ತಿರುಗುಪಾಳಿ

ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿತವಾಗುತ್ತಿರುವ ಒಂದು ಧೋರಣೆಯನ್ನು ಗಮನಿಸಿ ನೋಡಿ. ವ್ಯಕ್ತಿಯಾಗಲಿ, ಪಕ್ಷವಾಗಲಿ, ಸಮುದಾಯ ಅಥವಾ ಸಮೂಹವಾಗಲಿ; ತಮ್ಮ ವಿರುದ್ಧವಾಗಿ ಯಾವುದಾದರೂ ಟೀಕೆ ಅಥವಾ ವಿಮರ್ಶೆ ಬಂದಾಗ ಕೂಡಲೇ ಅವನ್ನು ಬೇರೆಯವರ ಕಡೆ ತಿರುಗಿಸುವುದು.
ಯಾವುದೋ ಒಂದು ರಾಜಕೀಯ ಪಕ್ಷವನ್ನು ಟೀಕಿಸಿದರೆ, ಕೂಡಲೇ ಇನ್ನೊಂದು ಪಕ್ಷದ ಲೋಪವನ್ನು ಎತ್ತಿ ಹಿಡಿಯುವುದು. ಒಂದು ವೇಳೆ ಅದು ಯಾವುದಾದರೂ ನಿರ್ದಿಷ್ಟ ಸಂಸ್ಕೃತಿಯಲ್ಲಿ, ಧಾರ್ಮಿಕತೆಯಲ್ಲಿ ಮೌಢ್ಯವನ್ನೋ ಅಥವಾ ಧಾರ್ಮಿಕ ಸ್ಥಳದ ದೋಷವನ್ನು ತೋರಿದರೆ ಅದನ್ನು ಪರಿಶೀಲಿಸುವ ಅಥವಾ ವಿಶ್ಲೇಷಿಸುವುದಿಲ್ಲ. ಬದಲಾಗಿ ಇನ್ನೊಂದು ಸಂಸ್ಕೃತಿ, ಧಾರ್ಮಿಕತೆ ಮತ್ತು ತೀರ್ಥಸ್ಥಳದ ಬಗ್ಗೆ ಬೊಟ್ಟು ಮಾಡಿ ಅದರ ನಕಾರಾತ್ಮಕವಾಗಿರುವುದರ ಕಡೆಗೆ ಗಮನ ಸೆಳೆಯುವುದು.
ಇದು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಮಾತ್ರವಲ್ಲ, ವೈಯಕ್ತಿಕವಾಗಿಯೂ ಮಕ್ಕಳಲ್ಲೂ ನೋಡಬಹುದು.
ಯಾವುದಾದರೂ ಒಂದು ಮಗು ತಪ್ಪು ಮಾಡಿದಾಗ ಪೋಷಕರು ಅದನ್ನು ಪ್ರಶ್ನಿಸಿದಾಗ, ಆಗ ಆ ಮಗು ‘‘ಅವನು ಹಾಗೆ ಮಾಡಲಿಲ್ಲವಾ? ಅವನು ಮಾತ್ರ ಮಾಡಬಹುದಾ?’’ ಎಂದು ಮತ್ತೊಂದು ಮಗುವಿನ ಕಡೆಗೆ ತೋರುತ್ತದೆ. ಇದೇ ರೀತಿ ಯಾವುದೇ ಸಂಸ್ಕೃತಿ, ಧರ್ಮ, ಸಮಾಜ ಅಥವಾ ಸಮುದಾಯದವರು ಕೂಡಾ ತಮ್ಮ ಕಡೆಗೆ ಬರುವ ಟೀಕೆ ಅಥವಾ ವಿಮರ್ಶೆಯನ್ನು ಒಪ್ಪಿಕೊಳ್ಳದೆ ಕೂಡಲೇ ಮತ್ತೊಂದು ಕಡೆಗೆ ತಿರುಗಿಸುವುದಕ್ಕೆ ತಿರುಗುಪಾಳಿತನ ಅಥವಾ ವ್ಹಾಟೆಬೌಟಿಸಂ ಅಥವಾ ಟು ಕ್ವೋಕ್ ಫ್ಯಾಲೆಸಿ ಎಂದು ಕರೆಯುತ್ತಾರೆ.
