ವಿಮರ್ಶೆಯ ಸ್ವವಿಮರ್ಶೆ

ವಿಮರ್ಶೆಯ ಕುರಿತ ಲೇಖನಗಳಿಗೆ ಮೀಸಲಾಗಿಟ್ಟ ಒಂದು ವಿಶೇಷಾಂಕವನ್ನು ವಿಮರ್ಶೆಗೆ ಒಳಪಡಿಸುವುದು ಸರಿಯೋ ತಪ್ಪೋ ಗೊತ್ತಿಲ್ಲ. ಒಂದು ಬಗೆಯಲ್ಲಿ ಈ ಕೃತಿಯ ಬಹುಪಾಲು ಒಂದೇ ಚಿಂತನೆ (ಸ್ಕೂಲ್ ಆಫ್ ಥಾಟ್)ಗೆ ಸೇರಿದ ಲೇಖಕರ, ಬಜೆಟ್‌ಪೂರ್ವ ಕಾರ್ಪೊರೇಟ್ ಅಭಿಪ್ರಾಯ ಸಂಗ್ರಹದಂತಿರುವುದರಿಂದ ಇದು ಸಾಹಿತ್ಯ ವಿಮರ್ಶೆಗೆ ಅಥವಾ ಸದ್ರಿ ಕೃತಿಯೇ ಹೆಸರಿಟ್ಟುಕೊಂಡಂತೆ ಪರಾಮರ್ಶೆಗೆ ಹೊಂದಬಹುದೆಂದುಕೊಂಡಿದ್ದೇನೆ.
ಸಾವಿರಾರು ವಿಮರ್ಶಾ ಲೇಖನಗಳು ಬಂದಿದ್ದರೂ ವಿಮರ್ಶೆಯ ಕುರಿತಾದ ಕೃತಿಗಳು ಅಪರೂಪವೆಂಬಷ್ಟು ಕಡಿಮೆ. ಕನ್ನಡದ ಹಿರಿಯ ಸಾಹಿತಿ ಮಾಸ್ತಿ ‘ವಿಮರ್ಶೆ’ ಎಂಬ ಕೃತಿಯನ್ನು ತಂದಿದ್ದರು. ಆನಂತರ ಮತ್ತೊಬ್ಬ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರೂ ‘ವಿಮರ್ಶೆಯ ವಿಮರ್ಶೆ’ ಎಂಬ ಕೃತಿಯನ್ನು ತಂದಿದ್ದರೆಂದು ನೆನಪು.
ಇಷ್ಟಕ್ಕೂ ವಿಮರ್ಶೆಯ ಕುರಿತು ಯಾರು ಬರೆಯಬೇಕು? ಎಲ್ಲವನ್ನೂ ಎಲ್ಲರನ್ನೂ ವಿಮರ್ಶಿಸುವ ವಿಮರ್ಶೆಯೇ ವಿಮರ್ಶೆಗೆ ಗುರಿಯಾದರೆ? ಎಲ್ಲ ಓದುಗರೂ ಒಂದಲ್ಲ ಒಂದರ್ಥದಲ್ಲಿ ವಿಮರ್ಶಕರೇ. ಒಳ್ಳೆಯದು, ಕೆಟ್ಟದ್ದು ಎಂದು ಗುರುತಿಸಿದರೆ ಸಾಲದಲ್ಲ! ಇನ್ನೂ ಒಂದು ಹಂತ ಅಂದರೆ ಕೃತಿ ಮುಖ್ಯವೇ ಮತ್ತು ವೈಶಿಷ್ಟ್ಯಪೂರ್ಣವೇ ಎಂಬ ತರ್ಕಕ್ಕೆ ಸಾಕಷ್ಟು ಮತ್ತು ವ್ಯಾವಹಾರಿಕವಲ್ಲದ ಒಳಗಣ್ಣು ಬೇಕು.
ವಿಮರ್ಶೆಯೆಂಬ ಹಣೆಪಟ್ಟಿಯಲ್ಲಿ ಬಂದ, ಬರುತ್ತಿರುವ ಲೇಖನಗಳೆಲ್ಲ ವಿಮರ್ಶೆಗಳಲ್ಲ ಎಂಬುದನ್ನು ಬಹುತೇಕ ಲೇಖಕರು ಒಪ್ಪುತ್ತಾರೆ. ಕನ್ನಡ ವಿಮರ್ಶೆ ಬಿಕ್ಕಟ್ಟಿನಲ್ಲಿದೆಯೆಂಬುದನ್ನು ವಿಮರ್ಶೆಯ ಉನ್ನತ ಹಂತವೆಂಬಂತಿದ್ದ ನವ್ಯಸಾಹಿತ್ಯದ ಕಾಲದಲ್ಲೇ ಅನೇಕರು ಗುರುತಿಸಿದ್ದರು.
