ಸಂಗೀತದ ನಾದ ಮತ್ತು ಓದು

ಸಾರಂಗಿ ಒಂದು ವಿಶಿಷ್ಟ ವಾದನ. ಹಿಂದೂಸ್ತಾನಿ ಸಂಗೀತದಲ್ಲಿ ಇದರ ಪಾತ್ರ ದೊಡ್ಡದು. ಏಕೆಂದರೆ ಸಾರಂಗಿ ಪಕ್ಕವಾದ್ಯ ಮಾತ್ರವಲ್ಲ, ಒಂದು ಸ್ವಯಂಭೂ ವಾದನವೂ ಹೌದು. ಯಾವನೇ ಒಳ್ಳೆಯ ಗಾಯಕನಿಗೆ ಸಾರಂಗಿಯ ಒಳ್ಳೆಯ ಸಾಥ್ ಸಿಕ್ಕಿತೆಂದರೆ ಅಲ್ಲಿ ಗಾಯಕನಿಗೂ ವಾದಕನಿಗೂ ಸ್ಪರ್ಧೆಯಿಲ್ಲದಿದ್ದರೂ ಅವರಿಬ್ಬರೂ ತಮ್ಮ ತಮ್ಮ ಕ್ಷೇತ್ರದ ಅತ್ಯುಚ್ಚ ಸಾಧನೆಯನ್ನು ತೋರಿಸುವುದು ಅನಿವಾರ್ಯವಾಗುತ್ತದೆ. ಇಂತಹ ಒಂದು ವಾದನವನ್ನು ಉಳಿಸಿ ಬೆಳೆಸುವ ಕಲಾ ಕಾಯಕವನ್ನು ಬಾಲ್ಯದಿಂದಲೂ (ಜನನ: 17.02.1968) ಮಾಡುತ್ತ ಬರುತ್ತಿರುವ ಕೇವಲ 57 ವರ್ಷಗಳ ವಯಸ್ಸಿನ ಫಯಾಜ್ ಖಾನ್ ಇದರ ಜತೆಗೆ ತಬಲಾ ವಾದಕರಾಗಿರುವುದು ಮಾತ್ರವಲ್ಲ ಸ್ವತಃ ಗಾಯಕರಾಗಿಯೂ ಹೆಸರು ಮಾಡಿದವರು. ಇನ್ನೂ ಮೆಚ್ಚಿನ ವಿಚಾರವೆಂದರೆ ಸಂಗೀತದಲ್ಲಿ ಸಾಹಿತ್ಯದ ಪಾತ್ರವನ್ನು ಮನನಮಾಡಿಕೊಂಡವರು.
‘ಸಾರಂಗಿ ನಾದದ ಬೆನ್ನೇರಿ’-ಎಂಬ ಶೀರ್ಷಿಕೆ (ಮತ್ತು ಉಸ್ತಾದ್ ಫಯಾಜ್ ಖಾನ್ ಜೀವನಕಥನ ಎಂಬ ಸಹಶೀರ್ಷಿಕೆ)ಯ ಕೃತಿಯು ಪತ್ರಕರ್ತ-ಸಾಹಿತಿ ಗಣೇಶ ಅಮೀನಗಡ ಮತ್ತು ಡಾ. ಸಿ.ಬಿ. ಚಿಲ್ಕರಾಗಿ ರಚಿಸಿ, ಮೈಸೂರಿನ ಕವಿತಾ ಪ್ರಕಾಶನವು 2023ರಲ್ಲಿ ಪ್ರಕಟಿಸಿರುವ, ಗಾಯಕ ಹಾಗೂ ತಬಲಾ ಮತ್ತು ಸಾರಂಗಿ ವಾದಕರಾಗಿ ಶ್ರೇಷ್ಠ ಅಭಿಜಾತ ಸಂಗೀತ ಕಲಾವಿದರೆನಿಸಿರುವ ಮತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷರಾಗಿ ದುಡಿದ ಉಸ್ತಾದ್ ಫಯಾಜ್ ಖಾನ್ ಅವರ ಜೀವನಕಥನ. ಕ್ರೌನ್ 1/4 ಗಾತ್ರದಲ್ಲಿ 76 ಪುಟಗಳ ಈ ಕೃತಿ ಕಲೆಯ ಮತ್ತು ಕಲಾವಿದರ ಬದುಕಿನ ಬಗ್ಗೆ ಬಹಳಷ್ಟನ್ನು ಸುಂದರ ನಿರೂಪಣೆಯೊಂದಿಗೆ ದರ್ಶಿಸುತ್ತದೆ ಎಂಬುದಕ್ಕಾಗಿ ಈ ಕೃತಿ ಮಹತ್ವದ್ದಾಗಿದೆ. ಖ್ಯಾತ ಸರೋದ್ ವಾದಕ ಮತ್ತು ಸಾಹಿತಿ ರಾಜೀವ್ ತಾರಾನಾಥ್ ಈ ಕೃತಿಗೆ ‘‘ನನಗ ಭಾಳ ಹತ್ತಿರದ, ಪ್ರೀತಿಪಾತ್ರದ ಫಯಾಜ್ ಖಾನ್’’ ಎನ್ನುವ ಆತ್ಮೀಯತೆಯ ಮುನ್ನುಡಿಯನ್ನು ಬರೆದಿದ್ದಾರೆ.