ವಾಸ್ತವವಾಗಿ ಇದು ಅಹಮಿನ ರಕ್ಷಣಾ ತಂತ್ರ ಮತ್ತು ಸಾಮಾನ್ಯ ಪಕ್ಷಪಾತವಾದ ಅಹಮೋಲೈಕೆಯಾಗಿರುತ್ತದೆ. ತಿರುಗುಪಾಳಿಗೇಡಿಯ ತಪ್ಪನ್ನು ಗುರುತಿಸಿದರೆ ಅಥವಾ ಸೂಚಿಸಿದರೆ ಕೂಡಲೇ ತನ್ನ ತಪ್ಪಿನ ಕಡೆಗೆ ಇರುವ ಗಮನವನ್ನು ಇನ್ಯಾವುದೋ ಅಥವಾ ಇನ್ಯಾರದೋ ತಪ್ಪಿನ ಕಡೆಗೆ ಹೊರಳಿಸುತ್ತಾರೆ. ಕೆಲವೊಮ್ಮೆ ಮಾಡಿರುವ ಟೀಕೆಗೂ ಅವರು ತಿರುಗಿಸಿರುವ ವಿಷಯಕ್ಕೂ ಏನೇನೂ ಸಂಬಂಧವೇ ಇರುವುದಿಲ್ಲ.
ಉದಾಹರಣೆಗೆ ಜಾತಿವ್ಯವಸ್ಥೆಯಲ್ಲಿರುವ ಅಸ್ಪಶ್ಯತೆಯನ್ನು ಖಂಡಿಸಿದರೆ ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ಮಾತಾಡಿ ಎಂದು ತಿರುಗುಪಾಳಿಗೇಡಿಗರು ಹೇಳಬಹುದು. ಒಟ್ಟಾರೆ ವಾಸ್ತವದ ಸಮಸ್ಯೆಯನ್ನು ಅವರು ತಮ್ಮದು ಎಂದು ಒಪ್ಪಿಕೊಂಡಿರುವ ಕಾರಣದಿಂದಲೇ ಅದನ್ನು ಮರೆಮಾಚಲು ಯಾವುದೋ ಒಂದು ರಕ್ಷಣಾಕವಚವನ್ನು ಹೊಂದಲು ಯತ್ನಿಸುತ್ತಾರೆ. ಅದು ಪ್ರತಿವಾದವಾಗಿರುವುದಿಲ್ಲ, ಬದಲಿಗೆ ಕುತರ್ಕವಾಗಿರುತ್ತದೆ. ತಿರುಗುಪಾಳಿಗೇಡಿತನವನ್ನು ಆಡುಭಾಷೆಯಲ್ಲಿ ಕುತರ್ಕವಾದಿಗಳು ಎಂದೂ ಕರೆಯಬಹುದು.
ಮನೋವೈಜ್ಞಾನಿಕವಾಗಿ ಈ ಸಮಸ್ಯೆಗೆ ಕಾರಣಗಳನ್ನು ಹುಡುಕಲು ಹೋದರೆ, ಮೊದಲು ಕಾಣುವುದು ಅಸಮ್ಮತದರಿವಿಗೆ ವಿಮುಖವಾಗುವುದು. ಅಂದರೆ ಅವರಿಗೆ ಒಪ್ಪಲು ಇಷ್ಟವಿಲ್ಲದ ವಿಷಯದಿಂದ ಪಲಾಯನ ಮಾಡುವ ಮನಸ್ಥಿತಿ. ಅದೊಂದು ವ್ಯಕ್ತಿಗತವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಅಥವಾ ರಾಜಕೀಯವಾಗಿ ಅಹಿತಕರವಾದ ಸತ್ಯವಾಗಿರಬಹುದು. ಅವರಿಗೆ ಅಹಿತ ಎನ್ನಿಸುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ರಕ್ಷಣಾ ತಂತ್ರಗಳನ್ನು ಬಳಸಿಕೊಳ್ಳುತ್ತಾರೆ. ವಿಷಯವನ್ನು ಬದಲಿಸುವ ತಂತ್ರವನ್ನು ಬಳಸುತ್ತಾರೆ.
ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಅನೇಕರಿಗೆ ತಮ್ಮ ಗುರುತಿನ ಸಮಸ್ಯೆ ಕಾಡುತ್ತದೆ. ಧರ್ಮ, ಜಾತಿ, ರಾಜಕೀಯ ಪಕ್ಷ, ಸಿದ್ಧಾಂತ ಅಥವಾ ಸಮೂಹ; ತಾವು ಯಾವುದರೊಂದಿಗೆ ಗಂಭೀರವಾಗಿ ಮತ್ತು ಆಳವಾಗಿ ಗುರುತಿಸಿಕೊಂಡಿರುತ್ತಾರೆಯೋ ಅದನ್ನು ಟೀಕಿಸಿದರೆ ಕೂಡಲೇ ಆ ಟೀಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಲ್ಲದೆ ತಮ್ಮ ಅಸ್ಮಿತೆಗೆ ಅಥವಾ ಅಸ್ತಿತ್ವಕ್ಕೇ ಧಕ್ಕೆ ಎಂದು ಅವರ ಮನಸ್ಸಿನ ಆಳದಲ್ಲಿ ಭೀತಿ ಪ್ರಾರಂಭವಾಗುತ್ತದೆ. ಹಾಗಾಗಿ ಹೋರಾಡು ಅಥವಾ ಓಡಿಹೋಗು (ಫೈಟ್ ಆರ್ ಫ್ಲೈಟ್) ಪ್ರವೃತ್ತಿ ಜಾಗೃತವಾಗುತ್ತದೆ. ಹೋರಾಡಬೇಕೆಂದರೆ ವಾಸ್ತವಾಂಶಗಳ ಅರಿವು, ತರ್ಕ ಮತ್ತು ಕೂಲಂಕಷ ಮಾತುಕತೆಗೆ ಸಂಯಮ ಮೊದಲಾದವುಗಳ ಅಗತ್ಯವಿರುತ್ತದೆ. ಆದರೆ ಪಲಾಯನ ಮಾಡುವುದೇ ಬಹಳ ಸುಲಭ. ಈ ಪಲಾಯನದ ತಂತ್ರ ಮತ್ತೊಬ್ಬರನ್ನು ಅಥವಾ ಮತ್ತೊಂದರ ತಪ್ಪನ್ನು ತೋರಿಸುವುದು.
ಅಹಮಿನಾಳ್ವಿಕೆಯೇ ಇದರಲ್ಲಿ ಪ್ರಧಾನ. ಇದರೊಂದಿಗೆ ಗುಂಪಿನೊಂದಿಗೆ ಗುರುತಿಸಿಕೊಳ್ಳುವುದರ ಮೂಲಕ ತನ್ನನ್ನು ಮತ್ತು ತನ್ನ ಅಹಮನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಇದೋ ಬಹಳ ಅನಾದಿ ಕಾಲದ ತಂತ್ರ. ಶಿಲಾಯುಗದಲ್ಲಿ ಬೇಟೆಯಾಡುವ ಕಾಲದಿಂದಲೂ ಇರುವಂತಹ ಗುಂಪುಗಾರಿಕೆ. ತಮ್ಮ ಆಹಾರ, ಆಶ್ರಯ ಮತ್ತು ವೈಯಕ್ತಿಕ ಅಗತ್ಯಗಳಿಗೆ ಪರಸ್ಪರ ಅವಲಂಬಿಸಿರುವ ತಮ್ಮದೇ ಒಂದು ಗುಂಪು ಹಾಗೆಯೇ ತಮ್ಮದಲ್ಲದ ಮತ್ತೊಂದು ಗುಂಪು. ಇವ ನಮ್ಮವನೋ, ಮತ್ತೊಂದು ಗುಂಪಿನವನೋ ಎನ್ನುವುದರ ಮೇಲೆ ವ್ಯಕ್ತಿಗಳನ್ನು ಮತ್ತು ವಿಷಯಗಳನ್ನು ಅಂಗೀಕರಿಸುವ ಗುಂಪುಗಾರಿಕೆ ಬುಡಕಟ್ಟಿನ ಸ್ವಭಾವ. ಯಾವಾಗ ತಮ್ಮ ಗುಂಪಿನ ಬಗ್ಗೆ ಟೀಕೆ ಅಥವಾ ದೂರುಗಳು ಬರುವುದೋ ಆಗ ವಾಸ್ತವವನ್ನು ತಿಳಿಯುವುದಕ್ಕಿಂತ ಗುಂಪಿನ ಸದಸ್ಯತ್ವವನ್ನು ಕಾಪಾಡಿಕೊಳ್ಳಲು ಗುಂಪನ್ನೇ ಸಮರ್ಥಿಸುವುದು ಒಂದು ಪ್ರಾಚೀನ ರೂಢಿ. ಅದರ ವಾಸನೆಯನ್ನು ಕೂಡಾ ತಿರುಗುಪಾಳಿತನದಲ್ಲಿ ಕಾಣಬಹುದು.