‘‘ತಮ್ಮ ಸ್ವತಂತ್ರ ವಿಚಾರಧಾರೆಯಿಂದ ಸಾಹಿತ್ಯ ವಿಮರ್ಶೆಗೇ ಹೊಸ ತಿರುವನ್ನು ಕೊಡುವ ಪ್ರಭಾವಶಾಲೀ ವಿಮರ್ಶಕರು ನಮ್ಮಲ್ಲಿ ಯಾಕೆ ಹುಟ್ಟುವುದಿಲ್ಲ?’’ ಎಂಬ ಪ್ರಶ್ನೆ,
‘‘ಒಟ್ಟಿನಲ್ಲಿ ನಾಳಿನ ವಿಮರ್ಶೆಯ ಭವಿಷ್ಯ ಅಷ್ಟೇನೂ ಆಶಾದಾಯಕ ವಾಗಿಲ್ಲ. ಲೇಖಕರು ಸ್ವಪ್ರತಿಷ್ಠೆಗಾಗಿ, ತಮ್ಮ ಸ್ಥಾನಗಳ ಭದ್ರತೆಗಾಗಿ ವಿಮರ್ಶಕರ ಸೋಗನ್ನೂ ಹಾಕಿ ಇನ್ನುಳಿದ ಲೇಖಕರನ್ನು ಹಾಗೂ ವಿಮರ್ಶಕರನ್ನು ಹಿಡಿದು ಜಗ್ಗುವ ಹೀನಾಯ ತಂತ್ರಗಳನ್ನೆಲ್ಲ ಉಪಯೋಗಿಸತೊಡಗಿದ್ದಾರೆ. ನಮ್ಮ ಲೇಖಕರು ವಿಮರ್ಶೆಯನ್ನು ಆಟಗಾರಿಕೆಯ ಮನೋಭಾವದಿಂದ ಸ್ವೀಕರಿಸಬಹುದೆಂದು ಹುಟ್ಟಿದ್ದ ನಿರೀಕ್ಷೆಗಳು ಈಗ ಪೂರ್ತಿ ಸುಳ್ಳಾಗಿವೆ. ವಿಮರ್ಶೆ ಇಂದು ದೊಡ್ಡದೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಸುತ್ತಲೂ ನಡೆದಿರುವ ವಿಧ್ವಂಸಕ ಕೃತ್ಯಗಳ ನಡುವೆ ಧೃತಿಗೆಡದೆ ನಿಷ್ಪಕ್ಷಪಾತಿಯಾಗಿ ನಿಂತುಕೊಂಡು ಈ ಬಿಕ್ಕಟ್ಟನ್ನು ಎದುರಿಸಬಲ್ಲ ವಿಮರ್ಶಕರು ಇಂದು ಬರಬೇಕಾಗಿದೆ.’’
(ಗಿರಡ್ಡಿ ಗೋವಿಂದರಾಜ- ಸಾಹಿತ್ಯ ಮತ್ತು ಪರಂಪರೆ, 1981)
ಮುಂತಾದ ಅಭಿಪ್ರಾಯಗಳು ಪ್ರಚಲಿತವಿವೆ. ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇಂದಿಗೂ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಬಹುಪಾಲು ವಿಮರ್ಶೆಗಳು ಓದುಗರನ್ನು ಹೆಚ್ಚಿಸಿಕೊಳ್ಳಲು ಮತ್ತು ಪುಸ್ತಕ ಮಾರಾಟಕ್ಕೆ ಅನುವು ಮಾಡಿಕೊಡಲು ಬರೆದಂಥವುಗಳು ಎಂಬ ದಿಟ್ಟ ಸಂಶಯಗಳು ದಟ್ಟವಾಗಿವೆ. ಇಂತಹ ಅಭಿವ್ಯಕ್ತಿಗೆ ಈಗಿರುವ ಮಾಧ್ಯಮವೇದಿಕೆಗಳೂ, ಸಾಹಿತ್ಯಪತ್ರಿಕೆಗಳೂ ಸಂಕಿರಣಗಳೂ, ಸಂವಾದಗಳೂ ಅವಕಾಶ ನೀಡುವುದಿಲ್ಲವೆಂಬುದೂ ಒಂದು ಸಾಧುವಾದ ವಾದ.
ಈ ತಲೆಮಾರಿನ ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಮೊದಲಿನಿಂದಲೂ ಕನ್ನಡ ವಿಮರ್ಶೆಯ ಮಿತಿಗಳನ್ನು ಗುರುತಿಸಿದವರು. 20ನೇ ಶತಮಾನದ ಕನ್ನಡ ವಿಮರ್ಶೆಯ ಕುರಿತು ಅವರ ಕೆಲವು ಅಭಿಪ್ರಾಯಗಳನ್ನು ಗಮನಿಸೋಣ:
‘‘ಸಾಹಿತ್ಯ ವಿಮರ್ಶೆಯ ಕುರಿತಾದ ಚರ್ಚೆಯು ಸ್ವಾಭಿಮುಖವಾದ ಕಥನವಾಗುವುದು ಅನಿವಾರ್ಯ. ಆದರೆ ಅದು ನಿರ್ಲಿಪ್ತವೂ ವಸ್ತುನಿಷ್ಠವೂ ಆಗುವುದು ಸಾಧ್ಯವಿಲ್ಲ.’’
