Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಸರಕಾರದ ಒಳಮೀಸಲಾತಿ ಸೂತ್ರ ನ್ಯಾಯವು...

ಸರಕಾರದ ಒಳಮೀಸಲಾತಿ ಸೂತ್ರ ನ್ಯಾಯವು ‘ಅಲೆಮಾರಿ’ಯಾಗಿ, ತಾರತಮ್ಯವು ‘ನೆಲೆಯೂರಿತೇ?’

ಶಿವಸುಂದರ್ಶಿವಸುಂದರ್27 Aug 2025 10:38 AM IST
share
ಸರಕಾರದ ಒಳಮೀಸಲಾತಿ ಸೂತ್ರ ನ್ಯಾಯವು ‘ಅಲೆಮಾರಿ’ಯಾಗಿ, ತಾರತಮ್ಯವು ‘ನೆಲೆಯೂರಿತೇ?’


ಕರ್ನಾಟಕದ ಪ್ರಗತಿಪರ ಮತ್ತು ಪ್ರಜ್ಞಾವಂತ ಜನತೆ ಶೋಷಿತ ಸಮುದಾಯಗಳ ಜೊತೆ ನಿಂತು ಆದ ಅನ್ಯಾಯವನ್ನು ಅದರಲ್ಲೂ ಅಲೆಮಾರಿಗಳಿಗೆ ಆದ ಅನ್ಯಾಯವನ್ನು ಸರಿ ಪಡಿಸಲು ಹೋರಾಡಬೇಕಿದೆ. ಇಲ್ಲದಿದ್ದಲ್ಲಿ ಯಾರಾದರೂ ಕೋರ್ಟ್‌ನಲ್ಲಿ ಈ ಪ್ರವರ್ಗೀಕರಣವನ್ನು ಪ್ರಶ್ನಿಸಿದರೆ ಸರಕಾರದ ಸೂತ್ರ ಅನೂರ್ಜಿತವಾಗುತ್ತದೆ. ಆಗ 35 ವರ್ಷಗಳಿಂದ ನಡೆಸಿದ ಹೋರಾಟ ಫಲ ಸಿಗಲು ಇನ್ನಷ್ಟು ಕಾಯುವುದು ತಪ್ಪುವುದಿಲ್ಲ. ಹಾಗಾಗದಿರಲಿ. ಸರಕಾರ ಕೂಡಲೇ ತನ್ನ ತಪ್ಪನ್ನು ತಿದ್ದಿಕೊಳ್ಳಲಿ.


ಕಳೆದ 35 ವರ್ಷಗಳಿಂದಲೂ ನಡೆಯುತ್ತಿದ್ದ ಒಳಮೀಸಲಾತಿ ಸಂಘರ್ಷ ಒಂದು ಹಂತವನ್ನು ಮುಟ್ಟಿದೆ. ಸಿದ್ದರಾಮಯ್ಯ ಸರಕಾರವು ನ್ಯಾ. ನಾಗಮೋಹನ್ ದಾಸ್ ಅವರು ಕೊಟ್ಟ ವರದಿಯ ಸಾರವನ್ನು ನಿರಾಕರಿಸಿ ಸಿಪ್ಪೆಯನ್ನು ಆಧರಿಸಿ ಯಾರಿಗೂ ಸಮಾಧಾನವಾಗದ 6:6:5 ಸೂತ್ರವನ್ನು ಘೋಷಿಸಿದೆ. ದಿ. 25-8-2025ರಂದು ಆ ಸೂತ್ರದ ಅನುಷ್ಠಾನದ ಬಗ್ಗೆ ಒಂದು ಆದೇಶವನ್ನೂ ಹೊರಡಿಸಿದೆ. ಸರಕಾರಿ ಸೂತ್ರ ಮತ್ತು ಸರಕಾರಿ ಆದೇಶ ಇನ್ನಷ್ಟು ಅಸಮಾಧಾನ ಹಾಗೂ ಆತಂಕಗಳನ್ನೇ ಹುಟ್ಟಿಸಿದೆ. ಹೀಗಾಗಿ ಒಳಮೀಸಲಾತಿ ಹೋರಾಟ ಒಂದು ಹಂತವನ್ನು ಮುಟ್ಟಿದ್ದರೂ, ಅಂತ್ಯ ಕಂಡಿದೆಯೇ? ನ್ಯಾಯ ಸಿಕ್ಕಿದೆಯೇ? ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.

ಅದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಅತ್ಯಂತ ಮುಖ್ಯವಾಗಿರುವುದು ಪರಿಶಿಷ್ಟ ಅಲೆಮಾರಿ ಜಾತಿಗಳಿಗೆ ಸರಕಾರ ಮಾಡಿರುವ ಮಹಾ ಅನ್ಯಾಯ.

ಪಾಲು ಕುಸಿತದ ಆತಂಕ - ಹಿಮ್ಮೆಟ್ಟಿದ ಸಾಮಾಜಿಕ ನ್ಯಾಯ

ನ್ಯಾ. ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟರಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಮತ್ತು ಅರೆ ಅಲೆಮಾರಿಗಳಾದ, 5.22 ಲಕ್ಷ ಜನರಿರುವ 59 ಜಾತಿಗಳನ್ನು ಪ್ರವರ್ಗ ‘ಎ’ ದಲ್ಲಿ ಒಟ್ಟುಗೂಡಿಸಿ ಶೇ.1ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಅದಕ್ಕೆ ಪ್ರಧಾನ ಕಾರಣವೇ ಇತರ ಉಪಜಾತಿಗಳ ಪ್ರವರ್ಗಗಳೊಡನೆ ಈ ಅತ್ಯಂತ ಹಿಂದುಳಿದ ಜಾತಿಗಳನ್ನು ಸೇರಿಸಿದರೆ ಅವರಿಗೆ ಈವರೆಗೆ ಹಾಗೂ ಹೀಗೂ ಸಿಕ್ಕಿರುವ ಅವಕಾಶವೂ ಇಲ್ಲದಂತಾಗುತ್ತದೆ ಎಂಬ ಸಾಮಾಜಿಕ ನ್ಯಾಯದ ಮಾನದಂಡ.

