ಪೆಡಸುತನದ ಪ್ರಮಾದಗಳು

ಯಾರು ಅಹಂಕಾರಿಯಾಗಿರುವರೋ ಅಥವಾ ಸೂಪರ್ ನಾರ್ಸಿಸಿಸ್ಟ್ ಆಗಿರುವರೋ ಅವರು ತಮ್ಮ ಸ್ವಭಾವಕ್ಕೆ ತಕ್ಕಂತೆ ಭಾವನೆಗಳ ವಿಷಯದಲ್ಲಿ ಮತ್ತು ಮನಸ್ಥಿತಿಯ ಸ್ವರೂಪದಲ್ಲಿ ಪೆಡಸುತನ ಅಥವಾ ರಿಜಿಡಿಟಿ ಹೊಂದಿರುತ್ತಾರೆ. ಖಂಡಿತವಾಗಿಯೂ ಈ ಪೆಡಸುತನ ವ್ಯಕ್ತಿಯ ಆನಂದಕ್ಕೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರುವುದಿಲ್ಲ. ಪೆಡಸಿನ ಮನಸ್ಸು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಇತರರ ದೃಷ್ಟಿಕೋನದಲ್ಲಿ ವಿಷಯಗಳನ್ನು ಗಮನಿಸುವುದಿಲ್ಲ. ಬದಲಾವಣೆಗೆ ಒಪ್ಪುವುದಿಲ್ಲ. ಅದರಿಂದಾಗಿ ಬದುಕಿನ ಎಲ್ಲಾ ನಡೆಗಳಲ್ಲೂ ವಿರೋಧವನ್ನು ಎದುರಿಸುತ್ತಿರುವುದು ಮತ್ತು ಸಂಘರ್ಷವನ್ನು ಹೊಂದಿರುವುದು ಸಾಮಾನ್ಯವಾಗಿರುತ್ತದೆ. ಇದು ಇತರರೊಂದಿಗೆ ಮಾತ್ರವಲ್ಲ, ತನ್ನೊಳಗೂ ಸಂಘರ್ಷವಿರುತ್ತದೆ.
ಹೊಂದಾಣಿಕೆ ಮತ್ತು ಅನುಸರಣೆ ಇಲ್ಲದಾಗ ಅವರ ಮೇಲಿನ ಆರೋಪಗಳೂ ಮತ್ತು ಅವರಿಂದ ಆಗುವ ನಿರಾಶೆಯೂ ಒಂದೇ ರೀತಿಯಲ್ಲಿ ಇರುತ್ತದೆ. ಸಹಜವಾಗಿ ಮತ್ತು ಸಲಿಲವಾಗಿ ಲಹರಿಯಂತೆ ಪ್ರವಹಿಸುವ ಜೀವನವನ್ನು ಅನುಕ್ರಮಿಸುವ ಬದಲು ತಮ್ಮ ಮನಸ್ಥಿತಿಯ ರೀತಿಯಲ್ಲಿ ಒತ್ತಾಯಿಸುತ್ತಾ ಸರಾಗ ಪ್ರವಹನೆಗೆ ತಾವೇ ಅಡ್ಡಿಯಾಗುತ್ತಾರೆ. ಸಮಯ ಸರಿದಂತೆ ತಮ್ಮಲ್ಲಿಯೇ ಅತೃಪ್ತಿ ಮತ್ತು ಮಾನಸಿಕ ಬಳಲುವಿಕೆ ಉಂಟಾಗಿ ಆನಂದವನ್ನು ಕಳೆದುಕೊಳ್ಳುತ್ತಾರೆ.
ತಮ್ಮ ಊಹೆ, ಅಧ್ಯಯನ, ಅನುಭವ ಮತ್ತು ತಿದ್ದುಕೊಳ್ಳುವಿಕೆಯು ನಮ್ಮಲ್ಲಿ ತಿಳುವಳಿಕೆಯನ್ನು ರೂಪಿಸುತ್ತದೆ. ಈ ತಿಳುವಳಿಕೆಯೇ ನಮ್ಮಲ್ಲಿ ಅರಿವಿನ ಆಳ್ವಿಕೆಯನ್ನು ಮಾಡುವುದು. ಇದನ್ನೇ ಅರಿವಾಳಿಕೆ ಎನ್ನುತ್ತೇವೆ. ಅರಿವಾಳಿಕೆಯು ನಮ್ಮ ವರ್ತನೆ, ಚಿಂತನೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಪ್ರಚೋದನೆ ಅಥವಾ ಚಾಲನೆ ನೀಡುವುದು.
