Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ವಕ್ಫ್: ಸುಪ್ರೀಂ ನಿರಾಶಾದಾಯಕ ಮಧ್ಯಂತರ...

ವಕ್ಫ್: ಸುಪ್ರೀಂ ನಿರಾಶಾದಾಯಕ ಮಧ್ಯಂತರ ತೀರ್ಪು

ಶಿವಸುಂದರ್ಶಿವಸುಂದರ್17 Sept 2025 11:20 AM IST
share
ವಕ್ಫ್: ಸುಪ್ರೀಂ ನಿರಾಶಾದಾಯಕ ಮಧ್ಯಂತರ ತೀರ್ಪು
ಅಲ್ಪ ಪರಿಹಾರ, ಅಪಾರ ಆತಂಕ

ವಕ್ಫ್ (ತಿದ್ದುಪಡಿ) ಕಾಯ್ದೆ-2025ನ್ನು ತಡೆಹಿಡಿಯಬೇಕೆಂದು ದಾಖಲಾದ ಅಹವಾಲುಗಳ ಬಗ್ಗೆ ಸುಪ್ರೀಂ ನೀಡಿರುವ ಮಧ್ಯಂತರ ಆದೇಶವು, ಸರಕಾರವೇ ತನ್ನ ಮತ್ತು ವಕ್ಫ್ ನಡುವೆ ಇರುವ ತಗಾದೆಗಳ ಬಗ್ಗೆ ತೀರ್ಮಾನ ಮಾಡಬಾರದೆಂಬ ಸ್ವಾಗತಾರ್ಹ ತೀರ್ಪನ್ನು ಬಿಟ್ಟರೆ, ಮಿಕ್ಕಂತೆ ಅತ್ಯಂತ ಸಮಸ್ಯಾತ್ಮಕವೂ, ಸಂವಿಧಾನಕ್ಕೆ ಆತಂಕ ಹುಟ್ಟಿಸುವಂತೆಯೂ, ಮೋದಿ ಸರಕಾರದ ಹಿಂದುತ್ವ ರಾಜಕಾರಣಕ್ಕೆ ಪೂರಕವಾಗಿಯೂ ಇದೆ.

ಮೋದಿ ಸರಕಾರ ಜಾರಿ ಮಾಡಿದ ಹಿಂದುತ್ವವಾದಿ ‘ವಕ್ಫ್ (ತಿದ್ದುಪಡಿ) ಕಾಯ್ದೆ-೨೦೨೫ಯನ್ನು ರದ್ದು ಮಾಡಬೇಕೆಂದು ಕೋರಿದ್ದ ದಾವೆಗಳ ಬಗ್ಗೆ (WP (C) 276/2025) ಸುಪ್ರೀಂನ ಮುಖ್ಯ ನ್ಯಾಯಾಧೀಶರಾದ ಗವಾಯಿ ಮತ್ತು ನ್ಯಾ. ಮಸಿಹ ಅವರ ದ್ವಿಸದಸ್ಯ ಪೀಠ ಮಧ್ಯಂತರ ತೀರ್ಪು ಕೊಟ್ಟಿದೆ. ಆದೇಶದ ಬಗ್ಗೆ ವರದಿ ಮಾಡಿರುವ Live Law ಮತ್ತು Bar And Bench ಲಾ ವೆಬ್ ಪತ್ರಿಕೆಗಳು ಹಾಗೂ ಮುಖ್ಯಧಾರೆ ಮಾಧ್ಯಮಗಳು ‘ಕಾಯ್ದೆಯ ಪ್ರಮುಖ ಅಂಶಗಳಿಗೆ ತಡೆಯಾಜ್ಞೆ’ ಎಂಬ ಶೀರ್ಷಿಕೆಯಲ್ಲಿ ಮಾಹಿತಿ ನೀಡುತ್ತಿವೆ.

ಆದರೆ ಮಧ್ಯಂತರ ತೀರ್ಪನ್ನು ಕೂಲಂಕಷವಾಗಿ ಗಮನಿಸಿದರೆ ಸುಪ್ರೀಂ ಪೀಠವು ಮೋದಿ ಸರಕಾರದ ತಿದ್ದುಪಡಿಗಳಲ್ಲಿ ಅತ್ಯಂತ ಸುಸ್ಪಷ್ಟವಾಗಿದ್ದ ಪ್ರಮುಖ ಸಂವಿಧಾನ ಬಾಹಿರ ಹಿಂದುತ್ವವಾದಿ ಅಂಶಗಳಿಗೆ ನ್ಯಾಯಾಂಗ ಮಾನ್ಯತೆ ನೀಡಿರುವ ನಿರಾಶಾದಾಯಕ ವಾಸ್ತವವು ಕಣ್ಣಿಗೆ ರಾಚುತ್ತದೆ.

