Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಆಧಾರ್! ನಿರಾಧಾರ್!

ಆಧಾರ್! ನಿರಾಧಾರ್!

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ11 Sept 2025 9:44 AM IST
share
ಆಧಾರ್! ನಿರಾಧಾರ್!

ಆಧಾರ್‌ಗೆ ಸಾವಿರಾರು ಕೋಟಿ ಹಣ ವೆಚ್ಚವಾದದ್ದನ್ನು ಮತ್ತು ಆಗುವುದನ್ನು ಗಮನಿಸಿದರೆ ಮತ್ತು ಇದು ವ್ಯರ್ಥವೆಂದು ಮೈಕೊಡವಿಕೊಳ್ಳುವ ಕೇಂದ್ರ ಸರಕಾರದ ಧಾಟಿ-ಧೋರಣೆಯನ್ನು ಗಮನಿಸಿದರೆ ಭಾರತ ಎಷ್ಟೊಂದು ಸಮೃದ್ಧ ದೇಶವೆಂಬುದು ಅರ್ಥವಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಇದೀಗ ಚುನಾವಣಾ ಆಯೋಗವು ಒಲ್ಲದ ಮನಸ್ಸಿನಿಂದ ಸ್ವೀಕರಿಸಿದಂತಿದೆ. ಮೊಸರಲ್ಲಿ ಎಷ್ಟು ಕಲ್ಲುಗಳು ಸಿಗುತ್ತವೆಯೆಂಬುದನ್ನು ಮುಂದಿನ ದಿನಗಳು ಹೇಳಲಿವೆ.

ದೇಶದ ವಿವಿಧೆಡೆ ಮತ್ತು ಮುಖ್ಯವಾಗಿ ಅಂದರೆ ಸಾಂದರ್ಭಿಕವಾಗಿ ಬಿಹಾರದ ಮತದಾರ ಪಟ್ಟಿಯಿಂದ ಬಹಳಷ್ಟು ಜನರು (ಕರಾರುವಾಕ್ಕಾದ, ನಿಖರವಾದ ಸಂಖ್ಯೆಯ, ಅಂಕಿ-ಅಂಶಗಳ ಅಗತ್ಯವಿಲ್ಲ; ಏಕೆಂದರೆ ಈ ದೇಶದಲ್ಲಿರುವ ಅಪಾರ ಜನಸಂಖ್ಯೆಯಿಂದಾಗಿ ಯಾವುದೇ ಸಂಖ್ಯೆಯೂ ಅವಗಣನೀಯವಾಗಿದೆ ಮತ್ತು ಸರಕಾರವು ಅವನ್ನು ನಿರ್ಲಕ್ಷಿಸಬಹುದಾಗಿದೆೆ!) ವಂಚಿತರಾದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ‘ಆಧಾರ’ ದಾಖಲೆಯನ್ನು 12ನೇ ಗುರುತಿನ ಚೀಟಿಯನ್ನಾಗಿ ಪರಿಗಣಿಸಬೇಕೆಂದು ಚುನಾವಣಾ ಆಯೋಗಕ್ಕೆ ಅಂತಿಮ ತಾಕೀತು ಮಾಡಿದೆ. ಇದರ ಸಂಕೇತ ಮಹತ್ವದ್ದೂ ಹೌದು; ಹಾಗೆಯೇ ಹಾಸ್ಯಾಸ್ಪದವಾದದ್ದೂ ಹೌದು. ಇದಕ್ಕೆ ಕಾರಣವಾದ, ಆಗಬಹುದಾದ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸುತ್ತಿದ್ದೇನೆ.

