ಜಿಎಸ್‌ಟಿ ತಿದ್ದುಪಡಿಗಳು ಸುಧಾರಣೆಯೂ ಅಲ್ಲ, ಇಳಿಕೆಯೂ ಇಲ್ಲ?

ಮೋದಿಭಕ್ತ ಮಾಧ್ಯಮಗಳು ಉದ್ದೇಶ ಪೂರ್ವಕವಾಗಿ ಮತ್ತು ಇತರ ಮಾಧ್ಯಮಗಳು ಅನುದ್ದಿಶ್ಯಪೂರ್ವಕವಾಗಿ ತೆರಿಗೆ ಇಳಿತದಿಂದ ಯಾವ್ಯಾವುದರ ಬೆಲೆ ಇಳಿಯಲಿದೆಯೆಂಬ ಪಟ್ಟಿಯನ್ನು ಮಾತ್ರ ತೋರಿಸುತ್ತಿವೆ. ಅವು ಸುಳ್ಳಲ್ಲ, ಅರ್ಧ ಸತ್ಯ. ಮೋದಿ ಸರಕಾರ ಕಣ್ಣಿಗೆ ಕಾಣುವ ಸರಕುಗಳ ತೆರಿಗೆ ದರವನ್ನು ಇಳಿಸಿದೆ. ಆದರೆ ಆ ಸರಕುಗಳ ಉತ್ಪಾದನೆಗೆ ಅರ್ಥಾತ್ ಉತ್ಪಾದಕ ವೆಚ್ಚಕ್ಕೆ ಬೇಕಾಗುವ ಕಚ್ಚಾವಸ್ತುಗಳ ತೆರಿಗೆ ದರವನ್ನು ಅಗಾಧವಾಗಿ ಹೆಚ್ಚಿಸಿರುವುದನ್ನು ಮರೆಮಾಚಿಸಿದೆ.
ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಯನ್ನು ತಂದು ದೇಶದ ಜನರಿಗೆ ಮೋದಿ ಸರಕಾರ ದೀಪಾವಳಿ ಬೋನಸ್ ಕೊಟ್ಟಿದೆ ಎಂಬ ಕಿವಿಗಡಚಿಕ್ಕುವ ಪ್ರಚಾರವನ್ನು ಕೇಂದ್ರ ಸರಕಾರ ಮತ್ತು ಅದರ ತುತ್ತೂರಿ ಮಾಧ್ಯಮಗಳು ಕಳೆದ ಒಂದು ವಾರದಿಂದ ಮಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಜಿಎಸ್‌ಟಿ ಜಾರಿಯಾದ ಮೇಲೆ ಇದ್ದ ಶೇ. 0, ಶೇ. 1-3, ಶೇ. 5, ಶೇ. 12, ಶೇ. 18 ಮತ್ತು ಶೇ. 28 ಎಂಬ ಹಲವು ಹಂತದ ತೆರಿಗೆ ದರಗಳನ್ನು ಶೇ. 5 ಮತ್ತು ಶೇ. 18 ಎಂಬ ಎರಡೇ ತೆರಿಗೆ ವ್ಯವಸ್ಥೆಗಳಾಗಿ ಮಾಡಲಾಗಿದೆಯೆಂದು ಘೋಷಿಸಲಾಗಿದೆ. ಶೇ. 12 ತೆರಿಗೆ ಭರಿಸಬೇಕಿದ್ದ ಬಹುಪಾಲು ತೆರಿಗೆಗಳನ್ನು ಶೇ. 5ರ ಗುಂಪಿಗೂ, ಶೇ. 28 ರಷ್ಟು ತೆರಿಗೆ ಭರಿಸುತ್ತಿದ್ದ ಬಹುಪಾಲು ತೆರಿಗೆಗಳನ್ನು ಶೇ. 18ರ ಗುಂಪಿಗೂ ಸೇರಿಸಿ ಜನಸಾಮಾನ್ಯರಿಗೆ ಬೃಹತ್ ತೆರಿಗೆ ಕಡಿತದ ಮತ್ತು ಆ ಮೂಲಕ ಬೆಲೆ ಇಳಿಕೆಯ ಲಾಭವನ್ನು ಕೊಡುಗೆಯಾಗಿ ನೀಡಲಾಗಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಈ ಎರಡು ಸ್ಲಾಬ್‌ಗಳಲ್ಲದೆ ಐಶಾರಾಮಿ ಮತ್ತು ದುಶ್ಚಟಗಳನ್ನು ಉತ್ತೇಜಿಸುವ ಸರಕುಗಳನ್ನು ‘Siಟಿ-ಪಾಪಿ ಸರಕುಗಳ ಪಟ್ಟಿ’ಗೆ ಸೇರಿಸಿ ಶೇ. 40ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಈ ಎಲ್ಲಾ ಕಾರಣಗಳಿಂದ ಇನ್ನುಮುಂದೆ ಸರಕುಗಳ ದರ ದಿಢೀರ್ ಕುಸಿದು ಜನರು ಹುಚ್ಚಾಪಟ್ಟೆ ಖರೀದಿ ಮಾಡಿ ಕುಸಿಯುತ್ತಿರುವ ಆರ್ಥಿಕತೆಯು ಪುನಶ್ಚೇತನಗೊಳ್ಳುತ್ತದೆ ಎಂದೆಲ್ಲ ಸರಕಾರ ಹೇಳುತ್ತಿದೆ. ಮೇಲ್ನೋಟಕ್ಕೆ ಪ್ರಾರಂಭದ ವರ್ಷ ಈ ತೆರಿಗೆ ಕಡಿತದಿಂದ 48,000 ಕೋಟಿ ರೂ. ಗಳಷ್ಟು ತೆರಿಗೆ ಸಂಗ್ರಹ ಕಡಿಮೆಯಾಗಬಹುದಾದರೂ, ಜನರು ಬೆಲೆ ಇಳಿಕೆಯಿಂದಾಗಿ ಹೆಚ್ಚೆಚ್ಚು ಖರೀದಿ ಮಾಡುವುದರಿಂದ ವ್ಯವಹಾರವು ಹೆಚ್ಚು ನಡೆದು ತೆರಿಗೆ ಸಂಗ್ರಹ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತದೆ ಎಂದು ಇಡೀ ದೇಶದ ಜನರ ಕಿವಿಗಳ ಮೇಲೆ ಹೂವಿಡುವ ಪ್ರಚಾರವನ್ನು ಮೋದಿ ಸರಕಾರ ಮಾಡುತ್ತಿದೆ.
