‘ನಾಡಹಬ್ಬ’ಕ್ಕೆ ಬಾನು ಮುಷ್ತಾಕ್ ವಿರೋಧದ ಬ್ರಾಹ್ಮಣ್ಯ ಮತ್ತು ಬಂಡಾಯದ ದ್ವಂದ್ವ

ಭಾಗ- 2
ಅಬ್ರಾಹ್ಮಣ-ಮುಸ್ಲಿಮ್ ಏಕತೆಯ ವಿರುದ್ಧ ಹಿಂದೂ ಬ್ರಾಹ್ಮಣ್ಯದ ಹುನ್ನಾರ
ಬಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಾ ಅದಕ್ಕೆ ಹಿಂದೂ ಅಸ್ಮಿತೆಯ ಮೇಲೆ ಕಾಂಗ್ರೆಸ್ ದಾಳಿ ಎಂಬ ನರೇಟಿವ್ ಕಟ್ಟಿಕೊಡುವುದರ ಹಿಂದೆ ಸಂಘಿಗಳು ಎದುರಿಸುತ್ತಿರುವ ಅತಿ ದೊಡ್ಡ ಆತಂಕವೊಂದಿದೆ.
ಅದು ಮುಸ್ಲಿಮ್-ಅಬ್ರಾಹ್ಮಣರ ಏಕತೆಯ ಸವಾಲು.
ಅದು ರಾಜಕೀಯವಾಗಿ ಸಾಧ್ಯವಾದರೆ ಹಿಂದೂ ಬ್ರಾಹ್ಮಣ್ಯದ ರಾಜಕಾರಣವೇ ಸೋಲುತ್ತದೆ. ಅದಾಗದಂತೆ ತಡೆಯುವುದೇ ಸಂಘಿ ಸಾವರ್ಕರ್ ರಾಜಕಾರಣದ ಹೂರಣ. ಬಿಜೆಪಿಯ ರಾಜಕೀಯ ಗೆಲುವಿನ ಸಾರವೂ ಇದೇ.
ಮೈಸೂರು ಇತಿಹಾಸದಲ್ಲಿ ಟಿಪ್ಪು-ಹೈದರ್ ಅವರ ಹೆಮ್ಮೆಯ ಅಧ್ಯಾಯಗಳನ್ನು ಅಳಿಸಿಹಾಕುವುದು, ಇಲ್ಲದ ಉರಿಗೌಡ-ನಂಜೇಗೌಡರ ಮೂಲಕ ಟಿಪ್ಪುವನ್ನು ಕೊಲ್ಲಿಸುವುದು, ದಸರೆಯಲ್ಲಿ ಮುಸ್ಲಿಮರ ಸರಿಸಮ ಪಾಲುದಾರಿಕೆಯನ್ನು ನಿರಾಕರಿಸುವುದು ಮತ್ತು ಅದನ್ನು ಹಿಂದೂ ಬ್ರಾಹ್ಮಣ್ಯದ ಹೆಮ್ಮೆಯನ್ನಾಗಿ ಉಳಿಸಿಕೊಳ್ಳುವುದು ಅವರ ಹಾಲಿ ಕಾರ್ಯಕ್ರಮವಾಗಿದ್ದರೂ ಅದಕ್ಕೆ ಒಂದು ದೊಡ್ಡ ಇತಿಹಾಸವಿದೆ. ಇದಕ್ಕೆ 1920ರಲ್ಲಿ ನಾಲ್ವಡಿ ಮಹಾರಾಜರು ಮೀಸಲಾತಿ ನೀಡಿದ ನಂತರ ಮೈಸೂರಿನ ಬ್ರಾಹ್ಮಣಶಾಹಿ ಶಕ್ತಿಗಳು ಅನುಸರಿಸಿದ ಕೋಮುವಾದಿ ರಾಜಕಾರಣ ಒಂದು ದೊಡ್ಡ ಉದಾಹರಣೆ.