1990ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತಿತರ ಗಡಿರಾಜ್ಯಗಳಲ್ಲಿ ಅಕ್ರಮ ನುಸುಳುವಿಕೆಯನ್ನು ತಡೆಯುವ ಉದ್ದೇಶದಿಂದ ಅಲ್ಲಿನ ಭಾರತೀಯರಿಗೆ ಗುರುತಿನ ಚೀಟಿಕೊಡಬೇಕೆಂಬ ಸ್ಥೂಲ ಯೋಜನೆಯು ಮುಂದೆ ದೇಶಕ್ಕೇ ‘ಆಧಾರ’ವಾದದ್ದು ಒಂದು ಐತಿಹಾಸಿಕ ನಡೆ. ಇದಕ್ಕಾಗಿ ವಾಜಪೇಯಿ ಸರಕಾರದ ಕಾಲದಲ್ಲೇ (1999-2004) ತಜ್ಞರ ಸಮಿತಿಯನ್ನು ರಚಿಸಲಾಯಿತು. ಅನಂತರ ಮನಮೋಹನ್ ಸಿಂಗ್ ಸರಕಾರ ಬಂದಾಗ ಇದನ್ನು ಮುನ್ನಡೆಸಿತು. ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನಿಲೇಕಣಿ ಎಂಬ ವಿದ್ಯುನ್ಮಾನ ತಂತ್ರಜ್ಞರಿಗೆ ಕೇಂದ್ರ ಸರಕಾರದ ಕ್ಯಾಬಿನೆಟ್ ಸಚಿವ ಶ್ರೇಣಿಯ ಗೌರವವನ್ನು ಕೊಟ್ಟು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿತು. ಇದಕ್ಕಾಗಿ ನೂರಾರು ಕೋಟಿ ರೂಪಾಯಿ ನಿಧಿಯನ್ನು ಮಂಜೂರು ಮಾಡಲಾಯಿತು. ಆಧಾರ್ ಚೀಟಿಯನ್ನು ಸರಕಾರ ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಬ್ಯಾಂಕುಗಳಂತಹ ಇತರ ಸಾರ್ವಜನಿಕ/ಸ್ವಾಯತ್ತ ಸಂಸ್ಥೆಗಳು ಇದನ್ನು (ಮೊಬೈಲ್ ಸಂಖ್ಯೆಯಂತೆ) ಒತ್ತಾಯಿಸುತ್ತಿದ್ದವು. (ಮೊಬೈಲ್ ಇಲ್ಲದಿರುವುದು ಈ ದೇಶದಲ್ಲಿ ಬಡತನದ ಗುರುತು ಮಾತ್ರವಲ್ಲ, ಸಾರ್ವಜನಿಕ, ಸರಕಾರಿ ಸೌಲಭ್ಯಗಳನ್ನು ಪಡೆಯಲಾಗದಂತಹ ಒಂದು ಅಪರಾಧದಂತಿದೆ!) ಆದರೆ 2013ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದು ಕಡ್ಡಾಯವಲ್ಲ ಮತ್ತು ಈ ಗುರುತಿಲ್ಲದಿರುವುದು ಪ್ರಜೆಗಳು ಸರಕಾರದಿಂದ ಪಡೆಯುವ ಸೌಲಭ್ಯಗಳಿಗೆ ಅಡ್ಡಿಯಾಗಬಾರದೆಂದು ಆದೇಶಿಸಿತು. 2009ರಲ್ಲಿ ಅಸ್ತಿತ್ವಕ್ಕೆ ಬಂದ ಈ ಆಧಾರ್ ದಾಖಲೆಯ ಯೋಜನೆಯು ವಿಶ್ವದಲ್ಲೇ ಅತೀ ದೊಡ್ಡ ಗುರುತಿನ ಯೋಜನೆಯೆಂಬ ಹೊಗಳಿಕೆಗೆ ಪಾತ್ರವಾಯಿತು. ಈಗ ಭಾರತಕ್ಕಿರುವ 140 ಕೋಟಿಗೂ ಅಧಿಕ ಜನಸಂಖ್ಯಾಬಲದಿಂದಾಗಿ ಇಲ್ಲಿನ ಯಾವುದೇ ಯೋಜನೆಯೂ ವಿಶ್ವದಾಖಲೆಯನ್ನು ಸೃಷ್ಟಿಸಬಹುದು!