ಆದರೆ ಇವೆಲ್ಲ ನಿಜವೇ? ಇದರಲ್ಲಿ ಸುಳ್ಳೆಷ್ಟು? ನಿಜವೆಷ್ಟು? ಉತ್ಪ್ರೇಕ್ಷೆಯೆಷ್ಟು? ಮತ್ತು 2017ರಲ್ಲಿ ಜಿಎಸ್‌ಟಿ ಜಾರಿಯಾದ ನಂತರದಲ್ಲಿ ದೇಶದ ಜನರು ಅನುಭವ ಹೇಳುವುದೇನು? ಅವನ್ನು ಒಂದೊಂದಾಗಿ ಗಮನಿಸೋಣ:
ಜಿಎಸ್‌ಟಿ ಸುಧಾರಣೆಯಲ್ಲ-ಮಾಡಿದ ತಪ್ಪುಗಳ ತಿದ್ದುಪಡಿ
ಮೊದಲನೆಯದಾಗಿ ಮೋದಿ ಸರಕಾರ ಮಾಡುತ್ತಿರುವುದು ಜಿಎಸ್‌ಟಿ ವ್ಯವಸ್ಥೆಯ ಸುಧಾರಣೆಯಲ್ಲ. ಹಾಗೆ ನೋಡಿದರೆ ಅತ್ಯಗತ್ಯವಾಗಿ ಈ ವ್ಯವಸ್ಥೆಯಲ್ಲಿ ಮಾಡಬೇಕಾದ ಯಾವ ಸುಧಾರಣೆಯನ್ನು ಮೋದಿ ಸರಕಾರ ಮಾಡಿಲ್ಲ. ಬದಲಿಗೆ ಅದು ಮಾಡಿರುವುದು ತೆರಿಗೆ ದರಗಳ ಮಾರ್ಪಾಡು. ಮತ್ತು ತೆರಿಗೆ ಹಂತಗಳಲ್ಲಿ ಕಡಿತ. ಹಾಗೆ ನೋಡಿದರೆ ಜಿಎಸ್‌ಟಿ ಅಥವಾ ವ್ಯಾಟ್ (ಮೌಲ್ಯ ವರ್ಧಿತ ತೆರಿಗೆ) ಎಂಬ ತೆರಿಗೆ ಏಕೀಕೃತ ತೆರಿಗೆ ವ್ಯವಸ್ಥೆಯಿರುವ ಯಾವ ದೇಶಗಳಲ್ಲೂ ತೆರಿಗೆ ಹಂತ ಒಂದಕ್ಕಿಂತ ಹೆಚ್ಚಿರುವುದಿಲ್ಲ. ಹೆಚ್ಚು ಕಡಿಮೆ ಶೇ.12 ಅಥವಾ ಶೇ.10 ಎಂಬ ಏಕೈಕ ತೆರಿಗೆ ವ್ಯವಸ್ಥೆ ಇರುತ್ತದೆ. ಆದರೆ ನಮ್ಮ ದೇಶದಲ್ಲಿ ‘ಒಂದು ದೇಶ ಒಂದೇ ತೆರಿಗೆ’ ಎಂಬ ಹೆಸರಿನಲ್ಲಿ ಜಿಎಸ್‌ಟಿ ಜಾರಿಯಾದರೂ 0-1-3-5-12-18-28 ಮತ್ತು ಸೆಸ್‌ಗಳೆಂಬ ಏಳಕ್ಕೂ ಹೆಚ್ಚು ತೆರಿಗೆ ಹಂತಗಳು ಉಳಿದುಕೊಂಡವು.
ಅದರಲ್ಲೂ ಒಂದೇ ಬಗೆಯ ಸರಕಿನ ಕೆಲವು ಮಾರ್ಪಾಡುಗಳಿಗೆ ಬೇರೆಬೇರೆ ಬಗೆಯ ತೆರಿಗೆಯನ್ನು ನಿಗದಿ ಮಾಡಿ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರನ್ನೂ ಈ ವ್ಯವಸ್ಥೆ ಸುಲಿಯತೊಡಗಿತು. ಉದಾಹರಣೆಗೆ ಇತ್ತೀಚೆಗೆ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರೇ ಹೇಳಿದಂತೆ ಬರೀ ಪಾಪ್‌ಕಾರ್ನ್‌ಗೆ ತೆರಿಗೆಯಿಲ್ಲ. ಉಪ್ಪು ಮಿಶ್ರಿತ ಪಾಪ್‌ಕಾರ್ನ್‌ಗೆ ಶೇ. 5 ಮತ್ತು ಸಕ್ಕರೆ ಮಿಶ್ರಿತ ಕಾರ್ಮಲಾನ್ ಪಾಪ್‌ಕಾರ್ನ್‌ಗೆ ಶೇ. 18 ತೆರಿಗೆ. ಹಾಗೆಯೇ ಈಗಾಗಲೇ ವೈರಲ್ ಆಗಿರುವ ಒಂದು ವೀಡಿಯೊದಲ್ಲಿ ತಮಿಳುನಾಡಿನ ಒಬ್ಬ ಬೇಕರಿ ಮಾಲಕ ವಿವರಿಸುವಂತೆ ಬನ್ ಖರೀದಿಸಿದರೆ ಶೇ.0 ತೆರಿಗೆ, ಬಟರ್ ಖರೀದಿಸಿದರೆ ಶೇ. 5 ತೆರಿಗೆ ಆದರೆ ಬಟರ್ ಹಚ್ಚಿದ ಬನ್ ಖರೀದಿಸಿದರೆ ಶೇ.18 ತೆರಿಗೆ. ಇಂತಹ ತುಘಲಕ್ ತೆರಿಗೆ ದರ್ಬಾರ್ ನಲ್ಲಿ ಶ್ರೀಸಾಮಾನ್ಯರ ಮೇಲೆ ತೆರಿಗೆ ಹೆಚ್ಚಾದರೆ ವ್ಯಾಪಾರಿಗಳು ತೆರಿಗೆ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳಲಾಗದೆ ದಂಡವನ್ನು ಕಟ್ಟಬೇಕಾಗುತ್ತಿತ್ತು.
