Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ‘ನಾಡಹಬ್ಬ’ಕ್ಕೆ ಬಾನು ಮುಷ್ತಾಕ್ ವಿರೋಧದ...

‘ನಾಡಹಬ್ಬ’ಕ್ಕೆ ಬಾನು ಮುಷ್ತಾಕ್ ವಿರೋಧದ ಬ್ರಾಹ್ಮಣ್ಯ ಮತ್ತು ಬಂಡಾಯದ ದ್ವಂದ್ವ

ಶಿವಸುಂದರ್ಶಿವಸುಂದರ್3 Sept 2025 11:52 AM IST
share
‘ನಾಡಹಬ್ಬ’ಕ್ಕೆ ಬಾನು ಮುಷ್ತಾಕ್ ವಿರೋಧದ ಬ್ರಾಹ್ಮಣ್ಯ ಮತ್ತು ಬಂಡಾಯದ ದ್ವಂದ್ವ

ದಸರಾ ವಿದ್ಯಮಾನದಲ್ಲಿ ಬ್ರಾಹ್ಮಣೀಯ ಹಿಂದುತ್ವವಾದಿ ಬಿಜೆಪಿಗಳು ಮುಂದಿಡುತ್ತಿರುವ ಹಿಂದುತ್ವವಾದಿ ತರ್ಕಗಳ ಹಿಂದಿರುವುದು ಮುಸ್ಲಿಮರನ್ನು ಅನ್ಯಗೊಳಿಸುವ ಹುನ್ನಾರ ಮಾತ್ರವಲ್ಲ, ಇದರ ಹಿಂದೆ ಅಬ್ರಾಹ್ಮಣ ಶೂದ್ರ ಮತ್ತು ದಲಿತ ಪ್ರಜ್ಞೆಯನ್ನು ಮತ್ತೊಮ್ಮೆ ಬ್ರಾಹ್ಮಣ್ಯಕ್ಕೆ ಅಧೀನಗೊಳಿಸುವ ಆಳವಾದ ಸಾಂಸ್ಕೃತಿಕ ಕುತಂತ್ರಗಳೂ ಇವೆ. ಅದರ ಜೊತೆಗೆ ಮುಸ್ಲಿಮ್-ಅಬ್ರಾಹ್ಮಣ ಮೈತ್ರಿಯನ್ನು ಒಡೆದುಹಾಕುವ ಚಾರಿತ್ರಿಕ ಸಂಚುಗಳ ಮುಂದುವರಿಕೆಯೂ ಇದೆ.

ಭಾಗ - 1

ಈಬಾರಿ ಸರಕಾರಿ ದಸರಾದ ಉದ್ಘಾಟನಾ ಗೌರವಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಹಾಗೂ ಬಂಡಾಯ ಹಿನ್ನೆಲೆಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ಮತ್ತದರ ಪಟಾಲಂ ನಿರೀಕ್ಷಿತವಾಗಿಯೇ ವಿರೋಧಿಸುತ್ತಿವೆ. ಎಂದಿನಂತೆ ಸಾಮಾನ್ಯ ಜನರ ಧಾರ್ಮಿಕ ನಂಬಿಕೆಗಳನ್ನು ದುರ್ಬಳಕೆ ಮಾಡಿಕೊಂಡು ಸರಕಾರದ ನೇತೃತ್ವದಲ್ಲಿ ನಡೆಯುವ ನಾಡಹಬ್ಬವೂ ಕೂಡ ಸಾರದಲ್ಲಿ ಹಿಂದೂಗಳಿಂದ ಹಿಂದೂಗಳಿಗಾಗಿ ಮಾಡುವ ದಸರಾ ಅಗಿರಬೇಕು ಎಂಬಂತಹ ಕುತರ್ಕಗಳನ್ನು ಮುಂದಿಡುತ್ತಿದ್ದಾರೆ. ಇದು ಅವರ ಹಿಂದೂ ರಾಷ್ಟ್ರವಾದಿ ಅಜೆಂಡಾದ ಮುಂದುವರಿಕೆಯೇ ಆಗಿದ್ದು ಅತ್ಯಂತ ಅಪಾಯಕಾರಿಯೂ ಆಗಿದೆ.

