ಉಡುಪಿನ ಹೂರಣ

ಬಟ್ಟೆ ಹಾಕಿಕೊಳ್ಳುವುದೆಂದರೆ ಅದೇನೋ ಸಂಭ್ರಮ. ತಂದ ಕೂಡಲೇ ತೊಟ್ಟುಕೊಂಡುಬಿಡಬೇಕು. ಆ ಹೊಸ ಬಟ್ಟೆಯನ್ನು ಹಾಕಿಕೊಂಡಾಗ ನೋಡುವವರ ಕಣ್ಣಿಗೆ ಅದೆಷ್ಟರ ಮಟ್ಟಿಗೆ ಚೆನ್ನಾಗಿ ಕಾಣುತ್ತದೋ, ಕಳೆಯಾಗಿ ಇರುತ್ತಾರೋ ತಿಳಿಯದು. ಆದರೆ ಆ ಹೊಸ ಬಟ್ಟೆ ತೊಟ್ಟವರು ತಾವು ಕಳೆಗೊಂಡಿರುವ ಭಾವದಲ್ಲಿ ಹೊಸತನ್ನು ಅನುಭವಿಸುತ್ತಿರುತ್ತಾರೆ. ಅದೊಂದು ರೀತಿಯ ಹಾಯಾದ, ಖುಷಿಯಾದ ಮತ್ತು ಗರ್ವದ ಅನುಭವ.
ಇನ್ನು ಕೆಲವರಿಗೆ ಹೊಸ ಬಟ್ಟೆ ಹಾಕಿಕೊಂಡರೂ, ಹಳೆಯ ಬಟ್ಟೆ ಹಾಕಿಕೊಂಡರೂ ಅದೇನೂ ಅನ್ನಿಸುವುದೇ ಇಲ್ಲ. ಅದೇ ಮುಖ, ಅದೇ ಕಳೆ, ಅದೇ ಹಿಂದಿನ ದಿನದ ಮುಂದುವರಿದ ಭಾವ.
ಕೆಲವರು ಹೊಸ ಬಟ್ಟೆಗಳನ್ನು ಮಾತ್ರವಲ್ಲ ತಮ್ಮ ಬಳಿ ಎಲ್ಲಾ ಮಾದರಿಯ, ಎಲ್ಲಾ ಬಣ್ಣಗಳ, ಎಲ್ಲಾ ವಿನ್ಯಾಸಗಳ ದಿರಿಸುಗಳನ್ನು ಹೊಂದಿರಲು ಮತ್ತು ಧರಿಸಲು ಆಸೆ ಪಡುತ್ತಿರುತ್ತಾರೆ. ಅವರಿಗೆ ತೊಡಲು ಸಾಕಷ್ಟು ಉಡುಪುಗಳಿರುತ್ತವೆ. ಆದರೂ ಯಾವುದೇ ಹೊಸ ನಮೂನೆಯ ದಿರಿಸು ಕಂಡರೆ ಧರಿಸುವಾಸೆ. ಆಕರ್ಷಕವಾಗಿ ಕಾಣುವ ಬಟ್ಟೆಗಳನ್ನೆಲ್ಲಾ ಬಯಸುತ್ತಾರೆ. ಅವರ ಬಳಿ ಸರಳವಾಗಿರುವ ಹತ್ತಿ ಉಡುಪುಗಳಿಂದ ಹಿಡಿದು, ಜಗಮಗಿಸುವ ರೇಶ್ಮೆ, ವೆಲ್ವೆಟ್ ಮೆದು ಬಟ್ಟೆಯವರೆಗೂ ಸಂಗ್ರಹದಲ್ಲಿರುತ್ತವೆ. ಕಪ್ಪು, ಬಿಳಿಯಂತಹ ಸಾದಾ ಬಣ್ಣಗಳಿಂದ ಹಿಡಿದು ಕಾಮನಬಿಲ್ಲಿನ ಎಲ್ಲಾ ಬಣ್ಣಗಳದ್ದೂ ಇರುತ್ತವೆ. ಅಷ್ಟಿದ್ದರೂ ತಮ್ಮ ಬಳಿ ಇಲ್ಲದ ದಿರಿಸು ಇತರರು ಧರಿಸಿದ್ದರೆಂದರೆ ಅದು ಎಲ್ಲಿ ತೆಗೆದುಕೊಂಡಿದ್ದು ಎಂದು ವಿಚಾರಿಸುತ್ತಾರೆ. ಅದನ್ನು ಮುಟ್ಟಿ ಸವರಿ ಆನಂದಿಸುತ್ತಾರೆ. ಸಾಧ್ಯವಾದಲ್ಲಿ ಕೊಂಡೂ ಬಿಡುತ್ತಾರೆ. ಇನ್ಯಾರೋ ಚೆನ್ನಾದ ಬಟ್ಟೆ ತೊಟ್ಟಿದ್ದರೆ, ಅಯ್ಯೋ ಅದು ನನ್ನ ಬಳಿ ಇಲ್ಲವೇ ಎಂದು ಕೊರಗುತ್ತಾರೆ. ಅಸೂಯೆ ಪಡುತ್ತಾರೆ.
