ತುರ್ತು ಪರಿಸ್ಥಿತಿಯ ದಿನಗಳು

ತುರ್ತು ಪರಿಸ್ಥಿತಿ ಘೋಷಣೆಯ 50ನೇ ವಾರ್ಷಿಕೋತ್ಸವ ಈ ತಿಂಗಳಲ್ಲಿ ಬರುತ್ತದೆ. ಇತಿಹಾಸದ ಆ ಕರಾಳ ಅವಧಿಯ ಬಗ್ಗೆ ನಾನು ನನ್ನ ‘India after Gandhi’ ಪುಸ್ತಕದಲ್ಲಿ ಬರೆದಿದ್ದೇನೆ. ಆಸಕ್ತರು ಈ ವಿಷಯದ ಬಗ್ಗೆ ಇತರ ವಿದ್ವಾಂಸರಾದ ಎಮ್ಮಾ ಟಾರ್ಲೋ, ಗ್ಯಾನ್ ಪ್ರಕಾಶ್, ಕ್ರಿಸ್ಟೋಫ್ ಜಾಫ್ರೆಲಾಟ್, ಪ್ರತಿನವ್ ಅನಿಲ್ ಮತ್ತು ಇತ್ತೀಚೆಗೆ ಬಂದಿರುವ ಸುಗತ ಶ್ರೀನಿವಾಸರಾಜು ಅವರ ಪುಸ್ತಕಗಳನ್ನೂ ಓದಬಹುದು. ಈ ಅಂಕಣದಲ್ಲಿ, ದಿಲ್ಲಿಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಾನು ತುರ್ತು ಪರಿಸ್ಥಿತಿಯನ್ನು ಹೇಗೆ ಅನುಭವಿಸಿದೆ ಎಂಬುದರ ಕೆಲವು ವೈಯಕ್ತಿಕ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಮೇ 1975ರಲ್ಲಿ ನಾನು ಸೈಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿ ನನ್ನ ಮೊದಲ ವರ್ಷವನ್ನು ಪೂರ್ಣಗೊಳಿಸಿದೆ ಮತ್ತು ರಜಾದಿನಗಳಿಗಾಗಿ ಡೆಹ್ರಾಡೂನ್‌ನಲ್ಲಿನ ಮನೆಗೆ ಮರಳಿದೆ. ರಜಾದಿನಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಜುಲೈ ತಿಂಗಳ ಮೂರನೇ ವಾರದಲ್ಲಿ ನಾನು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಹಿಂದಿರುಗಿದಾಗ, ಇಂದಿರಾ ಗಾಂಧಿಯವರ ವಿರೋಧಿಗಳನ್ನು ಸೆರೆಹಿಡಿಯುವುದು ಈ ದೇಶದ ವರ್ತಮಾನ ಅಥವಾ ಭವಿಷ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾನು ಹೆಚ್ಚು ಯೋಚಿಸುತ್ತಿರಲಿಲ್ಲ. ಏಕೆಂದರೆ ನಾನು ಹದಿನೇಳನೇ ವಯಸ್ಸಿನಲ್ಲಿ ನನ್ನ ಕಾಲೇಜಿನ ಕ್ರಿಕೆಟ್ ತಂಡದಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದೆ ಮತ್ತು ಸೈಂಟ್ ಸ್ಟೀಫನ್ಸ್‌ನಲ್ಲಿರುವ ನನ್ನ ಸ್ನೇಹಿತರು ಸಹ ಸಂಪೂರ್ಣವಾಗಿ ರಾಜಕೀಯಕ್ಕೆ ಹೊರತಾದವರಾಗಿದ್ದರು.