ಈ ಎಲ್ಲಾ ಕಾರಣಗಳಿಂದ ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಿಸಬೇಕೆಂದು, ತಿದ್ದುಪಡಿ ಮಾಡಬೇಕೆಂದು ವ್ಯಾಪಾರಿಗಳು, ಉದ್ಯಮಿಗಳು, ಜನಸಾಮಾನ್ಯರು ಮತ್ತು ವಿರೋಧ ಪಕ್ಷಗಳವರು 2017ರಿಂದಲೂ ಮೋದಿ ಸರಕಾರವನ್ನು ಆಗ್ರಹಿಸುತ್ತಾ ಬಂದಿದ್ದರು. ಆದರೆ ಯಾರ ಮಾತನ್ನೂ ಕೇಳಿಸಿಕೊಳ್ಳದೆ ‘ಸಬ್ ಚಂಗಾಸಿ’ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತಾ ಬಂದಿತ್ತು. ಆದರೆ ಈ ತುಘಲಕ್ ಅನ್ನು ಮೀರಿಸುವ ಮೋದಿ ಜಿಎಸ್‌ಟಿ ವ್ಯವಸ್ಥೆಯಿಂದ ಆರ್ಥಿಕತೆಯ ಗೊಂದಲಮಯವಾಗಿರುವುದು ಮತ್ತು ಇತ್ತೀಚೆಗೆ ಟ್ರಂಪ್ ಸರಕಾರ ಭಾರತದ ರಫ್ತಿನ ಮೇಲೆ ಶೇ. 50ರಷ್ಟು ಆಮದು ಸುಂಕ ವಿಧಿಸಿದ್ದರಿಂದ ಭಾರತದದ ಆರ್ಥಿಕತೆ ಇನ್ನಷ್ಟು ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿರುವುದರಿಂದ ದೇಶೀಯ ಆರ್ಥಿಕತೆಯಲ್ಲಿ ವಹಿವಾಟು ಹೆಚ್ಚಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ.
ಇದಲ್ಲದೆ ಮಡಿಲ ಮಾಧ್ಯಮಗಳು ಈಗ ಆರೋಗ್ಯ ವಿಮೆ, ಪೆನ್ಸಿಲ್, ರಬ್ಬರ್ , ಪುಸ್ತಕ, ಜೀವನಾವಶ್ಯಕ ಔಷಧಿಗಳು ಇಂತಹ ಸೇವೆ ಮತ್ತು ಸರಕುಗಳ ದರಗಳನ್ನು ಮೊದಲಿದ್ದ ಶೇ. 12-18ರಿಂದ ಶೂನ್ಯಕ್ಕೆ ಇಳಿಸಿ ಮೋದಿ ಸರಕಾರ ಜನಪರ ಎಂದು ಸಾಬೀತು ಮಾಡಿದೆ ಎಂದು ಕೊಚ್ಚಿಕೊಳ್ಳುತ್ತಿವೆ. ಆದರೆ ಇಂತಹ ಅತ್ಯಗತ್ಯ ವಸ್ತುಗಳ ಸರಕುಗಳಿಗೆ ಕಳೆದ ಎಂಟು ವರ್ಷಗಳಿಂದ ಮೋದಿ ಸರಕಾರ ಶೇ.12-18ರ ತೆರಿಗೆ ವಿಧಿಸಿ ತುಟ್ಟಿ ಮಾಡಿದ್ದೇಕೆ ಎಂಬ ಪ್ರಶ್ನೆಯನ್ನು ಮೊದಲು ಕೇಳಬೇಕಲ್ಲವೇ?
ಹೀಗಾಗಿ ಅನಿವಾರ್ಯವಾಗಿ ಮೋದಿ ಸರಕಾರ ಜಿಎಸ್‌ಟಿ ವ್ಯವಸ್ಥೆಯ ದರಗಳನ್ನು ಸರಳೀಕರಿಸುತ್ತಿದೆ. ಅಂದರೆ ಮೋದಿ ಸರಕಾರ ತಾನು ಮಾಡಿದ್ದ ಕೆಲವು ಅತಿರೇಕದ ತಪ್ಪುಗಳನ್ನು ತಿದ್ದುಕೊಳ್ಳುತ್ತಿದೆಯೇ ವಿನಾ ಯಾವುದೇ ಮೂಲಭೂತ ಮತ್ತು ಅತ್ಯಗತ್ಯ ಸುಧಾರಣೆಗಳನ್ನು ತರುತ್ತಿಲ್ಲ.
ತೆರಿಗೆ ದರಗಳು ಇಳಿದ ಮಾತ್ರಕ್ಕೆ ಬೆಲೆಗಳು ಇಳಿಯುವುದೇ?
2017ರಲ್ಲಿ ಜಿಎಸ್‌ಟಿ ಜಾರಿ ಮಾಡುವಾಗಲೂ ಮೋದಿ ಪಟಾಲಂ ಮತ್ತವರ ತುತ್ತೂರಿ ಮಾಧ್ಯಮಗಳು ಜಿಎಸ್‌ಟಿ ವ್ಯವಸ್ಥೆಯಿಂದ ಎಲ್ಲಾ ಸರಕು ಮತ್ತು ಸೇವೆಗಳ ಬೆಲೆಗಳು ದೊಡ್ಡ ಮಟ್ಟದಲ್ಲಿ ಇಳಿಯುತ್ತವೆ ಎಂದೇ ಪ್ರಚಾರ ಮಾಡಿದ್ದವು. ಆದರೆ ಭಾರತೀಯರೆಲ್ಲರೂ ತಮ್ಮ ತಮ್ಮ ಅನುಭವದಲ್ಲೇ ಕಂಡುಕೊಂಡಿರುವಂತೆ ಯಾವ ಸರಕುಗಳ ಬೆಲೆಯೂ ಇಳಿಯಲಿಲ್ಲ. ಬದಲಿಗೆ ಕಳೆದ ಎಂಟು ವರ್ಷಗಳಲ್ಲಿ ಈ ಹಿಂದೆ ಹೇಗೆ ಹೆಚ್ಚಾಗುತ್ತಾ ಹೋದವೋ ಅದೇ ರೀತಿ ಹೆಚ್ಚಾಗುತ್ತಲೇ ಇವೆ. ಏಕೆ?
ಜಿಎಸ್‌ಟಿ ವ್ಯವಸ್ಥೆಯ ಬಗ್ಗೆ ಸರಕಾರಗಳು ಕೊಚ್ಚಿಕೊಂಡ ಹೆಗ್ಗಳಿಕೆ ಏನೆಂದರೆ ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ಸರಕುಗಳ ಉತ್ಪಾದನೆಯಲ್ಲಿ ಕಚ್ಚಾವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು, ಅದನ್ನು ಬೇರೆ ಬೇರೆ ಹಂತದಲ್ಲಿ ಸಿದ್ಧ ಸರಕುಗಳನ್ನು ಮಾಡುವ ಹಂತದಲ್ಲಿ ಬೇರೆ ಬೇರೆ ತೆರಿಗೆಗಳು ವಿಧಿಸಲ್ಪಡುತ್ತಿತ್ತು. ಅಂದರೆ ಒಂದು ಹಂತದಿಂದ ಮತ್ತೊಂದು ಹಂತದಲ್ಲಿರುವ ಸರಕುಗಳನ್ನು ಖರೀದಿ ಮಾಡಿದಾಗ ಹಿಂದಿನ ಹಂತದ ಉತ್ಪಾದಕ ಈಗಾಗಲೇ ನೀಡಿರುವ ತೆರಿಗೆಯೂ ವಸ್ತುವಿನ ಬೆಲೆಯಲ್ಲಿ ಲೆಕ್ಕ ಆಗುವುದರಿಂದ ಮುಂದಿನ ಹಂತದ ಉತ್ಪಾದಕ ಅದನ್ನು ಸಿದ್ಧ ಸರಕು ಮಾಡಿ ಮಾರುವ ಹೊತ್ತಿಗೆ ಹಿಂದಿನ ಹಂತಗಳಲ್ಲಿ ಪಾವತಿಯಾದ ‘ತೆರಿಗೆಗಳ ಮೇಲೂ ತೆರಿಗೆ- Tax on Tax’ ಕಟ್ಟಿರುತ್ತಿದ್ದರು. ಈ ಡಬಲ್ ಟ್ಯಾಕ್ಸೇಶನ್‌ನಿಂದ ಸರಕುಗಳ ಮೇಲೆ ತೆರಿಗೆ ಹೊರೆ ಹೆಚ್ಚಾಗಿ ಅಂತಿಮವಾಗಿ ಸರಕುಗಳ ಬೆಲೆಯೂ ಹೆಚ್ಚಾಗುತ್ತಿತ್ತು.
