ಭಯದಿಂದ ಬುದ್ಧಿ

ಸಾಂದರ್ಭಿಕ ಚಿತ್ರ
‘‘ಭಯ ಇಲ್ಲಾಂದ್ರೆ ಮಕ್ಕಳು ಬುದ್ಧಿ ಕಲಿಯುವುದು ಹೇಗೆ?’’ ಅಂತ ಭಯ ಹಿಡಿಸುವುದರ ಮೂಲಕ ಅನೇಕ ಜನ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ನಾನಾ ರೀತಿಗಳಲ್ಲಿ ಹೆದರಿಸುತ್ತಾರೆ, ಬೆದರಿಸುತ್ತಾರೆ. ಮಕ್ಕಳಿಗೆ ಯಾವುದೇ ರೀತಿಯಲ್ಲಿ ಭಯದಿಂದ ಅವರಿಗೆ ಬುದ್ಧಿ ಕಲಿಸಲು ಅಥವಾ ತಮ್ಮ ಅಧೀನಕ್ಕೆ ತಂದುಕೊಳ್ಳಲು ಯತ್ನಿಸಿದರೆ ಖಂಡಿತವಾಗಿ ಅದು ಅಲ್ಪ ಕಾಲದ ವಿಧೇಯತೆಯಷ್ಟೇ. ಆ ಹೊತ್ತಿಗೆ ಅವರು ಅಧೀನರಾಗುತ್ತಾರೆ, ಹೇಳಿದ ಮಾತು ಕೇಳುತ್ತಾರೆ. ಆದರೆ ಮಕ್ಕಳ ದೀರ್ಘಕಾಲದ ಬೆಳವಣಿಗೆಗೆ, ಮಾನಸಿಕ ಆರೋಗ್ಯಕ್ಕೆ ಸಮಸ್ಯೆಯಾಗುವುದು ಮಾತ್ರವಲ್ಲದೆ ಈ ವಯಸ್ಕರ ಪ್ರಪಂಚವನ್ನು ಅಪನಂಬಿಕೆಯಿಂದ ನೋಡುವಂತಾಗುತ್ತದೆ.
ಸಾಮಾನ್ಯವಾಗಿ ಪೋಷಕರು ತಮ್ಮ ಮೇಲೆ ತಮ್ಮ ಪೋಷಕರಿಂದ ಆಗಿರುವಂತಹ ಪ್ರಭಾವಗಳನ್ನು ತಮ್ಮ ಮಕ್ಕಳನ್ನು ನೋಡಿಕೊಳ್ಳುವುದರಲ್ಲೂ ಪ್ರತಿಫಲಿಸುತ್ತಿರುತ್ತಾರೆ. ಅವರಿಗೆ ಅಗತ್ಯದ ಮತ್ತು ಲೌಕಿಕ ವಸ್ತುಗಳನ್ನು ಕೊಡಿಸುವುದರಲ್ಲಿ ವ್ಯತ್ಯಾಸಗಳಿದ್ದರೂ ಮಕ್ಕಳನ್ನು ನೋಡಿಕೊಳ್ಳುವ, ಅವರೊಂದಿಗೆ ವರ್ತಿಸುವ ಮತ್ತು ನಿರೀಕ್ಷಿಸುವ ವಿಷಯದಲ್ಲಿ ತಮಗೇ ಅರಿವಿಲ್ಲದಂತೆ ಹಳೆಯ ಮಾದರಿಗಳನ್ನೇ ಪ್ರಯೋಗಿಸುತ್ತಿರುತ್ತಾರೆ. ಅವರ ಪೋಷಕರು ಅವರನ್ನು ಹೆದರಿಸಿದಂತೆ ತಮ್ಮ ಮಕ್ಕಳಿಗೂ ಹೆದರಿಸುತ್ತಿರುತ್ತಾರೆ. ಸಾಲದಕ್ಕೆ, ಅವರು ಅಂದು ಬೈದು ಹೊಡೆದುದರಿಂದ ನಾವು ಇವತ್ತು ಇಷ್ಟರಮಟ್ಟಿಗೆ ಚೆನ್ನಾಗಿರುವುದು ಎಂದು ಭಾವಿಸಿರುತ್ತಾರೆ. ಹಾಗಾಗಿಯೇ ತಮ್ಮ ಮಕ್ಕಳನ್ನೂ ಭಯದಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ ಎಂದು ತರ್ಕಿಸುತ್ತಾರೆ.
