Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಕಿಸ್ಬಾಯಿ ಕುಣಿಕೆ

ಕಿಸ್ಬಾಯಿ ಕುಣಿಕೆ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,7 Sept 2025 10:51 AM IST
share
ಕಿಸ್ಬಾಯಿ ಕುಣಿಕೆ

ತನ್ನ ತೆರೆದ ಬಾಯಲ್ಲಿ ಹಾಡಿದ್ದನ್ನೇ ಹಾಡುತ್ತಾ ಹೋಗುವವನು ಕಿಸಬಾಯಿ ದಾಸ. ಈ ಮನೆಯ ಮುಂದೆ ಹಾಡಿದ್ದನ್ನೇ ಆ ಮನೆಯ ಮುಂದೆಯೂ ಹಾಡುತ್ತಾನೆ.

ಪಾಪ ಯಾರೋ ಹಾಗೆ ಹಾಡುತ್ತಾ ಭಿಕ್ಷಾಧರ್ಮ ಪಾಲಿಸುವ ಹರಿದಾಸರ ಬಗ್ಗೆ ಅಲ್ಲ ಈ ಕಿಸ್ಬಾಯಿ ಕುಣಿಕೆ. ಗಮನಿಸಿ ನೋಡಿ, ಕೆಲವರು ಬರವಣಿಗೆಯಲ್ಲಾಗಲಿ, ಭಾಷಣಗಳಲ್ಲಾಗಲಿ, ಆಡು ಮಾತಿನಲ್ಲಾಗಲಿ ಏನೊಂದು ಹೊಸತಾಗಲಿ, ಸ್ವತಂತ್ರ ಚಿಂತನೆಯಾಗಲಿ ಇರುವುದಿಲ್ಲ. ಆ ಮಹಾಪುರುಷರು ಹಾಗೆ ಹೇಳಿದರು, ಈ ಮಹಾ ಪುರುಷರು ಹೀಗೆ ಹೇಳಿದರು. ಅಂಥಾ ಸಾಹಿತಿಗಳು ಹೀಗೆ ಬರೆದಿದ್ದಾರೆ, ಕವಿವಾಣಿ ಹೀಗೆ ಹೇಳುತ್ತದೆ ಎಂದು ಹೇಳುತ್ತಿರುತ್ತಾರೆ. ಒಂದೇ ಆಹಾರವನ್ನು ತಮಗೆ ಎದುರಾದವರಿಗೆ, ತರಗತಿಗಳಲ್ಲಿ, ವೇದಿಕೆಗಳಲ್ಲಿ, ಸಭೆಗಳಲ್ಲಿ; ಅವಕಾಶ ಸಿಕ್ಕಿದ ಕಡೆಯಲ್ಲೆಲ್ಲಾ ಜಗಿಯುತ್ತಲೇ ಇರುತ್ತಾರೆ.

ಬರೀ ಭಾಷಣಕಾರರು, ಬರಹಗಾರರು ಮಾತ್ರವಲ್ಲ. ಅಂತಹ ಮಾತುಗಳನ್ನು ರೂಢಿ ಬಲವಾಗಿಸಿಕೊಂಡು ತಾವಿರುವ ಕಡೆಯಲ್ಲೆಲ್ಲಾ ಆತ್ಮವಿಶ್ವಾಸ ಮತ್ತು ಅತಿರಂಜಿತವಾಗಿ ಹೇಳುತ್ತಾ ಹೋಗುವಂತಹ ಜನರು ಸಮಾಜದಲ್ಲಿ ಎಲ್ಲಾ ಕಡೆಯೂ ಕಾಣುತ್ತಿರುತ್ತಾರೆ. ಆದರೆ ನಿಜವಾದ ಮಾತು, ಹೊಸ ಆಲೋಚನೆ, ಪ್ರಾಮಾಣಿಕತೆಗಳನ್ನು ಮೌಲ್ಯವಾಗಿಟ್ಟುಕೊಂಡಾಗ, ಇಂಥ ಮಾತುಗಳು ಕಿರಿಕಿರಿ ಉಂಟುಮಾಡುತ್ತವೆ. ಅಪ್ರಾಯೋಗಿಕವಾದ ಮತ್ತು ಆಚರಣೆಯಲ್ಲಿ ಇಲ್ಲದ ಅಪ್ರಾಮಾಣಿಕ ಶಬ್ದಾಡಂಬರದ ಪ್ರದರ್ಶನ ಎಂದು ಅನ್ನಿಸುತ್ತದೆ.