ಮೈಸೂರಿನ ಇತಿಹಾಸದ ಈ ಅಧ್ಯಾಯವನ್ನು ಇತಿಹಾಸಕಾರ ಎಸ್. ಚಂದ್ರ ಶೇಖರ್ ಅವರು 1985ರಲ್ಲಿ ಪ್ರಕಟವಾದ ತಮ್ಮ ‘Dimensions of socio political change in mysore-1918-1940’ ಎಂಬ ಕೃತಿಯಲ್ಲೂ ವಿವರವಾಗಿ ದಾಖಲಿಸಿದ್ದಾರೆ. ಹಾಗೆಯೇ ಮತ್ತೊಬ್ಬ ಇತಿಹಾಸಕಾರ ಮನು ಭಗವಾನ್ ಅವರು ‘Sovereign Spheres-Princes, Education and Empire in Colonial India’ ಎಂಬ ಕೃತಿಲ್ಲೂ ಈ ವಿವರಗಳ ದಾಖಲೆ ಇದೆ. ಹಾಗೆಯೇ ಮತ್ತೊಬ್ಬ ಇತಿಹಾಸಕಾರ್ತಿ ಜಾನಕಿ ನಾಯರ್ ಅವರು ಆ ಕಾಲಘಟ್ಟದಲ್ಲಿ ಮಹಾರಾಜ ನಾಲ್ವಡಿ ಮತ್ತು ಮೈಸೂರು ಸಂಸ್ಥಾನದ ಪ್ರಥಮ ಮುಸ್ಲಿಮ್ ದಿವಾನರಾದ ಮಿರ್ಝಾ ಇಸ್ಮಾಯೀಲ್ ನೇತೃತ್ವದಲ್ಲಿ ಬದಲಾಗುತ್ತಿದ್ದ ಆರ್ಥಿಕತೆಯ ಬಗ್ಗೆ ತಮ್ಮ ‘Monarchical Modern-The Making Of Mysore City-1880-1940’ ಎಂಬ ಕೃತಿಯಲ್ಲೂ ದಾಖಲಿಸಿದ್ದಾರೆ.
ಈ ಐತಿಹಾಸಿಕ ಸಂಶೋಧನಾತ್ಮಕ ಕೃತಿಗಳು ಇಂದಿನ ದಸರೆಯ ನೆಪದಲ್ಲಿ ಹಿಂದೂ ಬ್ರಾಹ್ಮಣ್ಯ ನಡೆಸುವ ಕೋಮುವಾದಿ ರಾಜಕಾರಣದ ಇತಿಹಾಸವನ್ನು ಕಟ್ಟಿಕೊಡುತ್ತವೆ. ಇದು ಆರೆಸ್ಸೆಸ್ ಮತ್ತು ಸಾವರ್ಕರ್‌ಗೂ ಪೂರ್ವಭಾವಿಯಾಗಿ ಮತ್ತು ಅದಕ್ಕೆ ಮುನ್ನುಡಿಯಾಗಿ ನಡೆದ ಬೆಳವಣಿಗೆಗಳು.