ಬಿಜೆಪಿಯ ವಿರೋಧದಲ್ಲಿ ಯಾವುದೇ ತರ್ಕವಿಲ್ಲದಿದ್ದರೂ ದಸರಾ ಹಬ್ಬಕ್ಕಿರುವ ಹಿಂದೂ ಪೌರಾಣಿಕ ಬೇರುಗಳು, ಮೈಸೂರು ರಾಜಸತ್ತೆಯ ಭಾಗವಾಗಿ ಆಚರಣೆಯಾಗುತ್ತಿದ್ದ ದಸರಾದ ಇತಿಹಾಸ ಹಾಗೂ ಸಮಾಜದಲ್ಲಿ ಇನ್ನೂ ಆಳವಾಗಿ ಬೇರುಬಿಡದ ಸೆಕ್ಯುಲರ್-ಪ್ರಜಾತಾಂತ್ರಿಕ ಮೌಲ್ಯಗಳಿಂದಾಗಿ ಬಿಜೆಪಿಗಳ ಪ್ರಚಾರಕ್ಕೆ ಒಂದಷ್ಟು ಜನರು ಕಿವಿಗೊಡುವಂತೆ ಮಾಡುತ್ತಿದೆ.

ಆದರೆ ಅದಕ್ಕೆ ಕಾಂಗ್ರೆಸ್ ಸರಕಾರದ ಪ್ರತಿಕ್ರಿಯೆ ಎಂದಿನಂತೆ ವೋಟು ರಾಜಕಾರಣದ ಚೌಕಟ್ಟನ್ನು ಬಿಟ್ಟು ಹೊರಬರುತ್ತಿಲ್ಲ.

ಆದರೆ ನಾಡನ್ನು ಸೆಕ್ಯುಲರ್ ಆಗಿ ಮತ್ತು ಪ್ರಗತಿಪರವಾಗಿ ಪುನರ್ ರೂಪಿಸಬೇಕಿದ್ದ, ಬಾನು ಮುಷ್ತಾಕ್ ಅವರು ಭಾಗವಾಗಿದ್ದ ಬಂಡಾಯದಂತಹ ಪ್ರತಿರೋಧಗಳೂ ಬಾನು ಅವರ ಭಾಗೀದಾರಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇದು ಸಹಜವಾಗಿಯೇ ಬಿಜೆಪಿಯ ಹಿಂದುತ್ವಕ್ಕೆ ಒಡ್ಡಬೇಕಿದ್ದ ಜನಪರ ಸೈದ್ಧಾಂತಿಕ ಪ್ರತಿರೋಧದ ಮೊನಚು ಮತ್ತು ಹರಹನ್ನು ಕಡಿಮೆ ಮಾಡಿಬಿಟ್ಟಿದೆ. ಈ ಮಧ್ಯೆ ಬಾನು ಮುಷ್ತಾಕ್ ಅವರೂ ಸಹ ‘‘ಚಾಮುಂಡೇಶ್ವರಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ’’ ಎಂಬ ಹೇಳಿಕೆಯನ್ನು ಕೊಟ್ಟು, ಕುಂಕುಮ ಧರಿಸಿ ಬಾಗಿನ ಸ್ವೀಕರಿಸಿ ‘ನಾಡಹಬ್ಬ’ದ ಹಿಂದುವೀಕರಣವನ್ನು ಪರೋಕ್ಷವಾಗಿ ಒಪ್ಪಿಕೊಂಡುಬಿಟ್ಟಿದ್ದಾರೆ.

ಹೀಗಾಗಿ ಈ ಬಾರಿಯ ಸರಕಾರಿ ದಸರಾವನ್ನು ಬಂಡಾಯ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸುತ್ತಿರುವ ವಿದ್ಯಮಾನ ಅದನ್ನು ವಿರೋಧಿಸುತ್ತಿರುವವರ ಬ್ರಾಹ್ಮಣೀಯ ಹಿಂದುತ್ವವಾದವನ್ನು ಮತ್ತು ಬಂಡಾಯದ ದ್ವಂದ್ವವನ್ನು ಏಕಕಾಲಕ್ಕೆ ಮುಂದಿಟ್ಟಿದೆ.

