ಮೋದಿ ಸರಕಾರ ಚುನಾವಣಾ ಆಯೋಗದ ಮೂಲಕ ದೇಶಾದ್ಯಂತ NRC ಜಾರಿ ಮಾಡುತ್ತಿದೆಯೇ?

ಭಾಗ- 2
Special Intensive Revision ಎಂದರೆ NRC
ಈ ಸ್ಪೆಷಲ್ ಇನ್‌ಟೆನ್ಸೀವ್ ರಿವಿಶನ್ ಪ್ರಕ್ರಿಯೆ ಮತಪಟ್ಟಿ ನಿಯಮಗಳಲ್ಲೇ ಇಲ್ಲದ ಮೋದಿ ಸರಕಾರದ ಆವಿಷ್ಕಾರವಾಗಿದೆ. ಚುನಾವಣಾ ಆಯೋಗದ ಆದೇಶದಂತೆ:
1.ಬಿಹಾರದಲ್ಲಿ ಮತದಾನಕ್ಕೆ ಅರ್ಹವಿರುವ 7.8 ಕೋಟಿ ಜನರು ಈಗ ಚುನಾವಣಾಧಿಕಾರಿಗಳಿಗೆ ತಾವು ಭಾರತದ ನಾಗರಿಕರು ಎಂದು ಸಾಬೀತು ಪಡಿಸುವ ಮೂಲಕ ಮತದಾರರೆಂದು ನಿರೂಪಿಸಿಕೊಳ್ಳಬೇಕು.
2. ಜೂನ್ 25ರಿಂದ ಬಿಹಾರದ ಎಲ್ಲಾ ಮನೆಗಳಿಗೂ, ಪ್ರತಿಯೊಬ್ಬ ಮತದಾರರಿಗೂ ಭರ್ತಿ ಮಾಡಬೇಕಿರುವ ಅರ್ಜಿ ನಮೂನೆಯನ್ನು ಒದಗಿಸಲಾಗುವುದು. ಪ್ರತಿಯೊಬ್ಬ ಮತದಾರರೂ ಅದರಲ್ಲಿ ಕೇಳಿರುವ ದಾಖಲೆಗಳನ್ನು ನೀಡಿ, ತಮ್ಮ ಫೋಟೊ ಲಗತ್ತಿಸಿ, ಖುದ್ದು ಸಹಿ ಹಾಕಿ ಜುಲೈ 25ರೊಳಗೆ ಚುನಾವಣಾಧಿಕಾರಿಗಳಿಗೆ (ಬ್ಲಾಕ್ ಲೆವೆಲ್ ಆಫೀಸರ್) ತಲುಪಿಸಬೇಕು.
ಬಿಹಾರದಲ್ಲಿ ದೇಶದಲ್ಲೇ ಆತಿ ಹೆಚ್ಚು ಜನರು (ಶೇ. 20ಕ್ಕಿಂತ ಜಾಸ್ತಿ-ಕೆಲವು ಕಡೆ ಶೇ. 50) ಉದ್ಯೋಗವನ್ನು ಅರಸಿಕೊಂಡು ವಲಸೆ ಹೋಗುತ್ತಾರೆ. ಜುಲೈ-ಆಗಸ್ಟ್ ತಿಂಗಳುಗಳು ದೂರ ದೂರದ ಪಂಜಾಬ್-ಹರ್ಯಾಣ ಇತ್ಯಾದಿ ರಾಜ್ಯಗಳಿಗೆ ಬಿಹಾರದಿಂದ ಪುರುಷರು ಕೃಷಿ ಕೆಲಸಗಳಿಗೆ ಅತಿ ಹೆಚ್ಚು ವಲಸೆ ಹೋಗುವ ತಿಂಗಳುಗಳು. ಬಿಹಾರ ಅತ್ಯಂತ ಹೆಚ್ಚು ಅನಕ್ಷರಸ್ಥ ರಾಜ್ಯ. ಈ ತಿಂಗಳುಗಳಲ್ಲಿ ಮನೆಗಳಲ್ಲಿ ವೃದ್ಧರು ಮತ್ತು ಮಹಿಳೆಯರು ಮಾತ್ರ ಇರುತ್ತಾರೆ. ಹೊಟ್ಟೆಪಾಡಿಗೆ ವಲಸೆ ಹೋಗಿರುವ ಪುರುಷರು ಮರಳಿ ಬರುವುದು ನವೆಂಬರ್‌ನಲ್ಲಿ. ಆದರೆ ಜುಲೈ 25ರ ಒಳಗೆ ಪ್ರತಿಯೊಬ್ಬರೂ ಸಹಿ ಹಾಕಿ, ಸರಕಾರ ಕೇಳುವ ದಾಖಲೆಗಳನ್ನು (ಅವರ ಬಳಿ ಇದ್ದರೆ) ಸರಕಾರಿ ಕಚೇರಿಗಳಿಂದ ತಂದು ಒದಗಿಸಬೇಕು.
