Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಮಾನ
  5. ಪಹಲ್ಗಾಮ್ ಪರೀಕ್ಷೆ

ಪಹಲ್ಗಾಮ್ ಪರೀಕ್ಷೆ

ರಾಮಚಂದ್ರ ಗುಹಾರಾಮಚಂದ್ರ ಗುಹಾ3 May 2025 10:44 AM IST
share
ಪಹಲ್ಗಾಮ್ ಪರೀಕ್ಷೆ
ಪಾಕಿಸ್ತಾನದ ನೆರವಿನಿಂದ ಭಯೋತ್ಪಾದಕರು ಕಾಶ್ಮೀರದಲ್ಲಿ ಭಾರತೀಯರು ಮತ್ತು ಹಿಂದೂಗಳು ಇಬ್ಬರೂ ಆಗಿರುವ ಪ್ರವಾಸಿಗರನ್ನು ನಿರ್ಲಜ್ಜವಾಗಿ ಹತ್ಯೆ ಮಾಡಿದ್ದಾರೆ. ಈ ಗಣರಾಜ್ಯದ ಭವಿಷ್ಯದ ಬಗ್ಗೆ ಕಾಳಜಿ ವಹಿಸುವ, ಅದರ ಸ್ಥಾಪಕ ಮೌಲ್ಯಗಳನ್ನು ಪಾಲಿಸುವ ಮತ್ತು ಎತ್ತಿಹಿಡಿಯುವ ನಾವು, ಧಾರ್ಮಿಕವಾಗಿ ಮುಸ್ಲಿಮರಾಗಿರುವ ಭಾರತೀಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ಮತ್ತು ಪೂರ್ಣ ಮತ್ತು ಸಮಾನ ನಾಗರಿಕರಾಗಿ ಪರಿಗಣಿಸುವ ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕಿದೆ.

ಮನುಷ್ಯನ ಭಾವನೆಗಳಲ್ಲಿ ಖಂಡಿತವಾಗಿಯೂ ಅತ್ಯಂತ ಉದಾತ್ತವಾದದ್ದು ದುರಂತದ ಮಧ್ಯೆ ಭರವಸೆಯನ್ನು ಕಂಡುಕೊಳ್ಳುವುದು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಪ್ರವಾಸಿಗರಲ್ಲಿ ಒಬ್ಬರು ಕೇರಳದ ಎನ್. ರಾಮಚಂದ್ರನ್. ಮನೆಗೆ ಹಿಂದಿರುಗಿದ ಬಳಿಕ ಅವರ ಮಗಳು ಆರತಿ ಶರತ್ ಅವರು ತನ್ನ ನೋವಿನ ಹಿನ್ನೆಲೆಯಲ್ಲಿ ಇಬ್ಬರು ಯುವಕರು ಮಾಡಿದ ಸಹಾಯದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದರು. ‘ದಿ ಹಿಂದೂ’ ಪತ್ರಿಕೆ ಆರತಿ ಶರತ್ ಹೇಳಿದ್ದನ್ನು ಉಲ್ಲೇಖಿಸಿದೆ: ‘‘ನಾನು ಬೆಳಗಿನ ಜಾವ 3 ಗಂಟೆಯವರೆಗೆ ಶವಾಗಾರದ ಹೊರಗೆ ನಿಂತಾಗಲೂ ಮುಸಾಫಿರ್ ಮತ್ತು ಇನ್ನೊಬ್ಬ ಸ್ಥಳೀಯ ಚಾಲಕ ಸಮೀರ್ ನನ್ನೊಂದಿಗಿದ್ದರು. ಅವರು ನನ್ನನ್ನು ತಂಗಿಯಂತೆ ನೋಡಿಕೊಂಡರು. ಕಾಶ್ಮೀರ ಈಗ ನನಗೆ ಇಬ್ಬರು ಸಹೋದರರನ್ನು ನೀಡಿದೆ.’’