ಹಾಗೆಯೇ ಅವರಿಗಿಂತ ಸಾಪೇಕ್ಷವಾಗಿ ಮುಂದಿರುವ ಮಾದಿಗ ಮತ್ತು ಸಂಬಂಧಿತ ಜಾತಿಗಳನ್ನು ಪ್ರವರ್ಗ ‘ಬಿ’ ಎಂದು ವರ್ಗೀಕರಿಸಿ ಶೇ.6 ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಅದೇ ರೀತಿ ಹೊಲೆಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ.5 ಮತ್ತು ಪರಿಶಿಷ್ಟ ಸಮುದಾಯದಲ್ಲೇ ಹೋಲಿಕೆಯಲ್ಲಿ ಹೆಚ್ಚು ಮುಂದುವರಿದಿರುವ ಸ್ಪಶ್ಯ ಜಾತಿಗಳಿಗೆ ಶೇ. 4 ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತ್ತು ಹಾಗೂ ಮೂಲ ಜಾತಿಗಳ ಹೆಸರನ್ನು ದಾಖಲಿಸಿ ಎಂದು ಎಷ್ಟೇ ಪ್ರಚಾರ ಮಾಡಿದರೂ ತಮ್ಮನ್ನು ಎಕೆ, ಎಡಿ, ಎಎ ಎಂಬ ಗುರುತುಗಳಲ್ಲೇ ದಾಖಲಿಸಿರುವ ಸುಮಾರು 4.74 ಲಕ್ಷದಷ್ಟು ಜನರನ್ನು ಪ್ರವರ್ಗ ‘ಇ’ ಎಂದು ವರ್ಗೀಕರಿಸಿ ಶೇ. 1ರಷ್ಟು ಮೀಸಲಾತಿಯನ್ನು ನೀಡಿತ್ತು.

ಜನಸಂಖ್ಯೆಯೋ? ಹಿಂದುಳಿದಿರುವಿಕೆಯೋ?

ಹೀಗೆ ನ್ಯಾ. ದಾಸ್ ಮುಂದಿಟ್ಟ 1:6:5:4:1 ಸೂತ್ರದಲ್ಲಿ ನಿರ್ದಿಷ್ಟ ಪ್ರವರ್ಗದ ಜನಸಂಖ್ಯೆಯನ್ನು ಕಡಿಮೆ ಅಥವಾ ಹೆಚ್ಚು ತೋರಿಸಲೆಂದೇ ಕೆಲವು ಉಪಜಾತಿಗಳನ್ನು ಅನುಚಿತ ಪ್ರವರ್ಗಗಳಲ್ಲಿ ಸೇರಿಸಲಾಗಿದೆಯೆಂಬ ಬಲವಾದ ಆಕ್ಷೇಪ ಎದುರಾಯಿತು. ಈ ಆಕ್ಷೇಪಗಳಲ್ಲಿ ಕೆಲವೊಮ್ಮೆ ಜಾತಿ ಮೇಲರಿಮೆಯ ಬ್ರಾಹ್ಮಣೀಯ ಪ್ರಜ್ಞೆ ಇಣುಕಿದರೂ ಪ್ರಧಾನವಾಗಿ ಈಗಾಗಲೇ ಕಡಿಮೆಯಾಗುತ್ತಿರುವ ಪಾಲು ಇನ್ನಷ್ಟು ಕಡಿಮೆಯಾಗುತ್ತದೆಂಬ ಆತಂಕ ಪ್ರಧಾನವಾಗಿತ್ತು.

ಆದರೆ ಈ ಆತಂಕವು ಅತ್ಯಂತ ಶೋಷಿತರಿಗೆ ಮೊದಲ ಆದ್ಯತೆ ಮತ್ತು ಹೆಚ್ಚಿನ ಪಾಲು ಎಂಬ ಸಾಮಾಜಿಕ ನ್ಯಾಯದ ಅಂಬೇಡ್ಕರ್ ಪ್ರಜ್ಞೆಯನ್ನು ಹಿಂದಕ್ಕೆ ದೂಡಿತೆಂಬುದೂ ಕೂಡ ಸತ್ಯವೇ.

ಈ ಎಲ್ಲಾ ಕಾರಣಗಳಿಂದ ಪ್ರತೀ ಪ್ರವರ್ಗಗಳು ತಮ್ಮ ತಮ್ಮ ವರ್ಗದ ಜನಸಂಖ್ಯೆಯ ಪ್ರತಿಪಾದನೆಯಲ್ಲಿ ತೊಡಗಿಕೊಂಡರೇ ವಿನಾ ತಮ್ಮದೇ ಪ್ರವರ್ಗಕ್ಕೆ ಸೇರಿದ್ದ ಆದರೆ ಈವರೆಗೆ ಮೀಸಲಾತಿಯ ಸೌಲಭ್ಯವನ್ನು ಪಡೆಯದಿರುವ ಉಪಜಾತಿಗಳಿಗೆ ಆದ್ಯತೆ ಸಿಗಲಿ ಎಂಬ ನಿಲುವಿಗೆ ಬರಲಾಗಲಿಲ್ಲ.

