ಟೀಕೆಯಾದಲ್ಲಿ ಸಂಬಂಧಿತ ವ್ಯಕ್ತಿಯು ಕ್ಷಮಿಸಿ ದಾಟಿ ಹೋಗಬಹುದು. ಸಮೂಹವನ್ನು ಹಳಿದಾಗ ಯಾರಾದರೊಬ್ಬ ನೊಂದು ಕ್ರಮವನ್ನು ಕೈಗೊಂಡಾಗ ಅದೊಂದು ‘ಪ್ರಕರಣ’ವಾಗುತ್ತದೆ. ಆಗ ಅದು ಸಂದರ್ಭ ಮತ್ತು ವಿಷಯ-ವಿಚಾರವನ್ನು ದಾಟಿ ಕಾನೂನಿನಡಿ ಇತ್ಯರ್ಥವಾಗಬಲ್ಲ ವಸ್ತುವಾಗುತ್ತದೆ; ವಿವಾದ-ಸಮಸ್ಯೆಯಾಗುತ್ತದೆ.

ಅನೇಕ ಬಾರಿ ಕಾನೂನಿನಡಿ ತೀರ್ಮಾನಿಸುವವರಿಗೆ ವಿಚಾರದ ಮತ್ತು ಅದರ ಜ್ಞಾನವ್ಯಾಪಿ ಹಿನ್ನೆಲೆಯ ಬಗ್ಗೆ ಅರಿವಿರಬೇಕಾಗಿಲ್ಲ. ಅದನ್ನು ಕಾನೂನಿನ ವ್ಯಾಪ್ತಿಯಲ್ಲಿ ಅರ್ಥವಿಸುತ್ತಾರೆಯೇ ವಿನಾ ಅದು ಸಾರ್ವಕಾಲಿಕ ಸತ್ಯವಾಗಬೇಕಾಗಿಲ್ಲ. ನ್ಯಾಯಾಧೀಶರುಗಳಿಗೂ ಭಾವುಕ ಹಿನ್ನೆಲೆಯ ಮಿತಿಗಳಿರುತ್ತವೆ. ಅವುಗಳ ಪ್ರಭಾವದಲ್ಲಿ ಅವರು ತೀರ್ಮಾನಿಸುವುದೂ ಉಂಟು. ‘ಆ ರಾತ್ರಿ ಅವರು ಬೇರೆಯಾಗಲಿಲ್ಲ’ (That night they were not seperated) ಎಂಬ ವಾಕ್ಯವಿದ್ದದ್ದಕ್ಕೆ 1930ರ ದಶಕದಲ್ಲಿ ಒಂದು ಕಾದಂಬರಿಯು (ಅಶ್ಲೀಲವೆಂದು ತೀರ್ಮಾನವಾಗಿ) ನಿಷೇಧಿಸಲ್ಪಟ್ಟಿತ್ತು. ತೀರಾ ಸಾಂಪ್ರದಾಯಿಕ ಮತ್ತು ಕೌಟುಂಬಿಕ ಹಿನ್ನೆಲೆಯ ನ್ಯಾಯಾಧೀಶರುಗಳಿಗೆ ಡಿ.