ಜಿಎಸ್‌ಟಿ ವ್ಯವಸ್ಥೆಯಲ್ಲಿ ಈ ‘ತೆರಿಗೆಗಳ ಮೇಲೂ ತೆರಿಗೆ- Tax on Tax’ ವ್ಯವಸ್ಥೆ ನಿಲ್ಲುತ್ತದೆ. ಗ್ರಾಹಕರು ಒಂದು ಹಂತದ ತೆರಿಗೆ ಕಟ್ಟಿದರೆ ಸಾಕು. ಏಕೆಂದರೆ ಉತ್ಪಾದಕರು ಹಿಂದಿನ ಹಂತದ ಈಗಾಗಲೇ ಪಾವತಿಸಲಾಗಿರುವ ತೆರಿಗೆ ಮೇಲೆ ತೆರಿಗೆ ಪಾವತಿಸಿ ಕಚ್ಚಾ ವಸ್ತು ಖರೀದಿ ಮಾಡಿದ್ದರೂ ಅವರು ಅದನ್ನು ತಮ್ಮ ಅರ್ಜಿ ಭರ್ತಿಯಲ್ಲಿ ನಮೂದಿಸಿದರೆ ಅವರಿಗೆ ‘Input Tax Credit’ ಪಾವತಿಸುವ ಮೂಲಕ ಉತ್ಪಾದಕರು ಪಾವತಿಸಿದ ಹೆಚ್ಚುವರಿ ತೆರಿಗೆಯನ್ನು ಮರಳಿಸಲಾಗುವುದು. ಆಗ ಉತ್ಪಾದಕರು ಅದನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಸರಕಿನ ಬೆಲೆ ಕುಸಿಯುವುದು ಎಂಬ ತರ್ಕವನ್ನು ಮುಂದಿಡಲಾಗಿತ್ತು.
ಆದರೆ ಕಳೆದ ಎಂಟು ವರ್ಷಗಳ ಅನುಭವ ಹೇಳುವಂತೆ ಯಾವ ಕಂಪೆನಿಗಳು ತಮ್ಮ ಸರಕಿನ ಬೆಲೆಯನ್ನು ಕಡಿಮೆ ಮಾಡಲಿಲ್ಲ. ಬದಲಿಗೆ ತೆರಿಗೆ ದರ ಕಡಿಮೆ ತೋರಿಸಿದರೂ ಕಚ್ಚಾವಸ್ತು, ತಂತ್ರಜ್ಞಾನ ಇತ್ಯಾದಿ ಉತ್ಪಾದಕ ವೆಚ್ಚಗಳನ್ನು ಹೆಚ್ಚು ತೋರಿಸಿದರು. ಹೀಗಾಗಿ ಜಿಎಸ್‌ಟಿ ವ್ಯವಸ್ಥೆ ಕೊಡಮಾಡಿದ Input Tax Credit ಲಾಭವನ್ನು ಕಂಪೆನಿಗಳು ತಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳಲು ಬಳಸಿದವೇ ವಿನಃ ಬೆಲೆ ಕಡಿಮೆ ಮಾಡಿ ಗ್ರಾಹಕರಿಗೆ ವರ್ಗಾಯಿಸಲಿಲ್ಲ.
ಇದಲ್ಲದೆ ಶೇ. 0-5ರ ಗುಂಪಿನಲ್ಲಿರುವ ಸರಕುಗಳ ಉತ್ಪಾದಕರಿಗೆ Iಟಿಠಿuಣ ಖಿಚಿx ಅಡಿeಜiಣ ಲಾಭ ಪಡೆದುಕೊಳ್ಳುವುದು ಕಷ್ಟ ಅಥವಾ ಸಾಧ್ಯವಿಲ್ಲ. ಹೀಗಾಗಿ ಶೇ. 12 ತೆರಿಗೆ ಗುಂಪಿನಿಂದ ಯಾವ್ಯಾವ ಸೇವೆ ಮತ್ತು ಸರಕುಗಳು ಶೇ. 5ರ ದರಕ್ಕೆ ವರ್ಗಾಯಿಸಲ್ಪಟ್ಟಿವೆಯೋ ಅವು ಅಷ್ಟು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾರವು. ಇದಲ್ಲದೆ ಈಗಾಗಲೇ ಯಾವ್ಯಾವ ಕ್ಷೇತ್ರದಲ್ಲಿ ಸರಕುಗಳು ಮಾರಾಟವಾಗದೆ ಸಂಗ್ರಹವಾಗಲ್ಪಟ್ಟಿವೆಯೋ, ನಷ್ಟ ಅನುಭವಿಸುತ್ತಿವೆಯೋ, ಅಂತಹ ಕ್ಷೇತ್ರದಲ್ಲಿ ಮಾತ್ರ ತಮ್ಮ ತೀರುವಳಿ ಮಾರಾಟದ ಭಾಗವಾಗಿ ತೆರಿಗೆ ಕಡಿತದ ಲಾಭದ ಅರ್ಧಾಂಶ ಗ್ರಾಹಕರಿಗೆ ವರ್ಗಾವಣೆ ಆಗಬಹುದು. ಮುಖ್ಯವಾಗಿ ಮೋಟರು ವಾಹನ, ಫ್ರಿಡ್ಜ್ ಇತ್ಯಾದಿಗಳು. ಇನ್ನುಳಿದಂತೆ ನಿತ್ಯಬಳಕೆಯ ಪೇಸ್ಟ್, ಬ್ರಶ್, ಸೋಪುಗಳ ಬೆಲೆ ಇಳಿಕೆಯಾದ ಮಾತ್ರಕ್ಕೆ ಯಾರೂ ಅಗತ್ಯಕ್ಕಿಂತ ಜಾಸ್ತಿ ಖರೀದಿ ಮಾಡುವುದಿಲ್ಲ.