ಒಂದೊಮ್ಮೆ ಈ ಸಾಮಾಜಿಕ ನ್ಯಾಯದ ಮಾನದಂಡಕ್ಕೆ ಈವರೆಗೆ ಹೋಲಿಕೆಯಲ್ಲಿ ಹೆಚ್ಚು ಸೌಲಭ್ಯ ಪಡೆದಿರುವ ಜಾತಿಗಳು ಸಮ್ಮತಿಸಿದ್ದಲ್ಲಿ ಒಳಮೀಸಲಾತಿ ಸೂತ್ರ ನ್ಯಾ. ದಾಸ್ ಅವರ ಸೂತ್ರಕ್ಕಿಂತ ಇನ್ನಷ್ಟು ನ್ಯಾಯಬದ್ಧ ಸೂತ್ರವಾಗುವ ಅವಕಾಶವಿತ್ತು.

ಆದರೆ ಈ ಗೊಂದಲ ಹೆಚ್ಚು ಮಾಡುವಲ್ಲಿ ಸರಕಾರದ ಪಾಲೂ ಇದೆ. ಸಮಾಜದ ಪರಿಶಿಷ್ಟೇತರ ಬಲಾಢ್ಯ ಸಮುದಾಯಗಳಿಗೆ ಹೋಲಿಸಿದಲ್ಲಿ 101 ಜಾತಿಗಳಿರುವ ಅಷ್ಟೂ ಪರಿಶಿಷ್ಟ ಸಮುದಾಯವೇ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಗಾಧವಾಗಿ ಹಿಂದುಳಿದಿವೆ. ಹೀಗಾಗಿ ಪಾಲು ಕಡಿಮೆಯಾಗುವ ಆತಂಕವಿರುವಾಗ ಸರಕಾರ ಆ ಪಾಲಿನ ಪ್ರಮಾಣವನ್ನು ಹೆಚ್ಚಿಸಿ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕಿತ್ತು. ಆಗ ಪಾಲು ಕಳೆದುಕೊಳ್ಳುವ ಆತಂಕ ಕಡಿಮೆಯಾಗಿ ಎಲ್ಲರೂ ಅತ್ಯಂತ ಹಿಂದುಳಿದವರ ನ್ಯಾಯದ ಪಾಲಿನ ಬಗ್ಗೆ ಯೋಚಿಸುವಂತಾಗುವ ಸಾಧ್ಯತೆ ಇತ್ತು.

ಆದರೆ ಸರಕಾರವು ಈ ಸಹಜ ಹಾಗೂ ಆತಂಕ ಪ್ರೇರಿತ ಮತ್ತು ಕೆಲವೊಮ್ಮೆ ಮೇಲರಿಮೆ ಪ್ರೇರಿತ ಗೊಂದಲವನ್ನು ಬಳಸಿಕೊಂಡು ನ್ಯಾ. ದಾಸ್ ಆಯೋಗ ಮುಂದಿಟ್ಟ, ಇದ್ದಿದರಲ್ಲಿ ನ್ಯಾಯಸಮ್ಮತವಾಗಿದ್ದ, ಬೇಕಿದ್ದರೆ ಸಾಮಾಜಿಕ ನ್ಯಾಯದ ಮಾನದಂಡದಡಿ ಇನ್ನಷ್ಟು ಪರಿಷ್ಕರಿಸಬಹುದಾಗಿದ್ದ 1:6:5:4:1 ಸೂತ್ರವನ್ನು ಸಾರಾಸಗಟಾಗಿ ತಿರಸ್ಕರಿಸಿತು.

ಬದಲಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳನ್ನು ಪ್ರವರ್ಗ ‘ಎ’ ಎಂದು ವರ್ಗೀಕರಿಸಿ ಶೇ.6ರಷ್ಟು ಮೀಸಲಾತಿಯನ್ನು ನಿಗದಿ ಮಾಡಿತು. ಹೊಲೆಯ ಮತ್ತು ಸಂಬಂಧಿತ ಜಾತಿಗಳನ್ನು ಪ್ರವರ್ಗ ‘ಬಿ’ ಎಂದು ವರ್ಗೀಕರಿಸಿ ಶೇ. 6ರಷ್ಟು ಮೀಸಲಾತಿಯನ್ನು ನಿಗದಿ ಮಾಡಿತು.

ಹಾಗೂ ಅತ್ಯಂತ ಆಘಾತಕಾರಿಯಾಗಿ ಪರಿಶಿಷ್ಟರಲ್ಲೇ ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳನ್ನು, ಪರಿಶಿಷ್ಟರಲ್ಲೇ ಹೋಲಿಕೆಯಲ್ಲಿ ಹೆಚ್ಚು ಮುಂದುವರಿದಿರುವ ಸ್ಪಶ್ಯ ಜಾತಿಗಳೊಡನೆ ವಿಲೀನಗೊಳಿಸಿ ಪ್ರವರ್ಗ ‘ಸಿ’ ಎಂದು ವರ್ಗೀಕರಿಸಿ ಶೇ. 5 ಮೀಸಲಾತಿಯನ್ನು ನಿಗದಿ ಪಡಿಸಿತು.

