Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ನ್ಯಾ. ನಾಗಮೋಹನ್ ದಾಸ್ ವರದಿ: ಏನು ಸಾಧಕ?...

ನ್ಯಾ. ನಾಗಮೋಹನ್ ದಾಸ್ ವರದಿ: ಏನು ಸಾಧಕ? ಯಾರಿಗೆ ಬಾಧಕ?

ಶಿವಸುಂದರ್ಶಿವಸುಂದರ್14 Aug 2025 10:26 AM IST
share
ನ್ಯಾ. ನಾಗಮೋಹನ್ ದಾಸ್ ವರದಿ: ಏನು ಸಾಧಕ? ಯಾರಿಗೆ ಬಾಧಕ?

ಭಾಗ- 2

ಪರಿಶಿಷ್ಟ ಉಪಜಾತಿಗಳಲ್ಲಿ ಪ್ರಾತಿನಿಧ್ಯ ಅಸಮಾನತೆ

ಪರಿಶಿಷ್ಟರೊಳಗಿನ ಅಸಮಾನತೆಯನ್ನು ರುಜುವಾತುಪಡಿಸುವ ಮತ್ತೊಂದು ಪ್ರಮುಖ ಅಂಶ ಸರಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯದ ಪ್ರಮಾಣ. ದಾಸ್ ಆಯೋಗವು ಈ ವಿಷಯದ ಅಧ್ಯಯನ ಮಾಡಲು ಐತಿಹಾಸಿಕವಾಗಿ 2018ರವರೆಗಿನ ಅಂಕಿಅಂಶಗಳನ್ನು ಹೊಂದಿರುವ ರತ್ನಪ್ರಭಾ ಅವರ ವರದಿಯನ್ನು ಮತ್ತು ತಾವೇ ಖುದ್ದಾಗಿ ಹಾಲಿ ಪರಿಸ್ಥಿತಿಯನ್ನು ಪರಿಶೀಲಿಸಲು ಹಾಲಿ 45 ಇಲಾಖೆಗಳ ಜಾತಿವಾರು ಸರಕಾರಿ ಅಧಿಕಾರಿಗಳ ಮತ್ತು ನೌಕರರ ಯಾದಿಯನ್ನು ತರಿಸಿಕೊಂಡು ವಿಶ್ಲೇಷಿಸಿದೆ.

ಅದರ ಪ್ರಕಾರ ಒಟ್ಟಾರೆ ಪರಿಶಿಷ್ಟ ಜಾತಿಗಳ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಶೇ. 1.4ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಸರಕಾರಿ ಹುದ್ದೆಗಳಲ್ಲಿದ್ದಾರೆ.

ಆದರೆ ಇದರಲ್ಲಿ ಅತ್ಯಂತ ಹಿಂದುಳಿದ ದಲಿತ ಅಲೆಮಾರಿ ಇನ್ನಿತರ (ಪ್ರವರ್ಗ ‘ಎ’ದಲ್ಲಿರುವ) ಜಾತಿಗಳಲ್ಲಿ ಶೇ. 0.86ರಷ್ಟು ಮಾತ್ರ ಸರಕಾರಿ ನೌಕರಿಯಲ್ಲಿದ್ದಾರೆ. ಮಾದಿಗ ಸಂಬಂಧಿತ ಜಾತಿಗಳು ಶೇ. 0.96, ಹೊಲೆಯ ಸಂಬಂಧಿತ ಜಾತಿಗಳು 1.46 ಮತ್ತು ಸ್ಪಶ್ಯ ಜಾತಿಗಳು ಶೇ. 1.29ರಷ್ಟು ಪ್ರಾತಿನಿಧ್ಯವನ್ನು ಪಡೆದಿವೆ. ಮತ್ತು ಗ್ರೂಪ್ ‘ಇ’ ಪ್ರಮಾಣ ಶೇ. 5.35. ಇದರಲ್ಲಿ ಸ್ಪಶ್ಯ ಜಾತಿಗಳಲ್ಲಿ ಲಂಬಾಣಿ ಸಂಬಂಧಿತ ಜಾತಿಗಳ ಪಾಲು ಉಳಿದ ಸ್ಪಶ್ಯ ಜಾತಿಗಳಿಗಿಂತ ಹೆಚ್ಚು.