ಬಟ್ಟೆಯ ಮೇಲಿನ ಚಿತ್ತಾರಗಳು, ಬಣ್ಣಗಳು, ಹೊಲಿಗೆಗಳು; ಎಲ್ಲದರ ಮೇಲೂ ಅವರ ಗಮನ. ಎಲ್ಲಿಗಾದರೂ ಹೋಗಬೇಕಾದರೆ ಯಾವುದನ್ನು ತೊಡುವುದು, ಯಾವುದನ್ನು ಬಿಡುವುದು: ದೊಡ್ದ ಗೊಂದಲ. ಮ್ಯಾಚಿಂಗ್ ನೋಡಿಕೊಂಡು ಅದನ್ನು ತೊಟ್ಟು, ಇದನ್ನು ತೊಟ್ಟು, ನಾಲ್ಕಾರು ಧರಿಸಿ, ನಂತರ ತ್ಯಜಿಸಿ, ನಂತರ ಯಾವುದೋ ಆಯ್ಕೆಯನ್ನು ಪಕ್ಕಾ ಮಾಡಿಕೊಂಡು ಬಟ್ಟೆ ತೊಟ್ಟು ಹೊರಡುವುದು.
ದಿರಿಸು ಧರಿಸಿದ ಮೇಲೆ ಒಂದು ಮೆರವಣಿಗೆ ಹೋಗಬೇಕು, ಫೇಸ್ಬುಕ್ನಲ್ಲಿ ಫೋಟೊ ಹಾಕಬೇಕು, ವಾಟ್ಸ್ಆ್ಯಪ್ನಲ್ಲಿ ಡಿಪಿ ಬದಲಾಯಿಸಬೇಕು.
ಒಟ್ಟಿನಲ್ಲಿ ದಿರಿಸು ಅವರ ಉಸಿರಂತೆ. ಬಟ್ಟೆಯ ಬಗ್ಗೆ ಇಷ್ಟು ವ್ಯಾಮೋಹ ಇರುವ ಈ ಬಗೆಗೆ ಹೇಳುವುದೇ ದಿರಿಸುಸಿರು ಅಂತ ಅಥವಾ ಉಡುಪೋನ್ಮಾದ ಅಂತಲೂ ಅನ್ನಬಹುದು.
ಇದು ಉಡುಪಿನ ಬಗ್ಗೆ ವ್ಯಾಮೋಹ ಮಾತ್ರವಲ್ಲ. ಆ ಮನುಷ್ಯನ ಅಂತರಾಳದಲ್ಲಿ ಅಡಗಿರುವ ಅಗತ್ಯಗಳ ಮತ್ತು ಆಸೆಗಳ ಪ್ರತಿಫಲನ!