ಬೆಲೆ ಇಳಿಕೆಯ ಕಾನೂನನ್ನು ಸಡಿಲಗೊಳಿಸಿದ ಮೋದಿ ಸರಕಾರ
ಎಲ್ಲಕ್ಕಿಂತ ಹೆಚ್ಚಾಗಿ ತೆರಿಗೆ ಇಳಿಕೆಯ ಲಾಭವನ್ನು ಕಂಪೆನಿಗಳು ಗ್ರಾಹಕರಿಗೆ ವರ್ಗಾಯಿಸಲೇ ಬೇಕೆಂಬ ಮತ್ತು ವರ್ಗಾಯಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವ ಕಠಿಣ ವ್ಯವಸ್ಥೆ ನಮ್ಮಲ್ಲಿಲ್ಲ. ಜಿಎಸ್‌ಟಿ ವ್ಯವಸ್ಥೆ ಜಾರಿಯಾಗಬೇಕಾದರೆ ಅದರ ಭಾಗವಾಗಿ National Anti-Profiteering Authority (NAA) ಎಂಬ ಹಲ್ಲಿಲ್ಲದ ಸಂಸ್ಥೆಯನ್ನು ಕೂಡ ರಚಿಸಲಾಗಿತ್ತು. ಆದರೆ ಅದರ ಮುಂದೆ ಯಾವುದೇ ದಾವೆಯನ್ನು ಹೂಡಲು ಹತ್ತು ಹದಿನೆಂಟು ಶರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಮೋದಿ ಸರಕಾರ ಅದನ್ನು 2022ರಲ್ಲಿ ಸಂಪೂರ್ಣವಾಗಿ ವಿಸರ್ಜಿಸಿತು.
ಅದರಲ್ಲಿನ ಕೆಲವು ಜವಾಬ್ದಾರಿಗಳನ್ನು 2022ರಲ್ಲಿ Competition Commission Of India (CCI)ಗೆ ವರ್ಗಾಯಿಸಿತು. ಆದರೆ ಸಿಸಿಐ ವ್ಯಾಪ್ತಿ ಮತ್ತು ಸ್ವರೂಪದಲ್ಲಿ ಜಿಎಸ್‌ಟಿ ಮೂಲದ ಲಾಭಕೋರತನವನ್ನು ತಡೆಯುವ ಅವಕಾಶವೇ ಇರಲಿಲ್ಲ. ಹೀಗಾಗಿ 2024ರಲ್ಲಿ ಸಿಸಿಐ ತಾನೂ ಜಿಎಸ್‌ಟಿ ವ್ಯಾಪ್ತಿಯ ಲಾಭಕೋರತನ ನಿಗ್ರಹ ಜವಾಬ್ದಾರಿಗಳನ್ನು ನಿರ್ವಹಿಸಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿತು. ನಂತರ ಆ ಜವಾಬ್ದಾರಿಗಳನ್ನು ಈಗ ಜಿಎಸ್‌ಟಿಯ ಮೇಲ್ಮನವಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಅಂದರೆ ಸಾರದಲ್ಲಿ ಸರಕಾರವು ಮಾಡುವ ತೆರಿಗೆ ಇಳಿಕೆಯ ಲಾಭವನ್ನು ಬೆಲೆ ಇಳಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವ ಕಾನೂನು ಮತ್ತು ಪ್ರಾಧಿಕಾರವನ್ನೇ ಮೋದಿ ಸರಕಾರ ಹಂತಹಂತವಾಗಿ ನಾಶಮಾಡಿ ಕಂಪೆನಿಗಳ ಸುಲಿಗೆಗೆ ಸಹಾಯ ಮಾಡಿದೆ.
ಕಾಣುವ ಇಳಿಕೆಗಳು ಮತ್ತು ಕಾಣದ ಏರಿಕೆಗಳು
ಮೋದಿಭಕ್ತ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮತ್ತು ಇತರ ಮಾಧ್ಯಮಗಳು ಅನುದ್ದಿಶ್ಯಪೂರ್ವಕವಾಗಿ ತೆರಿಗೆ ಇಳಿತದಿಂದ ಯಾವ್ಯಾವುದರ ಬೆಲೆ ಇಳಿಯಲಿದೆಯೆಂಬ ಪಟ್ಟಿಯನ್ನು ಮಾತ್ರ ತೋರಿಸುತ್ತಿವೆ. ಅವು ಸುಳ್ಳಲ್ಲ, ಅರ್ಧ ಸತ್ಯ. ಮೋದಿ ಸರಕಾರ ಕಣ್ಣಿಗೆ ಕಾಣುವ ಸರಕುಗಳ ತೆರಿಗೆ ದರವನ್ನು ಇಳಿಸಿದೆ. ಆದರೆ ಆ ಸರಕುಗಳ ಉತ್ಪಾದನೆಗೆ ಅರ್ಥಾತ್ ಉತ್ಪಾದಕ ವೆಚ್ಚಕ್ಕೆ ಬೇಕಾಗುವ ಕಚ್ಚಾವಸ್ತುಗಳ ತೆರಿಗೆ ದರವನ್ನು ಅಗಾಧವಾಗಿ ಹೆಚ್ಚಿಸಿರುವುದನ್ನು ಮರೆಮಾಚಿಸಿದೆ.
ಉದಾಹರಣೆಗೆ ಎಲ್ಲಾ ಸರಕುಗಳ ಮತ್ತು ಸೇವೆಗೆ ಅತ್ಯಗತ್ಯವಾಗಿ ಬೇಕಿರುವುದು ಶಕ್ತಿ ಇಂಧನಗಳು. ವಿದ್ಯುತ್ ಉತ್ಪಾದನೆಗೆ ಬೇಕಿರುವ ಕಲ್ಲಿದ್ದಲು ಮತ್ತು ಸರಕು ಸಾಗಾಟಕ್ಕೆ ಬೇಕಿರುವ ಪೆಟ್ರೋಲಿಯಂ ವಸ್ತುಗಳು. ಇವುಗಳ ಮೇಲಿನ ತೆರಿಗೆ ಜಾಸ್ತಿಯಾದರೆ ಸಹಜವಾಗಿ ಉತ್ಪಾದಕ ವೆಚ್ಚವೇ ಹೆಚ್ಚಾಗುತ್ತದೆ. ಉತ್ಪಾದಕ ವೆಚ್ಚವೇ ಹೆಚ್ಚಾದಾಗ ಅಂತಿಮ ಸರಕಿನ ಮೇಲಿನ ತೆರಿಗೆ ಇಳಿಕೆಯಾಗಿದ್ದರೂ ಒಟ್ಟಾರೆ ಸರಕಿನ ಬೆಲೆ ಇಳಿಯುವುದರ ಬದಲಿಗೆ ಹೆಚ್ಚಾಗುತ್ತದೆ.