3. 2025ರ ಆಗಸ್ಟ್ 1ರಂದು ಮತದಾರರು ಕೊಟ್ಟ ಅರ್ಜಿಗಳ ಪರಿಶೀಲನೆಯನ್ನು ಮಾಡಿ, ಸೂಕ್ತ ದಾಖಲೆಗಳನ್ನು ನೀಡದ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಹಂಗಾಮಿ ಮತದಾರರ ಪಟ್ಟಿಯನ್ನು ಘೋಷಿಸಲಾಗುವುದು. ಪಟ್ಟಿಯಲ್ಲಿ ಇರದವರು ಆಗಸ್ಟ್ 25ರ ತನಕ ದೂರು ಕೊಟ್ಟು ದಾಖಲೆ ಒದಗಿಸಬೇಕು. ಅವೆಲ್ಲವನ್ನು ಪರಿಶೀಲಿಸಿ ಸೆಪ್ಟಂಬರ್ 30ರಂದು ಅಂತಿಮ ಮತದಾರರ ಪಟ್ಟಿಯನ್ನು ಘೋಷಿಸಲಾಗುವುದು.
ಸೂಕ್ತ ದಾಖಲೆಗಳನ್ನು ಕೊಡದ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗುವುದಲ್ಲದೆ ಅವರನ್ನು ಸಂಭಾವ್ಯ ಅಕ್ರಮ ವಲಸಿಗರೆಂದು ಪರಿಗಣಿಸಿ ಅವರ ಹೆಸರುಗಳನ್ನು ಅಕ್ರಮ ವಿದೇಶಿಯರನ್ನು ಹೊರಹಾಕುವ ಇಲಾಖೆಗೆ ಕಳಿಸಲಾಗುವುದು.
ವಾಸ್ತವದಲ್ಲಿ ಇಲ್ಲಿ ಆಯೋಗ ಮಾಡುತ್ತಿರುವುದು ಮತದಾರರ ಪರಿಷ್ಕರಣೆಯಲ್ಲ. ನಾಗರಿಕತ್ವ ಪರಿಶೀಲನೆ. ಅದು ಚುನಾವಣಾ ಆಯೋಗದ ಕೆಲಸವಲ್ಲ. ಅದನ್ನು ಮಾಡಬೇಕಿರುವುದು ಗೃಹ ಇಲಾಖೆ. ಚುನಾವಣಾ ಆಯೋಗ ಹೇಗೆ ಸಾರದಲ್ಲಿ ನಾಗರಿಕತ್ವ ನಿರಾಕರಣೆ ಮಾಡುತ್ತಿದೆಯೆಂದು ನೋಡೋಣ..