ಆಸಕ್ತರು ಸುಪ್ರೀಂ ಮಧ್ಯಂತರ ಆದೇಶವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

https://api.sci.gov.in/supremecourt/2025/18261/ 18261_2025_1_1501_64403_Order_15-Sep-2025.pdf

1. ಮುಸ್ಲಿಮ್ ವಕ್ಫ್ ಗಳಲ್ಲಿ ಮುಸ್ಲಿಮೇತರರ ಸದಸ್ಯತ್ವಕ್ಕೆ ಸುಪ್ರೀಂ ಒಪ್ಪಿಗೆ- ಅತ್ಯಂತ ತಾರತಮ್ಯಕಾರಿ, ಅತ್ಯಂತ ಅಪಾಯಕಾರಿ

ಸುಪ್ರೀಂನ ಮಧ್ಯಂತರ ಆದೇಶದ ಅತ್ಯಂತ ಅಪಾಯಕಾರಿ ಅಂಶವೆಂದರೆ ಮೋದಿ ಸರಕಾರ ಅತ್ಯಂತ ಕೋಮುವಾದಿ ಉದ್ದೇಶದಿಂದ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯದ ವಕ್ಫ್ ಬೋರ್ಡುಗಳಲ್ಲಿ ಮುಸ್ಲಿಮೇತರ ಸದಸ್ಯರು ಕಡ್ಡಾಯವಾಗಿ ಇರಬೇಕೆಂದು ಮಾಡಿದ್ದ ನಿಯಮಗಳ ಸಾಂವಿಧಾನಿಕತೆಯನ್ನೇ ಪ್ರಶ್ನಿಸದೆ ಸುಪ್ರೀಂ ಒಪ್ಪಿಕೊಂಡಿರುವುದು.

ಈ ವರೆಗಿನ ಯಾವುದೇ ವಕ್ಫ್ ಕಾಯ್ದೆಗಳಲ್ಲಿ ಅಥವಾ ಇತರ ಧಾರ್ಮಿಕ ಸಂಸ್ಥೆಗಳ ನಿಯಂತ್ರಣಾ ಕಾಯ್ದೆಗಳಲ್ಲಿ ಇಂಥ ಅಂಶಗಳೇ ಇರಲಿಲ್ಲ. ಈಗಲೂ ತಿರುಪತಿ, ಕಾಶಿ ವಿಶ್ವನಾಥದಂಥ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಹಿಂದೂಯೇತರರು ಇರಬಾರದೆಂಬ ಕಾಯ್ದೆ ಇದೆ. ಹಾಗೆಯೇ ಕ್ರಿಶ್ಚಿಯನ್ ಮತ್ತು ಸಿಖ್ ಧಾರ್ಮಿಕ ನಿಯಂತ್ರಣ ಸಂಸ್ಥೆಗಳಲ್ಲೂ ಆಯಾ ಧಾರ್ಮಿಕರೇ ಇದ್ದಾರೆ. ಸಂವಿಧಾನದ ಆರ್ಟಿಕಲ್ 26 ತಮ್ಮ ಧಾರ್ಮಿಕ ಸಂಸ್ಥೆಗಳನ್ನು ತಾವೇ ನಿರ್ವಹಣೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಅದನ್ನು ನಿರಾಕರಿಸುವ ಕಾನೂನು/ಕಾಯ್ದೆ ಸಂವಿಧಾನ ಬಾಹಿರ.

ಹೀಗಿರುವಾಗ ಮುಸ್ಲಿಮರ ವಕ್ಫ್ ನಿಯಂತ್ರಣಗಳಲ್ಲಿ ಮಾತ್ರ ಕಡ್ಡಾಯವಾಗಿ ಮುಸ್ಲಿಮೇತರರು ಇರಬೇಕೆಂದು ಮೋದಿ ಸರಕಾರ ನಿಯಮ ಸೇರಿಸಿದ್ದೇ ಮುಸ್ಲಿಮ್ ಧಾರ್ಮಿಕ ವ್ಯವಸ್ಥೆಯನ್ನು ಹಿಂದುತ್ವದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ.