ಪೀಳಿಗೆಯಿಂದ ಪೀಳಿಗೆಗೆ ಬದಲಾಗುವ ಸಮಯದಲ್ಲಿ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣಗಳೂ ಬದಲಾಗುತ್ತಿರುತ್ತವೆ. ಮಾಹಿತಿ ಮತ್ತು ತಂತ್ರಜ್ಞಾನದ ಪ್ರಭಾವಗಳು ವ್ಯಕ್ತಿಯ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿರುತ್ತದೆ. ಹಾಗಾಗಿ ವಿವಿಧ ಕಾಲಘಟ್ಟದ ಬೇರೆ ಬೇರೆ ಪೀಳಿಗೆಗಳನ್ನು ನಡೆಸಿಕೊಳ್ಳುವ ರೀತಿಯೂ ಬದಲಾಗುತ್ತಿರಬೇಕು. ನಮ್ಮ ಕಾಲದಲ್ಲಿ ಹಾಗಿರಲಿಲ್ಲ, ಈಗ ಕಾಲ ಕೆಟ್ಟು ಹೋಯಿತು ಎಂದು ಗೊಣಗುವ ಮತ್ತು ಗೋಳಿಡುವ ಹಿರಿಯರು ಅರಿಯಬೇಕಾದ್ದೇನೆಂದರೆ, ಕಾಲವು ಬದಲಾಗಿದೆ, ಮುಂದುವರಿದಿದೆ ಮತ್ತು ಆವಿಷ್ಕಾರಗಳಿಗೆ ತೆರೆದುಕೊಂಡಿದೆ ಎಂಬುದು.
ಹಾಗಾಗಿಯೇ ಮಕ್ಕಳಲ್ಲಿಯೂ ಕೂಡಾ ವರ್ತಿಸುವ, ಪ್ರತಿಕ್ರಿಯಿಸುವ ಮತ್ತು ಸ್ಪಂದಿಸುವ ವಿಷಯದಲ್ಲಿ ಬದಲಾವಣೆಯಾಗುತ್ತಿರುತ್ತವೆ. ಅವನ್ನು ಹಿರಿಯರು ತಾವು ಮಕ್ಕಳಾಗಿದ್ದಾಗಿನ ಸಮಯದಲ್ಲಿ ತಮ್ಮ ವರ್ತನೆಯ ಮಾನದಂಡದಿಂದ ಇವತ್ತಿನ ಮಕ್ಕಳನ್ನು ಅಳೆಯುವ ಅಗತ್ಯವಿಲ್ಲ. ಹಾಗಾಗಿಯೇ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಪ್ರಾಥಮಿಕ ಶುಚಿತ್ವದ ಜಾಗೃತಿಯ ರೀತಿಯಲ್ಲಿ ತಿಳುವಳಿಕೆ ನೀಡುವಂತೆ ಮಾನಸಿಕ ಆರೋಗ್ಯದ ಬಗ್ಗೆ ಮತ್ತು ಮಕ್ಕಳ ಮನಸ್ಸಿನ ರಚನೆಯ ಬಗ್ಗೆಯೂ ಕೂಡಾ ಸಾಮಾನ್ಯ ಅರಿವು ಇರಬೇಕಿದೆ. ಮಕ್ಕಳ ಮನೋವಿಜ್ಞಾನ ಮತ್ತು ವಿಕಾಸಮುಖಿ ಮನೋವಿಜ್ಞಾನ (ಡೆವಲಪ್ಮೆಂಟಲ್ ಸೈಕಾಲಜಿ) ಅರಿವು ಇರುವವರು ತಮ್ಮ ನಡೆ ನುಡಿಗಳನ್ನು ಚೊಕ್ಕಗೊಳಿಸಿಕೊಳ್ಳಲು ಸಾಧ್ಯವಿದೆ.
ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಜಾಗೃತಿ ಮತ್ತು ಅರಿವನ್ನು ಉಂಟು ಮಾಡುವ ವಿಷಯದಲ್ಲಿ ಮಕ್ಕಳ ಮನೋವಿಜ್ಞಾನ ಮತ್ತು ವಿಕಾಸಮುಖಿ ಮನೋವಿಜ್ಞಾನ ದೃಷ್ಟಿಕೋನದಿಂದಲೇ ತಮ್ಮ ಹೇಳುವ ಮತ್ತು ನಡೆದುಕೊಳ್ಳುವ ಬಗೆಯನ್ನು ಮತ್ತು ನಿರೂಪಣೆಯನ್ನು ರೂಪಿಸಬೇಕು. ಆಗ ತಮ್ಮ ನಡೆ ನುಡಿ ಮತ್ತು ಪ್ರತಿಕ್ರಿಯೆಗಳು ಮಕ್ಕಳು ಹೆಚ್ಚು ಸಂವೇದನೆಯನ್ನು ಹೊಂದಲು, ಮನಶಕ್ತಿಯನ್ನು ಬಲಗೊಳಿಸಲು ಮತ್ತು ಪರಿಣಾಮಕಾರಿಯಾಗುವಂತಹ ರೀತಿಯಲ್ಲಿ ಅರಿವನ್ನು ಉಂಟು ಮಾಡಲು ಸಾಧ್ಯವಾಗುವುದು.