ಗುಂಪಿನ ಸದಸ್ಯತ್ವವನ್ನು ಕಾಪಾಡಿಕೊಳ್ಳುವ ಮತ್ತು ಅದರಲ್ಲಿ ತಮ್ಮ ಗುರುತನ್ನು ಕಾಪಾಡಿಕೊಳ್ಳುವ ಭರದಲ್ಲಿ ತಾರ್ಕಿಕವಾಗಿ, ವಿಶ್ಲೇಷಣಾತ್ಮಕವಾಗಿ ಆಲೋಚಿಸುವ ರೂಢಿಯನ್ನೇ ಕಳೆದುಕೊಂಡಿದ್ದು ಆ ಭಾಗದ ಮೆದುಳು ಕೆಲಸವೇ ಮಾಡುವುದಿಲ್ಲ. ಏಕೆಂದರೆ ಅದು ಬಹುದೀರ್ಘಕಾಲ ಕೆಲಸವಿಲ್ಲದೆ ಇದ್ದು ಈಗ ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ.
ತಿಳುವಳಿಕೆಯನ್ನು ಹೆಚ್ಚಿಸುವ ಮತ್ತು ಅರಿವಿನ ವ್ಯಾಪ್ತಿಯನ್ನು ವಿಸ್ತರಿಸುವಂತಹ ಅಧ್ಯಯನ, ಅನುಭವ ಮತ್ತು ಅನ್ವೇಷಣೆಗಳಿಗೆ ತೆರೆದುಕೊಳ್ಳದೇ ಇರುವುದೂ ಕೂಡಾ ಮೂರನೆಯ ಮತ್ತು ಮುಖ್ಯವಾದ ಕಾರಣ. ಆದರೆ ಮೊದಲಿನ ಎರಡು ಕಾರಣಗಳು ತುಂಬಾ ಗಾಢವಾಗಿದ್ದ ಪಕ್ಷದಲ್ಲಿ ತಮ್ಮ ಕಲಿಕೆ ಮತ್ತು ಗ್ರಹಿಕೆಯನ್ನು ಕೂಡಾ ಅದರದ್ದೇ ಆಧಾರದಲ್ಲಿ ಆವಾಹಿಸಿಕೊಳ್ಳುತ್ತಿರುತ್ತಾರೆ. ಹಾಗಾಗಿಯೇ ವಿದ್ಯಾವಂತರು ಮತ್ತು ಸುಶಿಕ್ಷಿತರೆಂದು ಅನ್ನಿಸಿಕೊಂಡವರೂ ಕೂಡಾ ಸಂವಾದ ಅಥವಾ ಚರ್ಚೆಗೆ ಬದಲು ದಾಳಿಯನ್ನೇ ಆಯ್ದುಕೊಳ್ಳುತ್ತಾರೆ.
ಈ ತಿರುಗುಪಾಳಿತನ ಮಾನಸಿಕ ಸಮಸ್ಯೆಯೇ ಎಂದು ಕೇಳುವುದಾದರೆ, ಹಲವು ಸಮಸ್ಯೆಗಳ ಸಂಕೀರ್ಣ ಸ್ವರೂಪದ್ದು ಎನ್ನಬಹುದು.
ತನ್ನರಿಮೆಯ ಕವಚ (ನಾರ್ಸಿಸ್ಟಿಕ್ ಡಿಫೆನ್ಸ್), ತನ್ನಾಳ್ವಿಕೆಯ ಮನಸ್ಥಿತಿಯ ವ್ಯಕ್ತಿತ್ವ (ಅಥಾರಿಟೇರಿಯನ್ ಪರ್ಸನಾಲಿಟಿ ಟ್ರೈಟ್), ದೂರೀಕರಿಸುವ ತಂತ್ರ (ಅವಾಯ್ಡೆಂಟ್ ಕೋಪಿಂಗ್ ಮೆಕಾನಿಸಂ), ದುರ್ಬಲವಾದ ಭಾವ ಕೌಶಲ್ಯ, ಎಲ್ಲರೂ ನಿರಾಕರಿಸುವರು ಎಂದು ತಾನೂ ಅವರಲ್ಲಿ ಒಂದಾಗಿ ಸಂಕಲಿತ ನಿರಾಕರಣೆಯ ವರ್ತನೆಯನ್ನು ತೋರುವುದು; ಇವೆಲ್ಲಾ ವ್ಯಕ್ತಿಯ ಮಾನಸಿಕ ಮತ್ತು ಸಮೂಹದ ಸಂಕಲಿತ ಮನಸ್ಥಿತಿಯ ದೋಷಗಳೇ ಆಗಿರುತ್ತವೆ.