ರಾಜಕೀಯದ ಕಡೆಗಿನ ಈ ಉದಾಸೀನತೆಗೆ ಕಾಲೇಜು ಆಡಳಿತದಿಂದ ಕೂಡ ಅಷ್ಟೇ ಮಟ್ಟಿಗೆ ಬೆಂಬಲವಿತ್ತು. ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಹುದ್ದೆಗಳಿಗೆ ಚುನಾವಣೆಗಳು ಜೋರಾಗಿ ನಡೆದವು. ಆದರೆ ಸ್ಟೀಫನ್ಸ್ ಕಾಲೇಜಿನವರಿಗೆ ಮತ ಚಲಾಯಿಸಲು ಅವಕಾಶವಿರಲಿಲ್ಲ. ಮತ್ತೊಂದೆಡೆ, ಕ್ಯಾಂಪಸ್‌ನಲ್ಲಿರುವ ಇತರ ಕಾಲೇಜುಗಳಾದ ಹಿಂದೂ, ಹನ್ಸ್ ರಾಜ್, ರಾಮ್ಜಾಸ್ ಮತ್ತು ಕಿರೋರಿ ಮಾಲ್‌ರಂತಹಲ್ಲಿನ ವಿದ್ಯಾರ್ಥಿಗಳು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಹುರುಪಿನಿಂದ ಭಾಗವಹಿಸಿದರು. ದಿಲ್ಲಿಯ ಇನ್ನೊಂದು ತುದಿಯಲ್ಲಿರುವ ಜವಾಹರಲಾಲ್ ನೆಹರೂ ಅವರ ಹೆಸರಿನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಾಜಕೀಯದಲ್ಲಿ ಇನ್ನಷ್ಟು ಸಕ್ರಿಯರಾಗಿದ್ದರು.
ಸ್ಟೀಫನ್ಸ್ ಕಾಲೇಜ್‌ಗೆ ಮಹಾತ್ಮಾ ಗಾಂಧಿಯವರೊಂದಿಗೆ ಒಂದು ಬಾಂಧವ್ಯವಿತ್ತು. ಅವರ ಆತ್ಮೀಯ ಸ್ನೇಹಿತ ಸಿ.ಎಫ್. ಆಂಡ್ರ್ಯೂಸ್ ಕಾಲೇಜಿನಲ್ಲಿ ಬೋಧಕರಾಗಿದ್ದರು. ಆದರೂ, ಈ ಕಾಲೇಜು ಹರ್ ದಯಾಳ್ ಮತ್ತು ಬ್ರಿಜ್‌ಕೃಷ್ಣ ಚಂಡಿವಾಲಾ ಅವರಂಥ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಟ್ಟಿದ್ದರೂ, ಮುಂಬೈ, ಪುಣೆ, ಕೋಲ್ಕತಾ, ಚೆನ್ನೈ, ವಾರಣಾಸಿ, ಅಲಹಾಬಾದ್, ಪಾಟ್ನಾ ಮತ್ತು ಇತರ ಸ್ಥಳಗಳ ಕಾಲೇಜುಗಳಿಗೆ ಹೋಲಿಸಿದರೆ ರಾಷ್ಟ್ರೀಯ ಚಳವಳಿಗೆ ಅದರ ಕೊಡುಗೆ ಕಡಿಮೆಯಿತ್ತು. ಸ್ವಾತಂತ್ರ್ಯದ ನಂತರವೂ ರಾಜಕೀಯದ ಬಗ್ಗೆ ಈ ನಿರ್ಲಕ್ಷ್ಯ ಮುಂದುವರಿಯಿತು. ಆಗ ಅತ್ಯಂತ ಪ್ರತಿಭಾವಂತ ಸ್ಟೀಫನಿಯನ್ನರು ಅಧಿಕಾರಶಾಹಿ ಅಥವಾ ರಾಜತಾಂತ್ರಿಕ ವಲಯವನ್ನು ಸೇರುವತ್ತ ಗಮನಹರಿಸಿದರು. 1960ರ ದಶಕದಲ್ಲಿ ಕೆಲವು ಸ್ಟೀಫನಿಯನ್ನರು ಮಾರ್ಕ್ಸ್‌ವಾದದಿಂದ ಸ್ವಲ್ಪ ಆಕರ್ಷಿತರಾದರೂ, ಅವರ ಮನಸ್ಥಿತಿ ವ್ಯತಿರಿಕ್ತವಾಗಿತ್ತು. ಅವರ ಸಮಕಾಲೀನರು ಪ್ರತಿಷ್ಠಿತ ಸರಕಾರಿ ಉದ್ಯೋಗಗಳನ್ನು ಬಯಸಿದರು ಅಥವಾ ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ಕಾರ್ಪೊರೇಟ್ ಹುದ್ದೆಗಳಿಗೆ ಹೋದರು.