ಉದಾಹರಣೆಗೆ ಮೋದಿ ಸರಕಾರ ಇಂತಹ ಶಕ್ತಿ ಇಂಧನವಾದ ಕಲ್ಲಿದ್ದಲಿನ ಮೇಲಿನ ತೆರಿಗೆಯನ್ನು ಶೇ. 5ರಿಂದ ಶೇ. 18ಕ್ಕೆ ಹೆಚ್ಚಿಸಿದೆ. ಹಾಗೆಯೇ ಪೈಪುಗಳ ಮೂಲಕ ಸಾಗಾಟವಾಗುವ ಪೆಟ್ರೊಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನೂ ಕೂಡ ಶೇ. 5 ರಿಂದ ಶೇ. 18ಕ್ಕೆ ಏರಿಸಿದೆ. ಈ ಮೂಲವಸ್ತುಗಳ ಮೇಲೆ ಹೆಚ್ಚಳವಾಗಿರುವ ಶೇ. 13ರಷ್ಟು ಹೆಚ್ಚುವರಿ ತೆರಿಗೆ ಅಂತಿಮ ಸರಕಿನ ಬೆಲೆಯ ಮೇಲೂ ನೇರ ಪರಿಣಾಮ ಬೀರುತ್ತದೆ.
ಇದಲ್ಲದೆ ಆರೋಗ್ಯ ವಿಮೆಯ ಮೇಲಿನ ತೆರಿಗೆಯನ್ನು ಶೇ. 12-18ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಆದರೆ ದೊಡ್ಡ ದೊಡ್ಡ ಖಾಸಗಿ ಆರೋಗ್ಯ ವಿಮೆ ಕಂಪೆನಿಗಳು ಶೇ. 5ರ ಗುಂಪಿನಲ್ಲಿ Input Tax Credit ಲಾಭ ಸಿಗುವುದಿಲ್ಲವೆಂದು ಕನಿಷ್ಠ ಪ್ರೀಮಿಯಂ ಅನ್ನು ಶೇ. 6-15ರಷ್ಟು ಹೆಚ್ಚಿಸುವುದಾಗಿ ಘೋಷಿಸಿವೆ. ಮೋದಿ ಸರಕಾರ ಅವುಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳದೆ ತಮಾಷೆ ನೋಡುತ್ತಿದೆ. ಇದಲ್ಲದೆ ಮೋದಿ-ತುಘಲಕ್ ತೆರಿಗೆ ಗೊಂದಲ ಈಗಲೂ ಮುಂದುವರಿದಿದೆ. ಉದಾಹರಣೆಗೆ ಆಹಾರ ಸಾಮಗ್ರಿಗಳನ್ನು ನೇರವಾಗಿ ಹೋಟೆಲ್‌ನವರೇ ಡೆಲಿವರಿ ಮಾಡಿದರೆ ಶೇ. 5 ತೆರಿಗೆ. ಆದರೆ ಅದನ್ನು ರೊಮ್ಯಾಟೋ ಅಥವಾ ಸ್ವಿಗ್ಗಿ ಮೂಲಕ ಪಡೆದುಕೊಂಡರೆ 5+18=23 ಶೇ. ತೆರಿಗೆ!
ಹೀಗಾಗಿ ಮೋದಿಭಕ್ತರು ಕುರುಡಾಗಿ ಚಪ್ಪಾಳೆ ತಟ್ಟುವ ಮುನ್ನ ಹಿಂಬಾಗಿಲಿಂದ ಕಸಿಯುತ್ತಿರುವ ವಿವರಗಳನ್ನು ಅರ್ಥಮಾಡಿಕೊಂಡರೆ ನಿಜವಾದ ದೇಶಭಕ್ತರಾಗಬಹುದು.
ಜಿಎಸ್‌ಟಿ ತಿದ್ದುಪಡಿಗಳಿಂದ ಆರ್ಥಿಕತೆ ಚೇತರಿಸಿಕೊಳ್ಳುವುದೇ?
ಒಂದು ವೇಳೆ ಅಲ್ಪಸ್ವಲ್ಪ ಬೆಲೆ ಇಳಿಕೆಯಾದ ಮಾತ್ರಕ್ಕೆ ಮೋದಿ ಸರಕಾರ ಕೊಚ್ಚಿಕೊಳ್ಳುತ್ತಿರುವಂತೆ ಆರ್ಥಿಕತೆ ಚೇತರಿಸಿಕೊಳ್ಳುವುದೇ? ಬೆಲೆ ಕಡಿಮೆಯಾದರೂ ಗ್ರಾಹಕರಲ್ಲಿ ಖರೀದಿ ಮಾಡುವಷ್ಟು ಆದಾಯ ಅಥವಾ ಉಳಿತಾಯ ಇರಬೇಕು. ಆದರೆ ಮೋದಿ ಸರಕಾರದ ಕಾರ್ಪೊರೇಟ್ ಪರ ಆರ್ಥಿಕ ನೀತಿಗಳು, ತುಘಲಕ್ ಮಾದರಿ ನೋಟು ನಿಷೆೇಧ, ಜಿಎಸ್‌ಟಿ, ಕೋವಿಡ್ ಕಾಲದ ಲಾಕ್‌ಡೌನ್ ಇತ್ಯಾದಿಗಳಿಂದಾಗಿ ಈ ದೇಶದ ಶೇ. 80ರಷ್ಟು ಜನರ ಕೊಳ್ಳುವ ಶಕ್ತಿ ಕುಸಿದಿದೆ. ಜೀವದೊರಸೆ ಉಳಿದುಕೊಳ್ಳಲು ಆದಾಯವನ್ನು ಮಾತ್ರ ಅವರು ಗಳಿಸುತ್ತಿದ್ದಾರೆ. ಆದರೂ ಜಿಎಸ್‌ಟಿ ಸಂಗ್ರಹದಲ್ಲಿ ತಳಹಂತದ ಶೇ. 50 ಜನರ ಪಾಲು ಶೇ. 80ರಷ್ಟು. ಮೇಲಿನ ಶೇ. 10ರಷ್ಟು ಜನರು ಕಟ್ಟುವುದು ಶೇ. 3ರಷ್ಟು ಜಿಎಸ್‌ಟಿ ಮಾತ್ರ.