ಅದೇನೇ ಇದ್ದರೂ ದಸರಾ ವಿದ್ಯಮಾನದಲ್ಲಿ ಬ್ರಾಹ್ಮಣೀಯ ಹಿಂದುತ್ವವಾದಿ ಬಿಜೆಪಿಗಳು ಮುಂದಿಡುತ್ತಿರುವ ಹಿಂದುತ್ವವಾದಿ ತರ್ಕಗಳ ಹಿಂದಿರುವುದು ಮುಸ್ಲಿಮರನ್ನು ಅನ್ಯಗೊಳಿಸುವ ಹುನ್ನಾರ ಮಾತ್ರವಲ್ಲ, ಇದರ ಹಿಂದೆ ಅಬ್ರಾಹ್ಮಣ ಶೂದ್ರ ಮತ್ತು ದಲಿತ ಪ್ರಜ್ಞೆಯನ್ನು ಮತ್ತೊಮ್ಮೆ ಬ್ರಾಹ್ಮಣ್ಯಕ್ಕೆ ಅಧೀನಗೊಳಿಸುವ ಆಳವಾದ ಸಾಂಸ್ಕೃತಿಕ ಕುತಂತ್ರಗಳೂ ಇವೆ. ಅದರ ಜೊತೆಗೆ ಮುಸ್ಲಿಮ್-ಅಬ್ರಾಹ್ಮಣ ಮೈತ್ರಿಯನ್ನು ಒಡೆದುಹಾಕುವ ಚಾರಿತ್ರಿಕ ಸಂಚುಗಳ ಮುಂದುವರಿಕೆಯೂ ಇದೆ.

ಏಕೆಂದರೆ ಈ ಸಂಚುಗಳು ಮುಸ್ಲಿಮ್-ಅಬ್ರಾಹ್ಮಣ ಐಕ್ಯ ಅಹವಾಲಿ ನಿಂದಾಗಿ ನಾಲ್ವಡಿ ಮಹಾರಾಜರು 1920ರಲ್ಲಿ ಮೀಸಲಾತಿ ಜಾರಿ ಮಾಡಿ ಬ್ರಾಹ್ಮಣ ಆಧಿಪತ್ಯವನ್ನು ಕಡಿಮೆ ಮಾಡಿದ ಕಾಲದಿಂದಲೂ ನಡೆಯುತ್ತಾ ಬಂದಿವೆ. ಬಾನು ಮುಷ್ತಾಕ್ ವಿರೋಧ ಅದರ ಮುಂದುವರಿಕೆಯಷ್ಟೆ.

ಹೀಗಾಗಿ ಸಂಘಿಗಳ ‘ಬಾನು ಮುಷ್ತಾಕ್ ವಿರೋಧಿ’ ವಾದಗಳ ಹಿಂದಿನ ಹಿಂದುತ್ವವಾದಿ ಬ್ರಾಹ್ಮಣ್ಯದ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ನಾಡಹಬ್ಬವೋ? ಬ್ರಾಹ್ಮಣೀಯ ಸಂಸ್ಕೃತಿಯ ಯಾಜಮಾನ್ಯವೋ?

ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದಾದರೆ ಚಾಮುಂಡಿಗೆ ನಮಿಸಿ, ಕುಂಕುಮ ಮತ್ತು ಸೀರೆ ಉಟ್ಟು ಹಿಂದೂಗಳಂತೆ ಬರಲಿ ಎಂಬುದು ಸಂಘಿ ಬಿಜೆಪಿಗಳು ಶುರು ಮಾಡಿರುವ ಹೊಸ ವರಸೆ.

ಒಂದು ಪ್ರಜಾತಂತ್ರದಲ್ಲೂ ಹಿಂದೂ ಬ್ರಾಹ್ಮಣೀಯ ಪುರಾಣದ ಬೇರುಗಳು ಮತ್ತು ಸಂಕೇತಗಳು ಇರುವ ಆಚರಣೆಯನ್ನು ಸೆಕ್ಯುಲರ್ ನಾಡಹಬ್ಬವೆಂದು ಘೋಷಿಸಿ ಆ ಸಂಕೇತಗಳನ್ನು ಹಾಗೆಯೇ ಉಳಿಸಿಕೊಳ್ಳುವ ರಾಜಿ ಸಂಧಾನಗಳು ಮುಂದುವರಿದಾಗ ಈ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತವೆ.