ನನಗೆ ತಿಳಿದಂತೆ, ಸೈಂಟ್ ಸ್ಟೀಫನ್ಸ್ ಗುಣಗಳಲ್ಲಿ ರಾಜಕೀಯವಾದ ತೊಡಗಿಸಿಕೊಳ್ಳುವಿಕೆ ಇರಲಿಲ್ಲ. ನಾವು ಆ ಕ್ಷಣಕ್ಕಾಗಿ ಮತ್ತು ಅದು ನಮಗೆ ಏನು ಕೊಟ್ಟಿತು ಎಂಬುದಕ್ಕೆ ಮಾತ್ರವೇ ಸೀಮಿತರಾಗಿದ್ದೆವು. ಬೇಸಿಗೆ ರಜೆಯ ನಂತರ ಜುಲೈ 1975ರಲ್ಲಿ ನಾನು ಕಾಲೇಜಿಗೆ ಹಿಂದಿರುಗಿದೆ. ಆದರೆ ಅದು ಸಂಪೂರ್ಣವಾಗಿ ಬದಲಾಗಿಲ್ಲ ಎಂಬುದು ಗೊತ್ತಾಯಿತು. ವಿರೋಧ ಪಕ್ಷದ ನಾಯಕರ ಬಂಧನ ಮತ್ತು ಪತ್ರಿಕಾ ಸೆನ್ಸರ್‌ಶಿಪ್ ನಮ್ಮ ಮೇಲೆ ಸ್ವಲ್ಪವೂ ಪರಿಣಾಮ ಬೀರಲಿಲ್ಲ. ನಾವು ಮೊದಲಿನಂತೆ ಹರಟೆ ಹೊಡೆಯುತ್ತಿದ್ದೆವು, ನಗುತ್ತಿದ್ದೆವು ಮತ್ತು ಆಡುತ್ತಿದ್ದೆವು.
1975-76ರಲ್ಲಿ ಚಳಿಗಾಲದ ದಿನದ ನೆನಪು ನಾವೆಲ್ಲರೂ ಎಷ್ಟು ರಾಜಕೀಯೇತರರು ಎಂಬುದನ್ನು ಹೇಳುತ್ತದೆ. ರಾಜ್ಯ ದೂರದರ್ಶನದಿಂದ ನಿಯೋಜಿತವಾಗಿದ್ದ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲು ಮಾಜಿ ವಿದ್ಯಾರ್ಥಿ ಕಾಲೇಜಿಗೆ ಬಂದಿದ್ದ. ಒಬ್ಬ ವಿದ್ಯಾರ್ಥಿ ಸೀನಿಯರ್ ಕಾಮನ್ ರೂಮ್‌ನ ಮೆಟ್ಟಿಲುಗಳ ಮೇಲೆ ಗಿಟಾರ್ ನುಡಿಸುತ್ತಿದ್ದ. ಆದರೆ ನಾನೂ ಸೇರಿದಂತೆ ಇತರರು ಸುತ್ತಲೂ ನಿಂತು ಅವನ ಗಿಟಾರ್ ವಾದನವನ್ನು ಆಲಿಸುತ್ತಿದ್ದೆವು. ಆ ಕಿರು ಚಿತ್ರವನ್ನು ನಂತರ ದೂರದರ್ಶನದಲ್ಲಿ ಪ್ರದರ್ಶಿಸ ಲಾಯಿತು. ಅದರ ಶೀರ್ಷಿಕೆಯ ನಿಖರವಾದ ಪದಗಳು ನನಗೆ ನೆನಪಿಲ್ಲ. ಅದು ಬಹುಶಃ ‘ಕ್ಯಾಂಪಸ್‌ನಲ್ಲಿ ಶಾಂತಿ ಮತ್ತು ನೆಮ್ಮದಿ’ ಎಂದೇನೋ ಇದ್ದಂತಿತ್ತು.
