ಡೊಂಕು ಬಾಲಕ್ಕೆ ಡೊಂಕು ನಳಿಗೆ

ಡೊಂಕು ಬಾಲಕ್ಕೆ ಚಿನ್ನದ ನಳಿಗೆ ಹಾಕಿದರೂ ಅದು ನೆಟ್ಟಗಾಗದು ಎಂಬುದು ಕ್ಲೀಶೆಯಾದ ಉದಾಹರಣೆ. ಆದರೂ ಅದು ಸತ್ಯವೆಂದು ಎಲ್ಲರಿಗೂ ಗೊತ್ತಿದೆ; ಕೆಲವರು ಅದನ್ನು ಸತ್ಯವೆಂದು ಒಪ್ಪಲಾರರು.
ಭಾರತವೆಂಬ ಈ ನನ್ನ ದೇಶವನ್ನು ನಾನು ಎಲ್ಲರಷ್ಟೇ ಪ್ರೀತಿಸುತ್ತೇನೆ. ‘ಮಹಾನ್ ದೇಶಭಕ್ತ’ ಇತ್ಯಾದಿ ವಿಶೇಷಣಗಳ ಅಗತ್ಯವಿರುವುದು ಪ್ರಚಾರ ಮತ್ತು ಪ್ರಸಿದ್ಧಿ ಹಾಗೂ ಆ ಮೂಲಕ ಪ್ರಶಸ್ತಿ ಪಡೆಯವವರಿಗೆ ಅಥವಾ ಬಯಸುವವರಿಗೆ ಮಾತ್ರ. ದೇಶದ ಬಗ್ಗೆ ನನಗೇಕೆ ಪ್ರೀತಿ? ಅದು ನನ್ನ ದೇಶ ಎಂಬ ಕಾರಣಕ್ಕೆ. ನಮ್ಮ ಮಕ್ಕಳು ತರಗತಿಯಲ್ಲಿ ಮೊದಲ ಸ್ಥಾನ ಪಡೆಯದ ಮಾತ್ರಕ್ಕೆ ಅವರನ್ನು ನಾವು ದ್ವೇಷಿಸುತ್ತೇವೆಯೇ? ಬದುಕುವುದಕ್ಕೆ ಮತ್ತು ಬದುಕಿನ ಯಶಸ್ಸಿಗೆ ಬೇಕಾದ ಕೆಲವು ಒಳ್ಳೆಯ ಗುಣಗಳನ್ನು ಅವರು ಹೊಂದಲಿ ಎಂದಷ್ಟೇ ಬಯಸುವುದು ಸಹಜ ಗುಣ. ಉಳಿದದ್ದೆಲ್ಲ ಮಹತ್ವಾಕಾಂಕ್ಷೆ. ಇದು ಪ್ರತಿಯೊಬ್ಬ ಪ್ರಾಮಾಣಿಕ ಇಲ್ಲವೇ ಸಭ್ಯ ಭಾರತೀಯನೊಬ್ಬನ ಚಿಂತನೆಯಾಗಿರುತ್ತದೆ ಅಥವಾ ಆಗಿರಬೇಕು ಮತ್ತು ಇದೇ ಒಬ್ಬ ವ್ಯಕ್ತಿಯನ್ನು ‘ಭಾರತೀಯ’ವಾಗಿಸುತ್ತದೆ.