ಇದಲ್ಲದೆ ಹಾಲಿ ಸಾಲಿನಲ್ಲಿ ಕರ್ನಾಟಕ ಸರಕಾರದಲ್ಲಿ ಮಂಜೂರಾಗಿರುವ ಸರಕಾರಿ ನೌಕರಿಗಳು 11,73,297. ಆದರೆ ನೇಮಕಾತಿಯಾಗಿರುವುದು ಕೇವಲ 7,31,214. ಇದರಲ್ಲಿ ಶೇ. 17ರಷ್ಟು ಪರಿಶಿಷ್ಟ ಜಾತಿಗಳ ಮೀಸಲಾತಿ ಎಂದುಕೊಂಡರೆ (ಕೋರ್ಟ್‌ಗಳು ಇನ್ನು ಶೇ. 17ರ ಮೀಸಲಾತಿ ಯನ್ನು ಒಪ್ಪಿಲ್ಲ. ಮೋದಿ ಸರಕಾರ ಕರ್ನಾಟಕ ಸರಕಾರದ ಶೇ. 17 ಮೀಸಲಾತಿಯನ್ನು ಒಂಭತ್ತನೇ ಶೆಡ್ಯೂಲಿಗೆ ಸೇರಿಸಿಲ್ಲ. ಹೀಗಾಗಿ ಅದು ಶೇ. 15ಕ್ಕೆ ಇಳಿದರೂ ಇಳಿಯಬಹುದು)ಪರಿಶಿಷ್ಟರ ನೌಕರರ ಸಂಖ್ಯೆ 1,99,460 ಆಗಬೇಕು. ಆದರೆ ಹಾಲಿ ಭರ್ತಿಯಾಗಿರುವುದು ಕೇವಲ 1,47,671. ಅಂದರೆ 51,785 ಹುದ್ದೆಗಳು ಬ್ಯಾಕ್ ಲಾಗ್ ಆಗಿವೆ, ಈ 1,47,671 ಪರಿಶಿಷ್ಟ ಹುದ್ದೆಗಳಲ್ಲಿ 10 ಪರಿಶಿಷ್ಟ ಜಾತಿಗಳು ಅತಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿವೆ. 51 ಜಾತಿಗಳು ಅತಿ ಕಡಿಮೆ ಪಡೆದುಕೊಂಡಿವೆ.

ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರಕಾರಿ ಉದ್ಯೋಗ ಸಿಕ್ಕಿಲ್ಲ.

ಅಂದರೆ ಸರಕಾರಿ ನೌಕರಿಗಳಲ್ಲಿ ಒಟ್ಟಾರೆ ಪರಿಶಿಷ್ಟ ಜಾತಿಗಳ ಸರಾಸರಿ ಪ್ರಾತಿನಿಧ್ಯಕ್ಕಿಂತ ಬಹುಪಾಲು ಜಾತಿಗಳ ಪ್ರಾತಿನಿಧ್ಯ ಅತ್ಯಂತ ಕಡಿಮೆ ಇದ್ದರೆ ಕೆಲವು ಜಾತಿಗಳ ಪ್ರಾತಿನಿಧ್ಯ ಸರಾಸರಿಗಿಂತ ಅತಿ ಹೆಚ್ಚಿದೆ. ಇದೂ ಕೂಡ ಪರಿಶಿಷ್ಟ ಜಾತಿಗಳ ಮರುವರ್ಗೀಕರಣದ ಅಗತ್ಯವನ್ನು ರುಜುವಾತು ಪಡಿಸುತ್ತದೆ.

ಪರಿಶಿಷ್ಟ ಮಹಿಳೆಯರ ಅಸಮಾನ ಪ್ರಾತಿನಿಧ್ಯ

ಈ ಅಂಕಿಸಂಖ್ಯೆಗಳ ಸಂತೆಗಳಲ್ಲಿ ಚರ್ಚೆಗೆ ಬರದ ಮತ್ತೊಂದು ಸಂಗತಿಯೆಂದರೆ ಸರಕಾರಿ ನೌಕರಿಯಲ್ಲಿ ಎಲ್ಲಾ ಉಪಜಾತಿಗಳ ಮಹಿಳೆಯರ ಪ್ರಾತಿನಿಧ್ಯ ಅತ್ಯಂತ ಕಡಿಮೆ ಇರುವುದು. ವಾಸ್ತವದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಗಂಡು ಮತ್ತು ಹೆಣ್ಣಿನ ಪ್ರಮಾಣ ಸರಿಸಮವಾಗಿದೆ. ಆದರೆ ಸರಕಾರಿ ಹುದ್ದೆಗಳಲ್ಲಿ?