ಮೇಲ್ನೋಟಕ್ಕೆ ಸಂವಿಧಾನ ಬಾಹಿರವೆಂದು ಸ್ಪಷ್ಟವಾಗಿರುವ ಈ ನಿಯಮವನ್ನು ಸಾರಾಸಗಟು ರದ್ದು ಮಾಡುವ ಬದಲು ಸುಪ್ರೀಂ ಮಧ್ಯಂತರ ಆದೇಶ 20 ಸದಸ್ಯರ ಕೇಂದ್ರೀಯ ವಕ್ಫ್ ಕೌನ್ಸಿಲ್‌ನಲ್ಲಿ 4ಕ್ಕಿಂತ ಹೆಚ್ಚು ಮುಸ್ಲಿಮೇತರರು ಇರಬಾರದೆಂದೂ, ಹಾಗೆಯೇ ರಾಜ್ಯದ 7 ವಕ್ಫ್ ಬೋರ್ಡ್ ಸದಸ್ಯರಲ್ಲಿ ಮುಸ್ಲಿಮೇತರರು ಮೂವರಿಗಿಂತ ಹೆಚ್ಚಿರಬಾರದೆಂದೂ ಆದೇಶಿಸಿದೆ.

ಮೋದಿ ಸರಕಾರ ಜಾರಿಗೆ ತಂದಿದ್ದ ಕಾಯ್ದೆಯಲ್ಲಿ 22 ಜನರ ವಕ್ಫ್ ಕೌನ್ಸಿಲ್‌ನಲ್ಲಿ 10 ಸದಸ್ಯರು ಮಾತ್ರ ಕಡ್ಡಾಯವಾಗಿ ಮುಸ್ಲಿಮರಾಗಿರುತ್ತಿದ್ದರು. ಇನ್ನುಳಿದ 12 ಸದಸ್ಯರು ಮುಸ್ಲಿಮೇತರಾಗಿರುವ ಅವಕಾಶವನ್ನು ಈ ಕಾಯ್ದೆ ಒದಗಿಸುತ್ತಿತ್ತು. ಅಂದರೆ ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮರೇ ಮೈನಾರಿಟಿ ಆಗುತ್ತಿದ್ದರು.

ಆದರೆ 2025ರ ಕಾಯ್ದೆ ಸೆಕ್ಷನ್‌ಗೆ ತಿದ್ದುಪಡಿ ತಂದಿದೆ. ಹೊಸ ಕಾಯ್ದೆಯ ಪ್ರಕಾರ ಅದೇ ರೀತಿ ಮೋದಿ ಕಾಯ್ದೆಯ ಪ್ರಕಾರ ರಾಜ್ಯ ವಕ್ಫ್ ಬೋರ್ಡಿನ 11 ಜನ ಬೋರ್ಡ್ ಸದಸ್ಯರಲ್ಲಿ ಕಡ್ಡಾಯವಾಗಿ 4 ಜನರು ಮಾತ್ರ ಮುಸ್ಲಿಮರಿರುತ್ತಿದ್ದರು. ಸರಕಾರದಿಂದ ನೇಮಕವಾಗುವ ಉಳಿದ ಏಳು ಸದಸ್ಯರು ಮುಸ್ಲಿಮೇತರರಾಗುವ ಸಾಧ್ಯತೆ ಇತ್ತು.

ಹೀಗೆ ವಕ್ಫ್ (ತಿದ್ದುಪಡಿ) ಕಾಯ್ದೆ-2025 ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡ್ ಎರಡರಲ್ಲೂ ಮುಸ್ಲಿಮರನ್ನೇ ಮೈನಾರಿಟಿ ಮಾಡುವ ಹುನ್ನಾರವನ್ನು ಮಾಡಿತ್ತು.

ಇದೀಗ ಸುಪ್ರೀಂನ ಮಧ್ಯಂತರ ಆದೇಶ ಮೋದಿ ಸರಕಾರ ಜಾರಿಗೆ ತಂದಿದ್ದ ವಕ್ಫ್ ತಿದ್ದುಪಡಿ ಕಾಯ್ದೆ ಪ್ರಕಾರ ವಕ್ಫ್ ಬೋರ್ಡ್ ಮತ್ತು ಕೌನ್ಸಿಲ್‌ಗಳಲ್ಲಿ ಮುಸ್ಲಿಮರೇ ಮೈನಾರಿಟಿಗಳಾಗಿ, ಮುಸ್ಲಿಮೇತರರು ಮೆಜಾರಿಟಿಯಾಗಬಹುದಿದ್ದ ಅವಕಾಶಗಳನ್ನು ಮಾತ್ರ ತಡೆದಿದೆ. ವಕ್ಫ್ ಕೌನ್ಸಿಲ್ ಮತ್ತು ಬೋರ್ಡ್‌ಗಳಲ್ಲಿ ಮುಸ್ಲಿಮರೇ ಮೈನಾರಿಟಿಯಾಗಿಬಿಡುವ ಸಾಧ್ಯತೆಯನ್ನು ಮಾತ್ರ ತಪ್ಪಿಸಿದೆ.