ಹಿಂದೂಸ್ತಾನಿ ಸಂಗೀತವು ಪರಂಪರೆಯನ್ನು ಗೌರವಿಸುವುದರಲ್ಲಿ ಇತರ ಪ್ರಕಾರಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಎಷ್ಟೇ ಹೊಸ ಪ್ರಯೋಗಗಳನ್ನು ಕಂಡರೂ ಸಾಂಪ್ರದಾಯಿಕ ಬೆಳವಣಿಗೆಯನ್ನು ಕೈಬಿಡದೆ ನಡೆವ ಪ್ರಕಾರ ಅದು. ಇದರಿಂದಾಗಿ ಹೆಚ್ಚಿನ ಕಲಾವಿದರು ಸಂಗೀತ ಮನೆತನದವರೇ ಆಗಿದ್ದಾರೆ. ಖಾನ್ ಅವರೂ ಸಾರಂಗಿ ಮನೆತನದವರೇ. ಕರ್ನಾಟಕದಲ್ಲಿ ಸಾರಂಗಿ ಇತರ ವಾದನಗಳಷ್ಟು ವೈಭವವನ್ನು ಕಂಡಿಲ್ಲವಾದರೂ ಅದು ಹಿಂದೂಸ್ತಾನೀ ಪರಂಪರೆಯಲ್ಲಿ ಬಹಳ ಗೌರವವನ್ನು ಮತ್ತು ಮೌಲ್ಯವನ್ನು ಹೊಂದಿದ ವಾದನ. ಮುಖ್ಯವಾಗಿ ಧಾರವಾಡ ಮತ್ತು ಉತ್ತರ ಕರ್ನಾಟಕದ ಇತರ ಭಾಗಗಳು ಹಿಂದೂಸ್ತಾನಿ ಸಂಗೀತವನ್ನು ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ; ದಕ್ಷಿಣಭಾರತದ ‘ಕರ್ನಾಟಕ’ ಸಂಗೀತಕ್ಕೆ ಪರ್ಯಾಯವಾಗಿ ರಾಷ್ಟ್ರೀಯತೆಯ ದ್ಯೋತಕವೆಂಬಂತೆ ಹಿಂದೂಸ್ತಾನಿ ಯಾಗಿದೆ. ಕರ್ನಾಟಕ ಸಂಗೀತದಲ್ಲಿ ಬ್ರಾಹ್ಮಣರು ಮತ್ತು ಇತರ ಹಿಂದೂಗಳು ಹೆಚ್ಚು ಪ್ರಚಾರದಲ್ಲಿದ್ದರೆ ಇಲ್ಲಿ ಸಂಗೀತ ನಿಜಕ್ಕೂ ಮತಾತೀತವಾಗಿದೆ; ಜಾತ್ಯತೀತವಾಗಿದೆ. ಉಸ್ತಾದ್ ಬಿಸ್ಮಿಲ್ಲಾ ಖಾನ್, ಭೀಮಸೇನ ಜೋಶಿ, ಉಸ್ತಾದ್ ಝಾಕಿರ್ ಹುಸೇನ್, ಉಸ್ತಾದ್ ಬಡೇಗುಲಾಂ ಅಲಿಖಾನ್, ಪಂ. ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್, ಪಂ.ಬಸವರಾಜ ರಾಜಗುರು, ಪಂ.ರವಿಶಂಕರ್, ಪಂ.ರಾಜೀವ್ ತಾರಾನಾಥ್ ಇಂತಹ ಭಾರೀ ಸಂಖ್ಯೆಯ ಹಿರಿಯ ಕಲಾವಿದರು ಈ ಪ್ರಕಾರದ ಶ್ರೇಷ್ಠರು. ಸ್ವತಃ ಫಯಾಜ್ ಖಾನ್ ತಮ್ಮ ಸುಮಾರು 6-7 ತಲೆಮಾರಿನ ಹಿರಿಯರನ್ನು ಸಾರಂಗಿ ಪರಂಪರೆ ಬೆಳಗಿಸಿದವರು ಎಂದು ಸ್ಮರಿಸುತ್ತಾರೆ.