ಈ ‘ಪ್ರಾಮಾಣಿಕ’ ಅಥವಾ ‘ಸಭ್ಯ’ ಎಂಬ ಪದವೇ ಚಿಂತನೆಗೆ ಮೂಲವಾಗಬೇಕು. ‘ಅಪ್ರಾಮಾಣಿಕತೆ’ಯಿಲ್ಲದಿದ್ದರೆ ‘ಪ್ರಾಮಾಣಿಕತೆ’ಗೆ, ‘ಅಸಭ್ಯತೆ’ಯಿಲ್ಲದಿದ್ದರೆ ‘ಸಭ್ಯತೆ’ಗೆ ಬೆಲೆಯೆಲ್ಲಿದೆ? ಅದು ಸಾಕ್ಷರತೆಯನ್ನು ಇಲ್ಲವೇ ಶಿಕ್ಷಣವನ್ನು ಅವಲಂಬಿಸಿಲ್ಲ. ಧರ್ಮ, ಮೂಲವಂಶ, ಲಿಂಗ, ಜಾತಿ, ಜನ್ಮಸ್ಥಳ ಮುಂತಾದ ಅನಿವಾರ್ಯ (ಸಂವಿಧಾನದಲ್ಲಿ ತಾರತಮ್ಯವನ್ನು ಮಾಡಬಾರದ, ಸಮಾನತೆಗಾಗಿ ಆಧರಿಸಿದ ಗುಣಗಳನ್ನು- 15ನೇ ವಿಧಿಯಲ್ಲಿ ಭಾಷೆ ಮತ್ತು ಮತವನ್ನು ಕಾಣಿಸಿಲ್ಲವೆಂಬುದನ್ನು ನೆನಪಿನಲ್ಲಿಡಬೇಕು!) ವ್ಯಕ್ತಿಸೂಚಕಗಳಿಗೂ ಅವಕ್ಕೂ ಸಂಬಂಧವಿಲ್ಲ. ಈ ಮೌಲ್ಯಗಳು ಕಳೆದುಹೋದರೆ ಅಥವಾ ಅದನ್ನು ನಾವೇ ಕಳೆದುಕೊಂಡರೆ ಉಳಿದ ನಾವು ಗಿಲಿಟು ಹಚ್ಚಿದ ವ್ಯಕ್ತಿತ್ವಗಳಾಗುತ್ತವೆ. ಸಾಮಾಜಿಕ, ರಾಜಕೀಯ ಕೊನೆಗೆ ವೈಯಕ್ತಿಕ ಬದುಕಿನ ವ್ಯವಸ್ಥೆ ಎಲ್ಲಿಗೆ ಕುಸಿಯುತ್ತದೆ ಎಂಬುದಕ್ಕೆ ಅನುದಿನ ಉದಾಹರಣೆಗಳು ಸಿಗುತ್ತವೆ.
ಈಚೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಮಾಲ್ ಒಂದರಲ್ಲಿ ಭಾರತದ ಮಹಿಳೆಯೊಬ್ಬಳು ಕೆಲವು ವಸ್ತುಗಳನ್ನು ಖರೀದಿಸಿ ಅದರ ಮೌಲ್ಯವನ್ನು ಪಾವತಿಸದೆ ಹೊರಬಂದಾಗ ಸಿಕ್ಕಿಹಾಕಿಕೊಂಡಳು. ಅನಿವಾರ್ಯವಾಗಿ ಪೊಲೀಸ್ ವಶವಾದಳು. ಆಕೆ ಹಿಂದೂ ಮುಖಂಡಳೆಂದು ವರದಿಯಾಯಿತು. ಹಿಂದೂ ಮುಖಂಡಳಾಗಿರಲಿ, ಇನ್ನೇನೇ ಆಗಿರಲಿ, ಆಕೆ ಭಾರತೀಯಳು ಎಂಬದಷ್ಟೇ ಇಲ್ಲಿ ಪ್ರಸ್ತುತ. ಇದು ಆಕೆಗೆ ಅವಮರ್ಯಾದೆ ತಂದಿತೆಂಬುದಕ್ಕಿಂತ ಹೆಚ್ಚು ಆಕೆ ಭಾರತದ ಮಾನ ಕಳೆದಳು ಎಂಬ ಅಂಶ. ಮಾಲ್‌ನಲ್ಲಿ ಕದ್ದ ಮಾಲುಗಳ ಮೌಲ್ಯವನ್ನು ಆಕೆ ಪಾವತಿಸಲು ಕೋರಿಕೊಂಡರೂ ಅಲ್ಲಿನ ಪೊಲೀಸ್ ವ್ಯವಸ್ಥೆ ಒಪ್ಪಲಿಲ್ಲ. ಇದು ಹಣ ವಸೂಲಿಯ ಪ್ರಕರಣವಲ್ಲ, ಕಳವಿನ ಪ್ರಕರಣವೆಂಬದು ಅವರ ವಾದ. ಕಾನೂನಿನಡಿ ಆಕೆ ಅನುಭವಿಸಬೇಕಾದ್ದನ್ನು ಅನುಭವಿಸಲೇಬೇಕು ಎಂಬುದು ಅಲ್ಲಿನ ನಿಯಮ. ಮುಂದೆ ಆಕೆ ದಂಡ ತೆರುತ್ತಾಳೋ ಸೆರೆಮನೆ ವಾಸಕ್ಕೆ ಗುರಿಯಾಗುತ್ತಾಳೋ ಗೊತ್ತಿಲ್ಲ.