6:6:5- ಸುಪ್ರೀಂ ಮಾನದಂಡದ ಉಲ್ಲಂಘನೆ

ಆದರೆ ಸರಕಾರದ 6:6:5 ಈ ಸೂತ್ರ ಸಾಮಾಜಿಕ ನ್ಯಾಯದ ಎಲ್ಲಾ ಮಾನದಂಡಗಳ ಉಲ್ಲಂಘನೆಯಾಗಿದೆ ಮತ್ತು ಸುಪ್ರೀಂ ಮಾರ್ಗದರ್ಶನದ ಉಲ್ಲಂಘನೆಯೂ ಆಗಿದೆ.

ಅದಕ್ಕೆ ಕಾರಣಗಳಿವು:

1. ಸಾಮಾಜಿಕ ನ್ಯಾಯದಡಿಯಲ್ಲಿ ಮೀಸಲಾತಿ ಸೌಲಭ್ಯಕ್ಕೆ ವರ್ಗೀಕರಣ ಮಾಡುವಾಗ ...‘ಅಸಮಾನರನ್ನು ಸಮಾನರೆಂದು’ ಪರಿಗಣಿಸಬಾರದು.

ಹಾಗೂ ಅಸಮಾನ ಹಿಂದುಳಿದಿರುವಿಕೆಯನ್ನು ಹೊಂದಿರುವ ಜಾತಿಗಳನ್ನು ಒಂದೇ ಗುಂಪಿಗೆ ವರ್ಗೀಕರಣ ಮಾಡಬಾರದು. ಅದರ ಜೊತೆಗೆ ಸಮಾನ ಹಿಂದುಳಿದಿರುವಿಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವರ್ಗೀಕರಣವಾದ ಗುಂಪಿನಲ್ಲಿ ಸೇರಿಸಲ್ಪಟ್ಟ ಜಾತಿಗಳು ಸಾಮಾಜಿಕ ಹಿಂದುಳಿದಿರುವಿಕೆಯ ದೃಷ್ಟಿಯಲ್ಲಿ ಅತಿ ಹೆಚ್ಚಿನ ಏಕರೂಪತೆಯನ್ನು ಹೊಂದಿರಬೇಕು.

2. ಒಳಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟು ನೀಡಿದ ಆದೇಶದಲ್ಲೂ ಹೀಗೆ ಹೇಳಿದೆ:

‘‘...The Court while testing the validity of sub-classification must determine if the class is a homogenous integrated class for fulfilling the objective of the sub-classification. If the class is not integrated for the purpose, the class can be further classified upon the fulfillment of the two-prong intelligible differentia standard’’

(ಪುಟ 138, ಪ್ಯಾರಾ 205 (ಚಿ))

(https://api.sci.gov.in/supremecourt/2010/25536/ 25536_2010_1_1501_54462_Judgement_01-Aug-2024.pdf)

ಎಂದರೆ ಸರಕಾರಗಳು ಮಾಡುವ ಒಳವರ್ಗೀಕರಣ ಸೂತ್ರಗಳ ಮಾನ್ಯತೆಯನ್ನು ಪರಿಶೀಲಿಸುವಾಗ ಕೋರ್ಟ್‌ಗಳು ಆ ವರ್ಗೀಕರಣ ಹೋಲಿಕೆಯಲ್ಲಿ ಏಕರೂಪ ವರ್ಗವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮತ್ತು ವರ್ಗೀಕರಣಗೊಂಡ ಗುಂಪಿನಲ್ಲಿ ಏಕರೂಪತೆ ಇಲ್ಲದಿದ್ದರೆ ಅದನ್ನು ಮತ್ತಷ್ಟು ಉಪವರ್ಗೀಕರಿಸಬೇಕು.

3. ಈ ಹಿನ್ನೆಲೆಯಲ್ಲಿ ಪರಿಶಿಷ್ಟರಲ್ಲಿನ ಅತ್ಯಂತ ಹಿಂದುಳಿದ 59 ಜಾತಿಗಳನ್ನು ಪರಿಶಿಷ್ಟರೊಳಗೆ ಹೋಲಿಕೆಯಲ್ಲಿ ಹೆಚ್ಚು ಸೌಲಭ್ಯಗಳನ್ನು ಪಡೆದಿರುವ ಮತ್ತು ಆ ಕಾರಣಕ್ಕಾಗಿ ಉಳಿದ ಗುಂಪುಗಳಿಗಿಂತ ಹೋಲಿಕೆಯಲ್ಲಿ ಹೆಚ್ಚು ಮುಂದುವರಿದಿರುವ ಸ್ಪಶ್ಯ ಜಾತಿಗಳ ಜೊತೆಗೆ ಸೇರಿಸಿರುವುದು ಸುಪ್ರೀಂ ಮಾನದಂಡದ ಉಲ್ಲಂಘನೆಯಾಗುತ್ತದೆ.