ಅಂತಹ ಜನವಿರೋಧಿ ತೆರಿಗೆ ವ್ಯವಸ್ಥೆಯನ್ನು ಮೋದಿ ಸರಕಾರ ಸರಿಯಾದ ಪೂರ್ವ ಸಿದ್ಧತೆಯಿಲ್ಲದೆ, ಒಂದು ಯೋಜನೆಯಿಲ್ಲದೆ ಅತ್ಯಂತ ಅವೈಜ್ಞಾನಿಕವಾಗಿ ಜಾರಿಗೆ ತಂದಿತು. ಇದು ಆ ವೇಳೆಗಾಗಲೇ ನೋಟು ನಿಷೆೇಧದ ದಾಳಿಯಿಂದ ತತ್ತರಿಸಿದ್ದ ಸಾಮಾನ್ಯ ಜನರನ್ನು, ಸಣ್ಣ ಪುಟ್ಟ ವ್ಯಾಪಾರಿ ಮತ್ತು ಉದ್ಯಮಿಗಳ ಆರ್ಥಿಕತೆಯನ್ನು ಕಂಗೆಡಿಸಿತು. ಜಿಎಸ್‌ಟಿ ತೆರಿಗೆ ವ್ಯವಸ್ಥೆಯು ಆವರೆಗೆ ರಾಜ್ಯಗಳು ವಿಧಿಸುತ್ತಿದ್ದ ವಾಣಿಜ್ಯ ಮತ್ತು ಮಾರಾಟ ತೆರಿಗೆ, ಸ್ಥಳೀಯ ಸಂಸ್ಥೆಗಳು ವಿಧಿಸುತ್ತಿದ್ದ ಆಕ್ಟ್ರಾಯ್ ತೆರಿಗೆ ಮತ್ತು ಕೇಂದ್ರವು ವಿಧಿಸುತ್ತಿದ್ದ ಎಕ್ಸೈಸ್ ತೆರಿಗೆ ಮತ್ತು ಸೇವಾ ತೆರಿಗೆಗಳನ್ನು ಏಕೀಕರಿಸಿ ಸರಕು ಮತ್ತು ಸೇವಾ ತೆರಿಗೆಯೆಂಬ ವ್ಯವಸ್ಥೆಯನ್ನು ರೂಪಿಸಿತು.
ಅಂದರೆ ರಾಜ್ಯಗಳು ತಮ್ಮ ಸಾರ್ವಭೌಮತೆಯನ್ನು ಉಪಯೋಗಿಸಿಕೊಂಡು ಹಾಕಬಹುದಾಗಿದ್ದ ತೆರಿಗೆಯನ್ನು ಕೂಡ ಇನ್ನು ಮುಂದೆ ಜಿಎಸ್‌ಟಿ ವ್ಯವಸ್ಥೆಯೇ ರೂಪಿಸುವಂತಾಯಿತು. ಇದರಿಂದ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಲಭ್ಯವಿದ್ದ ತೆರಿಗೆ ಮೂಲಗಳು ಅತ್ಯಂತ ಸೀಮಿತವಾದವು. ಜಿಎಸ್‌ಟಿಯ ನಂತರ ಸ್ಟಾಂಪ್ ಆಂಡ್ ಡ್ಯೂಟಿಸ್, ಅಬಕಾರಿ ತೆರಿಗೆ, ವಿದ್ಯುತ್ ಮತ್ತು ಪೆಟ್ರೊಲ್ ತೆರಿಗೆಗಳನ್ನು ಬಿಟ್ಟರೆ ರಾಜ್ಯಗಳ ಬಳಿ ಪ್ರತ್ಯೇಕ ತೆರಿಗೆ ಮೂಲಗಳು ಉಳಿದಿಲ್ಲ. ಜಿಎಸ್‌ಟಿಯಲ್ಲಿ ಅರ್ಧಪಾಲು ರಾಜ್ಯಗಳಿಗೆ ದಕ್ಕುತ್ತದೆ. ಆದರೆ ರಾಜ್ಯಗಳು ಸ್ವತಂತ್ರವಾಗಿ ತೆರಿಗೆ ವಿಧಿಸುತ್ತಿದ್ದಾಗ ವರ್ಷದಿಂದ ವರ್ಷಕ್ಕೆ ಶೇ.14ರಷ್ಟು ತೆರಿಗೆ ಸಂಗ್ರಹ ಹೆಚ್ಚಾಗುತ್ತಿತ್ತು. ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಇಷ್ಟು ತೆರಿಗೆ ಹೆಚ್ಚಳವನ್ನು ಖಾತರಿ ಪಡಿಸಬೇಕೆಂದೂ, ಕೊರತೆಯುಂಟಾದರೆ ಕೇಂದ್ರವು ಜಿಎಸ್‌ಟಿ ಪರಿಹಾರ ಶುಲ್ಕವನ್ನು ವಸೂಲಿ ಮಾಡುವ ಮೂಲಕ ಕೇಂದ್ರವೇ ರಾಜ್ಯಗಳಿಗೆ ಕನಿಷ್ಠ ಐದು ವರ್ಷಗಳ ಕಾಲ ತುಂಬಿ ಕೊಡಬೇಕೆಂದು ಕಾನೂನಾಯಿತು. ಆದರೆ 2017ರಿಂದಲೂ ಮೋದಿ ಸರಕಾರ ಇದರಲ್ಲಿ ಬಿಜೆಪಿಯೇತರ ಸರಕಾರಗಳಿಗೆ ತಾರತಮ್ಯ ಮಾಡುತ್ತಲೇ ಬಂದಿದೆ. ವ್ಯವಸ್ಥೆಯ ಮಾರ್ಪಾಡುಗಳನ್ನು ತೀರ್ಮಾನ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲು ಎಲ್ಲಾ ರಾಜ್ಯಗಳ ಪ್ರತಿನಿಧಿಗಳೂ ಇರುವ ಜಿಎಸ್‌ಟಿ ಕೌನ್ಸಿಲ್ ರಚಿಸಲಾಗಿದ್ದರೂ, ಅದರಲ್ಲಿ ಶೇ. 1/3ರಷ್ಟು ಮತಪ್ರಾತಿನಿಧ್ಯ ಕೇಂದ್ರದ್ದು ಹಾಗೂ ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಮಾರ್ಪಾಡು ಬರಬೇಕೆಂದರೂ ಜಿಎಸ್‌ಟಿ ಕೌನ್ಸಿಲ್‌ನ 3/4 ರಷ್ಟು ಬಹುಮತ ಕಡ್ಡಾಯ. ಎಂದರೆ ಪರೋಕ್ಷವಾಗಿ ಕೇಂದ್ರಕ್ಕೆ ವಿಟೋ ಅಧಿಕಾರವನ್ನು ನೀಡಲಾಗಿದೆ. ಇದರಲ್ಲಿ ಬದಲಾವಣೆಯಾಗದೆ ಯಾವುದೇ ಸುಧಾರಣೆ ಸಾಧ್ಯವಿಲ್ಲ.
