ಒಂಟಿ

ಸಾಂದರ್ಭಿಕ ಚಿತ್ರ
ಒಂಟಿತನ ಸಾಕಾಗಿದೆ ಎಂದು ಪರಿತಪಿಸುವವರನ್ನು ಗಮನಿಸಿದ್ದೇನೆ. ಒಂಟಿಯಾಗಿರುವುದರ ಬಗ್ಗೆ ಎರಡು ಸಂಗತಿಗಳನ್ನು ಗಮನಿಸಬೇಕು. ಎಲ್ಲರೂ ಜೊತೆಗಿದ್ದು ಓರ್ವ ವ್ಯಕ್ತಿಯನ್ನು ಒಬ್ಬಂಟಿಯನ್ನಾಗಿಸಿ ಬಿಟ್ಟು ಹೋಗುವುದು ಒಂದಾದರೆ, ತಾವಾಗಿಯೇ ಒಂಟಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತೊಂದು. ಏಕಾಂಗಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಭಾವ ಕೌಶಲ್ಯ ಮತ್ತು ಆಳವಾದ ಒಳನೋಟಗಳಿರಬೇಕು. ಆಗಷ್ಟೇ ವ್ಯಕ್ತಿಯು ತಾತ್ವಿಕವಾಗಿ ಒಂಟಿಯಾಗಿದ್ದು ನೆಮ್ಮದಿಯಾಗಿರಬಲ್ಲ ಮತ್ತು ವೈಜ್ಞಾನಿಕವಾಗಿ ಆರೋಗ್ಯವಾಗಿಯೂ ಇರಬಲ್ಲ.
ಆಯ್ಕೆಯಿಂದಾಗುವುದಾದರೂ, ಜೊತೆಗಿದ್ದ ಯಾರಾದರೂ ಬಿಟ್ಟು ಬಿಡುವ ಅಥವಾ ಸಂಬಂಧಗಳು ಮುರಿದುಬಿದ್ದ ಕಾರಣದಿಂದಲಾದರೂ ಇರುವುದು ಒಂಟಿಯಾದರೂ ನಮಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಆಯ್ಕೆಯನ್ನು ಏಕಾಂಗಿತನವೆಂದೂ ಮತ್ತು ಅನಿವಾರ್ಯವಾಗಿ ಒಬ್ಬರೇ ಇರುವುದನ್ನು ಒಂಟಿತನವೆಂದೂ ಕರೆಯೋಣ.
ಒಂಟಿತನವೆಂಬುದು ನೋವಿನಿಂದ ಕೂಡಿದ ಭಾವನಾತ್ಮಕ ಒತ್ತಡವಾಗಿದ್ದು ಎಲ್ಲರ ಜೊತೆಯಲ್ಲಿ ಇದ್ದರೂ ಕೂಡಾ ಬೇರಾಗಿರುವಂತಹ ಭಾವ ಅವರಲ್ಲಿ ಇರುತ್ತದೆ. ಕೆಲವೊಮ್ಮೆ ದೈಹಿಕವಾಗಿಯೇ ದೂರವಿರಬಹುದು. ಇಂತಹ ಭಾವ ಮೆದುಳಿನಲ್ಲಿ ದಿಗಿಲು ಅಥವಾ ಬೆದರಿಕೆಯ ಕೇಂದ್ರವಾದ ಅಮಿಗ್ದಲವನ್ನು ಪ್ರೇರೇಪಿಸಿ ಕಾರ್ಟಿಸಲ್ ಎಂಬ ಒತ್ತಡದ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಒಳಿತನ್ನು ಪರಿಭಾವಿಸುವ ಡೊಪಮೈನ್ ಮತ್ತು ಸೆರೋಟೊನಿನ್ ಎಂಬ ರಾಸಾಯನಿಕ ದ್ರವ್ಯದ ಸ್ರವಿಸುವಿಕೆಯನ್ನು ಕಡಿಮೆ ಮಾಡಿಬಿಡುತ್ತದೆ. ಇಂತಹ ಒಂಟಿತನವು ಮುಂದುವರಿದಂತೆ ಆತಂಕ, ಖಿನ್ನತೆ ಉಂಟಾಗುವುದಲ್ಲದೆ ಅರಿವಿನ ಸಾಮರ್ಥ್ಯ ಕೂಡಾ ಇಳಿಮುಖವಾಗಬಹುದು.