ಆದರೆ ಅದೇ ಸಮಯದಲ್ಲಿ ಒಂದು ಮುಸ್ಲಿಮ್ ಧಾರ್ಮಿಕ ಸಂಸ್ಥೆಯಾದ ವಕ್ಫ್ ಬೋರ್ಡ್ ಮತ್ತು ವಕ್ಫ್ ಕೌನ್ಸಿಲ್‌ಗಳಲ್ಲಿ ಮುಸ್ಲಿಮೇತರರು ಸದಸ್ಯರಾಗ ಬಹುದೆಂಬ ಸಂವಿಧಾನ ಬಾಹಿರ ನಿಯಮಕ್ಕೆ ಸಮ್ಮತಿಯನ್ನು ನೀಡಿಬಿಟ್ಟಿದೆ.

ಹಿಂದೂ, ಮುಸ್ಲಿಮ್, ಕ್ರೈಸ್ತ ಇನ್ನಿತರ ಎಲ್ಲಾ ಧರ್ಮೀಯರು ಸಂವಿಧಾನದ ಆರ್ಟಿಕಲ್ 26ರ ಅಡಿಯಲ್ಲೇ ಧಾರ್ಮಿಕ ಹಾಗೂ ದತ್ತಿ ದಾನ ಸಂಸ್ಥೆಗಳನ್ನು ಕಟ್ಟಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಧಾರ್ಮಿಕ ಸಂಸ್ಥೆಗಳ ಆಡಳಿತ ಸಂಸ್ಥೆಗಳಲ್ಲಿ ಆಯಾ ಧರ್ಮೀಯರೇ ಇರುತ್ತಾರೆ. ಸರಕಾರದ ಪ್ರತಿನಿಧಿಗಳು ಇರುವ ಸಂದರ್ಭದಲ್ಲಿ ಅಂತಹ ಸರಕಾರಿ ಅಧಿಕಾರಿ ಅಥವಾ ಮಂತ್ರಿ ಆಯಾ ಧರ್ಮೀಯರೇ ಆಗಿರುತ್ತಿದ್ದರು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಕಾಶಿ ವಿಶ್ವನಾಥ ದೇವಸ್ಥಾನ, ಅಯೋಧ್ಯೆ ರಾಮಮಂದಿರ, ಇತ್ತೀಚೆಗೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ಗಳಲ್ಲೂ ಸರಕಾರಿ ಅಧಿಕಾರಿ ಮತ್ತು ಕರ್ಮಾಚಾರಿಗಳೂ ಹಿಂದೂಗಳೇ ಆಗಿರಬೇಕೆಂದು ಕಾನೂನು ಮಾಡಿವೆ.

ಹೀಗಿರುವಾಗ ಮೋದಿ ಸರಕಾರ ವಕ್ಫ್ ಸಂಸ್ಥೆಗಳಿಗೆ ಮಾತ್ರ ಮಾಡಿರುವ ಸಂವಿಧಾನ ವಿರೋಧಿ ಮೌಲಿಕ ತಾರತಮ್ಯವನ್ನು ಸುಪ್ರೀಂ ಏಕೆ ಪರಿಗಣಿಸಲಿಲ್ಲ?

ಹಾಗೆಯೇ ಕೌನ್ಸಿಲ್‌ನ ಸಿಇಒ ಮುಸ್ಲಿಮೇತರರೂ ಆಗಿರಬಹುದೆಂಬ ಅವಕಾಶವನ್ನು ರದ್ದು ಮಾಡಿಲ್ಲ. ಏಕೆ? ಬದಲಿಗೆ ಸಾಧ್ಯವಾದಷ್ಟು ಮುಸ್ಲಿಮರೇ ಇರುವಂತೆ ನೋಡಿಕೊಳ್ಳಬೇಕೆಂದು ‘ಸಲಹೆ’ ನೀಡಿದೆ. ಆದೇಶವನ್ನೇ ಜಾರಿಗೆ ತರದ ಸರಕಾರಗಳು, ಸಲಹೆಗಳನ್ನು ಒಪ್ಪುವುದೇ?