ಇತರ ಪತ್ರಿಕೆಗಳಲ್ಲಿನ ವರದಿಗಳು ದೃಢಪಡಿಸುವಂತೆ, ಮುಸಾಫಿರ್ ಮತ್ತು ಸಮೀರ್ ಇಡೀ ಕಾಶ್ಮೀರ ಹಲವಾರು ಮುಗ್ಧ ಜೀವಗಳನ್ನು ಬಲಿತೆಗೆದುಕೊಂಡ ಅನಾಗರಿಕತೆಗೆ ಹೇಗೆ ಪ್ರತಿಕ್ರಿಯಿಸಿತು ಎಂಬುದರ ಸಂಪೂರ್ಣ ಪ್ರತಿನಿಧಿಗಳಾಗಿದ್ದಾರೆ. ದಾಳಿಯ ಸ್ಥಳದಲ್ಲಿದ್ದ ಹಲವಾರು ಪ್ರವಾಸಿಗರನ್ನು ಅವರ ಕಾಶ್ಮೀರಿ ಮಾರ್ಗದರ್ಶಕರು ಸುರಕ್ಷಿತವಾಗಿ ಕರೆದೊಯ್ದರು. ಇತರರಂತೆ ಮುಸ್ಲಿಮ್ ಧರ್ಮದವರಾಗಿದ್ದ ಈ ಮಾರ್ಗದರ್ಶಕರಲ್ಲಿ ಕನಿಷ್ಠ ಒಬ್ಬರನ್ನು ಭಯೋತ್ಪಾದಕರು ಕೊಂದರು. ಪ್ರವಾಸಿಗರು ಭಯಭೀತರಾಗಿ ಪಲಾಯನ ಮಾಡಲು ಪ್ರಯತ್ನಿಸಿದಾಗ, ಹೋಟೆಲ್ ಬುಕಿಂಗ್ ಮಾಡದವರಿಗೆ ಆಶ್ರಯ ನೀಡಲು ಧರ್ಮಗುರುಗಳು ಮಸೀದಿಗಳನ್ನು ತೆರೆದರು. ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೋಗಲು ಬಯಸುವ ಪ್ರಯಾಣಿಕರಿಂದ ಹಣ ತೆಗೆದುಕೊಳ್ಳಲು ಟ್ಯಾಕ್ಸಿ ಚಾಲಕರು ನಿರಾಕರಿಸಿದರು.

ದಾಳಿಯ ಮರುದಿನ, ಕಾಶ್ಮೀರದಲ್ಲಿ ಸಂಪೂರ್ಣ ಹರತಾಳ ನಡೆಯಿತು. ಅಂಗಡಿಗಳು, ಹೋಟೆಲ್‌ಗಳು, ಶಾಲೆಗಳು, ಕಾಲೇಜುಗಳು ಎಲ್ಲವೂ ಮುಚ್ಚಲ್ಪಟ್ಟಿದ್ದವು. ಹಿಂಸಾಚಾರದ ಬಲಿಪಶುಗಳಿಗೆ ಸಹಾನುಭೂತಿ ವ್ಯಕ್ತಪಡಿಸಲಾಯಿತು. ಎಲ್ಲಾ ರಾಜಕೀಯ ಪಕ್ಷಗಳು ಗಡಿಯಾಚೆಯ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಖಂಡಿಸಿ ರ್ಯಾಲಿಗಳನ್ನು ನಡೆಸಿದವು.

ಈ ಇತಿಹಾಸಕಾರನಿಗೆ, ದಾಳಿಯ ನಂತರದ ಘಟನೆ ಸ್ವಾತಂತ್ರ್ಯ ಮತ್ತು ವಿಭಜನೆಯ ನಂತರ ಕಣಿವೆಯ ಮೇಲೆ ಪಾಕಿಸ್ತಾನ ಪ್ರಾರಂಭಿಸಿದ ಮೊದಲ ದಾಳಿಯ ನಂತರ ಕಾಶ್ಮೀರಿಗಳು ತೋರಿಸಿದ್ದ ಇದೇ ರೀತಿಯ ಅನುಕರಣೀಯ ನಡವಳಿಕೆಯನ್ನು ನೆನಪಿಸಿತು. ನಂತರ, 1947ರಲ್ಲಿ ಎಲ್ಲೆಡೆ, ವಿಶೇಷವಾಗಿ ಪೂರ್ವ ಮತ್ತು ಪಶ್ಚಿಮ ಪಂಜಾಬ್‌ನಲ್ಲಿ ನಡೆದ ಘೋರ ರಕ್ತಪಾತದ ನಡುವೆ ಕಾಶ್ಮೀರ ಕೋಮು ಸಾಮರಸ್ಯದ ಸ್ವರ್ಗವಾಗಿತ್ತು. ಏಕೆಂದರೆ ಮುಸ್ಲಿಮರು, ಹಿಂದೂಗಳು ಮತ್ತು ಸಿಖ್ಖರು ಎಲ್ಲರೂ ಆಕ್ರಮಣಕಾರರ ವಿರುದ್ಧ ಒಗ್ಗಟ್ಟಿನಿಂದ ನಿಂತಿದ್ದರು.