ಎಚ್. ಲಾರೆನ್ಸ್‌ನ ‘ಲೇಡಿ ಚಾಟರ್ಲಿಸ್ ಲವರ್’ (Lady Chatterley’s Lover) ಅಶ್ಲೀಲವೆಂದು ಕಂಡಿತಲ್ಲದೆ ಅದರ ಸಾರಸ್ವತ ಮೌಲ್ಯಗಳು ಕಾಣಲಿಲ್ಲ; ಪರಿಣಾಮವಾಗಿ ಅದನ್ನು ಮಾರಿದ ಪುಸ್ತಕದಂಗಡಿಯವನು ಅಪರಾಧಿಯಾದ. ಮಾತು ಎಂದರೆ ಮಾತಷ್ಟೇ ಅಲ್ಲ; ಅದರರ್ಥ ಕೂಡಾ. ಅರ್ಥವಾಗದವರಿಗೆ ಯಾವ ಮಾತೂ ಸಹ್ಯವಾಗಬಹುದು; ಅಸಹ್ಯವೂ ಆಗಬಹುದು. ಇಂದು ಮಾತು ಮಾತ್ರ ಸಮಸ್ಯೆಯಲ್ಲ; ಅದರರ್ಥ, ಅಂತರಾರ್ಥ ಸಹ ಸಮಸ್ಯೆಯ ಬೀಜವಾಗುವ ಶಕ್ತಿಯನ್ನು ಹೊಂದಿದೆ. ಅಶ್ಲೀಲವೆಂದರೆ ಲೈಂಗಿಕತೆಯೆಂದಷ್ಟೇ ಅರ್ಥವಲ್ಲ; ಮನುಷ್ಯತ್ವಕ್ಕೆ, ಮಾತಿನ ಗುಣಶೀಲಕ್ಕೆ ವಿರುದ್ಧವಾದದ್ದೆಲ್ಲ ಅಶ್ಲೀಲವೇ. ಆದರೆ ಇದು ಸಾಮಾನ್ಯರಿಗೆ ಮಾತ್ರವಲ್ಲ, ಪ್ರಾಜ್ಞರಿಗೂ ಅರಿವಾದಂತಿಲ್ಲ. ಮಾತು ಹೇಗಿರಬೇಕೆಂದು ಹೇಳಿದ್ದು, ಮುತ್ತಿನ ಹಾರ, ಸ್ಫಟಿಕದ ಶಲಾಕೆ, ಮಾಣಿಕ್ಯ ದೀಪ್ತಿ ಎಂದದ್ದು ಇದಕ್ಕೇ. ನುಡಿದರೆ ಹೇಗಿರಬೇಕು ಎಂಬುದನ್ನು ವಚನಕಾರರು ಅನನ್ಯವಾಗಿ ಬಣ್ಣಿಸಿದ್ದಾರೆ. ಒಳ್ಳೆಯವರು, ಒಳ್ಳೆಯದನ್ನು ಎಷ್ಟು ಬೇಕಾದರೂ ಮಾತನಾಡಲಿ; ಶುಭ ನುಡಿಯಲಿ, ಸತ್ಯವನ್ನು ನುಡಿಯಲಿ. ಅದು ವ್ಯಾಪಿಸಲಿ; ಅದನ್ನು ಕವಿ ‘ಏ ಗಾಳಿ ಹೇಳಿ ಮುಂದಕೆ ತೆರಳು’ ಎಂದರು. ಮಾತಿನ ಡೊಂಬನಾಗುವುದಕ್ಕಿಂತ ಮೌನದ ಮೂಕಪ್ರಾಣಿಯಾಗಿರುವುದೇ ಲೇಸೇನೋ ಎಂದರು ಇನ್ನೊಬ್ಬರು. ಪ್ರಾಣಿ ಜಗತ್ತು ಈ ಕಾರಣಕ್ಕೇ ಹೆಚ್ಚು ಸಾಮರಸ್ಯವನ್ನು ಹೊಂದಾಣಿಕೆಯನ್ನು ಕಂಡಿದೆಯೆಂದು ಕಾಣುತ್ತದೆ.