4. ಬಿಹಾರದಲ್ಲಿ 2003ರಲ್ಲಿ ಸ್ಪೆಶಲ್ ಇನ್ಟೆನ್ಸೀವ್ ರಿವಿಶನ್ ಪ್ರಕ್ರಿಯೆ ನಡೆದಿತ್ತು. ಹೀಗಾಗಿ 2003ರ ಪಟ್ಟಿಯಲ್ಲಿ ಹೆಸರಿರುವವರು ಆ ಪಟ್ಟಿಯ ನಕಲನ್ನು ತಮ್ಮ ಅರ್ಜಿಯ ಜೊತೆ ಲಗತ್ತಿಸಬೇಕು. ಆದರೆ 2003ರ ನಂತರ 18 ವರ್ಷ ತುಂಬಿದವರು ಅಥವಾ 2003ರ ಪಟ್ಟಿಯಲ್ಲಿ ಯಾವುದಾದರೂ ಕಾರಣಕ್ಕೆ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರು ಸರಕಾರ ಕೇಳುವ ದಾಖಲೆಗಳನ್ನು ತೋರಿಸದಿದ್ದಲ್ಲಿ ಮತದಾರರೆಂದೂ ಸಾಬೀತು ಮಾಡಲಾಗುವುದಿಲ್ಲ. ಅಂತಹವರು ನಾಗರಿಕತ್ವವನ್ನೂ ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದಾರೆ.
ಆದರೆ ಬಿಹಾರದಲ್ಲಿ 2003ರ ನಂತರ ಐದು ಲೋಕಸಭಾ ಚುನಾವಣೆಗಳು ಮತ್ತು ಐದು ಶಾಸನಸಭಾ ಚುನಾವಣೆಗಳು ನಡೆದಿವೆ. 2003ರ ಪಟ್ಟಿಯಲ್ಲಿ ಇರದಿದ್ದವರೂ, 2003ರ ನಂತರ 18 ವರ್ಷ ತುಂಬಿದ ಸುಮಾರು ಐದು ಕೋಟಿ ಜನ ಮತದಾನ ಮಾಡಿದ್ದಾರೆ. ಈಗ ಅವರೆಲ್ಲರೂ ಸರಕಾರ ಕೇಳುವ ದಾಖಲೆಗಳನ್ನು ಕೊಡದಿದ್ದರೆ ಮತದಾರರೇ ಅಲ್ಲವೆಂದು ಹೊರಹಾಕಲಾಗುತ್ತದೆ. ಹಾಗಿದ್ದಲ್ಲಿ 2003ರಿಂದ ಬಿಹಾರದಲ್ಲಿ ಆಯ್ಕೆಯಾದ ಸರಕಾರಗಳು ಅವು ಮಾಡಿದ ತೀರ್ಮಾನಗಳು ಮತ್ತು ಬಿಹಾರ ಕೊಟ್ಟ ಲೋಕಸಭಾ ಸೀಟುಗಳು ಅದರ ಆಧಾರದಲ್ಲಿ 2024ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಎಲ್ಲವೂ ಅನೂರ್ಜಿತವಾಗಬೇಕಲ್ಲವೇ?
5. ಈಗ ಮತಪಟ್ಟಿ ಪರಿಷ್ಕರಣೆಗೆ ಸರಕಾರ ಹಾಕುತ್ತಿರುವ ಷರತ್ತುಗಳನ್ನು ನೋಡೋಣ:
-2003ರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಅದರ ನಕಲನ್ನು ಕಚೇರಿಯಿಂದ ಪಡೆದು, ಫೋಟೊ ಲಗತ್ತಿಸಿ, ಖುದ್ದು ಸಹಿ ಮಾಡಿ ಜುಲೈ 25ರೊಳಗೆ ಸಲ್ಲಿಸಬೇಕು.
-2003ರ ಪಟ್ಟಿಯಲ್ಲಿ ಹೆಸರಿಲ್ಲದವರು:
ಅ) 1987ಕ್ಕೆ ಮುಂಚೆ ಜನಿಸಿದವರಾದರೆ ತಮ್ಮ ಹುಟ್ಟಿದ ದಿನ ಹಾಗೂ ಸ್ಥಳವನ್ನು ಸಾಬೀತು ಮಾಡುವ ದಾಖಲೆಗಳನ್ನು ಒದಗಿಸಬೇಕು.