ಉಸ್ತಾದ್ ಫಯಾಜ್ ಖಾನ್ ಅವರ ಪೂರ್ವಜರು ಉತ್ತರಪ್ರದೇಶದ ಕಿರಾಣಾ ಊರವರು; ಗ್ವಾಲಿಯರ್ ಸಂಸ್ಥಾನದ ಆಸ್ಥಾನ ಕಲಾವಿದರಾಗಿ ದ್ದರಂತೆ. 1860-65ರ ಸುಮಾರಿಗೆ ಮೈಸೂರು ಸಂಸ್ಥಾನದ ಆಹ್ವಾನದ ಮೇರೆಗೆ ಬಂದವರು ಕರ್ನಾಟಕದಲ್ಲೇ ಉಳಿದರು. ಮೈಸೂರಿನ ವೈಭವದ ದಿನಗಳು ಮುಗಿದ ಮೇಲೆ ಹೈದರಾಬಾದ್ ನಿಜಾಮರ ಆಸ್ಥಾನ ಸಂಗೀತಗಾರರಾದರು. ಅಲ್ಲಿಂದ ಫಯಾಜ್ ಖಾನ್ ಅವರ ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನ್ ಧಾರವಾಡಕ್ಕೆ ಬಂದು ನೆಲೆಸಿದರು. 1950ರಲ್ಲಿ ಧಾರವಾಡ ಆಕಾಶವಾಣಿಯ ಸಾರಂಗಿ ವಾದ್ಯ ನುಡಿಸುವ ಕಲಾವಿದರಾಗಿ ನೇಮಕವಾದರು. ಅವರ ಮಕ್ಕಳ ಪೈಕಿ ತಬಲಾ ನುಡಿಸಿ ಆನಂತರ ಸಾರಂಗಿ ವಾದಕರಾಗಿ ಮತ್ತು ಗಾಯಕರಾಗಿ ಬೆಳೆದದ್ದು ಫಯಾಜ್ ಖಾನ್ ಕಥೆ. ಇದರಲ್ಲಿ ಅವರು ಪಟ್ಟ ಕಷ್ಟ, ಸಂಕಟ, ಸಾಹಸ ಇವೆಲ್ಲ ಯಾವ ಮುಜುಗರವೂ ಇಲ್ಲದೆ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ಈ ಕೃತಿಯ 27 ಪುಟ್ಟಪುಟ್ಟ ಅಧ್ಯಾಯಗಳಲ್ಲಿ ಮೂಡಿವೆ. ಯಾವ ಆತ್ಮವೈಭವವೂ ಇಲ್ಲದೆ ತನ್ನ ಅಭಿಮಾನ-ಅವಮಾನಗಳನ್ನು ಅವರು ಹೇಳಿದ್ದಾರೆ. ತನ್ನ ಪ್ರತಿಭೆ, ಪಾಂಡಿತ್ಯ ಇವನ್ನು ಸ್ವಯಂಪ್ರಭೆಯೆಂದು ಹೇಳಿಕೊಳ್ಳುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಅವರು ‘ಮನೆತನದೊಳಗ ಸಂಗೀತ ರಕ್ತಗತ’ ಎಂದು ಹೇಳುವ ಮೂಲಕ ತನ್ನನ್ನು ತಾನು ನಿರಾಳವಾಗಿಸಿದ್ದಾರೆ.
ತನ್ನ ತಂದೆ ಸಂಸಾರದೊಳಗೆ ಪಟ್ಟ ದುಗುಡ-ದುಮ್ಮಾನಗಳನ್ನು ಹೇಳುತ್ತಲೇ ಅವರು ಎಷ್ಟು ದೊಡ್ಡ ಕಲಾವಿದರು ಮತ್ತು ತನ್ನ ವರ್ತಮಾನದ ಸ್ಥಿತಿಗತಿಯಲ್ಲಿ ಅವರ ಮಹತ್ತರ ಪಾತ್ರವನ್ನು ವಿವರಿಸಿದ್ದಾರೆ. ಅನುಭವಕ್ಕಾಗಿ ಕೈಯಲ್ಲಿ ಕಾಸಿಲ್ಲದಾಗಲೂ ದೇಶ ಸುತ್ತಿದ್ದನ್ನು ಹೇಳಿದ್ದಾರೆ. 1986ರಲ್ಲಿ ನೌಕಾದಳದ ಬ್ಯಾಂಡಿನಲ್ಲಿ ತಬಲಾವಾದಕನಾಗಿ ಮಾಸಿಕ ರೂ.30 ಸಾವಿರ ಪಗಾರದ ಉದ್ಯೋಗ ಸಿಕ್ಕಿದಾಗ 3 ತಿಂಗಳು ದುಡಿದು, ವೃತ್ತಿ ಮತ್ತು ಉದ್ಯೋಗದ ನಡುವಣ ಅಂತರವನ್ನು ಹೇಳುತ್ತ ‘ಮನೆತನದ ಹೆಸರು ಉಳಸೋ ಸಲುವಾಗಿ ನೌಕ್ರಿ ಬಿಟ್ಟು ಧಾರವಾಡಕ್ಕ ಬಂದೆ’ ಎನ್ನುತ್ತಾರೆ. (ಅವರ ಜೊತೆಯಲ್ಲಿ ಸೇರಿದ ಇನ್ನೊಬ್ಬ ಸಹಪಾಠಿಗೆ ಈಗ ತಿಂಗಳಿಗೆ ಮೂರೂವರೆ ಲಕ್ಷ ರೂಪಾಯಿ ಪಗಾರವೆಂದು ನಿರ್ಮಮವಾಗಿ ನೆನಪಿಸುತ್ತಾರೆ!)