ತೊಡುವ ಬಟ್ಟೆ ಆ ವ್ಯಕ್ತಿಯ ತನ್ನತನದ ಭಾಷೆ ಮತ್ತು ಗುರುತು. ಅವರು ವಿಧವಿಧವಾದ ಫ್ಯಾಶನ್ ಮತ್ತು ಸ್ಟೈಲ್ ಮಾಡಿಕೊಳ್ಳುವ ಮೂಲಕ ತಮ್ಮತನದ ಅನ್ವೇಷಣೆಯಲ್ಲಿ ತೊಡಗಿರುತ್ತಾರೆ. ತಾವು ಯಾರು, ತಮ್ಮೊಳಗಿರುವ ತರಾವರಿ ಆಸೆಗಳ ಬಣ್ಣಗಳನ್ನು, ಬಗೆಗಳನ್ನು ದಿರಿಸುಗಳಲ್ಲಿ ತೋರಿಸುತ್ತಿರುತ್ತಾರೆ. ಅವರ ಭಾವ, ಬಯಕೆಗಳೆಲ್ಲಾ ಬಣ್ಣಗಳಲ್ಲಿ ರಂಗನ್ನು ಪಡೆದಿರುತ್ತವೆ. ಸದಾ ಹೊಸತಿನ ಅನ್ವೇಷಣೆಯಲ್ಲಿರುವ ಮನಸ್ಥಿತಿಯವರಿಗೆ ಹೊಸತರ ಹುಡುಕಾಟವೇ ಒಂದು ಆನಂದ. ಆಗ ಅವರ ಮೆದುಳಿನಲ್ಲಿ ಡೊಪಮೈನ್ ರಾಸಾಯನಿಕ ದ್ರವ್ಯ ಉಂಟಾಗುತ್ತದೆ. ಕೆಲವರು ಇದೇ ಆನಂದದ ಹುಡುಕಾಟದಲ್ಲಿ ನಿರತರಾಗಿ ಗೀಳಾಗಿಯೂ ಅದು ಪರಿಣಮಿಸಬಹುದು. ಉಡುಪಿನ ಉನ್ಮಾದವು ಮಾನಸಿಕ ಕಾಯಿಲೆಯೇನಲ್ಲಾ, ಆದರೆ ಗೀಳಾಗಿ ಮುಂದೆ ವ್ಯಸನಕ್ಕೂ ದಾರಿಯಾಗಬಹುದು.
ತಮ್ಮ ದೇಹವನ್ನು ಪ್ರೀತಿಸಿಕೊಳ್ಳುವವರ ಸ್ಪಷ್ಟ ಸಂಕೇತ ಬಟ್ಟೆಗಳನ್ನು ತೊಡುವುದರಲ್ಲಿನ ಆಸಕ್ತಿ ಮತ್ತು ಅಭಿರುಚಿ. ತಮ್ಮತನದ ಅಭಿವ್ಯಕ್ತಿಯನ್ನು ತೊಡುವ ಬಟ್ಟೆಗಳ ಮೂಲಕವೇ ಪ್ರಕಟಿಸುತ್ತಾರೆ. ಇನ್ನೂ ಕೆಲವರಿಗೆ ಒಳಗೆ ಅಭದ್ರತೆ ಅಥವಾ ತಮ್ಮ ದೇಹದ ಬಗ್ಗೆ ಕೀಳರಿಮೆ ಇದ್ದಾಗ, ತಮಗೆ ಅಗತ್ಯವೆನಿಸುವ ಪ್ರಶಂಸೆಗಳನ್ನು ಪಡೆದುಕೊಳ್ಳಲು ಕೂಡಾ ತಮ್ಮ ದೇಹವನ್ನು ಚೆನ್ನಾದ ಬಟ್ಟೆಗಳಿಂದ ಅಲಂಕರಿಸಿಕೊಳ್ಳುತ್ತಾರೆ. ತೊಟ್ಟ ಉಡುಪುಗಳಿಂದ ಆತ್ಮವಿಶ್ವಾಸವನ್ನು ಪಡೆಯಲು ಯತ್ನಿಸುತ್ತಾರೆ.