ಹಿಂದೂಗಳನ್ನು ಗುರಿಯಾಗಿಸಿ ಕೊಲ್ಲುವ ಮೂಲಕ ಭಯೋತ್ಪಾದಕರು ಭಾರತದಾದ್ಯಂತ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಧ್ರುವೀಕರಿಸಲು ಬಯಸಿದರು ಎಂಬುದರಲ್ಲಿ ಸಂದೇಹವಿಲ್ಲ. ಈ ಉದ್ದೇಶದಲ್ಲಿ ಅವರು ಕಡೇಪಕ್ಷ ಕಾಶ್ಮೀರದ ವಿಷಯದಲ್ಲಿ ವಿಫಲರಾಗಿದ್ದಾರೆ. ಈಗ ನಮ್ಮ ದೇಶದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಎಲ್ಲರಿಗೂ ಇದೇ ರೀತಿಯ ಸನ್ನಿವೇಶ ಎದುರಾಗಿದೆ.

ಇಲ್ಲಿಯವರೆಗಿನ ಚಿಹ್ನೆಗಳು ಆಶಾದಾಯಕವಾಗಿಲ್ಲ. ರಾಜಸ್ಥಾನದಲ್ಲಿ, ಬಿಜೆಪಿ ಶಾಸಕರೊಬ್ಬರು ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಸೀದಿಗೆ ಪ್ರವೇಶಿಸಿ, ಜೈ ಶ್ರೀ ರಾಮ್ ಎಂದು ಕೂಗುತ್ತಾ, ಆವರಣದಲ್ಲಿ ಪಾಕಿಸ್ತಾನ ಮುರ್ದಾಬಾದ್ ಎಂಬ ಫಲಕ ಇರಿಸಿದರು. ಅಸ್ಸಾಮಿನಲ್ಲಿ, ಬಿಜೆಪಿ ಮುಖ್ಯಮಂತ್ರಿ ತಮ್ಮ ಆಡಳಿತ ಭಾರತ ವಿರೋಧಿ ಎಂದು ಹೇಳಿದ ರಾಜಕೀಯ ಪ್ರತಿಸ್ಪರ್ಧಿಗಳ ಬಂಧನಕ್ಕೆ ಮುಂದಾದರು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಇದೇ ರೀತಿಯ ಆರೋಪಗಳನ್ನು ಮಾಡಿದರು. ಮಧ್ಯಪ್ರದೇಶದಲ್ಲಿ, ಮುಸ್ಲಿಮ್ ಧರ್ಮದ ಕಾಂಗ್ರೆಸ್ ಶಾಸಕರೊಬ್ಬರಿಗೆ ಜೀವ ಬೆದರಿಕೆ ಹಾಕಲಾಯಿತು. ಗುಜರಾತ್‌ನಲ್ಲಿ, ಪೊಲೀಸರು ಒಳನುಸುಳಿದವರು ಎಂದು ಹೇಳಿಕೊಂಡ ಜನರನ್ನು ಸುತ್ತುವರಿದರು. ಅವರಲ್ಲಿ ನೂರಾರು ಮಂದಿ ನಿಜವಾದ ಭಾರತೀಯ ನಾಗರಿಕರಿದ್ದರು.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ, ಬಲಪಂಥೀಯ ಗೂಂಡಾಗಳು ಕಾಶ್ಮೀರಿ ವಿದ್ಯಾರ್ಥಿಗಳನ್ನು ತಮ್ಮ ಹಾಸ್ಟೆಲ್‌ಗಳನ್ನು ತೊರೆಯುವಂತೆ, ಅವರ ಶಿಕ್ಷಣ ಸ್ಥಗಿತಗೊಳಿಸಿ ಕಣಿವೆಗೆ ಮರಳುವಂತೆ ಬಲವಂತ ಮಾಡಿದ್ದಾರೆ. ಮಸ್ಸೂರಿಯಲ್ಲಿ, ಕಾಶ್ಮೀರಿ ಶಾಲು ಮಾರಾಟಗಾರರು ತಮ್ಮ ವ್ಯಾಪಾರ ಬಿಟ್ಟು ಮನೆಗೆ ಹಿಂದಿರುಗಬೇಕಾಯಿತು. ಈ ನಡುವೆ, ಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರದಲ್ಲಿಯೇ ಕೇಂದ್ರ ಸರಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಬಂಧನಗಳು ಮತ್ತು ಮನೆಗಳನ್ನು ಧ್ವಂಸಗೊಳಿಸುವ ಘಟನೆಗಳು ನಡೆದಿವೆ. ಇದರಲ್ಲಿ ಕೆಲವು ಅಥವಾ ಹಲವಾರು ಭಯೋತ್ಪಾದನೆಗೆ ಯಾವುದೇ ಸಂಬಂಧವಿಲ್ಲದ ನಿರಪರಾಧಿಗಳು ಬಳಲುತ್ತಿರುವ ಸಾಧ್ಯತೆಯಿದೆ.