‘‘ಕನ್ನಡ ವಿಮರ್ಶೆಯು ಮೊದಲಿನಿಂದಲೂ ಸಮಾಜಮುಖಿಯೇ ವಿನಾ, ಜೀವನಮುಖಿಯೇ ವಿನಾ, ಕಲಾಮುಖಿಯಲ್ಲ. ಆದ್ದರಿಂದಲೇ ಸಾಹಿತ್ಯ ತತ್ವ, ವಿಮರ್ಶಾಪಂಥಗಳು, ಶೈಲಿ-ಪ್ರತಿಮೆ-ಪ್ರತೀಕಗಳಂತಹ ಪರಿಕರಗಳು, ಛಂದಸ್ಸು, ಶಿಲ್ಪಗಳಂಥ ಆಕೃತಿ ನಿರ್ದಿಷ್ಟಗಳು, ನಮ್ಮ ವಿಮರ್ಶಕ ಓದುಗರನ್ನು ತಮ್ಮ ಪ್ರತ್ಯೇಕತೆಯಲ್ಲಿ ಆಕರ್ಷಿಸಿರುವುದು ಬಹಳ ಕಡಿಮೆಯೇ. ಹಾಗೆಯೇ ವಿವಿಧ ಜ್ಞಾನಶಾಖೆಗಳ ನೆಲೆಯಲ್ಲಿ ಸಾಹಿತ್ಯವನ್ನು ಸತತವಾಗಿ ಪರಿಶೀಲಿಸುವ ಬರಹಗಾರರು ಆಯಾ ಶಿಸ್ತುಗಳಿಂದಲೂ ಮೂಡಿಬಂದಿಲ್ಲ. ಸಾಹಿತ್ಯದ ವಿದ್ಯಾರ್ಥಿಗಳೂ ಅಂಥ ‘ಎಕ್ಸ್‌ಕ್ಲೂಸಿವ್’ ಅಸ್ತಿತ್ವವನ್ನು ಅಪೇಕ್ಷಿಸಿಲ್ಲ. ಹೀಗಾಗಿ ಕನ್ನಡದ ಸಂದರ್ಭದಲ್ಲಿ ಮನಶ್ಯಾಸ್ತ್ರೀಯ ವಿಮರ್ಶಕ, ಆರ್ಕಿಟೈಪಲ್ ವಿಮರ್ಶಕ, ಸಮಾಜಶಾಸ್ತ್ರೀಯ ವಿಮರ್ಶಕ ಮುಂತಾದ ವಿಶೇಷಣಗಳಿಗೆ ಅರ್ಥವಿಲ್ಲ. ಬದಲಾಗಿ ಆಶಯಗಳ ನೆಲೆಯಿಂದಲೇ ಹೊರಡುವ, ಸಮಾಜವಾದೀ ವಿಮರ್ಶಕ, ಸ್ತ್ರೀವಾದೀ ವಿಮರ್ಶಕಿ ಮುಂತಾದ ವಿವರಣೆಗಳು ಹೆಚ್ಚು ಉಪಯುಕ್ತವಾಗಬಹುದು.’’
‘‘ಸಾಹಿತ್ಯ ವಿಮರ್ಶೆಯು ಪರಸ್ಪರ ಸಂವಾದವಾಗಲಿ ವಾಗ್ವಾದವಾಗಲಿ ನಡೆಯದ ದ್ವೀಪಗಳಾಗಿ ಒಡೆದಿರುವುದು ಒಂದು ದುರಂತ. ಇಂಥ ದ್ವೀಪ ನಿರ್ಮಿತಿಗೆ ವಿಮರ್ಶೆಯ ಪಾರಂಪರಿಕತೆ ಮತ್ತು ಸಾತತ್ಯಗಳ ಬಗೆಗಿನ ಅನಾದರವೂ ಒಂದು ಕಾರಣ. ಯಾರು ಏನು ಹೇಳಿದ್ದರೆ ನನಗೇನು? ನಾನು ಹೇಳುವುದು ನನಗೆ ಮುಖ್ಯ ಎಂಬ ನಿಲುವು ಕೃತಿಯೊಡನೆ ಸಂವಾದ ಸಾಧ್ಯತೆಗಳನ್ನು ಕಾಪಾಡಿಕೊಳ್ಳುತ್ತದೆ. ಆದರೆ ಸ್ವೋಪಜ್ಞತೆಯ ಭ್ರಮೆ ಮತ್ತು ಪುನರಾವರ್ತನೆಯ ಪಿಡುಗುಗಳಿಂದ ನರಳುತ್ತದೆ.’’
