ಒಂಟಿತನ ಏಕಾಂಗಿತನವಾದಾಗ

‘‘ನಾನು ಒಬ್ಬೊಂಟಿಯಾದೆ, ನನ್ನ ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ, ನನ್ನ ಭಾವನೆಗಳಿಗೆ ಯಾರೂ ಬೆಲೆ ಕೊಡ್ತಿಲ್ಲ’’ ಎಂದು ದುಃಖಪಡುವವರಿಗೆ, ‘‘ನನಗೆ ಒಂಟಿಯಾಗಿ ಇದ್ದು ಸಾಕಾಗಿದೆ, ಯಾರದ್ದಾದರೂ ಸಾಂಗತ್ಯ ಬೇಕೇ ಬೇಕಿದೆ’’ ಎಂದು ಪರಿತಪಿಸುವವರಿಗೆ ಭಾವಕೌಶಲ್ಯದ (emotional wisdom) ಕೊರತೆ ಇದೆ ಅಂತಾಗುತ್ತದೆ.
ಈ ಭಾವಕೌಶಲ್ಯದ ಕೊರತೆಯ ಕಾರಣದಿಂದಲೇ ಬಹಳಷ್ಟು ಜನರು ಒಂಟಿತನವನ್ನು ಅನುಭವಿಸುವುದು. ಇತರರೊಂದಿಗೆ ಸಂಬಂಧಗಳು, ಸಂಪರ್ಕಗಳು ಕಳೆದುಹೋಗಿವೆ ಎಂಬ ನೋವು ಅವರಿಗೆ. ಎಷ್ಟೋ ಸಲ ತಮ್ಮ ಸುತ್ತಲೂ ಜನರಿದ್ದರೂ ತನ್ನನ್ನು ಪರಿಗಣಿಸುತ್ತಿಲ್ಲ, ತನ್ನ ಭಾವನೆಗಳಿಗೆ ಬೆಲೆಕೊಡುತ್ತಿಲ್ಲ, ತನ್ನನ್ನು ಅವರಿಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆಯೇ ಹೊರತು, ತನಗೆ ಸ್ಪಂದಿಸಲ್ಲ ಎಂದೆಲ್ಲಾ ಅನ್ನಿಸುವುದರಿಂದ ಜನಗಳ ಜೊತೆಯಲ್ಲಿ ಇದ್ದರೂ, ಕಾರ್ಯಕಾರಣವಾಗಿ ಪರಸ್ಪರ ಸಂಪರ್ಕದಲ್ಲಿ ಇದ್ದರೂ ಒಂಟಿತನ ಕಾಡುತ್ತಲೇ ಇರುತ್ತದೆ.
ಈ ಒಂಟಿತನದ ಭಾವವು ಅಥವಾ ಅನುಭವವು ಮೆದುಳಿನ ಭಯ ಮತ್ತು ಆತಂಕದ ಕೇಂದ್ರವಾದ ಅಮಿಗ್ಡಲವನ್ನು ಪ್ರಚೋದಿಸುತ್ತದೆ. ಅದರಿಂದ ಕಾರ್ಟಿಸಲ್ ಎಂಬ ಒತ್ತಡವನ್ನು ಪ್ರಚೋದಿಸುವ ಹಾರ್ಮೋನನ್ನು ಉಂಟು ಮಾಡಿ, ಡೊಪಾಮೈನ್ ಮತ್ತು ಸೆರೊಟೊನಿನ್ ಎಂಬ ಸಕಾರಾತ್ಮಕವಾದ ರಾಸಾಯನಿಕ ದ್ರವ್ಯಗಳನ್ನು ಕಡಿಮೆ ಮಾಡುತ್ತದೆ. ಇದೇ ಅಸಹನೀಯದ ಒಂಟಿತನದ ಭಾವ ಬಹಳ ಕಾಲಮುಂದುವರಿದಂತೆ ಅದು ಆತಂಕ, ಖಿನ್ನತೆಗಳಿಗೆ ದಾರಿಯಾಗಬಹುದಲ್ಲದೆ, ಅರಿವಾಳಿಕೆಯ ಸಾಮರ್ಥ್ಯ ಕುಂಠಿತವಾಗಿ ತಿಳುವಳಿಕೆಯ ಕೊರತೆ ಉಂಟಾಗತೊಡಗುತ್ತದೆ.