2014ರಲ್ಲಿ ನಂದನ್ ನಿಲೇಕಣಿ ಈ ಹುದ್ದೆಯನ್ನು ತ್ಯಜಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾಜಪದ ಅನಂತಕುಮಾರ್ ಅವರ ವಿರುದ್ಧ ಸೋತರು. ಆನಂತರ ಬಂದ ಮೋದಿ ಸರಕಾರ ಆಧಾರ್ ಯೋಜನೆಯನ್ನು ಮುಂದುವರಿಸುತ್ತಿತ್ತೋ ಗೊತ್ತಿಲ್ಲ. ಆದರೆ ಆ ಹಂತದಲ್ಲಿ ನಿಲೇಕಣಿಯವರು ಪ್ರಧಾನಿಯನ್ನು ಭೇಟಿಯಾಗಿ ಈ ಯೋಜನೆಯ ಮಹತ್ವ ಮತ್ತು ಅದಕ್ಕೆ ಈಗಾಗಲೇ ಆದ ಶ್ರಮ ಮತ್ತು ವೆಚ್ಚವನ್ನು ವಿವರಿಸಿದ ಬಳಿಕ ಕೇಂದ್ರ ಸರಕಾರ ಇದನ್ನು ಮುಂದುವರಿಸಲು ನಿರ್ಧರಿಸಿತು.

ಈ ಯೋಜನೆಗೆ ಕಾಯ್ದೆ-ಕಾನೂನಿನ ಬೆಂಬಲವಿಲ್ಲದಿದ್ದುದರಿಂದ 2016ರಲ್ಲಿ ಈ ಬಗ್ಗೆ ಕಾಯ್ದೆಯನ್ನೂ ಕೇಂದ್ರ ಸರಕಾರದ ವತಿಯಿಂದ ತರಲಾಯಿತು. ‘ಮೇರಾ ಆಧಾರ್ ಮೇರಾ ಪೆಹಚಾನ್’ (ನನ್ನ ಆಧಾರ್ ನನ್ನ ಗುರುತು) ಎಂಬ ಘೋಷಣೆೆಯು ಪ್ರಚಲಿತವಾಯಿತು. 2019ರ ಹೊತ್ತಿಗೆ ಈ ಯೋಜನೆಗೆ 11,366 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆಯೆಂದು ಸರಕಾರದ ಅಂಕಿ-ಅಂಶಗಳು ಹೇಳುತ್ತವೆ. ಆನಂತರದ ವೆಚ್ಚ ಇನ್ನೂ ಭಾರೀ ಮೊತ್ತವನ್ನು ಪೇರಿಸಬಲ್ಲುದು!

2021ರಲ್ಲಿ 1950ರ ಜನಪ್ರಾತಿನಿಧ್ಯ ಕಾನೂನಿಗೆ ತಿದ್ದುಪಡಿಯನ್ನು ತಂದು ಕಲಂ 23 (4)ರನ್ವಯ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ತಗಲಿಸಿ ಪರಿಶೀಲಿಸಲು ಅನುವು ಮಾಡಿಕೊಡಲಾಯಿತು. ಅಂದರೆ ಮತದಾರನ ಗುರುತಿನ ಚೀಟಿಗೂ ಆಧಾರ್ ಚೀಟಿಯೇ ಆಧಾರವಾಯಿತು!

ಸರಕಾರವೇ ನಾಮಕರಣ ಮಾಡಿದಂತೆ ‘ಆಧಾರ್’ ಒಂದು ‘ಅನನ್ಯ’ ಗುರುತಿನ ಚೀಟಿ!

ಇವಿಷ್ಟೇ ಅಲ್ಲ, ಗೂಗಲ್ ಮೂಲದ ಮತ್ತು ಮಾಧ್ಯಮದಲ್ಲಿ ಲಭ್ಯವಿರುವ ಮಾಹಿತಿಗಳು ಇನ್ನೂ ಲಭ್ಯವಿವೆ. ಅವೆಲ್ಲ ಇಲ್ಲಿ ಪ್ರಸ್ತುತವಲ್ಲ. ಪರಿಚಯಕ್ಕೆ ಇಷ್ಟು ಸಾಕು.