1928ರ ಬೆಂಗಳೂರು ಕೋಮುಗಲಭೆ ಮತ್ತು ಬ್ರಾಹ್ಮಣ್ಯದ ಕುತಂತ್ರಗಳು
1920ರಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆರ್ ಅವರು ಅಬ್ರಾಹ್ಮಣರಿಗೆ ಮತ್ತು ಮುಸ್ಲಿಮರಿಗೆ ಮೀಸಲಾತಿಯನ್ನು ಕೊಟ್ಟು ಮೈಸೂರು ಆಡಳಿತದಲ್ಲಿ ಬ್ರಾಹ್ಮಣರ ಆಧಿಪತ್ಯವನ್ನು ಕಡಿಮೆ ಮಾಡಿದರು. ಅಲ್ಲದೆ 1926ರಲ್ಲಿ ತಮ್ಮ ಹಳೆಯ ಮಿತ್ರ ಮಿರ್ಝಾ ಇಸ್ಮಾಯೀಲ್‌ರನ್ನು ಮೈಸೂರು ಸಂಸ್ಥಾನದ ಪ್ರಪ್ರಥಮ ದಿವಾನರನ್ನಾಗಿ ಮಾಡಿದರು. ಮಿರ್ಝಾ ಇಸ್ಮಾಯೀಲ್ ಮತ್ತು ನಾಲ್ವಡಿ ಒಡೆಯರ್ ಅವರು ಕೂಡಿಕೊಂಡು ಮೈಸೂರು ಸಂಸ್ಥಾನದಲ್ಲಿ ಸರಕಾರಿ ಪೋಷಿತ ಅರೆ-ಬಂಡವಾಳಶಾಹಿ ಮಾದರಿಯನ್ನು ಹುಟ್ಟುಹಾಕಿದರು. ಜಾನಕಿ ನಾಯರ್ ಅವರು ದಾಖಲಿಸಿರುವಂತೆ ಮಿರ್ಝಾ ಇಸ್ಮಾಯೀಲ್ ಮೈಸೂರು ಸ್ವದೇಶಿ ಬ್ರಾಂಡ್ ಹುಟ್ಟುಹಾಕಿದರು. 1908ರಿಂದ ಪ್ರಾರಂಭವಾಗಿದ್ದ ದಸರಾ ವಸ್ತು ಪ್ರದರ್ಶನವನ್ನು ಮೈಸೂರು ಕೈಗಾರಿಕೆಗಳ ಪ್ರಚಾರ ಸಾಧನವನ್ನಾಗಿ ಬೆಳೆಸಿದರು. ಮತ್ತೊಂದು ಕಡೆ ಒಡೆಯರ್‌ರ ಸಾಮಾಜಿಕ ನ್ಯಾಯ ನೀತಿಗಳು ಆಡಳಿತದಲ್ಲೂ ಬ್ರಾಹ್ಮಣರ ಆಧಿಪತ್ಯ ಕಡಿಮೆ ಮಾಡಿ ಅಬ್ರಾಹ್ಮಣರ ಹಾಗೂ ಮುಸ್ಲಿಮರ ಪ್ರಾತಿನಿಧ್ಯವನ್ನು ಹೆಚ್ಚು ಮಾಡಿತು.
ಇವೆಲ್ಲದರಿಂದ ಕಂಗೆಟ್ಟಿದ್ದ ಮೈಸೂರಿನ ಬ್ರಾಹ್ಮಣಶಾಹಿ ಶಕ್ತಿಗಳು ಹೇಗೆ ಹಿಂಸಾತ್ಮಕ ಕೋಮುವಾದಿ ಪ್ರತಿರೋಧಗಳಿಗೆ ಇಳಿದರು ಎಂಬುದನ್ನು ಇತಿಹಾಸಕಾರ ಎಸ್. ಚಂದ್ರಶೇಖರ್ ದಾಖಲಿಸುತ್ತಾರೆ. ಮೈಸೂರಿನ ಅಕ್ಕಪಕ್ಕದ ಸಂಸ್ಥಾನಗಳಲ್ಲಿ ಹಿಂದೂ-ಮುಸ್ಲಿಮ್ ಗಲಭೆಗಳು ಪ್ರಾರಂಭವಾಗಿದ್ದರೂ 1921ರ ವರೆಗೆ ಮೈಸೂರು ಸಂಸ್ಥಾನದಲ್ಲಿ ಕೋಮುವಾದಿ ಗಲಭೆಗಳ ಇತಿಹಾಸವೇ ಇರಲಿಲ್ಲ.