ಇದೇ ಘಟನೆ ಭಾರತದಲ್ಲಿ ನಡೆದಿರುತ್ತಿದ್ದರೆ ಏನಾಗುತ್ತಿತ್ತು? ಪೊಲೀಸರು ರಾಜಿ ಮಾಡಿ ಮುಗಿಸುತ್ತಿದ್ದರು. ಪ್ರಭಾವಿ ವ್ಯಕ್ತಿಯಾಗಿದ್ದರೆ ಯಾರಿಗೂ ಹೇಳದೆ ಅವನ್ನು ವಾಪಸ್ ಮಾಡಿ ಪ್ರಕರಣವೇ ಬೆಳಕು ಕಾಣದಂತೆ ಮುಚ್ಚಿಹಾಕುತ್ತಿದ್ದರು. ಸಾಮಾನ್ಯ ಹಿನ್ನೆಲೆಯ ಆರೋಪಿ ಮತ್ತು ಪ್ರಾಮಾಣಿಕ ಅಧಿಕಾರಿ ಹೀಗೆ ಮುಖಾಮುಖಿಯಾದರೆ ಒಂದೋ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗುತ್ತಿತ್ತು ಅಥವಾ ಅಧಿಕಾರಿ ಇನ್ನು ಮುಂದೆ ಅಂತಹ ಘಟನೆ ನಡೆಯದಂತೆ ಹಿತವಚನ ಹೇಳಿ ಕಳುಹಿಸುತ್ತಿದ್ದರು. ಭ್ರಷ್ಟ ಅಧಿಕಾರಿಗಳಾದರೆ ಈ ಕದ್ದ ಮಾಲ್‌ನಲ್ಲೂ ಒಂದು ಪಾಲು ಪಡೆಯುತ್ತಿದ್ದರು. ಅಧಿಕಾರಿಯಿಂದ ಅಧಿಕಾರಿಗೆ ಭಿನ್ನವಾದ ಇಂತಹ ಹತ್ತಾರು ಸಾಧ್ಯತೆಗಳಿರುತ್ತಿದ್ದವು.
ಅಂದರೆ ನಮ್ಮ ಅವ್ಯವಸ್ಥೆಯಲ್ಲಿ ಈ ರೀತಿಯ ಪ್ರಕರಣಗಳು ನಿತ್ಯ ನಡೆಯುತ್ತವೆ ಮತ್ತು ಅವುಗಳು ತಾರ್ಕಿಕ ಅಂತ್ಯ ಕಾಣುವುದು ಅಪರೂಪ. ಮನುಷ್ಯನ ನಿಯತ್ತಿನೊಂದಿಗೆ ವ್ಯವಸ್ಥೆ ರಾಜಿ ಮಾಡಿಕೊಂಡರೆ ಅದು ಅನಪೇಕ್ಷಿತ ಪರಿಣಾಮ ಮತ್ತು ಫಲಿತಾಂಶಗಳಿಗೆ ದಾರಿಯಾಗುತ್ತದೆ. ನಿಧಾನಕ್ಕೆ ಅವ್ಯವಸ್ಥೆಯೇ ಮುಖ್ಯ ವಾಹಿನಿಯಾಗಿ ಪ್ರಾಮಾಣಿಕತೆ ಅಪರೂಪದ ಸರಕಾಗುತ್ತದೆ.
ಇದು ವಿದಿತವಾಗಬೇಕಾದರೆ ನಮ್ಮಲ್ಲಿ ಬರುವ ವರದಿಗಳನ್ನು ಗಮನಿಸಬೇಕು. ಆಟೊಚಾಲಕನೊಬ್ಬನು ತನ್ನ ವಾಹನದಲ್ಲಿ ಪ್ರಯಾಣಿಕರೊಬ್ಬರು ಬೆಲೆಬಾಳುವ ವಸ್ತುವೊಂದನ್ನು ಬಿಟ್ಟುಹೋಗಿ ಆತ ಅದನ್ನು ಮರಳಿಸಿದರೆ ಮಾಧ್ಯಮಗಳಲ್ಲಿ ‘ಪ್ರಾಮಾಣಿಕತೆಯನ್ನು