ಆ) 1987-2004ರ ನಡುವೆ ಹುಟ್ಟಿದವರಾದರೆ ತಮ್ಮ ಹುಟ್ಟು ದಿನ ಹಾಗೂ ಸ್ಥಳದ ಪುರಾವೆಯ ಜೊತೆಗೆ ತಂದೆ ತಾಯಿಗಳಲ್ಲಿ ಒಬ್ಬರು ಭಾರತೀಯರೇ ಎಂಬುದಕ್ಕೆ ಪುರಾವೆ ಕೊಡಬೇಕು.
ಇ) 2004ರ ನಂತರ ಹುಟ್ಟಿದವರಾದರೆ ತಮ್ಮ ಹುಟ್ಟು ದಿನ ಮತ್ತು ಸ್ಥಳಗಳ ಪುರಾವೆಯ ಜೊತೆಗೆ ತಂದೆ-ತಾಯಿಗಳಿಬ್ಬರೂ ಭಾರತೀಯರು ಎಂದು ಸಾಬೀತು ಮಾಡುವ ಪುರಾವೆಗಳನ್ನು ಒದಗಿಸಬೇಕು.
ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇವು ಮತ ಪರಿಷ್ಕರಣೆಯ ಷರತ್ತುಗಳಲ್ಲ. ನಾಗರಿಕತ್ವ ಪುರಾವೆಯ ಷರತ್ತುಗಳು. ಅರ್ಥಾತ್ NRC ಷರತ್ತುಗಳು.
6. ಇರುವ ದಾಖಲೆಗಳನ್ನು ನಿರಾಕರಣೆ ಎಂದರೆ ನಾಗರಿಕತ್ವ ನಿರಾಕರಣೆಯೇ ಅಲ್ಲವೇ?
ಹುಟ್ಟಿದ ದಿನ ಮತ್ತು ಸ್ಥಳಗಳ ಪುರಾವೆಗಳನ್ನು ಒಪ್ಪಿಕೊಳ್ಳಲು ಆಯೋಗವು 11 ದಾಖಲೆಗಳನ್ನು ಪಟ್ಟಿ ಮಾಡಿದೆ.
ಅವುಗಳಲ್ಲಿ ಮುಖ್ಯವಾದವು ಸರಕಾರಿ ಕಚೇರಿಯಲ್ಲಿ ಕೊಡುವ ಜನನ ಪ್ರಮಾಣ ಪತ್ರ, ಮೆಟ್ರಿಕ್ಯುಲೇಶನ್ ಅಂದರೆ ಹತ್ತನೇ ತರಗತಿಯ ನಂತರ ಕೊಡುವ ಶಾಲಾ ದಾಖಲೆಗಳು, ಸಾರ್ವಜನಿಕ ಇಲಾಖೆಗಳಲ್ಲಿ ಅಥವಾ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಲ್ಲಿ ಕೊಡಲಾಗಿರುವ ಪರಿಚಯ ಪತ್ರ, ಪಾಸ್‌ಪೋರ್ಟು, ಆಸ್ತಿ ಪತ್ರಗಳು.
ಅಂದರೆ ಪ್ರಧಾನವಾಗಿ ಉಳ್ಳವರ, ಮೇಲ್ವರ್ಗ ಮತ್ತು ಮೇಲ್ಜಾತಿಗಳ ಬಳಿ ಸಹಜವಾಗಿ ಇರುವ ಕಾಗದ ಪತ್ರಗಳು.
ಆದರೆ ವಿದ್ಯೆ, ಆಸ್ತಿ ಮತ್ತು ಅಧಿಕಾರಗಳಿಲ್ಲದ ಬಹುಪಾಲು ಬಡಜನರ, ಬಹುಜನರ ಬಳಿ ಈ ದಾಖಲೆಗಳಿರುತ್ತವೆಯೇ?