ದೇವರು ಎಲ್ಲೆಡೆಯೂ ತಾನಿರಲಾರ ಎಂದು ತಾಯಿಯನ್ನು ಸೃಷ್ಟಿಸಿದ ಎಂದೋ, ತಾಯಿ ತಂದೆ ದೇವರು. ಮಗಳಿಗೆ ತಂದೆ ಎಂದರೆ ಮೊದಲ ಹೀರೋ; ಇತ್ಯಾದಿ ಚರ್ವಿತಾಚರ್ವಣದ ಪದಗಳೆಲ್ಲವೂ ಸವಕಳಿಯ ಪದಗಳು. ಇದನ್ನೇ ಕ್ಲೀಶೆ ಎನ್ನುವುದು. ಅವು ಹೊಸತನ ಕಳೆದುಕೊಂಡ ಪದಗಳು.

ಅದರಂತೆ ಯಾವುದೇ ಒಂದು ನಿರ್ದಿಷ್ಟ ವಿಷಯವನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ಹೇಳದೇ ಜಾಣತನದಿಂದ ಮೇಲೆ ಮೇಲೆ ಮಾತಾಡುವವರೂ ಉಂಟು. ತಾವೇ ಹೇಳುವ ವಿಷಯದ ಆಳವನ್ನು ಮತ್ತು ಎತ್ತರವನ್ನು ಗ್ರಹಿಸಿರುವುದಿಲ್ಲ. ಆದರೆ ಇಂಥಾ ಮಾತುಗಳನ್ನು ಆ ಮಹನೀಯರು ಹೇಳಿದರು, ಅಂತಹ ಮಹಾತ್ಮರು ಹೇಳಿದರು ಎಂದು ಹೇಳುತ್ತಲೇ ಇರುತ್ತಾರೆ. ಇಂತಹವನ್ನು ಪ್ಲಾಟಿಟ್ಯೂಡ್‌ಗಳು ಅಥವಾ ನುಣಿಚಿಕೆ ಎಂದು ಹೇಳಬಹುದು.

ಇನ್ನೂ ಕೆಲವರು ವ್ಯಕ್ತಿಗತವಾಗಿರುವ ಅನುಭವ, ಅರಿವು, ಅಸ್ತಿತ್ವಗಳನ್ನು ಮುನ್ನೆಲೆಗೆ ತರದೆ, ಇನ್ನೂ ಹೇಳಬೇಕೆಂದರೆ ಒತ್ತರಿಸುತ್ತಾ, ಎಲ್ಲರೂ ಸಾಮಾನ್ಯವಾಗಿ ಏನನ್ನು ಹೇಳುತ್ತಾರೋ ಅದನ್ನೇ ಹೇಳುತ್ತಾ ಹೋಗುವುದು.

‘‘ಅಪ್ಪ ಅಮ್ಮ ನಿಮ್ಮನ್ನು ಕಷ್ಟಪಟ್ಟು ಹೆತ್ತು ಹೊತ್ತು ಸಾಕಿರುತ್ತಾರೆ. ನೀವು ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಗುರು ಹಿರಿಯರಿಗೆ ವಿಧೇಯರಾಗಿರಬೇಕು’’ ಇತ್ಯಾದಿ ಮಾತುಗಳನ್ನು ಯಾರೂ ಇಲ್ಲ ಎನ್ನುವುದಿಲ್ಲ. ಅಂತಹವಕ್ಕೆ ಟ್ರೂಇಸಂಗಳು ಅಥವಾ ಸಾಮಾನ್ಯೀಕರಣಗಳು ಅಥವಾ ಎಲ್ಲರೂ ಒಪ್ಪಿಕೊಳ್ಳುವ ಸಾಮಾನ್ಯ ಸತ್ಯಗಳು ಅವಾಗಿರುತ್ತವೆ. ಆದರೆ ಸಾಮಾನ್ಯೀಕರಣ ಮಾಡುವ ಭರದಲ್ಲಿ ಮತ್ತೊಂದು ಮಗ್ಗುಲಿನ ಮಾನಸಿಕ, ಭಾವನಾತ್ಮಕ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಸನ್ನಿವೇಶಗಳಿಂದ ಸನ್ನಿವೇಶಗಳಿಗೆ ಹೊರತಾಗಿರುವಂತಹ ಅಂಶಗಳನ್ನು ಗಮನಿಸುವುದೂ ಇಲ್ಲ ಮತ್ತು ಗ್ರಹಿಸಲೂ ಯತ್ನಿಸುವುದಿಲ್ಲ. ಸಾಮಾನ್ಯೀಕರಣದ ಸಾಮಾನ್ಯ ಸಿದ್ಧ ತತ್ವಗಳನ್ನೇ ಎಲ್ಲದಕ್ಕೂ ಅನ್ವಯಿಸಲು ಪ್ರಯತ್ನಿಸುತ್ತಿರುತ್ತಾರೆ. ಇಂತಹವರೇ ಹೇಳುವುದು, ಪ್ರೀತಿ ಎಂದರೆ ತ್ಯಾಗ, ಪುತ್ರ ಶೋಕ ನಿರಂತರ, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಇತ್ಯಾದಿ ವಾಕ್ಯಗಳನ್ನೆಲ್ಲಾ ಸಾರ್ವತ್ರಿಕ ಸತ್ಯವೆಂದು ಹೇಳುವವರು ಕೂಡಾ ಕಿಸಬಾಯಿ ಕುಣಿಕೆಕಾರರೇ.