ಆದರೆ ಮೀಸಲಾತಿ ಜಾರಿಯಾದ ನಂತರ 1921ರಲ್ಲಿ ಚಿಂತಾಮಣಿಯಲ್ಲಿ, 1928ರಲ್ಲಿ ಬೆಂಗಳೂರಿನಲ್ಲಿ, 1929ರಲ್ಲಿ ಚನ್ನಪಟ್ಟಣದಲ್ಲಿ ಹಾಗೂ ಕೆಲವು ವರ್ಷಗಳ ನಂತರ ದಾವಣಗೆರೆಯಲ್ಲಿ ಕೋಮು ಸಂಘರ್ಷಗಳು ನಡೆದದ್ದನ್ನು ಹಾಗೂ ಅದರ ಹಿಂದೆ ಬ್ರಾಹ್ಮಣಶಾಹಿ ಶಕ್ತಿಗಳೇ ಇದ್ದದ್ದನ್ನು ಮೈಸೂರು ಸರಕಾರ ತನಿಖೆಯ ಮೂಲಕ ಪತ್ತೆ ಮಾಡಿದ್ದನ್ನು ಎಸ್. ಚಂದ್ರಶೇಖರ್ ತಮ್ಮ ‘Dimensions of socio political change in mysore-1918-1940’ದಲ್ಲಿ ದಾಖಲಿಸಿದ್ದಾರೆ.
ಅದರಲ್ಲೂ 1928ರಲ್ಲಿ ಬೆಂಗಳೂರಿನಲ್ಲಿ ನಡೆದ ಯೋಜಿತ ಕೋಮು ಗಲಭೆಗಳಂತೂ ಇಂದಿನ ಕೋಮುವಾದಿಗಳ ಪಿತಾಮಹರಂತಿದ್ದ ಅಂದಿನ ಬ್ರಾಹ್ಮಣಶಾಹಿ ಶಕ್ತಿಗಳ ಕೋಮುವಾದಿ ಹುನ್ನಾರವನ್ನು ವಿವರವಾಗಿ ಬಯಲಿಗೆಳೆಯುತ್ತವೆ. 1926ರಲ್ಲಿ ಮಿರ್ಝಾ ಇಸ್ಮಾಯೀಲ್ ದಿವಾನರಾಗುತ್ತಾರೆ. 1920ರ ಮೀಸಲಾತಿಯಿಂದ ಆ ವೇಳೆಗಾಗಲೇ ಕ್ರುದ್ಧರಾಗಿದ್ದ ಮೈಸೂರು ಬ್ರಾಹ್ಮಣರು ಇದರಿಂದ ಇನ್ನಷ್ಟು ಕ್ರುದ್ಧರಾಗುತ್ತಾರೆ. ಏಕೆಂದರೆ ಆವರೆಗೆ ದಿವಾನಗಿರಿಯು ಬ್ರಾಹ್ಮಣರ ಜಹಗೀರು ಎಂಬಂತಿತ್ತು. ಇದಲ್ಲದೆ 1927ರ ದಸರೆಯಲ್ಲಿ ನಾಲ್ವಡಿ ಮಹಾರಾಜರು ದಿವಾನ್ ಮಿರ್ಝಾ ಅವರನ್ನು ತಮ್ಮೊಡನೆ ಕರೆದೊಯ್ಯುತ್ತಾರೆ. ಇದನ್ನು ವಿರೋಧಿಸಿ ಮೈಸೂರಿನ ಬ್ರಾಹ್ಮಣರು ಹಲವು ಬಗೆಯ ಹೀನಾಯ ಮತ್ತು ಹಿಂಸಾತ್ಮಕ ಪ್ರತಿರೋಧ ವ್ಯಕ್ತಪಡಿಸುತ್ತಾರೆ.