6:6:5- ಅಲೆಮಾರಿಗಳ ಮರಣಶಾಸನ

ಉದಾಹರಣೆಗೆ ನ್ಯಾ. ನಾಗ ಮೋಹನ್ ದಾಸ್ ಆಯೋಗವು ಗ್ರೂಪ್ ‘ಎ’ನಲ್ಲಿ ವರ್ಗೀಕರಿಸಿದ ಈ 59 ಜಾತಿಗಳ ಶೈಕ್ಷಣಿಕ, ಪ್ರಾತಿನಿಧ್ಯಗಳ ಪರಿಸ್ಥಿತಿಯನ್ನು, ಗ್ರೂಪ್ ‘ಡಿ’ ಎಂದು ವರ್ಗೀಕರಿಸಲ್ಪಟ್ಟಿದ್ದ ಸಾಪೇಕ್ಷವಾಗಿ ಹೆಚ್ಚು ಮುಂದುವರಿದ ಸ್ಪಶ್ಯ ಜಾತಿಗಳ ಪರಿಸ್ಥಿತಿಯೊಡನೆ ಇಲ್ಲಿ ಕೊಟ್ಟಿರುವ ಕೋಷ್ಟಕದಲ್ಲಿ ಹೋಲಿಸಿ ನೋಡುವುದಾದರೆ:

ಕೋಷ್ಟಕ ಸ್ಪಷ್ಟಪಡಿಸುವಂತೆ ಗ್ರೂಪ್ ‘ಎ’ನಲ್ಲಿದ್ದ 59 ಜಾತಿಗಳೂ ಪರಿಶಿಷ್ಟರಲ್ಲೇ ಎಲ್ಲಾ ಮಾನದಂಡಗಳಲ್ಲೂ ಅತ್ಯಂತ ಹಿಂದುಳಿದವರು. ಗ್ರೂಪ್ ‘ಡಿ’ ಯಲ್ಲಿ ವರ್ಗೀಕರಿಸಲಾದ ಗುಂಪು ಪರಿಶಿಷ್ಟರಲ್ಲೇ ಎಲ್ಲ ಮಾನದಂಡಗಳಲ್ಲೂ ಮುಂದಿರುವರು.

ಹೀಗಾಗಿ ಅವೆರಡನ್ನು ಒಂದಾಗಿ ವರ್ಗೀಕರಿಸಿರುವ ಸರಕಾರಿ ಸೂತ್ರ ಸುಪ್ರೀಂ ನಿರ್ದೇಶನಕ್ಕೆ ವಿರುದ್ಧವಾಗಿ ‘ಅಸಮಾನರನ್ನು ಸಮಾನವಾಗಿ’ ಕಾಣುತ್ತದೆ ಮತ್ತು ಹೊಸದಾಗಿ ರೂಪಿಸಲಾದ ವರ್ಗದಲ್ಲಿ ಏಕರೂಪತೆಯೂ ಇಲ್ಲ. ಇವೆರಡೂ ಸುಪ್ರೀಂ ನಿರ್ದೇಶನದ ಮತ್ತು ಸಾಮಾಜಿಕ ನ್ಯಾಯ ಮಾನದಂಡದ ಉಲ್ಲಂಘನೆಯೇ ಆಗಿದೆ.

ಸರಕಾರ ಅತ್ಯಂತ ಹಿಂದುಳಿದ 59 ಜಾತಿಗಳನ್ನು ಹೋಲಿಕೆಯಲ್ಲಿ ಪರಿಶಿಷ್ಟರೊಳಗೆ ಅತ್ಯಂತ ಮುಂದುವರಿದ ಜಾತಿಗಳೊಡನೆ ಸೇರಿಸಿ ಒಂದು ವರ್ಗವಾಗಿಸಿ ಅದಕ್ಕೆ ಶೇ. 5ರಷ್ಟು ಮೀಸಲಾತಿ ನೀಡಿದೆ.

ಈಗ ಪಿಯುಸಿ, ಪದವಿ, ವಿದ್ಯಾರ್ಥಿ ನಿಲಯ, ಉದ್ಯೋಗ ಇತ್ಯಾದಿಗಳಿಗೆ ಈ ಅತ್ಯಂತ ಹಿಂದುಳಿದ 59 ಜಾತಿಗಳು ಅತ್ಯಂತ ಮುಂದುವರಿದ ಜಾತಿಗಳೊಂದಿಗೆ ಪೈಪೋಟಿ ಮಾಡಬೇಕಾಗುತ್ತದೆ.

ಇದು ಯಾವ ಸೀಮೆ ನ್ಯಾಯ? ಹೋಲಿಕೆಯಲ್ಲಿ ಹಿಂದುಳಿದವರು ಮತ್ತು ಮುಂದುವರಿದವರು ಒಂದೇ ಗುಂಪಿನಲ್ಲಿ ಸ್ಪರ್ಧಿಸುವುದಾದರೆ ಒಳಮೀಸಲಾತಿಯ ಅಗತ್ಯವಾದರೂ ಏನಿತ್ತು?

ಈವರೆಗೆ ಪರಿಶಿಷ್ಟರಲ್ಲಿ ಹೋಲಿಕೆಯಲ್ಲಿ ವಿವಿಧ ಜಾತಿಗಳಲ್ಲಿನ ಹಿಂದುಳಿದಿರುವಿಕೆಯನ್ನು ಗಮನಿಸದೆ ಇಡಿಯಾಗಿ ಅಷ್ಟು ಜಾತಿಗಳಿಗೆ ಒಟ್ಟಾರೆಯಾಗಿ ಶೇ. 15ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು.

ಆದರೆ ಅದರ ಪರಿಣಾಮವಾಗಿ ಪರಿಶಿಷ್ಟರ 101 ಜಾತಿಗಳಲ್ಲಿ:

-25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ.

-14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ.

-14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ.

-54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ. ಇಲ್ಲ.

-ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ ಇತರ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರಕಾರಿ ಉದ್ಯೋಗ ಸಿಕ್ಕಿಲ್ಲ.

-27,917 ಪರಿಶಿಷ್ಟ ಗ್ರಾಮಪಂಚಾಯತ್ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲ್ಲಿ 41 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.