ಇವತ್ತು ಲಿಂಗ ಮಾತನಾಡುವುದಿಲ್ಲ; ಸೂಚಿಸುವುದೂ ಇಲ್ಲ. ಆದರೆ ಪ್ರಜ್ಞಾವಂತರು ‘ಅಹುದಹುದು’ ಎನಬೇಕು. ಈಗ ಅದಿಲ್ಲ. ಅದೂ ಸಾಲದೇ ಇರುವ ಸ್ಥಿತಿ ಈಗ ಇದೆ. ಯಾರೋ ಎಲ್ಲೋ ಆರೋಪ ಸಲ್ಲಿಸಿದರೆ ಧರ್ಮರಾಜನಾದರೂ ಕಾನೂನಿನಡಿ ಅಲೆಯಬೇಕಾದ್ದು ಅನಿವಾರ್ಯ. ವಿಶೇಷವೆಂದರೆ ವೈಚಾರಿಕ ಹಿನ್ನೆಲೆಯಿರುವವರೂ, ಸಿದ್ಧಾಂತಗಳ ಮಾತನ್ನಾಡುವವರೂ ಬಹಿರಂಗ ಚರ್ಚೆಗೆ ಸಿದ್ಧರಿಲ್ಲ. ಅಲ್ಲಿ ಈ ಅಹುದಹುದೆನಿಸುವ ಪ್ರಜ್ಞಾವಂತರ ಆಖಾಡಕ್ಕೆ ಅವರು ಬರುವುದಿಲ್ಲ. ಕಿರುಕುಳಕ್ಕೆ ಹೆಸರಾದ ಅನಿವಾರ್ಯವಾದ ಕಾನೂನಿನಡಿಯೇ ಅವರ ಕಾಟ. ನಮ್ಮ ಸಮಾಜದಲ್ಲೇ ಬಹಳಷ್ಟು ಮಂದಿ ಇಂತಹ ಕೇಡಿಗೆ ಬಲಿಯಾಗಿದ್ದಾರೆ; ಬಲಿಯಾಗುತ್ತಲೇ ಇದ್ದಾರೆ.

ರಾಜಕಾರಣದಲ್ಲಂತೂ ಮಾತು ಒಂದು ಶಾಪ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ ಇವೆಲ್ಲ ಜನಪ್ರಿಯತೆಯ ವ್ಯಸನಗಳ ಈ ವಿಷಮಯ ಪ್ರದರ್ಶನಗಳ ವೇದಿಕೆಗಳು. ರಾಜಕಾರಣಿಗಳು ಏನು ಹೇಳಿದರೂ ಅವನ್ನು ತಮ್ಮ ಪೀಕದಾನಿಯಲ್ಲಿ ತುಂಬಿಟ್ಟುಕೊಂಡು ಹಂಚುವವರೇ ಹೆಚ್ಚು. ಅಮೇಧ್ಯದಲ್ಲಿ ಸುಖ ಕಾಣುವ ನೊಣಗಳಂತೆ ವರದಿ ಮಾಡುವವರೇ ಅಸಂಖ್ಯ. ಇದರಿಂದಾಗಿ ಬಹಳಷ್ಟು ಜನರು ಒಳ್ಳೆಯದನ್ನು ಮಾತನಾಡುವುದಕ್ಕಿಂತ ಕೆಟ್ಟದ್ದನ್ನು ಮಾತನಾಡುವುದೇ ಜನಪ್ರಿಯತೆಗೆ ಮೆಟ್ಟಲೆಂದು ನಂಬಿದ್ದಾರೆ. ಹಾಗಾಗಿ ರಾಜಕಾರಣಿಗಳು ಆಡಬೇಕಾದ್ದಕ್ಕಿಂತ ಹೆಚ್ಚಾಗಿ ಆಡಬಾರದ್ದನ್ನೇ ಆಡುತ್ತಾರೆ. ಹೀಗೆ ಮಾತನ್ನು ಎಷ್ಟು ಕೆಳಮಟ್ಟಕ್ಕಿಳಿಸುತ್ತಾರೋ ಅದಕ್ಕಿಂತ ಸ್ವಲ್ಪವಾದರೂ ಕೆಳಮಟ್ಟದಲ್ಲಿ ಆತನ ಎದುರಾಳಿ ಮಾತನಾಡುತ್ತಾನೆ. ಇದು ಸ್ಪರ್ಧಾತ್ಮಕವಾಗಿ ಮತ್ತು