(ಶತಮಾನದ ಸಾಹಿತ್ಯ ವಿಮರ್ಶೆ, ಕರ್ನಾಟಕ ಸಾಹಿತ್ಯ ಅಕಾಡಮಿ, 2001, ಪುಟ xxix)
ಸುಮಾರು ಕಾಲು ಶತಮಾನದ ನಂತರವೂ ಇದೇ ಪರಿಸ್ಥಿತಿ ಕನ್ನಡ ವಿಮರ್ಶೆಗೆ ಇದೆಯೆಂದು ಅನ್ನಿಸುತ್ತದೆ. ವಿಮರ್ಶೆಯ ಕುರಿತು ಯಾರು ಏನು ಹೇಳಿದರೂ ನಾನು ಹೀಗೆಯೇ ಹೇಳುವುದು, ಹೀಗೇ ಬರೆಯುವುದು ಮತ್ತು ಬದಲಾವಣೆಯಾಗದಿರುವುದೇ ಶಾಶ್ವತವೆಂಬ ಪಟ್ಟಭದ್ರ ಹಿತಾಸಕ್ತಿಯ ಪ್ರಮೇಯಕ್ಕೆ ಅಂಟಿಕೊಳ್ಳುವ ಬದ್ಧತೆಯನ್ನು ಸಾಕಷ್ಟು ವಿಮರ್ಶಕರು ಪ್ರದರ್ಶಿಸಿದ್ದಾರೆ.
ಇಂತಹ ‘ಸಂಧಿಕಾಲ’ದಲ್ಲಿ ಬಹುವಚನ ಸಾಹಿತ್ಯ ವಿಮರ್ಶೆ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ‘ವಿಮರ್ಶೆಯ ಪರಾಮರ್ಶೆ’ ಎಂಬ ವಿಶೇಷಾಂಕವನ್ನು ತಂದಿದೆ. ವಿಮರ್ಶೆಯ ಕುರಿತ ಲೇಖನಗಳಿಗೆ ಮೀಸಲಾಗಿಟ್ಟ ಒಂದು ವಿಶೇಷಾಂಕವನ್ನು ವಿಮರ್ಶೆಗೆ ಒಳಪಡಿಸುವುದು ಸರಿಯೋ ತಪ್ಪೋ ಗೊತ್ತಿಲ್ಲ. ಒಂದು ಬಗೆಯಲ್ಲಿ ಈ ಕೃತಿಯ ಬಹುಪಾಲು ಒಂದೇ ಚಿಂತನೆ (ಸ್ಕೂಲ್ ಆಫ್ ಥಾಟ್)ಗೆ ಸೇರಿದ ಲೇಖಕರ, ಬಜೆಟ್‌ಪೂರ್ವ ಕಾರ್ಪೊರೇಟ್ ಅಭಿಪ್ರಾಯ ಸಂಗ್ರಹದಂತಿರುವುದರಿಂದ ಇದು ಸಾಹಿತ್ಯ ವಿಮರ್ಶೆಗೆ ಅಥವಾ ಸದ್ರಿ ಕೃತಿಯೇ ಹೆಸರಿಟ್ಟುಕೊಂಡಂತೆ ಪರಾಮರ್ಶೆಗೆ ಹೊಂದಬಹುದೆಂದುಕೊಂಡಿದ್ದೇನೆ.
ಸುಮಾರು 200 ಪುಟಗಳಿಗೂ ಮಿಕ್ಕಿದ ಮತ್ತು ಮಾಮೂಲು ಲೇಖನ ಸಂಗ್ರಹದಂತಿಲ್ಲದೆ ವಿಮರ್ಶೆಯ ಸಪ್ತಧಾತುಗಳಂತೆ ವಿನ್ಯಾಸ ಹೊಂದಿರುವ (1. ಅವಲೋಕನ, 2. ಸಂವಾದ, 3. ವಿಮರ್ಶೆಯ ಅಗತ್ಯವಿದೆಯೇ?, 4. ಪುಸ್ತಕ ಬಂದ ನಂತರ, 5. ಸದ್ಯದ ಚಿಂತನೆ, 6. ನೆರೆಹೊರೆಯ ನೋಟ ಮತ್ತು 7. ಹಿರಿಯ ವಿಮರ್ಶಕರನ್ನು ನೆನೆದು) ಭಾಗಗಳನ್ನು ಜೋಡಿಸಿದಂತಿರುವ (ಈ ಪೈಕಿ 7ನೇ ಭಾಗವು ಈ ಕೃತಿಗೆ ಹೊಂದಿದಂತಿಲ್ಲದೆ ಲೋಪರಹಿತವಾಗಿ ಅಪಚಾರಕ್ಕೆ, ಟೀಕೆಗೆ ಎಡೆಯಿಲ್ಲದೆ ಯಾವುದೇ ಅಭಿನಂದನಾ ಇಲ್ಲವೇ ಸ್ಮರಣ ಸಂಚಿಕೆಗೂ ಆಗಬಹುದಾದಂತೆ ಬರೆದ ಉತ್ತರಕಾಂಡದಂತಿದೆ.) ಕೃತಿಯು ತನ್ನ ಉದ್ದೇಶವನ್ನು ಇಲ್ಲಿನ ಕೆಲವು ಬರೆಹಗಳ ಆಯ್ದ ವಾಕ್ಯಗಳನ್ನು ಪೋಣಿಸಿದ ಸಂಪಾದಕೀಯದಲ್ಲಿ ಹೇಳಿದೆ. ಪತ್ರಿಕೆಯ ಸ್ಥಾಯೀಗುರಿಯೆಂದರೆ ‘‘ವಿಮರ್ಶೆಯ ಗೈರುಹಾಜರಿಯನ್ನು ತುಂಬುವುದು’’. ಯಾರು ಬರೆದರೆಂಬ ಸ್ಪಷ್ಟತೆಯಿಲ್ಲದ ‘ವಿಮರ್ಶೆಯ ಸನ್ನಿವೇಶ: ಸವಾಲುಗಳು, ತೊಡಕುಗಳು’ ಎಂಬ ಅಗ್ರ ಲೇಖನದಲ್ಲಿ ಲೇಖಕರಿಗೆ ಕೇಳಿದ ಪ್ರಶ್ನೆಗಳನ್ನು ಮತ್ತು ಅವರ ಸ್ಪಂದನಗಳನ್ನು ಪ್ರಸ್ತಾವಿಸುವ ಸಂದರ್ಭದಲ್ಲೂ ಇದಕ್ಕೆ ಸಮರ್ಥನೆಗಳನ್ನು ನೀಡುವ ಕಾರಣವೆಂಬಂತೆ ‘‘ವಿಮರ್ಶೆಯ ತೀವ್ರ ಗೈರುಹಾಜರಿಯ ಇಂಥ ಹೊತ್ತಿನಲ್ಲಿ...’’ ಎಂಬ ಮಾತು ಬಂದಿದೆ. ಹೀಗಾಗಿ ಈ ಕೃತಿಯ ನಿರ್ಮಾಣ ಹಂತದಲ್ಲಿ ಎಲ್ಲ ಸಂಬಂಧಿತರಿಗೂ ಕನ್ನಡದ ಸಂದರ್ಭದಲ್ಲಿ ‘‘ವಿಮರ್ಶೆ ಗೈರುಹಾಜರಾಗಿದೆ’’ಯೆಂಬ ಮತ್ತು ಅದನ್ನು ಒಪ್ಪಿಕೊಂಡೇ ಕಳವಳ ವ್ಯಕ್ತವಾಗಿದೆಯೆಂಬುದನ್ನು ಪೀಠಿಕೆಯಾಗಿ ಸ್ವೀಕರಿಸಬಹುದು. ಆದರೆ ‘‘ವಿಮರ್ಶೆ ಗೈರುಹಾಜರಿಯಾಗಿದೆ’’ ಎಂದು ಯಾರು ಯಾಕೆ ಹೇಳಿದರು? ಮತ್ತು ಇಂತಹ ಸನ್ನಿವೇಶವಿರುವುದು ಹೌದೇ? ಎಂಬ ಪ್ರಶ್ನೆಗಳು ಕೆಲವೇ ಲೇಖಕರು ಸೇರಿ ನಿರ್ಧರಿಸುವ ವಿಚಾರವೇ? ಇದನ್ನು ಇಲ್ಲಿ ಭಾಗಿಯಾದ ವಿಮರ್ಶಕರು ಒಪ್ಪಿಕೊಳ್ಳುತ್ತಾರೆಯೇ? ಮುಂತಾದ ಪ್ರಶ್ನೆಗಳನ್ನು ಕೃತಿಯ ಅಭಿಪ್ರಾಯಗಳನ್ನು ಮೀರಿದ ಕನ್ನಡ ಸಾರಸ್ವತಲೋಕ ಯೋಚಿಸಬೇಕಾಗಿದೆ. ಇಂತಹ ಯೋಚನೆಗಳ ಕ್ರೋಡೀಕರಣದ ಮೂಲಕ ಓದುಗರಿಗೆ (ಮತ್ತು ಪ್ರಾಯಃ ಇತರ ಲೇಖಕರಿಗೆ) ವ್ಯಕ್ತವಾಗಿರಬಹುದಾದ ಕೆಲವು ಸಂದೇಹಗಳನ್ನು ಅಭಿವ್ಯಕ್ತಿಸಿ ಉತ್ತರ ಕಂಡುಕೊಂಡುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.