ಭಯದ ಮೂಲಕ ಬುದ್ಧಿ ಕಲಿಸುವ ಆಲೋಚನೆಯನ್ನು ಪೋಷಕರಾಗಲಿ, ಶಿಕ್ಷಕರಾಗಲಿ ಏಕೆ ಕೈ ಬಿಡಬೇಕೆಂದರೆ, ಮಕ್ಕಳು ಪ್ರತಿಯೊಂದನ್ನೂ ಅಕ್ಷರಶಃ ತೆಗೆದುಕೊಳ್ಳುತ್ತಾರೆ. ಅವರು ಕಾಣುವ ದೃಶ್ಯ ಮತ್ತು ಕೇಳುವ ಮಾತುಗಳ ಆಚೆಗೆ ಆಲೋಚನೆ ಮಾಡುವ ಸಾಮರ್ಥ್ಯವಿನ್ನೂ ಬೆಳೆದಿರುವುದಿಲ್ಲ. ಹಾಗಾಗಿ ‘‘ನೀನು ಹಟ ಮಾಡಿದರೆ ಇಲ್ಲೇ ಬಿಟ್ಟು ಹೊರಟು ಹೋಗ್ತೀನಿ’’ ಅಥವಾ ‘‘ಪೊಲೀಸಿಗೆ ಕೊಟ್ಟುಬಿಡ್ತೀನಿ’’ ಅಂತ ಹೆದರಿಸುವುದೋ ಅಥವಾ ‘‘ಗುಮ್ಮ ಬಂದು ನಿನ್ನ ಎತ್ತಿಕೊಂಡು ಹೋಗುವುದು’’ ಎಂದು ಹೆದರಿಸುವುದೋ ಮಾಡಿದರೆ ಅದು ಅವರ ಸೂಕ್ಷ್ಮವಾದ ಒಳಮನಸ್ಸಿನಲ್ಲಿ ಆತಂಕ ಮತ್ತು ಭಯವನ್ನು ಉಂಟು ಮಾಡುತ್ತದೆಯೇ ಹೊರತು, ಇದೊಂದು ರೂಪಕ, ಸಾಂಕೇತಿಕವಾಗಿ ಹೇಳ್ತಿದ್ದಾರೆ ಅಂತ ತಿಳಿದುಕೊಳ್ಳುವುದಿಲ್ಲ.
ಭಯ ಅನ್ನುವುದು ವೈಚಾರಿಕವಾಗಿ ಆಲೋಚಿಸುವುದಕ್ಕೆ ಬಿಡುವುದಿಲ್ಲ. ಭಯ, ಆತಂಕ, ತಳಮಳವನ್ನು ಉಂಟು ಮಾಡುವುದೇ ಹೊರತು ತಾರ್ಕಿಕವಾಗಿ, ವೈಜ್ಞಾನಿಕವಾಗಿ ಆಲೋಚಿಸಲು ಬಿಡುವುದಿಲ್ಲ. ಮೌಢ್ಯಾಚರಣೆಗಳೂ ಕೂಡಾ ಇದೇ ವಿಭಾಗಕ್ಕೆ ಸೇರುತ್ತವೆ. ಯಾವುದೇ ರೀತಿಯಲ್ಲಿ ಕೃತಕವಾಗಿ ಹುಟ್ಟಿಸುವ ಭಯವು ನಮ್ಮಲ್ಲಿ ಸ್ವಾಭಾವಿಕವಾಗಿರುವ ಮತ್ತು ನಮ್ಮ ಸಾಮರ್ಥ್ಯವೂ ಆಗಿರುವ ಕುತೂಹಲವನ್ನು ನಾಶ ಮಾಡುತ್ತದೆ, ಅನ್ವೇಷಣಾ ಗುಣಕ್ಕೆ ತೊಡಕಾಗುತ್ತದೆ.