ಆದರೆ ಬಿಹಾರದಲ್ಲಿ ಈಗಲೂ ಜನನ ದಾಖಲೆಯು ಶೇ. 50ನ್ನು ಮೀರುವುದಿಲ್ಲ. ಶೇ. 25ಕ್ಕಿಂತ ಹೆಚ್ಚು ಜನ ಮೆಟ್ರಿಕ್ಯುಲೇಶನ್ ತಲುಪುವುದಿಲ್ಲ. ಸರಕಾರಿ ಕೆಲಸಗಳಲ್ಲಿರುವವರ ಸಂಖ್ಯೆ ಶೇ. 2ಕ್ಕಿಂತ ಕಡಿಮೆ. ಪಾಸ್‌ಪೋರ್ಟ್ ಇರುವವರ ಸಂಖ್ಯೆ ಶೇ. 2. ಆಸ್ತಿರಹಿತ ದಿನಗೂಲಿ ನೌಕರರ ಸಂಖ್ಯೆ ಶೇ. 50ಕ್ಕಿಂತ ಹೆಚ್ಚು. ಆಸ್ತಿ ಇದ್ದರೂ ಅದು ಮಹಿಳೆಯರ ಹೆಸರಿನಲ್ಲಿ ಇರುವುದಿಲ್ಲ.
ಹೀಗಾಗಿ ಸರಕಾರ ಒಪ್ಪಿಕೊಳ್ಳುವ ದಾಖಲೆಯನ್ನು ಕೊಡಲು ಶೇ. 75ಕ್ಕಿಂತಲೂ ಹೆಚ್ಚು ಬಡ ಜನರಿಗೆ ಸಾಧ್ಯವೇ ಇಲ್ಲ.
ಬಿಹಾರದ ಸಾಮಾನ್ಯ ಜನರ ಬಳಿ ಇರುವ ದಾಖಲೆ ಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಚುನಾವಣಾ ಆಯೋಗವೇ ಕೊಟ್ಟಿರುವ ವೋಟರ್ ಕಾರ್ಡ್ ಹಾಗೂ ನರೇಗಾದ ಜಾಬ್ ಕಾರ್ಡುಗಳು. ಆದರೆ ಈ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲವೆಂದು ಚುನಾವಣಾ ಆಯೋಗ ಕೋರ್ಟ್‌ನಲ್ಲೂ ಸ್ಪಷ್ಟಪಡಿಸಿಬಿಟ್ಟಿದೆ.
ಹೀಗಾಗಿ ಸಾರದಲ್ಲಿ ಚುನಾವಣಾ ಆಯೋಗ ಬಿಹಾರದ ಬಡಜನರನ್ನು ಮತ್ತು ಬಹುಜನರಿಗೆ ಮತದ ಹಕ್ಕನ್ನು ಮಾತ್ರವಲ್ಲದೆ ನಾಗರಿಕತ್ವವನ್ನೂ ನಿರಾಕರಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ಅಂದಾಜು 2-3 ಕೋಟಿ ಬಡಬಿಹಾರಿಗಳು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ತಮ್ಮ ಮತದಾನದ ಹಕ್ಕುಗಳನ್ನು ಮಾತ್ರವಲ್ಲದೆ ನಾಗರಿಕತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.
ಆದ್ದರಿಂದಲೇ ಚುನಾವಣಾ ಆಯೋಗದ ಈ ಸಂವಿ ಧಾನ ವಿರೋಧಿ ಕ್ರಮಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಚುನಾವಣಾ ಆಯೋಗ ಮಾಡಿದ್ದೇನು?
ಸುಪ್ರೀ ಕೋರ್ಟ್‌ನಲ್ಲಿ ವಿರೋಧ ಪಕ್ಷಗಳು, ಎಡಿಆರ್ ಮತ್ತು ಪಿಯುಸಿಲ್‌ಗಳು ಸಲ್ಲಿಸಿದ್ದ ಅರ್ಜಿಯಲ್ಲಿ ಚುನಾವಣಾ ಆಯೋಗಕ್ಕೆ:
ಅ) ನಾಗರಿಕತ್ವವನ್ನು ಪರಿಶೀಲಿಸುವ ಮತ್ತು ಕಾನೂನಿನಲ್ಲಿ ಇಲ್ಲದ ಎಸ್‌ಐಆರ್ ಮಾಡುವ ಅಧಿಕಾರವಿಲ್ಲವೆಂದೂ
ಆ) ಚುನಾವಣಾ ಆಯೋಗ ಅನುಸರಿಸುತ್ತಿರುವ ಪ್ರಕ್ರಿಯೆ ಮತ್ತು ವಿಧಾನಗಳು ಕಾನೂನು ಬಾಹಿರವೆಂದೂ ಮತ್ತು
ಇ) ಮತಪಟ್ಟಿಯನ್ನು ತಯಾರಿಸಲು ನಿಗದಿಯಾಗಿರುವ ಕಾಲಾವಧಿಯು ಅಸಮರ್ಪಕವೆಂದೂ ಪ್ರತಿಪಾದಿಸಲಾಗಿತ್ತು.