ಬೂದಿಮುಚ್ಚಿದ ಕೆಂಡದಂತಿದ್ದ ಬ್ರಾಹ್ಮಣೀಯ ಅಸಹನೆ 1928ರಲ್ಲಿ ಬೆಂಗಳೂರಿನಲ್ಲಿ ಸ್ಫೋಟಗೊಳ್ಳುತ್ತದೆ. ಆಗ ಬೆಂಗಳೂರು ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷ ಅಬ್ಬಾಸ್ ಖಾನ್. ಅವರು ಆಗತಾನೇ ಬ್ರಾಹ್ಮಣ ಪ್ರತಿಸ್ಪರ್ಧಿಯನ್ನು ಸೋಲಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿರುತ್ತಾರೆ. ಅವರು ಅಬ್ರಾಹ್ಮಣರ ರಾಜಕೀಯ ವೇದಿಕೆಯಾದ ಪ್ರಜಾಮಿತ್ರ ಮಂಡಳಿಯ ಮುಖ್ಯಸ್ಥರೂ ಆಗಿದ್ದರು. ಕನ್ನಡದ ಖ್ಯಾತ ಸಾಹಿತಿ ಡಿ.ವಿ. ಗುಂಡಪ್ಪ ಅವರು ತಮ್ಮ ‘ಜ್ಞಾಪಕ ಚಿತ್ರಶಾಲೆ’ಯಲ್ಲಿ ದಾಖಲಿಸಿರುವಂತೆ ಅಬ್ಬಾಸ್ ಖಾನರು ಮಿರ್ಝಾ ಇಸ್ಮಾಯೀಲ್‌ರ ಸ್ನೇಹಿತರೂ ಆಗಿದ್ದರು ಮತ್ತು ಅಬ್ರಾಹ್ಮಣ ರಾಜಕೀಯದ ವಾಗ್ಮಿಗಳೂ ಆಗಿದ್ದರು.
ಬೆಂಗಳೂರಿನ ಸುಲ್ತಾನ್ ಪೇಟೆಯ ಅವರ ಮನೆಯ ಮುಂಭಾಗದಲ್ಲಿ ಮತ್ತು ಪಕ್ಕದ ಮಸೀದಿಯ ಬಳಿ ಇದ್ದ ಒಂದು ಶಾಲೆಯಲ್ಲಿ, ಶಿಕ್ಷಣ ಇಲಾಖೆಯ ಗಮನಕ್ಕೂ ಬರದಂತೆ 1928ರಲ್ಲಿ ದಿಢೀರನೆ ಗಣೇಶನ ಪುಟ್ಟ ದೇವಸ್ಥಾನದ ನಿರ್ಮಾಣ ಪ್ರಾರಂಭವಾಗುತ್ತದೆ. ಶಾಲಾ ಆವರಣದಲ್ಲಿ, ಅದು ಪಕ್ಕದಲ್ಲಿ ಮಸೀದಿಯೂ ಇರುವಾಗ ಅನಗತ್ಯ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಅದಕ್ಕೆ ಶಿಕ್ಷಣ ಇಲಾಖೆಯ ಅನುಮತಿಯೂ ಇಲ್ಲದಿದ್ದರಿಂದ ಮೈಸೂರು ಸರಕಾರ ಕಾಮಗಾರಿಯನ್ನು ನಿಲ್ಲಿಸುತ್ತದೆ.