ಇಂಥವರು ಸಾಮಾನ್ಯವಾಗಿ ಸಂಪ್ರದಾಯಗಳನ್ನು ಕಟ್ಟಿಕೊಂಡವರು ಅಥವಾ ಕನ್ಫರ್ಮಿಸ್ಟುಗಳು. ಜನರಿಗೆ ಒಪ್ಪುವ ಸೇಫ್ ಮಾತುಗಳನ್ನೇ ಹಿಡಿದುಕೊಳ್ಳುವವರು. ಇನ್ನೂ ಕೆಲವರು ಜನಪ್ರಿಯರಾಗಬೇಕೆಂಬ ಇರಾದೆಯುಳ್ಳವರು. ಇವರನ್ನೇ ಪೀಪಲ್ ಪ್ಲೀಸರ್ಸ್ ಎನ್ನುವುದು. ಯಾರಿಗೂ ನೋವಾಗದಂತೆ ಮಾತ್ರ ಮಾತನಾಡುತ್ತಾ ಅಂದರಿಕಿ ಮಂಚಿವಾಳ್ಳು ಆಗುವವರು.

ಕಿ ಪ್ರಚಲಿತದಲ್ಲಿರುವ ನೈತಿಕತೆಯನ್ನೇ ಅವರು ಮಾತಾಡುತ್ತಾರೆ. ಸುಮ್ಮನೆ ಯಾಕೆ ಬೇಕು ತಲೆನೋವು ಅಂತ ಅವರ ಒಂದು ಆಲೋಚನೆ. ಏಕೆಂದರೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಒಡಂಬಡಿಕೆಗಳನ್ನು ಎತ್ತಿ ಹಿಡಿಯುವವರ ವಿರೋಧಗಳನ್ನು ಎದುರಿಸಬೇಕಾಗುತ್ತದೆ. ತನ್ನೊಂದಿಗೆ ಸಂಘರ್ಷಕ್ಕಿಳಿಯುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಈ ವಿವಾದ ತಪ್ಪಿಸುವವರು (Conflict-avoiders) ಸಮಸ್ಯೆ ಬರಬಾರದು ಎಂದು ಎಚ್ಚರಿಕೆಯಿಂದ ಇರುವವರು.

ಇನ್ನೂ ಕೆಲವರು ಸರ್ವಸಮ್ಮತ ಸಿದ್ಧಾಂತ ಮತ್ತು ಸಂಪ್ರದಾಯಗಳನ್ನು ಅನುಸರಿಸುವವರ ಕೃಪೆಗೆ ಪಾತ್ರರಾಗಿರುವಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ವಾಣಿಜ್ಯ ಸಿನೆಮಾ ನಟರು ಅಥವಾ ನಿರ್ದೇಶಕರುಗಳು ಈ ವಿಷಯದಲ್ಲಿ ಬಹಳ ಎಚ್ಚರಿಕೆಯನ್ನು ಹೊಂದಿರುತ್ತಾರೆ. ಬಹುಜನರ ದೃಷ್ಟಿಯಲ್ಲಿ ತಮ್ಮ ವ್ಯಕ್ತಿತ್ವದ ಚಿತ್ರಣ ಹೇಗಿರಬೇಕೆಂದು ಊಹಿಸಿಕೊಂಡು, ವಾಸ್ತವ ದಲ್ಲಿ ತಾವೇನೇ ಆಗಿದ್ದರೂ, ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳುವ ಇಮೇಜ್‌ಕಾನ್ಶಸ್ (Image-conscious) ವ್ಯಕ್ತಿಗಳು. ಇವರು ತಮ್ಮತನದ ನಿಜವಾದ ಪ್ರಕಟಣೆಗಿಂತ ತಮ್ಮನ್ನು ಗಮನಿಸುವ ಬಹುಜನರ ಪಾಲಿಗೆ ಒಳ್ಳೆಯದಾಗಿ ಕಾಣಿಸಿಕೊಳ್ಳಲು ಬಯಸುವವರು.