ಯಾವಾಗ ವ್ಯಕ್ತಿಯಲ್ಲಿ ವಿಷಯ, ವ್ಯಕ್ತಿ ಮತ್ತು ಬದುಕಿನ ನಡೆಗಳ ಬಗ್ಗೆ ಪೆಡಸುತನ ಇರುತ್ತದೆಯೋ ಅವರ ನಡೆ, ನುಡಿಗಳಲ್ಲಿ ಮತ್ತು ಕ್ರಿಯೆ - ಪ್ರತಿಕ್ರಿಯೆಗಳಲ್ಲಿ ವಿರೋಧಾಭಾಸಗಳು ಉಂಟಾಗುತ್ತಾ ಹೋಗುತ್ತದೆ. ಏಕೆಂದರೆ ವ್ಯಕ್ತಿಯ ದೃಷ್ಟಿಯ ಚೌಕಟ್ಟಿನಲ್ಲಿಯೇ ಸೃಷ್ಟಿ, ಸಮಾಜ ಮತ್ತು ತನ್ನ ಹಾಗೂ ಇತರರ ಬದುಕಿನಲ್ಲಿನ ಆಗುಹೋಗುಗಳೆಲ್ಲಾ ಇರುವುದಿಲ್ಲ. ಅದರಾಚೆಗೂ ಇರುವುದು ಮಾತ್ರವಲ್ಲದೇ ವ್ಯಕ್ತಿಯ ಗ್ರಹಿಕೆ ಮತ್ತು ವಿಶ್ಲೇಷಣೆ ಸೀಮಿತವಾಗಿರುತ್ತದೆ. ಇದರಿಂದ ಭಾವುಕವಾಗಿಯೂ ವ್ಯಕ್ತಿ ಬಳಲುತ್ತಾನೆ.
ಅಹಂಕಾರಿಗಳು ಎದುರಿಸುವ ಬಹುದೊಡ್ಡ ಸಮಸ್ಯೆ ಎಂದರೆ ಅರಿವಾಳಿಕೆಯ ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿ ವಿರೋಧಾಭಾಸವಿರುವುದು. ಅಂದರೆ ನಡೆ ನುಡಿಗಳಲ್ಲಿ ಹೊಂದಾಣಿಕೆ ಇಲ್ಲದೇ ಇರುವುದು. ಅವರು ತಮ್ಮನ್ನು ತಾವು ಚಿತ್ರಿಸಿಕೊಂಡಿರುವ ವ್ಯಕ್ತಿತ್ವಕ್ಕೆ ಪೂರಕವಾಗಿ ಸಾಮಾಜಿಕ ಮತ್ತು ಕೌಟುಂಬಿಕ ಪರಿಸರವೇ ಒಗ್ಗುವುದಿಲ್ಲ. ವಾಸ್ತವವನ್ನು ಒಪ್ಪಲಾಗದೇ ತಮ್ಮ ಪೆಡಸುತನದ ದೃಷ್ಟಿಯಿಂದ ತಾವೇ ಬಳಲುತ್ತಾರೆ. ಉದಾಹರಣೆಗೆ ಹೇಳುವುದಾದರೆ, ಅಹಂಕಾರಿಗಳ ಪೆಡಸುತನದಿಂದ ಅವರ ದೃಷ್ಟಿಕೋನ ಬಹಳ ಸಮರ್ಥವಿದ್ದು ಸಫಲವಾಗುವಂತಹದ್ದಾಗಿರುತ್ತದೆ ಎಂದು ಭಾವಿಸಿರುತ್ತಾರೆ, ಮಿಗಿಲಾಗಿ ವಿಶ್ವಾಸಿಸುತ್ತಾರೆ. ಆದರೆ ಆ ದೃಷ್ಟಿಕೋನದಲ್ಲಿ ದೋಷವಿದೆ ಎಂಬುದನ್ನು ಯಾರಾದರೂ ಬೊಟ್ಟು ಮಾಡಿ ತೋರಿಸಿದರೆ ಅವರಿಗೆ ಅದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ಬದಲಾಗಿ ತನ್ನದೇ ವಿಶ್ವಾಸವನ್ನು ತಾನು ಭಂಗ ಮಾಡಿಕೊಳ್ಳಬಾರದು ಎಂದು ಹೆಣಗುತ್ತಾರೆ. ತಾವು ಸಮರ್ಥರೆಂದೂ, ತಮ್ಮ ಕೆಲಸ ಸಫಲವಾಗುವುದು ಎಂದೂ ನಿರೂಪಿಸಲು ಪ್ರಯತ್ನಿಸುತ್ತಾರೆ. ಆದರೆ ಇದರಿಂದ ಅವರು ಸಾಮಾಜಿಕ ದೃಷ್ಟಿಯಿಂದ ವಿಫಲವಾಗುವುದಲ್ಲದೇ ತಮ್ಮಲ್ಲಿ ಆಂತರಿಕವಾದ ಬದಲಾವಣೆಯನ್ನು ತಂದುಕೊಳ್ಳಲಾಗದಷ್ಟು ಅಪ್ರಾಮಾಣಿಕರಾಗಿಬಿಡುತ್ತಾರೆ.