ಆದರೆ ಆಧಾರ್ ಕಾಯ್ದೆಯು ತನ್ನೊಳಗೇ ಒಂದು ಪೊಳ್ಳುತನವನ್ನೂ, ಟೊಳ್ಳುತನವನ್ನೂ ಹೊಂದಿಕೊಂಡೇ ಜನ್ಮತಾಳಿದೆ. ಅದು ದೇಶದ ನಾಗರಿಕತೆಗೆ ಆಧಾರವಲ್ಲವೆಂದು ಹೇಳಿದೆ. ನಮ್ಮ ಬಹುತೇಕ ಕಾಯ್ದೆಗಳು ಹೀಗೆಯೇ. ಹೇಳಿದಂತಿರಬೇಕು, ಹೇಳದಂತಿರಬೇಕು. ಕೊಟ್ಟಂತಿರಬೇಕು, ಕೊಡದಂತಿರಬೇಕು. ಕಾಯ್ದೆಯನ್ವಯ ಅದು ಸರಕಾರ ಕಲ್ಪಿಸಬಲ್ಲ ವಿವಿಧ ನೆರವಿಗಾಗಿ ಮಾತ್ರವೇ ಹೊರತು ನಾಗರಿಕತೆಗೆ ಅರ್ಹತೆಯ ಅಳತೆಗೋಲಲ್ಲ. ಉದಾಹರಣೆಗೆ ಕೇಂದ್ರ ಸರಕಾರದ ಮಹಾತ್ಮಾ ಗಾಂಧಿ ಉದ್ಯೋಗ ಯೋಜನೆಗೆ ಇದು ಸಾಕು. ಆದರೆ ನಾಗರಿಕತೆಯ ಸಾಬೀತಿಗೆ ಸಾಲದು. ಹೀಗೆ ಇಬ್ಬಂದಿತನವನ್ನು ಅಥವಾ ಅಂಗಹೀನತೆಯನ್ನು ಹೊತ್ತು ಹುಟ್ಟಿದ ಕಾಯ್ದೆಯು ಸದಾ ಬಾಲಗ್ರಹದಿಂದ ಬಳಲುವುದು ಪ್ರಕೃತಿ ಸಹಜ; ಮನುಷ್ಯ ಸಹಜ.

ಈ ದೇಶದ ಜನರು ಸರಕಾರ ಏನು ನೀಡಿದರೂ ಅದನ್ನು ಅಗತ್ಯವಿರಲಿ, ಇಲ್ಲದಿರಲಿ, ಸರದಿಯ ಸಾಲಿನಲ್ಲಿ ನಿಂತು ಪಡೆಯಲು ಯತ್ನಿಸುತ್ತಾರೆ. ತಾವೇ ವಿರೋಧಿಸಿದ ಸವಲತ್ತು ಸಿಕ್ಕುವುದಾದರೆ ತಮ್ಮ ವೈಯಕ್ತಿಕ, ಸಾಮೂಹಿಕ ತತ್ವ-ಸಿದ್ಧಾಂತಗಳನ್ನು ತ್ಯಜಿಸಿ ಪಡೆಯುತ್ತಾರೆ. ಸರಕಾರಗಳೂ ಅಷ್ಟೇ: ಅಧಿಕಾರದಲ್ಲಿಲ್ಲದಾಗ ತಾವೇ ವಿರೋಧಿಸಿದ್ದನ್ನು ಅಧಿಕಾರಕ್ಕೆ ಬಂದೊಡನೇ ಮರೆತೋ ಮರೆಯದೆಯೋ ಅನುಸರಿಸುತ್ತವೆೆ. ಅಧಿಕಾರಕ್ಕೆ ಮತ್ತು ಪ್ರಜಾಪೀಡನೆಗೆ ಅವಕಾಶ ಮತ್ತು ನೆರವು ಸಿಕ್ಕರೆ ಸಾಕು. ಪಕ್ಷಾಂತರ ರಾಜಕೀಯ ವರ್ಚಸ್ಸಿಗೆ ಬಂದ ಬಳಿಕ ಘಳಿಗೆಗೊಮ್ಮೆ ಪ್ರತಿಯೊಬ್ಬನ ಹೃದಯಬಡಿತವು ಪಲ್ಲಟವಾಗುತ್ತದೆ. ದೇಶಕ್ಕೊಂದು ಸಂವಿಧಾನವಿದೆ. ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬೇಕು, ಬಳಸಿಕೊಳ್ಳಲು ಸಾಧ್ಯವಿಲ್ಲವಾದರೆ ಪ್ರಜಾಪ್ರಭುತ್ವದ ‘ಬಹುಮತ ಸಿದ್ಧಾಂತ’ದ ಆಧಾರದಲ್ಲಿ ತಿರುಚಿಕೊಂಡಾದರೂ ಬಳಸಬೇಕು.