‘ಮಲತಾಯಿ ಬಂದ ದಿನದಿಂದಲೇ ನಮ್ಮ ಅವನತಿ ಸುರುವಾತು.’ ಎನ್ನುತ್ತಾರೆ. ಮಲತಾಯಿ ‘ಊಟ ಹಾಕೂದು ಹೋಗ್ಲಿ ಬಿಡ್ರಿ, ನನ್ನ ತಬಲಾ ಸಹಿತ ಬ್ಲೇಡಿನಿಂದ ಹರಿತಿದ್ಲು’ ಎಂದು ನೆನಪಿಸುತ್ತ ಆಕೆ ತಮಗೆಲ್ಲರಿಗೂ ವಿಷ ನೀಡಿ ಹತ್ಯೆ ಮಾಡಲು ಯತ್ನಿಸಿದ ದಾರುಣತೆಯನ್ನು ಮತ್ತು ತಾವೆಲ್ಲರೂ ಕೂದಲೆಳೆಯಲ್ಲಿ ಪಾರಾದ್ದನ್ನು ಯಾವ ಭಾವುಕ ವಿಕಾರವೂ ಇಲ್ಲದೆ ಹೇಳುತ್ತಾರೆ. ತನ್ನ ಮೊದಲಿನ ಮದುವೆಯ ಇಬ್ಬರು ಮಕ್ಕಳಿಗಾಗಿ ಆಸ್ತಿಯನ್ನು ಭಾಗ ಮಾಡಲು ಪೀಡಿಸಿದಾಗ ಖಾನ್ ಅವರ ತಂದೆಗೆ 6 ಮಕ್ಕಳಿದ್ದು ಈ ಎರಡೂ ಸೇರಿ 8 ಸಮಾನ ಪಾಲು ಮಾಡೋಣವೆಂದಾಗ ಆಕೆ ಒಪ್ಪದೆ ಸರಿಯಾಗಿ ಅರ್ಧಭಾಗ ಮಾಡಬೇಕೆಂದು ಜಗಳವಾಡಿದಾಗ ತನ್ನ ತಂದೆ ಉಸ್ತಾದ್ ಅಬ್ದುಲ್ ಖಾದರ್‌ಖಾನ್ ‘ನಾರಹೆ ಬಾನಸ್ ನಾಬಜೆ ಬಾನ್ಸುರಿ?’ (ಬಿದಿರು ಇದ್ರ ಕೊಳಲು, ಬಿದಿರ ಇಲ್ಲಂದ್ರ?) ಎಂದರಿತು ಆಸ್ತಿ ಮಾರಿದ ಸಂದರ್ಭವನ್ನು ವಿವರಿಸುತ್ತಾರೆ. ಬಾಬರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಅವರು ಕಳೆದ ದುರ್ಭರ ದಿನಗಳನ್ನು ಮತ್ತು ಪಂ.ಸುರೇಶ್ ತಳವಳ್‌ಕರ್ ತನ್ನನ್ನೂ ತನ್ನ ಸಹಪಾಠಿಗಳನ್ನೂ ರಕ್ಷಿಸಿದ್ದನ್ನೂ ‘ಮುಂಬೈನಲ್ಲಿ ಮೃತ್ಯುನಾಟ್ಯ...’ ಎಂಬ ಅಧ್ಯಾಯದಲ್ಲಿ ಕಾಣಿಸಿದ್ದಾರೆ.