ಉದಾಹರಣೆಗೆ ಈಗ ಸರಕಾರಿ ಹುದ್ದೆಗಳಲ್ಲಿರುವ 1,47,671 ಪರಿಶಿಷ್ಟ ಜಾತಿಗಳ ನೌಕರರಲ್ಲಿ 1,05,142 ಪುರುಷರು. 40,044 ಮಾತ್ರ ಮಹಿಳೆಯರು. ಅಂದರೆ ಜನಸಂಖ್ಯೆಯಲ್ಲಿ ಮಹಿಳೆಯರು ಪುರುಷರಷ್ಟೆ ಇದ್ದರೂ ಮಹಿಳೆಯರು ಪುರುಷರಿಗಿಂತ ಅರ್ಧಕ್ಕರ್ಧ ಕಡಿಮೆ. ಹೊಲೆಯ ಸಂಬಂಧಿತ ಜಾತಿಗಳಲ್ಲಿ ಮಹಿಳೆಯರಿಗಿಂತ 2.4 ಪಟ್ಟು ಹೆಚ್ಚು ಪುರುಷರು ಸರಕಾರಿ ಕೆಲಸದಲ್ಲಿದ್ದರೆ, ಮಾದಿಗ ಸಂಬಂಧಿತ ಜಾತಿಗಳಲ್ಲಿ ಮಹಿಳೆಯರಿಗಿಂತ 2.67 ಪಟ್ಟು ಮಾದಿಗ ಪುರುಷರು ಸರಕಾರಿ ನೌಕರಿಯಲ್ಲಿದ್ದಾರೆ. ಲಂಬಾಣಿಗಳಲ್ಲಿ ಈ ಲಿಂಗ ತಾರತಮ್ಯ ಇನ್ನೂ ಹೆಚ್ಚು. ಲಂಬಾಣಿ ಮಹಿಳೆಯರಿಗಿಂತ 4.5 ಪಟ್ಟು ಹೆಚ್ಚು ಲಂಬಾಣಿ ಪುರುಷರು ಸರಕಾರಿ ನೌಕರಿಯಲ್ಲಿದ್ದಾರೆ.

ಪರಿಶಿಷ್ಟರೊಳಗಿನ ಅಸಮಾನ ರಾಜಕೀಯ ಪ್ರಾತಿನಿಧ್ಯ

ಶಾಸಕರು ಮತ್ತು ಸಂಸದರಾಗಿರುವ ಪರಿಶಿಷ್ಟ ಉಪಜಾತಿಗಳ ವಿವರಗಳಿಗಿಂತ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಉಪಜಾತಿಗಳ ವಿವರವನ್ನು ವರದಿ ನೀಡುತ್ತದೆ. ಅದರ ಪ್ರಕಾರ 27,917 ಪರಿಶಿಷ್ಟ ಗ್ರಾಮಪಂಚಾಯತ್ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲಿ 41 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಾನಗರ ಪಾಲಿಕೆಯಲ್ಲಿ 52 ಸದಸ್ಯತ್ವದಲ್ಲಿ ಈವರೆಗೆ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ. ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶವಿಲ್ಲ. ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಹಾಗೂ ಪಟ್ಟಣ ಪಂಚಾಯತ್‌ನ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಪ್ರಾತಿನಿಧ್ಯ ಪಡೆದವರಲ್ಲಿ ಭೋವಿ. ಲಂಬಾಣಿ, ಹೊಲೆಯ, ಮಾದಿಗ, ಎಕೆ, ಎಡಿ ಜಾತಿಗಳ ಪಾಲು ಹೆಚ್ಚು.

ಇದಲ್ಲದೆ ಭೂ ಹಿಡುವಳಿ ಮತ್ತು ಸರಕಾರದ ಆರ್ಥಿಕ ಅನುದಾನಗಳ ಪ್ರಶ್ನೆಯಲ್ಲೂ ಇದೇ ಬಗೆಯ ಫಲಾನುಭವದ ಪದ್ಧತಿ ಕಾಣುತ್ತದೆ.

ಈ ಯಾವುದೇ ಅಂಕಿಅಂಶಗಳು ಸಮಾಜದ ಪರಿಶಿಷ್ಟೇತರ ಸಮುದಾಯಗಳ ಪರಿಸ್ಥಿತಿಗಳಿಗೆ ಹೋಲಿಸಿದಲ್ಲಿ ಪರಿಶಿಷ್ಟರಲ್ಲಿ ಮುಂದುವರಿದವರ ಪರಿಸ್ಥಿತಿಯೂ ವಾಸ್ತವದಲ್ಲಿ ಹಿಂದೆಯೇ ಉಳಿದಿದೆ ಎಂದೇ ತಿಳಿಸುತ್ತದೆ.

ಆದರೆ ಈ ಅಧ್ಯಯನವು ಪರಿಶಿಷ್ಟರೊಳಗಿರುವ ಸಾಮಾಜಿಕ ಅಸಮಾನತೆ ಮತ್ತು ಅದನ್ನು ಸರಿದೂಗಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತಾಗಿದೆ.