ಅದೇ ಏಕಾಂಗಿತನವು ವ್ಯಕ್ತಿಯ ತನ್ನದೇ ಆಯ್ಕೆಯಾಗಿರುತ್ತದೆ. ಅದು ಮೆದುಳಿನ ಡಿಫಾಲ್ಟ್ ಮೋಡ್ ನೆಟ್ವರ್ಕನ್ನು ಜಾಗೃತಗೊಳಿಸುತ್ತದೆ. ಅದರಿಂದ ತನ್ನನ್ನು ತಾನು ಗಮನಿಸಿಕೊಳ್ಳುವ ಆತ್ಮಾವಲೋಕನ ಅಥವಾ ತನ್ನರಿವು ಉಂಟಾಗುತ್ತದೆ. ತನ್ನದೇ ನಡೆ ನುಡಿಗಳನ್ನು ಗಮನಿಸುವಂತಹ ಪ್ರಜ್ಞೆಯೂ ಬರುವುದು. ಬಹಳ ಮುಖ್ಯವಾಗಿ ಸೃಜನಶೀಲರೂ ಆಗುವರು.
ಸಾಮಾನ್ಯವಾಗಿ ತಮ್ಮ ಏಕಾಂಗಿತನವನ್ನು ಆನಂದಿಸುವವರು ಬಹಳ ಉನ್ನತ ಮಟ್ಟದ ಬುದ್ಧಿಮತ್ತೆಯನ್ನು ಹೊಂದಿದ್ದು, ಅದರ ಜೊತೆಗೆ ಸ್ವಪ್ರಜ್ಞೆ ಮತ್ತು ನಮ್ಯತೆ ಅಥವಾ ಸ್ಥಿತಿಸ್ಥಾಪಕತ್ವದ ಮನೋಗುಣವನ್ನು ಹೊಂದಿರುವ ಸಾಧ್ಯತೆಗಳಿರುತ್ತವೆ.
ಇನ್ನು ಜೈವಿಕವಾಗಿ ಅಥವಾ ದೈಹಿಕವಾಗಿ ಗಮನಿಸುವುದಾದರೆ, ಒಂಟಿತನದಲ್ಲಿರುವವರು ನಿದ್ರಾಹೀನತೆಯಿಂದ ಬಳಲುತ್ತಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ, ಸಕ್ಕರೆ ಕಾಯಿಲೆ, ಹೃದಯದ ಸಮಸ್ಯೆಗಳೂ ಕೂಡಾ ಕಾಣಬಹುದು. ನಿರಾಕರಣೆಗೆ ಒಳಗಾದ ಭಾವ ಅಥವಾ ಮುರಿದ ಸಂಬಂಧಗಳಿಂದಾಗಿ ವಿರಸ ಅಥವಾ ವಿರಹ ಅನುಭವ ಅವರಲ್ಲಿ ಒತ್ತಡವು ಉಂಟಾಗಿ ದೈಹಿಕ ಸಮಸ್ಯೆಗಳೂ ಉಂಟಾಗಬಹುದು.
ಅದೇ ಏಕಾಂತವನ್ನು ಪ್ರೀತಿಸುವ ಜನರ ನರವ್ಯೆಹದ ಚಟುವಟಿಕೆಗಳು ಸಮತೋಲನದಲ್ಲಿದ್ದು ದೇಹದಲ್ಲಿ ಉತ್ತಮ ಆರೋಗ್ಯವನ್ನು ಹೊಂದಿರಲು ಸಾಧ್ಯ. ತಮ್ಮ ಪಾಡಿಗೆ ತಾವು ಆನಂದದಿಂದ ಬರವಣಿಗೆಯಲ್ಲಿ, ತೋಟದ ಕೆಲಸಗಳಲ್ಲಿ, ಧ್ಯಾನ ಮತ್ತು ವ್ಯಾಯಾಮಗಳಂತಹ ಚಟುವಟಿಕೆಗಳಲ್ಲಿ ಅವರ ಆಕ್ಸಿಟೋಸಿನ್ ಎಂಬ ಬೆಸುಗೆಯ ಹಾರ್ಮೋನು ವೃದ್ಧಿಯಾಗುತ್ತದೆ. ಅವರ ಖುಷಿಯನ್ನೇ ಪಾರಿತೋಷಕವನ್ನಾಗಿ ಪಡೆಯಲು ಪ್ರೇರೇಪಿಸುವ ಡೊಪಾಮಿನೆರ್ಜಿಕ್ ಸಿಸ್ಟಂ ಆಗಿಂದಾಗ ಅವರಿಗೆ ಬಹುಮಾನಗಳನ್ನು ನೀಡುತ್ತಿರುತ್ತದೆ.