ಆಧಾರ್ ಇದಕ್ಕೆ ಹೊರತಲ್ಲ. ಇದರ ಸ್ಥಾನಮಾನವೇನೆಂದು ದೇಶಕ್ಕೆ ದೇಶವೇ ಗೊಂದಲದಲ್ಲಿದೆ. ಕೇಂದ್ರ ಸರಕಾರವು ಇದನ್ನು ಅತ್ತ ತಿರಸ್ಕರಿಸದೆ, ಇತ್ತ ಪುರಸ್ಕರಿಸದೆ ಬೇಲಿಯ ಮೇಲೆ ಕುಳಿತಿದೆ. ದೇಶದ ಪ್ರಜಾಸಂಖ್ಯೆಯನ್ನು ಆಧಾರ್ ಮೂಲಕ ಅಳೆದ ಸರಕಾರವು ಈಗ ಪ್ರಜೆಗಳಲ್ಲಿ ಭಾರತೀಯ ನಾಗರಿಕರು ಮತ್ತು ನಾಗರಿಕರಲ್ಲದವರು (ಇದನ್ನು ‘ಅನಾಗರಿಕರು’ ಎಂದು ಹೇಳುವಂತಿಲ್ಲ! ‘ನಾಗರಿಕತ್ವ’ ಎಂಬ ಪದವಿಲ್ಲವಲ್ಲ!) ಎಂಬ ಭಿನ್ನತೆಯನ್ನು ಹುಡುಕುತ್ತಿದೆ. ಈಚೆಗೆ ಬಿಹಾರದ ಚುನಾವಣೆಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಚುನಾವಣಾ ಮತದಾರ ಪಟ್ಟಿಯಿಂದ ಕೈಬಿಟ್ಟಾಗ ಅನೇಕರು ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದರು. ಮೊದಮೊದಲು ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಹೆಚ್ಚು ಗಂಭೀರವಾಗಿರಲಿಲ್ಲ ಎಂಬುದು ಅದರ ನಿಧಾನಪ್ರಕೃತಿಯಿಂದ ಗೊತ್ತಾಗುತ್ತದೆ. ಆದರೆ ವಿಚಿತ್ರ ಮತ್ತು ವಿಕೃತ ಮಾಹಿತಿಗಳು ಲಭ್ಯವಾಗಲು ಆರಂಭವಾದಾಗ ಅದು ಈ ಲೋಪದೋಷಗಳನ್ನು ಪರಿಗಣಿಸಲು ನಿರ್ಧರಿಸಿತು. ಪ್ರಜೆಗಳು ನಿಷ್ಠೆ ಮತ್ತು ಶ್ರದ್ಧೆಯಿಂದ ಪಡೆದುಕೊಂದ ಆಧಾರ್ ಮತದಾರನ ಅರ್ಹತೆಗೆ ಸಾಕಾಗುವುದಿಲ್ಲ ಎಂಬ ವಾದವನ್ನು ಭಾಗಶಃ ಸ್ವೀಕರಿಸಿದರೂ ಅನೇಕರ ಪಾಲಿಗೆ ಇತರ ದಾಖಲೆಗಳು ಲಭ್ಯವಿರುವುದಿಲ್ಲ ಅಥವಾ ಇದ್ದರೂ ಅವು ವಂಚನೆಯ ಜಾಲಕ್ಕೆ ಸಿಗಬಲ್ಲವು ಎಂಬುದು ಈಗ ಎಲ್ಲರಿಗೂ ಅರ್ಥವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯವು ತೀರ ತಡವಾಗಿಯಾದರೂ ಒಪ್ಪಿಕೊಂಡಿದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಚುನಾವಣಾ ಆಯೋಗವು ಮಾಡಿದ 11 ದಾಖಲೆಗಳ: ಕ್ರಿಕೆಟ್ ತಂಡದ ಆಟಗಾರರು ಯಾರೆಂಬುದು ತಿಳಿಯಬೇಕು: ಇವು 1. ಮತದಾರರ ಗುರುತಿನ ಚೀಟಿ, 2. ಕಾರ್ಮಿಕ ಇಲಾಖೆ ನೀಡುವ ಸ್ಮಾರ್ಟ್‌ಕಾರ್ಡ್, 3. ನರೇಗಾ ಯೋಜನೆಯ ಉದ್ಯೋಗ ಚೀಟಿ, 4. ವಾಹನ ಚಾಲನಾ ಪರವಾನಿಗೆ, 5. ಕೇಂದ್ರ ಸರಕಾರ ಹಾಗೂ ಅದರ ಅಂಗಸಂಸ್ಥೆಗಳು ನೀಡುವ ನೌಕರರ ಗುರುತಿನ ಚೀಟಿ, 6. ಕಾರ್ಮಿಕ ಇಲಾಖೆ ನೀಡುವ ಆರೋಗ್ಯ ವಿಮೆ ಚೀಟಿ, 7. ನಿವೃತ್ತಿ ವೇತನದ ದಾಖಲೆ, 8. ಜನಪ್ರತಿನಿಧಿಗಳಿಗೆ ನೀಡುವ ಗುರುತಿನ ಚೀಟಿ, 9. ಆದಾಯ ತೆರಿಗೆ ಇಲಾಖೆ ನೀಡುವ ಪಾನ್, 10. ಪಾಸ್‌ಪೋರ್ಟ್, 11. ಬ್ಯಾಂಕ್ ಪಾಸ್ ಪುಸ್ತಕ. ಈ ತಂಡಕ್ಕೆ ಸೇರಿಸಲಾದ 12ನೆಯ ಆಟಗಾರ ನಮ್ಮ ಆಧಾರ್.