ಹಾಗೇ ನೋಡಿದರೆ ‘ದಸರಾ’ ಎಂಬ ಪುರಾಣವೇ ಮೈಸೂರಿನ ಮೂಲನಿವಾಸಿಗಳ ಶೂದ್ರ-ದಲಿತ ಸಾಂಸ್ಕೃತಿಕ ಗುರುತನ್ನು ನಿರಾಕರಿಸಿ ಬ್ರಾಹ್ಮಣ್ಯವನ್ನು ಹೇರುವ ಆಚರಣೆ ಎಂಬ ಪ್ರತಿರೋಧ ಮೈಸೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ದಾಖಲಾಗುತ್ತಿದೆ. ಬ್ರಾಹ್ಮಣ್ಯದ ದಸರಾವನ್ನು ವಿರೋಧಿಸಿ ಮೂಲನಿವಾಸಿಗಳ ಮಹಿಷ ದಸರಾ ಆಚರಿಸಲಾಗುತ್ತಿದೆ. ಬಿಜೆಪಿ ಮತ್ತು ಸಂಘಿಗಳು ಈ ಮಹಿಷ ದಸರಾವನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದಿದ್ದರೆ ಕಾಂಗ್ರೆಸ್ ಸರಕಾರವೂ ಸಹ ಮಹಿಷ ದಸರಾಗೆ ಅಧಿಕೃತ ತಡೆಯನ್ನೊಡ್ಡುತ್ತಲೇ ಬಂದಿದೆ.

ಬಾನು ಮುಷ್ತಾಕ್-ಸರಕಾರದ ಅತಿಥಿಯೇ ಹೊರತು ಪೂಜಾರಿಯಲ್ಲ!

ಅದೇನೇ ಇರಲಿ. ದಸರಾ ಹಬ್ಬವನ್ನು ನಾಡಿನ ಎಲ್ಲಾ ಜನರಿಂದ ಆಯ್ಕೆಯಾದ ಸರಕಾರ ‘ನಾಡಹಬ್ಬ’ ಎಂದು ಘೋಷಿಸಿದೆ ಮತ್ತು ಅದಕ್ಕೆ ಬಾನು ಮುಷ್ತಾಕ್ ಅವರನ್ನು ಸರಕಾರವು ‘ಸ್ಟೇಟ್ ಗೆಸ್ಟ್- ಸರಕಾರದ ಅತಿಥಿ’ ಯಾಗಿ ಕರೆದಿದೆ. ಪೂಜಾರಿಯಾಗಿ ಅಲ್ಲ. ಹೀಗಾಗಿ ಬಾನು ಮುಷ್ತಾಕ್ ಅವರು ಕುಂಕಮ, ಸೀರೆ ಉಟ್ಟು ಚಾಮುಂಡಿಗೆ ನಮಿಸಿದರೆ ಮಾತ್ರ ಬರಲಿ ಎಂಬ ವಾದದ ಹಿಂದೆ ಈ ನಾಡು ಪ್ರಧಾನವಾಗಿ ಹಿಂದೂಗಳಿಗೆ ಸೇರಿದ್ದು ಎಂಬ ಹಿಂದುತ್ವದ ಠೇಂಕಾರ ಎದ್ದು ಕಾಣುತ್ತದೆ. ನಾಡಹಬ್ಬವು ಹಿಂದೂಗಳಿಂದ ಹಿಂದೂಗಳಿಗಾಗಿ ನಡೆಸಬೇಕು ಎನ್ನುವ ಕೋಮುವಾದಿ ಆಗ್ರಹವಿದೆ. ದಸರಾವನ್ನು ಸರಕಾರ ‘ನಾಡಹಬ್ಬ’ ಎಂದು ಘೋಷಿಸಿದ್ದರೂ ಅದನ್ನು ಮುಸ್ಲಿಮರ ರಮಝಾನ್ ಇತರ ಮುಸ್ಲಿಮ್ ಹಬ್ಬಗಳಿಗೆ ಹೋಲಿಸುವುದರ ಹಿಂದೆ ಮತ್ತು ಆ ಹಬ್ಬಗಳಿಗೆ ಹಿಂದೂಗಳು ಹೋದರೆ ಟೋಪಿ ಹಾಕಿಸಿ ಮಂಡಿಯೂರಿಸುವುದಿಲ್ಲವೇ ಹಾಗೆಯೇ ಬಾನು ಅವರು ಸೀರೆ -ಕುಂಕುಮ ಧರಿಸಿ ಚಾಮುಂಡಿ ನಮನ ಮಾಡಬೇಕೆಂಬ ಬಿಜೆಪಿಗಳ ವಾದದ ಹಿಂದೆ ದಸರಾ, ನಾಡು ಮತ್ತು ಸರಕಾರ ಹಿಂದೂಗಳದ್ದು ಮಾತ್ರ ಎಂಬ ‘ಹಿಂದೂ ರಾಷ್ಟ್ರ’ ರಾಜಕೀಯ ಸ್ಪಷ್ಟವಾಗಿದೆ.