ದುರಂತದ ನಂತರ ಪ್ರಧಾನಿಯವರ ಮೊದಲ ಸಾರ್ವಜನಿಕ ಭಾಷಣ ಬಿಹಾರದಲ್ಲಿ ನಡೆದಿರುವುದು ನಿರಾಶಾದಾಯಕವಾಗಿತ್ತು. ಈ ರಾಜ್ಯದಲ್ಲಿ ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವುದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಆ ಭಾಷಣದಲ್ಲಿ ಮತ್ತು ನಂತರ ‘ಮನ್ ಕಿ ಬಾತ್’ ಭಾಷಣದಲ್ಲಿ ಮೋದಿ ಅವರು ಭಾರತೀಯರು ಯಾವುದೇ ಭಾಷೆಯನ್ನು ಮಾತನಾಡುತ್ತಿದ್ದರೂ ಭಯೋತ್ಪಾದನೆಯನ್ನು ಖಂಡಿಸುವಲ್ಲಿ ಒಗ್ಗಟ್ಟಿನಿಂದ ಇರುವುದನ್ನು ಉಲ್ಲೇಖಿಸಿದರು. ನಮ್ಮ ದೇಶವನ್ನು ಪ್ರತ್ಯೇಕಿಸುವ ಧರ್ಮದ ಬಹುತ್ವವನ್ನು ಅಂಗೀಕರಿಸುವುದು ಮತ್ತು ಪ್ರಶಂಸಿಸುವುದು ಹೆಚ್ಚು ರಾಜತಾಂತ್ರಿಕ ವಿಧಾನವಾಗುತ್ತಿತ್ತು. ಕಾಶ್ಮೀರಿಗಳು ಸ್ಥಳದಲ್ಲಿಯೇ ನಡೆದುಕೊಂಡ ರೀತಿಯನ್ನು ಶ್ಲಾಘಿಸುತ್ತಾ ನೋಡಿದಾಗ, ಈ ಲೋಪ ವಿಶೇಷವಾಗಿ

ದುಃಖಕರವಾಗಿತ್ತು. ಪ್ರಧಾನ ಮಂತ್ರಿಗಳಿಗೆ ಇದರ ಬಗ್ಗೆ ತಿಳಿದಿರಲಿಲ್ಲವೆಂಬುದು ನಿಸ್ಸಂಶಯ. ಅಂತಿಮವಾಗಿ, ಭಯೋತ್ಪಾದಕ ದಾಳಿಯ ಕುರಿತು ಚರ್ಚಿಸಲು ನಡೆದ ಸರ್ವಪಕ್ಷ ಸಭೆಗೂ ಹಾಜರಾಗದ ಮೋದಿಯವರ ನಿರ್ಧಾರ ಪ್ರಜಾಪ್ರಭುತ್ವ ಕಾರ್ಯವಿಧಾನದ ಬಗ್ಗೆ ಗೌರವದ ಕೊರತೆಯನ್ನು ತೋರಿಸಿತು.

ಪ್ರಧಾನಿಯವರ ಬಹುತ್ವವು ಆಯ್ದುಕೊಂಡದ್ದಾಗಿದೆ. ಅದು ಭಾಷೆಯನ್ನು ಒಳಗೊಂಡಿದೆ, ಆದರೆ ಧರ್ಮವನ್ನು ಒಳಗೊಂಡಿಲ್ಲ. (ಇತರ ಬಿಜೆಪಿ ನಾಯಕರು ಇನ್ನೂ ಹೆಚ್ಚು ಸಂಕುಚಿತ ಮನಸ್ಸಿನವರು; ಅವರಿಗೆ, ಹಿಂದಿ ಭಾರತದ ಸರ್ವೋಚ್ಚ ಭಾಷೆಯಾಗಿದೆ, ಹಾಗೆಯೇ ಹಿಂದೂ ಧರ್ಮ ಶ್ರೇಷ್ಠ ಧರ್ಮವಾಗಿದೆ.) ಪಹಲ್ಗಾಮ್‌ನಲ್ಲಿ ನಡೆದ ಬರ್ಬರ ದಾಳಿಯ ನಂತರ ಎಲ್ಲಾ ಭಾರತೀಯರು ಧರ್ಮವನ್ನು ಲೆಕ್ಕಿಸದೆ ಒಗ್ಗಟ್ಟಿನಿಂದ ನಿಂತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದು ನೋಡಿ ನನಗೆ ತುಂಬಾ ಸಂತೋಷವಾಯಿತು.

ಗಡಿಯಾಚೆಯಿಂದ ಯೋಜಿಸಲಾದ ಹಿಂದಿನ ಭಯೋತ್ಪಾದಕ ದಾಳಿಗಳಂತೆ ಇದು ಕೂಡ ಎರಡು ವಿಭಿನ್ನ ಪರೀಕ್ಷೆಗಳನ್ನು ಒಡ್ಡುತ್ತದೆ. ಒಂದು ಭಾರತ ಸರಕಾರಕ್ಕೆ. ಇನ್ನೊಂದು, ಭಾರತದ ಜನರಿಗೆ. ಯುದ್ಧಕ್ಕೆ ಹೇಗೆ ಮತ್ತು ಯಾವಾಗ ಹೋಗಬೇಕು ಎಂಬುದರ ಕುರಿತು ಸಲಹೆ ನೀಡಲು ಸಿದ್ಧರಿರುವ ಹೊಸದಿಲ್ಲಿಯಲ್ಲಿರುವ ವೃತ್ತಪತ್ರಿಕೆ ಅಂಕಣಕಾರರು ಮತ್ತು ದೂರದರ್ಶನ ನಿರೂಪಕರಂತೆ ನನಗೆ ಈ ವಿಷಯದಲ್ಲಿ ಯಾವುದೇ ಸ್ವಂತಿಕೆ ಅಥವಾ ಮೌಲಿಕ ಅಭಿಪ್ರಾಯಗಳಿವೆ ಎಂದು ನಾನು ನಂಬುವುದಿಲ್ಲ. ಭಾರತ ಸರಕಾರ ಹೇಗೆ ಪ್ರತಿಕ್ರಿಯಿಸಬೇಕು, ಭಯೋತ್ಪಾದನೆಗೆ ಪಾಕಿಸ್ತಾನ ಸರಕಾರ ನೀಡಿದ ಮೌನ ಮತ್ತು ಬಹಿರಂಗ ಬೆಂಬಲಕ್ಕಾಗಿ ಅದನ್ನು ಶಿಕ್ಷಿಸಲು ಯಾವ ರಾಜತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಕ್ರಮಗಳನ್ನು ನಿಖರವಾಗಿ ತೆಗೆದುಕೊಳ್ಳಬೇಕು ಎಂಬುದು ನನ್ನ ಪರಿಣತಿಗೆ ಮೀರಿದ್ದು. ಆದರೂ, ಪ್ರಜಾಪ್ರಭುತ್ವ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳ ರಕ್ಷಕನಾಗಿ, ನನ್ನ ಸಹ ನಾಗರಿಕರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ನನಗೆ ಅಭಿಪ್ರಾಯಗಳಿವೆ.

ಇವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಭಿಪ್ರಾಯಗಳೊಂದಿಗೆ ಸಾಮಾನ್ಯವಾಗಿ ಹೊಂದಿಕೆಯಾಗುತ್ತವೆ. 1947ರ ಅಕ್ಟೋಬರ್ 15ರಂದು, ವಿಭಜನೆಯ ಎರಡು ತಿಂಗಳ ನಂತರ ನೆಹರೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೀಗೆ ಬರೆದರು: ‘ನಮ್ಮಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರು ತುಂಬಾ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರು ಬಯಸಿದರೂ ಬೇರೆಡೆಗೆ ಹೋಗಲು ಸಾಧ್ಯವಿಲ್ಲ. ಅವರು ಭಾರತದಲ್ಲಿ ವಾಸಿಸಬೇಕು. ಪಾಕಿಸ್ತಾನದಿಂದ ಏನೇ ಪ್ರಚೋದನೆ ಬಂದರೂ ಮತ್ತು ಅಲ್ಲಿನ ಮುಸ್ಲಿಮೇತರರ ಮೇಲೆ ಏನೇ ಅವಮಾನಗಳು ಮತ್ತು ಭಯಾನಕತೆಗಳು ಉಂಟಾದರೂ, ನಾವು ಈ ಅಲ್ಪಸಂಖ್ಯಾತರನ್ನು ನಾಗರಿಕವಾಗಿ ಕಾಣಬೇಕಾಗಿದೆ. ನಾವು ಅವರಿಗೆ ಪ್ರಜಾಸತ್ತಾತ್ಮಕ ದೇಶದಲ್ಲಿ ಭದ್ರತೆ ಮತ್ತು ನಾಗರಿಕರ ಹಕ್ಕುಗಳನ್ನು ನೀಡಬೇಕು’.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ನೆಹರೂ ಅವರನ್ನು ಬಹಳ ಅಪಾರ್ಥ ಮಾಡಿಕೊಳ್ಳಲಾಗಿದೆ, ನಿಂದಿಸಲಾಗಿದೆ. ಈ ಹಿಂದಿನ ಟೀಕೆಗಳಲ್ಲಿ ಕೆಲವು ಅರ್ಹವಾದವಿವೆ. ಉದಾಹರಣೆಗೆ, ಪ್ರಧಾನಿಯಾಗಿ ನೆಹರೂ 1950ರ ದಶಕದ ಅಂತ್ಯದ ವೇಳೆಗೆ ಆರ್ಥಿಕತೆಯ ಮೇಲಿನ ಹಿಡಿತವನ್ನು ಬಿಡಿಸಲು ಪ್ರಾರಂಭಿಸಬೇಕಿತ್ತು (ಆ ಹೊತ್ತಿಗೆ ಅದು ಸ್ಪಷ್ಟವಾಗಿ ಪ್ರತಿಕೂಲ ಫಲಿತಾಂಶ ನೀಡಿತ್ತು) ಮತ್ತು ಅವರು ಚೀನಾವನ್ನು ಅಷ್ಟು ಮುಗ್ಧವಾಗಿ ನಂಬಬಾರದಿತ್ತು. ಮತ್ತೊಂದೆಡೆ, ಭಾರತೀಯರಿಗೆ ಈಗ ಅವರ ದೃಢವಾದ, ರಾಜಿಯಾಗದ, ಧಾರ್ಮಿಕ ಮತ್ತು ಭಾಷಾ ಬಹುತ್ವದ ರಕ್ಷಣೆಯ ಅಗತ್ಯವಿದೆ.