ಇದಲ್ಲದೆ ಕರ್ನಾಟಕದಲ್ಲಿ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಸ್ಪಶ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಗಳೆಂದು ಪರಿಗಣಿಸಲಾಗಿದೆ. ಹಾಗೆ ನೋಡಿದರೆ ಅಸ್ಪಶ್ಯತೆಯೆಂಬ ಭೀಕರ ಸಾಮಾಜಿಕ ಅಸಮಾನತೆಯನ್ನು ಈ ಜಾತಿಗಳು ಸಾಮಾನ್ಯವಾಗಿ ಎದುರಿಸುವುದಿಲ್ಲ. ಆದರೆ ಸುಪ್ರೀಂ ತೀರ್ಪಿನ ಪ್ರಕಾರ ಒಳವರ್ಗೀಕರಣ ಮಾಡುವಾಗ ಈವರೆಗೆ ಮೀಸಲಾತಿ ಪಡೆಯುತ್ತಿದ್ದ ಯಾವ ಜಾತಿಗಳನ್ನೂ ಮೀಸಲಾತಿ ಪರಿಧಿಯಿಂದಲೇ ಹೊರಗಿಡುವಂತಿಲ್ಲ. ಎರಡನೆಯದಾಗಿ ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳಲ್ಲಿ ನೋಡಿದರೆ ಸ್ಪಶ್ಯ ಜಾತಿಗಳಲ್ಲಿನ ಕೆಲವು ಜಾತಿಗಳ ಹಿಂದುಳಿದಿರುವಿಕೆ ಅಸ್ಪಶ್ಯ ಜಾತಿಗಳ ಹಿಂದುಳಿದಿರುವಿಕೆಗೆ ಸಮಾನವೆಂಬಂತಿದೆ.

ಇದರ ಜೊತೆಗೆ ಕರ್ನಾಟಕದ ಎಕೆ, ಎಡಿ, ಎಎ ವರ್ಗೀಕರಣದ ಸಮಸ್ಯೆ. ಸದಾಶಿವ ಆಯೋಗದ ಸಂದರ್ಭಕ್ಕೆ ಹೋಲಿಸಿದಲ್ಲಿ ಅದರ ಪ್ರಮಾಣ 44 ಲಕ್ಷದಿಂದ 4.74 ಲಕ್ಷಕ್ಕಿಳಿದಿದೆ. ಆದರೆ ಆ 4.74 ಲಕ್ಷ ಜನರು ತಮ್ಮನ್ನು ಎಕೆ, ಎಡಿ ಎಂದೇ ಗುರುತಿಸಬೇಕೆಂದು ಪ್ರತಿಪಾದಿಸಿದಾಗ ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಹಾಗೆಯೇ ಅವರನ್ನು ಮೀಸಲಾತಿ ಪರಿಧಿಯಿಂದ ಹೊರ ಹಾಕುವ ಅಧಿಕಾರವೂ ಇಲ್ಲ. ಅದು ಸುಪ್ರೀಂ ನಿರ್ದೇಶನದ ಉಲ್ಲಂಘನೆಯಾಗುತ್ತದೆ. ಆದರೆ ಮೂಲ ಜಾತಿ ತಿಳಿಯದೆ ಅವರನ್ನು ಮಾಧುಸ್ವಾಮಿ ವರದಿ ಮಾಡಿದಂತೆ ಇತರ ಜಾತಿಗಳಲ್ಲಿ ಸೇರಿಸಲು ಬರುವುದಿಲ್ಲ. ಹೀಗಾಗಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಮೀಸಲಾತಿ ನೀಡಿರುವುದೂ ಕೂಡಾ ತರ್ಕ ಬದ್ಧವಾಗಿದೆ.