ವಾಸ್ತವವಾಗಿ ಏಕಾಂಗಿತನದಲ್ಲಿ ಸ್ವಾತಂತ್ರ್ಯವೂ, ನಿರಾಳತೆಯೂ ಮತ್ತು ಮುಕ್ತತೆಯೂ ಇದ್ದು ತನ್ನ ಪಾಡಿಗೆ ತಾನು ಆನಂದವಾಗಿರುವುದಕ್ಕೆ ಸಾಧ್ಯ. ಒಬ್ಬನೇ ಒಬ್ಬ ವ್ಯಕ್ತಿ ಜೊತೆಗಿದ್ದಾನೆಂದರೆ ತಾನಿರುವುದರಲ್ಲಿ ಮತ್ತು ಕಾಣಿಸಿಕೊಳ್ಳುವುದರಲ್ಲಿ ಅನಿವಾರ್ಯದ ಮುಸುಕು ಉಂಟಾಗುತ್ತದೆ. ಮನೆಯಲ್ಲಿ ಒಂಟಿಯಾಗಿರುವಾಗ ಬಟ್ಟೆಯನ್ನು ತೊಡುವಿಕೆಯಲ್ಲಿ ಯಾವ ಶಿಷ್ಟಾಚಾರವನ್ನು ಪಾಲಿಸದೆ ಸ್ವತಂತ್ರವಾಗಿರಬಹುದಾಗಿದ್ದು, ಅದೇ ಯಾರೇ ಒಬ್ಬರು ಇದ್ದಾರೆಂದರೆ ಅರೆನಗ್ನವಾಗಿ ಸ್ನಾನದ ಮನೆಯಿಂದ ಹೊರಗೆ ಬರಲಾಗುವುದಿಲ್ಲ. ಇದೊಂದು ಉದಾಹರಣೆಯಷ್ಟೇ, ಆದರೆ ಯಾರೊಬ್ಬರ ಜೊತೆಯಲ್ಲಿ ಇದ್ದ ಕೂಡಲೇ ಸ್ವಾತಂತ್ರ್ಯವು ಮೊಟಕಾಗುವುದಂತೂ ಹೌದು.
ಅಂತರ್ಮುಖಿ ಸದಾ ಸುಖಿ ಎನ್ನುತ್ತವೆ ತಾತ್ವಿಕ ಚಿಂತನೆಗಳು. ಹಿಂದೆ ಏಕಾಂತವನ್ನು ಅರಸಿ ಹೋಗುತ್ತಿದ್ದದ್ದೇ ತಾನು ಮುಕ್ತಾತ್ಮರಾಗಿರಲು, ಸ್ವತಂತ್ರವಾಗಿರಲು. ತನ್ನ ತಾನು ನೋಡಿಕೊಳ್ಳುವುದರಲ್ಲಿ, ತನ್ನಲ್ಲಿ ತಾನು ಅನ್ವೇಷಿಸಿಕೊಳ್ಳುವುದರಲ್ಲಿ ಒಂದು ಮಹದಾನಂದವಿರುತ್ತದೆ. ಇಂತಹ ಏಕಾಂಗಿತನವೆಂದರೆ ಅಥವಾ ಏಕಾಂತವೆಂದರೆ ವ್ಯಕ್ತಿಗಳ ಗೈರು ಹಾಜರಲ್ಲ. ಬದಲಿಗೆ ತನ್ನೊಂದಿಗೆ ತನ್ನತನದ ಹಾಜರಾತಿ.