‘‘ಓ, ನಿಮ್ಮ ಡ್ರೆಸ್ ತುಂಬಾ ಚೆನ್ನಾಗಿದೆ’’ ಎಂದು ತೆಗೆದುಕೊಂಡ ಅಂಗಡಿಯ ಅಡ್ರೆಸ್ ಕೇಳಿದಾಗ ತಮ್ಮನ್ನೇ ಹೊಗಳಿದಂತೆ ಭಾವಿಸುತ್ತಾರೆ. ‘‘ನಿಮ್ಮ ಉಡುಪು ತುಂಬಾ ಚೆನ್ನಾಗಿದೆ, ತುಂಬಾ ಡಿಫರೆಂಟಾಗಿದೆ’’ ಎಂದಾಗ ಆ ಹೊಗಳಿಕೆಯನ್ನು ತಮಗೆ ಅನ್ವಯಿಸಿಕೊಳ್ಳುತ್ತಾರೆ.
ಅದರಲ್ಲೂ ಸಣ್ಣವರಿದ್ದಾಗ, ಪ್ರೌಢಾವಸ್ಥೆಗೆ ಬರುವಾಗ ಚೆನ್ನಾಗಿ ಬಟ್ಟೆ ತೊಟ್ಟು ಸಂಭ್ರಮಿಸುವ ವಯಸ್ಸಿನಲ್ಲಿ ಆರ್ಥಿಕ ಸಮಸ್ಯೆ ಅಥವಾ ಬೇರಿನ್ನೇನಾದರೂ ನಿರ್ಬಂಧಗಳ ಸಮಸ್ಯೆಗಳಿಂದ ಇಷ್ಟದ ಬಟ್ಟೆಗಳನ್ನು ತೊಡಲಾಗದಿದ್ದರೆ ಅವರು ಮುಂದೆ ತಾವು ಆರ್ಥಿಕವಾಗಿ ಸ್ವತಂತ್ರರಾದಾಗ ಮತ್ತು ಮಾನಸಿಕವಾಗಿ ಸಬಲರಾದಾಗ, ದೈಹಿಕವಾಗಿ ವಯಸ್ಕರಾದಾಗ ತಮ್ಮಿಷ್ಟದ ಬಟ್ಟೆಗಳನ್ನು ತೊಟ್ಟುಕೊಂಡು ಆನಂದಿಸುತ್ತಿರುತ್ತಾರೆ.
ರಾಜಕುಮಾರರ, ಮಹಾರಾಣಿಯ, ಸಿನೆಮಾ ನಾಯಕರ, ನಾಯಕಿಯರ ಚಿತ್ರಣಗಳನ್ನೆಲ್ಲಾ ತಮಗೆ ಆರೋಪಿಸಿಕೊಳ್ಳುವಷ್ಟರ ಮಟ್ಟಿಗೆ ಉಡುಪುಗಳನ್ನು ತೊಟ್ಟು ಸಂಭ್ರಮಿಸುತ್ತಾರೆ.
ಯಾವುದೇ ವ್ಯಕ್ತಿ ವಿಶೇಷವಾಗಿ ಬಟ್ಟೆ ತೊಟ್ಟಾಗ ಅವರು ಕಾಣುವ ರೀತಿಯಲ್ಲಿ ಒಂದು ಬದಲಾವಣೆ ಇರುತ್ತದೆ. ಆಗ ಎದುರಿನವರು ‘‘ಹೀರೋ ಇದ್ದಂತೆ ಇದ್ದೀಯ’’ ಎನ್ನುವಂತಹ ಪ್ರಶಂಸೆ ಮಾಡುತ್ತಾರೆ. ಇದು ಅವರ ಡೊಪಮೈನ್ ಸ್ರವಿಸುವಿಕೆಗೆ ಪ್ರೇರಣೆ ಆಗುತ್ತದೆ. ಅವರಿಗೆ ಆನಂದದ ಅನುಭವವಾಗುತ್ತದೆ.
ಒಟ್ಟಾರೆ ಉಡುಪು ಎಂಬುದು ದೇಹಕ್ಕೆ ಆವರಣವಾದರೆ, ಮನಸ್ಸಿಗೆ ಅನಾವರಣ.