‘‘ವಿಮರ್ಶೆಯ ತೀವ್ರ ಗೈರುಹಾಜರಿಯ ಇಂಥ ಹೊತ್ತಿನಲ್ಲಿ ಸಾಹಿತ್ಯದ ಹಲವು ಗುಂಪುಗಳಲ್ಲಿ ಪರಸ್ಪರ ತಮ್ಮ ಆಲೋಚನೆ, ಸೈದ್ಧಾಂತಿಕತೆ, ಜಾತಿ, ಪ್ರಾದೇಶಿಕತೆಗಳ ಆಧಾರದ ಮೇಲೆ ಕೃತಿಯೊಂದನ್ನು ಹೊಗಳುವ ಇಲ್ಲವೇ ತೆಗಳುವ ಅಥವಾ ಅದರ ಕುರಿತು ಮಾತು ಆಡದಿರುವ ಸನ್ನಿವೇಶವೊಂದು ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯರ ಗುಂಪುಗಳು ಲೋಕಾಭಿರಾಮವಾಗಿ ಯಾವುದೇ ಸಿದ್ಧತೆಯಿಲ್ಲದೆ ಮಾಡುವ ಕಾಮೆಂಟುಗಳನ್ನು ವಿಮರ್ಶೆಯೆಂದು ದಾಟಿಸುವ ಮನೋಭಾವ ಬೆಳೆದಿದೆ.’’ ಎಂಬ ಎಚ್ಚರ ಮತ್ತು ಖಚಿತ ಅನುಮಾನಗಳೊಂದಿಗೆ ಇಲ್ಲಿನ ಅವಲೋಕನ ನಡೆದಿದೆ. ಇಂದಿನ ವಿಮರ್ಶೆಯ ಅಪಾಯಗಳ ಬಗ್ಗೆ ನೇರವಾಗಿ ‘‘ಕನ್ನಡವನ್ನೂ ಒಳಗೊಂಡ ಹಾಗೆ ಇತರ ಭಾಷೆಯ ಪರಂಪರೆಗಳಲ್ಲಿ ವಿಮರ್ಶೆಯ ಅಭ್ಯಾಸ ಕಾಣೆಯಾಗಿರುವುದಕ್ಕೆ ಇಂದಿನ ಮಾರುಕಟ್ಟೆಯ ಯುಗ ವಿಮರ್ಶೆಯ ಚಿಂತನೆಯನ್ನೇ ಇಲ್ಲವಾಗಿಸಿ ಕೇವಲ ಸಾಹಿತ್ಯವನ್ನು ಸಾಹಿತಿಗಳನ್ನು ಅಗ್ಗದ ಸರಕಾಗಿಸಿ ಪ್ರಚಾರ, ಪ್ರಕಟಣೆ, ಭೋಲೆ ಆರಾಧನೆಗೆ ಸೀಮಿತಗೊಳಿಸಿರುವುದು ಕಾರಣವೇ? ಕೆಲವು ಲೇಖಕರ ಕೃತಿಗಳು 20-25 ಮುದ್ರಣಗಳನ್ನು ಕಂಡರೂ ಅವು ಕನ್ನಡ ಮನೋಲೋಕದ ಭಾಗವಾಗದೇ ಇರುವ ಬಗ್ಗೆ ವಿಮರ್ಶಾಲೋಕ ಏನನ್ನೂ ಹೇಳದೆ ಯಾಕೆ ಮೌನವಾಗಿದೆ?’’ ಎಂಬ ಆತಂಕಕಾರೀ ಪ್ರಶ್ನೆಗಳನ್ನೂ ಹಾಕಲಾಗಿದೆ.
ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಅಥವಾ ಪರಿಹಾರವನ್ನು ಈ ಸಂಚಿಕೆ ಹೇಳುವುದಿಲ್ಲ. ಹಿರಿಯ ವಿಮರ್ಶಕರಾದ ಎಚ್.ಎಸ್.ರಾಘವೇಂದ್ರರಾವ್ ತಮ್ಮ ಖಂಡಿತ ನಿಲುವನ್ನು ಎಂದಿನಂತೆ ಸ್ಪಷ್ಟವಾಗಿ ಹೇಳಿದ್ದಾರಾದರೂ (ಉಳಿದಂತೆ ಗಣೇಶ್ ಎನ್. ದೇವಿ, ಅರುಣ್ ಜೋಳದಕೂಡ್ಲಿಗಿ, ಮಹಾಂತೇಶ ಪಾಟೀಲ ಇವರೂ ಯಥಾನುಶಕ್ತಿ ಖಚಿತ ನಿಲುವನ್ನು ತಾಳಿದ್ದಾರೆ) ಇತರರು ಯಾರ ಮನಸ್ಸೂ ನೋಯದಂತಹ ಅಥವಾ ಬಟ್ಟೆ ಸುತ್ತಿಯೂ ಹೊಡೆಯದಂತಹ ದಾರ್ಶನಿಕ ನಿಲುವುಗಳನ್ನೇ ಅಭಿವ್ಯಕ್ತಿಸಿದಂತಿದೆ. ಎಚ್‌ಎಸ್‌ಆರ್ ತಮ್ಮ ಲೇಖನವನ್ನು ‘‘ಕನ್ನಡದಲ್ಲಿ ಕಳೆದ ಒಂದೆರಡು ದಶಕಗಳಲ್ಲಿ ಸಾಹಿತ್ಯವಿಮರ್ಶೆ ಆಶಾದಾಯಕವಾಗಿಲ್ಲ’’ ಎಂದೇ ಆರಂಭಿಸುತ್ತಾರೆ. ತಮಗೆಸೆದ ಪ್ರಶ್ನೆಗಳನ್ನು ಅವರು ‘ಹೀಗಿದೆ’ ಎಂದು ಹೇಳುವ ಬದಲು ‘ಹೀಗಿದೆ, ಅಲ್ಲವೇ?’ ಎಂದು ಹೇಳುವ ಬಗೆಯವು ಎಂದಿದ್ದಾರೆ.