-ಮಹಾನಗರ ಪಾಲಿಕೆಯಲ್ಲಿ 52 ಸದಸ್ಯತ್ವದಲ್ಲಿ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ.

-ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶವಿಲ್ಲ.

-ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಹಾಗೂ

-ಪಟ್ಟಣ ಪಂಚಾಯತ್‌ನ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.

ಪರಿಶಿಷ್ಟರೊಳಗಿನ ಹಿಂದುಳಿದಿರುವಿಕೆಯಲ್ಲಿ ಈ ಬಗೆಯ ಅಸಮಾನತೆ ಇರುವುದರಿಂದ ಪರಿಶಿಷ್ಟ ಸಮುದಾಯದೊಳಗೆ ಸಾಪೇಕ್ಷವಾಗಿ ಮುಂದುವರಿದವರಿಂದ ಸಾಪೇಕ್ಷವಾಗಿ ಹಿಂದುಳಿದವರನ್ನು ಪ್ರತ್ಯೇಕಗೊಳಿಸಿ ಒಳಮೀಸಲಾತಿ ನೀಡಬೇಕಿತ್ತು.

ಆದರೆ ಈ ರೀತಿ ಹಿಂದಿನಿಂದಲೂ ಪರಿಶಿಷ್ಟರಾಗಿದ್ದರೂ ಅತ್ಯಂತ ವಂಚನೆಗೆ ಗುರಿಯಾಗಿರುವ ಅತ್ಯಂತ ಹಿಂದುಳಿದ 59 ಜಾತಿಗಳನ್ನು, ಹೋಲಿಕೆಯಲ್ಲಿ ಪರಿಶಿಷ್ಟರಲ್ಲೇ ಅತ್ಯಂತ ಮುಂದುವರಿದಿರುವ ಸ್ಪಶ್ಯ ಜಾತಿಗಳೊಡನೆ ಸೇರಿಸಿ ಸಿದ್ದರಾಮಯ್ಯನವರ ಸರಕಾರ ಅತ್ಯಂತ ಅನ್ಯಾಯ ಮಾಡಿದೆ.

AK-AD -AA ವರ್ಗದ ಸೂತ್ರರಹಿತ ಹಂಚಿಕೆ!

ಇದಲ್ಲದೆ ಸರಕಾರದ ಆಗಸ್ಟ್ 25ರ ಆದೇಶದ ಪ್ರಕಾರ ಎಕೆ, ಎಡಿ ಮತ್ತು ಎಎ ಎಂದು ನೋಂದಾಯಿಸಿಕೊಂಡಿರುವ ಜಾತಿಗಳು ಪ್ರವರ್ಗ ‘ಎ’ ಅಥವಾ ಪ್ರವರ್ಗ ‘ಬಿ’ ಎರಡರಲ್ಲಿ ಒಂದು ಕಡೆ ತಮ್ಮ ಪಾಲನ್ನು ಪಡೆಯಬಹುದು. ಆದರೆ ಇದಕ್ಕೆ ಮಾನದಂಡವೇನು?

ನ್ಯಾ. ದಾಸ್ ಆಯೋಗವು ತನ್ನ ಅವಧಿಯ ವಿಸ್ತರಣೆ ಕೇಳಿದ್ದೇ ಕರ್ನಾಟಕಕ್ಕೇ ವಿಶಿಷ್ಟವಾಗಿರುವ ಎಕೆ, ಎಡಿ ಮತ್ತು ಎಎ ಸಮಸ್ಯೆಯನ್ನು ನಿವಾರಣೆ ಮಾಡಲು. ಏಕೆಂದರೆ ಇದರಲ್ಲೂ ಅಸಮಾನ ಹಿಂದುಳಿದಿರುವಿಕೆಯಿರುವ ಮೂಲ ಜಾತಿಗಳು ಒಂದೇ ಬಗೆಯ ಹೆಸರನ್ನು ದಾಖಲಿಸುತ್ತಿದ್ದುದರಿಂದ ಸಮಾನ ಹಿಂದುಳಿದಿರುವಿಕೆಯುಳ್ಳ ಜಾತಿಗಳ ಏಕರೂಪ ವರ್ಗೀಕರಣ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸುಪ್ರೀಂ ನಿರ್ದೇಶನದಂತೆ ಸಮಾನ ಜಾತಿಗಳನ್ನು ಸಮಾನ ವರ್ಗದಲ್ಲಿ ಸೇರಿಸಲೆಂದೇ ಎಕೆ, ಎಡಿ ಮತ್ತು ಎಎಗಳ ಮೂಲ ಜಾತಿಗಳ ಸಮೀಕ್ಷೆಯನ್ನು ಪ್ರಾರಂಭಿಸಲಾಗಿತ್ತು. ಅದರ ಭಾಗವಾಗಿಯೇ 40 ಲಕ್ಷದಷ್ಟಿದ್ದ ಆ ಸಂಖ್ಯೆಯನ್ನು 4.74 ಲಕ್ಷಕ್ಕೆ ಇಳಿಸುವಷ್ಟು ಸಮೀಕ್ಷೆ ಸಶಕ್ತವಾಗಿತ್ತು. ಈಗ ಆ ಸಮೀಕ್ಷೆಯನ್ನು ಪೂರ್ತಿಗೊಳಿಸುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳದೆ ಅದನ್ನು ಯಾವ ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡವನ್ನೂ ಹಾಕದೆ ಪ್ರವರ್ಗ ‘ಎ’ ಅಥವಾ ‘ಬಿ’ಯಲ್ಲಿ ಮೀಸಲಾತಿ ಪಡೆದುಕೊಳ್ಳಬಹುದು ಎಂಬ ಸೂತ್ರ ಸಮೀಕ್ಷೆಯ ಉದ್ದೇಶವನ್ನೇ ಅಲ್ಲಗೆಳೆಯುತ್ತದೆ ಹಾಗೂ ಈಗಾಗಲೇ ಮೂಲ ಜಾತಿಯನ್ನು ನೋಂದಾಯಿಸಿಕೊಂಡವರಿಗೆ ಇಲ್ಲದ ಅವಕಾಶವನ್ನು ನೋಂದಾಯಿಸಿಕೊಳ್ಳದ 4.74 ಲಕ್ಷ ಜನರಿಗೆ ನೀಡುವುದರಿಂದ ಸಹಜ ನ್ಯಾಯಕ್ಕೆ ವಿರುದ್ಧವಾದ ಕ್ರಮವೂ ಆಗುತ್ತದೆ.