ಇವರೆಲ್ಲರೂ ಕೂಡಾ ಕಿಸ್ಬಾಯಿ ಕುಣಿಕೆಯ ಮಾತುಗಳನ್ನು ಆಡುವವರು. ಜನಪ್ರಿಯ ಒಗಟುಗಳು, ಸುಭಾಷಿತಗಳು, ನಾಣ್ಣುಡಿಗಳು, ಸೂಕ್ತಿಗಳು; ಇಂತಹವೆಲ್ಲಾ ಧಾರಾಳವಾಗಿ ಬರುತ್ತಿರುತ್ತವೆ.

ಮನಶಾಸ್ತ್ರೀಯವಾಗಿ ಇವರ ಸ್ವಭಾವವು ಎಂಥದ್ದೆಂದರೆ, ವಿರೋಧ ತಪ್ಪಿಸುವ ಸ್ವಭಾವ, ಟೀಕೆ ಅಥವಾ ಅಸಮ್ಮತಿ ಬರಬಾರದು ಎಂದು ಸೇಫ್ ಮಾತುಗಳನ್ನು ಮಾತ್ರ ಬಳಕೆ ಹಾಗೂ ಇತರರ ಒಪ್ಪಿಗೆಯ ಮೇಲೆ ಅವಲಂಬನೆ. ತಮ್ಮ ನಂಬಿಕೆ ಮತ್ತು ಗ್ರಹಿಕೆ ಬದಲಾಗಿ, ಜನರ ಮೆಚ್ಚುಗೆ ಮೇಲೆ ಬದುಕುವ ಸ್ವಭಾವ.

ಮುಖವಾಡದ ಜ್ಞಾನದ ಪ್ರವೃತ್ತಿಯಿಂದಾಗಿ ಸ್ವಂತ ಆಲೋಚನೆಯ ಬದಲು ಸಿದ್ಧಸಮಾಧಾನ ವಾದ ಉಲ್ಲೇಖಗಳಿಂದ ಜಾಣತನ ತೋರಿಸುವ ಸ್ವಭಾವ. ಇವರದ್ದು ರಕ್ಷಣಾತ್ಮಕ ಮನೋ ಭಾವವೂ ಹೌದು. ಕ್ಲೀಶೆಗಳ ಹಿಂದೆ ಅಡಗಿ, ಟೀಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಇವರದ್ದಾಗಿರುತ್ತದೆ.

ಸಾಮಾನ್ಯವಾಗಿ ಸ್ವತಂತ್ರ ಚಿಂತಕರಿಗೆ, ಅನ್ವೇಷಕರಿಗೆ ಇದರಿಂದ ಕಿರಿಕಿರಿ ಆಗುತ್ತದೆ. ಅವರದ್ದು ತೆರೆದ ಮನಸ್ಸಿನ ಮತ್ತು ಸತ್ಯಾಭಿಮುಖ ಸ್ವಭಾವದ್ದಾಗಿರುತ್ತದೆ. ಹಾಗಾಗಿ ಇವರಿಗೆ ಕಿಸ್ಬಾಯಿ ಕುಣಿಕೆಯ ಮಾತುಗಳು ಕೃತಕ ಮತ್ತು ನಕಲಿ. ಹಾಗೆಯೇ ಇಂತಹವರ ವಿರೋಧವನ್ನು ತಪ್ಪಿಸಲು, ಸಮಾಜಕ್ಕೆ ಹೊಂದಿಕೊಳ್ಳಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಕಿಸ್ಬಾಯಿ ಕುಣಿಕಾಕಾರರು ಕ್ಲೀಶೆ ಮತ್ತು ಪ್ಲಾಟಿಟ್ಯೂಡ್‌ಗಳನ್ನು ತಮ್ಮ ರಕ್ಷಣಾ ಕವಚವಾಗಿ ಬಳಸುವವರು.

share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X