ತುರ್ತು ಪರಿಸ್ಥಿತಿ ಮುಂದುವರಿದಂತೆ, ಅದರ ಕರಾಳ ಮುಖದ ಕೆಲವು ಕಥೆಗಳು ನಮಗೆ ಗೊತ್ತಾದವು. ಪ್ರಧಾನಿಯವರ ಮಗ ಸಂಜಯ್ ಗಾಂಧಿಯವರ ಪ್ರಭಾವ ಹೆಚ್ಚುತ್ತಿದೆ ಎಂದು ತಿಳಿಯಿತು. ಭಿಂದರ್ ಮತ್ತು ಸುಂದರ್ ಡಾಕು ಎಂಬ ರಾಬಿನ್ ಹುಡ್ ತರಹದ ವ್ಯಕ್ತಿಯನ್ನು ಒಳಗೊಂಡ ಪೊಲೀಸ್ ಚೇಸ್‌ಮೆಂಟ್‌ನಲ್ಲಿ ಪಿ.ಎಸ್. ಭಿಂದರ್ ಎಂಬ ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಅವರು ಅವಲಂಬಿತರಾಗಿದ್ದರು. ಬಹಳ ಪ್ರೀತಿಯ ಶಿಕ್ಷಕ ವಿಜಯನ್ (ಉನ್ನಿ) ನಾಯರ್‌ರನ್ನು ಸಂಜಯ್ ಗಾಂಧಿ ತಮ್ಮೊಂದಿಗೆ ಸೇರಲು ಕರೆದರು. ಅವರು ಡೂನ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದವರು. ಉನ್ನಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸ ನೀಡುವುದನ್ನು ಬಿಟ್ಟು ದೇಶವನ್ನು ನಡೆಸಲು ಸಹಾಯ ಮಾಡಬೇಕೆಂದು, ಇಬ್ಬರಿಗೂ ಸ್ನೇಹಿತನಾಗಿದ್ದ ಒಬ್ಬನ ಮೂಲಕ ಸಂಜಯ್ ಸಂದೇಶ ಕಳಿಸಿದ್ದರು. ಉನ್ನಿ ನಾಯರ್, ಅವರ ಅಪಾರ ಗೌರವಕ್ಕೆ ವಂದಿಸುತ್ತಲೇ, ಈಗ ತಾವು ಇರುವಲ್ಲಿಯೇ ಸಂಪೂರ್ಣ ತೃಪ್ತರಾಗಿರುವುದಾಗಿ ಉತ್ತರಿಸಿದ್ದರು.
ಆನಂತರ ನಾವು ಪ್ರತಿದಿನ ವಿಶ್ವವಿದ್ಯಾನಿಲಯದ ಕಾಫಿ ಹೌಸ್‌ನಲ್ಲಿ ಕಂದು ಗಡ್ಡ ಮತ್ತು ಬಣ್ಣದ ಕನ್ನಡಕದ ಒಬ್ಬ ವ್ಯಕ್ತಿ ಒಬ್ಬಂಟಿಯಾಗಿ ಕುಳಿತಿರುತ್ತಿದ್ದು ದನ್ನು ನೋಡುತ್ತಿದ್ದೆವು. ಗಂಟೆಗಟ್ಟಲೆ ಕುಳಿತು, ಕೆಳಗೆ ಮುಖಹಾಕಿ ತನ್ನ ಕಾಫಿ ಕಪ್ ಅನ್ನು ನೋಡುತ್ತಿದ್ದವರು, ಸಿಗರೇಟನ್ನು ಸೇದಲು ಮಾತ್ರ ಮೇಲಕ್ಕೆ ನೋಡುತ್ತಿದ್ದರು. ಅವರು ಕ್ಯಾಂಪಸ್‌ನಲ್ಲಿ ನಿಜವಾಗಿಯೂ ಶಾಂತಿ ಮತ್ತು ನೆಮ್ಮದಿ ಇದೆಯೇ ಎಂದು ಪರಿಶೀಲಿಸಲು ನಿಯೋಜಿಸಲಾಗಿರುವ ಗುಪ್ತಚರ ದಳದ ಏಜೆಂಟ್ ಆಗಿರಬೇಕು ಎಂದು ನಾವು ಭಾವಿಸಿದ್ದೆವು.