ಮೆರೆದ ಆಟೋ ಚಾಲಕ’ ಎಂಬ ಶೀರ್ಷಿಕೆಯಲ್ಲಿ (ಕೆಲವು ಬಾರಿ ಚಿತ್ರ ಸಹಿತ!) ಒಂದಿಷ್ಟು ವಿವರಗಳ ಸುದ್ದಿಯಿರುತ್ತದೆ. ಪ್ರಾಮಾಣಿಕತೆಯು ಅಪರೂಪವಲ್ಲದಿದ್ದರೆ ಇದು ಸುದ್ದಿ ಹೇಗಾಗುತ್ತದೆ? ಇದನ್ನು ಇತ್ಯಾತ್ಮಕವಾಗಿ ಹೀಗೂ ಹೇಳಬಹುದು: ಇತರರಿಗೆ ಮಾದರಿಯಾಗಲಿ ಎಂಬ ಕಾರಣಕ್ಕೆ ಇದನ್ನು ಪ್ರಕಟಿಸಬೇಕು! ಇನ್ನು ಕೆಲವು ಸಮಯ ಕಳೆದರೆ ಬ್ಯಾಂಕ್‌ನಿಂದ ಪಡೆದ ಸಾಲವನ್ನು ವಾಯಿದೆಯೊಳಗೆ ಮತ್ತು ಕಾನೂನು ಕ್ರಮದ ಹೊರತಾಗಿ ಮರಳಿಸಿದವರ ಹೆಸರು ‘ಪ್ರಾಮಾಣಿಕತೆಯನ್ನು ಮೆರೆದ...’ ಎಂಬ ವಿಶೇಷಣದೊಂದಿಗೆ ಪ್ರಕಟವಾಗಬಹುದು. ಮೋಸಮಾಡಿ ವಿದೇಶಗಳಲ್ಲಿ ನೆಲೆಸಿ ದೇಶಭ್ರಷ್ಟರೆಂದೆನಿಸಿಕೊಂಡ ಶ್ರೀಮಂತರ ನಡುವೆ ಇಂತಹ ಸುದ್ದಿಗಳಿಗೆ ಭಾರತವು ಹೆಸರಾಗುವುದು ಒಳ್ಳೆಯ ಲಕ್ಷಣವೇನಲ್ಲ.
ಭಾರತದ ಉನ್ನತಿಯ ಬಗ್ಗೆ ನಾವು ಉತ್ಪ್ರೇಕ್ಷಿತವಾಗಿ, ಅತಿರಂಜಿತವಾಗಿ ಹೇಳುವುದು ಹೊಸದೇನಲ್ಲ. ಆದರೆ ಈಗೀಗ ಇದು ಅತಿರೇಕದ ವರ್ತನೆಗೆ ಸಾಕ್ಷಿಯಾಗುತ್ತಿದೆ. ನಮ್ಮ ಪ್ರಧಾನಿ ವಿದೇಶಕ್ಕೆ ಹೋದರೆ ಅವರಿಗಿಂತಲೂ ಮೊದಲೇ ಅವರ ಬರವನ್ನು ಸ್ವಾಗತಿಸಲು (ಇಲ್ಲವೇ ಪ್ರಚಾರದ ಬರವನ್ನು ನೀಗಿಸಲು) ಭಕ್ತರ ಒಂದು ತಂಡವೇ ಹೋಗುವುದನ್ನು ಈಗೀಗ ಕಾಣುತ್ತೇವೆ. ಅವರ ನಡುವೆ ಪ್ರಧಾನಿಯವರು ನಲಿನಲಿವ ದೃಶ್ಯಗಳನ್ನು ನಮ್ಮ ಮಾಧ್ಯಮಗಳು ರೆಕ್ಕೆ-ಪುಕ್ಕ ಸೇರಿಸಿ ಪ್ರಕಟಿಸುತ್ತವೆ. ಆದರೆ ಇಂತಹ ಭೇಟಿಗಳು ಆ ದೇಶಗಳಲ್ಲಿ ಸುದ್ದಿಯಾಗುವುದೇ ಇಲ್ಲ. ಈಚೆಗೆ ಕೆನಡಾದಲ್ಲಿ ನಡೆದ ಜಿ-7 ಸಮ್ಮೇಳನದಲ್ಲಿ ಭಾರತ ಈ 7ಕ್ಕೆ ಹೊರತಾದ ದೇಶವಾಗಿ ಹಲವು ಇತರ ದೇಶಗಳೊಂದಿಗೆ ಆಹ್ವಾನಿಸಲ್ಪಟ್ಟಿತು. ಆದರೆ ಅಲ್ಲಿ ಭಾರತೀಯ ಮಾಧ್ಯಮಕ್ಕೆ ಅವಕಾಶವನ್ನು ನಿರಾಕರಿಸಲಾಯಿತೆಂದು ವರದಿಯಾಯಿತು. ಇದು ನಾವೆಲ್ಲ ತಲೆತಗ್ಗಿಸುವ ವಿಚಾರ. ಇದಕ್ಕೆ ಕಾರಣವೆಂದರೆ ನಮ್ಮ ಮಾಧ್ಯಮಗಳು ಸಮ್ಮೇಳನದ ಇತರ ಮುಖ್ಯ ವಿಚಾರಗಳಿಗೆ ಒತ್ತುಕೊಡದೆ ನಮ್ಮ ಪ್ರತಿನಿಧಿ (ಅವರು ಪ್ರಧಾನಿಯೇ ಇರಲಿ, ವಿದೇಶಾಂಗ ಸಚಿವರೇ ಇರಲಿ) ಏನು ಧರಿಸಿದರು, ಹೇಗೆ ನಡೆದರು, ಏನು ತಿಂದರು ಇಂತಹ ಅನಗತ್ಯಗಳನ್ನೇ ವಂದಿಮಾಗಧರಂತೆ, ಭಟ್ಟಂಗಿಗಳಂತೆ ಸುದ್ದಿಮಾಡುತ್ತವೆ. ಮಾಧ್ಯಮಶಿಸ್ತಿನ ಸಿಪಾಯಿಗಳಾಗಬೇಕಾಗಿದ್ದರೂ ಅವು ಎಂದಿನ ಭಾರತೀಯ ಅಶಿಸ್ತನ್ನು, ಅವ್ಯವಸ್ಥೆಯನ್ನು, ಅಬ್ಬರವನ್ನು, ಆಡಂಬರವನ್ನು ತಮ್ಮ ಸುದ್ದಿಗಳ ಮೂಲಕ ಹೊರಗೆಡಹುತ್ತವೆ.
ವಿಶ್ವಾದ್ಯಂತ ಭಾರತವು ಅಶಿಸ್ತಿನ ಪಾಠಶಾಲೆಯಂತಿದೆ. ಆಫ್ರಿಕಾ ಖಂಡದ ಅನೇಕ ಬಡ ದೇಶಗಳ ಜನರೂ, ಪ್ರತಿನಿಧಿಗಳೂ ಹೀಗಿದ್ದಾರೆಂಬುದೇ ನಮಗೆ ತೃಪ್ತಿ ತರುವ ಸಂಗತಿಯಾಗಿದೆ. ನಮ್ಮ ಪ್ರತಿನಿಧಿಗಳು ಎರಡು ಅತಿಗಳನ್ನು ಪ್ರದರ್ಶಿಸುವುದರಲ್ಲಿ ನಿಷ್ಣಾತರು. ಈಚೆಗೆ ಕರ್ನಾಟಕದ ಸಂಸದರೊಬ್ಬರು ಸಮಿತಿಯೊಂದರ ಸದಸ್ಯರಾಗಿ ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿನ ಅಧ್ಯಕ್ಷರ ಭೇಟಿಗಾಗಿ ತಾನು ಭಾರತದ ಪ್ರಧಾನಿಯ ಖಾಸಾ ಸಂದೇಶವೊಂದನ್ನು ತಂದಿದ್ದೇನೆಂದು ಸುಳ್ಳು ಹೇಳಿ ಅವಮಾನಿಸಿಕೊಂಡರೆಂದು ಸ್ವಲ್ಪ ತಡವಾಗಿ ಬಹಿರಂಗವಾಯಿತು. ಆಗಿರುವ ಅವಮಾನ ಅವರಿಗಲ್ಲ, ಭಾರತಕ್ಕೆ.