ಹೀಗಾಗಿ ಇಲ್ಲಿನ ಬಹುತೇಕ ಎಲ್ಲ ಲೇಖಕರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆಂದು ನಿರೀಕ್ಷಿಸಬೇಕಾಗಿದೆ. ಆದರೆ ಬೆರಳೆಣಿಕೆಯ ಲೇಖನಗಳ ಹೊರತಾಗಿ ಉಳಿದವುಗಳು ತಮ್ಮ ವೈಯಕ್ತಿಕ ಲೌಕಿಕ ಅಭಿರುಚಿ-ಆಸಕ್ತಿಗನುಗುಣವಾಗಿ ವಿಮರ್ಶೆಯ ಮೌಲ್ಯಮಾಪನ ಮಾಡಿದಂತೆ ಗೋಚರಿಸುತ್ತಿದೆ. ಬರೆಹಗಳನ್ನು ಪಡೆದು ಆನಂತರ ಅವನ್ನು ಸೋಸಿ ಆಯ್ಕೆಮಾಡುವ ಬದಲು ಕೆಲವು ಲೇಖಕರಿಗೆ ವಿಷಯದ ಗುತ್ತಿಗೆ ನೀಡಿದಾಗ ಇದು ಅನಿವಾರ್ಯ. ವಿದ್ವಾಂಸರು ಮತ್ತು ವಿಮರ್ಶಕರು ಯಾವುದೇ ಕೃತಿಯ, ಸಿದ್ಧಾಂತದ, ವಿಚಾರದ ಬಗ್ಗೆ ಯೋಚಿಸುವ ವಿನ್ಯಾಸಗಳು ಬೇರೆಬೇರೆಯಾಗಿರುತ್ತವೆ. ಅಂತಹ ಸ್ಯಾಂಪಲ್ ಲಿಟ್ಮಸ್ ಪರೀಕ್ಷೆಗಳನ್ನೂ ಇಲ್ಲಿ ಮಾಡಿದಂತಿಲ್ಲ. ಹೀಗಾಗಿ ಇಲ್ಲಿನ ಅಭಿಪ್ರಾಯಗಳಿಗೆ ಭಿನ್ನವಾಗಿ ಯೋಚಿಸಬಹುದಾದ ಅನೇಕ ಮತ್ತು ಅನೇಕರ ಬರೆಹಗಳಿಗೆ ಇಲ್ಲಿ ಅವಕಾಶವಿಲ್ಲ. ಜೊತೆಗೆ, ಸಿಎನ್‌ಆರ್, ಕೆವಿಎನ್, ನರಹಳ್ಳಿ ಮುಂತಾದ ಹಿರಿಯರು ಏನು ಹೇಳುತ್ತಾರೆಂದೂ ಗೊತ್ತಾಗಲು ಜಾಗವಿಲ್ಲ.