ಮೀಸಲಾತಿ ಜಾರಿ ಮತ್ತು ಮಿರ್ಝಾ ಇಸ್ಮಾಯೀಲ್‌ರ ದಿವಾನಗಿರಿಯ ಪೆಟ್ಟುಗಳಿಂದ ತತ್ತರಿಸುತ್ತಿದ್ದ ಬ್ರಾಹ್ಮಣವಾದಿ ಶಕ್ತಿಗಳು ಈ ಸಂದರ್ಭವನ್ನು ಅಬ್ಬಾಸ್ ಖಾನ್, ದಿವಾನ್ ಇಸ್ಮಾಯೀಲ್ ಮತ್ತು ಮಹಾರಾಜರ ಅಬ್ರಾಹ್ಮಣ ಆಡಳಿತವನ್ನು ವಿರೋಧಿಸಲು ಒಂದು ಅವಕಾಶವನ್ನಾಗಿ ಬಳಸಿಕೊಳ್ಳುತ್ತವೆ. ಅದರಲ್ಲಿ ಮುಖ್ಯರು ಕಾಂಗ್ರೆಸ್‌ನೊಳಗೇ ಇದ್ದ ಮಲ್ಲೇಶ್ವರಂ ಸುಬ್ರಹ್ಮಣ್ಯರಂತಹ ಹಿಂದೂ ಮಹಾಸಭಾವಾದಿ ನಾಯಕರು ಹಾಗೂ ತಿಲಕ್‌ವಾದಿ ಹಿಂದೂ ರಾಷ್ಟ್ರೀಯವಾದಿ ಮನಸ್ಥಿತಿ ಹೊಂದಿದ್ದ ‘ವೀರಕೇಸರಿ’ ಪತ್ರಿಕೆಯ ಸಂಪಾದಕರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ. ಇದರ ಜೊತೆಗೆ ಆಗ ಪ್ರಕಟವಾಗುತ್ತಿದ್ದ ಬ್ರಾಹ್ಮಣರ ಒಡೆತನ ಮತ್ತು ಸಂಪಾದಕತ್ವದಲ್ಲಿದ್ದ ‘ವಿಶ್ವ ಕರ್ನಾಟಕ’ ಮತ್ತು ‘ತಾಯಿನಾಡು’ ಪತ್ರಿಕೆಗಳು ಸಕ್ರಿಯ ಪಾತ್ರವಹಿಸುತ್ತವೆ.
ಈ ಕ್ಷುಲ್ಲಕ ಘಟನೆಯನ್ನು ಕಾಂಗ್ರೆಸ್‌ನೊಳಗಿನ ಹಿಂದುತ್ವವಾದಿಗಳು ಮತ್ತು ಬ್ರಾಹ್ಮಣವಾದಿ ಪತ್ರಿಕೆಗಳು ಕೋಮುವಾದಿ ಉದ್ವಿಘ್ನತೆಯನ್ನು ಸೃಷ್ಟಿಸಲು ವ್ಯವಸ್ಥಿತವಾಗಿ ಬಳಸಿಕೊಂಡವು. 1928ರ ಜೂನ್‌ನಿಂದ ವ್ಯವಸ್ಥಿತವಾಗಿ ಈ ಶಕ್ತಿಗಳು ಕೋಮುವಾದಿ ಜನಾಭಿಪ್ರಾಯ ರೂಪಿಸಿ 1928ರ ಜುಲೈ 24ರಿಂದ 29ರವರೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡು ಕೋಮುವಾದಿ ಪ್ರತಿಭಟನೆಗಳನ್ನು ನಡೆಸುತ್ತವೆ. ಇದು ಜುಲೈ 29-30ರಂದು ಅತ್ಯಂತ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತದೆ.
ಆದರೂ 1928ರಲ್ಲೂ ಸಹ ನಾಲ್ವಡಿ ಮಹಾರಾಜರು ದಸರಾದಲ್ಲಿ ದಿವಾನ್ ಮಿರ್ಝಾ ಇಸ್ಮಾಯೀಲ್‌ರನ್ನು ಜೊತೆ ಮಾಡಿಕೊಂಡೇ ಜಂಬೂಸವಾರಿಯಲ್ಲಿ ಭಾಗವಹಿಸುತ್ತಾರೆ.
ಈ ಎಲ್ಲಾ ವಿವರಗಳು ಗಲಭೆಯ ಅಧ್ಯಯನ ಮಾಡಲು ಮೈಸೂರು ಸರಕಾರ ನಿವೃತ್ತ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ತನಿಖಾ ಸಮಿತಿಯ ವರದಿ ‘Disturbances In Bangalore city July 2028-Report Of The Committee Of Enquiry’ಯಲ್ಲೂ ವಿವರವಾಗಿ ದಾಖಲಾಗಿದೆ.