ಈ ಘಟನೆಗಳು ನನ್ನಲ್ಲಿ ಹಿಂದೆ ಸುಪ್ತವಾಗಿದ್ದ ರಾಜಕೀಯ ಜೀನ್ ಅನ್ನು ಸ್ವಲ್ಪಮಟ್ಟಿಗೆ ಜಾಗೃತಗೊಳಿಸಿದವು. 1976ರ ಎಪ್ರಿಲ್ ಎರಡನೇ ವಾರದಲ್ಲಿ ಒಂದು ರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಒಬ್ಬರು ನೀಡಿದ ಕೆಲವು ಹೇಳಿಕೆಗಳೂ ಹಾಗೆಯೇ ಇದ್ದವು. ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಕೊನೆಯ ದಿನದ ಕಮೆಂಟರಿಯನ್ನು ಕೇಳುತ್ತಾ, ನಮ್ಮ ಗುಂಪೊಂದು ಕಾಲೇಜು ಗೋಡೆಗಳ ನಡುವಿನ ಆವರಣವೊಂದರಲ್ಲಿ ಟ್ರಾನ್ಸಿಸ್ಟರ್ ಸುತ್ತಲೂ ಸೇರಿತ್ತು. ಭಾರತೀಯರು 400ಕ್ಕಿಂತ ಹೆಚ್ಚಿನ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿದ್ದರು ಮತ್ತು ನಮ್ಮ ಇಬ್ಬರು ಲಿಟಲ್ ಮಾಸ್ಟರ್‌ಗಳಾದ ಎಸ್.ಎಂ. ಗವಾಸ್ಕರ್ ಮತ್ತು ಜಿ.ಆರ್. ವಿಶ್ವನಾಥ್ ಅವರ ಶತಕಗಳ ಬಲದಿಂದ ಅದನ್ನು ಸಾಧಿಸಲಾಯಿತು. ಗೆಲುವಿನ ರನ್ ಗಳಿಸಿದ ನಂತರ, ಆಕಾಶವಾಣಿಯ ನಿರೂಪಕ, ‘‘ಯೇ ಇಂದಿರಾ ಗಾಂಧಿ ಕಾ ದೇಶ್, ಜೈ’’ ಎಂದಿದ್ದರು. ಇದು ಇಂದಿರಾ ಗಾಂಧಿಯವರ ನಾಡು, ಇದು ಅವರ ಇಪ್ಪತ್ತು ಅಂಶಗಳ ಕಾರ್ಯಕ್ರಮದ ನಾಡು ಎಂದುಬಿಟ್ಟರು. ಆ ಸಮಯದಲ್ಲಿಯೂ, ಇದು ತೀರಾ ಆಕ್ರಮಣಕಾರಿ ಎಂದು ನನಗೆ ಅನ್ನಿಸಿತ್ತು. ಏಕೆಂದರೆ ನಮ್ಮ ಕ್ರಿಕೆಟಿಗರಿಗೆ ಸರಿಯಾಗಿ ಸಲ್ಲಬೇಕಾದ ಕೀರ್ತಿಯನ್ನು ಒಬ್ಬ ಸರ್ವಾಧಿಕಾರಿ ರಾಜಕಾರಣಿಗೆ ಕೊಡಲಾಗುತ್ತಿತ್ತು.