ಒಂದು ಪ್ರಗತಿಪರ ದೇಶದಲ್ಲಿ ಆದಾಯ ಇರುವವರ ಮೇಲೆ ಹೆಚ್ಚು ತೆರಿಗೆ ಹಾಕಿ ಆದಾಯ ಇಲ್ಲದವರನ್ನು ತೆರಿಗೆ ಮುಕ್ತ ಮಾಡಲಾಗುತ್ತದೆ. ಆದರೆ ಒಂದು ಪ್ರಗತಿವಿರೋಧಿ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಿ, ಅಧಿಕಗೊಳಿಸಿ, ವ್ಯವಸ್ಥಿತಗೊಳಿಸುವಂತಹ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಅದರ ಸ್ವರೂಪದಲ್ಲೇ ಜನವಿರೋಧಿಯಾದದ್ದು. ಅದೂ ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡುತ್ತಾ ಹಿಂಬಾಗಿಲಿಂದ ಜನಸಾಮನ್ಯರ ಮೇಲಿನ ತೆರಿಗೆ ಹೆಚ್ಚಿಸುವ ಈ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದದ್ದೇ ಕಾರ್ಪೊರೇಟ್ ಬಂಡವಾಳಶಾಹಿ ಪರ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು.
ಜಿಎಸ್‌ಟಿ ಕಡಿಮೆ ಮಾಡಿ ಸೆಸ್ ಹೆಚ್ಚಿಸುವ ಹುನ್ನಾರವೇ?
ಅದರಲ್ಲೂ ಜನರ ಆರ್ಥಿಕ ವ್ಯವಸ್ಥೆಯೇ ಕುಸಿಯುತ್ತಿರುವಾಗ ಮೋದಿ ಸರಕಾರದ ಈ ತಿದ್ದುಪಡಿಗಳು ಪರೋಕ್ಷವಾಗಿ ಜನರನ್ನು ಮತ್ತೆ ಸುಳಿಯುವ ಉದ್ದೇಶವನ್ನೇ ಹೊಂದಿರುವಂತಿದೆ. ಏಕೆಂದರೆ ಮೋದಿ ಸರಕಾರ ಈ ತಿದ್ದುಪಡಿಗಳಿಂದ 48,000 ಕೋಟಿ ತೆರಿಗೆ ನಷ್ಟವಾಗಬಹುದು ಎಂದು ಹೇಳಿದೆ. ಆದರೆ ಬೆಲೆ ಇಳಿಕೆಯಿಂದ ವಹಿವಾಟು ಜಾಸ್ತಿಯಾಗುತ್ತಾದ್ದರಿಂದ ಈ ನಷ್ಟವು ಬಹಳ ಬೇಗ ಭರ್ತಿಯಾಗಿ ಹೆಚ್ಚು ತೆರಿಗೆ ಸಂಗ್ರಹವಾಗಲಿದೆ ಎಂಬ ಬಣ್ಣದ ಬಲೂನು ಬಿಟ್ಟಿದೆ. ಆದರೆ ಈಗಾಗಲೇ ಚರ್ಚಿಸಿದಂತೆ ಶೇ. 90 ಜನರ ಬಳಿ ಆದಾಯ ಮತ್ತು ಅಥವಾ ಉಳಿತಾಯವೇ ಇಲ್ಲದಿರುವಾಗ ತೆರಿಗೆ ಇಳಿಕೆಯಾದರೂ, ಅದರಿಂದ ಅಕಸ್ಮಾತ್ ಬೆಲೆ ಇಳಿಕೆಯಾದರೂ ದೊಡ್ಡ ಮಟ್ಟದ ಆರ್ಥಿಕ ಚೇತರಿಕೆ ಸಾಧ್ಯವಿಲ್ಲ.
ಹಾಗಿರುವಾಗ ತೆರಿಗೆ ಸಂಗ್ರಹ ನಷ್ಟವಾಗುವುದು 48,000 ಕೋಟಿಯಲ್ಲ. 2 ಲಕ್ಷ ಕೋಟಿಗೂ ಹೆಚ್ಚು. ಒಂದು ಕಡೆ ಕಾರೊಪ್ರೇಟ್ ತೆರಿಗೆಯನ್ನು ಕಡಿಮೆ ಮಾಡಿರುವ ಸರಕಾರ ಈ ನಷ್ಟವನ್ನು ಹೇಗೆ ತುಂಬಿಕೊಳ್ಳುತ್ತದೆ? ಒಂದೇ ಮಾರ್ಗ-ಜಿಎಸ್‌ಟಿ ದರವನ್ನು ಹೆಚ್ಚಿಸದೇ ಅದರ ಮೇಲಿನ ಸೆಸ್‌ಗಳನ್ನು ಹೆಚ್ಚಿಸುವುದು. ಇದು ಸಾಮಾನ್ಯರ ಹೊರೆಯನ್ನು ಹೆಚ್ಚಿಸುತ್ತದೆ ಹಾಗೆಯೇ ರಾಜ್ಯಗಳ ಪಾಲನ್ನೂ ಕಡಿಮೆ ಮಾಡುತ್ತದೆ.
ಆದ್ದರಿಂದ ಭಾರತದ ಜನತೆ ಕಣ್ಣಿಗೆ ಕಂಡದ್ದನ್ನು ಯಥಾವತ್ ನಂಬದೆ ಆಳಕ್ಕೆ ಹೋಗಿ ಮೋದಿ ಸರಕಾರದ ಹುನ್ನಾರವನ್ನು ಅರ್ಥಮಾಡಿಕೊಳ್ಳಬೇಕಿದೆ. ಜಿಎಸ್‌ಟಿಯ ಮೂಲಕ ಕಾಣದ ಏರಿಕೆಗಳನ್ನು, ಜಿಎಸ್‌ಟಿ ವ್ಯವಸ್ಥೆಯನ್ನು ವಿರೋಧಿಸಬೇಕಿದೆ. ಪರೋಕ್ಷ ತೆರಿಗೆಯನ್ನು ಕಡಿಮೆ ಮಾಡುತ್ತಾ ಈ ದೇಶದ ಶೇ. 90ರಷ್ಟು ಸಂಪತ್ತನ್ನು ಹೊಂದಿರುವ ದೇಶದ ಶೇ. 10ರಷ್ಟು ಕುಬೇರರ ಮೇಲೆ ಆಸ್ತಿ ತೆರಿಗೆ, ಸಂಪತ್ತು ತೆರಿಗೆ, ಆನುವಂಶಿಕ ತೆರಿಗೆ, ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸುತ್ತಾ, ಕಾರ್ಪೊರೇಟ್ ರಾಜ್ಯದ ಬದಲು ಕಲ್ಯಾಣ ರಾಜ್ಯ ನಿರ್ಮಾಣದ ಬಗ್ಗೆ ಚಳವಳಿ ಕಟ್ಟಬೇಕಿದೆ.