ಯಾವುದೇ ವಿಷಯದಲ್ಲಿ ಅಧಿಕಾರಯುತವಾಗಿ ಜ್ಞಾನವನ್ನು ಸಂಪಾದಿಸಿಕೊಳ್ಳಲು, ತಿಳುವಳಿಕೆಯ ಪ್ರಕ್ರಿಯೆಯಲ್ಲಿ ಸಾಗಲು, ಸೃಜನಶೀಲವಾಗಿರಲು ಏಕಾಂಗಿತನವಂತೂ ಅತ್ಯಂತ ಸಂಭ್ರಮಪಡುವ ವಿಷಯ.
ಒಬ್ಬಂಟಿತನವೆಂಬುದು ಬೇಡದ್ದು. ಏಕಾಂತವು ಆಯ್ಕೆಯಾಗಿ ದ್ದರೂ ವ್ಯಕ್ತಿಗಳು ಒಬ್ಬಂಟಿತನವನ್ನೇ ಏಕಾಂಗಿತನ ವನ್ನಾಗಿ ಮಾಡಿಕೊಳ್ಳಲು ಸಾಧ್ಯ. ಅದು ಭಾವಕೌಶಲ್ಯ, ಮಾನಸಿಕ ತಂತ್ರ. ಇದರಿಂದ ಪರಾವಲಂಬಿಯಾಗಿದ್ದು ತನ್ನ ತಾನು ಮರುಕಕ್ಕೆ ಒಳಮಾಡಿಕೊಳ್ಳುವುದಕ್ಕಿಂತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಇದು ಮಾಡುವ ಸಂಕಲ್ಪ ಮತ್ತು ಪ್ರಜ್ಞಾಪೂರ್ವಕವಾಗಿ ತನ್ನನ್ನು ತಾನು ಚಿತ್ರಕಲೆ, ಕವನ ಬರೆಯುವುದು, ವ್ಯಾಯಾಮ ಮಾಡುವುದು, ಸಂಗೀತ ಕೇಳುವುದು, ತಮ್ಮ ಮುದ್ದಿನ ಪ್ರಾಣಿಗಳೊಂದಿಗೆ ಮಾತಾಡುವುದು; ಇಂತಹವೆಲ್ಲಾ ಏಕಾಂಗಿತನದಲ್ಲಿ ಉಡುಗೊರೆಗಳನ್ನು ಕೊಡುವಂತಹ ಚಟುವಟಿಕೆ ಗಳಾಗಿರುತ್ತವೆ. ಇವು ಏಕಾಂಗಿ ಯಾಗಿರುವ ವ್ಯಕ್ತಿಗೆ ಸಂತೋಷ ತರುವುದು ಮಾತ್ರವಲ್ಲ, ಅವರ ಚಟುವಟಿಕೆಗಳು ಉತ್ಪಾದಕವಾಗಿ ಮತ್ತು ರಚನಾತ್ಮಕವಾಗಿರುತ್ತದೆ.
ಈಗ ನಮ್ಮೊಡನೆ ಇರುವವರು ನಮ್ಮನ್ನು ತ್ಯಜಿಸಿದಾಗ, ಸಂಬಂಧ ಗಳನ್ನು ಮುರಿದುಕೊಂಡಾಗ, ಯಾವುದೇ ಕಾರಣಗಳಿಗೆ ಭಿನ್ನಾಭಿಪ್ರಾಯಗಳಿಂದ ದೂರ ಸರಿದಾಗ ಉಂಟಾಗುವ ಒಂಟಿತನವನ್ನು ಏಕಾಂಗಿತನಕ್ಕೆ ಬದಲಾಯಿಸಿಕೊಳ್ಳಲು ಸಾಧ್ಯ.