ಸರದಿಯ ಸಾಲಿನಲ್ಲಿ ನಿಲ್ಲುವುದಕ್ಕೇ ನಮ್ಮ ಜನರು ಹಿಂಜರಿಯುತ್ತಾರೆ. ಹೇಗಾದರೂ ಗುರಿಮುಟ್ಟುವ ಅಕ್ರಮಗಳ ಉದಾಹರಣೆಗಳು ದೊಡ್ಡ ದೊಡ್ಡ ಅವ್ಯವಹಾರಗಳಲ್ಲಿ ಮಾತ್ರವಲ್ಲ, ಸಾಮಾನ್ಯ ಪ್ರಸಂಗಗಳಲ್ಲೂ ಸ್ಪಷ್ಟವಾಗುತ್ತವೆ. ನಾನು ನೋಡಿದ ಒಂದು ಪ್ರಸಂಗದಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರು ಒಂದು ಸರದಿಯ ಸಾಲಿನಲ್ಲಿ ನಡುವೆ ನುಗ್ಗಿಕೊಂಡರು. ಕೆಲವರು ಅವರಿಗೆ ಈ ಪ್ರವೇಶಕ್ಕೆ ಎಡೆಮಾಡಿಕೊಟ್ಟರು. ನನಗವರು ಪರಿಚಿತರು. ನಾನು ಲಘುವಾಗಿ ಅವರೊಡನೆ ‘‘ನೀವು ಸೈನ್ಯದಲ್ಲಿದ್ದವರು, ಹೀಗೆ ಶಿಸ್ತುಭಂಗ ಮಾಡುವುದು ಸರಿಯೇ?’’ ಎಂದು ಕೇಳಿದೆ. ಅದಕ್ಕವರು ‘‘ಇದು ಸೈನ್ಯವಲ್ಲವಲ್ಲ’’ ಎಂದರು. ಅಂದರೆ ಹತ್ತಾರು ವರ್ಷಗಳನ್ನು ಶಿಸ್ತಿನ ಸಿಪಾಯಿಯಾಗಿ ಕಳೆದರೂ ಅವರು ಅದನ್ನು ಕಾಯಾ ವಾಚಾ ಮನಸಾ ಆವಾಹಿಸಿಕೊಳ್ಳಲಿಲ್ಲವೆಂಬುದು ನನಗಂತೂ ಅರ್ಥವಾಯಿತು. ಊಟದಲ್ಲಿ, ಬಸ್ ಹತ್ತುವಲ್ಲಿ, ರಸ್ತೆಗಳಲ್ಲಿ ವಾಹನ ಚಲಾಯಿಸುವಲ್ಲಿ, ಎಲ್ಲೆಡೆ ನಾವು ‘ವ್ಯವಸ್ಥೆ’ಯ ವಿರುದ್ಧ ಹೋರಾಡುತ್ತೇವೆ! ಅಲ್ಲಿಗೆ ಅದು, ಇಲ್ಲ್‌ಗೆ ಇದು. ಅಲ್ಲಿ ವ್ಯವಸ್ಥಿತ; ಇಲ್ಲಿ ಅವ್ಯವಸ್ಥಿತ.
ಭಾರತೀಯ ಮನಸ್ಥಿತಿಗೆ ಒಂದು ಹಾಸ್ಯ ಪ್ರಸಂಗ ಸಾಕ್ಷಿಯಾಗುತ್ತದೆ: (ಇದು ದಂತಕಥೆಯಿರಬಹುದು) ಮುಂಬೈಗೆ ಬಂದ ವಿದೇಶಿ ಶ್ರೀಮಂತನೊಬ್ಬ ಅಪಘಾತಕ್ಕೆ ಸಿಕ್ಕಿ ಆಸ್ಪತ್ರೆಗೆ ಸೇರಿದ. ಆತನಿಗೆ ತುರ್ತಾಗಿ ರಕ್ತ ಬೇಕಿತ್ತು. ಯಾರೋ ಒಬ್ಬ ರಕ್ತದಾನ ಮಾಡಿದ. ಆ ವಿದೇಶಿ ತನ್ನ ಪ್ರಾಣವುಳಿಸಿದ ಆ ದಾನಿಗೆ ಒಂದು ಮರ್ಸಿಡಿಸ್ ಬೆಂಝ್ ಕಾರನ್ನು ಉಡುಗೊರೆಯಾಗಿ ನೀಡಿದ. ತನ್ನ ದೇಶಕ್ಕೆ ಮರಳಿದ. ಮತ್ತೊಮ್ಮೆ ಮುಂಬೈಗೆ ಬಂದ. ಆತನ ಗ್ರಹಚಾರ! ಈ ಬಾರಿಯೂ ಅಪಘಾತಕ್ಕೆ ತುತ್ತಾದ. ಅದೇ ದಾನಿ ಮತ್ತೊಮ್ಮೆ ರಕ್ತದಾನಮಾಡಿದ. ಈ ಬಾರಿ ಆ ದಾನಿಗೆ ಇನ್ನೇನು ಉಡುಗೊರೆ ಸಿಗುತ್ತದೋ ಎಂಬ ಕುತೂಹಲ, ನಿರೀಕ್ಷೆಯಿತ್ತು. ಆದರೆ ಈ ವಿದೇಶಿ ಏನನ್ನೂ ನೀಡದೆ ಮರಳಿದ. ಇದು ಯಾಕೆ ಹೀಗಾಯಿತು ಎಂಬ ಆತನ ಸಂದೇಹಕ್ಕೆ ಆ ಆಸ್ಪತ್ರೆಯ ವೈದ್ಯರೊಬ್ಬರು, ‘ಆ ವಿದೇಶಿಯನಲ್ಲಿ ಈಗ ಭಾರತದ ರಕ್ತವೇ ಹೆಚ್ಚಿದೆ!’ ಎಂದರಂತೆ. ಇದು ಸುಳ್ಳಾದರೂ ಒಂದು ಪ್ರತಿಫಲನದಂತಿರುವುದಂತೂ ಸತ್ಯ.