ಆ ಮೂಲಕ ಸುಪ್ರೀಂ ತನ್ನ ಮಧ್ಯಂತರ ಆದೇಶದಲ್ಲಿ ಮೋದಿ ಸರಕಾರದ ಹಿಂದುತ್ವವಾದಿ ತಿದ್ದುಪಡಿಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟಿದೆ. ಇವು ಅತ್ಯಂತ ಅಪಾಯಕಾರಿಯಾಗಿದೆ.

2. ವಕ್ಫ್ ಮಾಡುವವರ ಮುಸ್ಲಿಮ್‌ತನ ಸಾಬೀತು ಮಾಡಬೇಕೆಂಬ ಸಂವಿಧಾನ ಬಾಹಿರ ನಿಯಮ ರದ್ದಾಗಿಲ್ಲ. ಷರತ್ತು ಬದ್ಧವಾಗಿ ಜಾರಿಯಾಗಲಿದೆ!

ಮೋದಿ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ವಕ್ಫ್ ಅನ್ನು ಮುಸ್ಲಿಮರೇ ಮಾಡಬೇಕು ಮಾತ್ತು ಆ ಮುಸ್ಲಿಮ್ ಇಸ್ಲಾಮ್ ಅನ್ನು ಐದು ವರ್ಷಗಳ ಕಾಲ ಆಚರಿಸುತ್ತಿದ್ದರು ಎಂದು ಸಾಬೀತು ಮಾಡಬೇಕು ಎಂಬ ಹಾಸ್ಯಾಸ್ಪದವಾದ ಮತ್ತು ಅಪಾಯಕಾರಿ ಅಂಶಗಳಿದ್ದವು.

ಈ ಅಂಶಗಳು ಸಂವಿಧಾನ ಬಾಹಿರ.

ಏಕೆಂದರೆ ವಕ್ಫ್ ಅನ್ನು ಭಾರತದ ಯಾವುದೇ ಧರ್ಮಾನುಯಾಯಿ ಮಾಡಬಹುದು. ಅದೇ ರೀತಿ ಇತರ ಧರ್ಮಗಳ ಅನುಸರಣೆಗಾಗಿಯೂ ದತ್ತಿ-ಧರ್ಮವನ್ನು ಯಾರು ಬೇಕಾದರೂ ಮಾಡಬಹುದು. ಹೀಗಿರುವಾಗ ವಕ್ಫ್ ಅನ್ನು ಮಾತ್ರ ಮುಸ್ಲಿಮರೇ ಮಾತ್ರ ಮಾಡಬೇಕು ಎನ್ನುವ ನಿಯಮವೇ ಸಂವಿಧಾನದ ಆರ್ಟಿಕಲ್ 15ರ ಪ್ರಕಾರ ಸರಕಾರ ಮಾಡುವ ಧಾರ್ಮಿಕ ತಾರತಮ್ಯ.

ಹಾಗೆಯೇ ತನ್ನ ಆಸ್ತಿಯನ್ನು ಹೇಗೆ ಬೇಕಾದರೂ ಬಳಸಬಹುದು ಎಂಬ ಅಧಿಕಾರವನ್ನು ಸಂವಿಧಾನದ ಆರ್ಟಿಕಲ್ 300 ಕೊಡುತ್ತದೆ. ಆದರೆ ಮುಸ್ಲಿಮನಲ್ಲದ ವ್ಯಕ್ತಿ ತನ್ನ ಆಸ್ತಿಯನ್ನು ಹೇಗೆ ಬೇಕಾದರೂ ಬಳಸಬಹುದು ಆದರೆ ವಕ್ಫ್ ಮಾತ್ರ ಮಾಡಬಾರದು ಎಂಬ ನಿಯಮ ಮುಸ್ಲಿಮೇತರ ಭಾರತೀಯರ ಹಕ್ಕುಗಳನ್ನೂ ಕೂಡ ಉಲ್ಲಂಘಿಸುತ್ತದೆ. ಹೀಗಾಗಿ ಹಕ್ಕುಗಳ ರಕ್ಷಣೆ ಮಾಡಬೇಕಿರುವ ಸುಪ್ರೀಂ ಕೋರ್ಟ್ ಕಾಯ್ದೆಯ ಈ ಅಂಶವನ್ನೇ ಸಂವಿಧಾನ ಬಾಹಿರ ಎಂದು ರದ್ದು ಮಾಡಬೇಕಿತ್ತು.

ಆದರೆ ಸುಪ್ರೀಂ ಕೋರ್ಟ್ ಕಾಯ್ದೆಯ ಈ ಅಂಶದ ಅಸಾಂವಿಧಾನಿಕತೆಯನ್ನು ಪರಿಗಣನೆಗೆ ತೆಗೆದುಕೊಂಡಿದೆಯೇ?