ವ್ಯಕ್ತಿ ಒಂಟಿಯಾದಾಗ ತನ್ನ ಮನಸ್ಸಿಗೆ ತಾನೇ ಅರಿವನ್ನು ಉಂಟುಮಾಡಿಕೊಳ್ಳಬೇಕು. ‘‘ಹೌದು, ನಾನೀಗ ಒಂಟಿಯಾದೆ. ಈ ಸಂದರ್ಭದಲ್ಲಿ ನನ್ನ ನಾನು ತಿಳಿದುಕೊಳ್ಳುತ್ತೇನೆ’’ ಎಂದು. ಏಕೆಂದರೆ ಜೊತೆಯಲ್ಲಿ ಇರುವವರೆಗೂ ಜೊತೆಗಾರರ ಅಭಿಪ್ರಾಯದಲ್ಲಿ ನಮ್ಮತನದ ವಿವರಣೆಯಾಗುತ್ತಿರುತ್ತದೆ. ಈಗ ಒಂಟಿಯಾಗಿರುವ ಸುವರ್ಣಾವಕಾಶದಲ್ಲಿ ನಾನು ನನ್ನತನವನ್ನು, ನನ್ನ ಇತಿಮಿತಿಗಳನ್ನು, ಸಾಮರ್ಥ್ಯಗಳನ್ನು ಕಂಡುಕೊಳ್ಳುತ್ತೇನೆ ಎಂಬುದರ ಅರಿವೇ ನಮ್ಮ ಒಂಟಿತನವನ್ನು ಏಕಾಂಗಿತನಕ್ಕೆ ಬದಲಿಸುವ ಮೊದಲ ಹೆಜ್ಜೆ.
ಅದುವರೆಗೂ ಗಮನಿಸದೇ ಇರುವಂತಹ ವಸ್ತುಗಳನ್ನು, ವಿಷಯಗಳನ್ನು, ಭಾವಗಳನ್ನು ಗುರುತಿಸುವುದು ಮತ್ತು ಗಮನಿಸುವುದು. ಬರೆಯುವುದು, ಆಕಾಶ, ಚಂದ್ರ, ನಕ್ಷತ್ರಗಳನ್ನು ಪ್ರಶಾಂತವಾಗಿ ನೋಡುವುದು; ಇವೆಲ್ಲಾ ಸಾಧ್ಯ. ನಿಜವಾದ ಪ್ರಶಾಂತತೆ ಉಂಟಾಗುವುದು ಏಕಾಂಗಿತನದಲ್ಲಿ. ಜೊತೆಯಲ್ಲಿ ಯಾವುದೇ ವ್ಯಕ್ತಿ ಏನನ್ನೇ ಮಾತಾಡದೆ, ಮಾಡದೇ ಇದ್ದರೂ ನಮ್ಮ ಮನಸ್ಸಿನಲ್ಲಿ ಗದ್ದಲ ಉಂಟಾಗುತ್ತದೆ.
ಯಾವುದೇ ತೀರ್ಮಾನಗಳನ್ನು ನೀಡದೆ, ವಾದಗಳನ್ನು ಮಾಡದೆ, ವಿರೋಧ ಪ್ರತಿರೋಧಗಳನ್ನು ಒಡ್ಡದೆ ಸಂವಾದಿಸುವ ಪ್ರಕೃತಿಯ ಜೊತೆ ಮಾತುಕತೆ ಹೊಂದುವ ಸೂಕ್ಷ್ಮತೆ ಮತ್ತು ಖುಷಿ ಏಕಾಂಗಿತನದಿಂದ ದೊರಕುತ್ತದೆ. ಅನಿವಾರ್ಯವಾಗಿಯೋ, ಆಯ್ಕೆಯಿಂದಲೋ ಒಂಟಿಯಾದಾಗ ತಮ್ಮನ್ನು ತಾವು ಪ್ರಾಮಾಣಿಕವಾಗಿ ಅಭಿವ್ಯಕ್ತಿಗೊಳಿಸಲು ಕಲೆ, ಸಾಹಿತ್ಯಗಳನ್ನು ಬಳಸಿಕೊಳ್ಳಲು ಸಾಧ್ಯ. ತನ್ನ ಅಂತರಂಗದ ಜಗತ್ತು ಅದೆಷ್ಟು ವಿಶಾಲ ಮತ್ತು ಪ್ರಶಾಂತವಾಗಿರುವುದಕ್ಕೆ ಯಾರಿಗೆ, ಯಾವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಬೇಕೋ ಆನಂದದಿಂದ ಸಲ್ಲಿಸೋಣ.