ಸುಪ್ರೀಂ ಕೋರ್ಟಿನ ಜಸ್ಟಿಸ್ ಧುಲಿಯಾ ನೇತೃತ್ವದ ದ್ವಿಸದಸ್ಯ ಪೀಠ ಈ ಅಹವಾಲು ದೇಶದ ಪ್ರಜಾಸತ್ತೆಯ ಅಂತರಾಳವಾದ ಮತದಾನದ ಹಕ್ಕಿಗೇ ಸಂಬಂಧಪಟ್ಟಿರುವ ಮಹತ್ವದ ವಿಷಯವಾಗಿದೆ ಎಂದು ಒಪ್ಪಿಕೊಂಡಿದೆ ಮತ್ತು ಅಹವಾಲಿನಲ್ಲಿರುವ ಮೂರೂ ಅಂಶಗಳು ವಿಸ್ತೃತ ಪರಿಶೀಲನೆಗೆ ಯೋಗ್ಯವಾಗಿರುವ ಅಂಶಗಳೆಂದು ಪರಿಗಣಿಸಿದೆ ಹಾಗೂ ಆ ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸಲು ಆಯೋಗಕ್ಕೆ ಕಾಲಮಿತಿ ವಿಧಿಸಿ ಮುಂದಿನ ವಿಚಾರಣೆಯನ್ನು, ಹಂಗಾಮಿ ಮತಪಟ್ಟಿ ಘೋಷಣೆ ಮಾಡಲು ನಿಗದಿಯಾಗಿರುವ ಆಗಸ್ಟ್ 1ಕ್ಕೆ ಮುಂಚೆ ಜುಲೈ 28ಕ್ಕೆ ನಿಗದಿ ಮಾಡಿದೆ ಹಾಗೂ ನ್ಯಾಯದ ದೃಷ್ಟಿಯಿಂದ ಚುನಾವಣಾ ಆಯೋಗವು ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮತ್ತು ತಾನೇ ಒದಗಿಸಿರುವ ವೋಟರ್ ಕಾರ್ಡನ್ನು ಪರಿಗಣಿಸುವುದು ಉಚಿತವೆಂದು ಸಲಹೆ ಮಾಡಿದೆ.
ಹೀಗೆ ಸಾರದಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಕ್ರಮಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅಹವಾಲುದಾರರೇ ಮಧ್ಯಂತರ ತಡೆಯಾಜ್ಞೆಗೆ ಒತ್ತಾಯಿಸಲಿಲ್ಲವಾದ್ದರಿಂದ ತಡೆಯಾಜ್ಞೆ ನೀಡಿಲ್ಲ. ಆದರೆ ಹಂಗಾಮಿ ಪಟ್ಟಿ ಘೋಷಣೆಗೆ ಮುಂಚೆ ಎಲ್ಲಾ ಗಂಭೀರ ಪ್ರಶ್ನೆಗಳ ವಿಚಾರಣೆಯನ್ನು ಮಾಡಲಿದೆ.