ಹೀಗಾಗಿ ಬಾನು ಅವರು ಸೀರೆ ಉಟ್ಟು, ಕುಂಕುಮ ಧರಿಸಿ ಚಾಮುಂಡಿಗೆ ನಮಿಸಿಯೇ ಸರಕಾರದ ಗೌರವವನ್ನು ಸ್ವೀಕರಿಸಬೇಕೆಂಬ ಸಂಘಿ ಬಿಜೆಪಿಗಳ ವಾದ ಸಾರದಲ್ಲಿ ಬಾನು ಮುಷ್ತಾಕ್ ಅವರನ್ನು ಹಾಗೂ ಮುಸ್ಲಿಮ್ ಅನನ್ಯತೆಯನ್ನು ಡಿ-ಇಸ್ಲಾಮೈಸ್ ಮಾಡುವ ಮತ್ತು ದಸರಾವನ್ನು ಮರುಬ್ರಾಹ್ಮಣೀಕರಿಸುವ ಸಾಂಸ್ಕೃತಿಕ ಫ್ಯಾಶಿಸ್ಟ್ ರಾಜಕಾರಣವಿದೆ.

ಕನ್ನಡ ಭುವನೇಶ್ವರಿಯೋ? ಬ್ರಾಹ್ಮಣ ಭುವನೇಶ್ವರಿಯೋ?

ಕೆಲವು ವರ್ಷಗಳ ಕೆಳಗೆ ನಡೆದ ಜನಸಾಹಿತ್ಯ ಸಮಾವೇಶದಲ್ಲಿ ಬಂಡಾಯ ಸಾಹಿತಿ ಬಾನು ಮುಷ್ತಾಕ್ ಅವರು ಕನ್ನಡ-ಕರ್ನಾಟಕಗಳ ‘ರಾಷ್ಟ್ರೀಯ ಸಂಕೇತಗಳು’ ಕನ್ನಡ-ಕರ್ನಾಟಕದೊಳಗಿರುವ ಎಲ್ಲರನ್ನೂ ಪ್ರತಿನಿಧಿಸದೇ ಇರುವುದು ಅಥವಾ ಎಲ್ಲರೂ ಆ ಸಂಕೇತಗಳ ಜೊತೆ ಸಂಬಂಧವನ್ನು ಕಟ್ಟಿಕೊಳ್ಳಲಾಗದಿರುವಂತೆ ಇರುವುದನ್ನು ಪ್ರಶ್ನಿಸಿದ್ದರು. ಅಂತಹ ಸಂಕೇತಗಳು ಉಳಿದವರನ್ನು ಸಹಜ ‘ನಾಡಿಗ’ತನದಿಂದ ಹೊರಗಿಟ್ಟಂತಾಗುವುದಿಲ್ಲವೇ ಎಂಬ ಬಹಳ ಮುಖ್ಯವಾದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು.

ಇದೇ ಪ್ರಶ್ನೆಯನ್ನು ಮತ್ತೊಂದು ರೀತಿಯಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲೂ ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರು ಎತ್ತಿದ್ದರು.