ಪೆಡಸುತನದಿಂದ ತನ್ನ ವ್ಯಕ್ತಿತ್ವದ ಚಿತ್ರಣ ಮತ್ತು ವಾಸ್ತವದ ನಡುವೆ ತುಮುಲ ಇದ್ದೇ ಇರುತ್ತದೆ. ಅವರೇ ರೂಪಿಸಿಕೊಂಡಿರುವ ವ್ಯಕ್ತಿತ್ವ ಹುಸಿಯಾಗತೊಡಗಿದಾಗ ಅದು ಅವರ ಬದುಕಿನ ವೈಫಲ್ಯಕ್ಕೆ ಕಾರಣವಾಗುತ್ತದೆ. ಅದು ಆತಂಕ, ಖಿನ್ನತೆ, ಆಂತರಿಕ ತೊಳಲಾಟವೆಲ್ಲಾ ಹೆಚ್ಚಾಗುತ್ತಾ ಬಂದು ತಾವು ತಮ್ಮ ಜೀವನದಲ್ಲಿ ವಿಫಲವೆಂದು ಸಮಾಜಕ್ಕೆ ತಿಳಿದರೆ ಅವಮಾನ ಎಂದು ಭಾವಿಸುತ್ತಾರೆ. ಇದರಿಂದಾಗಿಯೇ ಎಷ್ಟೆಷ್ಟೋ ಪ್ರಖ್ಯಾತರು ಆತ್ಮಹತ್ಯೆಗಳನ್ನೂ ಮಾಡಿಕೊಂಡಿರುವುದು ಉಂಟು.
ಪ್ರತಿಭಾನ್ವಿತ ನಟಿಯೊಬ್ಬರು ತಮ್ಮ ಭಾವನಾತ್ಮಕ ಅಭಿನಯದಿಂದಾಗಿ ಜನಮನವನ್ನು ಸೂರೆಗೊಂಡಿದ್ದರು. ವಾಣಿಜ್ಯವೂ ಸಿನೆಮಾದ ಭಾಗವಾಗಿರುವುದರಿಂದ ಸಹಜವಾಗಿ ನಟ ನಟಿಯರ ಬೇಡಿಕೆ ಮತ್ತು ಅವಕಾಶಗಳಲ್ಲಿ ಏರುಪೇರುಗಳು ಇರುತ್ತವೆ. ಒಮ್ಮೆ ಬೇಡಿಕೆ ಇದ್ದ ಕಲಾವಿದರು ಇನ್ನೊಮ್ಮೆ ಇಲ್ಲದಿರಬಹುದು. ತನ್ನ ಬೇಡಿಕೆ ಹೀಗೇ ಇರುತ್ತದೆ, ತಾನು ಹೀಗೇ ಉಚ್ಛ್ರಾಯ ಸ್ಥಿತಿಯಲ್ಲಿರುತ್ತೇನೆ ಎಂಬಂತಹ ಅಹಂಕಾರವನ್ನು ಹೊಂದಿದ್ದ ನಟಿಗೆ ತನಗೆ ಅವಕಾಶ ದೊರಕದೇ ಹೋಗಿದ್ದನ್ನು ಸಹಿಸಲಾಗಲಿಲ್ಲ. ಮಾನಸಿಕವಾಗಿ ಬಳಲುವುದರ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾದರು. ಆಗ ಅವರ ಅಹಂಕಾರದ ಬಿಸಿ ತಟ್ಟಿದ್ದ ಚಿತ್ರರಂಗದವರು ಅಷ್ಟೇನೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಬದುಕಿನ ನಿರ್ವಹಣೆಗೆ ತಮ್ಮ ಇಷ್ಟಕ್ಕೆ ವಿರುದ್ಧವಾದ ಬೇರೆ ಏನೇನೋ ಸಾಧ್ಯತೆಗಳನ್ನು ಪ್ರಯತ್ನಿಸಲು