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಇತ್ತೀಚಿನ ವಾರಗಳಲ್ಲಿ ಮಾಡಿದ ಕೆಲವು ಹೇಳಿಕೆಗಳನ್ನು ಉಲ್ಲೇಖಿಸುವುದರಿಂದ ಈ ವಿಷಯದಲ್ಲಿ ನೆಹರೂ ಅವರ ಶಾಶ್ವತ ಪ್ರಸ್ತುತತೆ ಉತ್ತಮವಾಗಿ ಸ್ಪಷ್ಟವಾಗುತ್ತದೆ. ಭಯೋತ್ಪಾದನಾ ದಾಳಿಗೆ ಕೆಲವು ದಿನಗಳ ಮೊದಲು, ‘‘ಕಾಶ್ಮೀರ ಪಾಕಿಸ್ತಾನದ ಕತ್ತಿನ ರಕ್ತನಾಳ’’ ಎಂದು ಈ ವ್ಯಕ್ತಿ ಹೇಳಿದ್ದರು. ಭಾರತೀಯ ಪ್ರವಾಸಿಗರ ಹತ್ಯೆಯ ಕೆಲವು ದಿನಗಳ ನಂತರ ಅವರು ಪಾಕಿಸ್ತಾನಿ ಮಿಲಿಟರಿ ಅಕಾಡಮಿಯ ಪದವಿ ಪಡೆದ ಕೆಡೆಟ್‌ಗಳಿಗೆ, ‘‘ದ್ವಿರಾಷ್ಟ್ರ ಸಿದ್ಧಾಂತ, ಮುಸ್ಲಿಮರು ಮತ್ತು ಹಿಂದೂಗಳು ಎರಡು ಪ್ರತ್ಯೇಕ ರಾಷ್ಟ್ರಗಳು, ಒಂದಲ್ಲ ಎಂಬ ಮೂಲಭೂತ ನಂಬಿಕೆಯನ್ನು ಆಧರಿಸಿದೆ’’ ಎಂದು ಹೇಳಿದರು. ಧರ್ಮ, ಪದ್ಧತಿಗಳು, ಸಂಪ್ರದಾಯಗಳು, ಚಿಂತನೆ ಮತ್ತು ಆಕಾಂಕ್ಷೆಗಳು ಹೀಗೆ ಜೀವನದ ಎಲ್ಲಾ ಅಂಶಗಳಲ್ಲಿ ಮುಸ್ಲಿಮರು ಹಿಂದೂಗಳಿಗಿಂತ ಭಿನ್ನರು ಎಂದು ಅವರು ಮತ್ತಷ್ಟು ಒತ್ತಿ ಹೇಳಿದರು.

ಈಗ ತಿಳಿದಿರುವಂತೆ, ವಿ.ಡಿ. ಸಾವರ್ಕರ್ ಅವರಂತಹ ಹಿಂದೂ ಬಲಪಂಥೀಯ ಸಿದ್ಧಾಂತಿಗಳು ಈ ರೀತಿಯ ಚಿಂತನೆಯನ್ನು ಸಂಪೂರ್ಣವಾಗಿ ಅನುಕರಿಸಿದರು. ಅವರು ಎರಡು ರಾಷ್ಟ್ರಗಳ ಸಿದ್ಧಾಂತದ ತಮ್ಮದೇ ಆದ ಆವೃತ್ತಿಯನ್ನು ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಚಿಂತನೆ ಮತ್ತು ಇರುವಿಕೆಯ ವಿಧಾನಗಳಲ್ಲಿ ಪ್ರತ್ಯೇಕವಾಗಿ ಮತ್ತು ವಿಭಿನ್ನರಾಗಿದ್ದಾರೆಂದು ಅವರು ಭಾವಿಸಿದ್ದರು. ಹಿಂದೂಗಳು ಮತ್ತು ಮುಸ್ಲಿಮರು ಒಡನಾಟದಿಂದ, ಶಾಂತಿಯುತವಾಗಿ ಮತ್ತು ಸಮಾನವಾಗಿ ಒಂದೇ ರಾಜಕೀಯ ಅಥವಾ ಪ್ರಾದೇಶಿಕ ಘಟಕದಲ್ಲಿ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡರು. ವಿಭಜನೆಯ ನಂತರದ ಭಾರತದಲ್ಲಿ ಬಹಳಷ್ಟು ಮುಸ್ಲಿಮರು ವಾಸಿಸುತ್ತಿರುವ ಇಂದಿನ ಪರಿಸ್ಥಿತಿಗೆ ಮಾರ್ಪಟ್ಟರೆ, ಹಿಂದುತ್ವ ಸಿದ್ಧಾಂತವು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದೂಗಳಿಗೆ ಅಧೀನರಾಗುವ ಮೂಲಕ ಮಾತ್ರ ಅವರು ಹಾಗೆ ಮಾಡಬಹುದು ಎಂದು ಒತ್ತಾಯಿಸುತ್ತದೆ.