ಕನ್ನಡ ರಾಷ್ಟ್ರೀಯತೆಯ ನಿರ್ಮಾಣದಲ್ಲಿ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಈ ನಾಡಿನ ದಲಿತರು, ರೈತಾಪಿಗಳು, ಶೂದ್ರರು, ಅಬ್ರಾಹ್ಮಣರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹಿಂದೂ ಬ್ರಾಹ್ಮಣರಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಭಾಗವಹಿಸಿದ್ದಾರೆ. ಆದರೂ ಕರ್ನಾಟಕದ ಸಂಕೇತವಾಗಿ ಕನ್ನಡಾಂಬೆಯನ್ನು ಪರಿಭಾವಿಸಿಕೊಳ್ಳುವಾಗ, ಆ ಕನ್ನಡಾಂಬೆಯು ಹಿಂದೂ ಬ್ರಾಹ್ಮಣ ಮಡಿ ಮುತ್ತೈದೆಯನ್ನು ಹೋಲುವಂತೆ ರೇಷ್ಮೆ ಸೀರೆ ಉಟ್ಟು, ಹಣೆಗೆ ಕಾಸಗಲ ಕುಂಕುಮ ಧರಿಸಿರುವ ‘ಭುವನೇಶ್ವರಿ’ ಆದದ್ದು ಹೇಗೆ? ದೇಶವನ್ನು ಮತ್ತು ನಾಡನ್ನು ತಾಯಿಯ ಜೊತೆಗೆ ಹೋಲಿಸುವುದೇಕೆ? ತಾಯಿಯೇ ಆಗಿದ್ದಲ್ಲಿ ಏಕೆ ಹೊಲದಲ್ಲಿ ಕೆಲಸ ಮಾಡುವ ರೈತಾಪಿ ಹೆಣ್ಣುಮಗಳಾಗಲಿಲ್ಲ? ಪೌರ ಕಾರ್ಮಿಕಳಾಗಲಿಲ್ಲ? ಮಾರಮ್ಮ-ಬೋರಮ್ಮ ಆಗಲಿಲ್ಲ? ಅಥವಾ ಮೇರಿಯಮ್ಮ, ಬೂಬಮ್ಮ ಆಗಲಿಲ್ಲ? ಅಥವಾ ಇತರ ರಾಷ್ಟ್ರೀಯತೆಗಳ ಲಾಂಛನಗಳಿರುವಂತೆ ಇವೆಲ್ಲವನ್ನೂ ಒಳಗೊಳ್ಳುವ ಮತ್ತೊಂದು ಸಂಕೇತ ರೂಪುಗೊಳ್ಳಲಿಲ್ಲ? ಕನ್ನಡವನ್ನು ‘ಬ್ರಾಹ್ಮಣೀಯ ಭುವನೇಶ್ವರಿ’ಯಾಗಿ ಪರಿಭಾವಿಸಿದವರು ಯಾರು? ಅದೇ ಆಧಿಕೃತವಾದದ್ದು ಹೇಗೆ?

ಇದು ಕರ್ನಾಟಕ, ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ರಾಷ್ಟ್ರೀಯತಾ ಹೋರಾಟಗಳಲ್ಲೂ ಬಂದಿರುವ ಪ್ರಶ್ನೆಯೇ. ಈ ರಾಷ್ಟ್ರೀಯ ವಿಮೋಚನಾ ಹೋರಾಟಗಳಲ್ಲಿ ನಾಡಿನ ಎಲ್ಲಾ ಜನರು-ಧರ್ಮ, ಲಿಂಗ ಜಾತಿ ಭೇದವಿಲ್ಲದೆ ಭಾಗವಹಿಸಿದ್ದರೂ, ಅದರ ಬೌದ್ಧಿಕ ಮತ್ತು ರಾಜಕೀಯ ನಾಯಕತ್ವ ವಹಿಸುವ ವರ್ಗ, ಜಾತಿಗಳ ಸಂಸ್ಕೃತಿಗಳೇ ‘ನಾಡ ಸಂಸ್ಕೃತಿ’ ಅಥವಾ ‘ರಾಷ್ಟ್ರ ಸಂಸ್ಕೃತಿ’ಯಾಗಿ ಹೇರಲ್ಪಡುತ್ತದೆ. ಅಧಿಕೃತಗೊಳಿಸಲ್ಪಡುತ್ತದೆ ಅಥವಾ ದಮನಿತರ ಪ್ರಜ್ಞೆ ಇನ್ನೂ ಜಾಗೃತಗೊಳ್ಳದ ಕಾಲದಲ್ಲಿ ಅದೇ ‘ಸಹಜ’ವೆಂದೂ ಪರಿಭಾವಿಸಲ್ಪಡುತ್ತದೆ.