ಹೋಗಿ, ಖಿನ್ನತೆ ಮತ್ತು ಆತಂಕಗಳನ್ನು ನಿಭಾಯಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಅಹಂಕಾರದ ಪೆಡಸುತನವಿಲ್ಲದೆ ಬದುಕಿನ ವಾಸ್ತವತೆಗೆ ತೆರೆದುಕೊಂಡಿದ್ದರೆ ಆಕೆ ಚಿತ್ರರಂಗಕ್ಕೆ ತಮ್ಮ ಪ್ರತಿಭೆಯ ಕೊಡುಗೆಗಳನ್ನು ಕೊಡಬಹುದಾಗಿತ್ತಲ್ಲದೆ, ವೈಯಕ್ತಿಕವಾಗಿಯೂ ಉತ್ತಮ ಜೀವನ ನಡೆಸಬಹುದಿತ್ತು. ಇದೊಂದು ಉದಾಹರಣೆ ಮಾತ್ರ. ಹೀಗೆ ಹಲವರು ತಮ್ಮ ತಾರಾಭ್ರಮೆಯಲ್ಲಿ ಆಂತರಿಕವಾಗಿ ಬದುಕನ್ನು ಹದಗೆಡಿಸಿಕೊಂಡಿರುವುದು ಉಂಟು. ತಮ್ಮ ಲೋಪ ದೋಷಗಳನ್ನು ಗುರುತಿಸಿಕೊಂಡು ಅವನ್ನು ಸರಿಪಡಿಕೊಳ್ಳದೆ ಹೊರಗಿನ ವ್ಯವಸ್ಥೆಯನ್ನು ದೂರುವರು. ನಾನು ಇಷ್ಟು ಮಾಡಿದೆ, ಅಷ್ಟು ಮಾಡಿದೆ; ಎಲ್ಲಾ ಮೋಸ ಮಾಡಿದರು. ಯಾರೂ ಕೈ ಹಿಡಿಯಲಿಲ್ಲ. ಎಲ್ಲರೂ ಸ್ವಾರ್ಥಿಗಳು, ಅವರವರದು ನೋಡಿಕೊಂಡರು ಎಂದು ತಮ್ಮ ಭಾವನಾತ್ಮಕ ಕುಸಿತದ ಬೇರೊಂದು ಚಿತ್ರಣವನ್ನು ನೀಡುವರು.
ಆನಂದವಿರುವುದೇ ಪೆಡಸುತನವಿಲ್ಲದ ಸಲಿಲತೆಯಿಂದ ಕೂಡಿರುವ ಮನಸ್ಥಿತಿಯಲ್ಲಿ. ಸಲಿಲತೆಯಿಂದ ಕೂಡಿರುವ ಮನಸ್ಸು ವಿನಯದಿಂದ ಇರುವುದಲ್ಲದೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುವುದು. ಮನುಷ್ಯನಾಗಲಿ, ಯಾವುದೇ ಜೀವಿಯಾಗಲಿ ಈ ಸೃಷ್ಟಿಯಲ್ಲಿ ಉಳಿದಿರುವುದಕ್ಕೆ ಸಾಧ್ಯವಾಗಿರುವುದೇ ಹೊಂದಾಣಿಕೆ ಮಾಡಿಕೊಳ್ಳುವ ನೈಸರ್ಗಿಕ ಸ್ವಭಾವದಿಂದ. ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವ ನೈಸರ್ಗಿಕವಾದರೂ ಪೆಡಸುತನದ ಮನಸ್ಥಿತಿಯಿಂದಾಗಿ ಅಹಂಕಾರಿಗಳು ಬಳಲುತ್ತಾರೆ.