ಇಂದು ಅದೇ ಇತಿಹಾಸ ದಸರೆಯ ಸಂದರ್ಭದಲ್ಲಿ ಮತ್ತೆ ಮರುಕಳಿಸುತ್ತಿದೆ.
ಆದರೆ ವಿಷಾದದ ಸಂಗತಿ ಎಂದರೆ ರಾಜಸತ್ತೆ ಅಳಿದು ಪ್ರಜಾತಂತ್ರ ಪ್ರಾರಂಭವಾಗಿ 79 ವರ್ಷಗಳಾದರೂ ಈ ಹಿಂದೂ ಬ್ರಾಹ್ಮಣ್ಯ ಶಕ್ತಿಗಳು ಸೋಲುವುದಿರಲಿ ಮತ್ತೊಮ್ಮೆ ಶಕ್ತಿ ಪಡೆದು ವಿಜೃಂಭಿಸುತ್ತಿವೆ.
ಅದಕ್ಕೆ ಪ್ರಧಾನ ಕಾರಣ ಪ್ರಜಾತಂತ್ರದ ರಥವನ್ನು ಅವರು ಎಷ್ಟು ಹಿಂದಕ್ಕೆ ಎಳೆಯುತ್ತಿದ್ದಾರೋ ಅದಕ್ಕೆ ಮೂರುಪಟ್ಟು ಬಲದಿಂದ ಪ್ರಜಾತಂತ್ರವನ್ನು ಮುಂದಕ್ಕೆ ಒಯ್ಯುವುದರಲ್ಲಿ ಪ್ರಜಾತಂತ್ರವಾದಿಗಳು ವಿಫಲವಾಗಿರುವುದು ಮತ್ತು ಯಥಾಸ್ಥಿತಿಯೊಂದಿಗೆ ರಾಜಿಯಾಗಿರುವುದು.
ಆದ್ದರಿಂದಲೇ ದಸರಾದಲ್ಲಿ ಬಾನು ಮುಷ್ತಾಕ್ ಅವರ ಭಾಗೀದಾರಿಕೆ ಯಥಾಸ್ಥಿತಿಯ ಮುಂದುವರಿಕೆಯಾಗುತ್ತದೆ. ಈ ಭಾಗೀದಾರಿಕೆ ಮೇಲ್ನೋಟಕ್ಕೆ ಬಿಜೆಪಿಯ ಸಿದ್ಧಾಂತಕ್ಕೆ ಪೆಟ್ಟು ಎಂಬಂತೆ ಕಂಡರೂ, ಅದಕ್ಕಾಗಿ ಮಾಡಿಕೊಳ್ಳುವ ರಾಜಿಗಳು ಪರೋಕ್ಷವಾಗಿ ದಸರಾದ ಹಿಂದುವೀಕರಣವನ್ನು ಮುಂದುವರಿಸುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾತಂತ್ರವಾದಿ ಶಕ್ತಿಗಳು ಪ್ರಜಾತಂತ್ರದಲ್ಲಿ ರಾಜಸತ್ತೆಯ ಪಳೆಯುಳಿಕೆಗಳು ಏಕೆ? ಸರಕಾರಿ ಆಚರಣೆಯಲ್ಲಿ ಧಾರ್ಮಿಕ ಸಂಕೇತಗಳೇಕೆ? ಎಂಬ ಪ್ರಶ್ನೆಗಳನ್ನು ಕೇಳುತ್ತಾ, ಜನರ ಮುಂದಿಡುತ್ತಾ ಪ್ರಜಾತಂತ್ರದ ರಥವನ್ನು ಎರಡು ಹೆಜ್ಜೆ ಮುಂದೆ ಎಳೆಯಬೇಕಿತ್ತು. ಯಥಾಸ್ಥಿತಿವಾದ ಯಾವತ್ತೂ ಉಗ್ರ ಹಿಂದೂವಾದಕ್ಕೆ ಪೂರಕವಾಗಿರುತ್ತದೆ.