ನಮ್ಮ ಒಟ್ಟಾರೆ ಗುಣಮಟ್ಟವೇ ಕ್ಷೀಣಿಸುತ್ತಿದೆ. ವಿದೇಶಕ್ಕೆ ಹೋದರೆ ಸಾಕು ಅವರನ್ನು ವಿಚಿತ್ರವಾಗಿ ಗೌರವಪೂರ್ವಕವಾಗಿ ಕಾಣುವ ಸ್ಥಿತಿಯಿತ್ತು. ಹೀಗೆ ಹೋದವರೂ ಅಷ್ಟೇ: ಎಲ್ಲೇ ಸಿಗಲಿ, ತಮ್ಮ ಪ್ರವಾಸದ ವಿಶೇಷವನ್ನೇ ಹೇಳುತ್ತಿರುತ್ತಾರೆ. ಭಾಷಣಕ್ಕೆ ಅವಕಾಶ ಸಿಕ್ಕರಂತೂ ಕೇಳುವುದೇ ಬೇಡ, ‘‘ನಾನು ಅಲ್ಲಿರುವಾಗ...’’ ಎಂದು ಸಾಕಷ್ಟು ಸಲ ಹೇಳುತ್ತಾರೆ. ಸ್ವಲ್ಪ ಬರೆಯುವುದಕ್ಕೆ ಗೊತ್ತಿದ್ದವರಂತೂ ಮರಳಬೇಕಾದರೆ ಒಂದು ಪುಸ್ತಕ ಪ್ರಕಟಿಸಲು ಸಿದ್ಧರಾಗುತ್ತಾರೆ. ಅಲ್ಲಿಯೂ ಭಾರತವನ್ನು ಅಭಿಮಾನದಿಂದ ಕಾಣುವವರಿರಬಹುದು. ಆದರೆ ಅದು ಅವರ ಸದ್ಗುಣವೇ ಹೊರತು ನಮ್ಮ ವೈಶಿಷ್ಟ್ಯವಲ್ಲ. ಇಷ್ಟಾದರೂ ನಮಗೆ ಭಾರತದಲ್ಲಿ ಸಿಕ್ಕ ಯಾವುದೇ ಮನ್ನಣೆಗಿಂತ ವಿದೇಶಿ ಮನ್ನಣೆಯೇ ದೊಡ್ಡದು. ಇದು ಪ್ರಧಾನಿಯಂತಹ ಹಿರಿಯ ಹುದ್ದೆಯಲ್ಲಿರುವವರನ್ನೂ ಕಾಡುವುದು ಈ ದೇಶ ದುರಸ್ತಿಯ ಹಾದಿಯಲ್ಲಿಲ್ಲ ಎಂಬುದನ್ನು ತೋರಿಸುತ್ತದೆ!