ಪ್ರಕಟಣೆಯ ಕುರಿತು ಬರೆದ ಪ್ರಕಾಶಕರು ಮತ್ತು ಸ್ವತಃ ಪ್ರಕಾಶಕರಾಗಿರುವ ಲೇಖಕರು ತಮ್ಮತಮ್ಮ ಪ್ರಕಟಣೆಗಳ ಮಾರಾಟಕ್ಕಾಗಿ ಬರೆಸುವ ವಿಮರ್ಶೆ, ಪತ್ರಿಕೆ/ಸಾಮಾಜಿಕ ಜಾಲತಾಣಗಳಲ್ಲಿ ಪ್ರಯೋಗಿಸುವ ಪ್ರಚಾರ, ಸರಕಾರದ ಮೇಲಿನ ಅತೀವ ಅವಲಂಬನ, ಕೆಲವೊಮ್ಮೆ ಗುಂಪುಗುಳಿತನ, ಇವುಗಳ ನಡುವೆ ವ್ಯವಸ್ಥಿತ ಪ್ರಕಟಣೆಗಳು ಪಡುವ ಪರಿಪಾಟಲುಗನ್ನು ವಿಶೇಷವಾಗಿ ಈ ಕೃತಿಯಲ್ಲಿ ಉಲ್ಲೇಖಿಸಿಲ್ಲ. ಮಾತಿನಲ್ಲಿ, ಬರೆಹದಲ್ಲಿ ಎಲ್ಲರೂ ಐಕಾನುಗಳೇ. ‘ಕೃತಿ’ಯಲ್ಲಿ ಬೇರೆ ವಾಸ್ತವ ಸ್ಥಿತಿಯಿದೆ. ಕೃತಿಯೊಂದರ ಎಷ್ಟು ಪ್ರತಿಗಳು ಮಾರಾಟವಾಯಿತೆಂಬುದರ ಆಧಾರದಲ್ಲಿ ಅದರ ಶ್ರೇಷ್ಠತೆಯನ್ನು ಅಳೆಯಲು ಸಾಧ್ಯವಿಲ್ಲದಿರುವಾಗ (ಭೈರಪ್ಪನವರ ಬಗ್ಗೆ ಪ್ರಗತಿಪರರು ಮಾಡುವ ಒಂದು ಆರೋಪ!) ಪ್ರತಿಗಳು ಮರುಮುದ್ರಣವಾಗಿವೆಯೆಂಬ ಜಾಹೀರಾತು ‘ಸಾಹಿತ್ಯೋದ್ಯಮ’ದ ಮಾರುಕಟ್ಟೆಯ ನಿಯಮಗಳ ಮತ್ತು ವಿರೋಧಾಭಾಸಗಳ ಹೊರತು ಸಾಹಿತ್ಯಕ್ಕೆ ಪೂರಕವಾಗಿ ಏನು ಹೇಳುತ್ತದೆ?
ಕಳೆದ 3-4 ದಶಕಗಳಿಂದ ಕಥೆ ಬರೆಯುತ್ತ ಬಂದ ಬಾನು ಮುಷ್ತಾಕ್ ಅವರ ಕೃತಿಗಳ ಕೆಲವೇ ನೂರು ಪ್ರತಿಗಳು ಕಳೆದ ಸಾಲಿನ ವರೆಗೆ ಮಾರಾಟವಾಗಿದ್ದು, ಶತಮಾನದ ಸಾಲಿನಲ್ಲಿ ಸೇರಿಕೊಳ್ಳದ ಅವರನ್ನು ಈಗ ದೀಪಾ ಭಾಸ್ತಿಯವರ ಆಂಗ್ಲ ಅನುವಾದದ ಕಾರಣವಾಗಿ ಪ್ರಶಸ್ತಿಯ ಮೂಲಕದ ಲೋಕಪ್ರಸಿದ್ಧಿ ಬಂದ ತಕ್ಷಣ ಶಕಲೇಖಕರಾಗಿ ಗುರುತಿಸುವ ವಿಮರ್ಶಾಪ್ರಪಂಚದ ತಕ್ಕಡಿಯನ್ನೇ ಮತ್ತೊಮ್ಮೆ ಪರೀಕ್ಷಿಸುವುದು ಮತ್ತು ಮನುಷ್ಯನ ಜೀವಿತಾವಧಿಗಿಂತ ಹೆಚ್ಚು ಆಯುಷ್ಯವಿರಬಲ್ಲ ಸಾಹಿತ್ಯ ಚರಿತ್ರೆಯಲ್ಲಿ ಮೇಜರ್ ಹಾಗೂ ಮೈನರ್ ರೈಟರ್ಸ್ ಎಂಬ ವಿಮರ್ಶಾಮನುಸ್ಮತಿಯ ವಿಭಜನಾ ಅಸಂಬದ್ಧತೆಯನ್ನು ಪತ್ತೆಮಾಡುವುದೂ ಅಗತ್ಯವಿದೆ. ವಿಮರ್ಶೆಯೆಂದರೆ ಗಾಳಿಗೊಡ್ಡುವ ದೀಪವಲ್ಲ; ಗಾಳಿಕೋಳಿಯೂ ಅಲ್ಲ.
ಇಷ್ಟಾದರೂ ವಿಮರ್ಶೆಯ ಕುರಿತ ಈ ಸಂಚಿಕೆ ಸಾಹಿತ್ಯವಿಮರ್ಶೆಯ ಓಟವನ್ನು, ಕೆಲವೊಮ್ಮೆ ನಾಗಾಲೋಟವನ್ನು, ಇನ್ನು ಕೆಲವೊಮ್ಮೆ ಒಳನೋಟಗಳಿಲ್ಲದ ಖಾಲಿಲೋಟವನ್ನು ಸ್ವಲ್ಪ ಮಟ್ಟಿಗಾದರೂ ಅನಾವರಣ ಮಾಡಿದೆಯೆಂಬುದು ಸ್ವಾಗತಾರ್ಹ (ಮತ್ತು ವಿಮರ್ಶಕರಿಗೆ ಸ್ವಗತಾರ್ಹ) ಸಂಗತಿ.