ಅದೂ ಕೇವಲ ಸೀರೆ-ಕುಂಕುಮಗಳಿಗೂ ಸೀಮಿತವಾಗಿರುವುದಿಲ್ಲ. ಅದು ಹಿಂದೂ ಬ್ರಾಹ್ಮಣ ಆಹಾರ ಪದ್ಧತಿ, ಸಾಮಾಜಿಕ ಸಂಪ್ರದಾಯ ಇತ್ಯಾದಿಗಳನ್ನು ಶ್ರೇಷ್ಠ ಮತ್ತು ಅಧಿಕೃತ ಎಂದು ಹೇರುತ್ತಾ ದಮನಿತರ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ದಾಸ್ಯವನ್ನು ಮುಂದುವರಿಸುತ್ತದೆ.

ತಿಲಕ್‌ವಾದಿ ಕನ್ನಡತ್ವ ಮತ್ತು ಪ್ರಜಾತಾಂತ್ರಿಕ ಕನ್ನಡತ್ವ

ಕರ್ನಾಟಕ ಏಕೀಕರಣದ ಪ್ರಾರಂಭದ ಅಧ್ವರ್ಯುಗಳೆಲ್ಲರೂ ಹಿಂದೂ ಬ್ರಾಹ್ಮಣ ಅಥವಾ ಇತರ ಬಲಿಷ್ಠ ಜಾತಿಗಳಿಗೆ ಸೇರಿದವರಾಗಿದ್ದರು. ಅದರ ಮುಂಚೂಣಿಯಲ್ಲಿದ್ದ ಉತ್ತರದ ಗಳಗನಾಥರಿಂದ ಹಿಡಿದು ದಕ್ಷಿಣದ ‘ವೀರಕೇಸರಿ ಶ್ರೀನಿವಾಸ ಶಾಸ್ತ್ರಿ’ಗಳವರೆಗೆ ಎಲ್ಲರೂ ತಿಲಕ್ ಮಾದರಿ ರಾಷ್ಟ್ರೀಯತೆಯ ರಾಜಕೀಯದ ಆಳವಾದ ಪ್ರಭಾವಕ್ಕೆ ಒಳಗಾಗಿದ್ದವರು.

ಬಾಲಗಂಗಾಧರ ತಿಲಕರ ಭಾರತ ರಾಷ್ಟ್ರೀಯತೆಯು, ಫುಲೆ-ಅಂಬೇಡ್ಕರ್‌ರ ರಾಷ್ಟ್ರೀಯತೆಗೆ, ಗಾಂಧಿ-ನೆಹರೂ ರಾಷ್ಟ್ರೀಯತೆಗೆ ತದ್ವಿರುದ್ಧವಾಗಿತ್ತು. ಅದು ಸ್ವರಾಜ್ ಅನ್ನು ಘೋಷಿಸಿದರೂ ಬ್ರಾಹ್ಮಣೀಯ ಸ್ವರಾಜ್ ಆಗಿತ್ತು. ಅದು ಭಾರತದ ಸ್ವಾತಂತ್ರ್ಯವನ್ನು ಮತ್ತು ಆಧುನಿಕ ರಾಷ್ಟ್ರ ನಿರ್ಮಾಣವನ್ನು ಬ್ರಿಟಿಷ್ ವಸಾಹತುಶಾಹಿ ವಿರೋಧಿ ಸೆಕ್ಯುಲರ್ ಸಮಾಜವಾದಿಯಾಗಿ ರೂಪಿಸುವುದನ್ನು ಖಡಾಖಂಡಿತವಾಗಿ ನಿರಾಕರಿಸಿತ್ತು. ಬದಲಿಗೆ ಸ್ವಾತಂತ್ರ್ಯವನ್ನು ಮತ್ತು ರಾಷ್ಟ್ರವನ್ನು ಮುಸ್ಲಿಮ್ ವಿರೋಧಿ ಹಿಂದೂ ಬ್ರಾಹ್ಮಣ ರಾಷ್ಟ್ರದ ಪುನರುತ್ಥಾನವನ್ನಾಗಿ ಕಲ್ಪಿಸಿಕೊಂಡಿತು. ಗಳಗನಾಥರ ಕನ್ನಡಿಗರ ಕರ್ಮಕಥೆ ಇದಕ್ಕೊಂದು ಉದಾಹರಣೆ. ಈ ಪರಿಕಲ್ಪನೆಗೆ ತಕ್ಕಂತೆ ಭಾರತಾಂಬೆ ಮತ್ತು ಭುವನೇಶ್ವರಿಯೂ ಸಹ ಹಿಂದೂ ಬ್ರಾಹ್ಮಣ ಪಡಿಯಚ್ಚಿನಲ್ಲಿ ರೂಪುಗೊಂಡಿತು.