ಏಕಾಂಗಿತನ, ಅದು ತಾವು ಒಬ್ಬರೇ ಇರುವುದಕ್ಕೆ ಮಾಡಿಕೊಂಡಿರುವ ಆಯ್ಕೆ. ಇದು ಮೆದುಳಿನಲ್ಲಿ ಪೂರ್ವಯೋಜಿತ ವ್ಯವಸ್ಥೆಯ ಬಗೆಯನ್ನು (default mode network / DMN) ಜಾಗೃತಗೊಳಿಸಿಕೊಳ್ಳುತ್ತದೆ. ಈ ವ್ಯವಸ್ಥೆಯ ಜಾಲಬಂಧವು ತನ್ನತನವನ್ನು ಅರಿತುಕೊಳ್ಳುವುದಕ್ಕೆ ಅಥವಾ ಆತ್ಮಾವಲೋಕನಕ್ಕೆ ತನ್ನ ವ್ಯಕ್ತಿತ್ವ, ವರ್ತನೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳ ವಿಮರ್ಶೆ ಅಥವಾ ಆತ್ಮವಿಮರ್ಶೆಗೆ ಮತ್ತು ಸೃಜನಶೀಲತೆಗೆ ದಾರಿಯಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಒಂಟಿತನವನ್ನು ಅನುಭವಿಸುವವರು ತಾವು ಒಬ್ಬರೇ ಇದ್ದಾಗಲೂ ಇತರರ ಬಗ್ಗೆ ನೆನೆಸಿಕೊಳ್ಳುತ್ತಿರುತ್ತಾರೆ. ‘‘ನಾನೇನು ಮಾಡಿದೆ ಅವರಿಗೆ? ಅವರೇಕೆ ಹಾಗೆ ಮಾಡಿದರು?’’ ಈ ರೀತಿಯಾಗಿ ತಾನೊಂದು ಬಲಿಪಶುವೆಂದು, ಅವರನ್ನು ದ್ರೋಹಿಗಳೆಂದೋ, ಕ್ರೂರಿಗಳೆಂದೋ ನಕಾರಾತ್ಮಕವಾಗಿ ಯೋಚಿಸುತ್ತಿರುತ್ತಾರೆ. ನಿದ್ರೆ ಬಾರದೆ ತೊಳಲಾಡುತ್ತಾರೆ. ಸರಿಯಾಗಿ ಊಟ ಮತ್ತು ನಿದ್ರೆಗಳಿರದೆ, ನಕಾರಾತ್ಮಕ ಆಲೋಚನೆಗಳಿಂದಾಗಿ ಮನೋದೈಹಿಕ ಪ್ರಭಾವಗಳು ಉಂಟಾಗುತ್ತವೆ. ಅಂದರೆ ಮನಸ್ಸಿನ ಆಲೋಚನೆಗಳು ದೇಹದ ಮೇಲೆ ಪರಿಣಾಮ ಬೀರಿ ರೋಗ ನಿರೋಧಕ ಶಕ್ತಿಯು ಉಂಟಾಗುತ್ತದೆ. ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾಗಬಹುದು. ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡವು ಕೂಡಾ ಹೆಚ್ಚಬಹುದು.