ಇಲ್ಲ. ಬದಲಿಗೆ ಐದು ವರ್ಷಗಳ ಕಾಲ ಇಸ್ಲಾಮ್ ಅನುಸರಣೆಯನ್ನು ಮಾಡಿರಬೇಕು ಎಂಬ ಅಂಶಕ್ಕೆ ಮಾತ್ರ ತಡೆ ವಿಧಿಸಿದೆ. ಅದೂ ಕೂಡ ಆ ನಿಯಮ ಸಂವಿಧಾನ ಬಾಹಿರ ಎಂದಲ್ಲ. ಬದಲಿಗೆ ಇಸ್ಲಾಮ್ ಅನುಸರಣೆಯನ್ನು ಮಾಡಿದ್ದಾರೋ ಇಲ್ಲವೋ ಎನ್ನುವುದರ ಬಗ್ಗೆ ರಾಜ್ಯ ಸರಕಾರಗಳು ನಿಯಮವನ್ನು ರಚಿಸುವ ತನಕ ಮಾತ್ರ ಅದನ್ನು ತಡೆಹಿಡಿಯಲಾಗಿದೆ. ಅಂತಹ ನಿಯಮಗಳು ಇಲ್ಲದಿರುವಾಗ ಸರಕಾರಗಳು ಈ ಅಂಶವನ್ನು ಬೇಕಾಬಿಟ್ಟಿ ಬಳಸಬಹುದು ಎಂಬ ಕಾಳಜಿಯಿಂದ ನಿಯಮ ರಚಿಸುವವರೆಗೆ ತಡೆಯಾಜ್ಞೆ ವಿಧಿಸಲಾಗಿದೆ.

ಅಷ್ಟರ ಮಟ್ಟಿಗೆ ಅದು ಸರಿ. ಆದರೆ ರಾಜ್ಯ ಸರಕಾರಗಳು ಅದರ ಬಗ್ಗೆ ನಿಯಮ ರಚಿಸಿದ ನಂತರ ಈ ಕಾನೂನು ಜಾರಿಯಾಗುತ್ತದೆ.

ಅತ್ಯಂತ ಮೂಲಭೂತವಾಗಿ ಯಾವುದು ಧಾರ್ಮಿಕ ಅನುಸರಣೆ ಮತ್ತು ಯಾವುದು ಅಲ್ಲ ಎಂಬ ತೀರ್ಮಾನ ಮತ್ತು ಅದರ ಉಸ್ತುವಾರಿಯನ್ನು ಸರಕಾರ ಮಾಡುವುದೇ ಸಂವಿಧಾನದ ಆರ್ಟಿಕಲ್ 19 ಮತ್ತು 26ರ ಘೋರ ಉಲ್ಲಂಘನೆ.

ಹೀಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರಕಾರ ಇದರ ಬಗ್ಗೆ ಕಾನೂನು ಮಾಡಬಹುದು ಎಂಬ ಪರವಾನಿಗೆಯನ್ನು ನೀಡಿ ಸರಕಾರಕ್ಕೆ ಮುಸ್ಲಿಮರ ಧಾರ್ಮಿಕ ಒಳ ವಿಷಯಗಳಲ್ಲಿ ಮೂಗು ತೂರಿಸುವ ಅವಕಾಶ ನೀಡಿದೆ. ಇದು ಅತ್ಯಂತ ಆತಂಕಕಾರಿ.

3. ವಕ್ಫ್ ರಿಜಿಸ್ಟ್ರೇಷನ್‌ಗೆ ಮೋದಿ ಸರಕಾರ ತಂದಿರುವ ಸನಾತನ ಷರತ್ತುಗಳ ಬಗ್ಗೆ ಏಕೆ ತಡೆಯಿಲ್ಲ?