ಈ ಹಾನಿಕಾರಕ, ಧ್ರುವೀಕರಣದ, ಆಲೋಚನಾ ವಿಧಾನದ ವಿರುದ್ಧ ಜವಾಹರಲಾಲ್ ನೆಹರೂ ದೃಢವಾಗಿ ನಿಂತರು. ವಿಭಜನೆಯ ನಂತರದ ಮೊದಲ ಕೆಲವು ತಿಂಗಳುಗಳಲ್ಲಿ, ಪಾಕಿಸ್ತಾನ ತನ್ನ ಮುಸ್ಲಿಮೇತರ ನಾಗರಿಕರ ವಿರುದ್ಧ ಅವಮಾನ ಮತ್ತು ಭಯಾನಕತೆಯನ್ನು ಹೇರಲು ದೃಢನಿಶ್ಚಯ ಮಾಡಿದಾಗ, ನೆಹರೂ ಭಾರತದಲ್ಲಿನ ತಮ್ಮ ಸರಕಾರ ಮುಸ್ಲಿಮ್ ಅಲ್ಪಸಂಖ್ಯಾತರೊಂದಿಗೆ ನಾಗರಿಕ ರೀತಿಯಲ್ಲಿ ವ್ಯವಹರಿಸಬೇಕು ಮತ್ತು ಅವರಿಗೆ ಭದ್ರತೆ ಮತ್ತು ನಾಗರಿಕರ ಹಕ್ಕುಗಳನ್ನು ನೀಡಬೇಕು ಎಂದು ಪ್ರತಿಪಾದಿಸಿದ್ದರು. ಈಗ, ಪಾಕಿಸ್ತಾನದ ನೆರವಿನಿಂದ ಭಯೋತ್ಪಾದಕರು ಕಾಶ್ಮೀರದಲ್ಲಿ ಭಾರತೀಯರು ಮತ್ತು ಹಿಂದೂಗಳು ಇಬ್ಬರೂ ಆಗಿರುವ ಪ್ರವಾಸಿಗರನ್ನು ನಿರ್ಲಜ್ಜವಾಗಿ ಹತ್ಯೆ ಮಾಡಿದ್ದಾರೆ. ಈ ಗಣರಾಜ್ಯದ ಭವಿಷ್ಯದ ಬಗ್ಗೆ ಕಾಳಜಿ ವಹಿಸುವ, ಅದರ ಸ್ಥಾಪಕ ಮೌಲ್ಯಗಳನ್ನು ಪಾಲಿಸುವ ಮತ್ತು ಎತ್ತಿಹಿಡಿಯುವ ನಾವು, ಧಾರ್ಮಿಕವಾಗಿ ಮುಸ್ಲಿಮರಾಗಿರುವ ಭಾರತೀಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ಮತ್ತು ಪೂರ್ಣ ಮತ್ತು ಸಮಾನ ನಾಗರಿಕರಾಗಿ ಪರಿಗಣಿಸುವ ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕಿದೆ.

share
ರಾಮಚಂದ್ರ ಗುಹಾ
ರಾಮಚಂದ್ರ ಗುಹಾ
Next Story
X