ಆದರೆ ನಾಚಿಕೆಗೆಟ್ಟ ಮೋದಿ ಸರಕಾರ ಸುಪ್ರೀಂ ಕೋರ್ಟು ಚುನಾವಣಾ ಆಯೋಗದ ಕ್ರಮಗಳನ್ನು ಎತ್ತಿಹಿಡಿದಿದೆ ಎಂದು ಅಪಪ್ರಚಾರ ಮಾಡುತ್ತಿದೆ ಮತ್ತು ಜುಲೈ 28ರಂದು ತನ್ನ ಎಲ್ಲಾ ಕ್ರಮಗಳು ಸುಗಮವಾಗಿ ನಡೆಯುತ್ತಿದೆ ಎಂದು ವಾದಿಸಲು ಹಲವು ಅಕ್ರಮಗಳನ್ನು ಎಸಗುತ್ತಿದೆ. ತ್ವರಿತವಾಗಿ ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಫೋಟೊ, ದಾಖಲೆ ಯಾವುದೂ ಇಲ್ಲದೆ ಹಲವಾರು ಬಾರಿ ಮತದಾರರ ಸಹಿಯೂ ಇಲ್ಲದೆ ಅವಸರವಾಗಿ ಕೆಲಸ ಮುಗಿಸುತ್ತಿದೆ. ಅದನ್ನು ಬಯಲು ಮಾಡುತ್ತಿರುವ ಅಜಿತ್ ಅಂಜುಮ್‌ರಂತಹ ಸ್ವತಂತ್ರ ಯೂಟ್ಯೂಬರ್‌ಗಳ ಮೇಲೆ ಕೇಸು ದಾಖಲಿಸುತ್ತಿದೆ.
ದೇಶಾದ್ಯಂತ SIR ಅಲ್ಲ- ದೇಶಾದ್ಯಂತ NRC
ಬಿಹಾರದ ಎಸ್‌ಐಆರ್ ಅನ್ನೇ ಸುಪ್ರೀಂ ಕೋರ್ಟು ಪ್ರಶ್ನಿಸುತ್ತಿರುವಾಗ ಚುನಾವಣಾ ಆಯೋಗ ದೇಶಾದ್ಯಂತ ಈ ಕಾನೂನು ಬಾಹಿರ ಎಸ್‌ಐಆರ್ ನಡೆಸಲು ಸಿದ್ಧತೆ ನಡೆಸಲು ಆದೇಶಿಸಿದೆ. ಈಗಾಗಲೇ ಬಿಹಾರದಲ್ಲಿ ಗಮನಿಸಿರುವಂತೆ ಇದು ಮತದಾರರ Special Intensive Revision ಕಾರ್ಯಕ್ರಮವಲ್ಲ. ಬದಲಿಗೆ ಹಿಂಬಾಗಿಲ ಮೂಲಕ NRCಯನ್ನು ಜಾರಿ ಮಾಡುವ ಮೋದಿ ಸರಕಾರದ ದುಷ್ಟ ಕುತಂತ್ರ.
ಆ ಮೂಲಕ ಈ ದೇಶದ ಎಲ್ಲಾ ಧರ್ಮಗಳ ಬಡವರ, ದಲಿತರ, ಆದಿವಾಸಿಗಳ, ಅಲ್ಪಸಂಖ್ಯಾತರ, ಮಹಿಳೆಯರ ನಾಗರಿಕತ್ವವನ್ನು ನಿರಾಕರಿಸಿ ಅವರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವ ಅಥವಾ ಮುಸ್ಲಿಮರಾದರೆ ದೇಶದಿಂದಲೇ ಹೊರಹಾಕುವ ಸಂವಿಧಾನ ವಿರೋಧಿ ಹಿಂದೂ ರಾಷ್ಟ್ರ ಯೋಜನೆಯಾಗಿದೆ.
ಆದ್ದರಿಂದ ದೇಶ ಮತ್ತೊಮ್ಮೆ ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಮ್ಮೆ 2019-20ರಲ್ಲಿ ಕಟ್ಟಿದಂತೆ ಬೃಹತ್ ಜನಚಳವಳಿ ಯನ್ನು ಕಟ್ಟಿ SIR ಮುಸುಕಿನ NRCಯನ್ನು ಸೋಲಿಸಲೇ ಬೇಕಿದೆ.