ಮೊದಲಿನ 11 ದಾಖಲೆಗಳೇನೂ ಸುರಕ್ಷಿತವೇನಲ್ಲ. ಈ ದೇಶದಲ್ಲಿ ನಡೆದ, ನಡೆಯುವ ಅಸಂಖ್ಯಾತ ಅಕ್ರಮಗಳಲ್ಲಿ ಇವೂ ಸೇರಿವೆ. ಮಾಹಿತಿ ತಂತ್ರಜ್ಞಾನದ ಆಧುನಿಕ ಅವತಾರದಲ್ಲಿ ಪೊಲೀಸರನ್ನು 24x7 ದುಡಿಸುತ್ತಿರುವ ಅಪಾರ ಅಕ್ರಮಗಳಲ್ಲಿ ಇವು ಭಾರೀ ಪ್ರಮಾಣದಲ್ಲಿವೆ. ಆಧಾರ್ ಬರುವ ಮೊದಲಿನ ಚುನಾವಣೆಗಳಲ್ಲಿ ಕಳ್ಳಮತದಾನ ನಡೆದಿರುವುದು ಒಂದು ಬಹಿರಂಗ ರಹಸ್ಯ. ದೇವರ ಹುಂಡಿಗೆ ಹೇಗೆ ಕಳ್ಳರ, ಲೂಟಿಕೋರರ, ವಂಚಕರ ಹಣವು ರಾಶಿ ಬೀಳುತ್ತದೆಯೋ ಹಾಗೆಯೇ ಯಾವನೇ ಜನಪ್ರತಿನಿಧಿಯೂ ಇಂತಹ ವಂಚಕ ಬೆಂಬಲಿಗರ ಸಹಾಯವಿದೆಯೆಂಬುದನ್ನು ಪ್ರಾಮಾಣಿಕವಾಗಿಯೇ ಒಪ್ಪಿಕೊಳ್ಳಬೇಕು. ಹಾಗಾದರೆ ಈ ವಂಚನೆ ಹೇಗಾಯಿತು? ಯಾವುದನ್ನು ಬೇಕಾದರೂ ಕೃತ್ರಿಮವಾಗಿ ಸೃಷ್ಟಿಸಬಹುದು. ಅಕ್ರಮ ಪಾಸ್‌ಪೋರ್ಟ್‌ನ ಆಧಾರದಲ್ಲಿ ದೇಶ ತೊರೆದವರ ಸಂಖ್ಯೆಯೂ ಗಣನೀಯ. ನರೇಗಾ ಯೋಜನೆಯಲ್ಲಿ ಬಡವರ ಹೊಟ್ಟೆಗೆ ಮತ್ತು ಸರಕಾರದ ಕಣ್ಣಿಗೆ ಮಣ್ಣೆರಚಿ (ಇದರಲ್ಲಿ ಸರಕಾರದ ಮತ್ತು ಅದರ ಅಧಿಕಾರಿಗಳ, ಗುತ್ತಿಗೆದಾರರ ಪಾಲು ದೊಡ್ಡದು!) ಅಪಾರ ಅಕ್ರಮ ನಡೆಯುತ್ತಿದೆ. ಇವಕ್ಕೆಲ್ಲ ಸರಕಾರದಲ್ಲಿ ಉತ್ತರವಿಲ್ಲ. ಇವನ್ನು ನಿಯಂತ್ರಿಸುತ್ತೇವೆ ಎಂಬ ನಿತ್ಯಮಿಥ್ಯವನ್ನು ಹೇಳುವುದು ಮತ್ತು ಯಾವುದೇ ವೈಫಲ್ಯಕ್ಕೂ ಪ್ರತಿಪಕ್ಷಗಳನ್ನು ದೂಷಿಸುವುದು, ಆರೋಪಿಸುವುದು, ಸರಕಾರಗಳ ಮಾಮೂಲು ತಂತ್ರ. ಈಚೆಗೆ ನಾಗರಿಕತ್ವದ ಕಾಯ್ದೆಯನ್ನು ಯಾವುದಾದರೂ ಒಂದು ಬಾಗಿಲಲ್ಲಿ ತರಬೇಕೆಂದು ಕೇಂದ್ರ ಸರಕಾರ ಇಷ್ಟಪಟ್ಟಿತು. ಇದರಲ್ಲಿರುವ ಒಡೆದು ಆಳುವ, ಒಡೆದು ಬಾಳುವ, ಒಡೆದು ಮನೆಹಾಳುಮಾಡುವ ಲಕ್ಷಣಗಳನ್ನು ಜನರು ವಿರೋಧಿಸಿದರು. ಆದರೆ ಅದೀಗ ಕಪಟಸನ್ಯಾಸ ವೇಷದಲ್ಲಿ ಬರುತ್ತಿದೆ.