ದಾಸ್ ಆಯೋಗವೂ ಅಂತಿಮವಾಗಿ ಹೇಳಿರುವಂತೆ ಇಲ್ಲಿರುವ ಅಂಕಿಸಂಖ್ಯೆಗಳು ನಿಂತ ನೀರೇನೋ ಇಲ್ಲ. ಹೊಸ ಹಾಗೂ ಇನ್ನಷ್ಟು ಆಳವಾದ ಸಾಮಾಜಿಕ ಪರಿಶೋಧನೆಯು ಮಾರ್ಪಾಡುಗಳನ್ನು ಆಗ್ರಹಿಸಿದರೆ ಮಾಡಲೇಬೇಕಾಗುತ್ತದೆ. ಆದರೆ ಅದಕ್ಕೆ ಇದಕ್ಕಿಂತ ವೈಜ್ಞಾನಿಕವಾದ ಮತ್ತು ಆಳವಾದ ಅಧ್ಯಯನ ಬೇಕು. ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡದಂತೆ ಕೆಲವು ಉಪಜಾತಿಗಳ ಮರುವರ್ಗೀಕರಣ ಸಮರ್ಪಕವಾಗಿಲ್ಲ ಎಂದು ರುಜುವಾತಾದರೆ ಅದನ್ನು ಸರಿಪಡಿಸಬಹುದಾದ ಸಾಧ್ಯತೆ ಇರಬೇಕು. ಆದರೆ ಅದಕ್ಕೆ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮಾನದಂಡಕ್ಕಿಂತ ಹಿಂದುಳಿದಿರುವಿಕೆ ಮಾನದಂಡವಾಗಬೇಕು ಅಷ್ಟೇ. ಕೇವಲ ಭಾವನೆಗಳು ಮತ್ತು ಅಭಿಪ್ರಾಯಗಳು ಸತ್ಯಗಳ ಪುರಾವೆಯಾಗುವುದಿಲ್ಲ. ಅಲ್ಲಿಯವರೆಗೆ ದಾಸ್ ವರದಿಯೇ ವೈಜ್ಞಾನಿಕವಾಗಿರುತ್ತದೆ ಅಷ್ಟೇ.

ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಪರಿಶಿಷ್ಟರ 101 ಜಾತಿಗಳಲ್ಲಿ ಹಿಂದುಳಿದಿರುವಿಕೆಯಲ್ಲಿ ಅಸಮಾನತೆಯಿದ್ದು, ಈ ಅಧ್ಯಯನ ಅದನ್ನು ಸಾಬೀತು ಪಡಿಸಿದೆ ಮತ್ತು ಅದನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಿ ಎ,ಬಿ,ಸಿ,ಡಿ,ಇ ಎಂಬ ವರ್ಗೀಕರಣವನ್ನು ಮಾಡಿದೆ.

ಆದ್ದರಿಂದ ನಾಗಮೋಹನ್ ದಾಸ್ ವರದಿ ಜಾರಿಯಾಗಬೇಕಿದೆ.

ಆದರೆ ಅದರಲ್ಲಿ ಬರಲಿರುವ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳಾಗಬೇಕಿದೆ.

ಏಕೆಂದರೆ ಈ ವರದಿಯು ಹಿಂದುಳಿದಿರುವಿಕೆಯ ಆಧಾರದಲ್ಲಿ ಗುಂಪುಗಳನ್ನು ಮಾಡಿದ್ದರೂ, ಅತ್ಯಂತ ವಂಚಿತ ಜಾತಿಗಳ ಹಿಂದುಳಿದ ಜಾತಿಗಳಿಗೆ ಕೊಟ್ಟಿರುವ ಶೇ. 1ರಷ್ಟು ಮೀಸಲಾತಿಯಿಂದ ಅಲ್ಲಿರುವ 59 ಜಾತಿಗಳಿಗೆ ಏನು ಉಪಯೋಗ ಆಗಬಹುದು. ಅದನ್ನು ಹೆಚ್ಚಿಸಲು ಅವರ ಜನಸಂಖ್ಯೆ 6 ಲಕ್ಷಕ್ಕಿಂತಲೂ ಕಡಿಮೆ. ಹೀಗಿರುವಾಗ ಆ ಸೂಕ್ಷ್ಮ ಅತ್ಯಂತ ವಂಚಿತ ಜಾತಿಗಳ ವಿಮೋಚನೆ ಹೇಗೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಜನಸಂಖ್ಯಾ ಪ್ರಮಾಣ ಮತ್ತು ಹಿಂದುಳಿದಿರುವಿಕೆಗಳ ನಡುವಿನ ಅನುಪಾತದ ನಿರ್ಧಾರಕ್ಕೆ ಇನ್ನೂ ಸುಧಾರಿತ ಮಾನದಂಡ ಬೇಕಾಗಬಹುದು .

ಹಿಂದುಳಿದವರ ಬ್ರಾಹ್ಮಣ್ಯ ಮತ್ತು ಮುಂದುವರಿಯಬೇಕಾದ ವರ್ಗಸಮರ

ಮೀಸಲಾತಿ ಮತ್ತು ಒಳಮೀಸಲಾತಿಗಳು ಪಾಲನ್ನು ಹಂಚಿಕೊಳ್ಳಲು ಅನುಸರಿಸಬೇಕಾದ ಸಾಮಾಜಿಕ ನ್ಯಾಯ.

ಮೀಸಲಾತಿ ಎಂಬುದು ಭಾರತೀಯ ಶೋಷಕ ಪ್ರಜ್ಞೆಯ ಸೋಗಲಾಡಿತನಗಳನ್ನು ಕಳೆದ ಒಂದು ಶತಮಾನದಿಂದಲೂ ಬಯಲಿಗೆಳೆಯುತ್ತ ಬಂದಿರುವ ಸಾಧನವಾಗಿದೆ. ಅದು ಶೋಷಕ ಭಾರತೀಯ ಪ್ರಜ್ಞೆಯನ್ನು ಒಳಗಿಂದಲೇ ತಿವಿಯುತ್ತಾ ಬಂದಿರುವ ಕತ್ತಿಯೂ ಆಗಿದೆ. ಅದೇ ಸಮಯದಲ್ಲಿ ಶೋಷಿತ ಜಾತಿಗಳ ಒಂದು ವರ್ಗದ ಬದುಕನ್ನು ಮತ್ತು ಘನತೆಯನ್ನು ರಕ್ಷಿಸುವ ಗುರಾಣಿಯೂ ಆಗಿದೆ.

ಆಳದಲ್ಲಿ ಮೀಸಲಾತಿ ಎಂಬುದು ತನ್ನದಲ್ಲದ, ಇತರರಿಂದ ಕಸಿದುಕೊಂಡ ಪಾಲನ್ನು ಮರಳಿಸಿ ಮತ್ತೆ ಮನುಷ್ಯರಾಗುವ ಅವಕಾಶವನ್ನು ಶೋಷಕರಿಗೆ ಕಲ್ಪಿಸಿಕೊಡುತ್ತದೆ. ಶೋಷಿತರಿಗೆ ದೈನ್ಯದಿಂದ ಹೊರಬಂದು ಘನತೆ ಮತ್ತು ಹಕ್ಕುಗಳನ್ನು ಪಡೆದ ಪೂರ್ಣ ನಾಗರಿಕರಾಗುವ ಅವಕಾಶವನ್ನು ಕಲ್ಪಿಸುತ್ತದೆ.

ಆದರೆ ಕಸಿದು ತಿನ್ನುವುದೇ ಮೌಲ್ಯವೂ, ಧರ್ಮವೂ ಅಗಿರುವ ಸಮಾಜವೊಂದರಲ್ಲಿ ಸಾಮಾಜಿಕ ನ್ಯಾಯದ ಹಾದಿ ಸುಗಮವಲ್ಲವೇ ಅಲ್ಲ.

ಹೀಗಾಗಿ ಮೀಸಲಾತಿಯ ನೀತಿಗಳು ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡಿದ ತಕ್ಷಣ ಸಾಮಾನ್ಯವಾಗಿ ಈವರೆಗೆ ಮೀಸಲಾತಿಯ ಸೌಲಭ್ಯವನ್ನು ಇತರರಿಗಿಂತ ಹೆಚ್ಚಿಗೆ ಉಂಡ ಶೋಷಿತ ಸಮುದಾಯಗಳೊಳಗಿನ ಬ್ರಾಹ್ಮಣೀಕರಣಗೊಂಡ ಕೆಲವು ವರ್ಗಗಳಲ್ಲೂ ಸಾಮಾಜಿಕ ನ್ಯಾಯವಿರೋಧಿ ಬ್ರಾಹ್ಮಣೀಯ ತರ್ಕಗಳಾದ ಪ್ರತಿಭೆ, ಅಭಿವೃದ್ಧಿ, ಅನ್ಯಾಯ ಗಳೆಂಬ ರಾಷ್ಟ್ರೀಯ ಪ್ರಶ್ನೆಗಳು ಹುಟ್ಟಿಕೊಂಡು ಬಿಡುತ್ತವೆ. ಅದು ಶೋಷಿತರೊಳಗಿನ ಸಹಜ ಮೈತ್ರಿಯನ್ನು ಸಾಗಬೇಕಾದ ಸುದೀರ್ಘ ದಾರಿಯನ್ನು ಮರೆಸುತ್ತದೆ.

ಉದಾಹರಣೆಗೆ ಕರ್ನಾಟಕದ 1.05 ಕೋಟಿ ಪರಿಶಿಷ್ಟ ಸಮುದಾಯದಲ್ಲಿ ಸರಕಾರಿ ನೌಕರಿಯಲ್ಲಿರುವುದು ಕೇವಲ 1.45 ಲಕ್ಷ ಮಾತ್ರ. ಅಂದರೆ ಸಮುದಾಯದ ಶೇ. 1.5ರಷ್ಟು ಮಾತ್ರ.

ಉಳಿದ ಶೇ.98.5ರಷ್ಟು ಜನರ ಸಾಮಾಜಿಕ ನ್ಯಾಯದ ಪ್ರಶ್ನೆಯೇನು?