ಇದಲ್ಲದೆ ನ್ಯಾ. ದಾಸ್ ಆಯೋಗದ ವರದಿಯ ಪ್ರಕಾರ ಎಕೆ, ಎಡಿ ಮತ್ತು ಎಎ ಎಂದು ನೋಂದಾಯಿಸಿಕೊಂಡಿರುವ ಈ 4.74 ಲಕ್ಷದ ವರ್ಗವು ಹೋಲಿಕೆಯಲ್ಲಿ ಪ್ರವರ್ಗ ‘ಎ’ ಮತ್ತು ‘ಬಿ’ಗಿಂತ ಮುಂದುವರಿದಿದೆ. ಉದಾಹರಣೆಗೆ ಪ್ರವರ್ಗ ‘ಎ’ನಲ್ಲಿರುವ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಲ್ಲಿ ಅವರ ಒಟ್ಟಾರೆ ಜನಸಂಖ್ಯೆಯ ಶೇ.0.96ರಷ್ಟು ಜನರು ಮಾತ್ರ ಸರಕಾರಿ ಉದ್ಯೋಗ ಪಡೆದಿದ್ದಾರೆ. ಪ್ರವರ್ಗ ‘ಬಿ’ಯಲ್ಲಿರುವ ಹೊಲೆಯ ಮತ್ತು ಹೊಲೆಯ ಸಂಬಂಧಿತ ಜಾತಿಗಳು ತಮ್ಮ ಜನಸಂಖ್ಯೆಯ ಶೇ. 1.46ರಷ್ಟು ಸರಕಾರಿ ಉದ್ಯೋಗ ಪಡೆದಿವೆೆ.

ಆದರೆ ಎಕೆ, ಎಡಿ ಮತ್ತು ಎಎ ಎಂದು ಗುರುತು ಉಳಿಸಿಕೊಂಡಿರುವ ‘ಇ’ ವರ್ಗ ತಮ್ಮ ಜನಸಂಖ್ಯೆಯ ಶೇ. 5.5ರಷ್ಟು ಸರಕಾರಿ ಉದ್ಯೋಗವನ್ನು ಪಡೆದುಕೊಂಡಿದೆ. ಅಂದರೆ ಪ್ರವರ್ಗ ‘ಎ’ ಮತ್ತು ಪ್ರವರ್ಗ ‘ಬಿ’ಗಿಂತ ನಾಲ್ಕು ಪಟ್ಟು ಹೆಚ್ಚು. ಹೀಗಾಗಿ ಇದರ ಸೇರ್ಪಡೆಯಿಂದಾಗಿ ಪ್ರವರ್ಗ ‘ಎ’ ಮತ್ತು ‘ಬಿ’ಗಳಲ್ಲಿದ್ದ ಸಾಪೇಕ್ಷ ಏಕರೂಪತೆಯೂ ಇಲ್ಲದಂತಾಗುತ್ತದೆ. ಆದ್ದರಿಂದ ಆ ಗುಂಪನ್ನು ಸಂಪೂರ್ಣ ಸಮೀಕ್ಷೆಯಾಗುವವರೆಗೆ ಪ್ರತ್ಯೇಕ ಗುಂಪಾಗಿಯೇ ಇಟ್ಟುಕೊಳ್ಳುವುದು ಸಾಮಾಜಿಕ ನ್ಯಾಯವಾಗುತ್ತಿತ್ತು. ಈಗ ಈ ಸೇರ್ಪಡೆಯೂ ಸುಪ್ರೀಂ ವಿಧಿಸಿದ ಮಾನದಂಡದ ಉಲ್ಲಂಘನೆಯಾಗುತ್ತದೆ.

ಇದಲ್ಲದೆ ಬುದ್ಧ ದಮ್ಮಕ್ಕೆ ಮರಳಿರುವ ದಲಿತರಿಗೂ ಅವರ ದಮ್ಮವನ್ನು ಸೂಚಿಸುತ್ತಲೇ ತಮ್ಮ ಮೂಲ ಜಾತಿಗಳಿಗೆ ಸೇರುವ ಅವಕಾಶಕೊಡಬೇಕಿತ್ತು. ಇದನ್ನು ನ್ಯಾ. ದಾಸ್ ಆಯೋಗ ಕೂಡ ಪರಿಗಣಿಸಿಲ್ಲ. ಹಾಗೆಯೇ ಸುಳ್ಳು ಜಾತಿ ಪ್ರಮಾಣ ಪತ್ರವೂ ಕೂಡ ಮೀಸಲಾತಿಯನ್ನು ನಿರರ್ಥಕಗೊಳಿಸುವ ಶೋಷಕ ಜಾತಿಗಳ ಸಾಧನವಾಗುತ್ತಿದೆ. ಬೇಡ ಜಂಗಮ, ಬುಡ್ಗ ಜಂಗಮ ಪ್ರಮಾಣವನ್ನು ನ್ಯಾ. ದಾಸ್ ಆಯೋಗದ ಸಮೀಕ್ಷೆ ಕಡಿತಗೊಳಿಸಿದ್ದರೂ ಆ ಹಾವಳಿ ಮುಂದುವರಿದಿದೆ. ಹಾಗೆಯೇ ಮೊಗೇರ ಇತ್ಯಾದಿ ಜಾತಿಗಳ ಹೆಸರಿನಲ್ಲೂ ಸುಳ್ಳು ಪ್ರಮಾಣ ಪತ್ರದ ಬಳಕೆ ಹೆಚ್ಚಿದೆ.