1977ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಮತ್ತು ಚುನಾವಣೆಗಳನ್ನು ಘೋಷಿಸಲಾಯಿತು. ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಅನ್ನು ವಿರೋಧಿಸುವ ನಾಲ್ಕು ಪಕ್ಷಗಳಿಂದ ಹೊಸ ಜನತಾ ಪಕ್ಷವನ್ನು ರಚಿಸಲಾಯಿತು. ಸೈಂಟ್ ಸ್ಟೀಫನ್ಸ್‌ನಿಂದ ರಸ್ತೆಯ ಕೆಳಗೆ ಮೌರಿಸ್ ಚೌಕ್‌ನಲ್ಲಿ ಒಂದು ರ್ಯಾಲಿ ಇತ್ತು. ನಾನು ಸಾವಿರಾರು ಇತರ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದೆ. ಹಸಿರು ಶಿರವಸ್ತ್ರ ಧರಿಸಿದ್ದ ಸಮಾಜವಾದಿ ರಾಜ್ ನಾರಾಯಣ್ ಅವರಿಂದ ಗತಿಸಿದ, ಜೀವಂತವಿರುವ ಮತ್ತು ಹುಟ್ಟಲಿರುವ ಎಲ್ಲಾ ನೆಹರೂಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭಾಷಣಗಳನ್ನು ಕೇಳಿದ್ದೆವು. ವಾಶಿಂಗ್ಟನ್ ಮತ್ತು ಮಾಸ್ಕೊದಲ್ಲಿ ನಮ್ಮ ರಾಯಭಾರಿಯಂತೆ ತಮ್ಮ ವೈಭವದ ದಿನಗಳಲ್ಲಿ ಸೊಗಸಾಗಿ ಕಾಣಿಸಿಕೊಂಡಿದ್ದ ಜವಾಹರಲಾಲ್ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಅವರು ಡೆಹ್ರಾಡೂನ್‌ನಲ್ಲಿರುವ ತಮ್ಮ ವಿಶ್ರಾಂತಿ ಗೃಹದಿಂದ ಬಂದು, ನಾಗರಿಕ ಸ್ವಾತಂತ್ರ್ಯಗಳ ಪುನಃಸ್ಥಾಪನೆ ಮತ್ತು ಅವರ ಸೋದರ ಸೊಸೆಯ ನಿರಂಕುಶಾಧಿಕಾರದ ಅಂತ್ಯಕ್ಕೆ ಒತ್ತಾಯಿಸುವ ಭಾಷಣವನ್ನು ಕೇಳಿದ್ದೆವು. ನನ್ನ ಕಾಲೇಜಿನವರನ್ನು ಹೊರತುಪಡಿಸಿ ಹಲವಾರು ವಿದ್ಯಾರ್ಥಿ ನಾಯಕರಿಂದ ಮತ್ತು ಜನಸಂಘದ ಸಿದ್ಧಾಂತವಾದಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ, ಸುಸಂಸ್ಕೃತ ಮತ್ತು ಸುಮಧುರ ಹಿಂದಿಯಲ್ಲಿ ಬುದ್ಧಿವಂತಿಕೆ ಮತ್ತು ಹೇರಳವಾದ ಹಾಸ್ಯಮಯ ಮಾತುಗಳನ್ನು ಕೇಳಿದ್ದೆವು.