ಎಲ್ಲರಿಗೂ ಸರಕಾರಿ ನೌಕರಿಯನ್ನು ಕೊಡಲಾಗುವುದಿಲ್ಲ.

ಆದರೆ ಘನತೆಯಿಂದ ಬದುಕಲು ಬೇಕಾದ ಭೂಮಿ, ಇನ್ನಿತರ ಪಾಲಿನ ಆಸರೆಗಳು ಬೇಕಲ್ಲವೇ? ಸಾಮಾಜಿಕ ನ್ಯಾಯವನ್ನು ಮೀಸಲಾತಿಗೆ ಮಾತ್ರ ಸೀಮಿತಗೊಳಿಸಿದಾಗ ಅದು ಸಮುದಾಯದ ಶೇ. 1.5ರಷ್ಟು ಜನರ ನ್ಯಾಯವೂ, ಉಳಿದವರಿಗೆ ಮಾಡುವ ಅನ್ಯಾಯದ ಪ್ರಶ್ನೆಯೂ ಆಗಿಬಿಡುವುದಿಲ್ಲವೇ?

ಹಾಗೆ ನೋಡಿದರೆ ಈ 1.45 ಲಕ್ಷ ಉದ್ಯೋಗಸ್ಥ ಜನರೇ ಸಮುದಾಯದ ಪ್ರಜ್ಞಾವಂತ, ಸುಶಿಕ್ಷಿತ ಮಧ್ಯಮವರ್ಗವೂ ಆಗಿದೆ. ಉಳಿದ ಶೇ. 98.5ರಷ್ಟು ಜನರ ಆಸಕ್ತಿ ಗಳನ್ನು ಈ ವರ್ಗ ತನ್ನ ಅಜೆಂಡಾ ಮಾಡಿಕೊಳ್ಳದೆ ಉಳಿದವರಿಗೆ ನ್ಯಾಯ ಸಿಗಬಲ್ಲದೇ?

ಅದರ ಬದಲಿಗೆ ತಮ್ಮಂತೇ ದಮನಿತರಾಗಿರುವ ಸಮುದಾಯಗಳಿಂದ ಹೆಚ್ಚಿನ ಪಾಲನ್ನು ಪಡೆಯುವತ್ತ ಹೆಚ್ಚಿನ ಸಮಯವನ್ನು ಕೇಂದ್ರೀಕರಿಸಿದರೆ ಬಲಿಷ್ಠ ಜಾತಿಗಳ ಮಧ್ಯಮವರ್ಗದಂತೆ ಸ್ವಾರ್ಥಿ ಹಾಗೂ ಅಪಾಯಕಾರಿ ವರ್ಗವಾಗಿಬಿಡುವುದಿಲ್ಲವೇ?

ಬಲಿಷ್ಠ ಜಾತಿಗಳು ಕೇವಲ ತಮ್ಮ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಲು ತಮ್ಮ ಜನಸಂಖ್ಯೆ ಉಳಿದವರಿಗಿಂತ ಹೆಚ್ಚೆಂದು ಸಾಬೀತು ಮಾಡಲು ತಮ್ಮದೇ ಸಮುದಾಯಗಳ ಇತರ ಉಪಸಮುದಾಯಗಳಿಗೆ ನ್ಯಾಯ ಒದಗಿಸುವ ಸಾಧನವಾಗಬಹುದಿದ್ದ ಕಾಂತರಾಜು ಆಯೋಗವೇ ರದ್ದಾಗಲು ಕಾರಣರಾದರು. ಹಿಂದುಳಿದಿರುವಿಕೆಗಿಂತ ಜನಸಂಖ್ಯಾ ಪ್ರಮಾಣದ ತರ್ಕಗಳು ಸಮುದಾಯದ ಬಲಿಷ್ಠರ ಸೇವೆಯನ್ನು ಮಾತ್ರ ಮಾಡುತ್ತವೆ.