ಇಷ್ಟೇ ಅಲ್ಲ, ಆಧಾರ್ ಒಂದು ಬರಿಯ ಗುರುತಿನ ಚೀಟಿಯಾದರೆ ಮತ್ತು ದೇಶದೊಳಗಿರುವ ಆಧಾರ್ ಚೀಟಿಯ ಜನರು ಇಲ್ಲಿನ ನಾಗರಿಕರೇ ಆಗಿರಬೇಕಾಗಿಲ್ಲವೆಂಬ ವಾದವನ್ನು ಮನ್ನಿಸುವುದಾದರೆ ಇಲ್ಲಿ ಕಾಲಿಡುವ ಪ್ರತಿಯೊಬ್ಬ ವಿದೇಶಿಯನಿಗೂ ಗುರುತಿಗಾದರೂ ‘ಆಧಾರ್’ ಚೀಟಿಯನ್ನು ನೀಡಬೇಕು ಅಥವಾ ಭಾರತಕ್ಕೆ ಭೇಟಿ ನೀಡಲು ಇಷ್ಟಪಡುವ ಪ್ರತಿಯೊಬ್ಬ ಮನುಷ್ಯನಿಗೂ ಭಾರತೀಯ ದೂತಾವಾಸಗಳಿಂದ ನೀಡುವಂತಿರಬೇಕು. ಕೊನೆಗೂ ಮನುಷ್ಯನಿಗೆ ನಾಗರಿಕತ್ವ ಅಥವಾ ಮತದಾನದ ಹಕ್ಕು ಇದೆಯೋ ಇಲ್ಲವೋ, ಇರಬೇಕೋ ಬೇಡವೋ, ಗುರುತಂತೂ ಇರಬೇಕಲ್ಲ!