ಹಾಗೆಯೇ ತಂದೆ ಗತಿಸಿದ್ದನ್ನು, 1995ರಲ್ಲಿ ತನ್ನ ಮದುವೆ ನಡೆದದ್ದನ್ನು, ತನ್ನ ಪತ್ನಿ ಪರ್ವೀನ್ ಹೇಗೆ ಸಂಸಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದಳು, ಮತ್ತು 2012ರಲ್ಲಿ ನಡೆದ ಕಾರು ಅಪಘಾತದಲ್ಲಿ ತಾನು ತೀವ್ರ ಗಾಯಗಳಿಗೆ ತುತ್ತಾಗಿ ‘ಮೂರು ದಿನಗಳ ಮ್ಯಾಲ ಎಚ್ಚರಾಗಿ ಐಸಿಯುವಿನಲ್ಲಿದ್ದಾಗ’ ತನ್ನ ಪತ್ನಿ ಗತಿಸಿದ ಸುದ್ದಿ ಗೊತ್ತಾದದ್ದನ್ನು ವಿವರಿಸುತ್ತ ‘ಕೊನೆಗೂ ಆಕಿ ಮುಖ ನೋಡಾಕ ಆಗಲಿಲ್ಲ’ ಎನ್ನುತ್ತಾರೆ. (ಖಾನ್ ಅವರ ಇಬ್ಬರು ಮಕ್ಕಳು ಫರಾ್ ಖಾನ್ ಮತ್ತು ಸರ್ಫರಾ್ ಖಾನ್ ಕೂಡಾ ಒಳ್ಳೆಯ ಸಂಗೀತಗಾರರು.) ‘ಭಾಳ ಛಲೋ ಹೆಣ್ಣುಮಗಳನ್ನ ಲಗ್ನ ಮಾಡ್ತೀವಿ’ ಎಂದು ಪುನಃ ಮದುವೆಯಾಗಲು ಮಂದಿ ಒತ್ತಾಯಿಸಿದಾಗ ‘ಬಂಗಾರ ಮುಟ್ಟಿದ ಮ್ಯಾಲ ತಗಡು ಮುಟ್ಟಾಕ ಆಗೂದಿಲ್ರಿ’ ಎಂದರಂತೆ. ‘ನಾನು ಇರೂತನಕ ಆಕಿ ಸಾವು ಕಾಡತೈತಿ’ ಎಂಬ ವಾಕ್ಯ ಸಾಕು ಅವರ ಭಾವನೆಗಳನ್ನು ಎತ್ತರಿಸಲು ಮತ್ತು ಉತ್ತರಿಸಲು. ಕಲೆ ಬಂಗಾರವಾಗುವುದೆಂದರೆ ಹೀಗೆ. ಈ ಕೃತಿಯಲ್ಲಿ ಫಯಾಜ್ ಖಾನ್ ಅವರ ಬದುಕಿನ ಇಂತಹ ಉದಾತ್ತ ಪ್ರಸಂಗಗಳು ಅನೇಕವಿವೆ. ಅವರೀಗ ತನ್ನ ಪತ್ನಿಯ ನೆನಪಿನಲ್ಲಿ ಒಂದು ಟ್ರಸ್ಟ್‌ನ್ನು ಸ್ಥಾಪಿಸಿ ಸಂಗೀತಕ್ಕಾಗಿ ಮುಡಿಪಾಗಿಟ್ಟಿದ್ದಾರೆ.
ಫಯಾಜ್ ಖಾನ್ ಹಲವು ಹಿರಿಯ ಸಂಗೀತಗಾರರ, ಕಲಾವಿದರ, ಸಾಹಿತಿಗಳ ಸಖ್ಯದವರು. ಹಲವಾರು ಸಿನೆಮಾಗಳಿಗೆ ಸಾರಂಗಿ ಸಾಥ್ ನೀಡಿದ್ದು ಮಾತ್ರವಲ್ಲ, ಸಾಹಿತ್ಯವನ್ನೂ ರಚಿಸಿದ್ದಾರೆ. ಎಸ್.ಎಲ್. ಭೈರಪ್ಪನವರ ‘ಮಂದ್ರ’ ಕಾದಂಬರಿಯಲ್ಲಿ ಬರುವ ರಾಗಗಳನ್ನು ಪ್ರಯೋಗವಾಗಿಸಿದ್ದಾರೆ. ಪ್ರಾಯಃ ಪಾರಂಪರಿಕ ಶೈಲಿಗೆ ನಾವೀನ್ಯ ನೀಡಬೇಕೆಂಬ ಸಿದ್ಧಾಂತ ಅವರದ್ದು. ಈ ದೃಷ್ಟಿಯಿಂದ ಅವರು ‘ಸಂಧ್ಯಾರಾಗ’, ‘ಹಂಸಗೀತೆ’ ಮುಂತಾದ ಕಾದಂಬರಿಗಳನ್ನೂ ಗಮನಿಸಬಹುದು.
ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಅವರಿಗಿರುವ ಪ್ರೀತಿ, ಅಭಿಮಾನ ಈ ಕೃತಿಯುದ್ದಕ್ಕೂ ಕಾಣುತ್ತದೆ. ವಚನಗಳು, ದಾಸರಪದಗಳು ತನ್ನನ್ನು ಪ್ರಭಾವಿಸಿದ ಬಗೆಯನ್ನು ಆತ್ಮೀಯವಾಗಿ ಕೊಂಡಾಡುತ್ತಾರೆ. ಶ್ರದ್ಧೆಯ ಕಾಯಕವಾಗಿ ಸಂಗೀತದ ಪ್ರಬುದ್ಧತೆಯು ಕಲಾವಿದನನ್ನು ಆವರಿಸಬೇಕೆಂಬ ಕಲ್ಪನೆ ಅವರದ್ದು. ಇದಕ್ಕೆ ಅವರು ಅನೇಕ ಹಿರಿಯರ ಉದಾಹರಣೆಗಳನ್ನು ನೀಡುತ್ತಾರೆ. ರಿಯಾಲಿಟಿ ಶೋ ಬಗ್ಗೆ ಅವರದೇ ಆದ ಬಿಗುಮಾನವಿದೆ: ಶಾಸ್ತ್ರೀಯವಾಗಿ ಕಲಿಯದೆ ಸಂತೆಯ ಹೊತ್ತಿಗೆ ಮೂರುಮೊಳ ನೇತು ಪ್ರಸಿದ್ಧರಾಗುವ ಅವಕಾಶದ ಇಂತಹ ಶೋಗಳು ‘ಸುಂಟರಗಾಳ್ಯಾಗ ಹಾರಿದ ಒಣತಪ್ಪಲು’ ಎನ್ನುತ್ತಾರೆ. ಎಲ್ಲವೂ ಗುರುಮುಖೇನ ಪಡೆಯಬೇಕು ಎಂಬುದು ಅವರ ತತ್ವ. ಅಲ್ಲೂ ‘ಹೆಸರು ಹೇಳಿದ ಮಾತ್ರಕ್ಕೆ ಗುರುವಾಗೂ ದಿಲ್ಲ. ಹಿರಿಯರು ಹೇಳಿದ್ದಾರಲ್ಲ- ಪಾನಿ ಪಿಯೊ ಛಾನ್ ಕೆ ಗುರು ಕರೊ ಪೆಹಚಾನ್ ಕೆ (ಸೋಸಿ ನೀರು ಕುಡಿ, ಗುರುತಿಸಿ ಗುರುಹಿಡಿ) ಅಂದ್ರ ಸಶಕ್ತರಾದ ಗುರುಗಳನ್ನು ಗುರುತಿಸು ಅಂತರ್ಥ’ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಹಾಗೆಯೇ ‘ಮುಖ್ಯ ಅಂದ್ರ ಸಂಗೀತಗಾರರಿಗೆ ನಾನು ಅನ್ನೋದು ಇರಬಾರ್ದು. ನಮ್ಮ ಕಲೆಯೊಳಗ ಪ್ರಬುದ್ಧತೆ ಇರ್ಬೇಕು. ಶೋಮನ್‌ಶಿಪ್‌ನಲ್ಲಿ ಅಲ್ಲ. ನಾವು ಹಾಕಿಕೊಳ್ಳುವ ಕುರ್ತಾ ಮುಖ್ಯ ಆಗ್ಬಾರ್ದು. ಸಂಗೀತ ಕನ್ನಡಿ ಇದ್ದಂಗ. ನಾವು ಏನು ಅನ್ನೋದು ನಮ್ಮಲ್ಲಿರೋ ಸಂಗೀತ ತೋರಸ್ತದ, ಎಂಥವ್ರ ಅನ್ನೋದು ನಮ್ಮ ಕಲೆಯೊಳಗ ಗೊತ್ತಾಗ್ತದ. ಮುಖ್ಯವಾಗಿ ಈಮಾನ್‌ದಾರಿ ಇರ್ಬೇಕು ಅಂದ್ರ ಪ್ರಾಮಾಣಿಕತೆ’ ಮತ್ತು ಮುಂದೆ ‘ಗುರುವಿನ ಜೊತಿ ಈಮಾನ್‌ದಾರ್ ಆಗಿರಬೇಕು.. ಸಂಗೀತದೊಳಗ ಸಾಧನೆ ಮಾಡಬೇಕಂದ್ರ ಫಕೀರ ಆಗಿರ್ಬೇಕು ಅಂದ್ರ ಸಾಧು ಆಗಿರ್ಬೇಕು. ಮಹಾರಾಜನಾದ್ರ ಸಾಧಕ ಆಗೂದಿಲ್ಲ. ಫಕೀರನಾಗಿ ದೇವ್ರನ್ನ ಕಾಣಬಹ್ದು, ರಾಜನಾಗಿ ದೇವರನ್ನು ಕಾಣೋದು ಕಷ್ಟ.’ ಎನ್ನುತ್ತಾರೆ. ಜೊತೆಗೆ ರಾಗಗಳ ಬಗ್ಗೆ ವಿಷದವಾಗಿ ಚರ್ಚಿಸುತ್ತಾರೆ. ಇದು ಸಾಹಿತ್ಯ, ಸಂಗೀತ ಸೇರಿದಂತೆ ಕಲಾ ಮೀಮಾಂಸೆ. ನಮ್ಮ ಸಾಹಿತಿಗಳೂ ಇದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು.