ಯಾವುದೇ ಜೀವಿಗೆ ಭಯ ಉಂಟಾದ ಕೂಡಲೇ ಅದರಲ್ಲಿ ಹೋರಾಡು ಅಥವಾ ಓಡು ಪ್ರವೃತ್ತಿ ಜಾಗೃತವಾಗುತ್ತದೆ. ಹಿರಿಯರ ಅಧೀನದಲ್ಲಿರುವ ಮಕ್ಕಳಿಗೆ ಅದನ್ನು ಪ್ರಕಟಿಸಲೂ ಆಗದಷ್ಟು ಅವಲಂಬಿತರಾಗಿರುತ್ತಾರೆ. ಆದರೆ ಮಕ್ಕಳಿಗೆ ಭಯಗೊಳ್ಳುವ ಮನಸ್ಥಿತಿಯನ್ನು ನಿರ್ಮಿಸಿ ನಮ್ಮ ವಿಷಯಗಳನ್ನು ದಾಟಿಸಲು ಯತ್ನಿಸಿದರೆ ಮುಂದೆ ಅವರು ಆಲೋಚನೆ ಮಾಡುವ ಸಾಮರ್ಥ್ಯ ಬಂದಂತೆ; ಅವರು ಪ್ರತಿಭಟಿಸುತ್ತಾರೆ ಮತ್ತು ದೊಡ್ಡವರಲ್ಲಿ ಅವಿಶ್ವಾಸ ಉಂಟಾಗುತ್ತದೆ. ಈ ರೀತಿಯಿಂದಾಗಿಯೇ ಬಹಳಷ್ಟು ಹದಿಹರೆಯದವರು ತಮ್ಮ ಹಿರಿಯರ ಮಾತುಗಳನ್ನು ಕೇಳದೇ ಇರುವುದು. ಬಾಲ್ಯದಲ್ಲಿ ಅವರ ಪೋಷಕರು ಅಥವಾ ಶಿಕ್ಷಕರು ಹೇಳಿದ್ದು ಸುಳ್ಳು ಎಂದೋ ಅಥವಾ ಉತ್ಪ್ರೇಕ್ಷೆ ಎಂದೋ ಅಥವಾ ತಮ್ಮನ್ನು ಅಧೀನದಲ್ಲಿ ಇಡೋಕೆ ಅವರು ಮಾಡಿದ ತಂತ್ರ ಎಂದೋ ಆಲೋಚಿಸುವ ಸಾಮರ್ಥ್ಯ ಬಂದ ಮೇಲೆ ಅವರು ದೊಡ್ಡವರ ಮಾತನ್ನು ಕೇಳುವುದಿಲ್ಲ. ಬರೀ ಕೇಳದೇ ಇದ್ದರೆ ಹೋಗಲಿ, ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.
ಹಾಗಾಗಿ ಸಣ್ಣ ಮಕ್ಕಳು ನಮ್ಮನ್ನು ಪ್ರಶ್ನಿಸುವುದಿಲ್ಲ, ಅವರಿಗೆ ನಾವು ಏನು ಹೇಳಿದರೂ ಕೇಳುತ್ತಾರೆ, ಏನು ತೋರಿಸಿದರೂ ನೋಡುತ್ತಾರೆ ಅನ್ನುವ ದೃಷ್ಟಿಯಲ್ಲಿ ನಮ್ಮ ಸರಕುಗಳನ್ನೆಲ್ಲಾ ಅವರ ಮೇಲೆ ಹೇರುತ್ತಾ ಹೋದರೆ, ಅವರು ಆಲೋಚನೆ ಮಾಡುವ ಮಟ್ಟಕ್ಕೆ ಬಂದಾಗ, ದೈಹಿಕವಾಗಿ ಸದೃಢರಾದಾಗ ನಮ್ಮ ಮೇಲೆ ಇನ್ನೂ ದೊಡ್ಡ ಭಾರ ಹೊರಿಸುತ್ತಾರೆ. ನಮಗೆ ಆಗ ಅವರನ್ನು ನಿಭಾಯಿಸುವುದಕ್ಕೆ ಆಗಲ್ಲ.
ಮಕ್ಕಳ ಮನಶಾಸ್ತ್ರೀಯ ದೃಷ್ಟಿಯಿಂದ ಬಹಳ ಪರಿಣಾಮಕಾರಿಯಾಗಿರುವುದು ಎಂದರೆ ವರ್ತನಾ ಮಾದರಿ ಮಕ್ಕಳು ಹೇಗಿರಬೇಕು ಎಂಬುದನ್ನು ಹಿರಿಯರು ತಮ್ಮ ವರ್ತನೆಗಳ ಮೂಲಕ ಮಾದರಿಯಾಗಿರಬೇಕು. ಮಕ್ಕಳು ನಾವು ಹೇಳುವುದನ್ನು ಮಾಡುವುದಿಲ್ಲ. ನಾವು ಮಾಡುವುದನ್ನು ಅನುಕರಿಸುವುದು. ಸರಿಯಾದ ಮಾದರಿಯನ್ನು ನಾವು ಅವರ ಎದುರು ಪ್ರದರ್ಶಿಸಬೇಕು. ಮಕ್ಕಳು ಗಮನಿಸುವಿಕೆಯ ಮೂಲಕ ಗ್ರಹಿಸುತ್ತಾರೆ.