ಇದಲ್ಲದೆ ಇಂದಿನ ಖಾಸಗೀಕರಣ, ಜಾಗತೀಕರಣದ ಯುಗದಲ್ಲಿ ಈ 1.45 ಲಕ್ಷ ಉದ್ಯೋಗಗಳು ಉಳಿಯುವುದಿಲ್ಲ. ಈಗಾಗಲೇ 1.9 ಲಕ್ಷ ಇರಬೇಕಾಗಿದ್ದ ಉದ್ಯೋಗ ಬ್ಯಾಕ್‌ಲಾಗ್ ಕಾರಣಕ್ಕೆ 1.45 ಲಕ್ಷಕ್ಕೆ ಇಳಿದಿದೆ. ನವ ಉದಾರವಾದಿ ಆಡಳಿತ ಸುಧಾರಣೆಯ ಹೆಸರಲ್ಲಿ ಇದು ಇನ್ನೂ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತೊಂದು ಕಡೆ ಈ 1.45 ಲಕ್ಷ ಲೆಕ್ಕಾಚಾರ ನಿಂತಿರುವುದೂ ಕೂಡ ಮೀಸಲಾತಿಯ ಮೇಲೆ ಶೇ. 50ರ ಮೇಲ್ಮಿತಿ ಗಮನಕ್ಕೆ ತೆಗೆದುಕೊಂಡಿಲ್ಲ. ಒಂದೊಮ್ಮೆ ಶೇ. 50 ಮೇಲ್ಮಿತಿ ಅನ್ವಯವಾದರೆ 1.45 ಲಕ್ಷ 1.35 ಲಕ್ಷಕ್ಕೆ ಇಳಿಯುತ್ತದೆ. ಇದೇ ರೀತಿ ಖಾಸಗೀಕರಣ ಹೊರಗುತ್ತಿಗೆ ಮುಂದು ವರಿದರೆ ಅದು ಕ್ರಮೇಣ 50 ಸಾವಿರಕ್ಕೂ ಇಳಿಯಬಹುದು. ಹೀಗಾಗಿ ಇರುವ 1.45 ಲಕ್ಷ ಉದ್ಯೋಗ ಉಳಿಸಿಕೊಳ್ಳಬೇಕೆಂದರೂ ಶೇ. 50ರ ಮೇಲ್ಮಿತಿ ರದ್ದಿಗೆ, ಖಾಸಗೀಕರಣ ರದ್ದಿಗೆ ಒಟ್ಟು ಗೂಡಿ ಎಲ್ಲಾ ಪರಿಶಿಷ್ಟರು ಮಾತ್ರವಲ್ಲದೆ ಎಲ್ಲಾ ದುಡಿಯುವ ಜನತೆ ಹೋರಾಡುವ ಅಗತ್ಯವಿದೆ.

ಇನ್ನು ಸಮುದಾಯದ ಶೇ. 99 ಜನರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ದೇಶದ ಸಂಪತ್ತಿನಲ್ಲಿ ಸಮಾನ ಪಾಲಿಗೆ ಎಲ್ಲಾ ದಮನಿತ ಜಾತಿ ವರ್ಗಗಳೂ ಒಗ್ಗೂಡಿ ಹೋರಾಡುವ ಅಗತ್ಯವಿದೆ.

ಆದ್ದರಿಂದ ದಮನಿತ ಸಮುದಾಯ ಮತ್ತು ನಾಡಿನ ಪ್ರಜ್ಞಾವಂತರು ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯ ಜಾರಿಗೆ ಹೋರಾಡುತ್ತಲೇ ಸಾಮಾಜಿಕ ನ್ಯಾಯದ ಮುಂದಿನ ಹೋರಾಟಗಳಿಗೆ ಅಣಿಯಾಗಬೇಕಿದೆ.

ಅದಕ್ಕೆ ಮುನ್ನ ತಮ್ಮೊಳಗಿನ ಬ್ರಾಹ್ಮಣ್ಯವನ್ನು, ಬಂಡವಾಳಶಾಹಿಯನ್ನು ಕೊಂದು ಬುದ್ಧನನ್ನು, ಅಂಬೇಡ್ಕರ್‌ರನ್ನು ಆವಾಹಿಸಿಕೊಳ್ಳಬೇಕಿದೆ. ಹಾಗೆಂದರೆ ಅರ್ಥವಿಷ್ಟೇ:

ಒಳಮೀಸಲಾತಿಯಲ್ಲಿ ಒಳಬ್ರಾಹ್ಮಣ್ಯ ನುಸುಳದಿರಲಿ...

ತನಗಿಂತ ದುರ್ಬಲರಿಗೆ ಹೆಚ್ಚಿನ ಪಾಲು ಕೊಡುವುದು

ಬುದ್ಧವಾದ, ಅಂಬೇಡ್ಕರ್‌ವಾದ.

ತನ್ನದಲ್ಲದ ಪಾಲನ್ನು ಕಸಿಯುವುದು

ಬ್ರಾಹ್ಮಣ್ಯ, ನವಬ್ರಾಹ್ಮಣ್ಯ.

ಬುದ್ಧ, ಅಂಬೇಡ್ಕರ್ ಗೆಲ್ಲಲಿ..

share
ಶಿವಸುಂದರ್
ಶಿವಸುಂದರ್
Next Story
X