ಸಂಗೀತ ಮತ್ತು ಸಾಹಿತ್ಯ ಕಲಾ ಪ್ರಪಂಚದ ಜೋಡು ನಂದಾದೀಪಗಳು. ಸಂಸ್ಕೃತ ಸಾಹಿತ್ಯದಲ್ಲಿ ಇವನ್ನು ‘ಸಂಗೀತಂ ಸಾಹಿತ್ಯಂ ಸರಸ್ವತಿ ಕುಚದ್ವಯಂ’ ಎಂದು ಹೇಳಿದ್ದಾರೆ. ಇದನ್ನು ಈ ಕೃತಿಯಲ್ಲಿ ಫಯಾಜ್ ಖಾನ್ ಅವರು ವಿವರಿಸುತ್ತಾರೆ. ಹಾಗೆಯೇ ಸಂಗೀತ ಮತ್ತು ಸಮಾಜದ ನಂಟಿನ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯಿದೆ. ‘ಸಂಗೀತಕ್ಕೆ ಜೀವಂತಿಕೆ ಸಿಗೋದು ನಮ್ಮ ಸಮಾಜದಿಂದಲೇ. ಉಸ್ತಾದ್ ಬಡೇ ಗುಲಾಂಅಲಿ ಖಾನ್ ಅವರ ಭಾಳ ಪ್ರಸಿದ್ಧವಾದ ಠುಮ್ರಿ ತೋರೆ ನಯನಾ ಜಾದು ಬರೆ.. ಅಂದ್ರ ನಿನ್ನ ಕಣ್ಣುಗಳು ಜಾದು ಮಾಡುವಂತಿವೆ.. ಇದನ್ನು ಅವರು ಬರೆದದ್ದು ಮುಂಬೈನಾಗ. ಅವರ ಕಣ್ಣಿಗೆ ಬಿದ್ದ ಸುಂದರ ಯುವತಿಯ ಬಗ್ಗೆ. ಹಿಂಗ ಛಲೋ ಸಂಗೀತ ಹುಟ್ಟುವುದು ನಮ್ಮ ನಮ್ಮ ನಿತ್ಯದ ವಹಿವಾಟಿನಲ್ಲಿ’ ಎನ್ನುತ್ತಾರೆ.
ಅವರು ಬದುಕಿನ ಕುರಿತು ಇಟ್ಟ ಉದಾರ ದೃಷ್ಟಿ ಮತ್ತು ಅವರ ಉದಾತ್ತ ಚರಿತ್ರೆಗಳನ್ನು ಗಮನಿಸುವಾಗ ಬದುಕು ಎಷ್ಟೊಂದು ವಿಶಾಲ ಮತ್ತು ಅದರೆದುರು ನಾವು ಸಾಹಿತ್ಯ, ಸಂಗೀತ ಎಂದುಕೊಂಡು ನಡೆದುಕೊಳ್ಳುವ ಮತ್ತು ಅನುಭವಿಸುವ ಶ್ರೇಷ್ಠತೆಯ ವ್ಯಸನದವರು ತಮ್ಮ ಈ ಧೋರಣೆ ತಮ್ಮನ್ನು ಬೆಟ್ಟದೆದುರಿನ ಮಹಮ್ಮದನಂತೆ ಎಷ್ಟೊಂದು ಕೃಶರಾಗಿ ಕಾಣಬಲ್ಲುದು ಮತ್ತು ಮಾಡಬಲ್ಲುದು ಮತ್ತು ಫಯಾಜ್ ಖಾನ್ ಅವರ ‘ಎನಗಿಂತ ಕಿರಿಯರಿಲ್ಲ’ ಧೋರಣೆ ಅವರನ್ನು ಹೇಗೆ ಶ್ರೇಷ್ಠರನ್ನಾಗಿ ಮಾಡುತ್ತದೆ ಎಂಬುದನ್ನು ಅನಾವರಣಗೊಳಿಸುತ್ತದೆ. ಅವರದೇ ಮಾತಿನಲ್ಲಿ ‘ಸಂಗೀತ ಅನ್ನೋದು ಒಂದು ಆರಾಧನೆ’. ಬರೆಹಗಾರರಿಗೂ ‘ಸಾಹಿತ್ಯ ಅನ್ನೋದು ಒಂದು ಆರಾಧನೆ’ ಆಗಬೇಕು. ಇದು ವ್ಯಕ್ತಿಯ ಅಥವಾ ವೈಯಕ್ತಿಕ ಆರಾಧನೆಯಲ್ಲ.