ಕೆಳಮುಖವಾಗಿ ಚಲಿಸುತ್ತಿರುತ್ತದೆ. ಅತ್ಯಂತ ಅಳದ ಮಟ್ಟದಲ್ಲಿ ಇದಕ್ಕೆ ಕೊನೆಗಾಣಿಸಿದವನು ಆತನ ಸಮೂಹದ ಜನನಾಯಕನೆನಿಸುತ್ತಾನೆ. ಈತನ ಆದರ್ಶಗಳನ್ನು ಸಮಾಜ ತಾರತಮ್ಯವಿಲ್ಲದೆ ಅನುಸರಿಸುತ್ತದೆ. ಏನಕೇನ ಪ್ರಕಾರದಂತೆ ಜನಪ್ರಿಯತೆಯು ಹೇಗೆ ಬಂದರೂ ಸುಖವೆಂಬ ಕಾಲ ಇದು. ಈ ವ್ಯೆಹದ ಹಾಳುಬಾವಿಯಲ್ಲಿ ಬುದ್ಧಿವಂತರೂ, ಧೂರ್ತರೂ, ಮೂರ್ಖರೂ, ದಡ್ಡರೂ ಕಂಬಳಕನಂತೆ ಬಿದ್ದಿರುತ್ತಾರೆ. ಅಲ್ಲಿಂದ ಮೇಲೆತ್ತುವ ಭವಭೂತಿ ಬರಬೇಕಲ್ಲ, ಎಲ್ಲಿದ್ದಾನೆ? ಆತ ಬಂದರೂ ಬಂದ ಇವರನ್ನೆತ್ತಿದರೂ ಈ ಕಂಬಳಕರು ಆತನಿಗೂ ಕೃತಘ್ನರಾಗುತ್ತಾರೆಯೇ ಹೊರತು ಮತ್ತೆ ಗುಣ ಕಾಣುವುದಿಲ್ಲ.

ಇರುವುದು ಒಂದೇ ಪರಿಹಾರ: ಪ್ರಾಣಿಗಳಿಂದ ಬೇರೆಯಾಗಿ, ಪ್ರತ್ಯೇಕವಾಗಿ, ಶಬ್ದಗಂಧವನ್ನು ಧರಿಸಿದ ಮನುಷ್ಯರಿಗೆ ಮೊಬೈಲಿನಂತೆ ಮಾತಿನ ನೆಲೆ-ಬೆಲೆಗಳ ಒಂದು ಶಕ್ತಿಯ ಎಲ್ಲೆಯನ್ನು ಗುರುತಿಸಬೇಕು. ಯಾವುದೋ ಗುಣಮಾನವನ್ನು ದಾಟಿದೊಡನೆಯೇ ಅದು ನಿಲ್ಲಬೇಕು. ಮಾತು ಬ್ಯಾಟರಿ ಚಾಲಿತ ಪೆಟ್ಟಿಗೆಯಾದರೆ ಒಳ್ಳೆಯದು. ಆಗ ಅದು ಒಂದು ಗಡಿ ದಾಟಿದೊಡನೇ ನಿಲ್ಲಬಹುದು. ದೇವರೋ ಇನ್ನೊಬ್ಬನೋ ಅಥವಾ ವಿಜ್ಞಾನವೋ ಈ ಮಾತಿನ ಸೃಷ್ಟಿಗೆ ಕಾರಣವಾದ ಶಕ್ತಿಯು ಕೆಟ್ಟ ಮಾತಿನ ನಿಯಂತ್ರಣದ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕು.

ನಾಲಗೆ ಬಾಯಿಯೊಳಗೇ ಇರುವ ಸಾಧನ. ಅದು ಎಲುಬಿಲ್ಲದ್ದು. ಅಲ್ಲದೆ ಹೊರಚಾಚಬಹುದಾದ್ದು. ಅದು ಹೊರಬಂದಾಗ ಅದಕ್ಕೆ ತನ್ನ ಎಲ್ಲೆ ಯಾವುದು ಎಂಬುದನ್ನು ಹೇಗೆ ಹೇಳಬಹುದು? ಯಾರು ಹೇಳಬಹುದು?

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X