ಬಿಜೆಪಿಗೆ ಹಿಂದೂ-ಮುಸ್ಲಿಂ, ಪಾಕಿಸ್ತಾನ, ಅಫ್ಘಾನಿಸ್ತಾನ ಬಿಟ್ಟು ಮಾತನಾಡಲು ಬೇರೆ ಏನೂ ಇಲ್ಲ : ಸಂತೋಷ್ ಲಾಡ್

ಕೋಲಾರ : ʼಬಿಜೆಪಿಗೆ ಹಿಂದೂ, ಮುಸ್ಲಿಂ, ಪಾಕಿಸ್ತಾನ, ಅಫ್ಘಾನಿಸ್ತಾನ ಬಿಟ್ಟು ಮಾತನಾಡಲು ಬೇರೆ ಏನೂ ಇಲ್ಲ. ಬಿಜೆಪಿಯವರು ಒಮ್ಮೆಯೂ ಅವರ ಸಾಧನೆಗಳು, ಕಾರ್ಯಕ್ರಮಗಳನ್ನು ಜನರಿಗೆ ಹೇಳಿ ಮತ ಕೇಳಿಲ್ಲʼ ಎಂದು ಸಚಿವ ಸಂತೋಷ್ ಲಾಡ್, ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಆಗಮಿಸಿದ ವೇಳೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ʼಖೇಲೋ ಇಂಡಿಯಾʼ ಎಂಬ ದೊಡ್ಡ ಕಾರ್ಯಕ್ರಮ 426 ಕೋಟಿ ರೂ. ದುಡ್ಡು ಪೂರ್ತಿಯಾಗಿ ಗುಜರಾತಿಗೆ ಮಾತ್ರ ನೀಡಲಾಗಿದೆ, ಪದಕಗಳು ಎಷ್ಟು ಬಂದಿದೆ ಎಂದು ಪ್ರಧಾನಿ ಮೋದಿ ಹೇಳಲಿ ಎಂದು ಒತ್ತಾಯಿಸಿದರು.
ಪೆಹಲ್ಗಾಂ ಘಟನೆ ನಡೆದು ಇನ್ನೂ ನಾಲ್ಕು ತಿಂಗಳಾಗಿಲ್ಲ, ಸಿನಿಮಾನೂ ಬೇಡ, ನೀರೂ ಕೊಡಲ್ಲ ಎಂದ ಬಿಜೆಪಿ, ಈಗ ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಆಡಿಸಬೇಕು ಎನ್ನುವುದು ಯಾಕೆ? ಈ ಹಿಂದೆ ಪಾಕಿಸ್ತಾನಕ್ಕೆ ಹೋಗಿ ಬಂದವರೆಲ್ಲ ಬಿಜೆಪಿಯವರೇ. ಅಡ್ವಾಣಿ, ವಾಜಿಪೇಯಿ, ಮೋದಿ ಎಲ್ಲಾ ಬಿಜೆಪಿ ಪಕ್ಷದವರೇ ವಿನಃ ಕಾಂಗ್ರೆಸ್ ಪಕ್ಷದವರು ಪಾಕಿಸ್ತಾನಕ್ಕೆ ಹೋಗಲಿಲ್ಲ, ಇವರಿಗೆ ಬೇಕಾದಾಗ ಇವರ ಇಷ್ಟ ಬಂದಂತೆ ಏನು ಬೇಕಾದರೂ ಮಾಡಬಹುದಾ? ಎಂದು ಕೇಳಿದರು.
ಗುಜರಾತ್ ಮಾಡೆಲ್ ಎಂದು ಹೇಳುತ್ತಾರೆ, ಮೋದಿ ಗುಜರಾತನ್ನು ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ? ನಮ್ಮ ರಾಜ್ಯದಲ್ಲಿ ಇಂಜಿನಿಯರಿಂಗ್ ಕಾಲೇಜು, ಸಿಎಸ್ಟಿ, ಎಫ್ ಡಿಎ ಸೇರಿ ನಾವು ಎಲ್ಲದರಲ್ಲೂ ಅಭಿವೃದ್ಧಿಯಲ್ಲಿದ್ದೇವೆ. ಕರ್ನಾಟಕ ಕಾಂಗ್ರೆಸ್ ಸರಕಾರ 83 ಸಾವಿರ ಕೋಟಿ ರೂ. ಅಭಿವೃದ್ದಿಗೆ ನೀಡಿದೆ. 60 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ಕೊಡುತ್ತಿದೆ. ಆದರೆ, ಬಿಜೆಪಿಯರು ಗ್ಯಾರಂಟಿ ಕೊಡದೆ ಅಭಿವೃದ್ದಿಗೆ ಮಾತ್ರ ಎಷ್ಟು ಹಣ ಮೀಸಲಿಟ್ಟಿದ್ದರು. ಇಂದು ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಆದರೆ ಕರ್ನಾಟಕ ರಾಜ್ಯ ಜಿಎಸ್‌ಟಿ ಸೇರಿ ಎಲ್ಲದರಲ್ಲೂ ಮುಂದಿದೆ ಎಂದರು.
ಹಿಂದೂ-ಮುಸ್ಲಿಂ ಗಲಾಟೆ ಬಿಟ್ಟರೆ ಬಿಜೆಪಿ ಏನೂ ಮಾಡುತ್ತಿಲ್ಲ. ಮದ್ದೂರಲ್ಲಿ ಕಲ್ಲು ತೂರಾಟ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಯಾಗಬೇಕು ಎಂದ ಅವರು, ಹಿಂದೂ ಎನ್ನುವವರು ಮೊದಲಿಗೆ ಅಂತರ್ ಜಾತಿ ವಿವಾಹ ಮಾಡಿಸಲಿ ಎಂದು ಹೇಳಿದರು.
ಶಕ್ತಿ ಪೀಠಗಳನ್ನು ಹೆಚ್ಚಾಗಿ ಮಾಡಿರುವುದು ಕಾಂಗ್ರೆಸ್‌ನವರೇ, ಬಿಜೆಪಿ ನಾಯಕರ ಮಕ್ಕಳು ಯಾವ ಪ್ರತಿಭಟನೆಗೆ ಬಂದಿದ್ದಾರೆ ತೋರಿಸಿ, ಅವರು ಬರಲ್ಲ ಎಂದು ವ್ಯಂಗ್ಯವಾಡಿದರು.