ಬದುಕಿನ ದಾರ್ಶನಿಕತೆಯನ್ನು ಫಯಾಜ್ ಖಾನ್ ತನ್ನ ತಂದೆ ಬರೆದ ಒಂದು ಹಿಂದಿ ಶಾಯಿರಿಯನ್ನು ನೆನಪಿಸುತ್ತ ‘ಮಿಟಾದೆ ಅಪನಿಹಸ್ತಿ ಕೋ| ಅಗರ್ ಕುಚ್ ಮರ್‌ತಬಾ ಚಾಹಿಯೆ| ಕೆ ದಾನಾ ಜಬ್ ಖ್ಹಾಕ್ ಮೆ ಮಿಲ್‌ತಾ ಹೈ| ತೋ ಗುಲೇ ಗುಲ್‌ಚಾರ್ ಹೋತಾ ಹೆ’ ಅಂದರೆ ‘ಉತ್ತುಂಗದ ಸ್ಥಾನ ಪಡಿಬೇಕಾದ್ರ| ನಮ್ಮನ್ನ ನಾವು ಬಂಗಾರ ಸುಟ್ಟುಕೊಂಡಂಗ ಬೆಂಕ್ಯಾಗ ಬೀಳಬೇಕು|. ಬೀಜವೊಂದು ವಸಂತ ಕಾಣಬೇಕಾದ್ರ ಮಣ್ಣು ಸೇರಬೇಕಾಗ್ತದ|’ ಎಂದು ಹೇಳುವಾಗ ‘ಬೆಂದರೆ ಬೇಂದ್ರೆ’ ನೆನಪಾಗಬೇಕಲ್ಲವೇ?
ಫಯಾಜ್ ಖಾನ್ ಅವರ ಸಾರಂಗಿ ನಾದದ ಬೆನ್ನೇರಿ ಪಯಣಿಸುವುದು ಆಹ್ಲಾದಕರ, ಆತ್ಮೀಯ ಮತ್ತು ಸಾಂದ್ರ ಅನುಭವ. ಈ ಕೃತಿಯು ‘ಜೀವನಕಥನ’ವೆಂಬ ಉಪಶೀರ್ಷಿಕೆಯನ್ನು ಹೊತ್ತರೂ ಇದು ಫಯಾಜ್ ಖಾನ್ ಅವರೇ ಹೇಳಿದಂತಿದ್ದು ಇದನ್ನು ಆತ್ಮಕಥೆಯೆಂದೇ ಹೇಳಬಹುದು ಮತ್ತು ಇದರ ನಿರೂಪಣೆಯನ್ನು ಮಾತ್ರ ಲೇಖಕರಿಗೆ ಅನ್ವಯಿಸಬಹುದು. ಈ ಪರಿಯ ನಿರೂಪಣೆಯನ್ನು ಬೇರೆಯವರಿಂದ ಮಾಡಿಸಿದ ಆತ್ಮಚರಿತ್ರೆಗಳು ಕನ್ನಡದಲ್ಲಿ ಬಂದಿವೆ. ಈ ಕೃತಿಯ ಅಪರೂಪದ ಸಂಗತಿಯೆಂದರೆ ಈ ಕೃತಿಯು ಫಯಾಜ್ ಖಾನ್ ಅವರ ಸ್ವಂತ ಊರು ಧಾರವಾಡದ ಕನ್ನಡದಲ್ಲೇ ನಿರೂಪಿತವಾಗಿದೆ. ಕನ್ನಡದಲ್ಲಿ ಬಂದ ಅನೇಕ ಆತ್ಮಚರಿತ್ರೆಗಳು ಗ್ರಾಂಥಿಕ ಇಲ್ಲವೇ ತಮ್ಮದಲ್ಲದ ಅಸಹಜವೆನ್ನಿಸುವ ಕನ್ನಡದಲ್ಲಿ ನಿರೂಪಿತವಾಗಿ ಅನುಭವದ ಅಭಿವ್ಯಕ್ತಿಯ ಗಾಢತೆಯನ್ನು ಕಡಿಮೆಮಾಡಿದ ಉದಾಹರಣೆಗಳಿವೆ. ಈ ದೃಷ್ಟಿಯಿಂದ ನಿರೂಪಕ ಲೇಖಕರು ಅದ್ಭುತವಾದ ಕೊಡುಗೆಯನ್ನು ನೀಡಿದ್ದಾರೆ.