ಆದ್ದರಿಂದ ಈ 11 ದಾಖಲೆಗಳಲ್ಲಿ ಇಲ್ಲದ ಅಕ್ರಮ, ಕೃತ್ರಿಮ ಆಧಾರ್‌ನಲ್ಲಿರಲು ಸಾಧ್ಯವಿಲ್ಲ. ಆದರೂ ಈ ‘ಅನನ್ಯ’ ಗುರುತಿನ ಚೀಟಿಯ ಬಗ್ಗೆ ಅದನ್ನು ಹೆತ್ತವರಿಗೇ ನಂಬಿಕೆಯಿಲ್ಲ. ಅನನ್ಯವೂ ಅನ್ಯವಾಗುವ ದುರಂತ ಇದು. ಆದ್ದರಿಂದ ಈ 12ನೆಯ ಆಟಗಾರನಿಗೆ ಕ್ರಿಕೆಟ್ ಮೈದಾನದ ಹೊರಗೆ ಕುಳಿತು ಪಾನವಿರಾಮದಲ್ಲಿ ಪಾನೀಯಗಳನ್ನು ಸರಬರಾಜು ಮಾಡುವುದಷ್ಟೇ ಕೆಲಸವೇನೋ ಎನ್ನುವಂತಿದೆ. ಇದಕ್ಕೆ ಸಾವಿರಾರು ಕೋಟಿ ಹಣ ವೆಚ್ಚವಾದದ್ದನ್ನು ಮತ್ತು ಆಗುವುದನ್ನು ಗಮನಿಸಿದರೆ ಮತ್ತು ಇದು ವ್ಯರ್ಥವೆಂದು ಮೈಕೊಡವಿಕೊಳ್ಳುವ ಕೇಂದ್ರ ಸರಕಾರದ ಧಾಟಿ-ಧೋರಣೆಯನ್ನು ಗಮನಿಸಿದರೆ ಭಾರತ ಎಷ್ಟೊಂದು ಸಮೃದ್ಧ ದೇಶವೆಂಬುದು ಅರ್ಥವಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಇದೀಗ ಚುನಾವಣಾ ಆಯೋಗವು ಒಲ್ಲದ ಮನಸ್ಸಿನಿಂದ ಸ್ವೀಕರಿಸಿದಂತಿದೆ. ಮೊಸರಲ್ಲಿ ಎಷ್ಟು ಕಲ್ಲುಗಳು ಸಿಗುತ್ತವೆಯೆಂಬುದನ್ನು ಮುಂದಿನ ದಿನಗಳು ಹೇಳಲಿವೆ.

ಆಧಾರ್ ಎಂಬ ಗಾಳಿಪಟಕ್ಕೆ ಭೂಮಿಯ ವಾಸ್ತವದಿಂದ ಕಟ್ಟಿದ ದಾರವನ್ನು ಕೇಂದ್ರ ಸರಕಾರವು ಕಿತ್ತುಹಾಕಿದೆ. ಅದೀಗ ನಿರಾಧಾರ್!

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X