ಈ ಸಂಕೇತವು ಹಿಂದೂ ಅಬ್ರಾಹ್ಮಣರನ್ನು ಸಾಂಸ್ಕೃತಿಕವಾಗಿ ಅಧೀನಗೊಳಿಸಿದರೆ, ಹಿಂದೂಗಳಲ್ಲದವರನ್ನು ರಾಜಕೀಯವಾಗಿ ಅನ್ಯಗೊಳಿಸಿತು.

ಈ ಅಬ್ರಾಹ್ಮಣರ ಅಧೀನೀಕರಣ ಹಾಗೂ ಮುಸ್ಲಿಮ್-ಕ್ರಿಶ್ಚಿಯನ್ನರ ಅನ್ಯೀಕರಣ ಸ್ವಾತಂತ್ರ್ಯಾನಂತರವೂ ಮುಂದುವರಿಯಿತು. ಆದರೆ ಎಚ್ಚೆತ್ತ ಶೂದ್ರ-ದಲಿತ-ದಮನಿತ ಪ್ರಜ್ಞೆ ಪ್ರಶ್ನಿಸಲು ಶುರುಮಾಡಿದಾಗ ಅವರನ್ನು ದೇಶದ್ರೋಹಿ, ನಾಡದ್ರೋಹಿ ಎಂದು ಹಿಂದೂ ಬ್ರಾಹ್ಮಣೀಯ ರಾಜಕೀಯ ದಮನಿಸಲು ಪ್ರಯತ್ನಿಸುತ್ತದೆ.

ಆದರೆ ಹಿಂದೆ ಕರ್ನಾಟಕದ ದಮನಿತರ ಪ್ರಜ್ಞೆ ಜಾಗೃತಗೊಳ್ಳದ ಹೊತ್ತಿನಲ್ಲಿ ಬ್ರಾಹ್ಮಣ ಭುವನೇಶ್ವರಿ ಕರ್ನಾಟಕದ ಸಂಕೇತವಾಗಿದ್ದರೂ, ಸಮಬಾಳು-ಸಮಪಾಲಿನ ಪ್ರಜಾತಂತ್ರದಲ್ಲಿ ಅದನ್ನು ಮುಂದುವರಿಸುತ್ತಿರುವ ರಾಜಕಾರಣವನ್ನು ಪ್ರಶ್ನಿಸಬೇಕಾದದ್ದು ಅತ್ಯಂತ ಪ್ರಜಾತಾಂತ್ರಿಕ ಕ್ರಿಯೆ.

ಈ ಹಿಂದೆ ಬಾನು ಮತ್ತು ಈ ನಾಡಿನ ಬಂಡಾಯ ಪ್ರಜ್ಞೆ ಅದನ್ನು ಮಾಡಿತ್ತು. ಈಗ ಕಾಂಗ್ರೆಸ್ ಸರಕಾರ ದಸರಾಗೆ ಆಹ್ವಾನಿಸಿದ ತಕ್ಷಣ ಗೌರವವನ್ನು ಒಪ್ಪಿಕೊಂಡು ಈ ಪ್ರಶ್ನೆಗಳನ್ನು ಕೇಳದೆ ಮೌನವಹಿಸುವುದು ಎಷ್ಟು ಸರಿ?

share
ಶಿವಸುಂದರ್
ಶಿವಸುಂದರ್
Next Story
X