ಅಲೆಮಾರಿಗಳಿಗೆ ನ್ಯಾಯ ಸಿಗಲಿ- ಸರಕಾರ ತಪ್ಪು ತಿದ್ದಿಕೊಳ್ಳಲಿ

ಸರಕಾರದ ಸೂತ್ರ ಈ ಯಾವ ವಿಷಯಗಳಲ್ಲೂ ಸರಿಯಾದ ತತ್ವವನ್ನು ಅನುಸರಿಸಿಲ್ಲ. ಬದಲಿಗೆ ಸದ್ಯ ರಾಜಕೀಯ ಒತ್ತಡ ಮತ್ತು ಪ್ರಯೋಜನಗಳೇ ಸರಕಾರದ ಈ ಅವಸರದ ಹಾಗೂ ಅನ್ಯಾಯದ ತೀರ್ಮಾನಕ್ಕೆ ಕಾರಣವೆಂಬುದು ಸ್ಪಷ್ಟವಾಗಿದೆ.

ಆದ್ದರಿಂದ ಕರ್ನಾಟಕದ ಪ್ರಗತಿಪರ ಮತ್ತು ಪ್ರಜ್ಞಾವಂತ ಜನತೆ ಶೋಷಿತ ಸಮುದಾಯಗಳ ಜೊತೆ ನಿಂತು ಆದ ಅನ್ಯಾಯವನ್ನು ಅದರಲ್ಲೂ ಅಲೆಮಾರಿಗಳಿಗೆ ಆದ ಅನ್ಯಾಯವನ್ನು ಸರಿ ಪಡಿಸಲು ಹೋರಾಡಬೇಕಿದೆ. ಇಲ್ಲದಿದ್ದಲ್ಲಿ ಯಾರಾದರೂ ಕೋರ್ಟ್‌ನಲ್ಲಿ ಈ ಪ್ರವರ್ಗೀಕರಣವನ್ನು ಪ್ರಶ್ನಿಸಿದರೆ ಸರಕಾರದ ಸೂತ್ರ ಅನೂರ್ಜಿತವಾಗುತ್ತದೆ. ಆಗ 35 ವರ್ಷಗಳಿಂದ ನಡೆಸಿದ ಹೋರಾಟ ಫಲ ಸಿಗಲು ಇನ್ನಷ್ಟು ಕಾಯುವುದು ತಪ್ಪುವುದಿಲ್ಲ. ಹಾಗಾಗದಿರಲಿ. ಸರಕಾರ ಕೂಡಲೇ ತನ್ನ ತಪ್ಪನ್ನು ತಿದ್ದಿಕೊಳ್ಳಲಿ.

ಸುದೀರ್ಘ 35 ವರ್ಷಗಳ ಕಾಲ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟ ಆಗ ಮಾತ್ರ ನಿಜವಾಗಿ ಗೆದ್ದಂತಾಗುತ್ತದೆ. ಏಕೆಂದರೆ ಒಂದು ಚಳವಳಿ ಕೇವಲ ಒಂದು ಬೇಡಿಕೆಗಾಗಿ ನಡೆಯುವ ಹೋರಾಟವಲ್ಲ. ಒಂದು ಮೌಲ್ಯಕ್ಕಾಗಿ ನಡೆಯುವ ಹೋರಾಟ. ಇಲ್ಲಿ ಇದ್ದದ್ದು ಸಾಮಾಜಿಕ ನ್ಯಾಯ ವೆಂಬ ಮೌಲ್ಯಕ್ಕಾಗಿನ ಹೋರಾಟ.

ಬೇಡಿಕೆ ಈಡೇರಿದರೂ, ಮೌಲ್ಯಗಳು ಸೋತರೆ ಚಳವಳಿಯು ಸೋತಂತೆ ಅಲ್ಲವೇ?

ಹೀಗಾಗಿ ಒಳಮೀಸಲಾತಿ ಹೋರಾಟ ಒಡಕು ಉಂಟು ಮಾಡದೆ ಒಗ್ಗಟ್ಟನ್ನು ಗಟ್ಟಿ ಮಾಡಲಿ. ಅತ್ಯಂತ ದಮನಿತರಿಗೆ ಅತ್ಯಂತ ಹೆಚ್ಚಿನ ಆದ್ಯತೆ ಎಂಬ ಸಾಮಾಜಿಕ ನ್ಯಾಯದ ಅಂಬೇಡ್ಕರ್ ಬೆಳಕು ಮಾರ್ಗದರ್ಶನ ಮಾಡಲಿ!

share
ಶಿವಸುಂದರ್
ಶಿವಸುಂದರ್
Next Story
X