ಏಕಾಂತತೆಯನ್ನು ಆನಂದಿಸುವವರು ಭಾವಕೌಶಲ್ಯದಲ್ಲಿ ಮುಂದಿರುತ್ತಾರೆ. ತಮ್ಮತನದ ಬಗ್ಗೆ ಜಾಗೃತರಾಗಿರುತ್ತಾರೆ. ಸ್ಥಿತಿಸ್ಥಾಪಕತ್ವವನ್ನು ಅಥವಾ ನಮ್ಯತೆಯನ್ನು ಹೊಂದಿರುತ್ತಾರೆ. ಅವರ ನರಮಂಡಲದ ಚಟುವಟಿಕೆಗಳು ಸಮತೋಲನವನ್ನು ಪಡೆದುಕೊಳ್ಳುತ್ತದೆ. ಅವರ ಆಕ್ಸಿಟೋಸಿನ್ ಅಂದರೆ ಬೆಸುಗೆಯ ಹಾರ್ಮೋನ್ ಉತ್ತಮಗೊಳ್ಳುತ್ತದೆ. ಏಕೆಂದರೆ ತಾನು ತನ್ನೊಡನೆಯೇ ಸಂಬಂಧ, ಸಂಪರ್ಕ ಮತ್ತು ಸಂವಾದವನ್ನು ಮಾಡುವಾಗ ವಿರೋಧಗಳಾಗಲಿ, ಸಂಘರ್ಷಗಳಾಗಲಿ, ಮನಸ್ತಾಪಗಳಾಗಲಿ ಇರದೆ ನಕಾರಾತ್ಮಕವಾದ ಪ್ರಭಾವಗಳು ಇರುವುದಿಲ್ಲ. ತನ್ನ ಆಸಕ್ತಿಯನ್ನು ಕಂಡುಕೊಂಡು, ತನ್ನ ಸಾಮರ್ಥ್ಯವನ್ನು ಉತ್ತಮ ಪಡಿಸಿಕೊಳ್ಳುತ್ತಾ, ತನ್ನ ಇತಿಮಿತಿಗಳನ್ನು ಅರಿತುಕೊಂಡು ಮೀರುತ್ತಾ ಬರವಣಿಗೆ, ಸಂಗೀತ, ತೋಟಗಾರಿಕೆ ಅಥವಾ ಇನ್ನಾವುದೇ ಕ್ರಿಯಾಶೀಲ, ಸೃಜನಶೀಲ ಮತ್ತು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ತಮ್ಮನ್ನು ತಾವು ಪ್ರಶಂಸಿಸಿಕೊಂಡಾಗ ಡೊಪಮಿನರ್ಜಿಕ್ ಸಿಸ್ಟಂ ಅಂದರೆ ಆನಂದದ ಪರಿಗಣನೆಯಿಂದ ಉಂಟಾಗುವ ಆನಂದ ನಮ್ಮದೇ ಇರುವಿಕೆಯನ್ನು ಮತ್ತು ಚಟುವಟಿಕೆಗಳನ್ನು ಆಂತರಿಕವಾಗಿ ಪ್ರೋತ್ಸಾಹಿಸುತ್ತದೆ.
ಅಂತರ್ಮುಖಿ ಸದಾ ಸುಖಿ ಎನ್ನುವುದು ಇದಕ್ಕೆಯೇ. ಹೊರಗಿನ ವಿಷಯ ವಸ್ತುಗಳಲ್ಲಿ ಏರುಪೇರಾಗಬಹುದು. ಲೌಕಿಕ ಜೀವನದಲ್ಲಿ ಮತ್ತು ಮಾನುಷ ಸಂಬಂಧಗಳಲ್ಲಿ ವ್ಯತ್ಯಾಸಗಳಾಗಬಹುದು. ಆದರೆ ತನ್ನೊಳಗೆ ತಾನು ಆನಂದವಾಗಿರುವುದನ್ನು ಕಲಿತವರು ಹೊರಗಿನ ವಿಷಯ ವಸ್ತುಗಳ ಮೇಲೆ, ವ್ಯಕ್ತಿಗಳ ಮೇಲೆ ಅವಲಂಬಿತವಾಗದೇ ಇರುವುದಕ್ಕೆ ಸಾಧ್ಯ. ಹಾಗೂ ಹೊರಗಿನಿಂದ ಉಂಟಾಗುವ ನಿರಾಸೆ, ಜಿಗುಪ್ಸೆ ಮತ್ತು ಅತೃಪ್ತಿಗಳನ್ನು ಸಹಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ವ್ಯಕ್ತಿಗಳಿಂದಾಗಿ ನಿರಾಸೆ ಮತ್ತು ಅತೃಪ್ತಿಗಳಾದಲ್ಲಿ ಅವರ ಅಸಮರ್ಥತೆಯನ್ನು ಮನ್ನಿಸಿ ಕ್ಷಮಿಸಲೂ ಸಾಧ್ಯವಾಗುತ್ತದೆ. ಅವರೇಕೆ ಹಾಗೆ ಮಾಡಿದರು? ನಾನು ಇನ್ನೇನು ಮಾಡಬೇಕಿತ್ತು? ಎಂದೆಲ್ಲಾ ನೊಂದುಕೊಂಡಿರುವುದಿಲ್ಲ.
ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮನ್ನು ನಾವು ಸೆಕೆಂಡ್ ಹ್ಯಾಂಡ್ ವಸ್ತುವಂತೆ ಕಾಣುವ, ಗೌರವ ಮತ್ತು ಕಿಮ್ಮತ್ತನ್ನು ಕಡಿಮೆ ಮಾಡಿಕೊಳ್ಳುವ ಪ್ರಮೇಯವು ಏಕಾಂತತೆಯಲ್ಲಿ ಇರುವುದಿಲ್ಲ.
ಅಧ್ಯಾತ್ಮ ಸಾಧಕರು ತಾತ್ವಿಕವಾಗಿ ಕಂಡುಕೊಂಡಿದ್ದೇ ಇದನ್ನು. ಏಕಾಂಗಿತನದಲ್ಲಿ ಇರುವುದೆಂದರೆ ಇತರರ ಗೈರುಹಾಜರನ್ನು ಅನುಭವಿಸುವುದಲ್ಲ. ತಮ್ಮದೇ ಇರುವನ್ನು, ತಮ್ಮತನವನ್ನು ಸಂಪೂರ್ಣವಾಗಿ ಅನುಭವಿಸುವುದು. ಅವೇ ಅನುಭಾವಿಗಳಾಗುವ ಪ್ರಾರಂಭಿಕ ಲಕ್ಷಣಗಳು.
ಯಾರಿಗೇನೂ ನಿರೂಪಿಸುವ, ವಿವರಿಸುವ ಅಗತ್ಯವಿರುವುದಿಲ್ಲ. ತನ್ನತನದಲ್ಲಿ ತಾನು ಚಟುವಟಿಕೆಯಿಂದ ಕೂಡಿರುವುದು. ಏಕಾಂತದಲ್ಲಿ ತನ್ನತನದಲ್ಲಿ ತೊಡಗಿರುವಾಗ ಸರಿ ತಪ್ಪುಗಳಿಗಿಂತ ತಾನು ತನಗೆ ಪ್ರಾಮಾಣಿಕವಾಗಿರುವಂತಹ ಮೌಲ್ಯವೇ ಅತ್ಯಂತ ಮುಖ್ಯವಾಗಿರುತ್ತದೆ.
ಒಟ್ಟಾರೆ ಒಂಟಿತನವು ಅನಿರೀಕ್ಷಿತ ಮತ್ತು ಅನಪೇಕ್ಷಿತ. ಅದರೊಟ್ಟಿಗೆ ಪರಾವಲಂಬಿ. ಆದರೆ ಏಕಾಂಗಿತನವು ನಮ್ಮ ಚತುರ ಆಯ್ಕೆ ಹಾಗೂ ಸ್ವಾವಲಂಬಿ.
ನಮ್ಮನ್ನು ಒಂಟಿತನವು ಬಾಧಿಸುತ್ತಿದ್ದರೆ ಆಲೋಚನೆ, ಭಾವನೆಗಳನ್ನು ಸರಿಯಾಗಿ ನಿರ್ದೇಶಿಸಿಕೊಳ್ಳುತ್ತಾ, ಆತ್ಮಾವಲೋಕನ ಮಾಡಿಕೊಳ್ಳುತ್ತಾ, ತಮ್ಮ ಆಸಕ್ತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಏಕಾಂತಕ್ಕೆ ಹೊರಳಿ ತನ್ನತನವನ್ನು ಸಂಭ್ರಮಿಸಿಕೊಳ್ಳಲು ಎಲ್ಲಾ ಸಾಧ್ಯತೆಗಳೂ ನಮ್ಮಲ್ಲಿ ಇರುತ್ತದೆ.