ಇದಲ್ಲದೆ ವಕ್ಫ್ ರಿಜಿಸ್ಟ್ರೇಷನ್ 1995ರ ಕಾಯ್ದೆಯಲ್ಲೂ ಇತ್ತು ಎನ್ನುವ ಕಾರಣವೊಡ್ಡಿ 2025ರ ಕಾಯ್ದೆಯಲ್ಲಿ ಮೋದಿ ಸರಕಾರ ರಿಜಿಸ್ಟ್ರೇಷನ್‌ಗೆ ತಂದಿರುವ ಸನಾತನ ತಿದ್ದುಪಡಿಗಳು ಒಡ್ಡುವ ಆತಂಕಗಳನ್ನು ಸುಪ್ರೀಂ ಸರಿಯಾಗಿ ಪರಿಗಣಿಸಿಲ್ಲ. ಉದಾಹರಣೆಗೆ ವಕ್ಫ್ ರಿಜಿಸ್ಟರ್ ಮಾಡುವಾಗ ಆ ವಕ್ಫ್ ಮಾಡಿದ ವಾಕಿಫರ ಹೆಸರು ಮತ್ತು ಇಸವಿಯನ್ನು ನೋಂದಾಯಿಸುವುದನ್ನು ಮೋದಿ ಸರಕಾರ ಕಡ್ಡಾಯ ಮಾಡಿದೆ. ಅವುಗಳನ್ನು ನೀಡದಿದ್ದರೆ ಸಂಬಂಧಪಟ್ಟ ಮುತವಲ್ಲಿಯನ್ನು ಶಿಕ್ಷಿಸುವ ಅವಕಾಶಗಳಿವೆ.

ಆದರೆ ನೂರಾರು ವರ್ಷ ಹಳೆಯ ವಕ್ಫ್‌ಗಳಿಗೆ ಈ ಬಗೆಯ ದಾಖಲೆಗಳಿರುವುದಿಲ್ಲ ಎನ್ನುವುದನ್ನೇ ವಕೀಲರು ಸುಪ್ರೀಂ ಗಮನಕ್ಕೆ ಪದೇ ಪದೇ ತಂದಿದ್ದರು.

ಈ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರಿಜಿಸ್ಟ್ರೇಷನ್ ಬಗ್ಗೆ ತಮ್ಮ ಲಿಖಿತ ಆದೇಶದಲ್ಲಿ ಪೂರ್ಣ ಆದೇಶವನ್ನು ಕೊಡುವುದಾಗಿ ಸುಪ್ರೀಂ ಹೇಳಿದೆ. ಅದರಲ್ಲಿ ಮೋದಿ ಸರಕಾರದ ರಿಜಿಸ್ಟ್ರೇಷನ್ ಕಡ್ಡಾಯದ ಹುನ್ನಾರ ನೈಜ ತೊಂದರೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ ಎಂದು ಆಶಿಸಬಹುದಷ್ಟೇ.

4. ಸಂವಿಧಾನ ವಿರೋಧಿ ಮೋದಿ ಸರಕಾರದ ಕಾಲದಲ್ಲಿ ಕೋರ್ಟ್‌ಗಳ ಸರಕಾರ ಪರ ಪೂರ್ವಗ್ರಹಗಳನ್ನು ಸಂವಿಧಾನ ರಕ್ಷಿಸುವುದೇ?

ಸುಪ್ರೀಂ ಕೋರ್ಟ್ ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲಾಗುತ್ತದೆ ಎಂದು ಹೇಳಿದೆ ಹಾಗೂ ಈ ಪ್ರಕರಣದಲ್ಲಿ ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಬೇಕೆಂಬ ಅಗತ್ಯ ಸಾಬೀತಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಏಕೆಂದರೆ ಜನರಿಂದ ಸಂವಿಧಾನ ಬದ್ಧವಾಗಿ ಆಯ್ಕೆಯಾದ ಸರಕಾರಗಳು ಕಾನೂನು-ಕಾಯ್ದೆಗಳನ್ನು ಸಂವಿಧಾನಕ್ಕೆ ಅನುಗುಣವಾಗಿಯೇ ಮಾಡಿರುತ್ತದೆ ಎಂದೇ ಕೋರ್ಟ್‌ಗಳು ಭಾವಿಸುತ್ತವೆ ಎಂದು ಹೇಳಿದೆ.

ಆದರೆ ಕೋರ್ಟ್ ಹೇಳಿರುವ ಕೊನೆಯ ಸಾಂವಿಧಾನಿಕ ಅಂಶವು ಪ್ರಜಾತಾಂತ್ರಿಕ ಸಂದರ್ಭಗಳಲ್ಲಿ ಸರಿಯಾದುದಾದರೂ, ಸಂವಿಧಾನ ವಿರೋಧಿ ನಡಾವಳಿಗಳಲ್ಲಿ ತೊಡಗಿರುವ ಮೋದಿ ಸರಕಾರದ ಸಂದರ್ಭದಲ್ಲಿ ನ್ಯಾಯಾಲಯ ಈ ರೀತಿ ಸರಕಾರದ ಪರವಾಗಿ ಪೂರ್ವಾಗ್ರಹ ತಾಳುವುದು ಸಂವಿಧಾನಕ್ಕೆ ಅಪಚಾರವನ್ನೇ ಮಾಡಬಹುದು.