ಮಾರಿಸ್ ಚೌಕ್‌ನಲ್ಲಿ ನಡೆದ ಆ ಸಭೆ ಕ್ರಿಕೆಟ್‌ನ ಹೊರಗಿನ ಪ್ರಪಂಚ ಮತ್ತು ಸೈಂಟ್ ಸ್ಟೀಫನ್ಸ್ ನ ಹೊರಗಿನ ಜಗತ್ತಿನಲ್ಲಿ ನನ್ನ ಆಸಕ್ತಿಯನ್ನು ಚುರುಕುಗೊಳಿಸಿತು. ಕೆಲವು ವಾರಗಳ ನಂತರ, ಚುನಾವಣೆಗಳು ಪೂರ್ಣಗೊಂಡಾಗ ಮತ್ತು ಮತಗಳ ಎಣಿಕೆ ಪ್ರಾರಂಭವಾದಾಗ, ನಾನು ಸ್ನೇಹಿತರ ಗುಂಪಿನೊಂದಿಗೆ, ಆಗ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗುವ ಹಲವಾರು ಪ್ರಮುಖ ಪತ್ರಿಕೆಗಳ ಪ್ರಧಾನ ಕಚೇರಿಗಳನ್ನು ಹೊಂದಿದ್ದ ಬಹದ್ದೂರ್ ಶಾ ಝಫರ್ ಮಾರ್ಗಕ್ಕೆ ಹೋದೆ. ಇಂಟರ್‌ನೆಟ್ ಇನ್ನೂ ದಶಕಗಳಷ್ಟು ದೂರವಿದ್ದಾಗ ಮತ್ತು ನವೀಕೃತ ಅಥವಾ ವಿಶ್ವಾಸಾರ್ಹ ಮಾಹಿತಿಗಾಗಿ ಆಲ್ ಇಂಡಿಯಾ ರೇಡಿಯೊ ಅಥವಾ ದೂರದರ್ಶನವನ್ನು ಅವಲಂಬಿಸಲು ಸಾಧ್ಯವಿಲ್ಲದಿದ್ದಾಗ, ನಾವು ಸಾಲಾ ಗಿದ್ದ ಪತ್ರಿಕಾ ಕಚೇರಿಗಳ ಹೊರಗೆ, ಫಲಿತಾಂಶಗಳು ಬರುತ್ತಿದ್ದಂತೆ ಪ್ರಕಟಿಸಲಾಗುತ್ತಿದ್ದ ದೊಡ್ಡ ಕಪ್ಪು ಹಲಗೆಯ ಎದುರು ಕುಳಿತಿದ್ದೆವು. ಅಮೇಠಿಯಲ್ಲಿ ಸಂಜಯ್ ಗಾಂಧಿ ಸೋತಿದ್ದಾರೆ ಎಂದು ವರದಿ ಯಾದಾಗ ಜೋರಾಗಿ ಹರ್ಷೋದ್ಗಾರ ಕೇಳಿಬಂದಿತ್ತು ಮತ್ತು ರಾಯ್ ಬರೇಲಿಯಲ್ಲಿ ಇಂದಿರಾ ಗಾಂಧಿ ಸೋತಿದ್ದಾರೆ ಎಂದು ಮಂಡಳಿಯು ದೃಢಪಡಿಸಿದಾಗ ಇನ್ನೂ ಜೋರಾಗಿ ಹರ್ಷೋದ್ಗಾರ ಕೇಳಿಬಂದಿತ್ತು.
ಸರ್ವಾಧಿಕಾರವನ್ನು ಸೋಲಿಸಲಾಗಿತ್ತು ಮತ್ತು ವಂಶಪಾರಂಪರ್ಯ ರಾಜಕೀಯವನ್ನು ಸಹ ಸೋಲಿಸಲಾಗಿತ್ತು. ಐವತ್ತು ವರ್ಷಗಳ ನಂತರ, ಸರ್ವಾಧಿಕಾರ ಮತ್ತು ವಂಶಪಾರಂಪರ್ಯ ರಾಜಕೀಯ ಎರಡೂ ನಮ್ಮನ್ನು ಮತ್ತೆ ಕಾಡುತ್ತಿವೆ. ಒಂದೇ ವ್ಯತ್ಯಾಸವೆಂದರೆ ಅವು ಈಗ ವಿಭಿನ್ನ ಪಕ್ಷಗಳಲ್ಲಿ ಮತ್ತು ವಿಭಿನ್ನ ಪಕ್ಷಗಳಿಂದ ಪ್ರತಿನಿಧಿಸಲ್ಪಡುತ್ತಿವೆ.