ನಮ್ಮ ಪ್ರಧಾನಿಯವರು ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ವಿದೇಶ ಪ್ರವಾಸ ಹೋದರೆಂಬುದು ಸಾಕಷ್ಟು ಸುದ್ದಿಯಾಯಿತು. ಪ್ರತಿಪಕ್ಷಗಳಂತೂ ಅದೊಂದು ಮಹಾಪರಾಧವೆಂದು ಬಣ್ಣಿಸಿದವು. ಆದರೆ ಇದು ಹೊಸದೇನಲ್ಲ. ಹಿಂದಿನ ಪ್ರಧಾನಿಗಳೂ ಹೋಗಿದ್ದರೆಂಬುದು ಅಂಕಿ-ಸಂಖ್ಯೆಗಳಿಂದ, ದಾಖಲೆಗಳಿಂದ ಅರಿವಾಗುತ್ತದೆ. ಆದರೆ ನಮ್ಮ ಮಾಧ್ಯಮಗಳು ಇದನ್ನು ಯಾವುದೋ ಒಂದು ಪಕ್ಷದ ಪರ ಅಥವಾ ವಿರೋಧವಾಗಿ ಅತಿರಂಜಿಸಿ ಚಿತ್ರಿಸುತ್ತವೆ. ಚರ್ಚೆಯೊಂದರಲ್ಲಿ ಪ್ರಧಾನಿ ಇಂತಹ ಸಂದರ್ಭದಲ್ಲಿ ವಿದೇಶ ಪ್ರವಾಸವನ್ನು ಕೈಗೊಂಡದ್ದು ತಪ್ಪೆಂದು ಪ್ರತಿಪಕ್ಷದ ವಕ್ತಾರರೊಬ್ಬರು ಹೇಳಿದಾಗ ಹಿಂದೆ ಯಾರೂ ಹೋಗಲಿಲ್ಲವೇ ಎಂದು ಕೇಳುವುದರ ಬದಲು ಆ ಮಾಧ್ಯಮ ನಿರೂಪಕ ‘‘ಹಾಗಾದರೆ ರಾಹುಲ್ ಗಾಂಧಿ ಹೋಗಲಿಲ್ಲವೇ?’’ ಎಂದು ಪ್ರಶ್ನಿಸುತ್ತಾನೆ. ಆತನಿಗೆ ರಾಹುಲ್ ಗಾಂಧಿ ಪ್ರಧಾನಿಯಲ್ಲವೆಂಬ ಸರಳ ಸತ್ಯ ಗೊತ್ತಿಲ್ಲ ಅನ್ನುವುದಕ್ಕಿಂತ ಗೊತ್ತಿದ್ದೂ ಸ್ವಾನುಕೂಲಕ್ಕಾಗಿ, ತಾನು ನಂಬಿದ ರಾಜಕೀಯ ಪಕ್ಷವನ್ನೋ ವ್ಯಕ್ತಿಯನ್ನೋ ಬೆಂಬಲಿಸುವುದಕ್ಕಾಗಿ ಪ್ರಶ್ನಿಸಿದನೆಂಬುದು ಸ್ಪಷ್ಟ. ಆತನಷ್ಟೇ ಮೂರ್ಖರು ಆತನ ಪ್ರಶ್ನೆಗೆ ಹರ್ಷೋದ್ಗಾರ ಮಾಡುತ್ತಾರೆ! ಆದರೆ ಆಳದಲ್ಲಿ ಪ್ರಜ್ಞಾವಂತರು ಯೋಚಿಸಬಲ್ಲ ಸಮಸ್ಯೆಯೊಂದು ಸೃಷ್ಟಿಯಾಗುತ್ತದೆ: ಮಾಧ್ಯಮದ ಗುಣಮಟ್ಟ, ವ್ಯವಸ್ಥೆ ಎಲ್ಲಿಗೆ ಇಳಿದಿದೆ!
ಸಾಮಾಜಿಕ ಚಿಂತನೆಯು ಬರೆಹ-ಭಾಷಣಗಳಲ್ಲಿದ್ದಾಗ ಸ್ವಲ್ಪ ಆರೋಗ್ಯದಲ್ಲಿತ್ತು. ಆದರೆ ಈ ಸಾಮಾಜಿಕ ಜಾಲತಾಣಗಳು ತೆರೆದುಕೊಂಡು ಮೌಲ್ಯಗಳ ಖಾಂಡವವನದಹನ ನಡೆಸಲು ಆರಂಭವಾದ ಮೇಲೆ ಎಲ್ಲವೂ ವ್ಯತ್ಯಸ್ತತೆಯ ಆಳಕ್ಕಿಳಿದಿವೆ. ಕಾಲ್ಪನಿಕವಾಗಿ ಹೇಳುವ ದೆವ್ವದ ಪಾದಗಳಂತೆ ನಾವೆಲ್ಲವನ್ನೂ ತಿರುಗಾಮುರುಗಾ ಬಳಸುತ್ತೇವೆ. ಮುಂದುವರಿಯುವ ಸಂಕೇತದೊಂದಿಗೆ ಹಿಂದಡಿಯಿಡುತ್ತೇವೆ. ಇದು ಸರಿಯಾಗಬೇಕೆಂದು ಅಪೇಕ್ಷಿಸುವವರು ಬಂಗಾರದ ನಳಿಗೆಯಲ್ಲಿ ನಮ್ಮ ಡೊಂಕು ಮೌಲ್ಯಗಳನ್ನು ಇಟ್ಟರೂ ಪರಿಹಾರವಾಗದು. ಅಂಥದ್ದರಲ್ಲಿ ನಳಿಗೆಯೇ ಡೊಂಕಾದರೆ? ಸದ್ಯದ ಪರಿಸ್ಥಿತಿ ಹಾಗಿದೆ!