5. ವಕ್ಫ್ ಮತ್ತು ಸರಕಾರದ ನಡುವಿನ ತಗಾದೆಗಳನ್ನೂ ಸರಕಾರವೇ ತೀರ್ಮಾನ ಮಾಡುವಂತಿಲ್ಲ- ಏಕೈಕ ಸ್ವಾಗತಾರ್ಹ ಆದೇಶ

ವಕ್ಫ್ ಮತ್ತು ಸರಕಾರದ ನಡುವಿನ ವ್ಯಾಜ್ಯಗಳನ್ನು ಸರಕಾರಿ ಅಧಿಕಾರಿ ತೀರ್ಮಾನ ಮಾಡುವಂತಿಲ್ಲ. ಏಕೆಂದರೆ ಅಂತಹ ಏರ್ಪಾಡು ಸಂವಿಧಾನವು ವಿಧಿಸಿರುವ ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ಅಧಿಕಾರ ವಿಭಜನೆಯನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಅಂತಹ ತಗಾದೆಗಳನ್ನು ಟ್ರಿಬ್ಯುನಲ್ ಮತ್ತು ಹೈಕೋರ್ಟ್‌ಗಳ ತೀರ್ಮಾನ ಮಾಡುವ ತನಕ ಅವು ವಕ್ಫ್ ಆಗಿಯೇ ಮುಂದುವರಿಯುತ್ತವೆ ಹಾಗೂ ವಕ್ಫ್ ಬೋರ್ಡ್ ಕೂಡ ಅದರ ಬಗ್ಗೆ ಅಂತಿಮ ತೀರ್ಮಾನ ಬರುವವರೆಗೆ ಮೂರನೆಯ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಅವಕಾಶ ಕೊಡುವಂತಿಲ್ಲ ಎಂಬ ಮತ್ತೊಂದು ತಡೆಯಾಜ್ಞೆಯನ್ನು ಸುಪ್ರೀಂ ನೀಡಿದೆ.

ಇದು ಮಾತ್ರ ಮಧ್ಯಂತರ ತೀರ್ಪಿನಲ್ಲಿ ನೀಡಿರುವ ಏಕೈಕ ಮತ್ತು ಸಂಪೂರ್ಣ ನ್ಯಾಯಪರ ಸಾಂವಿಧಾನಿಕ ಆದೇಶ ಮತ್ತು ಅದು ಸ್ವಾಗತಾರ್ಹ.

ಒಟ್ಟಿನಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ-2025ನ್ನು ತಡೆಹಿಡಿಯಬೇಕೆಂದು ದಾಖಲಾದ ಅಹವಾಲುಗಳ ಬಗ್ಗೆ ಸುಪ್ರೀಂ ನೀಡಿರುವ ಮಧ್ಯಂತರ ಆದೇಶವು, ಸರಕಾರವೇ ತನ್ನ ಮತ್ತು ವಕ್ಫ್ ನಡುವೆ ಇರುವ ತಗಾದೆಗಳ ಬಗ್ಗೆ ತೀರ್ಮಾನ ಮಾಡಬಾರದೆಂಬ ಸ್ವಾಗತಾರ್ಹ ತೀರ್ಪನ್ನು ಬಿಟ್ಟರೆ, ಮಿಕ್ಕಂತೆ ಅತ್ಯಂತ ಸಮಸ್ಯಾತ್ಮಕವೂ, ಸಂವಿಧಾನಕ್ಕೆ ಆತಂಕ ಹುಟ್ಟಿಸುವಂತೆಯೂ, ಮೋದಿ ಸರಕಾರದ ಹಿಂದುತ್ವ ರಾಜಕಾರಣಕ್ಕೆ ಪೂರಕವಾಗಿಯೂ ಇದೆ.

ಆದರೆ ಇದಿನ್ನೂ ಮಧ್ಯಂತರ ಆದೇಶ.

ಅಂತಿಮ ಆದೇಶ ನ್ಯಾಯ ಮತ್ತು ಸಂವಿಧಾನದ ಪರವಾಗಿ ಬರುವಂತೆ ಸುಪ್ರೀಂ ಕೋರ್ಟ್‌ನಲ್ಲೂ, ಬೀದಿಯಲ್ಲೂ ಹೋರಾಟ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲ.

share
ಶಿವಸುಂದರ್
ಶಿವಸುಂದರ್
Next Story
X